ಅಂದು ಆ ರಕ್ತಸಿಕ್ತ ಸ್ಟ್ರೆಚರ್ ನೋಡಿದ ಶ್ರೀಕೃಷ್ಣ ಬಾಜಪೇಯಿ ಗಾಬರಿಯಾಗಿದ್ದರು. “ಹೆರಿಗೆ ಸುಲಭವಾಗಿ ಆಗುವುದಿಲ್ಲವೆಂದು ನಮಗೆ ಮೊದಲೇ ತಿಳಿಸಲಾಗಿತ್ತು,” ಎಂದು ನೆನಪಿಸಿಕೊಳ್ಳುತ್ತಾರೆ. 70 ವರ್ಷ ಪ್ರಾಯದ ಹಿರಿಯ ರೈತನಾಗಿರುವ ಅವರು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿಯವರು. ಆ ದಿನ ಫೆಬ್ರವರಿ ತಿಂಗಳ ಮೈಕೊರೆಯುವ ಚಳಿಯ ಮಧ್ಯಾಹ್ನ ಮನೆಯ ಹೊರಗೆ ಬೆಂಕಿಯೆದುರು ಕುಳಿತು ಮೈ ಬೆಚ್ಚಗಾಗಿಸಿಕೊಳ್ಳುತ್ತಿದ್ದರು. “ನಮ್ಮೂರಿನ ಆಶಾ ಕಾರ್ಯಕರ್ತೆ ನನ್ನ ಸೊಸೆಯ ಹೆರಿಗೆಯನ್ನು ʼಅತ್ಯಂತ ಕ್ಲಿಷ್ಟʼ ಹೆರಿಗೆಯೆಂದು ಮಾರ್ಕ್ ಮಾಡಿದ್ದರು.”
ಇದು ಸೆಪ್ಟೆಂಬರ್ 2019ರಲ್ಲಿ ನಡೆದಿದ್ದಾದರೂ, ಶ್ರೀಕೃಷ್ಣ ಅದನ್ನು ನಿನ್ನೆ ಮೊನ್ನೆ ನಡೆದಿರುವಂತೆ ನೆನಪಿಟ್ಟುಕೊಂಡಿದ್ದಾರೆ. "[ಪ್ರವಾಹ] ನೀರು ಆಗತಾನೇ ಕಡಿಮೆಯಾಗಿತ್ತು, ಆದರೆ ಅದು ರಸ್ತೆಗಳನ್ನು ಹಾನಿಗೊಳಿಸಿತ್ತು, ಹೀಗಾಗಿ ಆಂಬ್ಯುಲೆನ್ಸ್ ನಮ್ಮ ಮನೆ ಬಾಗಿಲಿಗೆ ಬರಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳುತ್ತಾರೆ. ಶ್ರೀಕೃಷ್ಣ ಅವರ ಕುಗ್ರಾಮ ತಾಂಡಾ ಖುರ್ದ್, ಲಾಹರ್ಪುರ್ ಬ್ಲಾಕಿನಲ್ಲಿದೆ, ಇದು ಶಾರದಾ ಮತ್ತು ಘಾಘ್ರಾ ನದಿಗಳಿಗೆ ಹತ್ತಿರದಲ್ಲಿದೆ. ಇಲ್ಲಿನ ಗ್ರಾಮಗಳು ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತವೆ, ಇದರಿಂದಾಗಿ ಇಲ್ಲಿ ತುರ್ತು ಸಂದರ್ಭಗಳಲ್ಲಿ ಸಾರಿಗೆ ವ್ಯವಸ್ಥೆ ಮಾಡುವುದು ಕಷ್ಟ.
ತಾಂಡಾ ಖುರ್ದದಿಂದ ಸೀತಾಪುರದ ಜಿಲ್ಲಾಸ್ಪತ್ರೆಯವರೆಗಿನ 42 ಕಿ.ಮೀ ಪ್ರಯಾಣವು ಯಾವುದೇ ಗರ್ಭಿಣಿ ಮಹಿಳೆಗೆ ಹೆರಿಗೆಯ ಸಮಯದಲ್ಲಿ ದೀರ್ಘವಾಗಿರುತ್ತದೆ - ಮೊದಲ ಐದು ಕಿಲೋಮೀಟರ್ ದಾರಿಯನ್ನು ಏರುತಗ್ಗಿನ, ಜಾರು ರಸ್ತೆಗಳಲ್ಲಿ ದ್ವಿಚಕ್ರ ವಾಹನದಿಂದ ಕ್ರಮಿಸಬೇಕಾಗುತ್ತದೆ. "ಆಂಬ್ಯುಲೆನ್ಸ್ ಬಳಿ ಹೋಗಲು ನಾವು ಆ ದಾರಿಯಲ್ಲಿ ಹೋಗಬೇಕಾಗಿತ್ತು" ಎಂದು ಶ್ರೀಕೃಷ್ಣ ಹೇಳುತ್ತಾರೆ. "ಆದರೆ ನಿಜವಾದ ಸಮಸ್ಯೆಗಳು ನಾವು ಜಿಲ್ಲಾಸ್ಪತ್ರೆಗೆ ಬಂದ ನಂತರ ಪ್ರಾರಂಭವಾದವು."
ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರವೂ ಮಮತಾ ಅವರಿಗೆ ರಕ್ತಸ್ರಾವ ನಿಂತಿರಲಿಲ್ಲ. ಎಲ್ಲವೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಿದ್ದೆ ಎಂದು ಶ್ರೀಕೃಷ್ಣ ಹೇಳುತ್ತಾರೆ. “ಇದೇನೂ ತೀರಾ ಅನಿರೀಕ್ಷಿತವಾಗಿರಲಿಲ್ಲ. ಸಮಸ್ಯೆಯಾಗಬಹುದು ಎಂದು ನಮಗೆ ತಿಳಿದಿತ್ತು. ಆದರೆ ವೈದ್ಯರು ಅವಳನ್ನು ಉಳಿಸುತ್ತಾರೆ ಎಂದು ನಾವು ನಂಬಿದ್ದೆವು.”
ಆದರೆ ಆಕೆಯನ್ನು ವಾರ್ಡಿಗೆ ಸ್ಥಳಾಂತರಿಸುವಾಗ ಸ್ಟ್ರೆಚರ್ ಮೇಲಿದ್ದ ಬಿಳಿ ಬಟ್ಟೆಯನ್ನು ಶ್ರೀ ಕೃಷ್ಣ ಅವರಿಗೆ ನೋಡಲಾಗಲಿಲ್ಲ. “ಅದರಲ್ಲಿ ವಿಪರೀತ ರಕ್ತವಿತ್ತು. ನೋಡಿ ನನಗೆ ಹೊಟ್ಟೆಯಲ್ಲಿ ಕತ್ತರಿಯಾಡಿಸಿದಂತಾಯಿತು,” ಎನ್ನುತ್ತಾರವರು.
ಆಕೆಗೆ 25 ವರ್ಷ ವಯಸ್ಸಾಗಿತ್ತು.
ಮಮತಾ ಸಾಯುವ ಒಂದು ದಿನದ ಮೊದಲು ಆಕೆಯನ್ನು ಪರೀಕ್ಷಿಸಿದಾಗ ಆಕೆಯ ತೂಕ 43 ಕಿಲೋಗ್ರಾಂಗಳಷ್ಟಿತ್ತು. ತೂಕದ ಕೊರತೆಯ ಜೊತೆಗೆ, ಮಮತಾಗೆ ಪೌಷ್ಟಿಕಾಂಶದ ಕೊರತೆ ಹಾಗೂ ಹಿಮೋಗ್ಲೋಬಿನ್ ಮಟ್ಟ 8 ಗ್ರಾಂ / ಡಿಎಲ್ ಇದ್ದು ತೀವ್ರ ರಕ್ತಹೀನತೆಯಿತ್ತು. (ಗರ್ಭಿಣಿ ಮಹಿಳೆಯರಿಗೆ 11 ಗ್ರಾಂ / ಡಿಎಲ್ ಅಥವಾ ಹೆಚ್ಚಿನ ಹಿಮೋಗ್ಲೋಬಿನ್ ಸಾಂದ್ರತೆಯ ಅಗತ್ಯವಿರುತ್ತದೆ).
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 ( ಎನ್ಎಫ್ಎಚ್ಎಸ್ -5 ) ಪ್ರಕಾರ ರಕ್ತಹೀನತೆಯು ಉತ್ತರ ಪ್ರದೇಶದ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ. ರಾಜ್ಯದಲ್ಲಿ 15-49 ವರ್ಷ ವಯೋಮಾನದ ಶೇ.50ಕ್ಕೂ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ಪೌಷ್ಠಿಕಾಂಶದ ಕೊರತೆಯು ರಕ್ತಹೀನತೆಗೆ ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಕಬ್ಬಿಣದ ಕೊರತೆಯು ಜಗತ್ತಿನ ಒಟ್ಟಾರೆ ರಕ್ತಹೀನತೆಯ ಸುಮಾರು ಅರ್ಧದಷ್ಟು ಭಾಗಕ್ಕೆ ಕಾರಣವಾಗಿದೆ, ಆದರೆ ಫೋಲೇಟ್ (ವಿಟಮಿನ್ ಬಿ9) ಮತ್ತು ವಿಟಮಿನ್ ಬಿ12 ಕೊರತೆಗಳು ಸಾಂಕ್ರಾಮಿಕ ರೋಗಗಳು ಮತ್ತು ಆನುವಂಶಿಕ ಪರಿಸ್ಥಿತಿಗಳ ಜೊತೆಗೆ ಪ್ರಮುಖ ಅಂಶಗಳಾಗಿವೆ.
ಯುಪಿಯಲ್ಲಿ ಕೇವಲ 22.3 ಪ್ರತಿಶತದಷ್ಟು ತಾಯಂದಿರು ತಮ್ಮ ಗರ್ಭಾವಸ್ಥೆಯಲ್ಲಿ ಕನಿಷ್ಠ 100 ದಿನಗಳವರೆಗೆ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಪೂರಕಗಳನ್ನು ಸೇವಿಸಿದ್ದಾರೆ ಎಂದು ಎನ್ಎಫ್ಎಚ್ಎಸ್ -5 ದತ್ತಾಂಶವು ತೋರಿಸುತ್ತದೆ. ರಾಷ್ಟ್ರೀಯ ದರವು 2019-21ರಲ್ಲಿ ಸುಮಾರು ದುಪ್ಪಟ್ಟಾಗಿದೆ, ಇದು ಶೇಕಡಾ 44.1 ರಷ್ಟಿದೆ. ಆದರೆ ಸೀತಾಪುರ ಜಿಲ್ಲೆಯಲ್ಲಿ, ಕೇವಲ 18 ಪ್ರತಿಶತದಷ್ಟು ಜನರು ಮಾತ್ರವೇ ಪೂರಕಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ದಾಖಲೆಗಳು ಹೇಳುತ್ತವೆ.
ರಕ್ತಹೀನತೆಯು ತಾಯಿ ಮತ್ತು ಮಗುವಿನ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ. ಇತರ ಪರಿಣಾಮಗಳೊಡನೆ ಇದು ಅಕಾಲಿಕ ಹೆರಿಗೆ ಮತ್ತು ಕಡಿಮೆ ತೂಕದ ಮಗುವಿನ ಜನನಕ್ಕೂ ಕಾರಣವಾಗಬಹುದು. ಇದೆಲ್ಲಕ್ಕಿಂತ ಹೆಚ್ಚಾಗಿ ರಕ್ತಹೀನತೆಯು ನೇರವಾಗಿ ತಾಯಿ ಮತ್ತು ಮಗುವಿನ ಮರಣದೊಂದಿಗೂ ಸಂಬಂಧವನ್ನು ಹೊಂದಿದೆ, ಎಂದರೆ ಪ್ರಸವಪೂರ್ವ ಅವಧಿಯ ಶಿಶು ಮರಣ ಮತ್ತು ನವಜಾತ ಶಿಶುಗಳ ಮರಣಕ್ಕೆ ಕಾರಣವಾಗುತ್ತದೆ.
2017-19ರಲ್ಲಿ ಭಾರತದಲ್ಲಿ ಗರ್ಭಿಣಿ ಮಹಿಳೆಯರ ತಾಯಿಯ ಮರಣ ಪ್ರಮಾಣ (MMR) ಪ್ರತಿ 100,000 ಜನನಗಳಿಗೆ 103 ಆಗಿತ್ತು. ಇದೇ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಎಂಎಂಆರ್ 167. 2019 ರಲ್ಲಿ ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣವು 1,000 ಜೀವಂತ ಜನನಗಳಿಗೆ 41ರಷ್ಟಿತ್ತು . ರಾಷ್ಟ್ರೀಯ ಸರಾಸರಿ 30ಕ್ಕಿಂತ 36 ಶೇಕಡಾ ಹೆಚ್ಚು.
ಮಮತಾ ಅವರ ಸಾವು ಬಾಜಪೇಯಿ ಕುಟುಂಬದ ಪಾಲಿಗೆ ಎರಗಿದ ಏಕೈಕ ದುರಂತವಾಗಿರಲಿಲ್ಲ. 25 ದಿನಗಳ ನಂತರ ಆಕೆಯ ಹೆಣ್ಣು ಮಗುವೂ ಮೃತಪಟ್ಟಿತ್ತು. "ಎರಡನೆಯ ದುರಂತ ಸಂಭವಿಸಿದಾಗ ನಾವು ಮೊದಲಿನ ದುರಂತದಿಂದಲೇ ಚೇತರಿಸಿಕೊಂಡಿರಲಿಲ್ಲ" ಎಂದು ಶ್ರೀಕೃಷ್ಣ ಹೇಳುತ್ತಾರೆ. "ನಾವು ಆಘಾತಕ್ಕೆ ಒಳಗಾಗಿದ್ದೆವು."
ಮಮತಾ ಮತ್ತು ಅವರ ಮಗು ಕೇವಲ ದಿನಗಳ ಅಂತರದಲ್ಲಿ ನಿಧನರಾದಾಗ ಕೊರೋನಾ ಕಾಯಿಲೆಯು ಆರು ತಿಂಗಳ ದೂರದಲ್ಲಿತ್ತು. ಆದರೆ ಕೋವಿಡ್ -19 ಪ್ರಾರಂಭವಾದಾಗ, ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಿತು, ಇದು ತಾಯಿಯ ಆರೋಗ್ಯ ಸೂಚಕಗಳಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಯಿತು.
ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ ವಿಶ್ಲೇಷಣೆಯು ಏಪ್ರಿಲ್ ಮತ್ತು ಜೂನ್ 2020ರ ನಡುವೆ, ಪ್ರಸವಪೂರ್ವ ಆರೈಕೆಯನ್ನು ಪಡೆಯುವ ಗರ್ಭಿಣಿಯರ ಸಂಖ್ಯೆಯಲ್ಲಿ 2019ಕ್ಕೆ ಹೋಲಿಸಿದರೆ 27%ರಷ್ಟು ಕಡಿಮೆಯಾಗಿದೆ ಎಂದು ತೋರಿಸುತ್ತದೆ. ಪ್ರಸವಪೂರ್ವ ತಪಾಸಣೆಗಳ ಸಂಖ್ಯೆಯು 22 ಪ್ರತಿಶತದಷ್ಟು ಕಡಿಮೆಯಾಗಿದೆ. "ಆರೋಗ್ಯ ಸೇವೆಗಳಿಗೆ ತಾಯಿಯ ಅಡೆತಡೆಗಳು, ಕಳಪೆ ನೈರ್ಮಲ್ಯ ಮತ್ತು ಆರೋಗ್ಯ ಕಾರ್ಯಕರ್ತರಿಂದ ಆರೋಗ್ಯ ಸಮಸ್ಯೆಗಳ ಭಯವು ಗರ್ಭಪಾತದ ಅಪಾಯವನ್ನು ಹೆಚ್ಚಿಸಿದೆ ಮತ್ತು ಮಕ್ಕಳು ಮತ್ತು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ" ಎಂದು ಪಿಎಫ್ಐ ಹೇಳಿಕೆ ತಿಳಿಸಿದೆ.
ಪಪ್ಪು ಮತ್ತು ಅವರ ಕುಟುಂಬವು ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿತು.
ಕೋವಿಡ್ -19ರ ಎರಡನೇ ಅಲೆಯು ಉತ್ತುಂಗದಲ್ಲಿದ್ದಾಗ ಅವರ ಪತ್ನಿ ಸರಿತಾ ದೇವಿ ಐದು ತಿಂಗಳ ಗರ್ಭಿಣಿಯಾಗಿದ್ದರು ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದರು. ಜೂನ್ 2021ರಲ್ಲಿ ಒಂದು ಸಂಜೆ, ಅವಳು ಉಸಿರಾಟದ ತೊಂದರೆಯನ್ನು ಅನುಭವಿಸಿದಳು - ಕಡಿಮೆ ಹಿಮೋಗ್ಲೋಬಿನ್ ಮಟ್ಟವನ್ನು ಸೂಚಿಸುತ್ತದೆ - ಮತ್ತು ಮನೆಯಲ್ಲಿ ಕುಸಿದುಬಿದ್ದಳು. "ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ" ಎಂದು 32 ವರ್ಷದ ಪಪ್ಪು ಹೇಳುತ್ತಾರೆ. "ನಾನು ಕೆಲಸ ಹುಡುಕಿಕೊಂಡು ಹೊರಗೆ ಹೋಗಿದ್ದೆ. ನನ್ನ ತಾಯಿ ಕೂಡ ಹೊರಗೆ ಹೋಗಿದ್ದರು."
ಆ ಬೆಳಿಗ್ಗೆ ಸರಿತಾ ಪೂರ್ತಿ ಆರೋಗ್ಯವಂತಳಾಗಿ ಕಾಣುತ್ತಿದ್ದಳು ಎಂದು ಪಪ್ಪುವಿನ 70 ವರ್ಷದ ತಾಯಿ ಮಾಲತಿ ಹೇಳುತ್ತಾರೆ. "ಅವಳು ಮಧ್ಯಾಹ್ನ ಮಕ್ಕಳಿಗಾಗಿ ಕಿಚಡಿಯನ್ನು ಸಹ ಮಾಡಿದ್ದಳು."
ಆದರೆ ಪಪ್ಪು ಸಂಜೆ ಮನೆಗೆ ಹಿಂದಿರುಗಿದಾಗ, 20ರ ಹರೆಯದ ಸರಿತಾ ಬಿಳಿಚಿಕೊಂಡಂತೆ ಮತ್ತು ದುರ್ಬಲಳಾಗಿ ಕಾಣುತ್ತಿದ್ದಳು. "ಅವಳಿಗೆ [ಸುಲಭವಾಗಿ] ಉಸಿರಾಡಲು ಸಾಧ್ಯವಾಗಲಿಲ್ಲ." ಆದ್ದರಿಂದ ಅವರು ವಾರಣಾಸಿ ಜಿಲ್ಲೆಯ ಬರಗಾಂವ್ ಬ್ಲಾಕ್ನಲ್ಲಿರುವ ತಮ್ಮ ಗ್ರಾಮವಾದ ದಲ್ಲಿಪುರದಿಂದ 35 ಕಿಲೋಮೀಟರ್ ದೂರದಲ್ಲಿರುವ ಭದೋಹಿಗೆ ಹೋಗಲು ತಕ್ಷಣವೇ ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದರು. "ಇಲ್ಲಿನ [ಬಾರಗಾಂವ್ ನಲ್ಲಿ] ಆಸ್ಪತ್ರೆಗಳು ತುಂಬಿದ್ದವು, ಮತ್ತು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವು ಯಾವುದೇ ಸೌಲಭ್ಯಗಳನ್ನು ಹೊಂದಿಲ್ಲ" ಎಂದು ಅವರು ಹೇಳುತ್ತಾರೆ. "ನಾವು ಖಾಸಗಿ ಆಸ್ಪತ್ರೆಗೆ ಹೋಗಬೇಕೆಂದು ಭಾವಿಸಿದ್ದೆವು, ಅಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆಯುವ ಭರವಸೆಯಿತ್ತು."
ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಅಸಮರ್ಥ ಆರೋಗ್ಯ ವ್ಯವಸ್ಥೆಗಳು ಜಾಗತಿಕವಾಗಿ ಗರ್ಭಿಣಿಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಮಾರ್ಚ್ 2021ರಲ್ಲಿ ಪ್ರಕಟವಾದ 17 ದೇಶಗಳ ಅಧ್ಯಯನಗಳ ಮೆಟಾ-ವಿಶ್ಲೇಷಣೆಯಲ್ಲಿ , ದಿ ಲ್ಯಾನ್ಸೆಟ್ ತಾಯಿಯ, ಭ್ರೂಣದ ಮತ್ತು ನವಜಾತ ಶಿಶುಗಳ ಮೇಲೆ ಸಾಂಕ್ರಾಮಿಕದ ಪರಿಣಾಮಗಳನ್ನು ಪರಿಶೀಲಿಸಿದೆ ಮತ್ತು ಸಾಂಕ್ರಾಮಿಕ ರೋಗವು "ತಾಯಿಗಳು ಮತ್ತು ಶಿಶುಗಳ ಮರಣವನ್ನು ತಪ್ಪಿಸಬಹುದಾದ ಪ್ರಕರಣಗಳಲ್ಲೂ ಸಾವಿಗೆ ಕಾರಣವಾಗಿದೆ" ಎಂದು ತೀರ್ಮಾನಿಸಿದೆ. "ಕಡಿಮೆ ಸಂಪನ್ಮೂಲ ಸಂಯೋಜನೆಗಳಲ್ಲಿ ತಾಯಿ ಮತ್ತು ಶಿಶು ಮರಣವನ್ನು ಕಡಿಮೆ ಮಾಡುವಲ್ಲಿ ದಶಕಗಳ ಹೂಡಿಕೆ ವ್ಯರ್ಥವಾಗುವುದನ್ನು ತಪ್ಪಿಸಲು" ತಕ್ಷಣದ ಕ್ರಮದ ಅಗತ್ಯವಿದೆ ಎಂದು ಅದು ಹೇಳಿದೆ.
ಆದರೆ ಭಾವೀ ತಾಯಂದಿರ ವಿಷಯದಲ್ಲಿ ಸರ್ಕಾರ ತುರ್ತಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿರಲಿಲ್ಲ.
ಆಸ್ಪತ್ರೆಗೆ ತಲುಪುವ ಮೊದಲೇ ಸರಿತಾ ಆಟೋ ರಿಕ್ಷಾದಲ್ಲಿ ನಿಧನರಾದರು. "ಲಾಕ್ ಡೌನ್ ಕಾರಣದಿಂದಾಗಿ ದಾರಿಯಲ್ಲಿ ವಿಳಂಬವಾಗುತ್ತಲೇ ಇತ್ತು" ಎಂದು ಪಪ್ಪು ಹೇಳುತ್ತಾರೆ. "ದಾರಿಯಲ್ಲಿ ಅನೇಕ ಚೆಕ್ ಪಾಯಿಂಟ್ಗಳಿದ್ದ ಕಾರಣ ಟ್ರಾಫಿಕ್ ಜಾಮ್ ಆಗಿತ್ತು."
ಸರಿತಾ ಸತ್ತಿರುವುದು ತಿಳಿದು ಪಪ್ಪುವಿಗೆ ಹೆಂಡತಿ ಸತ್ತ ದುಃಖಕ್ಕಿಂತಲೂ ಹೆಚ್ಚು ಪೋಲಿಸರ ಭಯವೇ ಕಾಡುತ್ತಿತ್ತು. ಆಟೋದಲ್ಲಿ ಹೆಣವಿರುವುದು ಪೋಲಿಸರಿಗೆ ತಿಳಿದರೆ ಅವರು ಏನು ಮಾಡುತ್ತಾರೋ ಎನ್ನುವ ಭಯ ಅವರನ್ನು ಕಾಡುತ್ತಿತ್ತು. ಭಯಗೊಂಡ ಪಪ್ಪು ಆಟೊರಿಕ್ಷಾ ಚಾಲಕನಿಗೆ ಊರಿಗೆ ಹಿಂತಿರುಗುವಂತೆ ತಿಳಿಸಿದರು. “ಹೆಣವನ್ನು ಕುಳಿತಿರುವ ಭಂಗಿಯಲ್ಲಿರಿಸಿಕೊಂಡು ಚೆಕ್ ಪಾಯಿಂಟ್ ಮೂಲಕ ಹಾದು ಬಂದೆವು. ಪುಣ್ಯಕ್ಕೆ ಎಲ್ಲಿಯೂ ನಮ್ಮನ್ನು ತಡೆದು ನಿಲ್ಲಿಸಿ ಪ್ರಶ್ನೆ ಮಾಡಲಿಲ್ಲ,” ಎನ್ನುತ್ತಾರವರು.
ಪಪ್ಪು ಮತ್ತು ಮಾಲತಿ ಶವವನ್ನು ಅಂತಿಮ ವಿಧಿವಿಧಾನಗಳಿಗಾಗಿ ದಲ್ಲಿಪುರದ ಹತ್ತಿರದ ಘಾಟ್ ಗೆ ಕೊಂಡೊಯ್ದರು. ಅದಕ್ಕಾಗಿ ಅವರು ಸಂಬಂಧಿಕರಿಂದ 2,000 ರೂ.ಗಳನ್ನು ಸಾಲ ಮಾಡಬೇಕಾಯಿತು. "ನಾನು ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದೆ ಆದರೆ ಲಾಕ್ಡೌನ್ ನಂತರ [ಮಾರ್ಚ್ 2020ರಲ್ಲಿ] ಅದು ಮುಚ್ಚಲ್ಪಟ್ಟಿತು", ಎಂದು ಉತ್ತರ ಪ್ರದೇಶದ ಅತ್ಯಂತ ಅಂಚಿನಲ್ಲಿರುವ ಪರಿಶಿಷ್ಟ ಜಾತಿಗಳಲ್ಲಿ ಒಂದಾದ ಮುಸಹರ್ ಸಮುದಾಯಕ್ಕೆ ಸೇರಿದ ಪಪ್ಪು ಹೇಳುತ್ತಾರೆ.
ಲಾಕ್ಡೌನ್ಗೂ ಮೊದಲು, ಅವರು ಕುಲುಮೆಗಳಲ್ಲಿ ಕೆಲಸ ಮಾಡುವಾಗ ತಿಂಗಳಿಗೆ 6,000 ರೂ.ಗಳನ್ನು ಗಳಿಸುತ್ತಿದ್ದರು. "ಇಟ್ಟಿಗೆ ಗೂಡುಗಳು ಮತ್ತೆ ತೆರೆದಿವೆ, ಆದರೆ ನನ್ನ ಹೆಂಡತಿಯ ಮರಣದ ನಂತರ ನಾನು ಈ ರೀತಿಯ ಕೆಲಸವನ್ನು ನಿಲ್ಲಿಸಿದ್ದೇನೆ" ಎಂದು ಅವರು ಹೇಳುತ್ತಾರೆ. "ನಾನು ಮೊದಲಿನಂತೆ ಹೊರಗೆ ಇರಲು ಸಾಧ್ಯವಿಲ್ಲ. ನಾನು ನನ್ನ ಮಕ್ಕಳೊಂದಿಗೆ ಇರಬೇಕು."
ಅವರ ಮಕ್ಕಳಾದ ಜ್ಯೋತಿ ಮತ್ತು ರಾಣಿ, 3 ಮತ್ತು 2 ವರ್ಷ, ಅಪ್ಪನ ಹೊಸ ಆದಾಯದ ಮೂಲವಾದ ಕಾರ್ಪೆಟ್ ನೇಯುವುದನ್ನು ನೋಡುತ್ತಿದ್ದರು. ‘ಕೆಲವು ತಿಂಗಳ ಹಿಂದೆಯಷ್ಟೇ ಈ ಕೆಲಸ ಆರಂಭಿಸಿದ್ದೇನೆ, ಏನಾಗುತ್ತದೆಯೋ ನೋಡೋಣ. ಈ ಕೆಲಸದಿಂದ ಮಕ್ಕಳೊಂದಿಗೆ ಮನೆಯಲ್ಲಿಯೇ ಇರಲು ಸಾಧ್ಯವಾಗುತ್ತಿದೆ.ಅಮ್ಮನಿಗೆ ವಯಸ್ಸಾಗಿದೆ, ಅವರಿಗೆ ಮಗುವನ್ನು ನೋಡಿಕೊಳ್ಳಲು ಆಗುತ್ತಿಲ್ಲ. ಸರಿತಾ ಇದ್ದಾಗ ನನ್ನ ತಾಯಿಯ ಜೊತೆಗೆ ಮಕ್ಕಳನ್ನೂ ನೋಡಿಕೊಳ್ಳುತ್ತಿದ್ದಳು. ಅವಳು ಗರ್ಭಿಣಿಯಾಗಿದ್ದಾಗ ಇನ್ನೇನು ಮಾಡಬಹುದಿತ್ತೋ ಗೊತ್ತಿಲ್ಲ. ಆದರೆ ನಾನು ಅವಳನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಬಾರದಿತ್ತು."
ವಾರಣಾಸಿ ಮೂಲದ ಮಾನವ ಹಕ್ಕುಗಳ ಸಾಮಾಜಿಕ ಕಾರ್ಯಕರ್ತೆ ,ಪೀಪಲ್ಸ್ ವಿಜಿಲೆನ್ಸ್ ಕಮಿಟಿಗೆ ಸಂಬಂಧಿಸಿದ ಮಂಗಳಾ ರಾಜ್ಭರ್, ಕೋವಿಡ್ -19 ಮಹಾಮಾರಿ ಬಂದ ನಂತರ, ಬರಗಾಂವ್ ಬ್ಲಾಕ್ನಲ್ಲಿ ತಾಯಿಯ ಆರೈಕೆಯನ್ನು ಹೆಚ್ಚು ನಿರ್ಲಕ್ಷಿಸಲಾಗಿದೆ ಎಂದು ಹೇಳುತ್ತಾರೆ. ರಾಜ್ಭರ್ ಹೇಳುತ್ತಾರೆ, “ಈ ಬ್ಲಾಕ್ನಲ್ಲಿ ಅನೇಕ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಹೆಚ್ಚಿನ ಕಾಳಜಿ ಮತ್ತು ವಿಶ್ರಾಂತಿ ಬೇಕು. ರಾಜ್ಭರ್ ಎರಡು ದಶಕಗಳಿಗೂ ಹೆಚ್ಚು ಕಾಲ ಬರಗಾಂವ್ನಲ್ಲಿ ಸ್ಥಳೀಯ ಸಮುದಾಯಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರು ಹೇಳುತ್ತಾರೆ, “ಆದರೆ ಬಡತನವು ಕೆಲಸ ಹುಡುಕಲು [ಬೇರೆ ಎಲ್ಲೋ] ಮನೆಯನ್ನು ತೊರೆಯುವಂತೆ ಮಾಡುತ್ತದೆ. ಅದಕ್ಕಾಗಿಯೇ ಮಹಿಳೆಯರು ಮನೆಯಲ್ಲಿ ಮತ್ತು ಹೊಲಗಳಲ್ಲಿ ಕೆಲಸ ಮಾಡುತ್ತಾರೆ.
ಮಹಿಳೆಯರಿಗೆ ತಮ್ಮ ಆಹಾರದಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಕಬ್ಬಿಣದ ಅಗತ್ಯವಿದೆ, ಆದರೆ ಅವರು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ನೀಡುವ ಪಡಿತರದಿಂದ ಮಾತ್ರ ಆಹಾರವನ್ನು ತಯಾರಿಸಲು ಸಮರ್ಥರಾಗಿದ್ದಾರೆ ಮತ್ತು ತರಕಾರಿಗಳನ್ನು ಖರೀದಿಸುವ ಸಾಮರ್ಥ್ಯ ಹೊಂದಿಲ್ಲ ಎಂದು ರಾಜ್ಭರ್ ವಿವರಿಸುತ್ತಾರೆ. "ಅವರು ಸುಧಾರಿತ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಹೊಂದಿಲ್ಲ. ಅವರ ವಿರುದ್ಧ ಸಾಕಷ್ಟು ಅಡೆತಡೆಗಳಿವೆ."
ಸೀತಾಪುರ ತಾಂಡಾ ಖುರ್ದದಲ್ಲಿ, ಆಶಾ ಕಾರ್ಯಕರ್ತೆಯಾಗಿರುವ ಆರತಿ ದೇವಿ ಮಾತನಾಡಿ, ಅನೇಕ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಮತ್ತು ಕಡಿಮೆ ತೂಕವು ಗರ್ಭಾವಸ್ಥೆಯಲ್ಲಿ ತೊಡಕುಗಳಿಗೆ ಕಾರಣವಾಗುತ್ತದೆಯೆಂದು ಅವರು ಹೇಳುತ್ತಾರೆ. “ಇಲ್ಲಿನ ಜನರು ಬೇಳೆಕಾಳು ಮತ್ತು ಅನ್ನವನ್ನು ಮಾತ್ರ ತಿನ್ನುತ್ತಿದ್ದಾರೆ. ಅವರಿಗೆ ಸರಿಯಾದ ಪೋಷಣೆ ಸಿಗುತ್ತಿಲ್ಲ. ತರಕಾರಿಗಳು ಬಹುತೇಕ ಕಾಣೆಯಾಗಿವೆ [ಅವರ ಆಹಾರದಿಂದ]. ಯಾರ ಬಳಿಯೂ ಸಾಕಷ್ಟು ಹಣವಿಲ್ಲ."
ಕೃಷಿಯಿಂದ ಬರುವ ಆದಾಯ ಕುಸಿದಿದೆ ಎನ್ನುತ್ತಾರೆ ಶ್ರೀಕೃಷ್ಣ ಅವರ ಪತ್ನಿ ಕಾಂತಿ (55 ವರ್ಷ). “ನಮಗೆ ಕೇವಲ ಎರಡು ಎಕರೆ ಭೂಮಿಯಿದೆ, ಅಲ್ಲಿ ನಾವು ಅಕ್ಕಿ ಮತ್ತು ಗೋಧಿಯನ್ನು ಬೆಳೆಯುತ್ತೇವೆ. ನಮ್ಮ ಬೆಳೆಗಳು ಮತ್ತೆ ಮತ್ತೆ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತವೆ.
ಕಾಂತಿಯವರ ಮಗ ಮತ್ತು ಮಮತಾ ಅವರ ಪತಿ ವಿಜಯ್ (33 ವರ್ಷ) ಸೀತಾಪುರದಲ್ಲಿ ಜೀವನ ಸಾಗಿಸಲು ಮತ್ತು ಕೃಷಿಯ ಮೇಲಿನ ಕುಟುಂಬದ ಅವಲಂಬನೆಯನ್ನು ಕೊನೆಗೊಳಿಸಲು ಉದ್ಯೋಗವನ್ನು ಕಂಡುಕೊಂಡರು. ಆದರೆ ಕೋವಿಡ್ -19 ಮಹಾಮಾರಿಯ ನಂತರ, ಅವರು ತಮ್ಮ ಕೆಲಸವನ್ನು ಕಳೆದುಕೊಂಡರು, ಆದರೂ 2021ರ ಕೊನೆಯಲ್ಲಿ ಅದನ್ನು ಮರಳಿ ಪಡೆದರು. ಕಾಂತಿ ಹೇಳುತ್ತಾರೆ, “ಅವನ ಸಂಬಳ 5,000 ರೂ. ಇತ್ತು. ಲಾಕ್ಡೌನ್ಗೂ ಮುನ್ನ ಅದು ನಮ್ಮ ಕುಟುಂಬದ ಪಾಲನೆಗೆ ಸಾಕಾಗುತ್ತಿತ್ತು. ಆದರೆ ನಾವು ತರಕಾರಿಗಳನ್ನು ಕಡಿಮೆ ಮಾಡಬೇಕಾಗಿತ್ತು. ಲಾಕ್ಡೌನ್ಗೂ ಮುನ್ನವೇ ಬೇಳೆಕಾಳು ಮತ್ತು ಅಕ್ಕಿ ಹೊರತುಪಡಿಸಿ ಏನನ್ನೂ ಖರೀದಿಸುವುದು ಕಷ್ಟಕರವಾಗಿತ್ತು. ಕೋವಿಡ್ ನಂತರ ನಾವು ಆ ಕುರಿತು ಪ್ರಯತ್ನಿಸಲೇ ಇಲ್ಲ.”
2020ರಲ್ಲಿ, ಕೋವಿಡ್ -19 ಮಹಾಮಾರಿ, ಆದಾಯದ ಕುಸಿತವು ಭಾರತದಾದ್ಯಂತ 84 ಪ್ರತಿಶತ ಕುಟುಂಬಗಳ ಮೇಲೆ ಪರಿಣಾಮ ಬೀರಿದೆ ಎಂದು ಅಧ್ಯಯನವೊಂದು ಹೇಳಿದೆ. ಇದು ಪ್ರತಿಯಾಗಿ, ಆಹಾರ ಮತ್ತು ಪೋಷಣೆಯು ಗಮನಾರ್ಹ ಪರಿಣಾಮವನ್ನು ಬೀರಿದೆ.
ಹೆಚ್ಚುತ್ತಿರುವ ಬಡತನ, ಗರ್ಭಿಣಿ ಆರೈಕೆಯ ಅಸಮರ್ಪಕ ವಿಧಾನಗಳು ಮತ್ತು ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಪೂರಕಗಳ ಅನಿಯಮಿತ ಸೇವನೆಯು ಹೆಚ್ಚಿನ ಅಪಾಯದ ಗರ್ಭಧಾರಣೆ ಪ್ರಮಾಣವನ್ನು ಕಡಿಮೆ ಮಾಡಲು ಕಷ್ಟವಾಗುತ್ತಿದೆ ಎಂದು ರಾಜ್ಭರ್ ಮತ್ತು ಆರತಿ ದೇವಿ ಅಭಿಪ್ರಾಯಪಡುತ್ತಾರೆ; ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಪ್ರವೇಶವು ಕಷ್ಟಕರವಾಗಿದೆ.
ಮಮತಾ ತೀರಿಕೊಂಡ ಸುಮಾರು ಒಂದೂವರೆ ವರ್ಷದ ನಂತರ ವಿಜಯ್ ಮರುಮದುವೆಯಾದರು. ಅವರ ಎರಡನೇ ಪತ್ನಿ, ಪ್ರಿಯಾ, 2021ರ ಆರಂಭದಲ್ಲಿ ಗರ್ಭಿಣಿಯಾಗಿದ್ದರು. ಅವರಿಗೆ ರಕ್ತಹೀನತೆಯ ಸಮಸ್ಯೆಯಿತ್ತು ಮತ್ತು ಆಕೆಯ ಗರ್ಭಧಾರಣೆಯನ್ನು ಹೈ-ರಿಸ್ಕ್ ಎಂದು ದಾಖಲಿಸಲಾಗಿತ್ತು. ಅವರು ನವೆಂಬರ್ 2021ರಲ್ಲಿ ಹೆರಿಗೆಗೆ ಸಿದ್ಧರಾಗಿದ್ದಾಗ, ತಾಂಡಾ ಖುರ್ದ್ನಲ್ಲಿ ಪ್ರವಾಹದ ನೀರು ಇಳಿಮುಖವಾಗಿತ್ತು.
ಮಮತಾ ಹೆರಿಗೆಯ ಸಮಯದಲ್ಲಿ ಆಸ್ಪತ್ರೆಗೆ ಹೋಗಿದ್ದ ಅನುಭವದಿಂದಾಗಿ ಶ್ರೀಕೃಷ್ಣ ಆಸ್ಪತ್ರೆಗೆ ಹೋಗಲು ಹೆದರಿದ್ದರು. ಆದರೆ ಈ ಬಾರಿ ಪ್ರವಾಹದ ನೀರು ಇಳಿದಿತ್ತು. ಮತ್ತು ಆಂಬುಲೆನ್ಸ್ ಮನೆ ಬಾಗಿಲಿಗೆ ಬಂದಿತ್ತು. ಕುಟುಂಬವು ಪ್ರಿಯಾರನ್ನು ಮನೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಲು ತೀರ್ಮಾನಿಸಿತ್ತು. ಅದೃಷ್ಟವಶಾತ್ ಈ ಬಾರಿ ಆಕೆ ಹೆರಿಗೆಯನ್ನು ಯಶಸ್ವಿಯಾಗಿ ಪೂರೈಸಿ, ಸ್ವಾತಿಕಾ ಎನ್ನುವ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದರು. ಈ ಬಾರಿ ಪರಿಸ್ಥಿತಿಗಳು ಅವರ ಪರವಾಗಿದ್ದವು.
ಠಾಕೂರ್ ಫ್ಯಾಮಿಲಿ ಫೌಂಡೇಶನ್ ನೀಡುವ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಕುರಿತು ಪಾರ್ಥ್ ಎಮ್.ಎನ್. ಈ ವರದಿಯನ್ನು ಮಾಡಿದ್ದಾರೆ. ಈ ವರದಿಯಲ್ಲಿನ ವಿಷಯಗಳ ಮೇಲೆ ಠಾಕೂರ್ ಫ್ಯಾಮಿಲಿ ಫೌಂಡೇಶನ್ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.
ಅನುವಾದ: ಶಂಕರ. ಎನ್. ಕೆಂಚನೂರು