ಅರುಣ್ ಜಾಧವ್ ಅವರ ಕೊಟ್ಟಿಗೆಯು ಕೇವಲ ಒಂದು ಹಸು ಮತ್ತು ಎಮ್ಮೆಯನ್ನು ಕಟ್ಟುವಷ್ಟಾಗುತ್ತದೆ. ಕಂಬಕ್ಕೆ ಕಟ್ಟಿರುವ ಜಾನುವಾರಗಳು ನಿರ್ಲಕ್ಷ್ಯಕ್ಕೊಳಗಾದಂತೆ ಕಾಣುತ್ತವೆ. "ಇದರ ಹಿಂದೆ ನನ್ನ ಇನ್ನೊಂದು ಶೆಡ್ ಇದೆ, ನನ್ನಲ್ಲಿರುವ ಶೆಡ್ಗಳ ಸಂಖ್ಯೆಯು ನನ್ನಲ್ಲಿರುವ ಜಾಣುವಾರುಗಳ ಸಂಖ್ಯೆಗೆ ಸಮಾನವಾಗಿದೆ. ಶೀಘ್ರದಲ್ಲೇ ನಾನು ಜಾನುವಾರುಗಳಿಗಿಂತಲೂ ಹೆಚ್ಚಿನ ಶೆಡ್ಗಳನ್ನು ಹೊಂದಿರುತ್ತೇನೆ“ ಎಂದು ಅರುಣ್ ಹೇಳುತ್ತಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ 39 ವರ್ಷದ ಕಬ್ಬಿನ ಬೆಳೆಗಾರ ಅರುಣ್ ಒಮ್ಮೆ ತಮ್ಮ ಹಳ್ಳಿಯಾದ ಅಲ್ಸುಂದದಲ್ಲಿ ಏಳು ಹಸುಗಳು ಮತ್ತು ನಾಲ್ಕು ಎಮ್ಮೆಗಳನ್ನು ಸಾಕಿದ್ದರು. "ಕಳೆದ 15 ವರ್ಷಗಳಲ್ಲಿ ನಾನು ಅವುಗಳನ್ನು ಒಂದೊಂದಾಗಿ ಮಾರಾಟ ಮಾಡಿದ್ದೇನೆ. ನನಗೆ 10 ಎಕರೆ ಕಬ್ಬಿನ ಗದ್ದೆಯಿದೆ. ಹಾಲು ಉತ್ಪಾದನೆಯು ಸೈಡ್ ಬಿಸಿನೆಸ್ ಆಗಿದ್ದರಿಂದಾಗಿ ಒಂದು ರೀತಿ ಅನುಕೂಲಕರವಾಗಿತ್ತು. ಆದರೆ ಈಗ ಅದು ಒಂದು ರೀತಿ ನನ್ನ ಕುತ್ತಿಗೆಗೆ ಬಿಗಿದಿರುವ ಕುಣಿಕೆಯಾಗಿದೆ" ಎಂದು ಅವರು ಹೇಳುತ್ತಾರೆ.
ಸಾಂಗ್ಲಿಯು ಪಶ್ಚಿಮ ಮಹಾರಾಷ್ಟ್ರದಲ್ಲಿದೆ, ಇದು ಡೈರಿ ಉದ್ಯಮದ ಪ್ರಮುಖ ಕೇಂದ್ರವಾಗಿದೆ, ರಾಜ್ಯದ ಒಟ್ಟು ಹಾಲು ಉತ್ಪಾದನೆಯಲ್ಲಿ ಇದು ಶೇ 42ರಷ್ಟು ಪಾಲನ್ನು ಹೊಂದಿದೆ. ಇಲ್ಲಿ ಬಹುತೇಕ ರೈತರು ಹಸು ಮತ್ತು ಎಮ್ಮೆಗಳನ್ನು ಸಾಕುತ್ತಾರೆ. ಅರುಣ್ ಅವರಂತಹ ರೈತರಿಗೆ ಹಾಲು ಹೆಚ್ಚುವರಿ ಆದಾಯದ ಮೂಲವಾದರೆ, ಇತರರಿಗೆ ಇದು ಮುಖ್ಯ ಆಧಾರವಾಗಿದೆ. ಆದರೆ ಈಗ ಡೈರಿ ರೈತರ ಸಂಖ್ಯೆ ಕ್ಷೀಣಿಸುತ್ತಿದೆ, ಆರ್ಥಿಕ ಪರಿಸ್ಥಿತಿಯೂ ಕೂಡ ಅದಕ್ಕೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ.
ಈಗ ಸುಮಾರು ಒಂದು ದಶಕದಿಂದ, ಪಶ್ಚಿಮ ಮಹಾರಾಷ್ಟ್ರವು ಹಾಲಿನ ಬೆಲೆಯ ಏರಿಳಿತದ ವಿರುದ್ಧ ಡೈರಿ ರೈತರಿಂದ ಪುನರಾವರ್ತಿತ ಹೋರಾಟಗಳಿಗೆ ಸಾಕ್ಷಿಯಾಗಿದೆ. ಅವರು ತಮ್ಮ ಪ್ರತಿಭಟನೆಯ ಸಂಕೇತವಾಗಿ ಹಾಲನ್ನು ಚೆಲ್ಲುವುದರ ಮೂಲಕ ಪ್ರತಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಪ್ರದರ್ಶನಗಳ ನೇತೃತ್ವ ವಹಿಸಿರುವ ಅಖಿಲ ಭಾರತೀಯ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಅಜಿತ್ ನವಲೆ, ಸಹಕಾರಿ ಸಂಸ್ಥೆಗಳು ಮತ್ತು ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಖರೀದಿಸಿದಾಗ ಹಾಲಿನ ಬೆಲೆ ತುಲನಾತ್ಮಕವಾಗಿ ಸ್ಥಿರವಾಗಿತ್ತು ಎಂದು ಹೇಳುತ್ತಾರೆ. "ಖಾಸಗಿ ಕಂಪನಿಗಳು ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ, ಸರ್ಕಾರದ ಪಾತ್ರವು ಈಗ ಕಡಿಮೆಯಾಗಿರುವುದಲ್ಲದೆ ಅದರ ಪರಿಣಾಮವು ಕೂಡ ಅಷ್ಟಾಗಿಲ್ಲ. ಅವರವರ ಇಚ್ಛೆಗೆ ತಕ್ಕಂತೆ ಬೆಲೆಗಳು ಏರುತ್ತವೆ ಮತ್ತು ಇಳಿಯುತ್ತವೆ" ಎಂದು ಅವರು ಹೇಳುತ್ತಾರೆ.
“ಖಾಸಗಿ ಉದ್ಯಮಿದಾರರು ಬೆಲೆಗಳನ್ನು ನಿಯಂತ್ರಿಸುವ ಮೂಲಕ ಲಾಭವನ್ನು ಗಳಿಸಿದ್ದಾರೆ. ನಾವು ಕೃಷಿ ಕಾನೂನುಗಳ ಬಗ್ಗೆಯೂ ಇದನ್ನೇ ಹೇಳುತ್ತಿದ್ದೇವೆ, “ಸೆಪ್ಟೆಂಬರ್ 2020 ರಲ್ಲಿ ಕೇಂದ್ರ ಸರ್ಕಾರವು ಪರಿಚಯಿಸಿದ ಮೂರು ಕೃಷಿ ಕಾನೂನುಗಳನ್ನು ಉಲ್ಲೇಖಿಸಿ ನವಲೆ ಹೇಳುತ್ತಾರೆ. ಕಳೆದ ವರ್ಷದಲ್ಲಿ ರೈತರ ಪ್ರತಿಭಟನೆಗಳು (ಇದಕ್ಕೆ ಸಂಬಂಧಿಸಿದ PARI ಯ ಸಂಪೂರ್ಣ ವರದಿಯನ್ನು ನೋಡಿ) ನವೆಂಬರ್ 29, 2021 ರಂದು ಸಂಸತ್ತಿನಲ್ಲಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು.










