ಭಾರತೀಯ ಉಪಖಂಡದಲ್ಲಿನ ಸುದೀರ್ಘ ವಸಾಹತುಶಾಹಿ ಮತ್ತು ವಿಭಜನೆಯ ಅವಧಿಯ ಛಾಯೆಗಳು ಅಸ್ಸಾಮಿನಲ್ಲಿ ಈಗಲೂ ಭಿನ್ನ ರೀತಿಯಲ್ಲಿ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುತ್ತಿವೆ. ವಿಶೇಷವಾಗಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್‌ಸಿ) ರೂಪದಲ್ಲಿ. ಇದೊಂದು ಜನರ ಪೌರತ್ವವನ್ನು ನಿರ್ಧರಿಸುವ ಒಂದು ಮಾರ್ಗವಾಗಿದ್ದು, ಇದರಿಂದಾಗಿ ಸುಮಾರು 19 ಲಕ್ಷ ಜನರ ಪೌರತ್ವ ಅಪಾಯದಲ್ಲಿದೆ. 'ಅನುಮಾನಾಸ್ಪದ (ಡಿ)-ಮತದಾರರು' ಎಂದು ಕರೆಯಲ್ಪಡುವ ಹೊಸ ವರ್ಗದ ನಾಗರಿಕರನ್ನು ರಚಿಸಿರುವುದು ಮತ್ತು ಅವರನ್ನು ಬಂಧನ ಕೇಂದ್ರಗಳಲ್ಲಿ ಬಂಧಿಸಿಟ್ಟಿರುವುದು ಇದಕ್ಕೆ ಜೀವಂತ ಪುರಾವೆಯಾಗಿದೆ. 1990ರ ದಶಕದ ಅಂತ್ಯದ ವೇಳೆಗೆ, 'ಹೊರಗಿನವರನ್ನು' ಒಳಗೊಂಡ ಪ್ರಕರಣಗಳನ್ನು ನಿಭಾಯಿಸಲು ಅಸ್ಸಾಮಿನಾದ್ಯಂತ ಹೆಚ್ಚುತ್ತಿರುವ ನ್ಯಾಯಮಂಡಳಿಗಳು ಮತ್ತು ನಂತರ 2019ರ ಡಿಸೆಂಬರ್ ತಿಂಗಳಿನಲ್ಲಿ ಅಂಗೀಕಾರವಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಜ್ಯದಲ್ಲಿನ ಪೌರತ್ವ ಬಿಕ್ಕಟ್ಟನ್ನು ಇನ್ನಷ್ಟು ಆಳಗೊಳಿಸಿದವು.
ಈ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಆರು ಜನರ ಮೌಖಿಕ ಸಾಕ್ಷೀಕರಣವು ಈ ಬಿಕ್ಕಟ್ಟು ಇಲ್ಲಿನ ಜನರ ವೈಯಕ್ತಿಕ ಬದುಕು ಮತ್ತು ಅವರ ಇತಿಹಾಸದ ಮೇಲೆ ಬೀರಿರುವ ಕ್ರೂರ ಪರಿಣಾಮವನ್ನು ವಿವರಿಸುತ್ತವೆ. ತನ್ನ ಎಂಟನೇ ವಯಸ್ಸಿನಲ್ಲಿ ನೆಲ್ಲಿ ಹತ್ಯಾಕಾಂಡದಲ್ಲಿ ಪಾರಾಗಿ ಬದುಕುಳಿದವರಾದ ರಶೀದಾ ಬೇಗಂ ಈಗ ತನ್ನ ಕುಟುಂಬದ ಎಲ್ಲ ಸದಸ್ಯರ ಹೆಸರೂ ಎನ್‌ಆರ್‌ಸಿ ಪಟ್ಟಿಯಲ್ಲಿದ್ದರೂ ತನ್ನ ಹೆಸರು ಇಲ್ಲದಿರುವುನ್ನು ಕಂಡು ಚಿಂತಿತರಾಗಿದ್ದಾರೆ. ಶಹಜಹಾನ್ ಅಲಿಯವರದೂ ಅದೇ ಕತೆ ಕುಟುಂಬದ ಎಲ್ಲರ ಹೆಸರೂ ಪಟ್ಟಿಯಲ್ಲಿದ್ದರೂ ಅವರ ಹೆಸರಿಲ್ಲ. ಪ್ರಸ್ತುತ ಅವರು ಅಸ್ಸಾಮಿನಲ್ಲಿ ಪೌರತ್ವದ ವಿಷಯಗಳಿಗೆ ಸಂಬಂಧಿಸಿದ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


