ಚಿಟ್ಟೆಂಪಲ್ಲಿ ಪರಮೇಶ್ವರಿಯವರಿಗೆ ಒಮ್ಮೊಮ್ಮೆ ಎಲ್ಲಾದರೂ ದೂರ ಓಡಿಹೋಗಬೇಕು ಅನ್ನಿಸುತ್ತದೆ. "ಆದರೆ, ನಾನು ನನ್ನ ಮಕ್ಕಳನ್ನು ಬಿಟ್ಟುಹೋಗಲು ಸಾಧ್ಯವಿಲ್ಲ. ಅವರಿಗೆ ಇರುವುದು ನಾನು ಮಾತ್ರ” ಎಂದು 30 ವರ್ಷದ ಆ ತಾಯಿ ಹೇಳುತ್ತಾರೆ.
ಪರಮೇಶ್ವರಿ ಅವರ ಪತಿ ಚಿಟ್ಟೆಂಪಲ್ಲಿ ಕಮಲಚಂದ್ರ ಅವರು ನವೆಂಬರ್ 2010 ರಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿದಾಗ ಅವರಿನ್ನೂ 20ರ ಹರೆಯದ ಕೃಷಿಕರಾಗಿದ್ದರು. “ಸಾಯುವ ಮುನ್ನ ಒಂದು ಪತ್ರವನ್ನು ಕೂಡ ಬರೆದಿಡಲಿಲ್ಲ. ಬಹುಶಃ ಅವರಿಗೆ ಚೆನ್ನಾಗಿ ಬರೆಯಲು ಬರುತ್ತಿರಲಿಲ್ಲವೇನೋ, ”ಎಂದು ಅವರು ಮುಗುಳು ನಗುತ್ತಲೇ ಹೇಳುತ್ತಾರೆ.
ಈಗ ಪರಮೇಶ್ವರಿಯವರು ತಮ್ಮ ಇಬ್ಬರು ಮಕ್ಕಳಾದ ಶೇಷಾದ್ರಿ ಮತ್ತು ಅನ್ನಪೂರ್ಣರ ಏಕೈಕ ಪೋಷಕಿ. ಈ ಮಕ್ಕಳು ಈಗ 30 ಕಿಲೋಮೀಟರ್ ದೂರದಲ್ಲಿರುವ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. "ನನಗೆ ಅವರಿಬ್ಬರೂ ತುಂಬಾ ನೆನಪಾಗುತ್ತಾರೆ," ಎಂದು ತಾಯಿ ಹೇಳುತ್ತಾರೆ. "ಅವರಿಗೆ ಸಮಯಕ್ಕೆ ಸರಿಯಾಗಿ ಹೊತ್ತೊತ್ತಿನ ಊಟವನ್ನು ಸಿಗುತ್ತಿದೆ ಎಂಬುದು ಗೊತ್ತಿದೆ" ಎನ್ನುತ್ತಾ ಸ್ವತಃ ಸಮಾಧಾನಪಟ್ಟುಕೊಳ್ಳುತ್ತಾರೆ.
ಪ್ರತಿ ತಿಂಗಳಿಗೊಮ್ಮೆ ತನ್ನ ಮಕ್ಕಳನ್ನು ಭೇಟಿ ಮಾಡಲು ಈ ತಾಯಿ ಕಾಯುತ್ತಿರುತ್ತಾರೆ. "ನನ್ನ ಬಳಿ ಹಣವಿದ್ದರೆ ನಾನು [ಮಕ್ಕಳಿಗೆ] 500 [ರೂಪಾಯಿ] ಕೊಡುತ್ತೇನೆ ಮತ್ತು ನನ್ನ ಬಳಿ ಹಣ ಕಡಿಮೆಯಿದ್ದರೆ, ನಾನು ಅವರಿಗೆ 200 [ರೂಪಾಯಿ] ನೀಡುತ್ತೇನೆ" ಎಂದು ಅವರು ಹೇಳುತ್ತಾರೆ.
ಈ ಕುಟುಂಬ ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ ಸಮುದಾಯಕ್ಕೆ ಸೇರಿದೆ. ಪರಮೇಶ್ವರಿ ಚಿಲ್ತಂಪಲ್ಲೆ ಗ್ರಾಮದಲ್ಲಿ ಒಂದು ಕೋಣೆಯಂತಿರುವ ಮನೆಯಲ್ಲಿ ಇವರು ವಾಸಿಸುತ್ತಿದ್ದಾರೆ. ಅವರ ಮನೆಯ ಮೇಲ್ಛಾವಣಿ ಕುಸಿದಿದ್ದು, ಹೊರಗೆ ತೆರೆದ ಕೊಟ್ಟಿಗೆ ಇದೆ. ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿರುವ ಈ ಮನೆಯು ಅವರ ದಿವಂಗತ ಪತಿ ಕಮಲ್ ಚಂದ್ರ ಅವರ ಕುಟುಂಬದ ಒಡೆತನದಲ್ಲಿದೆ. ಮದುವೆಯ ನಂತರ ಪತಿಯೊಂದಿಗೆ ಅವರು ಇಲ್ಲಿಗೆ ಬಂದರು.










