ಸುನಿಲ್ ಗುಪ್ತಾ ಅವರಿಗೆ ಮನೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಮತ್ತು ಅವರ ಕಚೇರಿಯಾದ, ಗೇಟ್‌ವೇ ಆಫ್ ಇಂಡಿಯಾ, ಕಳೆದ 15 ತಿಂಗಳುಗಳ ಲಾಕ್‌ಡೌನ್ ಸಮಯದಲ್ಲಿ ಹಲವು ಬಾರಿ ದೀರ್ಘಾವಧಿಯವರೆಗೆ ಮುಚ್ಚಿದೆ.
“ಇದು ನಮ್ಮ ಪಾಲಿನ ದಫ್ತಾರ್ [ಕಚೇರಿ]. ನಾವು ಈಗ ಎಲ್ಲಿಗೆ ಹೋಗಬೇಕು?” ದಕ್ಷಿಣ ಮುಂಬೈನ ಸ್ಮಾರಕ ಸಂಕೀರ್ಣವನ್ನು ತೋರಿಸುತ್ತಾ ಅವರು ಕೇಳುತ್ತಾರೆ.
ಲಾಕ್‌ಡೌನ್‌ಗಳು ಪ್ರಾರಂಭವಾಗುವವರೆಗೂ, ಸುನಿಲ್ ತನ್ನ ಕ್ಯಾಮೆರಾದೊಂದಿಗೆ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಈ ಜನಪ್ರಿಯ ಪ್ರವಾಸಿ ತಾಣದಲ್ಲಿ ಕಾಯುತ್ತಿದ್ದರು. ಜನರು ಗೇಟ್‌ವೇ ಕಡೆಗೆ ಹೋಗುವ ಚೆಕ್‌ಪೋಸ್ಟ್‌ಗಳನ್ನು ದಾಟುತ್ತಿದ್ದಂತೆ, ಅವರು ಮತ್ತು ಇತರ ಉತ್ಸಾಹಿ ಛಾಯಾಗ್ರಾಹಕರು ಕ್ಲಿಕ್-ಅಂಡ್-ಪ್ರಿಂಟ್ ತ್ವರಿತ ಫೋಟೋಗಳ ಆಲ್ಬಮ್‌ಗಳೊಂದಿಗೆ 'ಏಕ್ ಮಿನಿಟ್ ಮೇ ಫುಲ್ ಫ್ಯಾಮಿಲಿ ಫೋಟೊ' ಅಥವಾ ' ದಯವಿಟ್ಟು ಒಂದು ಫೋಟೋ ತೆಗೆಸಿಕೊಳ್ಳಿ. ಕೇವಲ 30 ರೂಪಾಯಿಗೆ ಎನ್ನುತ್ತಾ ಅವರನ್ನು ಸ್ವಾಗತಿಸುತ್ತಿದ್ದರು.
ಕೋವಿಡ್ -19 ಪ್ರಕರಣಗಳು ಉಲ್ಬಣದಲ್ಲಿ ಇಳಿತ ಕಂಡುಬಂದ ಕಾರಣ ಈ ವರ್ಷದ ಏಪ್ರಿಲ್ ತಿಂಗಳ ಮಧ್ಯದಿಂದ ಮುಂಬಯಿಯಲ್ಲಿ ನವೀಕರಿಸಿದ ನಿರ್ಬಂಧ ನಿಯಮಗಳಗಳ ನಂತರ, ಅವರೆಲ್ಲರಿಗೂ ಮತ್ತೆ ಒಂದಿಷ್ಟು ಕೆಲಸ ಸಿಗತೊಡಗಿತು. "ನಾನು ಬೆಳಿಗ್ಗೆ ಇಲ್ಲಿಗೆ ಬಂದಾಗ ಮುಖಕ್ಕೆ ರಾಚುವಂತೆ ʼನೋ ಎಂಟ್ರಿʼ ಬೋರ್ಡ್ ಕಾಣಿಸಿತು. ಎಂದು 39 ವರ್ಷದ ಸುನಿಲ್ ಏಪ್ರಿಲ್‌ನಲ್ಲಿ ಹೇಳಿದ್ದರು. "ನಾವು ಈಗಾಗಲೇ ಸಂಪಾದನೆಗಾಗಿ ಹೆಣಗಾಡುತ್ತಿದ್ದೆವು ಮತ್ತು ಈಗ ನಾವು ಋಣಾತ್ಮಕ ಗಳಿಕೆ [ಆದಾಯ] ಎದುರಿಸುತ್ತಿದ್ದೇವೆ. ಇದಕ್ಕೂ ಹೆಚ್ಚಿನ ನಷ್ಟವನ್ನು ಭರಿಸುವ ಸಾಮರ್ಥ್ಯ ನನಗಿಲ್ಲ.”
ಅವರ ‘ಕಚೇರಿʼಯ, ಕೆಲಸ ಲಭ್ಯವಿದ್ದ ಸಮಯದಲ್ಲಿ, ಸುನಿಲ್ ಮತ್ತು ಇತರ ಗೇಟ್‌ವೇ ಬಳಿಯ ಛಾಯಾಗ್ರಾಹಕರು (ಎಲ್ಲರೂ ಪುರುಷರು) ಸಾಮಾನ್ಯವಾಗಿ ‘ಫಾರ್ಮಲ್’ ಆಗಿರುವ ಅಂದವಾಗಿ ಇಸ್ತ್ರಿ ಮಾಡಿದ ಬಿಳಿ ಶರ್ಟ್, ಕಪ್ಪು ಪ್ಯಾಂಟ್, ಕಪ್ಪು ಬೂಟುಗಳನ್ನು ಧರಿಸುತ್ತಿದ್ದರು. ಪ್ರತಿಯೊಬ್ಬರೂ ಅವರ ಕುತ್ತಿಗೆಗೆ ಕ್ಯಾಮೆರಾ ಮತ್ತು ಅವರ ಬೆನ್ನಿಗೆ ಅಂಟಿಕೊಂಡ ಚೀಲವನ್ನು ಹೊಂದಿರುತ್ತಿದ್ದರು. ಸೊಗಸಾದ ಸನ್‌ಗ್ಲಾಸ್‌ಗಳನ್ನು ಹಾಕಿಕೊಂಡು ತಮ್ಮ ಫೋಟೋಗಳನ್ನು ತೆಗೆಸಿಕೊಳ್ಳಲು ಬಯಸುವ ಪ್ರವಾಸಿಗರನ್ನು ಆಕರ್ಷಿಸಲು ಕೆಲವರು ತಮ್ಮ ಶರ್ಟ್‌ಗಳಲ್ಲಿ ಕೆಲವು ವರ್ಣರಂಜಿತಸನ್‌ಗ್ಲಾಸ್‌ಗಳನ್ನು ಕೂಡ ನೇತುಹಾಕಿಕೊಂಡಿರುತ್ತಾರೆ. ಸ್ಮಾರಕದಲ್ಲಿ ಸಂದರ್ಶಕರ ನಗುತ್ತಿರುವ ಮುಖಗಳಿಂದ ತುಂಬಿದ ಆಲ್ಬಮ್‌ಗಳನ್ನು ಅವರು ತಮ್ಮ ಕೈಯಲ್ಲಿ ಹಿಡಿದಿರುತ್ತಿದ್ದರು.
"ಈಗ ನೀವಿಲ್ಲಿ ಸಂದರ್ಶಕರಿಗಿಂತ ಹೆಚ್ಚು ನಮ್ಮವರನ್ನೇ [ಛಾಯಾಗ್ರಾಹಕರು] ನೋಡಬಹುದು" ಎಂದು ಸುನಿಲ್ ಹೇಳುತ್ತಾರೆ. ಮಾರ್ಚ್ 2020ರಲ್ಲಿ ಪ್ರಾರಂಭವಾದ ಮೊದಲ ಲಾಕ್‌ಡೌನ್‌ಗೆ ಮೊದಲು, ಅಲ್ಲಿ ಅವರನ್ನೂ ಸೇರಿ ಸುಮಾರು 300 ಛಾಯಾಗ್ರಾಹಕರು ಕೆಲಸ ಮಾಡುತ್ತಿದ್ದರೆಂದು ಅವರು ಅಂದಾಜಿಸುತ್ತಾರೆ. ಅಂದಿನಿಂದ ಅವರ ಸಂಖ್ಯೆ 100ಕ್ಕೆ ಇಳಿದಿದೆ. ಅನೇಕರು ಇತರ ಕೆಲಸಗಳನ್ನು ನೋಡುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ.
ಕಳೆದ ವರ್ಷ, ಸುನಿಲ್ ಆಗಸ್ಟ್ ವೇಳೆಗೆ ಮತ್ತೆ ಕೆಲಸ ಪ್ರಾರಂಭಿಸಿದ್ದರು. “ನಾವು ಮಳೆಗಾಲದಲ್ಲಿಯೂ ಹಗಲು ರಾತ್ರಿ ನಿಂತು ಕೇವಲ ಒಬ್ಬ ಗ್ರಾಹಕರಿಗಾಗಿ ಕಾಯುತ್ತಿದ್ದೆವು. ದೀಪಾವಳಿಯ ಸಮಯದಲ್ಲಿ [ನವೆಂಬರ್‌ನಲ್ಲಿ] ನನ್ನ ಮಕ್ಕಳಿಗೆ ಒಂದು ಪ್ಯಾಕೆಟ್ ಸಿಹಿತಿಂಡಿಗಳನ್ನು ಖರೀದಿಸಲು ಸಹ ನನ್ನ ಬಳಿ ಹಣವಿರಲಿಲ್ಲ” ಎಂದು ಅವರು ಹೇಳುತ್ತಾರೆ. ನಂತರ ಅವರಿಗೆ ‘ಅದೃಷ್ಟʼ ಒಲಿಯಿತು, ಮತ್ತು ಆ ಹಬ್ಬದ ದಿನ ರೂ. 130 ಸಂಪಾದನೆ ದೊರೆಯಿತು ಎಂದು ಮುಂದುವರೆದು ಹೇಳುತ್ತಾರೆ. ಆ ಅವಧಿಯಲ್ಲಿ, ಛಾಯಾಗ್ರಾಹಕರಿಗೆ ಪಡಿತರವನ್ನು ವಿತರಿಸುವ ವೈಯಕ್ತಿಕ ದಾನಿಗಳು ಮತ್ತು ಸಂಸ್ಥೆಗಳಿಂದ ಸಾಂದರ್ಭಿಕ ಆರ್ಥಿಕ ಸಹಾಯವು ಬಂದಿತು.
2008ರಲ್ಲಿ ಅವರು ಈ ಕೆಲಸವನ್ನು ಮಾಡಲು ಪ್ರಾರಂಭಿಸಿದಾಗಿನಿಂದ, ಸುನಿಲ್ ಅವರ ಆದಾಯವು ಕುಸಿಯುತ್ತಲೇ ಬಂದಿದೆ. ದಿನಕ್ಕೆ ಸರಿಸುಮಾರು ರೂ 400-1,000 (ಅಥವಾ, ಪ್ರಮುಖ ಹಬ್ಬಗಳಂದು, ಸುಮಾರು 10 ಫೋಟೋ ತೆಗೆಯುವ ಮೂಲಕ 1,500 ರೂ.) ಸಂಪಾದನೆ ಇರುತ್ತದೆ. ಅಂತರ್ಗತ ಕ್ಯಾಮೆರಾಗಳೊಂದಿಗೆ ಸ್ಮಾರ್ಟ್‌ಫೋನ್‌ಗಳ ಪ್ರಸರಣದ ನಂತರ ಪ್ರತಿದಿನದ ಸಂಪಾದನೆ 200-600 ರೂಪಾಯಿಗಳಿಗಿಳಿಯಿತು.
ನಂತರ ಕಳೆದ ವರ್ಷ ಲಾಕ್ ಡೌನ್ ಪ್ರಾರಂಭವಾದಾಗಿನಿಂದ ದಿನಕ್ಕೆ 60 – 100 ರೂಗಳ ಸಂಪಾದನೆಯಾದರೆ ಹೆಚ್ಚು.
"ಯಾವುದೇ ಬೋಣಿ ಇಲ್ಲದೆ ಮರಳುವುದು [ದಿನದ ಮೊದಲ ಮಾರಾಟ ಮತ್ತು ಗಳಿಕೆ] ಈಗ ನಮ್ಮ ದೈನಂದಿನ ಹಣೆಬರಹವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಧಂದಾ ಸರಿಯಾಗಿ ನಡೆಯುತ್ತಿರಲಿಲ್ಲ. ಆದರೆ [ಆದಾಯದವಿಲ್ಲದ ದಿನಗಳು] ಈಗಿನಂತೆ ಆಗಾಗ್ಗೆ ಇರುತ್ತಿರಲಿಲ್ಲ,” ಎಂದು ಗೃಹಿಣಿ ಮತ್ತು ಸಾಂದರ್ಭಿಕ ಟೈಲರಿಂಗ್ ಶಿಕ್ಷಕಿಯಾದ ಪತ್ನಿ ಸಿಂಧು ಮತ್ತು ಅವರ ಮೂವರು ಮಕ್ಕಳೊಂದಿಗೆ ದಕ್ಷಿಣ ಮುಂಬೈನ ಕಫ್ ಪೆರೇಡ್ ಪ್ರದೇಶದ ಕೊಳೆಗೇರಿ ಕಾಲೋನಿಯಲ್ಲಿ ವಾಸಿಸುವ ಸುನಿಲ್ ಹೇಳುತ್ತಾರೆ .
ಸುನೀಲ್ 1991ರಲ್ಲಿ ಉತ್ತರ ಪ್ರದೇಶದ ಫರ್ಸರಾ ಖುರ್ದ್ ಗ್ರಾಮದಿಂದ ತನ್ನ ಮಾವನ ಜೊತೆ ಈ ನಗರಕ್ಕೆ ಬಂದರು. ಕುಟುಂಬವು ಕಂಡು ಸಮುದಾಯಕ್ಕೆ ಸೇರಿದೆ (ಒಬಿಸಿ ಎಂದು ಪಟ್ಟಿ ಮಾಡಲಾಗಿದೆ). ಅವರ ತಂದೆ ಮೌ ಜಿಲ್ಲೆಯ ತಮ್ಮ ಗ್ರಾಮದಲ್ಲಿ ಅರಶಿನ, ಗರಂ ಮಸಾಲ ಮತ್ತು ಇತರ ಮಸಾಲೆಗಳನ್ನು ಮಾರಾಟ ಮಾಡುತ್ತಿದ್ದರು. “ನನ್ನ ಮಾಮಾ ಮತ್ತು ನಾನು ಗೇಟ್‌ವೇನಲ್ಲಿ ಭೇಲ್ ಪುರಿಯನ್ನು ಮಾರಾಟ ಮಾಡುವ ಥೇಲಾವನ್ನು ಹಾಕಿದ್ದೆವು, ಅಲ್ಲಿ ನಾವು ಪಾಪ್‌ಕಾರ್ನ್, ಐಸ್‌ಕ್ರೀಮ್, ನಿಂಬು ಪಾನಿ ಹೀಗೆ ಏನಾದರೂ ಮಾರಾಟ ಮಾಡುತ್ತಿದ್ದೆವು. ಅಲ್ಲಿ ಈಗಾಗಲೇ ಕೆಲವು ಛಾಯಾಗ್ರಾಹಕರು ಕೆಲಸ ಮಾಡುತ್ತಿರುವುದನ್ನು ನೋಡಿದ್ದೆ ಹೀಗಾಗಿ ನನಗೂ ಈ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು." ಎಂದು ಸುನಿಲ್ ಹೇಳುತ್ತಾರೆ.
ನಂತರದ ದಿನಗಳಲ್ಲಿ, 2008ರಲ್ಲಿ ಅವರು ಸ್ನೇಹಿತರು ಮತ್ತು ಕುಟುಂಬದಿಂದ ಹಣ ಸಾಲ ಪಡೆದು ಹತ್ತಿರದ ಬೋರಾ ಬಜಾರ್ ಮಾರುಕಟ್ಟೆಯಿಂದ ಬೇಸಿಕ್ ಸೆಕೆಂಡ್ ಹ್ಯಾಂಡ್ ಎಸ್‌ಎಲ್‌ಆರ್ ಕ್ಯಾಮೆರಾ ಮತ್ತು ಪ್ರಿಂಟರ್ ಖರೀದಿಸಿದರು. (2019ರ ಅಂತ್ಯದ ವೇಳೆಗೆ, ಅವರು ಹೆಚ್ಚು ದುಬಾರಿ ಬೆಲೆಯ ನಿಕಾನ್ ಡಿ 7200 ಖರೀದಿಸಿದರು, ಮತ್ತೆ ಅದಕ್ಕಾಗಿಯೂ ಹಣವನ್ನು ಸಾಲ ಮಾಡಿದ್ದರು; ಅವರು ಇನ್ನೂ ಆ ಸಾಲವನ್ನು ಮರುಪಾವತಿಸುತ್ತಿದ್ದಾರೆ).
ತಮ್ಮ ಮೊದಲ ಕ್ಯಾಮೆರಾವನ್ನು ಖರೀದಿಸಿದ ಸಮಯದಲ್ಲಿ, ಸುನೀಲ್ ವ್ಯಾಪಾರದಲ್ಲಿ ಏಳಿಗೆಯನ್ನು ಕಂಡಿದ್ದರು ಏಕೆಂದರೆ ಪೋರ್ಟಬಲ್ ಪ್ರಿಂಟರುಗಳಿಂದಾಗಿ ಫೋಟೋಗಳನ್ನು ಗ್ರಾಹಕರಿಗೆ ತಕ್ಷಣ ನೀಡಬಹುದಿತ್ತು. ಆದರೆ ನಂತರ ಸ್ಮಾರ್ಟ್‌ಫೋನ್‌ಗಳು ಸುಲಭವಾಗಿ ಲಭ್ಯವಾದವು - ಮತ್ತು ಅವರ ಫೋಟೋಗಳ ಬೇಡಿಕೆ ತೀವ್ರವಾಗಿ ಕುಸಿಯಿತು. ಕಳೆದ ಒಂದು ದಶಕದಿಂದ, ಅವರು ಹೇಳುತ್ತಾರೆ, ಯಾವುದೇ ಹೊಸ ಫೋಟೊಗ್ರಾಫರ್ ವೃತ್ತಿಗೆ ಸೇರಿಕೊಂಡಿಲ್ಲ, ನಮ್ಮದೇ ಕೊನೆಯ ಬ್ಯಾಚ್ ಎಂದು.
ಈಗ ಸ್ಮಾರ್ಟ್ ಫೋನ್‌ನಿಂದ ಎದುರಾಗಿರುವ ಸ್ಪರ್ಧೆಯನ್ನು ಎದುರಿಸಲು ಕೆಲವು ಛಾಯಾಗ್ರಾಹಕರು ಪೋರ್ಟಬಲ್ ಪ್ರಿಂಟರ್‌ಗಳಲ್ಲದೆ ಯುಎಸ್‌ಬಿ ಡಿವೈಸ್ ಸಹ ಜೊತೆಗಿಟ್ಟುಕೊಂಡಿರುತ್ತಾರೆ. ಇದರ ಮೂಲಕ ಅವರು ತಮ್ಮ ಕ್ಯಾಮೆರಾದಿಂದ ಫೋಟೋಗಳನ್ನು ಗ್ರಾಹಕರ ಫೋನ್‌ಗೆ ತಕ್ಷಣ ವರ್ಗಾಯಿಸಲು ಸಾಧ್ಯವಾಗುತ್ತದೆ. ಮತ್ತು ಈ ಸೇವೆಗೆ 15 ರೂ. ಶುಲ್ಕ ವಿಧಿಸುತ್ತಾರೆ ಕೆಲವು ಗ್ರಾಹಕರು ಸಾಫ್ಟ್ ಕಾಪಿ ಮತ್ತು ತ್ವರಿತ ಹಾರ್ಡ್‌ಕಾಪಿ (ಪ್ರತಿ ಮುದ್ರಣಕ್ಕೆ 30 ರೂ.) ಎರಡನ್ನೂ ಆರಿಸಿಕೊಳ್ಳುತ್ತಾರೆ.
ಸುನಿಲ್ ವೃತ್ತಿ ಆರಂಭಿಸು ಮೊದಲು, ಗೇಟ್‌ವೇಯಲ್ಲಿ ಒಂದು ತಲೆಮಾರಿನ ಛಾಯಾಗ್ರಾಹಕರು ಪೋಲರಾಯ್ಡ್‌ಗಳನ್ನು ಬಳಸುತ್ತಿದ್ದರು, ಆದರೆ ಇವುಗಳು ಮುದ್ರಿಸಲು ಮತ್ತು ನಿರ್ವಹಿಸಲು ದುಬಾರಿಯೆಂದು ಅವರು ಹೇಳುತ್ತಾರೆ. ಅವರು ಪಾಯಿಂಟ್-ಅಂಡ್-ಶೂಟ್ ಕ್ಯಾಮೆರಾಗಳಿಗೆ ಬದಲಾವಣೆ ಹೊಂದಿದಾಗ, ಹಾರ್ಡ್ ಕಾಪಿ ಫೋಟೋಗಳನ್ನು ಅಂಚೆ ಮೂಲಕ ಗ್ರಾಹಕರಿಗೆ ಕಳುಹಿಸುತ್ತಿದ್ದರು.
ದಶಕಗಳ ಹಿಂದೆ ಪೋಲರಾಯ್ಡ್ ಕೆಮೆರಾವನ್ನು ಕೆಲವು ಕಾಲ ಬಳಸಿದ ಗೇಟ್‌ವೇ ಛಾಯಾಗ್ರಾಹಕರಲ್ಲಿ ಗಂಗಾರಾಮ್ ಚೌಧರಿ ಕೂಡ ಒಬ್ಬರು. "ಜನರು ನಮ್ಮ ಬಳಿಗೆ ಬಂದು ಅವರ ಫೋಟೋ ತೆಗೆದುಕೊಡುವಂತೆ ಕೇಳುತ್ತಿದ್ದ ಸಮಯವಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಈಗ ಯಾರೂ ನಮ್ಮತ್ತ ನೋಡುವುದಿಲ್ಲ, ನಾವು ಅಸ್ತಿತ್ವದಲ್ಲಿಲ್ಲ ಎಂಬಂತಾಗಿದೆ."
ಗಂಗಾರಂ ಅವರು ಹದಿಹರೆಯದಲ್ಲಿ ಬಿಹಾರದ ಮಧುಬನಿ ಜಿಲ್ಲೆಯ ಡುಮ್ರಿ ಗ್ರಾಮದಿಂದ ಮುಂಬೈಗೆ ಬಂದ ನಂತರ ಗೇಟ್‌ವೇಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಕೆವಾಟ್ ಸಮುದಾಯಕ್ಕೆ ಸೇರಿದವರು (ಒಬಿಸಿ ಎಂದು ಪಟ್ಟಿ ಮಾಡಲಾಗಿದೆ). ಅವರು ಮೊದಲು ಕೋಲ್ಕತ್ತಾಗೆ ತೆರಳಿದ್ದರು, ಅಲ್ಲಿ ಅವರ ತಂದೆ ರಿಕ್ಷಾ-ಎಳೆಯುವವರಾಗಿ ಕೆಲಸ ಮಾಡುತ್ತಿದ್ದರು ಮತ್ತು ಅಲ್ಲಿ ಮಾಸಿಕ ರೂ. 50 ಸಂಪಾದನೆಯಾಗುತ್ತಿತ್ತು. ಒಂದು ವರ್ಷದೊಳಗೆ ಅವರ ಉದ್ಯೋಗದಾತ ಮುಂಬೈನ ಸಂಬಂಧಿಯ ಸ್ಥಳದಲ್ಲಿ ಕೆಲಸ ಮಾಡಲು ಕಳುಹಿಸಿದರು.
ಸ್ವಲ್ಪ ಸಮಯದ ನಂತರ, ಈಗ ತನ್ನ 50ರ ದಶಕದ ಆರಂಭದಲ್ಲಿರುವ ಗಂಗಾರಾಮ್ ಗೇಟ್‌ವೇ ಬಳಿ ಛಾಯಾಗ್ರಾಹಕರಾಗಿದ್ದ ದೂರದ ಸಂಬಂಧಿಯನ್ನು ಭೇಟಿಯಾದರು. "ಆಗ ನಾನೂ ಈ ಕ್ಷೇತ್ರದಲ್ಲಿ ಒಂದು ಕೈ ಏಕೆ ನೋಡಬಾರದು ಎನ್ನಿಸಿತು." ಎಂದು ಅವರು ಹೇಳುತ್ತಾರೆ. ಆ ಸಮಯದಲ್ಲಿ (1980ರ ದಶಕದಲ್ಲಿ) ಸ್ಮಾರಕದಲ್ಲಿ ಕೇವಲ 10-15 ಮಂದಿ ಮಾತ್ರ ಇದ್ದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಆದರೆ ಕೆಲವು ಹಿರಿಯ ಛಾಯಾಗ್ರಾಹಕರು ತಮ್ಮ ಬಳಿಯಿರುವ ಹೆಚ್ಚುವರಿ ಪೋಲರಾಯ್ಡ್ ಅಥವಾ ಪಾಯಿಂಟ್-ಎಂಡ್-ಶೂಟ್ ಕ್ಯಾಮೆರಾಗಳನ್ನು ಹೊಸಬರಿಗೆ ಕಮಿಷನ್‌ಗೆ ಎರವಲು ನೀಡುತ್ತಿದ್ದರು. ಗಂಗಾರಾಮ್ ಅವರಿಗೆ ಹೊಸದರಲ್ಲಿ ಫೋಟೊ ಅಲ್ಬಮ್‌ಗಳನ್ನು ಹಿಡಿದುಕೊಂಡಿರಲು ಮತ್ತು ಗ್ರಾಹಕರನ್ನು ಕರೆದು ತರುವಂತೆ ಹೇಳಲಾಗುತ್ತಿತ್ತು. ನಂತರದ ದಿನಗಳಲ್ಲಿ ಅವರಿಗೆ ಕೆಮೆರಾ ನೀಡಲಾಯಿತು. ಆಗ ಫೋಟೊ ಒಂದಕ್ಕೆ 20 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಅವರಿಗೆ ಅದರಲ್ಲಿ 2-3 ರೂಪಾಯಿ ಸಿಗುತ್ತಿತ್ತು. ಅವರು ಮತ್ತು ಇನ್ನೂ ಕೆಲವರು ರಾತ್ರಿಯಲ್ಲಿ ಕೊಲಾಬಾ ಪಾದಚಾರಿ ಮಾರ್ಗಗಳ ಮೇಲೆ ಮಲಗಿ ಫೋಟೊ ತೆಗೆಸಿಕೊಳ್ಳಲು ಬರುವ ಗ್ರಾಹಕರಿಗಾಗಿ ಕಾಯುತ್ತಿದ್ದರು.
"ಆ ವಯಸ್ಸಿನಲ್ಲಿ ನೀವು ಹಣ ಗಳಿಸುವ ಸಲುವಾಗಿ ಉತ್ಸುಕರಾಗಿ ಎಲ್ಲೆಡೆ ನೋಡುತ್ತಿರುತ್ತೀರಿ" ಎಂದು ಗಂಗಾರಾಮ್ ನಗುತ್ತಾ ಹೇಳುತ್ತಾರೆ. "ಆರಂಭದಲ್ಲಿ, ನಾನು ತೆಗೆದ ಫೋಟೋಗಳು ಸ್ವಲ್ಪ ಅಸಮವಾಗಿರುತ್ತಿದ್ದವು, ಆದರೆ ದಿನ ಕಳೆದಂತೆ ನಿಮಗೆ ಕೆಲಸ ಕೈ ಹತ್ತುತ್ತದೆ."
ಆಗೆಲ್ಲ ಪ್ರತಿ ರೀಲ್ ಬೆಲೆಬಾಳುತ್ತಿತ್ತು - 36-ಫೋಟೋ ರೀಲಿಗೆ 35-40 ರೂಪಾಯಿಗಳಿದ್ದವು. “ನಾವು ಸುಖಾಸುಮ್ಮನೆ ಫೋಟೊ ಕ್ಲಿಕ್ ಮಾಡುವಂತಿರಲಿಲ್ಲ. ಪ್ರತಿಯೊಂದು ಫೋಟೋವನ್ನು ಎಚ್ಚರಿಕೆಯಿಂದ ಮತ್ತು ಯೋಚಿಸಿ ತೆಗೆದುಕೊಳ್ಳಬೇಕಾಗಿತ್ತು, ಇಂದಿನಂತೆ ನೀವು ಬಯಸಿದಷ್ಟು [ಡಿಜಿಟಲ್] ಫೋಟೋಗಳನ್ನು ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ” ಎಂದು ಗಂಗಾರಾಮ್ ಹೇಳುತ್ತಾರೆ. ಅವರ ಕ್ಯಾಮೆರಾಗಳಲ್ಲಿ ಬ್ಯಾಟರಿ ಫ್ಲಾಶ್ ಇಲ್ಲದ ಕಾರಣ, ಸೂರ್ಯಾಸ್ತದ ನಂತರ ಕೆಲಸ ಮಾಡಲು ಸಾಧ್ಯವಿರಲಿಲ್ಲ ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಹತ್ತಿರದ ಕೋಟೆ ಪ್ರದೇಶದ ಅಂಗಡಿಗಳು ಮತ್ತು ಸಣ್ಣ ಫೋಟೋ ಸ್ಟುಡಿಯೋಗಳಲ್ಲಿ ಫೋಟೋಗಳನ್ನು ಮುದ್ರಿಸಲು 1980ರ ದಶಕದಲ್ಲಿ ಒಂದು ದಿನ ಬೇಕಾಗುತ್ತಿತ್ತು - ಪ್ರತಿ ರೀಲ್ ಅಭಿವೃದ್ಧಿಪಡಿಸಲು 15 ರೂ ಪಾಯಿ ಶುಲ್ಕವಾದರೆ, ಪ್ರತಿ 4x5 ಇಂಚಿನ ಬಣ್ಣದ ಫೋಟೋವನ್ನು ಮುದ್ರಿಸಲು 1.50 ರೂ.
"ಆದರೆ ಈಗ ನಮ್ಮ ವೃತ್ತಿಯಲ್ಲಿಯೇ ಉಳಿಯುವ ಸಲುವಾಗಿ ಇವುಳನ್ನೆಲ್ಲ ನಮ್ಮೊಂದಿಗೆ ಹೊತ್ತು ತಿರುಗಾಡಬೇಕಿದೆ." ಎಂದು ಗಂಗಾರಾಮ್ ಹೇಳುತ್ತಾರೆ. ಛಾಯಾಗ್ರಾಹಕರೊಬ್ಬರು ಸುಮಾರು 6-7 ಕಿಲೋಗಳಷ್ಟು ತೂಗುವ ಕ್ಯಾಮೆರಾ, ಪ್ರಿಂಟರ್, ಆಲ್ಬಂಗಳು, ಕಾಗದ (50ರ ಪ್ಯಾಕೆಟ್ ಬೆಲೆ 110 ರೂ., ಜೊತೆಗೆ ಕಾರ್ಟ್ರಿಡ್ಜ್ ವೆಚ್ಚಗಳಿವೆ) ಇವುಗಳನ್ನು ಜೊತೆಯಲ್ಲೇ ಇಟ್ಟಕೊಂಡು ತಿರುಗಬೇಕು. "ಒಂದು ಫೋಟೊ ತೆಗೆಸಿಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಾ ದಿನವಿಡೀ ಇಲ್ಲಿ ನಿಲ್ಲುತ್ತೇವೆ. ನನ್ನ ಬೆನ್ನು ಕೆಟ್ಟದಾಗಿ ನೋಯುತ್ತದೆ." ಎಂದು ಗಂಗರಾಮ್ ಹೇಳುತ್ತಾರೆ. ಅವರು ಪ್ರಸ್ತುತ ನಾರಿಮನ್ ಪಾಯಿಂಟ್ ಕೊಳೆಗೇರಿ ಕಾಲೋನಿ ಪ್ರದೇಶದಲ್ಲಿ ಅವರ ಪತ್ನಿ ಕುಸುಮ್, ಗೃಹಿಣಿ ಮತ್ತು ಅವರ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.
ಗೇಟ್‌ವೇಯಲ್ಲಿ ಅವರ ವೃತ್ತಿ ಬದುಕಿನ ಆರಂಭಿಕ ವರ್ಷಗಳಲ್ಲಿ, ಕುಟುಂಬಗಳು ಕೆಲವೊಮ್ಮೆ ಮುಂಬೈ ದರ್ಶನ ಪ್ರವಾಸಗಳಲ್ಲಿ ಇತರ ಸ್ಥಳಗಳಲ್ಲಿ ಛಾಯಾಚಿತ್ರ ತೆಗೆಯಲು ಛಾಯಾಗ್ರಾಹಕರನ್ನು ಕರೆದೊಯ್ಯುತ್ತಿದ್ದರು. ನಂತರ ಫೋಟೋಗಳನ್ನು ಗ್ರಾಹಕರಿಗೆ ಪೋಸ್ಟ್ ಅಥವಾ ಕೊರಿಯರ್ ಮಾಡಲಾಗುತ್ತಿತ್ತು. ಚಿತ್ರಗಳು ಮಸುಕಾಗಿರುವಂತೆ ಕಂಡುಬಂದರೆ, ಛಾಯಾಗ್ರಾಹಕರು ಕ್ಷಮೆಯಾಚನೆಯ ಟಿಪ್ಪಣಿಯೊಂದಿಗೆ ಲಕೋಟೆಯಲ್ಲಿ ಹಣವನ್ನು ವಾಪಸ್ ಕಳುಹಿಸುತ್ತಿದ್ದರು.
"ಇವೆಲ್ಲಾ ಸಂಪೂರ್ಣ ನಂಬಿಕೆಯನ್ನು ಆಧರಿಸಿತ್ತು, ಮತ್ತು ಅದು ಒಳ್ಳೆಯಕಾಲವಾಗಿತ್ತು. ಜನರು ಎಲ್ಲಾ ರಾಜ್ಯಗಳಿಂದ ಬರುತ್ತಿದ್ದರು ಮತ್ತು ಅವರು ಆ ಫೋಟೋಗಳಿಗೆ ಬೆಲೆ ನೀಡುತ್ತಿದ್ದರು. ಅವರಿಗೆ, ಈ ಫೋಟೊಗಳೆಂದರೆ ತಮ್ಮ ಕುಟುಂಬ ವರ್ಗಕ್ಕೆ ತೋರಿಸಲು ಕೊಂಡು ಹೋಗುವ ನೆನಪುಗಳು. ಅವರು ನಮ್ಮನ್ನು ಮತ್ತು ನಮ್ಮ ಛಾಯಾಗ್ರಹಣವನ್ನು ನಂಬಿದ್ದರು. ನಮ್ಮ ವಿಶೇಷತೆಯೆಂದರೆ ನಮ್ಮಿಂದ ಫೋಟೊ ಕ್ಲಿಕ್ ಮಾಡಿಸಿದರೆ ನೀವು ಗೇಟ್‌ವೇ ಅಥವಾ ತಾಜ್ ಹೋಟೆಲ್‌ನ ಮೇಲ್ಭಾಗವನ್ನು ಸ್ಪರ್ಶಿಸುತ್ತಿರುವಂತೆ ಕಾಣುತ್ತದೆ,” ಎಂದು ಗಂಗಾರಾಮ್ ಹೇಳುತ್ತಾರೆ.
ಆದರೆ ಅವರ ಕೆಲಸ ಅತ್ಯುತ್ತಮವಾಗಿ ನಡೆಯುತ್ತಿದ್ದ ವರ್ಷಗಳಲ್ಲಿಯೂ ಸಮಸ್ಯೆಗಳಿದ್ದವು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಕೆಲವು ಸಮಯಗಳಲ್ಲಿ ಅವರ ವಿರುದ್ಧ ದೂರು ನೀಡಿದರೆ, ಅಥವಾ ಜನರು ಮೋಸ ಹೋಗಿದ್ದಾಗಿ ದೂರು ನೀಡುತ್ತಾರೆ ಮತ್ತು ಫೋಟೋಗಳನ್ನು ಸ್ವೀಕರಿಸಿಲ್ಲ ಎಂದು ಕೋಪದಿಂದ ಗೇಟ್‌ವೇಗೆ ಹಿಂತಿರುಗುತ್ತಾರೆ. ಕೆಲವೊಮ್ಮೆ ಈ ವಿಚಾರವಾಗಿ ಛಾಯಾಗ್ರಾಹಕರನ್ನು ಕೊಲಾಬಾ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಾಗುತ್ತಿತ್ತು. "ಕ್ರಮೇಣ, ನಾವು ಪುರಾವೆಯಾಗಿ ಹತ್ತಿರದ ಅಂಚೆ ಕಚೇರಿಯಿಂದ ಅಂಚೆಚೀಟಿಗಳಿರುವ ರಿಜಿಸ್ಟರ್ ಇಟ್ಟುಕೊಳ್ಳಲು ಪ್ರಾರಂಭಿಸಿದೆವು" ಎಂದು ಗಂಗಾರಾಮ್ ಹೇಳುತ್ತಾರೆ.
ಮತ್ತು ಜನರ ಬಳಿ ಪ್ರಿಂಟ್‌ಗಾಗಿ ಹಣವಿಲ್ಲದಿರುವ ಸಮಯವೂ ಇರುತ್ತಿತ್ತು. ಅಂತಹ ಸಮಯದಲ್ಲಿ ಛಾಯಾಗ್ರಾಹಕರು ಹಣವನ್ನು ಅಂಚೆ ಮೂಲಕ ಪಡೆದುಕೊಳ್ಳಲು ಕಾಯಬೇಕಾಗುತ್ತಿತ್ತು.
ನವೆಂಬರ್ 26, 2008ರ ಭಯೋತ್ಪಾದಕ ದಾಳಿಯ ನಂತರ, ಕೆಲವು ದಿನಗಳವರೆಗೆ ಕೆಲಸ ನಿಂತುಹೋಗಿತ್ತು, ಆದರೆ ನಿಧಾನವಾಗಿ ಮತ್ತೆ ಬೇಡಿಕೆ ಹೆಚ್ಚಾಗಿತ್ತು ಎಂದು ಗಂಗಾರಾಮ್ ನೆನಪಿಸಿಕೊಳ್ಳುತ್ತಾರೆ. "ಜನರು ತಾಜ್ ಹೋಟೆಲ್ [ಗೇಟ್ ವೇ ಆಫ್ ಇಂಡಿಯಾದ ಎದುರು] ಮತ್ತು ಒಬೆರಾಯ್ ಹೋಟೆಲ್ [ದಾಳಿಯ ಎರಡು ತಾಣಗಳು] ಎದುರು ಫೋಟೊ ತೆಗೆಸಿಕೊಳ್ಳಲು ಬರುತ್ತಿದ್ದರು. ಆ ಕಟ್ಟಡಗಳ ಬಗ್ಗೆ ಹೇಳಲು ಒಂದು ಕಥೆ ಇದ್ದಿದ್ದು ಇದಕ್ಕೆ ಕಾರಣ,” ಎಂದು ಅವರು ಹೇಳುತ್ತಾರೆ.
ಈ ಕಥೆಗಳಲ್ಲಿ ಜನರನ್ನು ಒಳಗೊಳ್ಳುವಂತೆ ಮಾಡಲು ವರ್ಷಗಟ್ಟಲೆಯಿಂದ ಪ್ರಯತ್ನಿಸುತ್ತಿರುವವರು ಬೈಜನಾಥ್ ಚೌಧರಿ, ಗೇಟ್‌ವೇಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ನಾರಿಮನ್ ಪಾಯಿಂಟ್‌ನಲ್ಲಿರುವ ಒಬೆರಾಯ್ (ಟ್ರೈಡೆಂಟ್) ಹೋಟೆಲ್‌ನ ಹೊರಗಿನ ಪಾದಚಾರಿ ದಾರಿಗಳಲ್ಲಿ ಕೆಲಸ ಮಾಡುತ್ತಾರೆ. ಸುಮಾರು 57 ವರ್ಷದ, ಬೈಜನಾಥ್ ನಾಲ್ಕು ದಶಕಗಳಿಂದ ಛಾಯಾಗ್ರಾಹಕರಾಗಿದ್ದಾರೆ, ಅವರ ಅನೇಕ ಸಹೋದ್ಯೋಗಿಗಳು ಇತರ ಜೀವನೋಪಾಯಗಳನ್ನುಅವಲಂಬಿಸಿದ್ದರೆ ಇವರು ಇದನ್ನೇ ಮಾಡುತ್ತಿದ್ದಾರೆ.
ಅವರು ಬಿಹಾರದ ಮಧುಬನಿ ಜಿಲ್ಲೆಯ ಡುಮ್ರಿ ಗ್ರಾಮದಿಂದ 15ನೇ ವಯಸ್ಸಿನಲ್ಲಿ ಕೊಲಾಬಾದ ಪಾದಚಾರಿ ಮಾರ್ಗದಲ್ಲಿ ಬೈನಾಕ್ಯುಲರ್‌ಗಳನ್ನು ಮಾರಾಟ ಮಾಡುತ್ತಿದ್ದ ಚಿಕ್ಕಪ್ಪನ ಜೊತೆಯಲ್ಲಿ ಮುಂಬೈಗೆ ಬಂದರು. ಅವರ ಪೋಷಕರು, ದಿನಗೂಲಿ ಕೃಷಿ ಕಾರ್ಮಿಕರು ಮತ್ತೆ ಹಳ್ಳಿಯಲ್ಲಿ ವಾಸಿಸುತ್ತಿದ್ದರು.
ಗಂಗಾರಾಮ್ ಅವರ ದೂರದ ಸಂಬಂಧಿಯಾದ ಬೈಜನಾಥ್ ಅವರು ಆರಂಭದ ದಿನಗಳಲ್ಲಿ ಪೋಲರಾಯ್ಡ್ ಅನ್ನು ಸಹ ಬಳಸಿದ್ದರು, ನಂತರ ಪಾಯಿಂಟ್-ಅಂಡ್-ಶೂಟ್ ಕ್ಯಾಮೆರಾಗೆ ಉನ್ನತಿ ಪಡೆದರು. ಅವರು ಮತ್ತು ಆ ಸಮಯದಲ್ಲಿ ನಾರಿಮನ್ ಪಾಯಿಂಟ್‌ನಲ್ಲಿರುವ ಇತರ ಕೆಲವು ಛಾಯಾಗ್ರಾಹಕರು ತಾಜ್ ಹೋಟೆಲ್ ಬಳಿ ಅಂಗಡಿಯವರ ಬಳಿ ರಾತ್ರಿ ಸುರಕ್ಷತೆಗಾಗಿ ತಮ್ಮ ಕ್ಯಾಮೆರಾಗಳನ್ನು ಇಡುತ್ತಿದ್ದರು, ಅವರು ಹತ್ತಿರದ ಫುಟ್‌ಪಾತ್‌ಗಳಲ್ಲಿ ಮಲಗಿ ರಾತ್ರಿ ಕಳೆಯುತ್ತಿದ್ದರು.
ಆರಂಭಿಕ ವರ್ಷಗಳಲ್ಲಿ ಬೈಜನಾಥ್ ಅವರಿಗೆ ದಿನಕ್ಕೆ ಸುಮಾರು 6ರಿಂದ 8 ಗ್ರಾಹಕರು ದೊರೆಯುತ್ತಿದ್ದರು. ಇದರಿಂದ ಅವರು ದಿನಕ್ಕೆ 100-200 ರೂ. ಸಂಪಾದಿಸುತ್ತಿದ್ದರು. ಕಾಲಾನಂತರದಲ್ಲಿ 300-900 ರೂಪಾಯಿಗಳ ತನಕ ದುಡಿಯುತ್ತಿದ್ದರು. ಆದರೆ ಸ್ಮಾರ್ಟ್‌ಫೋನ್ ಆಗಮನದೊಂದಿಗೆ ಸಂಪಾದನೆ ದಿನಕ್ಕೆ 100-300 ರೂಗಳಿಗೆ ಇಳಿಯಿತು. ಲಾಕ್‌ಡೌನ್‌ಗಳ ನಂತರ, ಅದು ಕೇವಲ 100 ರೂ. ಅಥವಾ ಒಮ್ಮೊಮ್ಮೆ 30 ರೂ. ಇನ್ನೂ ಕೆಲವು ದಿನ ಖಾಲಿಕೈಗಳಲ್ಲಿ ಮರಳುವುದೂ ಇದೆ.
ಸುಮಾರು 2009ರವರೆಗೆ, ಅವರು ಉತ್ತರ ಮುಂಬೈನ ಸ್ಯಾಂಟಾಕ್ರೂಜ್ ಪ್ರದೇಶದ ಪಬ್‌ಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು, ಆಗ ಪ್ರತಿ ಫೋಟೋಗೆ 50 ರೂಪಾಯಿಗಳ ಶುಲ್ಕ ವಿಧಿಸುತ್ತಿದ್ದರು. “ಬೆಳಿಗ್ಗೆಯಿಂದ ರಾತ್ರಿ 9 ಅಥವಾ 10ರವರೆಗೆ ನಾನು ಇಲ್ಲಿ [ನಾರಿಮನ್ ಪಾಯಿಂಟ್] ಓಡಾಡಿ ಊಟದ ನಂತರ ಕ್ಲಬ್‌ಗೆ ಹೋಗುತ್ತಿದ್ದೆ”ಎಂದು ಬೈಜನಾಥ್ ಹೇಳುತ್ತಾರೆ, ಅವರ ಹಿರಿಯ ಮಗ, 31 ವರ್ಷದ ವಿಜಯ್, ಗೇಟ್‌ವೇ ಆಫ್ ಇಂಡಿಯಾದಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಾರೆ.
ಬೈಜನಾಥ್ ಮತ್ತು ಇತರ ಛಾಯಾಗ್ರಾಹಕರು ಕಾರ್ಯನಿರ್ವಹಿಸಲು ಅನುಮತಿಯ ಅಗತ್ಯವಿಲ್ಲ ಎಂದು ಹೇಳುತ್ತಾರೆ, ಆದರೆ 2014ರಿಂದ ಮುಂಬೈ ಟೋರ್ಟ್ ಟ್ರಸ್ಟ್ ಮತ್ತು ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸೇರಿದಂತೆ ಹಲವಾರು ಘಟಕಗಳು ಗುರುತಿನ ಚೀಟಿಗಳನ್ನು ನೀಡಿವೆ. ಈ ವ್ಯವಸ್ಥೆಯು ವಸ್ತ್ರಸಂಹಿತೆ ಮತ್ತು ನೀತಿ ಸಂಹಿತೆಯನ್ನು ಕಡ್ಡಾಯಗೊಳಿಸುತ್ತದೆ, ಇದರಲ್ಲಿ ಸ್ಮಾರಕದಲ್ಲಿ ವಾರಸುದಾರರಿಲ್ಲದ ಚೀಲಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಮಹಿಳೆಯರಿಗೆ ಕಿರುಕುಳದ ನಿದರ್ಶನಗಳಲ್ಲಿ ಮಧ್ಯಪ್ರವೇಶಿಸುವುದು ಮತ್ತು ವರದಿ ಮಾಡುವುದು. (ಈ ವರದಿಗಾರರಿಗೆ ಈ ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ.)
ಇದಕ್ಕೂ ಮೊದಲು, ಕೆಲವೊಮ್ಮೆ, ಪುರಸಭೆ ನಿಗಮ ಅಥವಾ ಪೊಲೀಸರು ದಂಡ ವಿಧಿಸುತ್ತಿದ್ದರು ಮತ್ತು ಕೆಲಸ ಮಾಡುವುದನ್ನು ನಿಲ್ಲಿಸುತ್ತಿದ್ದರು ಎಂದು ಅವರು ಹೇಳುತ್ತಾರೆ. ತಮ್ಮ ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸಿಕೊಳ್ಳಲು, ಬೈಜನಾಥ್ ಮತ್ತು ಗಂಗಾರಾಮ್ ಅವರು 1990ರ ದಶಕದ ಆರಂಭದಲ್ಲಿ ಛಾಯಾಗ್ರಾಹಕರ ಕಲ್ಯಾಣ ಸಂಘವನ್ನು ರಚಿಸಿದರು ಎಂದು ನೆನಪಿಸಿಕೊಳ್ಳುತ್ತಾರೆ. "ನಾವು ನಮ್ಮ ಕೆಲಸದ ಬಗ್ಗೆ ಸ್ವಲ್ಪ ಮಾನ್ಯತೆ ಬಯಸಿದ್ದೆವು ಮತ್ತು ನಮ್ಮ ಹಕ್ಕುಗಳಿಗಾಗಿ ಹೋರಾಡಿದ್ದೆವು" ಎಂದು ಬೈಜನಾಥ್ ಹೇಳುತ್ತಾರೆ. 2001ರಲ್ಲಿ, ಸುಮಾರು 60-70 ಛಾಯಾಗ್ರಾಹಕರು ಆಜಾದ್ ಮೈದಾನದಲ್ಲಿ, ಇತರ ಬೇಡಿಕೆಗಳ ನಡುವೆ, ಅನಗತ್ಯ ನಿರ್ಬಂಧಗಳಿಲ್ಲದೆ ಮತ್ತು ವಿಸ್ತೃತ ಸಮಯದವರೆಗೆ ಕೆಲಸ ಮಾಡಲು ಅನುಮತಿ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದ್ದರು. 2000ನೇ ಇಸವಿಯಲ್ಲಿ, ಅವರಲ್ಲಿ ಕೆಲವರು ಗೇಟ್‌ವೇ ಆಫ್ ಇಂಡಿಯಾ ಫೋಟೋಗ್ರಾಫರ್ಸ್ ಯೂನಿಯನ್ ರಚಿಸಿದರು ಮತ್ತು ಬೈಜನಾಥ್ ಅವರು ಸ್ಥಳೀಯ ಶಾಸಕರನ್ನು ತಮ್ಮ ಬೇಡಿಕೆಗಳೊಂದಿಗೆ ಭೇಟಿಯಾಗಿದ್ದರು. ಈ ಪ್ರಯತ್ನಗಳು ಒಂದಿಷು ನಿರಾಳತೆಯನ್ನು ನೀಡಿದ್ದವು, ಮತ್ತು ಪುರಸಭೆ ಅಥವಾ ಸ್ಥಳೀಯ ಪೊಲೀಸರ ಹಸ್ತಕ್ಷೇಪವಿಲ್ಲದೆ ಕೆಲಸ ಮಾಡಲು ಅವಕಾಶ ದೊರೆಯಿತು.
ಬೈಜನಾಥ್ ತನ್ನ ಛಾಯಾಗ್ರಹಣವು ಮೌಲ್ಯಯುತವಾಗಿದ್ದ ಆರಂಭಿಕ ವರ್ಷಗಳನ್ನು ನೆನಪಿಸಿಕೊಳ್ಳುತ್ತಾರೆ. "ಇಂದು ಎಲ್ಲರೂ ಛಾಯಾಗ್ರಹಣ ಮಾಡುವುದನ್ನು ನೋಡುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ. "ಆದರೆ ಪ್ರತಿ ದಿನವೂ ಫೋಟೋಗಳನ್ನು ಕ್ಲಿಕ್ ಮಾಡುವ ಮೂಲಕ ಕೌಶಲ್ಯಗಳನ್ನು ಸುಧಾರಿಸಿಕೊಂಡಿದ್ದೇನೆ. ನೀವು ಯುವಕರು ಒಂದು ಫೋಟೋವನ್ನು ಸರಿಯಾಗಿ ತೆಗೆಯಲು ಹಲವು ಫೋಟೋಗಳನ್ನು ತೆಗೆಯುತ್ತೀರಿ ನಂತರ ಅದನ್ನು ಎಡಿಟ್ ಮಾಡಿ ಸುಂದರಗೊಳಿಸುತ್ತೀರಿ. ಆದರೆ ನಾವು ಒಂದೇ ಕ್ಲಿಕ್ ಮೂಲಕ ಸುಂದರ ಫೋಟೊವನ್ನು ತೆಗೆಯುತ್ತೇವೆ,” ಎಂದು ಫುಟ್‌ಪಾತ್‌ನಿಂದ ಏಳುತ್ತಾ ಹೇಳಿದರು. ಅವರು ಅಲ್ಲಿಯೇ ಹೋಗುತ್ತಿದ್ದ ಗುಂಪನ್ನು ಮನವೊಲಿಸಲು ಪ್ರಯತ್ನಿಸಿದರು ಆದರೆ ಅವರು ಆಸಕ್ತಿ ತೋರಿಸಲಿಲ್ಲ. ಅವರಲ್ಲಿ ಒಬ್ಬರು ತನ್ನ ಜೇಬಿನಿಂದ ಫೋನ್ ಹೊರ ತೆಗೆದು ಸೆಲ್ಫಿ ತೆಗೆದುಕೊಳ್ಳಲು ಪ್ರಾರಂಭಿಸಿದರು.
ಗೇಟ್ ವೇ ಆಫ್ ಇಂಡಿಯಾದಲ್ಲಿ, ಸುನಿಲ್ ಮತ್ತು ಇತರ ಕೆಲವು ಛಾಯಾಗ್ರಾಹಕರು ಜೂನ್ ಮಧ್ಯದಿಂದ ಮತ್ತೆ ತಮ್ಮ 'ಕಚೇರಿಗೆ' ಹೋಗಲು ಪ್ರಾರಂಭಿಸಿದ್ದಾರೆ - ಅವರಿಗೆ ಇನ್ನೂ ಸ್ಮಾರಕ ಸಂಕೀರ್ಣದೊಳಗೆ ಹೋಗಲು ಅನುಮತಿ ದೊರೆತಿಲ್ಲ, ಹೀಗಾಗಿ ಅವರು ಹೊರಗೆ ನಿಂತು, ತಾಜ್ ಹೋಟೆಲ್ ಪ್ರದೇಶದ ಸುತ್ತಲೂ, ಗ್ರಾಹಕರನ್ನು ಹುಡುಕುತ್ತಾರೆ. "ಮಳೆಯಲ್ಲಿ ನೀವು ನಮ್ಮನ್ನು ನೋಡಬೇಕು" ಎಂದು ಸುನಿಲ್ ಹೇಳುತ್ತಾರೆ. “ನಾವು ನಮ್ಮ ಕ್ಯಾಮೆರಾ, ಪ್ರಿಂಟರ್, [ಕಾಗದ] ಹಾಳೆಗಳನ್ನು ರಕ್ಷಿಸಬೇಕು. ಈ ಎಲ್ಲದರ ಮೇಲೆ ನಾವು ಛತ್ರಿ ಹಿಡಿದು ಕಾಪಾಡುತ್ತೇವೆ. ಸರಿಯಾದ ಕ್ಲಿಕ್ ಮಾಡಲು ಪ್ರಯತ್ನಿಸುವಾಗ ನಾವು ಎಲ್ಲವನ್ನೂ ಹಿಡಿದಿಟ್ಟುಕೊಳ್ಳಬೇಕು."
ಆದರೆ ಅವರ ಗಳಿಕೆಯ ಸಮತೋಲನವು ಹೆಚ್ಚು ಹೆಚ್ಚು ಅಪಾಯದಲ್ಲಿದೆ - ಸ್ಮಾರ್ಟ್‌ಫೋನ್-ಸೆಲ್ಫಿ ಅಲೆ ಮತ್ತು ಲಾಕ್‌ಡೌನ್‌ಗಳ ನಡುವೆ 'ಏಕ್ ಮಿನಿಟ್ ಮೇ ಫುಲ್ ಫ್ಯಾಮಿಲಿ ಫೋಟೋ' ಎಂಬ ಛಾಯಾಗ್ರಾಹಕರ ಮನವಿಗೆ ಸ್ಪಂದಿಸುವ ಕೆಲವರಾದರೂ ಸಿಗಬೇಕಿದೆ.
ಸುನಿಲ್ ತನ್ನ ಬೆನ್ನು ಚೀಲದಲ್ಲಿ ಮಕ್ಕಳ ಶಾಲಾ ಶುಲ್ಕ ಪಾವತಿಸಿದ ರಶೀದಿ ಕಿರುಪುಸ್ತಕವನ್ನು ಹೊಂದಿದ್ದರು (ಮೂವರೂ ಕೊಲಾಬಾದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ). "ನಾನು [ಶುಲ್ಕವನ್ನು ಪಾವತಿಸಲು] ಸ್ವಲ್ಪ ಸಮಯವನ್ನು ನೀಡುವಂತೆ ಶಾಲೆಯನ್ನು ಕೇಳುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ. ತನ್ನ ಮಕ್ಕಳು ತಮ್ಮ ಸ್ಮಾರ್ಟ್‌ಫೋನ್ ಬಳಸಿ ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಲು ಸುನಿಲ್ ಕಳೆದ ವರ್ಷ ಸ್ವತಃ ಒಂದು ಸಣ್ಣ ಫೋನ್ ಖರೀದಿಸಿದರು. "ನಮ್ಮ ಜೀವನವು ಮುಗಿದಿದೆ ಆದರೆ ಕನಿಷ್ಠ ಅವರು ನನ್ನಂತೆ ಸೂರ್ಯನ ಬಿಸಿಲಿನಲ್ಲಿ ಬೇಯಬಾರದು. ಅವರು ಎಸಿ ಕಚೇರಿಯಲ್ಲಿ ಕೆಲಸ ಮಾಡಬೇಕು,” ಎಂದು ಅವರು ಹೇಳುತ್ತಾರೆ. "ಪ್ರತಿದಿನ, ಯಾರದ್ದಾದರೂ ನೆನಪನ್ನು ಸೃಷ್ಟಿಸುವ ಅವಕಾಶ ನನಗೆ ಸಿಗಲೆಂದು ನಾನು ಆಶಿಸುತ್ತೇನೆ ಆ ಮೂಲಕ ನನ್ನ ಮಕ್ಕಳಿಗೆ ಉತ್ತಮ ಜೀವನವನ್ನು ನೀಡುತ್ತೇನೆ."
ಅನುವಾದ: ಶಂಕರ ಎನ್. ಕೆಂಚನೂರು