"ಈ ಹೋರಾಟವು ಕೇವಲ ರೈತರ ಹೋರಾಟ ಮಾತ್ರವಲ್ಲ, ಇದು ಕೃಷಿ ಕಾರ್ಮಿಕರ ಪರವಾದ ಹೋರಾಟವೂ ಹೌದು" ಎಂದು ರೇಷಮ್ ಮತ್ತು ಬಿಯಂತ್ ಕೌರ್ ಹೇಳುತ್ತಾರೆ. "ಈ ಕೃಷಿ ಕಾನೂನುಗಳನ್ನು ಜಾರಿಗೊಳಿಸಿದರೆ, ಅದು ರೈತರ ಮೇಲೆ ಮಾತ್ರವಲ್ಲದೆ ಜೀವನೋಪಾಯಕ್ಕಾಗಿ ರೈತರನ್ನು ಅವಲಂಬಿಸಿರುವ ಕೃಷಿ ಕಾರ್ಮಿಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ."
ಹೀಗಾಗಿ ಜನವರಿ 7ರ ಮಧ್ಯಾಹ್ನ, ಈ ಇಬ್ಬರು ಸಹೋದರಿಯರು ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಸೇರಲು ಪಂಜಾಬ್ನ ಮುಕ್ತಸರ್ ಜಿಲ್ಲೆಯಿಂದ ಪ್ರಯಾಣಿಸಿದರು.
ಪಂಜಾಬ್ ಕೃಷಿ ಕಾರ್ಮಿಕರ ಒಕ್ಕೂಟವು ಕನಿಷ್ಠ 20 ಬಸ್ಗಳಲ್ಲಿ ಕನಿಷ್ಠ 1,500 ಜನರಿಗೆ ಅವಕಾಶ ದೆಹಲಿಗೆ ಬರುವ ಕಲ್ಪಿಸಿತ್ತು. ಈ ಬಸ್ಸುಗಳು ಪಶ್ಚಿಮ ದೆಹಲಿಯ ಟಿಕ್ರಿ ಗಡಿಗೆ ಬಂದವು. ಮೂರು ಕೃಷಿ ಕಾನೂನುಗಳ ವಿರುದ್ಧದ ಹೋರಾಟ ಇಲ್ಲಿ ಭರದಿಂದ ಸಾಗಿದೆ. ಬಟಿಂಡಾ, ಫರೀದ್ಕೋಟ್, ಜಲಂಧರ್, ಮೊಗಾ, ಮುಕ್ತಸರ್, ಪಟಿಯಾಲ ಮತ್ತು ಸಂಗ್ರೂರ್ನಿಂದ ಜನರು ಇಲ್ಲಿಗೆ ಬಂದರು. ರೇಷಮ್ ಮತ್ತು ಬಿಯಂತ್ ಮುಕ್ತಸರ್ ಜಿಲ್ಲೆಯ ತಮ್ಮ ಚನ್ನು ಎಂಬ ಹಳ್ಳಿಯ ಬಳಿ ಬಸ್ ಹತ್ತಿದರು.
ನವೆಂಬರ್ 26ರಿಂದ, ಅನೇಕ ರೈತರು ಟಿಕ್ರಿ ಮತ್ತು ದೆಹಲಿಯ ಸುತ್ತಮುತ್ತಲಿನ ಇತರ ಸ್ಥಳಗಳಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ, ಇನ್ನೂ ಹಲವರು ಕೆಲವು ದಿನಗಳ ಕಾಲ ಇಲ್ಲಿದ್ದು ಮತ್ತೆ ತಮ್ಮ ಊರುಗಳಿಗೆ ಹಿಂದಿರುಗಿ ಇಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಜನರಿಗೆ ತಿಳಿಸುತ್ತಾರೆ. "ಈ ಹೊಸ ಕೃಷಿ ಕಾನೂನುಗಳು ಕೃಷಿ ಕಾರ್ಮಿಕರ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂದು ನಮ್ಮ ಹಳ್ಳಿಯಲ್ಲಿರುವ ಅನೇಕರಿಗೆ ತಿಳಿದಿಲ್ಲ" ಎಂದು 24 ವರ್ಷದ ರೇಷಮ್ ಹೇಳುತ್ತಾರೆ. "ಮತ್ತು ವಾಸ್ತವವಾಗಿ, ರೈತರು ಮತ್ತು ಕೃಷಿ ಕಾರ್ಮಿಕರ ಅನುಕೂಲಕ್ಕಾಗಿ ಈ ಕಾನೂನುಗಳನ್ನು ಮಾಡಲಾಗಿದೆಯೆಂದು ಊರಿನಲ್ಲಿ ಪ್ರಸಾರವಾಗುವ ಸುದ್ದಿ ವಾಹಿನಿಗಳು ಹೇಳುತ್ತಿವೆ. ಈ ಕಾನೂನುಗಳನ್ನು ಜಾರಿಗೊಳಿಸಿದ ನಂತರ ಕಾರ್ಮಿಕರಿಗೆ ಭೂಮಿಯನ್ನು ನೀಡಲಾಗುವುದು ಮತ್ತು ಉತ್ತಮ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳುತ್ತಾರೆ.”
ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ. ಆ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ರೈತರು ಈ ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಮಾಡುತ್ತವೆ.
ರೇಷಮ್ ಮತ್ತು ಬಿಯಂತ್ ಬೌರಿಯಾ ದಲಿತ ಸಮುದಾಯಕ್ಕೆ ಸೇರಿದವರು. ಅವರ ಗ್ರಾಮ ಚನ್ನು 6,529 ಜನಸಂಖ್ಯೆಯನ್ನು ಹೊಂದಿದ್ದು, ಅದರಲ್ಲಿ 58% ದಲಿತರು. ಅವರ ಕುಟುಂಬವು ಹೊಲಗಳಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತದೆ. ಅವರ ತಾಯಿ ಪರಮ್ಜಿತ್ ಕೌರ್ (45) ಈಗಲೂ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ತಂದೆ ಬಲ್ವೀರ್ ಸಿಂಗ್, 50, ಪ್ರಸ್ತುತ ಹಳ್ಳಿಯಲ್ಲಿ ವರ್ಕ್ಶಾಪ್ ಹೊಂದಿದ್ದು, ಅಲ್ಲಿ ಅವರು ಟ್ರಾಲಿಗಳು ಮತ್ತು ಲೋಹದ ಗೇಟ್ಗಳನ್ನು ತಯಾರಿಸುತ್ತಾರೆ. ಅವರ ಸಹೋದರ, 20 ವರ್ಷದ ಹರ್ದೀಪ್, 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು ಮದುವೆಯಾಗಿದೆ, ಅವರ ತಂದೆಯೊಂದಿಗೆ ವರ್ಕ್ಶಾಪಿನಲ್ಲಿ ಕೆಲಸ ಮಾಡುತ್ತಾರೆ.
ರೇಷಮ್ ಇತಿಹಾಸದಲ್ಲಿ ಎಂ.ಎ. ಹೊಂದಿದ್ದು, ಲಾಕ್ಡೌನ್ಗೂ ಮೊದಲು ತಿಂಗಳಿಗೆ 3,000 ರೂ ಸಂಬಳಕ್ಕೆ ಖಾಸಗಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ನಂತರ ಅವರು ಮನೆಯಲ್ಲಿ ಕಲಿಸಲು ಪ್ರಾರಂಭಿಸಿ ತಿಂಗಳಿಗೆ 2,000 ರೂಗಳನ್ನು ಸಂಪಾದಿಸುತ್ತಿದ್ದಾರೆ. 22 ವರ್ಷದ ಬಿಯಂತ್ ಬಿಎ ಪದವಿ ಹೊಂದಿದ್ದು, ದಾಸ್ತಾನು ಗುಮಾಸ್ತರಾಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಯೋಜಿಸಿದ್ದಾರೆ. ಇಬ್ಬರೂ ಸಹೋದರಿಯರು ಸಹ ಮನೆಯಲ್ಲಿ ಹೊಲಿಗೆ ಕೆಲಸ ಮಾಡುತ್ತಾರೆ. ಸಲ್ವಾರ್-ಕಮೀಜ್ ಹೊಲಿಗೆ 300 ರೂ ಶುಲ್ಕ ವಿಧಿಸುತ್ತಾರೆ. ಕೆಲವೊಮ್ಮೆ, ಅವರು ತಮ್ಮ ಕಾಲೇಜು ಶುಲ್ಕವನ್ನು ಟೈಲರಿಂಗ್ನಿಂದ ಬರುವ ಆದಾಯದಿಂದ ಪಾವತಿಸುತ್ತಾರೆ.
"ನಾವು ಕೃಷಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದವರು. ಕೃಷಿ ಕಾರ್ಮಿಕರ ಮನೆಯಲ್ಲಿ ಬೆಳೆದ ಪ್ರತಿ ಮಗುವಿಗೂ ದುಡಿಮೆಯೆಂದರೇನೆಂದು ತಿಳಿದಿರುತ್ತದೆ. ನನ್ನ ಶಾಲಾ ರಜಾದಿನಗಳಲ್ಲಿ ನಾನು ಕೂಡ ನನ್ನ ಹೆತ್ತವರೊಂದಿಗೆ ದಿನಕ್ಕೆ 250-300 ರೂಪಾಯಿಗಳಿಗೆ ದಿನಗೂಲಿಯಾಗಿ ದುಡಿಯುತ್ತಿದ್ದೆ." ಎಂದು ರೇಷಮ್ ಹೇಳುತ್ತಾರೆ.
ಒಟ್ಟಾರೆಯಾಗಿ ಕೃಷಿ ಕುಟುಂಬದ ಮಕ್ಕಳ ಬಗ್ಗೆ ಮಾತನಾಡುತ್ತಾ, “ಶಾಲೆಯ ರಜೆ ಪ್ರಾರಂಭವಾದಾಗ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಅಥವಾ ಇತರ ಮಕ್ಕಳಂತೆ, ಮನೋರಂಜನೆಗಾಗಿ ಪ್ರವಾಸಕ್ಕೆ ಅಥವಾ ಮೋಜು ಮಾಡಲು ಹೋಗುವುದಿಲ್ಲ. ನಾವು ಆ ಸಮಯದಲ್ಲಿ ಹೊಲಗಳಲ್ಲಿ ಕೆಲಸ ಮಾಡುತ್ತೇವೆ.” ಎನ್ನುತ್ತಾರೆ
ಆಕೆ ಮುಂದುವರೆದು, ಹೊಸ ಕೃಷಿ ಕಾನೂನುಗಳು ಕೃಷಿ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದನ್ನು ಇನ್ನಷ್ಟು ಕಷ್ಟಕರವಾಗಿಸುತ್ತವೆ. "ಈ ಸಮಾಜದಲ್ಲಿ ಒಬ್ಬ ಕಾರ್ಮಿಕನ ಮಕ್ಕಳು ಕಾರ್ಮಿಕರಾಗಿಯೇ ಉಳಿಯಬೇಕೆಂದು ನಿರಿಕ್ಷಿಸಲಾಗುತ್ತದೆ. ಈ ಕಾನೂನುಗಳು ರೈತರ ಭೂಮಿಯನ್ನು ಕಿತ್ತುಕೊಂಡರೆ ನಮ್ಮ ಪೋಷಕರಿಗೆ ಉದ್ಯೋಗವೆಲ್ಲಿ ದೊರೆಯುತ್ತದೆ? ಸರಕಾರ ಬಡವರಿಗೆ ಕೆಲಸ, ಆಹಾರ ಮತ್ತು ಶಿಕ್ಷಣ ಸಿಗದಿರುವಂತೆ ಮೂಲಕ ಅವರನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದೆ." ಎನ್ನುತ್ತಾರೆ.
ಜನವರಿ 9ರ ಮಧ್ಯಾಹ್ನ, ಸಹೋದರಿಯರು ಟಿಕ್ರಿಯಿಂದ ಇತರ ಯೂನಿಯನ್ ಸದಸ್ಯರೊಂದಿಗೆ ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಪ್ರತಿಭಟನಾ ಸ್ಥಳಕ್ಕೆ ತೆರಳಿದರು. ಅವರ ಬಸ್ಸುಗಳು ಪ್ರತಿಭಟನಾ ಸ್ಥಳದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ನಿಂತವು, ಅಲ್ಲಿಂದ ಅವರೆಲ್ಲರೂ ಮುಖ್ಯ ವೇದಿಕೆಯ ಮುಂಭಾಗದಲ್ಲಿನ ಕುಳಿತುಕೊಳ್ಳುವ ಸ್ಥಳಕ್ಕೆ, ಫಲಕಗಳು ಮತ್ತು ಅವರ ಯೂನಿಯನ್ ಧ್ವಜಗಳೊಂದಿಗೆ ನಡೆದು ಹೋದದರು. ರೇಷಮ್ ಹಿಡಿದ ಪ್ಲಕಾರ್ಡ್ನಲ್ಲಿ: ‘ಖಜಾನೆಗಳನ್ನು ಜನರಿಗಾಗಿ ತೆರೆಯಿರಿ, ರಕ್ತ ಹೀರುವ ಕಾರ್ಪೊರೇಟ್ಗಳಿಗಾಗಿಯಲ್ಲ’ ಎಂದು ಬರೆಯಲಾಗಿತ್ತು.
ಬಿಯಂತ್ ತನ್ನ ಅಕ್ಕನಿಗಿಂತ ಹೆಚ್ಚು ಸಂಘಟನೆಯ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಕಳೆದ ಏಳು ವರ್ಷಗಳಿಂದ ಅವರು ಪಂಜಾಬ್ ಫಾರ್ಮ್ ವರ್ಕರ್ಸ್ ಯೂನಿಯನ್ ಜೊತೆ ಸಂಬಂಧ ಹೊಂದಿದ್ದರೆ, ಕಳೆದ ಮೂರು ವರ್ಷಗಳಿಂದ ರೇಷಮ್ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಖುಂಡೆ ಹಲಾಲ್ ಗ್ರಾಮದಲ್ಲಿರುವ (ಚನ್ನುದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ) ಚಿಕ್ಕಮ್ಮ ಮತ್ತು ಚಿಕ್ಕಪ್ಪ, ಬಿಯಂತ್ ಮೂರು ವರ್ಷದವರಿದ್ದಾಗ ಅವರನ್ನು ದತ್ತು ಪಡೆದರು. ಅವರು ಯೂನಿಯನ್ ಸದಸ್ಯರಾಗಿದ್ದರಿಂದಾಗಿ ಬಿಯಂತ್ ಕೂಡ ಅವರಿಂದ ಪ್ರಭಾವಿತರಾಗಿ ಸಂಘಟನೆ ಸೇರಿಕೊಂಡರು. "ಹೀಗಾಗಿಯೇ ನಾನು ಚಿಕ್ಕ ವಯಸ್ಸಿನಲ್ಲಿಯೇ ಸಂಘಟನೆ ಸೇರಿಕೊಂಡೆ" ಎಂದು ಅವರು ಹೇಳುತ್ತಾರೆ. (ಮೂರು ವರ್ಷಗಳ ಹಿಂದೆ, ಬಿಯಂತ್ ಪದವಿ ಓದಲು ಚನ್ನುವಿನಲ್ಲಿರುವ ತನ್ನ ಹೆತ್ತವರ ಮನೆಗೆ ಮರಳಿದರು).
5,000 ಸದಸ್ಯರ ಪಂಜಾಬ್ ಖೇತ್ ಮಜ್ದೂರ್ ಯೂನಿಯನ್ ಜೀವನೋಪಾಯ, ದಲಿತರ ಭೂ ಹಕ್ಕು ಮತ್ತು ಜಾತಿ ತಾರತಮ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕೆಲಸ ಮಾಡುತ್ತದೆ. "ಕೃಷಿ ಕಾನೂನುಗಳ ವಿರುದ್ಧದ ಈ ಹೋರಾಟವು ರೈತರ ಜಮೀನು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ಸಮಸ್ಯೆಗಳ ವಿರುದ್ಧವಾದುದೆಂದು ಹಲವರು ನೋಡುತ್ತಾರೆ. ಆದರೆ ಕೃಷಿ ಕಾರ್ಮಿಕರ ಪಾಲಿಗೆ ಈ ಹೋರಾಟವು ಆಹಾರ ಭದ್ರತೆಯ ಕುರಿತಾದದ್ದು - ಸಾರ್ವಜನಿಕ ವಿತರಣಾ ವ್ಯವಸ್ಥೆಯ ಕುರಿತಾದುದು” ಎಂದು ಯೂನಿಯನ್ ಪ್ರಧಾನ ಕಾರ್ಯದರ್ಶಿ ಲಚ್ಮನ್ ಸಿಂಗ್ ಸೆವೆವಾಲಾ ಹೇಳುತ್ತಾರೆ.
“ನಮ್ಮ ಗ್ರಾಮದಲ್ಲಿ ಕೃಷಿ ಕಾರ್ಮಿಕರ ಸಂಘಟನೆಯಿಲ್ಲ, ಕೇವಲ ರೈತ ಸಂಘಗಳಿವೆ. ಈ ಕಾರಣದಿಂದಾಗಿ ಅಲ್ಲಿನ ಕೆಲವು ಕೃಷಿ ಕಾರ್ಮಿಕರಿಗೆ [ಈ ಕಾನೂನುಗಳಿಂದ] ಅನ್ಯಾಯವಾಗುತ್ತಿದೆ ಎಂದು ತಿಳಿದಿಲ್ಲ" ಎಂದು ಬಿಯಂತ್ ಹೇಳುತ್ತಾರೆ. “ಆದರೆ ನಮಗೆ ತಿಳಿದಿರುವ ಕಾರಣ ನಾವು ದೆಹಲಿಗೆ ಬಂದಿದ್ದೇವೆ. ಇಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೈಜ ಚಿತ್ರಣವನ್ನು ಕಂಡು ನಮ್ಮೂರಿನ ಜನರಿಗೆ ಇದರ ಕುರಿತು ವಿವರಿಸಲಿದ್ದೇವೆ, ಮತ್ತು ಈ ಕಾನೂನುಗಳು ಹೇಗೆ ಎಲ್ಲರ ಮೇಲೂ ಹೇಗೆ ಪರಿಣಾಮ ಬೀರಲಿವೆಯೆನ್ನುವುದನ್ನು ತಿಳಿಹೇಳುತ್ತೇವೆ”ಎಂದು ರೇಷಮ್ ಹೇಳುತ್ತಾರೆ.
ಸಹೋದರಿಯರು ಜನವರಿ 10ರಂದು ಮನೆಗೆ ಒರಟರು. ಹೋರಾಟದಲ್ಲಿ ಭಾಗವಹಿಸಿದ ಎರಡು ದಿನಗಳಲ್ಲಿ ಅವರು ಗ್ರಾಮಸ್ಥರಿಗೆ ಹೇಳಲು ಸಾಕಷ್ಟು ವಿಷಯ ಸಂಗ್ರಹಿಸಿದ್ದಾರೆ. “ಹೊರಗಿನವರು ಬಂದು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ, ಕಾರ್ಮಿಕರು ಎಲ್ಲಿಗೆ ಹೋಗುತ್ತಾರೆ? ಮಂಡಿ ಬೋರ್ಡನ್ನು ವಜಾಗೊಳಿಸಿ ಸರ್ಕಾರಿ ವ್ಯವಸ್ಥೆಯನ್ನು ನಿರ್ವಹಿಸದಿದ್ದರೆ ಬಡವರಿಗೆ ಎಲ್ಲಿ ಪಡಿತರ ಸಿಗುತ್ತದೆ? ” ಅವರು ಪಂಜಾಬ್ ರಾಜ್ಯ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯನ್ನು ಉಲ್ಲೇಖಿಸಿ ಕೇಳುತ್ತಾರೆ. "ಈ ಕಾನೂನು ಬಡವರನ್ನು ಸಾಯುವಂತೆ ಮಾಡುತ್ತದೆ. ಈ ಸರ್ಕಾರ ನಾವು ದಡ್ಡರು ಎಂದು ಭಾವಿಸುತ್ತದೆ. ಆದರೆ ಅದು ತಪ್ಪು ತಿಳುವಳಿಕೆ. ನ್ಯಾಯಕ್ಕಾಗಿ ಹೇಗೆ ಹೋರಾಡಬೇಕೆಂದು ನಮಗೆ ತಿಳಿದಿದೆ ಮತ್ತು ನಾವು ಅದನ್ನು ಪ್ರತಿದಿನ ಕಲಿಯುತ್ತಿದ್ದೇವೆ.”
ಅನುವಾದ - ಶಂಕರ ಎನ್. ಕೆಂಚನೂರು