ರೈತ ಮಹಿಳೆಅಯದ ಸುನಂದಾ ಸೂಪೆ ಜೂನ್ ಮತ್ತು ನಂತರದ ಮಾನ್ಸೂನ್ ತಿಂಗಳುಗಳು ಬಂದವೆಂದರೆ ಹೆದರತೊಡಗುತ್ತಾರೆ. ಇದಕ್ಕೆ ಕಾರಣ ಆ ಸಮಯದಲ್ಲಿ ಅವರ ಹೊಲ, ತೋಟಗಳಿಗೆ ದಾಳಿ ಮಾಡುವ ಸ್ಥಳೀಯವಾಗಿ ಮೋಟೆ ಗೋಗಲ್ಗೆ ಎಂದು ಕರೆಯಲಾಗುವ ದೈತ್ಯ ಆಫ್ರಿಕನ್ ಬಸವನಹುಳುಗಳು. ಕಳೆದ ವರ್ಷದ ಇದೇ ಸಮಯದಲ್ಲಿ ಅವರ ಒಂದು ಎಕರೆ ಜಮೀನನ್ನು ಈ ಹುಳುಗಳು ನಾಶಗೊಳಿಸಿದ್ದವು.
"ನಾವು ಏನನ್ನು ಬಿತ್ತಿದರೂ ಅವು ತಿನ್ನುತ್ತವೆ - ಭತ್ತ, ಸೋಯಾಬೀನ್, ಕಡಲೆಕಾಯಿ, ಕಾಲಾ ಘೆವ್ಡಾ [ಕಪ್ಪು ರಾಜ್ಮಾ], ರಾಜ್ಮಾ" ಎಂದು ಅವರು ಹೇಳುತ್ತಾರೆ. ಮಾವು, ಚಿಕೂ [ಸಪೋಟಾ], ಪಪ್ಪಾಯಿ ಮತ್ತು ಪೇರಳೆಯಂತಹ ಹಣ್ಣುಗಳು ಸಹ ಅವುಗಳಿಂದ ಸುರಕ್ಷಿತವಲ್ಲ. "ನಾವು ಈ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಸವನಹುಳುಗಳನ್ನು ನೋಡಬಹುದು" ಎಂದು 42 ವರ್ಷದ ರೈತ ಮಹಿಳೆ ಹೇಳುತ್ತಾರೆ.
ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿರುವ ಮಹಾದೇವ್ ಕೋಲಿ ಸಮುದಾಯದ ಸದಸ್ಯೆಯಾಗಿರುವ ಅವರು ತಮ್ಮ ತಾಯಿ ಮತ್ತು ಸಹೋದರನೊಂದಿಗೆ ಚಸ್ಕಾಮನ್ ಅಣೆಕಟ್ಟಿನ ಪಕ್ಕದಲ್ಲಿ ವಾಸಿಸುತ್ತಿದ್ದಾರೆ. ಅವರ ಮನರ ಅಣೆಕಟ್ಟೆಯ ಒಂದು ಭಾಗದಲ್ಲಿದ್ದರೆ ಜಮೀನು ಇನ್ನೊಂದು ಭಾಗದಲ್ಲಿದೆ. ಮನೆಯಿಂದ ಜಮೀನಿಗೆ ಹೋಗಿ ಬರಲು ಅವರು ಒಂದು ಗಂಟೆ ಕಾಲ ದೋಣಿ ನಡೆಸಬೇಕು.
ದೈತ್ಯ ಆಫ್ರಿಕನ್ ಬಸವನಹುಳುಗಳು ( Achatina fulica ) ಭಾರತದಲ್ಲಿ ಆಕ್ರಮಣಕಾರಿ ಪ್ರಭೇದವಾಗಿದೆ ಎಂದು ಗ್ಲೋಬಲ್ ಇನ್ವೇಸಿವ್ ಸ್ಪೀಸೀಸ್ ಡೇಟಾಬೇಸ್ ಹೇಳುತ್ತದೆ, ಮತ್ತು ಇದು ವಿವಿಧ ಬೆಳೆಗಳನ್ನು ತಿನ್ನುತ್ತದೆ. ಮುಂಗಾರಿನ ಸಮಯದಲ್ಲಿ, ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕ ಇವು ತಿವಾಯಿ ಬೆಟ್ಟದ ತಪ್ಪಲಿನಲ್ಲಿರುವ ಹೊಲಗಳನ್ನು ಆಕ್ರಮಿಸುತ್ತವೆ. ಕೆಲವೊಮ್ಮೆ ಅವು ಇನ್ನೂ ಕೆಲವು ತಿಂಗಳುಗಳವರೆಗೆ ಉಳಿಯಬಹುದು. 2022ರ ಕೊನೆಯಲ್ಲಿ ಈ ವರದಿಗಾರರೊಂದಿಗೆ ಮಾತನಾಡಿದ ಸುನಂದಾ, ತಾನು ಈಗ ಮೂರು ವರ್ಷಗಳಿಂದ ಈ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಹೇಳುತ್ತಾರೆ.
"ಅವು ಮೊದಲಿಗೆ ಹೇಗೆ ಬಂದವು ಎನ್ನುವುದನ್ನು ನಾನು ಹೇಳಲಾರೆ" ಎಂದು ನಾರಾಯಣಗೌಡ ಕೃಷಿ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಡಾ. ರಾಹುಲ್ ಘಾಡ್ಗೆ ಹೇಳುತ್ತಾರೆ. "ಒಂದು ಬಸವನಹುಳವು ಒಂದು ದಿನದಲ್ಲಿ ಒಂದು ಕಿಲೋಮೀಟರ್ ದೂರವನ್ನು ಕ್ರಮಿಸಬಲ್ಲದು ಮತ್ತು ಅವು ಮೊಟ್ಟೆಯಿಡುವ ಮೂಲಕ ಸಂಖ್ಯೆ ಹೆಚ್ಚಿಸಿಕೊಳ್ಳುತ್ತವೆ" ಎಂದು ಅವರು ಹೇಳುತ್ತಾರೆ. ಅವು ಜನವರಿಯಲ್ಲಿ ಸುಪ್ತಾವಸ್ಥೆಗೆ ಹೋಗುತ್ತವೆ ಮತ್ತು ಬಿಸಿಲುಗಾಲ ಆರಂಭಗೊಳ್ಳುತ್ತಿದ್ದಂತೆ ತಮ್ಮ ಚಿಪ್ಪುಗಳಿಂದ ಹೊರಬರುವುದನ್ನು ಅವರು ಗಮನಿಸಿದ್ದಾರೆ, "ಆ ಸಮಯದಲ್ಲಿ ಅವುಗಳಿಗೆ ಬದುಕುಳಿಯಲು ಬೇಕಾದ ತಾಪಮಾನವು ಸಕ್ರಿಯಗೊಳ್ಳುತ್ತದೆ" ಎಂದು ಅವರು ಮುಂದುವರೆದು ಹೇಳುತ್ತಾರೆ.
“ಜಮೀನಿನಲ್ಲಿ ಕಪ್ಪು (ಕಪ್ಪು ಅಲಸಂದೆ) ಮತ್ತು ಕೆಂಪು ರಾಜ್ಮಾ ಬೆಳೆದಿದ್ದೆ. ಬಸವನಹುಳುಗಳು ಎಲ್ಲವನ್ನೂ ನಾಶಗೊಳಿಸಿದವು” ಎಂದು ಸುನಂದಾ ಹೇಳುತ್ತಾರೆ. “50 ಕೇಜಿಗಳಷ್ಟು ಧಾನ್ಯ ಕೊಯ್ಲು ಮಾಡುವ ನಿರೀಕ್ಷೆಯಲ್ಲಿದ್ದೆ ಆದರೆ ಕೈಗೆ ಬಂದಿದ್ದು ಕೇವಲ ಒಂದು ಕೇಜಿ.” ರಾಜ್ಮಾ ಕಿಲೋ ಒಂದಕ್ಕೆ ನೂರರಂತೆ ಮಾರಾಟವಾಗುತ್ತದೆ. ಕಪ್ಪು ರಾಜ್ಮಾ ಮತ್ತು ನೆಲಗಡಲೆ ಬೆಲೆ ಸೇರಿದಂತೆ ಸುಮಾರು 10,000 ರೂ.ಗಳ ನಷ್ಟವಾಗಿದೆಯೆಂದು ಅವರು ಅಂದಾಜು ಮಾಡುತ್ತಾರೆ.
"ನಾವು ಮುಂಗಾರು [ಖಾರಿಫ್], ಮತ್ತು ದೀಪಾವಳಿ [ರಬಿ] ಸಮಯದಲ್ಲಿ ಒಟ್ಟು ಎರಡು ಬೆಳೆ ಬೆಳೆಯುತ್ತೇವೆ" ಎಂದು ಅವರು ಹೇಳುತ್ತಾರೆ. ಕಳೆದ ವರ್ಷ ಬಸವನಹುಳುವಿನ ಕಾಟದಿಂದಾಗಿ ಎರಡು ವರ್ಷಗಳ ಕಾಲ ಹೊಲವನ್ನು ಖಾಲಿ ಬಿಡಬೇಕಾಯಿತು. "ಕೊನೆಗೆ ಡಿಸೆಂಬರ್ ತಿಂಗಳಿನಲ್ಲಿ ಹರ್ಬರಾ [ಹಸಿರು ಕಡಲೆ], ಗೋಧಿ, ಕಡಲೆಕಾಯಿ ಮತ್ತು ಈರುಳ್ಳಿಯನ್ನು ಬಿತ್ತಲು ಸಾಧ್ಯವಾಯಿತು" ಎಂದು ಅವರು ಹೇಳುತ್ತಾರೆ.
ಡಾ. ಘಾಡ್ಗೆ, ಮಹಾರಾಷ್ಟ್ರದ 5ರಿಂದ 10 ಪ್ರತಿಶತದಷ್ಟು ಕೃಷಿಭೂಮಿಯು ಬಸವನಹುಳುಗಳಿಂದ ಬಾಧಿತವಾಗಿದೆ ಎಂದು ಅಂದಾಜಿಸುತ್ತಾರೆ. "ಅವು [ಬಸವನಹುಳುಗಳು] ಸಸ್ಯಗಳ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಅವುಗಳ ಮೃದುವಾದ ಕಾಂಡಗಳನ್ನು ವಿಶೇಷವಾಗಿ ತಿನ್ನುತ್ತವೆ ಮತ್ತು ಇದು ಹಾನಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ರೈತರು ನಿಜವಾಗಿಯೂ ನಷ್ಟವನ್ನು ಅನುಭವಿಸುತ್ತಿದ್ದಾರೆ.”
ದಾರಕವಾಡಿಯ ರೈತರಾದ ನಿತಿನ್ ಲಗಾಡ್ (35) ಪ್ರತಿ ವರ್ಷವೂ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. “ಈ ವರ್ಷ ಸುಮಾರು 70ರಿಂದ 80 ಚೀಲಗಳಷ್ಟು [ಸರಿಸುಮಾರು 6,000 ಕಿಲೋ] ಸೋಯಾ ಬೀನ್ಸ್ ನಿರೀಕ್ಷಿಸಲಾಗಿತ್ತು ಆದರೆ ಕೈಗೆ ಬಂದಿದ್ದು ಕೇವಲ ಚೀಲಗಳು [2,000 ಕಿಲೋ].”
ಅವರು ತಮ್ಮ 5.5 ಎಕರೆ ಭೂಮಿಯಲ್ಲಿ ಒಟ್ಟು ಮೂರು ಸುತ್ತಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ. ಬಸವನಹುಳುವಿನ ಉಪಟಳದಿಂದಾಗಿ ಈ ವರ್ಷ ಅವರಿಗೆ ಎರಡನೇ ಸುತ್ತಿನ ಬೆಳೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. “ನಾಲ್ಕು ತಿಂಗಳ ಕಾಲ ಜಮೀನನ್ನು ಹಾಗೇ ಪಾಳು ಬಿಟ್ಟಿದ್ದೆವು. ಈಗ ಜೂಜಿನಲ್ಲಿ ಹಣ ಹಾಕಿದಂತೆ ಈರುಳ್ಳಿ ಬಿತ್ತಿದ್ದೇವೆ” ಎಂದು ಅವರು ಹೇಳುತ್ತಾರೆ.
ಮೃದ್ವಂಗಿನಾಶಕಗಳಂತಹ ಕೃಷಿ ರಾಸಾಯನಿಕಗಳು ಪರಿಣಾಮ ಬೀರುತ್ತಿಲ್ಲ. "ನಾವು ಮಣ್ಣಿನಲ್ಲಿ ಔಷಧಿ ಹಾಕುತ್ತೇವೆ, ಆದರೆ ಬಸವನಹುಳುಗಳು ಮಣ್ಣಿನ ಅಡಿ ಇರುತ್ತವೆ, ಹೀಗಾಗಿ ಔಷಧಿ ವ್ಯರ್ಥವಾಗುತ್ತಿದೆ. ನೀವು ಅದನ್ನು ಹಿಡಿದು ಔಷಧಿಯನ್ನು ಹಾಕಿದರೆ, ಅದು ಅದರ ಚಿಪ್ಪಿನೊಳಗೆ ಹೋಗುತ್ತದೆ" ಎಂದು ನಿತಿನ್ ವಿವರಿಸುತ್ತಾರೆ. "ಔಷಧದಿಂದ ಯಾವುದೇ ಪ್ರಯೋಜನವಾಗಿಲ್ಲ."
ಬೇರೆ ದಾರಿ ಕಾಣದ ದಾರಕವಾಡಿಯ ರೈತರು ಅವುಗಳನ್ನು ಕೈಗಳಿಗೆ ಪ್ಲಾಸ್ಟಿಕ್ ಚೀಲಗಳನ್ನು ಹಾಕಿಕೊಂಡು ಅವುಗಳನ್ನು ಒಂದೊಂದಾಗಿ ಹೆಕ್ಕಿ ಉಪ್ಪು ನೀರು ತುಂಬಿರುವ ಡ್ರಮ್ಮಿನ ಒಳಗೆ ಹಾಕುತ್ತಿದ್ದಾರೆ. ಇದು ಅವುಗಳನ್ನು ಮೊದಲು ಗಾಬರಿಗೊಳಿಸಿ ನಂತರ ಕೊಲ್ಲುತ್ತದೆ.
“ಅವು ಮತ್ತೆ ಮತ್ತೆ [ಡ್ರಮ್ಮಿನಿಂದ] ಹೊರಬರುತ್ತಲೇ ಇರುತ್ತವೆ. ನಾವು ಅವುಗಳನ್ನು ಮತ್ತೆ ಮತ್ತೆ ಒಳಗೆ ತಳ್ಳುತ್ತೇವೆ. ಹೀಗೆ ನಾಲ್ಕೈದು ಸಲ ಮಾಡಿದ ನಂತರ ಅವು ಸಾಯುತ್ತವೆ” ಎಂದು ಸುನಂದಾ ಹೇಳುತ್ತಾರೆ.
ನಿತಿನ್ ಅವರು ತಮ್ಮ ಕೆಲವು ಸ್ನೇಹಿತರೊಡಗೂಡಿ ಒಂದೇ ಸಲ ಸುಮಾರು 400-500 ಹುಳಗಳನ್ನು ಸಂಗ್ರಹಿಸಿದ್ದಾರೆ. ಈರುಳ್ಳಿ ಬಿತ್ತನೆಗೂ ಮೊದಲು ಮಣ್ಣನ್ನು ಸ್ವಚ್ಛಗೊಳಿಸಿದ್ದಾರಾದರೂ ಅವು ಅಲ್ಲಲ್ಲಿ ಗೋಚರಿಸುತ್ತಲೇ ಇವೆ. ಈ ಬಸವನಹುಳಗಳು ತನ್ನ ಹೊಲದ 50 ಪ್ರತಿಶತದಷ್ಟು ಬೆಳೆಯನ್ನು ನಾಶಗೊಳಿಸಿವೆ ಎನ್ನುತ್ತಾರೆ.
“ದಿನಕ್ಕೆ ನೂರಾರು ಹುಳಗಳನ್ನು ಹಿಡಿದು ಹೊಲವನ್ನು ಸ್ವಚ್ಛಗೊಳಿಸಿದರೂ ಮರುದಿನ ಮತ್ತೆ ಅಷೇ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ” ಎನ್ನುತ್ತಾರೆ ಸುನಂದಾ.
“ಜೂನ್ ತಿಂಗಳಿನಲ್ಲಿ ಬಸವನಹುಳುಗಳು [ಮತ್ತೆ] ಬರಲು ಆರಂಭಿಸುತ್ತವೆ” ಎಂದು ಅವರು ಭಯದಿಂದ ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು