ಬಹಶಃ ತೇಲು ಮಹತೋ ನನ್ನ ಪುಸ್ತಕ ʼಲಾಸ್ಟ್ ಹೀರೋಸ್ʼ ಪುಸ್ತಕದಲ್ಲಿ ದಾಖಲಾದ ಹೋರಾಟಗಾರರಲ್ಲಿ ಹಿರಿಯರು. ಅವರು ಗುರುವಾರ ಸಂಜೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಪಿರ್ರಾ ಗ್ರಾಮದಲ್ಲಿನ ತನ್ನ ಮನೆಯಲ್ಲಿ ನಿಧನರಾದರು. ನನ್ನ ಪುಸ್ತಕ ಬಿಡುಗಡೆಯಾದ ನಂತರ ಮರಣ ಹೊಂದಿದವರಲ್ಲಿ ಅವರು ಮೊದಲಿಗರು. ಅವರು 1942ರಲ್ಲಿ ಪುರುಲಿಯಾದಲ್ಲಿನ 12 ಪೊಲೀಸ್ ಠಾಣೆಗಳಿಗೆ ನಡೆದ ಐತಿಹಾಸಿಕವಾದ – ಈಗ ಮರೆತು ಹೋಗಿರುವ – ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತೇಲು ಅವರಿಗೆ ನಿಧನ ಹೊಂದಿದಾಗ 102 -105 ವರ್ಷವಾಗಿತ್ತು.
ಅವರು ನಮ್ಮನ್ನು ಅಗಲುವುದರೊಂದಿಗೆ ನಮ್ಮ ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟ ಸುವರ್ಣಯುಗದ ಪೀಳಿಗೆಯ ಅಂತ್ಯಕ್ಕೆ ಇನ್ನೊಂದು ಹೆಜ್ಜೆ ಹತ್ತಿರವಾಗಿದ್ದೇವೆ. ಇನ್ನೊಂದು ಐದಾರು ವರ್ಷಗಳಲ್ಲಿ ಸ್ವತಂತ್ರ ಭಾರತಕ್ಕಾಗಿ ಹೋರಾಟ ಮಾಡಿದವರಲ್ಲಿ ಒಬ್ಬರೂ ಉಳಿದಿರುವುದಿಲ್ಲ. ಹೊಸ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರೊಡನೆ ಮಾತನಾಡುವ, ಒಡನಾಡುವ ಮತ್ತು ಅವರನ್ನು ನೋಡುವ ಅವಕಾಶ ಸಿಗುವುದಿಲ್ಲ. ಅವರು ಯಾರು, ಅವರು ಯಾಕಾಗಿ ಹೋರಾಡಿದರು, ಯಾರಿಗಾಗಿ ಹೋರಾಡಿದರು ಎನ್ನುವ ಕತೆಯನ್ನು ಈ ಪೀಳಿಗೆಗೆ ನೇರವಾಗಿ ಕೇಳಲು ಸಾಧ್ಯವಿಲ್ಲ.
ತೇಲು ಮಹತೋ ಮತ್ತು ಅವರ ಬದುಕಿನ ಸಂಗಾತಿ ಲೋಕಿ ಮಹತೋ ತಮ್ಮ ಬದುಕಿನ ಕಥೆಗಳನ್ನು ಹೇಳಲು ಉತ್ಸುಕರಾಗಿದ್ದರು. ಹೊಸ ಪೀಳಿಗೆಗೆ ತಾವು ದೇಶಕ್ಕಾಗಿ ಹೋರಾಡಿದ್ದೆವು ಮತ್ತು ಆ ಕುರಿತು ನಮಗೆ ಹೆಮ್ಮೆಯಿದೆ ಎಂದು ಹೇಳಿಕೊಳ್ಳಲು ಕಾತರರಾಗಿದ್ದರು. ಇನ್ನು ತೇಲು ಮಹತೋ ತಮ್ಮ ಕತೆಯನ್ನು ನಮಗೆ ಹೇಳಲಾರರು. ಇನ್ನೊಂದು ಐದಾರು ವರ್ಷದಲ್ಲಿ ಉಳಿದವರೂ ಇಲ್ಲವಾಗಿ ಆ ಕತೆಗಳನ್ನು ನಮಗೆ ಹೇಳಲು ಯಾರೂ ಇರುವುದಿಲ್ಲ.
ಇದು ಮುಂದಿನ ಪೀಳಿಗೆಗೆ ಬಹಳ ದೊಡ್ಡ ನಷ್ಟವಾಗಲಿದೆ. ಈಗಿನ ಪೀಳಿಗೆಗೆ ನಮ್ಮ ಕಾಲದ ತೇಲು ಅವರಂತಹ ಜನರ ಕುರಿತು ತಿಳಿದಿರುವುದೇ ಅತ್ಯಲ್ಪ. ಅವರ ತ್ಯಾಗ, ಅವರ ಕತೆಗಳು ನಮ್ಮ ಬದುಕನ್ನು ರೂಪಿಸಲು ಎಷ್ಟು ಮುಖ್ಯವೆನ್ನುವುದು ಇವರಿಗೆ ತಿಳಿದೇ ಇಲ್ಲ.
ಅದರಲ್ಲೂ ವಿಶೇಷವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ತಿರುಚಿ, ಕಲ್ಪಿತ ಸತ್ಯಗಳನ್ನು ತುಂಬಲಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಜೀವಂತ ಸಾಕ್ಷಿಗಳ ನಷ್ಟ ನಿಜಕ್ಕೂ ತುಂಬಲಾರದ ನಷ್ಟವೇ ಹೌದು. ಈಗ ಮೋಹನದಾಸ್ ಕರಮಚಂದ್ ಗಾಂಧಿಯವರ ಹತ್ಯೆಯ ಸುತ್ತಲಿನ ಪ್ರಮುಖ ಸತ್ಯಗಳನ್ನು ನಮ್ಮ ಶಾಲಾ ಪಠ್ಯಪುಸ್ತಕಗಳಿಂದ, ಸಾರ್ವಜನಿಕ ಸಂವಾದಗಳಿಂದ, ಮಾಧ್ಯಮಗಳ ಚರ್ಚೆಗಳಲ್ಲಿ ಸಾಧ್ಯಂತವಾಗಿ ಅಳಿಸಿಹಾಕಲಾಗುತ್ತಿದೆ.






