“ರೈತರ ನೋಟುಗಳೆಂದರೆ ಒಂದೋ ತೀರಾ ಕೊಳೆಯಾಗಿರುತ್ತವೆ ಇಲ್ಲವೇ ಅಸಂಖ್ಯಾತ ಮಡಿಕೆಗಳನ್ನು ಹೊಂದಿರುತ್ತವೆ.” ಎನ್ನುತ್ತಾರೆ ಪಿ.ಉಮೇಶ್. ಅವರು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಬರ ಪೀಡಿತ ತಾಡಿಮರ್ರಿ ಮಂಡಲ ವ್ಯಾಪ್ತಿಯಲ್ಲಿ ರಸಗೊಬ್ಬರ ಮಾರುತ್ತಾರೆ.

ಇತ್ತೀಚೆಗಿನ ತನಕವೂ ಉಮೇಶ್ ಅವರು ತನ್ನ ಗ್ರಾಹಕರ ಕೈನಲ್ಲಿ ಗರಿಗರಿಯಾದ 500 ರೂ. ನೋಟುಗಳನ್ನು ಕಂಡದ್ದಿಲ್ಲವಂತೆ. ಅವರ ಗ್ರಾಹಕರೆಂದರೆ ತಾಡಿಮರ್ರಿ ಗ್ರಾಮದ ರೈತರು.  ಅವರು ಆ ಅಂಗಡಿಯಲ್ಲಿ ಬೀಜಗಳು ಮತ್ತು ರಸಗೊಬ್ಬರಗಳನ್ನು ಖರೀದಿ ಮಾಡುತ್ತಾರೆ. ಹಾಗಿರುವಾಗ ನವೆಂಬರ್ 23 ರಂದು ರೈತರೊಬ್ಬರು ರಸಗೊಬ್ಬರ ಖರೀದಿಗೆ 500 ರೂಗಳ ಗರಿಗರಿ ನೋಟುಗಳನ್ನು ತಂದುಕೊಟ್ಟಾಗ ಅವರಿಗೆ ಸಂಶಯ ಬಂತು. ಆ ನೋಟುಗಳನ್ನು  2014 ರಲ್ಲಿ ಮುದ್ರಿಸಲಾಗಿತ್ತು.

“ಆ ನೋಟುಗಳು ಚಲಾವಣೆಯಲ್ಲಿದ್ದಿದ್ದರೆ, ಇಷ್ಟು ಹೊತ್ತಿಗೆ ಅವು ಕೊಳೆಯಾಗಿ ಹಳತಾಗಿರಬೇಕಿತ್ತು” ಎಂದು ಅಚ್ಚರಿ ವ್ಯಕ್ತಪಡಿಸಿದ ಉಮೇಶ್ ಅವರಿಗೆ ಬಂದ ಮೊದಲ ಸಂಶಯ, ಆ ನೋಟುಗಳು ಖೋಟಾ ಎಂಬುದಾಗಿತ್ತು.  ನವೆಂಬರ್ 8ರ ನೋಟು ರದ್ಧತಿಗಿಂತ ಮೊದಲು ಅಲ್ಲಿ ಖೋಟಾ ನೋಟುಗಳು ಬಹಳ ಕಡಿಮೆ ಚಲಾವಣೆಯಲ್ಲಿದ್ದವು.


02_RM_Drinking away demonetisation

ನವೆಂಬರ್ 23ರಂದು ರೈತರೊಬ್ಬರು ಹಳೆ ಬಾಕಿ ತೀರಿಸಲು 500ರ ಹೊಚ್ಚಹೊಸ ನೋಟುಗಳನ್ನು ಕೊಟ್ಟಾಗ, ರಸಗೊಬ್ಬರದಂಗಡಿಯ ಮಾಲಕ ಪಿ. ಉಮೇಶ ಅವರಿಗೆ ಅಚ್ಚರಿ, ಸಂಶಯ ಎರಡೂ ಉಂಟಾಗುತ್ತವೆ

ಎಲ್ಲೊ ಅಪರೂಪಕ್ಕೆ ಕೆಲವೊಮ್ಮೆ ಮಾತ್ರ ಅವು ಸಿಕ್ಕಿದ್ದಿದೆ.  ಹಾಗಾಗಿ ಉಮೇಶ್ ಅವನ್ನು ತನ್ನ ಕೌಂಟರ್ ನಲ್ಲಿ ಟೆಸ್ಟ್ ಮಾಡಿದರು.  ಆ ನೋಟುಗಳು ಸಾಚಾ ಆಗಿದ್ದವು. ಅವರಿಗೆ ಅಚ್ಚರಿಯಾಯಿತು.  ಮೇಲಾಗಿ, ಆ ನೋಟುಗಳು ಅನುಕ್ರಮ ನಂಬರ್ ಗಳನ್ನು ಹೊಂದಿದ್ದವು.  ಬ್ಯಾಂಕಿನಿಂದ ಫ್ರೆಶ್ ಆಗಿ ಬಂದಂತಿದ್ದವು.  ಹೆಚ್ಚಿನಂಶ ಬಳಸದೇ ತೆಗೆದಿರಿಸಿದ್ದ ದುಡ್ಡು ಹೊರಬಂದಿರಬೇಕು ಎಂದು ಅವರಂದುಕೊಂಡರು.  ಅನಂತಪುರ ಮತ್ತು ತಮಿಳುನಾಡಿನ ಆಸುಪಾಸಿನ ವ್ಯವಹಾರಸ್ಥರು ತಾಡಿಮರ್ರಿ ಮಂಡಲದ 11 ಹಳ್ಳಿಗಳಿಂದ ರೈತರ ಬೆಳೆಗಳನ್ನು ಖರೀದಿಸಲು ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಬಳಸುತ್ತಿದ್ದಾರೆ ಎಂಬ ಶಂಕೆ ಅವರಿಗಿತ್ತು. ಆ ಮಂಡಲದಲ್ಲಿ 32, 385 ಮಂದಿ ಗ್ರಾಮೀಣ ಜನ ವಾಸಿಸುತ್ತಿದ್ದು, ಅವರಿಗೆ ಶಿಕ್ಷಣ ಎನೇನೂ ಇರಲಿಲ್ಲ.

ಉಮೇಶ ಅವರಂತಹ ಕೆಲವೇ ಕೆಲವರನ್ನು ಬಿಟ್ಟರೆ ಬೇರೆಲ್ಲರಿಗೂ ಆ ಹಳ್ಳಿಯಲ್ಲಿ ನೋಟು ರದ್ಧತಿಯಿಂದ ತೀರಾ ತೊಂದರೆ ಆಗಿತ್ತು.  ಉಮೇಶ್ ಹಳೆಯ ನೋಟುಗಳನ್ನು ಸ್ವೀಕರಿಸುತ್ತಿದ್ದುದರಿಂದ (ಅವರು ಅದನ್ನು ತಮ್ಮ ಕಾನೂನುಬದ್ಧ ಆದಾಯದ ರೂಪದಲ್ಲಿ ಬ್ಯಾಂಕಿಗೆ ಸಲ್ಲಿಸುತ್ತಿದ್ದರು), ಇಲ್ಲಿ ರೈತರು ತಮ್ಮ ರಸಗೊಬ್ಬರ ಖರೀದಿಯ ಹಳೆ ಬಾಕಿಗಳನ್ನು ವೇಗವಾಗಿ ತೀರಿಸಲಾರಂಭಿಸಿದ್ದಾರೆ.

ಇದೇ ವೇಳೆ ಅಲ್ಲಿಂದ ಸ್ವಲ್ಪವೇ ದೂರದಲ್ಲಿರುವ ತಾಡಿಮರ್ರಿಯ ಸಾರಾಯಿ ಅಂಗಡಿಗಳಲ್ಲೂ ವ್ಯಾಪಾರ ಚುರುಕಿನಿಂದ ಸಾಗಿತ್ತು.  ಯಾಕೆಂದರೆ ಅಲ್ಲಿ ಅಧಿಕೃತ ಸಾರಾಯಿ ಅಂಗಡಿಗಳೆರಡೂ ಇದ್ದವು ಮತ್ತು ಅವೆರಡೂ ಹಳೆಯ ನೋಟುಗಳನ್ನು ಸ್ವೀಕರಿಸುತ್ತಿದ್ದವು.  “ಇದು ನಮಗೆ ವಾಪಸ ಸಿಕ್ಕ 50 ರೂಪಾಯಿ” ಎಂದು ಎತ್ತಿ ತೋರಿಸಿದ ಚೀನಾ ಗಂಗಣ್ಣ, ಆ ದಿನದ ಡೋಸ್ ಏರಿಸಿಯೇ ಬಂದಂತಿತ್ತು.  ಅವರು ಆಗಷ್ಟೇ 1000 ರೂ. ತೆತ್ತು ತನಗೆ ಮತ್ತು ತನ್ನ 8 ಮಂದಿ ಗೆಳೆಯರಿಗೆ ಸಾರಾಯಿ ಖರೀದಿಸಿದ್ದರು. ಅವರೆಲ್ಲ ಕೆಲಸ ಇಲ್ಲದ ಕೃಷಿ ಕಾರ್ಮಿಕರು. ಸಾರಾಯಿ ಅಂಗಡಿಯಲ್ಲೂ 1000 ರೂಪಾಯಿಗೆ ಚಿಲ್ಲರೆ ಕೊಡಲು, ಕನಿಷ್ಟ 400 ರೂಪಾಯಿಗಳ ಸಾರಾಯಿ ಖರೀದಿಸಬೇಕಿತ್ತು. ತಾಡಿಮರ್ರಿಯಲ್ಲಿ ಹೆಚ್ಚಿನವರಿಗೆ ಈಗೀಗ ಹಳೆಯ ನೋಟುಗಳನ್ನು ಬದಲಾಯಿಸಲು ಅತ್ಯಂತ ಸುಲಭ ವಿಧಾನ ಸಾರಾಯಿ ಖರೀದಿಸುವುದೆಂದು ಅರ್ಥವಾಗಿದೆ.

“ನಾನು ಪ್ರತಿದಿನ ಕೆಲಸ ಮುಗಿದ ಬಳಿಕ ಒಂದು ಕ್ವಾರ್ಟರ್ ಬಾಟಲ್ ಕುಡಿಯುತ್ತಿದ್ದೆ” ಎನ್ನುವ ನಾಗಭೂಷಣಂ ಎಸ್. ಸಾಮಾನ್ಯವಾಗಿ ಗದ್ದೆಗಳಲ್ಲಿ ಟ್ರಾಕ್ಟರ್ ಓಡಿಸುತ್ತಾರೆ.  ಅವರಿಗೆ ಒಂದು ಕ್ವಾರ್ಟರ್ ಸಾರಾಯಿಗೆ 60-80 ರೂಪಾಯಿ ತಗಲುತ್ತದೆ.  ಆದರೆ, ಈಗ ನಾಗಭೂಷಣ್ ತನ್ನ ಎಂದಿನ ಕೋಟಾಕ್ಕಿಂತ 4-5 ಪಟ್ಟು ಹೆಚ್ಚು ಕುಡಿಯಬೇಕಾಗಿ ಬಂದಿದೆ.  ಅವರ ದಿನಗೂಲಿ ರೂ. 500, ಆದರೆ, ಈಗ ಕೈಯಲ್ಲಿ ಕೆಲಸ ಇಲ್ಲದಿರುವುದರಿಂದಾಗಿ, ಅವರ ಗಳಿಕೆ ಇರುವುದೆಲ್ಲ ಹಳೆಯ ನೋಟುಗಳ ರೂಪದಲ್ಲೇ.  ಹಾಗಾಗಿ ಅವನ್ನು ಸಾರಾಯಿ ಅಂಗಡಿಗಳಲ್ಲೇ ಖಾಲಿ ಮಾಡಬೇಕಿದೆ. ನಾಗಭೂಷಣ್ ಅವರಂತೆಯೇ ತಾಡಿಮರ್ರಿಯ ಉಳಿದ ರೈತರ ಕೈನಲ್ಲೂ ಕೆಲಸಗಳಿಲ್ಲ.  ಹಾಗಾಗಿ ದಿನಕಳೆಯುವುದು ಕಠಿಣವಾಗುತ್ತಿದೆ.  ಅನಂತಪುರ ಜಿಲ್ಲೆಯಲ್ಲಿ ಬರದಿಂದಾಗಿ ನೆಲಗಡಲೆ ಬೆಳೆ ಈ ವರ್ಷ ಕೈಕೊಟ್ಟಿದೆ.  ಹೆಚ್ಚಿನ ರೈತರಿಗೆ ಬೆಳೆ ನಷ್ಟವಾಗಿದೆ, ಹಾಗಾಗಿ ಕೃಷಿ ಕಾರ್ಮಿಕರ ಸಂಬಳ ಇಳಿತ ಕಂಡಿದೆ.

ತಾಡಿಮರ್ರಿ ಮಂಡಲದಲ್ಲಿ ಹೆಚ್ಚಾಗಿ ದೀಪಾವಳಿಯ ಬಳಿಕ ನವೆಂಬರ್ ಆಸುಪಾಸಿನಲ್ಲಿ ನೆಲಗಡಲೆ ಬೆಳೆಯ ಕಟಾವು ನಡೆಯುತ್ತದೆ ಮತ್ತು ಡಿಸೆಂಬರ್ ತನಕ ಅದರ ಮಾರಾಟ ಇರುತ್ತದೆ. ಸಾಮಾನ್ಯವಾಗಿ ಇಲ್ಲಿ ರೈತರು ಕೃಷಿ ಕಾರ್ಮಿಕರಿಗೆ ದಿನಗೂಲಿ ಅಥವಾ ವಾರಗೂಲಿ ನೀಡುವುದಿಲ್ಲ.  ಬದಲಾಗಿ, ಅವರ ದುಡ್ಡನ್ನೆಲ್ಲ ಒಟ್ಟಾಗಿ ಒಂದೇ ಕಂತಿನಲ್ಲಿ ಬೆಳೆಯ ಕಟಾವು ಆದ ಬಳಿಕ ಕೊಟ್ಟುಬಿಡುವುದು ವಾಡಿಕೆ.  ಹಾಗಾಗಿ ಅಲ್ಲಿನ ರೈತರಿಗೆ ಈ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಗದು ಹಣ ಅಗತ್ಯ ಇರುತ್ತದೆ. ರೈತರು ಆ ಸಮಯದಲ್ಲೇ ತಮ್ಮ ತಮ್ಮೊಳಗೆ ಮಾಡಿಕೊಂಡಿರುವ ಕೈಗಡಗಳನ್ನೂ ತೀರಿಸಿಕೊಳ್ಳುತ್ತಾರೆ. ಈ ಸಾಲಕ್ಕೆ ಮಾಸಿಕ 2 ಪರ್ಸೆಂಟ್ ಬಡ್ಡಿ ಇರುತ್ತದೆ. “ಈ ಸಾಲವನ್ನು ನಾವು ಈಗ ತೀರಿಸದಿದ್ದರೆ, ಬಡ್ಡಿ ಬೆಳೆಯುತ್ತಾ ಹೋಗುತ್ತದೆ” ಎನ್ನುತ್ತಾರೆ. ಟಿ ಬ್ರಹ್ಮಾನಂದ ರೆಡ್ಡಿ ಅವರಿಗೆ ತಾಡಮರ್ರಿಯಲ್ಲಿ 16 ಎಕರೆ ಭೂಮಿ ಇದೆ.

ರೆಡ್ಡಿ ತಮ್ಮ ನೆಲಗಡಲೆ ಬೆಳೆಯನ್ನು ನೋಟು ರದ್ಧತಿ ಆದ ಒಂದು ವಾರದ ಬಳಿಕ ಮಾರಾಟ ಮಾಡಿದರು, ಅವರಿಗೆ ಬೇರೆ ಜಿಲ್ಲೆಗಳ ವರ್ತಕರು ಹಳೆಯ 1000 ಮತ್ತು 500 ನೋಟುಗಳಲ್ಲೇ ದುಡ್ಡು ಪಾವತಿ ಮಾಡಿದರು.  ಅವರು ತಮ್ಮ ದುಡ್ಡನ್ನು ತಮ್ಮ ಅಕೌಂಟಿಗೆ ಹಾಕಿ, ಹೊಸ ನೋಟುಗಳನ್ನು ಪಡೆಯಬೇಕಿತ್ತು. ತನ್ನ ಕಾರ್ಮಿಕರಿಗೆ ಪಾವತಿ ಮಾಡಲು ಮತ್ತು ಕೈಸಾಲಗಳನ್ನು ತೀರಿಸಿಕೊಳ್ಳಲು ಅವರಿಗೆ ದೊಡ್ಡ ಪ್ರಮಾಣದಲ್ಲಿ ಹೊಸ ನೋಟುಗಳು ಬೇಕಿದ್ದವು.


03_RM_Drinking away demonetisation

ತಾಡಮರ್ರಿ ಮಂಡಲದ ಬ್ಯಾಂಕಿನ ಹೊರಬದಿಯಲ್ಲಿ ರೈತರು: ಟಿ. ಬ್ರಹ್ಮಾನಂದ ರೆಡ್ಡಿ ಅವರಂತಹ ರೈತರಿಗೆ, ತಮ್ಮ ಕಾರ್ಮಿಕರಿಗೆ ನೀಡಲುದೊಡ್ಡ ಪ್ರಮಾಣದಲ್ಲಿ ಹೊಸ ನೋಟುಗಳು ಬೇಕಿವೆ, ಆ ರವು ಬ್ಯಾಂಕಿನಲ್ಲಿ ಬೇಕಾದಷ್ಟು ಸಿಗುತ್ತಿಲ್ಲ.


ಆದರೆ, ತಾಡಮರ್ರಿ ಮಂಡಲ ವ್ಯಾಪ್ತಿಯಲ್ಲಿರುವ ಮೂರೂ ಬ್ಯಾಂಕುಗಳಲ್ಲಿ ಈ ಹೊಸ ನೋಟುಗಳಿಗೆ ತುಂಬಾ ಕೊರತೆ ಇತ್ತು. ಕಟಾವು ಸೀಸನ್ನಿನಲ್ಲಿ ರೆಡ್ಡಿ ಮತ್ತು ಅವರಂತಹ ರೈತರು ತಮ್ಮ ಕೃಷಿ ಕಾರ್ಮಿಕರಿಗೆ ದಿನವೊಂದರ 200 ರೂಪಾಯಿ ಕೂಲಿ ನೀಡುತ್ತಾರೆ.  ಕೆಲವೊಮ್ಮೆ ಕೆಲಸ ಯಾವುದು ಎಂಬುದನ್ನು ಮತ್ತು ಕಾರ್ಮಿಕರ ಲಭ್ಯತೆಯನ್ನು ಅವಲಂಬಿಸಿಕೊಂಡು, ಈ ದಿನಕೂಲಿ 450 ರೂ. ತನಕವೂ ಹೋಗುವುದಿದೆ.

ಈಗ ಕೆಲಸ ಇಲ್ಲದಿರುವುದರಿಂದಾಗಿ ಮತ್ತು ನ್ಯಾಯಬದ್ಧ ರೂಪಾಯಿಗಳು ಬಹುತೇಕ ಕಣ್ಮರೆ ಆಗಿರುವುದರಿಂದಾಗಿ ಕಾರ್ಮಿಕರಿಗೆ ತೊಂದರೆ ಆಗಿದೆ. “ನಮಗೀಗ ಒಂದು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ“ ಎಂದು ದೂರುತ್ತಾರೆ, ಕೆಲಸವಿಲ್ಲದೆ ಕೈಖಾಲಿ ಮಾಡಿಕೊಂಡು ಕುಳಿತಿರುವ ಕೃಷಿ ಕಾರ್ಮಿಕ ನಾರಾಯಣ ಸ್ವಾಮಿ. “ಕೆಲವೊಮ್ಮೆ ಕುಡಿದು ಅಮಲೇರಿದ [ಅಥವಾ ಕಂಗಾಲಾಗಿರುವ] ಕೃಷಿ ಕಾರ್ಮಿಕರು ಹಣ ಬೇಕು ಎಂದರೆ, ನಾವು ನಮ್ಮ ಮರ್ಯಾದೆ ಉಳಿಸಿಕೊಳ್ಳಲು ಅವರಿಗೆ ಹಳೆಯ 1000, 500 ರ ನೋಟುಗಳಲ್ಲೇ ಪಾವತಿ ಮಾಡುತ್ತೇವೆ“ ಎನ್ನುತ್ತಾರೆ ವಿ ಸುಧಾಕರ್. ಅವರಿಗೆ 22 ಎಕರೆ ನೆಲಗಡಲೆ ಗದ್ದೆ ಇದೆ ಹೆಚ್ಚಿನ ಕೃಷಿಕಾರ್ಮಿಕರಿಗೆ, ತಮ್ಮ ಕೆಲಸ ಹುಡುಕುವ ತುರ್ತನ್ನು ಬಿಟ್ಟು ಬ್ಯಾಂಕುಗಳಿಗೆ ಹೋಗಿ ಉದ್ದುದ್ದ ಸಾಲುಗಳಲ್ಲಿ ನಿಂತು ಕಾಯುವುದು ಸಾಧ್ಯವಾಗುವುದಿಲ್ಲ.  ಅವರಲ್ಲಿ ಹೆಚ್ಚಿನವರಿಗೆ ಬ್ಯಾಂಕ್ ಖಾತೆಗಳೇ ಇಲ್ಲ.  ಹಾಗಾಗಿ, ದಿನದಲ್ಲಿ ಕೆಲಸ ಸಿಗದವರು, ತಮ್ಮಲ್ಲಿ ಉಳಿದಿರುವ ಕೆಲವೇ ಕೆಲವು 500, 1000 ರೂ. ನೋಟುಗಳನ್ನು ಹಿಡಿದು, ಅದನ್ನು ಇನ್ನೂ ಸ್ವೀಕರಿಸುತ್ತಿರುವ ಊರಿನ ಏಕೈಕ ಸ್ಥಳಕ್ಕೆ ಹೋಗುತ್ತಾರೆ. ಅದು ಸಾರಾಯಿ ಅಂಗಡಿ.


04_RM_Drinking away demonetisation

ತಾಡಮರ್ರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಹೊರಗೆ ಉದ್ದದ ಸರತಿಸಾಲು- ಹೆಚ್ಚಿನ ಕೃಷಿ ಕರ್ಮಿಕರಿಗೆ ಕೆಲಸಕ್ಕೆ ಹೋಗಲೋ ಅಥವಾ ಬ್ಯಾಂಕಿನೆದುರು ಹೋಗಿ ಸರತಿ ಸಾಲಿನಲ್ಲಿ ನಿಲ್ಲಲೋ ಎಂಬ ದ್ವಂದ್ವ. ಹೆಚ್ಚಿನವರ ಕೈನಲ್ಲಿ ಬ್ಯಾಂಕ್ ಖಾತೆಗಳೂ ಇಲ್ಲ


“ನೋವು ಮರೆಯುವುದಕ್ಕಾಗಿ [ಗದ್ದೆಗಳಲ್ಲಿ ಕಠಿಣ ಶ್ರಮದ್ದು] ನಮಗೆ ಕುಡಿತ ಅನಿವಾರ್ಯ”  ಎನ್ನುವ ಸ್ವಾಮಿ, ಬೆಳಗ್ಗೆ 10 ಗಂಟೆಗೇ ಸ್ವಲ್ಪ ಸಾರಾಯಿ ಏರಿಸಿಕೊಂಡಾಗಿದೆ. ಸಾಮಾನ್ಯವಾಗಿ ರೈತರೂ ಇದನ್ನು ಪ್ರೋತ್ಸಾಹಿಸುತ್ತಾರೆ, ಯಾಕೆಂದರೆ ಅವರ ಪ್ರಕಾರ ಅವರ ಕೆಲಸಗಳು ಪರಿಣಾಮಕಾರಿಯಾಗಿ ಮುಗಿಯಲು, ಕೃಷಿ ಕಾರ್ಮಿಕರ ಕುಡಿತ ಸಹಕಾರಿ.

“ನಾವು ಅವರಿಗೆ ಪ್ರತಿದಿನ, ಸಂಬಳ ಹೊರತುಪಡಿಸಿ [ಸಂಬಳ ಸೀಸನ್ ಅಂತ್ಯದಲ್ಲಿ ಒಟ್ಟುಗೂಡಿಸಿ ಕೊಡಲಾಗುತ್ತದೆ] 30-40 ರೂ ಕೊಡುತ್ತೇವೆ. ಅದರಲ್ಲಿ ಅವರು ಮೂರು ಔನ್ಸ್ ಸಾರಾಯಿ ಖರೀದಿಸಬಹುದು” ಎನ್ನುತ್ತಾರೆ ಸುಧಾಕರ್.  ಈ ಪರಸ್ಪರ ಅರ್ಥಮಾಡಿಕೊಳ್ಳುವಿಕೆಯ ಕಾರಣದಿಂದಾಗಿ ನೌಕರ-ಮಾಲಕರ ನಡುವೆ ಒಂದು ಹೊಂದಾಣಿಕೆ ಇರುತ್ತದೆ ಮತ್ತು ಸಂಜೆ ಕೆಲಸ ಮುಗಿಸಿ ಹೋದ ಕಾರ್ಮಿಕ, ಸಲ್ಲಬೇಕಾದ ಪೂರ್ಣ ಸಂಬಳ ಕೊಡದಿದ್ದರೂ ಮರುದಿನ ಬೆಳಗ್ಗೆ ಕೆಲಸಕ್ಕೆ ಬರುವುದು ಖಚಿತವಿರುತ್ತದೆ. ಅದೇ ವೇಳೆ, ತಾಡಿಮರ್ರಿಯಲ್ಲಿ ಸಂಜೆ ಮಾತ್ರ ಸಾರಾಯಿ ಕುಡಿಯುತ್ತಿದ್ದ ಹೆಚ್ಚಿನ ಕಾರ್ಮಿಕರು ಈಗ ಕೆಲಸ ಕೈನಲ್ಲಿಲ್ಲದಿರುವುದರಿಂದಾಗಿ, ಬೆಳ್ಳಂಬೆಳಗ್ಗೆಯೇ ಕುಡಿಯಲಾರಂಭಿಸುತ್ತಾರೆ, ಮತ್ತು ಅದಕ್ಕೆ ತಮ್ಮ ಕೈನಲ್ಲಿರುವ ಹಳೆಯ 500 ರ ಕೆಲವೇ ಕೆಲವು ನೋಟುಗಳನ್ನು ಖರ್ಚುಮಾಡುತ್ತಿದ್ದಾರೆ.

Rahul M.

ରାହୁଲ ଏମ, ଆନ୍ଧ୍ର ପ୍ରଦେଶ ଅନନ୍ତପୁରର ଜଣେ ନିରପେକ୍ଷ ସାମ୍ବାଦିକ ଏବଂ ଜଣେ ୨୦୧୭ ପରୀ ଫେଲୋ ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Rahul M.
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

ଏହାଙ୍କ ଲିଖିତ ଅନ୍ୟ ବିଷୟଗୁଡିକ ରାଜାରାମ୍ ତଲୁର