ನಾನು ಹೊರಟಿದ್ದ ಸ್ಥಳಕ್ಕೆ ಬಂದು ತಲುಪಿದ್ದೇನೆಂದು ನನ್ನ ಗೂಗಲ್ ಮ್ಯಾಪ್ ಹೇಳುತ್ತಿತ್ತು. ಆದರೆ ಆದರೆ ನನಗೆ ಪರಿಚಿತವಾದ ಆ ಸ್ಥಳ ಅಲ್ಲಲ್ಲಿ ಒಂದಿಷ್ಟು ಬದಲಾದಂತೆ ಕಾಣುತ್ತಿತ್ತು. ನಾನು ಕಳೆದ ಬಾರಿ ಉಪ್ಪಡಕ್ಕೆ ಬಂದಾಗ ಗುರುತಿಗೆಂದು ನೆನಪಿಟ್ಟುಕೊಂಡಿದ್ದ ಅಲ್ಲಿದ್ದ ಹಳೆಯ ಮನೆ ಕಾಣುತ್ತಿರಲಿಲ್ಲ “ಓಹ್, ಆ ಮನೆನಾ? ಅದು ಈಗ ಸಮುದ್ರದಲ್ಲಿ ಸೇರಿಕೊಂಡಿದೆ.” ಎಂದು ಬಂಗಾಳಕೊಲ್ಲಿಯ ಅಲೆಗಳನ್ನು ತೋರಿಸುತ್ತಾ ಟಿ. ಮಾರಮ್ಮ ಹೇಳಿದರು.
2020ರ ಮಾರ್ಚ್ ತಿಂಗಳಿನಲ್ಲಿ ಮಾರಮ್ಮ ಮತ್ತು ಅವರ ಕುಟುಂಬದ ಫೋಟೊ ತೆಗೆಯುವಾಗ ಆ ಮನೆಯು ಬೆರಗುಗೊಳಿಸುವ ಆದರೆ ಆದರೆ ಅಷ್ಟೇ ಯಾತನೆ ಹುಟ್ಟಿಸುವ ಹಿನ್ನೆಲೆಯನ್ನು ಒದಗಿಸಿತ್ತು. ಹೀಗಾಗಿ ಆ ರಚನೆ ನನಗೆ ಸ್ಪಷ್ಟವಾಗಿ ನೆನಪಿತ್ತು.ಕಡಲ ಕರೆಯಲ್ಲಿ ಅಪಾಯಕಾರಿ ರೀತಿಯಲ್ಲಿ ನೆಲೆಯಾಗಿದ್ದ ಇದು ಈ ಶತಮಾನದ ಆರಂಭಿಕ ವರ್ಷಗಳವರೆಗೂ ಮಾರಮ್ಮನ ಅವಿಭಕ್ತ ಕುಟುಂಬ ನೆಲೆಗೊಂಡಿದ್ದ ದೊಡ್ಡ ಮನೆಯಾಗಿತ್ತು.
"ಅದು ಎಂಟು ಕೋಣೆಗಳು ಮತ್ತು ಮೂರು ಶೆಡ್‌ಗಳನ್ನು (ಜಾನುವಾರುಗಳಿಗಾಗಿ) ಹೊಂದಿರುವ ಕಟ್ಟಡವಾಗಿತ್ತು. ಸುಮಾರು ನೂರು ಜನರು ಇಲ್ಲಿ ವಾಸಿಸುತ್ತಿದ್ದರು" ಎಂದು 50ರ ಪ್ರಾಯದ ಸಣ್ಣ ಮಟ್ಟದ ಸ್ಥಳೀಯ ರಾಜಕಾರಣಿ ಮಾರಮ್ಮ ಹೇಳುತ್ತಾರೆ, ಅವರು ಒಂದು ಕಾಲದಲ್ಲಿ ಮೀನು ವ್ಯಾಪಾರವನ್ನು ನಡೆಸುತ್ತಿದ್ದರು. ೨೦೦೪ರ ಸುನಾಮಿಗೆ ಸ್ವಲ್ಪ ಮೊದಲು ಉಪ್ಪಡಕ್ಕೆ ಅಪ್ಪಳಿಸಿದ ಚಂಡಮಾರುತವು ಕಟ್ಟಡದ ದೊಡ್ಡ ಭಾಗವೊಂದನ್ನು ಕಸಿದುಕೊಂಡಿತು, ಇದು ಕೂಡು ಕುಟುಂಬವನ್ನು ವಿವಿಧ ಮನೆಗಳಿಗೆ ಸ್ಥಳಾಂತರಗೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿತು. ಮಾರಮ್ಮ ಹತ್ತಿರದ ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಇನ್ನೂ ಕೆಲವು ವರ್ಷಗಳವರೆಗೆ ಹಳೆಯ ರಚನೆಯನ್ನು ಬಳಸುವುದನ್ನು ಮುಂದುವರಿಸಿದ್ದರು.
ಆದರೆ ಈ ವಿಷಯದಲ್ಲಿ ಮಾರಮ್ಮ ಮತ್ತು ಅವರ ಕುಟುಂಬವಷ್ಟೇ ಅಲ್ಲ; ಉಪ್ಪಡದ ಬಹುತೇಕ ಎಲ್ಲಾ ಕುಟುಂಬಗಳೂ ಒಮ್ಮೆಯಲ್ಲ ಒಮ್ಮೆ ಇಲ್ಲಿ ಸ್ಥಳಾಂತರ ಎದುರಿಸಿದವರೇ ಎನ್ನುವಂತೆ ಕಾಣುತ್ತದೆ. ಮನೆಯನ್ನು ಯಾವಾಗ ತೊರೆಯಬೇಕೆನ್ನುವುದು ಅವರ ಅಲ್ಲಿನ ಬದುಕಿನ ಅನುಭವವೇ ಕಲಿಸುತ್ತದೆ. ಸ್ಥಳೀಯ ಸಮುದಾಯಗಳಿಗೆ ಅಲ್ಲಿನ ಕಡಲು ಅಷ್ಟರಮಟ್ಟಿಗೆ ಅದನ್ನು ಮಾಡಿಕೊಳ್ಳಲು ಕಲಿಸಿದೆ. “ಅಲೆಗಳ ಉಬ್ಬರಗೊಂಡು ಮುಂದೆ ಬಂದಂತೆಲ್ಲ ಮನೆ ಸಮುದ್ರದ ಪಾಲಾಗಲಿದೆಯೆಂದು ನಾವು ಗ್ರಹಿಸಬಹುದು. ಆಗ ನಾವು ನಮ್ಮ ಸಾಮಾನು-ಸರಂಜಾಮುಗಳನ್ನು ಒಂದು ಬದಿಗೆ ಪೇರಿಸಿಡುತ್ತೇವೆ [ಮತ್ತು ಬಾಡಿಗೆಗೆ ತಾತ್ಕಾಲಿಕ ಮನೆಯನ್ನು ಹುಡುಕಲು ಪ್ರಾರಂಭಿಸುತ್ತೇವೆ]. ಹಳೆಯ ಮನೆ ಸಾಮಾನ್ಯವಾಗಿ ಒಂದು ತಿಂಗಳೊಳಗೆ [ಸಮುದ್ರದೊಳಗೆ] ಹೋಗುತ್ತದೆ" ಎಂದು ಎಂದು ಓ. ಶಿವ ವಿವರಿಸುತ್ತಾರೆ. 14ನೇ ವಯಸ್ಸಿನಲ್ಲಿ, ಅವರು ಸಮುದ್ರದಿಂದ ತಪ್ಪಿಸಿಕೊಳ್ಳಲು ಒಂದು ಮನೆಯನ್ನು ಬಿಟ್ಟಿದ್ದರು.















