ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಎಂಬಲ್ಲಿ ರೈತರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಚಕಮಕಿಯಲ್ಲಿ ಟಿಯರ್ ಗ್ಯಾಸ್ ಶೆಲ್ ಸರ್ದಾರ್ ಸಂತೋಖ್ ಸಿಂಗ್ ಅವರನ್ನು ಗಾಯಗೊಳಿಸಿ ಒಂದು ತಿಂಗಳಾಗಿದೆ.
ಆದರೆ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ 70ರ ಪ್ರಾಯದ ಹಿರಿಯರು ಈಗಲೂ ಸಿಂಘುವಿನಲ್ಲಿ ನಿಂತಿದ್ದಾರೆ. "ನಾವು ಅಲ್ಲಿ ಶಾಂತಿಯುತವಾಗಿ ಕುಳಿತಿದ್ದೆವು ಮತ್ತು ಇದ್ದಕ್ಕಿದ್ದಂತೆ ಗುಂಡಿನ ದಾಳಿಯ ಸದ್ದನ್ನು ಕೇಳಿದೆವು" ಎಂದು ನವೆಂಬರ್ 27ರಂದು ನಡೆದ ಘಟನೆಯ ಕುರಿತು ಹೇಳುತ್ತಾರೆ, ಆ ದಿನ ಶೆಲ್ ಅವರ ಎಡಗಣ್ಣಿನ ಕೆಳಭಾಗದಲ್ಲಿ ಹೊಡೆಯಿತು.
ಹಿಂದಿನ ದಿನ, ಪಂಜಾಬ್ನ ತಾರ್ನ್ ತರಣ್ ಜಿಲ್ಲೆಯ ಅವರ ಊರಾದ ಘರ್ಕಾದಿಂದ 17 ಜನರು ಹೊರಟು ಮರುದಿನ ಬೆಳಿಗ್ಗೆ ದೆಹಲಿ ಗಡಿಯನ್ನು ತಲುಪಿದ್ದರು. “ನಾವು ಬಂದಾಗ, ಸುಮಾರು 50,000-60,000 ಜನರು ಇಲ್ಲಿ ಸೇರಿದ್ದರು. ನಾನು ಹೋಗಿ ಇತರ ಪ್ರತಿಭಟನಾಕಾರರೊಂದಿಗೆ ಕುಳಿತು ಭಾಷಣವನ್ನು ಕೇಳುತ್ತಿದ್ದೆ ”ಎಂದು ಸಂತೋಖ್ ಸಿಂಗ್ ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ
ಬೆಳಿಗ್ಗೆ 11 ಗಂಟೆ ಸುಮಾರಿಗೆ ಗಲಾಟೆ ಮತ್ತು ಅವ್ಯವಸ್ಥೆ ಭುಗಿಲೆದ್ದಿತು, ಅದರ ಸ್ವಲ್ಪ ಸಮಯದಲ್ಲೇ ನೀರಿನ ಫಿರಂಗಿಗಳು ಮತ್ತು ಅಶ್ರುವಾಯು ಚಿಪ್ಪುಗಳು ಮಳೆ ಸುರಿಯಲಾರಂಭಿಸಿದವು. “ನನ್ನ ಮುಂದೆ ಇದ್ದ ಯುವಕರು ಎದ್ದು, ನನ್ನ ಮೇಲೆ ಹಾರಿ, ಇನ್ನೊಂದು ಬದಿಗೆ ಓಡಿಹೋದರು. ನಾನು ಎದ್ದು ನಿಂತು ಸುಧಾರಿಸಿಕೊಂಡೆ”ಎಂದು ಸಂತೋಖ್ ಸಿಂಗ್ ಹೇಳುತ್ತಾರೆ. “ನಾನು ಭದ್ರತಾ ಪಡೆಗಳತ್ತ ಕೂಗಿ ಕೇಳಿದೆ: ‘ನೀವು ನಮ್ಮನ್ನು ಏಕೆ ಪ್ರಚೋದಿಸುತ್ತಿದ್ದೀರಿ? ನಾವು ಇಲ್ಲಿ ಶಾಂತಿಯುತವಾಗಿ ಕುಳಿತಿದ್ದೆವು’ ಎಂದು. ಅವರು ಕೋಪದಿಂದ ಉತ್ತರಿಸಿದರು: ‘ಜನಸಮೂಹವನ್ನು ಓಡಿಸಲು ನಾವು ಇದನ್ನು ಮಾಡಬೇಕಿದೆ’. ಸ್ವಲ್ಪ ಸಮಯದ ನಂತರ ನನ್ನ ಮುಂದೆ ಇದ್ದ ಮಗು ಶೆಲ್ ಬರುತ್ತಿರುವುದನ್ನು ನೋಡಿ ಬಾಗಿಕೊಂಡಿತು ಆಗ ಆ ಶೆಲ್ ಬಂದು ನನಗೆ ಬಡಿಯಿತು. ಆದರೆ ನಾನು ಒಂದಿಷ್ಟೂ ಅಲುಗಾಡಲಿಲ್ಲ”
ಪಂಜಾಬ್ನ ಚೋಳ ತಹಸಿಲ್ನಲ್ಲಿರುವ ತನ್ನ ಹಳ್ಳಿಯಲ್ಲಿ ಭತ್ತ ಮತ್ತು ಗೋಧಿಯನ್ನು ಬೆಳೆಯುತ್ತಾ ಇಡೀ ಜೀವನವನ್ನು ಕಳೆದಿರುವ ಸರ್ದಾರ್ ಸಂತೋಖ್ ಸಿಂಗ್, “ನನ್ನ ಸುತ್ತಲೂ ಜನಸಮೂಹ ಸೇರುವವರೆಗೂ ನಾನು ಗಾಯಗೊಂಡಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ನನಗೆ ಹೆಚ್ಚು ರಕ್ತಸ್ರಾವವಾಗಿದೆಯೆಂದು ಜನರು ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ ನಾನು ನಿರಾಕರಿಸಿದೆ ಮತ್ತು ಹಿಂದಕ್ಕೆ ಬರುತ್ತಿದ್ದ ಪ್ರತಿಭಟನಾಕಾರರನ್ನು ವಾಪಸ್ ಕರೆದೆ. ಓಡಿಹೋಗಬೇಡಿಯೆಂದು ನಾನು ಹೇಳಿದೆ. ಮುನ್ನೆಡೆಯುತ್ತಾ ಸಾಗಿ. ಹಿಂದಡಿಯಿಡಲು ನಾವು ಇಷ್ಟು ದೂರ ಬಂದಿಲ್ಲ. ಸರ್ಕಾರಿ ಪಡೆಗಳು ನಮ್ಮ ಮೇಲೆ ಯಾಕೆ ದಾಳಿ ಮಾಡಿವೆ ಎಂದು ನನಗೆ ಕೇಳುವುದಿತ್ತು. ನಾನು ಅವರೆದುರು ನಿಂತು ನನ್ನೊಂದಿಗೆ ಹೋರಾಡುವಂತೆ ಸವಾಲು ಹಾಕಿದೆ. ಅವರ ಗುಂಡುಗಳು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ.”
ಶೆಲ್ ಬಡಿದ ನಂತರ, ಸಿಂಗ್ ಎಂಟು ಹೊಲಿಗೆಗಳನ್ನು ಮತ್ತು ಎಡಗಣ್ಣಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಸಹಿಸಿಕೊಂಡರು. “ನನ್ನ ಹಳ್ಳಿಯ ಯುವಕರು ನನ್ನನ್ನು ಪ್ರತಿಭಟನಾ ಮೈದಾನದ ಬಳಿಯ ಆಸ್ಪತ್ರೆಗೆ ಕರೆದೊಯ್ದರು. ಆ ಆಸ್ಪತ್ರೆಯವರು ನಮ್ಮನ್ನು ಒಳಗೆ ಬಿಡಲು ನಿರಾಕರಿಸಿ ಬಾಗಿಲು ಮುಚ್ಚಿದರು. ಎಲ್ಲೆಡೆ ಪರಿಸ್ಥಿತಿ ಅಸ್ಥವ್ಯಸ್ಥವಾಗಿತ್ತು. ಅದೃಷ್ಟವಶಾತ್, ಅಲ್ಲೊಂದು ಬದಿಯಲ್ಲಿ ಪಂಜಾಬಿನಿಂದ ಬಂದ ಆಂಬುಲೆನ್ಸ್ ನಿಂತಿತ್ತು. ಅವರು ನಮ್ಮ ಕಡೆಗೆ ಓಡಿಬಂದು ಹೊಲಿಗೆ ಹಾಕಿ ಔಷಧಿಗಳನ್ನು ನೀಡಿ ಸಹಾಯ ಮಾಡಿದರು. ಅಶ್ರುವಾಯು ಶೆಲ್ನಿಂದಾಗಿ ಗಾಯಗೊಂಡ ಇತರ ಜನರಿಗೂ ಅವರು ಚಿಕಿತ್ಸೆ ನೀಡುತ್ತಿದ್ದರು.”
ಸಂತೋಖ್ ಸಿಂಗ್ ಆ ದಿನವನ್ನು ಅವರ ಮುಖದಲ್ಲಿ ಮಂದಹಾಸದೊಂದಿಗೆ ಹೆಮ್ಮೆಯ ಧ್ವನಿಯಿಂದ ನೆನಪಿಸಿಕೊಳ್ಳುತ್ತಾರೆ: “ಹೊಲಗಳಲ್ಲಿ ಕೆಲಸ ಮಾಡುವಾಗ ಆಗುವ ಗಾಯಗಳಿಗೆ ಹೋಲಿಸಿದರೆ ಈ ಗಾಯ ಏನೂ ಅಲ್ಲ. ಕೊಯ್ಲಿನ ಸಮಯದಲ್ಲಿ ಇದಕ್ಕಿಂತ ದೊಡ್ಡ ಗಾಯಗಳಾಗುತ್ತವೆ. ನಾನೊಬ್ಬ ರೈತ, ಈ ರಕ್ತ ನನಗೆ ಅಭ್ಯಾಸವಾಗಿದೆ. ಶೆಲ್ಗಳಿಗೆ ಹೆದರಿ ನಾವು ಓಡಿ ಹೋಗುತ್ತೇವೆಂದು ಅವರು ಭಾವಿಸಿದ್ದಾರೆಯೇ?”
ಈ ಘಟನೆ ನಡೆದು ಒಂದು ತಿಂಗಳಾಗಿದೆ, ಮತ್ತು ಸಿಂಗ್ ಹಾಗೂ ಇತರ ಪ್ರತಿಭಟನಾಕಾರರು ಈಗಲೂ ಗಡಿಯಲ್ಲಿದ್ದಾರೆ, ಸರ್ಕಾರದೊಂದಿಗಿನ ಒಂದರ ನಂತರ ಒಂದು ಮಾತುಕತೆ ವಿಫಲವಾಗುತ್ತಿದ್ದರೂ ಪ್ರತಿಭಟನೆಯ ವಿಷಯದಲ್ಲಿ ರೈತರು ದೃಢವಾಗಿದ್ದಾರೆ.
ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಈ ಮಸೂದೆಗಳನ್ನು ಮೊದಲು 2020ರ ಜೂನ್ 5 ರಂದು ಸುಗ್ರೀವಾಜ್ಞೆಯಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಕೃಷಿ ಮಸೂದೆಗಳ ಹೆಸರಿನಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳ 20ರೊಳಗೆ ಕಾನೂನನ್ನು ಅಂಗೀಕರಿಸಲಾಯಿತು. ರೈತರು ಈ ಕಾನೂನುಗಳನ್ನು (ಕೇಂದ್ರ ಸರ್ಕಾರದಿಂದ) ದೊಡ್ಡ ಕಾರ್ಪೊರೇಟ್ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಮಾಡುತ್ತವೆ.
"ನಮ್ಮನ್ನು ದೀರ್ಘಕಾಲ ಇಲ್ಲಿ ಕುಳಿತುಕೊಳ್ಳುವಂತೆ ಮಾಡುವುದು ಸರ್ಕಾರದ ತಂತ್ರವಾಗಿದೆ, ಇದರಿಂದ ನಾವು ದಣಿದು ಮುಖದೊಂದಿಗೆ ಹಿಂತಿರುಗುತ್ತೇವೆನ್ನುವುದು ಅವರ ಯೋಚನೆಯಾಗಿದೆ. ಆದರೆ ಅವರು ಹಾಗೆ ಭಾವಿಸಿದರೆ ಅದು ಅವರ ತಪ್ಪು ಕಲ್ಪನೆ. ನಾವು ಹಿಂತಿರುಗಿ ಹೋಗಲು ಇಲ್ಲಿಗೆ ಬಂದಿಲ್ಲ. ನಾನು ಈಗಾಗಲೇ ಇದನ್ನು ಹೇಳಿದ್ದೇನೆ ಮತ್ತೊಮ್ಮೆ ಹೇಳುತ್ತೇನೆ, ಇಲ್ಲಿ ಕುಳಿತುಕೊಳ್ಳಲು ನಮಗೆ ಯಾವುದೇ ತೊಂದರೆಯಿಲ್ಲ. ನಮ್ಮ ಟ್ರಾಕ್ಟರ್-ಟ್ರಾಲಿಗಳು ಪಡಿತರದಿಂದ ತುಂಬಿವೆ. ನಮ್ಮ ಸಿಖ್ ಸಹೋದರರು ನಮಗೆ ಬೇಕಾದ ಎಲ್ಲವನ್ನೂ ಒದಗಿಸುತ್ತಿದ್ದಾರೆ. ಅವರು ನಮ್ಮ ಹಕ್ಕುಗಳನ್ನು ನೀಡುವವರೆಗೂ ನಾವು ಹಿಂತಿರುಗುವುದಿಲ್ಲ. "ನಾವು ಇಂದು ಪ್ರತಿಭಟಿಸದಿದ್ದರೆ , ನಮ್ಮ ಭವಿಷ್ಯದ ಪೀಳಿಗೆಗಳು ತೊಂದರೆ ಅನುಭವಿಸುತ್ತವೆ. ನಾವು ನಮ್ಮ ಹಕ್ಕುಗಳನ್ನು ಪಡೆದೇ ಹಿಂತಿರುಗುತ್ತೇವೆ, ಬರಿಗೈಯಲ್ಲಿಯಲ್ಲ."
ಅನುವಾದ: ಶಂಕರ ಎನ್. ಕೆಂಚನೂರು