ಕಾಲಿನ ಕೆಳಗೆ ಹಸಿರು ಹುಲ್ಲು, ಮೇಲೆ ತೆರೆದ ಆಕಾಶ, ಸುತ್ತಲೂ ಸೊಂಪಾದ ಮರಗಳು ಮತ್ತು ಕಾಡಿನ ಮೂಲಕ ಹರಿಯುವ ಶಾಂತವಾದ ನೀರಿನ ಪ್ರವಾಹ - ಇದು ಗ್ರಾಮೀಣ ಮಹಾರಾಷ್ಟ್ರದ ಎಲ್ಲಿಯಾದರೂ ಕಾಣಬಹುದಾದ ಸಾಮಾನ್ಯ ದೃಶ್ಯ.
ಸ್ವಲ್ಪ ಇರಿ, ಗೀತಾ ಏನೋ ಹೇಳುತ್ತಿದ್ದಾರೆ ಕೇಳಿ. ಹರಿಯುವ ತೊರೆಯತ್ತ ಬೆರಳು ತೋರಿಸುತ್ತಾ ಅವರು ಹೇಳುತ್ತಾರೆ: “ನಾವು ಮಹಿಳೆಯರು ಎಡಕ್ಕೆ ಹೋಗುತ್ತೇವೆ, ಪುರುಷರು ಬಲಕ್ಕೆ.” ಇದು ಅವರು ತಮ್ಮ ವಸ್ತಿಯಲ್ಲಿ ಮಾಡಿಕೊಂಡಿರುವ ಬಯಲು ಶೌಚಾಲಯದ ವ್ಯವಸ್ಥೆ.
“ಮಳೆ ಬಂದಾಗ ನಾವು ಕೊಡೆ ಹಿಡಿದು ಅಂಗಾಲು ಮುಳುಗುವ ನೀರಿನಲ್ಲಿ ಕೂರಬೇಕು. ಇನ್ನು ಮುಟ್ಟಿನ ಸಮಯದಲ್ಲಿ ನಮ್ಮ ಪರಿಸ್ಥಿತಿ ಹೇಗಿರುತ್ತದೆಯೆನ್ನುವುದರ ಕುರಿತು ನಾನು ಏನು ಹೇಳಲಿ ನಿಮಗೆ?” ಎಂದು ಕೇಳುತ್ತಾರೆ 40 ವರ್ಷದ ಗೀತಾ.
ಪುಣೆ ಜಿಲ್ಲೆಯ ಶಿರೂರು ತಾಲ್ಲೂಕಿನ ಕುರುಲಿ ಗ್ರಾಮದ ಹೊರವಲಯದಲ್ಲಿರುವ ಅವರ 50 ಕುಟುಂಬಗಳ ಕಾಲೋನಿಯಲ್ಲಿ ಭಿಲ್ ಮತ್ತು ಪಾರ್ಧಿ ಕುಟುಂಬಗಳು ವಾಸಿಸುತ್ತಿವೆ. ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡಗಳೆಂದು ವರ್ಗೀಕರಿಸಲಾದ ಈ ಎರಡು ಸಮುದಾಯಗಳು ರಾಜ್ಯದ ಅತ್ಯಂತ ಬಡ ಮತ್ತು ಅತ್ಯಂತ ಅಂಚಿನಲ್ಲಿರುವ ಸಮುದಾಯಗಳಲ್ಲಿ ಸೇರಿವೆ.
ಭಿಲ್ ಸಮುದಾಯದವರಾದ ಗೀತಾ, ಬಯಲಿನಲ್ಲಿ ಶೌಚಕ್ಕೆ ಹೋಗುವದರಲ್ಲಿ ಇರುವ ಅನಾನುಕೂಲತೆಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. "ನಾವು ಕುಳಿತಲ್ಲಿ ಹುಲ್ಲು ಚುಚ್ಚಿ ನೋಯಿಸುತ್ತದೆ, ಮತ್ತು ಸೊಳ್ಳೆಗಳು ಕಚ್ಚುತ್ತವೆ... ಜೊತೆಗೆ ಹಾವು ಕಚ್ಚುವ ಭಯವಂತೂ ಯಾವಾಗಲೂ ಇದ್ದೇ ಇರುತ್ತದೆ."
ಕಾಲೋನಿ ನಿವಾಸಿಗಳು ಪ್ರತಿ ಹಂತದಲ್ಲೂ ಸವಾಲುಗಳನ್ನು ಎದುರಿಸುತ್ತಾರೆ - ವಿಶೇಷವಾಗಿ ಮಹಿಳೆಯರು, ಕಾಡಿಗೆ ಹೋಗುವ ದಾರಿಯಲ್ಲಿ ದಾಳಿಗೊಳಗಾಗುವ ಭಯವೂ ಅವುಗಳಲ್ಲಿ ಒಂದು.




