"ಈ ವರ್ಷ, ಈ ರೈತ ವಿರೋಧಿ ಮಸೂದೆಗಳ ಪುಟಗಳನ್ನು ಬೂದಿಯಾಗುವಂತೆ ಸುಡುವುದು ನಮಗೆ ಲೋಹ್ರಿ ಹಬ್ಬವಾಗಿತ್ತು" ಎಂದು ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಸುಖದೇವ್ ಸಿಂಗ್ ಹೇಳುತ್ತಾರೆ. ಸಿಂಗ್ ತನ್ನ 60 ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾಲವನ್ನು ಕೃಷಿಕರಾಗಿ ಕಳೆದಿದ್ದಾರೆ. ಪ್ರಸ್ತುತ, ದೆಹಲಿ ಮತ್ತು ಹರಿಯಾಣದ ಗಡಿ ಸಿಂಘುವಿನಲ್ಲಿ ಬೀಡುಬಿಟ್ಟಿರುವ ಸಾವಿರಾರು ಪ್ರತಿಭಟನಾಕಾರರಲ್ಲಿ ಸಿಂಗ್ ಕೂಡ ಒಬ್ಬರು.
"ಈ ಸಲದ ಲೋಹ್ರಿ ವಿಭಿನ್ನವಾಗಿತ್ತು" ಎಂದು ಅವರು ಹೇಳುತ್ತಾರೆ. "ಸಾಮಾನ್ಯವಾಗಿ, ನಾವು ಈ ಹಬ್ಬವನ್ನು ನಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಮನೆಯಲ್ಲಿ ಆಚರಿಸುತ್ತೇವೆ. ಅಷ್ಟೇ ಅಲ್ಲ, ಈ ಹಬ್ಬ ನಮಗೆ ಸಂಭ್ರಮದ ಸಮಯ. ಆದರೆ ಈ ಬಾರಿ, ನಾವು ನಮ್ಮ ಹೊಲ ಮತ್ತು ಮನೆಗಳಿಂದ ದೂರವಿದ್ದೇವೆ. ಆದರೆ ಇದರ ಹೊರತಾಗಿಯೂ, ನಾವು ಒಟ್ಟಿಗೆ ಇದ್ದೇವೆ." ಈ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಮ್ಮ ಮನೆಗಳಿಗೆ ಹಿಂತಿರುಗುವುದಿಲ್ಲ ಪ್ರಸ್ತುತ ಸರ್ಕಾರದ ಅಧಿಕಾರಾವಧಿಯ ಕೊನೆಯವರೆಗೂ ನಾವು ಇಲ್ಲಿಯೇ ಇರಬೇಕಾಗಿ ಬಂದರೂ ಸರಿಯೇ."
ಲೋಹ್ರಿ ಒಂದು ಜನಪ್ರಿಯ ಹಬ್ಬವಾಗಿದ್ದು, ಮುಖ್ಯವಾಗಿ ಪಂಜಾಬ್ ಮತ್ತು ಉತ್ತರದ ಕೆಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಕರ ಸಂಕ್ರಾಂತಿಯ ಒಂದು ರಾತ್ರಿ ಮೊದಲು (ಚಾಂದ್ರಮಾನ ಕ್ಯಾಲೆಂಡರ್‌ನ ಚಳಿಗಾಲದ ತಿಂಗಳುಗಳ ಕೊನೆಯ ದಿನ) ಆಚರಿಸಲಾಗುತ್ತದೆ ಮತ್ತು ಇದನ್ನು ವಸಂತಕಾಲ ಮತ್ತು ದೀರ್ಘ ದಿನಗಳ ಆರಂಭವೆಂದು ಪರಿಗಣಿಸಲಾಗುತ್ತದೆ. ಜನರು ರಾತ್ರಿಯಲ್ಲಿ ಬೆಂಕಿಯನ್ನು ಬೆಳಗಿಸುತ್ತಾರೆ, ಸೂರ್ಯನಿಗೆ ಎಳ್ಳು-ಬೆಲ್ಲ, ಕಡಲೆಕಾಯಿ ಮತ್ತು ಇತರ ಸಾಂಪ್ರದಾಯಿಕ ಆಹಾರವನ್ನು ಅರ್ಪಿಸುತ್ತಾರೆ ಹಾಗೂ ಸಂತೋಷ, ಸಮೃದ್ಧಿ ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥಿಸುತ್ತಾರೆ.
ಈ ವರ್ಷ ಸಿಂಘು ಗಡಿಯಲ್ಲಿ, ಜನವರಿ 13ರಂದು ಆಂದೋಲನಕ್ಕೆ ಹೋಗುವ ದಾರಿಯಲ್ಲಿ ಹಲವಾರು ಸ್ಥಳಗಳಲ್ಲಿ ಬೆಂಕಿಯನ್ನು ಉರಿಸಿ ಅದರಲ್ಲಿ ಮೂರು ಮಸೂದೆಗಳ ಪುಟಗಳನ್ನು ಸುಟ್ಟು ಹಬ್ಬವನ್ನು ಆಚರಿಸಲಾಯಿತು. ಅಂದು ರೈತರು ಒಗ್ಗಟ್ಟಿನ ಘೋಷಣೆಗಳನ್ನು ಕೂಗಿದರು ಮತ್ತು ತಮ್ಮ ಟ್ರಾಕ್ಟರುಗಳ ಪಕ್ಕದಲ್ಲಿ ಬೆಳಗುತ್ತಿದ್ದ ಬೆಂಕಿಯಲ್ಲಿ ಕಾನೂನು ಕಾಗದಗಳ ಬೂದಿಯನ್ನು ಗಾಳಿಯಲ್ಲಿ ಬೆರೆಸಿ ಹಾಡಿ ಕುಣಿದರು.
ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಅನುವಾದ: ಶಂಕರ ಎನ್. ಕೆಂಚನೂರು