ಫೆಬ್ರವರಿ 15, 1885ರಂದು, ಮಹಾತ್ಮ ಜ್ಯೋತಿರಾವ್ ಫುಲೆ ಪ್ರಾರಂಭಿಸಿದ ಶಾಲೆಯ ದಲಿತ ವಿದ್ಯಾರ್ಥಿಯಾದ ಮುಕ್ತಾ ಸಾಳ್ವೆಯವರು 'ಮಾಂಗ್-ಮಹಾರಂಚ್ಯಾ ದುಃಖವಿಶಾಯಿ' ('ಮಾಂಗ್ ಮತ್ತು ಮಹಾರ್ ಗಳ ದುಃಖದ ಕತೆ') ಎಂಬ ಪ್ರಬಂಧವನ್ನು ಬರೆದರು. ಇದು ಮರಾಠಿ ಪಾಕ್ಷಿಕ ಪತ್ರಿಕೆಯಾದ ಜ್ಞಾನೋದಯದಲ್ಲಿ ಪ್ರಕಟವಾಯಿತು. "ಒಬ್ಬ ವ್ಯಕ್ತಿಗೆ ಮಾತ್ರ ಸವಲತ್ತು ನೀಡುವ ಮತ್ತು ಉಳಿದವರು ವಂಚಿತರಾಗಿರುವಂತೆ ಮಾಡುವ ಆ ಧರ್ಮವು ಭೂಮಿಯಿಂದ ಕಣ್ಮರೆಯಾಗಲಿ ಮತ್ತು ಅಂತಹ (ತಾರತಮ್ಯದ) ಧರ್ಮದ ಬಗ್ಗೆ ಹೆಮ್ಮೆಪಡುವುದು ಎಂದಿಗೂ ನಮ್ಮ ಮನಸ್ಸನ್ನು ಪ್ರವೇಶಿಸದಿರಲಿ" ಎಂದು ಅವರು ಈ ಉಜ್ವಲ ಪ್ರಬಂಧದಲ್ಲಿ ಧರ್ಮದ ರಕ್ಷಕರಿಗೆ ಸವಾಲು ಹಾಕಿದ್ದರು.

ಮುಕ್ತಾ ಸಾಳ್ವೆ ತಮ್ಮ ಸ್ವಂತ ಸಮುದಾಯದ ಮಾಂಗ್ ಜನರ ಬಗ್ಗೆ ಬರೆದಾಗ ಕೇವಲ ಅವರು 15 ವರ್ಷ ವಯಸ್ಸಿನವರಾಗಿದ್ದರು. ಬ್ರಾಹ್ಮಣ ಆಡಳಿತಗಾರರು ಮತ್ತು ಸಮಾಜದ ಎಲ್ಲರೂ ದಲಿತರನ್ನು ಹೇಗೆ ಹಿಂಸಿಸಿದರು ಎಂಬುದನ್ನು ಅವರ ಪ್ರಚೋದನಕಾರಿ ಲೇಖನವು ನಮಗೆ ತಿಳಿಸುತ್ತದೆ. ಅವರಂತೆಯೇ, ಕಡೂಬಾಯಿ ಖಾರತ್ ಆಳಂದಿಯ ಆಧ್ಯಾತ್ಮಿಕ ನಾಯಕರಿಗೆ ಸವಾಲು ಹಾಕಿದರು ಮತ್ತು ಆಧ್ಯಾತ್ಮಿಕತೆ ಮತ್ತು ಧರ್ಮದ ಚರ್ಚೆಯಲ್ಲಿ ಅವರನ್ನು ಸೋಲಿಸಿದರು. ಕಡೂಬಾಯಿ ಸಾಮಾನ್ಯ ಜನರ ಜೀವನದಲ್ಲಿನ ದುಃಖ ಮತ್ತು ಹೋರಾಟಗಳ ಬಗ್ಗೆ ಹಾಡುತ್ತಾರೆ. ಅವರ ಹಾಡುಗಳು ಆಳವಾದ ಅರ್ಥ ಮತ್ತು ತತ್ತ್ವಚಿಂತನೆಗಳನ್ನು ತಿಳಿಸುತ್ತವೆ. ಅವರ ಹಾಡುಗಳು ಸಮಾನತೆಯ ಮೌಲ್ಯವನ್ನು ವಿವರಿಸುತ್ತವೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತವೆ.

*****

काखेत पोरगं हातात झाडनं डोईवर शेणाची पाटी
कपडा न लत्ता, आरे, खरकटं भत्ता
फजिती होती माय मोठी

माया भीमानं, भीमानं माय सोन्यानं भरली ओटी
मुडक्या झोपडीले होती माय मुडकी ताटी
फाटक्या लुगड्याले होत्या माय सतरा गाठी
पोरगं झालं सायब अन सुना झाल्या सायबीनी
सांगतात ज्ञानाच्या गोष्टी

सांगू सांगू मी केले, केले माय भलते कष्ट
नव्हतं मिळत वं खरकटं आणि उष्टं
असाच घास दिला भीमानं
झकास वाटी ताटी होता

तवा सारंग चा मुळीच पत्ता नव्हता
पूर्वीच्या काळात असंच होतं
बात मायी नाय वं खोटी
माया भीमानं, मया बापानं,
माया भीमानं माय, सोन्यानं भरली ओटी

ಬಗಲಿನಲ್ಲಿ ಮಗು, ಕೈಯಲ್ಲಿ ಪೊರಕೆ
ತಲೆಯ ಮೇಲೊಂದು ದನದ ಸಗಣಿಯ ಬುಟ್ಟಿ
ಚಿಂದಿ ಬಟ್ಟೆಯೇ ನನ್ನ ಅಲಂಕಾರ, ತಂಗಳು ನನ್ನ ಸಂಬಳ
ನಂಬು, ನನ್ನ ಬದುಕೇ ಒಂದು ದೊಡ್ಡ ಅವಮಾನವಾಗಿತ್ತು

ಆದರೆ ನನ್ನ ಭೀಮ, ಹೌದು, ನನ್ನ ಭೀಮ,
ನನ್ನ ಬದುಕನ್ನು ಬಂಗಾರದಿಂದ ಸಿಂಗರಿಸಿದ
ನನ್ನ ಮುರುಕಲು ಗುಡಿಸಲಿಗೆ ಮುರಿದ ಬಾಗಿಲಿತ್ತು
ಹರಿದ ಸೀರೆಯಲ್ಲಿನ ಗಂಟುಗಳು ಎಣಿಸಲಾಗಷ್ಟು
ಈಗ ನನ್ನ ಮಗ-ಸೊಸೆ ಇಬ್ಬರೂ ಅಧಿಕಾರಿಗಳು
ನನಗೇ ಜ್ಞಾನದ ಬೋಧನೆ ಮಾಡುತ್ತಾರೆ

ನಾನು ಎಷ್ಟು ಕಷ್ಟಗಳ ಎದುರಿಸಿದೆ, ಎಷ್ಟು ಕಷ್ಟದ ಕೆಲಸಗಳ ಮಾಡಿದೆ
ಅಳಿದುಳಿದ ತಂಗಳು, ಯಾರೋ ಬಿಟ್ಟ ಎಂಜಲು ಕೂಡಾ ಸಿಗುತ್ತಿರಲಿಲ್ಲ ಊಟಕ್ಕೆ
ಆದರೆ, ಭೀಮ ನಮಗೆ ಮೃಷ್ಟಾನ್ನ ತಿನ್ನಿಸಿದ
ಒಳ್ಳೆಯ ತಣಿಗೆ ಮತ್ತು ಬಟ್ಟಲುಗಳಲ್ಲಿ
ಕವಿ ಸಾರಂಗ ಅಲ್ಲಿ ಇದ್ದಿರಲಿಲ್ಲ
ಆ ದಿನಗಳಲ್ಲಿ ನಮ್ಮ ಬದುಕು ಹಾಗಿತ್ತು
ನನ್ನ ಭೀಮ, ನನ್ನ ತಂದೆ
ಅವನು ನನ್ನ ಬದುಕನ್ನು ಬಂಗಾರದಿಂದ ತುಂಬಿದ

PHOTO • Courtesy: TISS Tuljapur
PHOTO • Courtesy: TISS Tuljapur

ಟಿಐಎಸ್ಎಸ್ ತುಳಜಾಪುರದಲ್ಲಿ ನಡೆದ ಡಾ.ಅಂಬೇಡ್ಕರ್ ಸ್ಮಾರಕ ಉಪನ್ಯಾಸದಲ್ಲಿ ಕಡೂಬಾಯಿ ಖಾರತ್ ಮತ್ತು ಅವರ ಏಕತಾರಿ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಸಾವಿರಾರು ಹಾಡುಗಳನ್ನು ಬರೆದು ಹಾಡಿರುವುದನ್ನು ನಾವು ಕೇಳಿದ್ದೇವೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಮಾತ್ರ ನಮ್ಮ ಹೃದಯಕ್ಕೆ ಹತ್ತಿರವಾಗಿವೆ ಮತ್ತು ಅವು ಎಷ್ಟು ಜನಪ್ರಿಯವಾಗಿವೆ ಎಂದರೆ ಅವು ನಮ್ಮ ಸಾಮೂಹಿಕ ನೆನಪಿನ ಒಂದು ಭಾಗವಾಗಿವೆ. ಕಡೂಬಾಯಿ ಖಾರತ್ ಅವರ ಈ ಹಾಡು ಅಂತಹ ಸ್ಥಾನಮಾನವನ್ನು ಪಡೆದುಕೊಂಡಿದೆ. ಇದು ಜನರ ನಡುವ ಹೆಚ್ಚು ಜನಪ್ರಿಯವಾಗಿದೆ, ಅವರ ಮನೆಗಳು ಮತ್ತು ಹೃದಯಗಳನ್ನು ಪ್ರವೇಶಿಸಿದೆ - ಮತ್ತು ಇದು ಅಂಬೇಡ್ಕರ್ ಅವರ ಬಗ್ಗೆ ಮನೆ ಮನೆಗಳಲ್ಲಿ ಹಾಡಲ್ಪಡುವ ಹಾಡುಗಳಲ್ಲಿ ಅತ್ಯಂತ ಪ್ರಸಿದ್ಧ ಒಂದಾಗಿದೆ.

ಈ ಹಾಡುಗಳು ಇಷ್ಟೊಂದು ಹಿಟ್ ಆಗಲು ಹಲವು ಕಾರಣಗಳಿವೆ. ಭಾವ ತುಂಬಿದ ಪರಿಪೂರ್ಣ ಪದಗಳು, ಸ್ಪಷ್ಟ ಧ್ವನಿ, ಅನನ್ಯ ಶಬ್ದಗಳು ಮತ್ತು ವಾದ್ಯಗಳು ಮತ್ತು ಕಡೂಬಾಯಿ ಖಾರತ್ ಅವರ ವಿಶೇಷ ಬೇಸ್ ಧ್ವನಿ. ಸರಳ ವ್ಯಕ್ತಿಯಾದ ಅವರು ಕಲರ್ಸ್ ಚಾನೆಲ್ ಮತ್ತು ಜೀ ಟಿವಿಯಲ್ಲಿ ಜಲ್ಸಾ ಮಹಾರಾಷ್ಟ್ರಚಾದಂತಹ ಟಿವಿ ಕಾರ್ಯಕ್ರಮಗಳಲ್ಲಿ ಪ್ರಾಮುಖ್ಯತೆ ಪಡೆದರು. ಆದರೆ ಅಲ್ಲಿಗೆ ತಲುಪಲು ಅವರು ಸವೆಸಿದ ಕರಾಳ ಹಾದಿಯ ಪ್ರಯಾಣದ ಬಗ್ಗೆ ನಮಗೆ ಸ್ವಲ್ಪವೇ ತಿಳಿದಿದೆ. ಕಡೂಬಾಯಿಯವರ ಜೀವನವು ಅವರ ಹೆಸರೇ ಸೂಚಿಸುವಂತಹ ಅನುಭವಗಳಿಂದ ತುಂಬಿದೆ. (ಮರಾಠಿಯಲ್ಲಿ ಕಡೂ ಎಂದರೆ ಕಹಿ ಎಂದರ್ಥ, ಇದು ಮರಾಠಾವಾಡಾದಲ್ಲಿ ಹೆಣ್ಣುಮಕ್ಕಳಿಗೆ ಇಡುವ ಜನಪ್ರಿಯ ಹೆಸರು, ಇದು 'ದುಷ್ಟ ಕಣ್ಣು' ದೃಷ್ಟಿಯನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.)

ಕಡೂಬಾಯಿಯವರ ತಂದೆ ತುಕಾರಾಮ ಕಾಂಬ್ಳೆ...

ಬಾಲ್ಯದಿಂದಲೂ ಬಡತನದಲ್ಲಿ ಬದುಕುತ್ತಿದ್ದ ಕಡೂಬಾಯಿ, ಕೇವಲ 16ನೇ ವಯಸ್ಸಿನಲ್ಲಿರುವಾಗಲೇ ಮದುವೆಯಾಗಿ ಒಂದೆರಡು ವರ್ಷಗಳಲ್ಲಿ ಹೃದಯಾಘಾತದಿಂದ ತನ್ನ ಗಂಡನನ್ನು ಕಳೆದುಕೊಂಡರು. ಜೀವನದ ಜವಾಬ್ದಾರಿಗಳು ಮತ್ತು ಅವರ ಮೂವರು ಮಕ್ಕಳ ಜವಾಬ್ದಾರಿಗಳು - ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಹೆಣ್ಣು ಮಗು – ಎಲ್ಲದರ ಜವಬ್ದಾರಿಯೂ ಅವರ ಮೇಲೆ ಬಿದ್ದವು. ಅವರು ತನ್ನ ತಂದೆಯ ಏಕತಾರಿಯೊಂದಿಗೆ ಮನೆ ಮನೆಗೆ ಹೋಗಿ ಸಾಂಪ್ರದಾಯಿಕ ಭಜನಾ-ಕೀರ್ತನೆ [ಭಕ್ತಿಗೀತೆಗಳು] ಹಾಡುತ್ತಿದ್ದರು. ವೈದಿಕ ಕಾಲದಲ್ಲಿ ಗಾರ್ಗಿ ಮತ್ತು ಮೈತ್ರೇಯಿ ಎಂಬ ವಿದುಷಿಗಳು ಧರ್ಮದ ದ್ವಾರಪಾಲಕರೊಂದಿಗೆ ಚರ್ಚಿಸಿದ್ದರು. ಅಂತೆಯೇ, ಕಡೂಬಾಯಿ ಒಮ್ಮೆ ಆಳಂದಿ ದೇವಾಲಯದ ಅಂಗಳದಲ್ಲಿ ಆಧ್ಯಾತ್ಮಿಕತೆಯ ರಕ್ಷಕರೊಂದಿಗೆ ವಾದಿಸಿದ್ದರು. ಅವರು ವಿವಿಧ ಭಕ್ತಿಗೀತೆಗಳನ್ನು ಹಾಡುತ್ತಾ ಅನೇಕ ವರ್ಷಗಳನ್ನು ಕಳೆದರು, ಆದರೆ ದಿನಕ್ಕೆ ಎರಡು ಊಟವನ್ನು ಸಂಪಾದಿಸಲು ಅದು ಸಾಕಾಗುತ್ತಿರಲಿಲ್ಲ. ಹೀಗಾಗಿ ಅವರು ಜಲ್ನಾ ಜಿಲ್ಲೆಯ [ಮಹಾರಾಷ್ಟ್ರ] ತನ್ನ ಗ್ರಾಮವನ್ನು ತೊರೆದು ಔರಂಗಾಬಾದಿಗೆ ತೆರಳಲು ನಿರ್ಧರಿಸಿದರು.

PHOTO • Imaad ul Hasan
PHOTO • Imaad ul Hasan

ಕಡೂಬಾಯಿ ಔರಂಗಾಬಾದ್-ಬೀಡ್ ಬೈಪಾಸ್ ರಸ್ತೆಯ ಬಳಿಯ ಗೈರಾನ್ ಭೂಮಿಯಲ್ಲಿ ಒಂದು ಸಣ್ಣ ಗುಡಿಸಲನ್ನು ನಿರ್ಮಿಸಿದರು. ಬಾಬಾ ಸಾಹೇಬ್ ಅವರ ಪ್ರೀತಿ, ಸಹಾನುಭೂತಿ, ಸ್ಫೂರ್ತಿ ಮತ್ತು ಶಕ್ತಿಯಿಂದ ಬೆಂಬಲಿಸಲ್ಪಟ್ಟ ಜಗತ್ತನ್ನು ಇಲ್ಲಿ ಕಂಡಿದ್ದೇನೆ ಎಂದು ಅವರು ಹೇಳುತ್ತಾರೆ

ಆದರೆ ಔರಂಗಾಬಾದ್ ತೆರಳಿದ ಅವರು ಉಳಿಯುವುದೆಲ್ಲಿ? ಅವರು ಔರಂಗಾಬಾದ್-ಬೀಡ್ ಬೈಪಾಸ್ ರಸ್ತೆಯ ಬಳಿಯ ಗೈರಾನ್ ಭೂಮಿಯಲ್ಲಿ [ಸರ್ಕಾರಿ ಸ್ವಾಮ್ಯದ ಮೇವುಮಾಳ] ಒಂದು ಸಣ್ಣ ಗುಡಿಸಲು ನಿರ್ಮಿಸಿದರು ಮತ್ತು ನೀರು ಅಥವಾ ವಿದ್ಯುತ್ತಿನಂತಹ ನಾಗರಿಕ ಸೌಲಭ್ಯಗಳಿಲ್ಲದೆ ಅಲ್ಲಿ ವಾಸಿಸಲು ಪ್ರಾರಂಭಿಸಿದರು. ಅವರು ಇಂದಿಗೂ ಅಲ್ಲಿಯೇ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಸ್ವಲ್ಪ ಸಮಯದವರೆಗೆ, ಮೀರಾ ಉಮಾಪ್ ಕಡೂಬಾಯಿಯನ್ನು ತನ್ನ ಪ್ರದರ್ಶನ ತಂಡದೊಡನೆ ಕರೆದೊಯ್ದರು. ಆದರೆ ಮೂರು ಮಕ್ಕಳನ್ನು ನೋಡಿಕೊಳ್ಳಲು ಈ ಹಣ ಸಾಕಾಗಲಿಲ್ಲ. ಕಡೂಬಾಯಿ ಹೇಳುತ್ತಾರೆ, "ಅದು ಮಳೆಗಾಲವಾಗಿತ್ತು. ನಾವು ಸುಮಾರು ಒಂದು ವಾರದಿಂದ ಸೂರ್ಯನ ಮುಖವನ್ನು ನೋಡಿರಲಿಲ್ಲ. ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಲು ಸಹ ಸಾಧ್ಯವಾಗಲಿಲ್ಲ. ಎಲ್ಲಾ ಮೂರು ಮಕ್ಕಳು ಹಸಿವಿನಿಂದ ಬಳಲುತ್ತಿದ್ದರು. ಆಗ ನಾನು ಮನೆ ಮನೆಗೆ ಹೋಗಿ ಭಜನೆಗಳನ್ನು ಹಾಡಿದೆ. ಒಬ್ಬ ಮಹಿಳೆ ಹೇಳಿದಳು, 'ಡಾ. ಅಂಬೇಡ್ಕರರ ಬಗ್ಗೆ ಹಾಡುಗಳನ್ನು ಹಾಡಿ' ಎಂದು. ನಾನು ಒಂದು ಹಾಡನ್ನು ಹಾಡಿದೆ ಮತ್ತು ನನ್ನ ಮಕ್ಕಳ ಹಸಿವಿನ ಬಗ್ಗೆ ಅವಳಿಗೆ ಹೇಳಿದೆ. ಅವಳು ತನ್ನ ಅಡುಗೆಮನೆಗೆ ಹೋಗಿ ತನ್ನ ಮನೆಗೆಂದು ಖರೀದಿಸಿದ ದಿನಸಿ ವಸ್ತುಗಳನ್ನು ನನಗೆ ನೀಡಿದಳು, ಅದು ನನಗೆ ಒಂದು ತಿಂಗಳವರೆಗೆ ಸಾಕಾಗಿತ್ತು. ಅವಳು ನನ್ನ ಮಕ್ಕಳ ಹಸಿವನ್ನು ಅರ್ಥಮಾಡಿಕೊಂಡಿದ್ದಳು.

"ಅಂಬೇಡ್ಕರ್ ಅವರ ಕುರಿತಾದ ಹಾಡು ಅವರ ಹೊಟ್ಟೆಗೆ ಆಹಾರವನ್ನು ನೀಡಿತು. ಇದರೊಂದಿಗೆ ನನ್ನ ಇಡೀ ಬದುಕೇ ಬದಲಾಯಿತು ಬದಲಾಯಿತು. ನಾನು ಭಜನೆ-ಕೀರ್ತನೆಯನ್ನು ಬಿಟ್ಟು ಡಾ. ಅಂಬೇಡ್ಕರ್ ಅವರು ತೋರಿಸಿದ ಮಾರ್ಗವನ್ನು ಅನುಸರಿಸಲು ಪ್ರಾರಂಭಿಸಿದೆ. ಆ ಹಾದಿಯಲ್ಲಿ ನಡೆಯಲು ನಿರ್ಧರಿಸಿ, 2016ರಲ್ಲಿ ನಾನು ಹಿಂದೂ ಧರ್ಮವನ್ನು ತ್ಯಜಿಸಿ ನನ್ನ ಮಾತಂಗ್ ಜಾತಿಯನ್ನು ತೊರೆದೆ. ನಾನು ಬುದ್ಧನ ಧಮ್ಮವನ್ನು (ಬೌದ್ಧ ಧರ್ಮ) ಅಳವಡಿಸಿಕೊಂಡಿದ್ದೇನೆ!”

ಗಂಡನನ್ನು ಕಳೆದುಕೊಂಡ ಕಡೂಬಾಯಿ ತನ್ನ ತಂದೆಯನ್ನೂ ಕಳೆದುಕೊಂಡರು. ಆದರೆ, ಅವರ ಬದುಕಿನ ಎಲ್ಲಾ ಹೋರಾಟಗಳ ನಡುವೆಯೂ, ಸದಾ ಏಕತಾರಿ ಮತ್ತು ಸುಮಧುರ ಧ್ವನಿ ಅವರೊಡನಿದ್ದವು. ತನ್ನ ತಂದೆ ಮತ್ತು ಪತಿಯ ಮರಣದ ನಂತರ ಇವುಗಳಿಂದಾಗಿ ಆಕೆ ಬದುಕಿನಲ್ಲಿ ಕುಸಿದುಬೀಳದೆ ಬದುಕನ್ನು ಕಟ್ಟಿಕೊಂಡರು.

ಬದುಕಿನ ಹೋರಾಟದಲ್ಲಿ ಆಕೆಗೆ ಜೊತೆ ನೀಡಿದ್ದು ಎರಡು ಸಂಗತಿಗಳು. ಅವು ಏಕತಾರಿ ಮತ್ತು ಬಾಬಾ ಸಾಹೇಬರು. ಅವರು ಬಾಬಾ ಸಾಹೇಬರ ಪ್ರೀತಿ, ಸಹಾನುಭೂತಿ, ಸ್ಫೂರ್ತಿ ಮತ್ತು ಶಕ್ತಿಯ ಬೆಂಬಲದೊಂದಿಗೆ ಅವರು ಈ ಜಗತ್ತನ್ನು ಎದುರಿಸಿದರು.

ಮನೆ ಮನೆಗೆ ಹೋಗಿ ಹಾಡುವುದು ಮತ್ತು ಭಿಕ್ಷೆ ಬೇಡುವುದರಿಂದ ಹಿಡಿದು, ಇಂದಿನ ಮಹಾರಾಷ್ಟ್ರದಲ್ಲಿ ಸೆಲೆಬ್ರಿಟಿಯಾಗುವವರೆಗಿನ ಅವರ ಪ್ರಯಾಣವು ಗಮನಾರ್ಹವಾದುದು. ಕಳೆದ ಮೂವತ್ತು ವರ್ಷಕ್ಕೂ ಹೆಚ್ಚಿನ ಕಾಲದ ಈ ಪಯಣದಲ್ಲಿ ಏಕತಾರಿ ಅವರೊಡನೆ ಹೆಜ್ಜೆ ಹಾಕಿದೆ.

ವೀಡಿಯೊ ನೋಡಿ: 'ಬಾಬಾ ಸಾಹೇಬರ ಕುರಿತು ಹಾಡುವ ಮೂಲಕ ನನ್ನ ಮಕ್ಕಳ ಬದುಕನ್ನು ಕಟ್ಟಿದೆ'

*****

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಅಜಂತಾ ಗುಹೆಗಳ ಗುಹೆ ಸಂಖ್ಯೆ 17ರಲ್ಲಿ ಏಕತಾರಿಯ ಆರಂಭಿಕ ಉಲ್ಲೇಖವನ್ನು ಕಾಣಬಹುದು. ಗುಹೆಯ ಗೋಡೆಗಳ ಮೇಲೆ ಈ ವಾದ್ಯದ ವರ್ಣಚಿತ್ರವಿದೆ. ಮಹಾರಾಷ್ಟ್ರದಲ್ಲಿ, ಪ್ರತಿಯೊಂದು ಜಾತಿ ಗುಂಪಿಗೂ ಅದರದೇ ಆದ ಆದ್ಯತೆಯ ಸಾಧನವಿದೆ. ಈ ವಾದ್ಯಗಳನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಉದ್ದೇಶಗಳಿಗಾಗಿ ನುಡಿಸಲಾಗುತ್ತದೆ. ಹಲ್ಗಿಯನ್ನು ಮಾಂಗ್ ಸಮುದಾಯ ನುಡಿಸುತ್ತದೆ; ದಕ್ಕಲ್ವಾರ್ ಸಮುದಾಯ ಕಿಂಗ್ರಿ; ಧಂಗರ್ ಸಮುದಾಯ ಗಾಜಿ ಧೋಲ್; ಯಲ್ಲಮ್ಮ(ವ್ವ) ದೇವಿಯ ಅನುಯಾಯಿಗಳಿಂದ ಚೌಂಡಕ್; ಗೋಸಾವಿಯಿಂದ ದವ್ರು; ಮತ್ತು ಮಹಾರ್ ಸಮುದಾಯ ಧೋಲ್ಕಿ ಮತ್ತು ತುಣ್‌ತುಣೆ ನುಡಿಸುತ್ತದೆ.

ಮುಂಬೈ ವಿಶ್ವವಿದ್ಯಾಲಯದ ಇತಿಹಾಸದ ಪ್ರಾಧ್ಯಾಪಕ ಡಾ.ನಾರಾಯಣ್ ಭೋಸಲೆ, ಗೋಸಾವಿ ಸಮುದಾಯವನ್ನು ದಾವ್ರು-ಗೋಸ್ವಾಮಿ ಎಂದು ಕರೆಯಲಾಗುತ್ತದೆ, ಏಕೆಂದರೆ ಅವರಲ್ಲಿ ದಾವ್ರು ವಾದ್ಯವನ್ನು ನುಡಿಸುವ ಸಂಪ್ರದಾಯವಿದೆ. ಮಾತೃಪ್ರಧಾನತೆಯ ಬಗ್ಗೆ ಭಜನೆಗಳನ್ನು ಹಾಡುವ ಭಟ್ ಸಮುದಾಯದವರು ಹಾಡುಗಾರರು. ಅವರು ತುಣ್‌ತುಣೆ ಮತ್ತು ಸಂಬಾಲ್ ನುಡಿಸುತ್ತಾರೆ

ಏಕತಾರಿ ಮತ್ತು ತುಣ್‌ತುಣೆ ಆಕಾರದಲ್ಲಿ ಪರಸ್ಪರ ಹೋಲುತ್ತವೆ. ಆದರೆ ಅವುಗಳ ಧ್ವನಿ, ಅವುಗಳನ್ನು ನುಡಿಸುವ ರೀತಿ ಮತ್ತು ತಯಾರಿಸುವ ಪ್ರಕ್ರಿಯೆಯು ಭಿನ್ನವಾದುದು. ಏಕತಾರಿಯೊಂದಿಗೆ ಭಜನೆಗಳನ್ನು ಹಾಡುವ ಮಹರ್ ಮತ್ತು ಮಾಂಗ್ ಸಮುದಾಯಗಳ ಸಂಪ್ರದಾಯವು ಮೇಲ್ಜಾತಿಗಳಲ್ಲಿ ಕಂಡುಬರುವುದಿಲ್ಲ - ಅಥವಾ ಇದು ಅಪರೂಪ. ವಾದ್ಯಗಳು ಈ ಸಮುದಾಯಗಳ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಇವುಗಳನ್ನು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ದೈನಂದಿನ ಜೀವನದ ವಿವಿಧ ಸಂದರ್ಭಗಳಲ್ಲಿ ನುಡಿಸಲಾಗುತ್ತದೆ.

ಏಕತಾರಿಯ ಬಗ್ಗೆ ಜನಪ್ರಿಯ ಶಾಹಿರ್ ಸಂಭಾಜಿ ಭಗತ್ ಹೇಳುತ್ತಾರೆ: "ಅದರ ಧ್ವನಿ ಮತ್ತು ನೋಟ್‌ಗಳು ದುಃಖದೊಡನೆ ನಿಕಟ ಸಂಬಂಧ ಹೊಂದಿವೆ. 'ಡಿಂಗ್ ನಾಗ್, ಡಿಂಗ್ ನಾಗ್...' ಎಂಬ ಧ್ವನಿ ನೋವನ್ನು ಪ್ರತಿನಿಧಿಸುತ್ತದೆ. ಈ ನೋಟ್‌ಗಳು ಭಾರತೀಯ ಶಾಸ್ತ್ರೀಯ ಸಂಗೀತ ಸಂಪ್ರದಾಯದ ರಾಗ ಭೈರವಿಯಿಂದ ಬಂದಿದ್ದು, ಇದು ದುಃಖವನ್ನು ವ್ಯಕ್ತಪಡಿಸುತ್ತದೆ. ಏಕತಾರಿಯನ್ನು ಕೇಳಿದಾಗ ನಿಮಗೆ ಭೈರವಿಯ ಅನುಭವವಾಗುತ್ತದೆ. ಏಕತಾರಿಯೊಂದಿಗೆ ಹಾಡಲಾಗುವ ಬಹುತೇಕ ಎಲ್ಲಾ ಭಜನೆಗಳನ್ನು ಭೈರವಿಯಲ್ಲಿ ಸಂಯೋಜಿಸಲಾಗಿದೆ. ಇದು ಭೈರವಿಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ."

ಹಿಂದೂ ಧರ್ಮದ ಭಕ್ತಿ ಸಂಪ್ರದಾಯವು ಎರಡು ಶಾಖೆಗಳನ್ನು ಹೊಂದಿದೆ: ಸಗುಣ್ [ದೇವತೆಗೆ ಒಂದು ರೂಪವಿದೆ] ಮತ್ತು ನಿರ್ಗುಣ್ [ಅಲ್ಲಿ ದೇವತೆಗೆ ಸ್ಪಷ್ಟವಾದ ರೂಪವಿಲ್ಲ]. ದೇವತೆಯ ವಿಗ್ರಹ ಮತ್ತು ದೇವಾಲಯವು ಸಗುಣ್ ಸಂಪ್ರದಾಯದ ಕೇಂದ್ರಬಿಂದುವಾಗಿದೆ. ಆದರೆ, ನಿರ್ಗುಣಕ್ಕೆ, ದೇವಾಲಯ ಅಥವಾ ವಿಗ್ರಹಕ್ಕೆ ಸ್ಥಳವಿಲ್ಲ.‌ ಈ ಮಾರ್ಗದ ಅನುಯಾಯಿಗಳು ಭಜನೆ ಹಾಡುತ್ತಾರೆ. ಅವರಿಗೆ, ಸಂಗೀತವು ಆರಾಧನೆಯಾಗಿದೆ, ಮತ್ತು ಅವರು ಅದನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ ತಮ್ಮ ದೇವರು / ದೇವತೆಯನ್ನು ಪೂಜಿಸುತ್ತಾರೆ. ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಮೊದಲು, ಮಹಾರಾಷ್ಟ್ರದ ಮಹರ್ ಜನರು ಕಬೀರ್ ಮತ್ತು ಧಗೋಜಿ-ಮೆಘೋಜಿಯ ಅನುಯಾಯಿಗಳಾಗಿದ್ದರು.

आकाश पांघरुनी
जग शांत झोपलेले
घेऊन एकतारी
गातो कबीर दोहे

ನೀಲಾಗಸದಡಿ ಜಗತ್ತು ಮೈಮರೆತು ಮಲಗಿದೆ
ಕಬೀರ ತನ್ನ ಏಕತಾರಿ ಹಿಡಿದು ದೋಹೆ [ದ್ವಿಪದಿ] ಹಾಡುತ್ತಿದ್ದಾನೆ

ಕಬೀರರ ಎಲ್ಲಾ ಭಜನೆಗಳನ್ನು ಏಕತಾರಿಯ ಸಂಗೀತದಲ್ಲಿ ಹಾಡಲಾಗುತ್ತದೆ. ಕಬೀರರ ಶ್ರಮ ಮತ್ತು ಜೀವನ ಅನುಭವಗಳು, ತತ್ವಶಾಸ್ತ್ರ ಮತ್ತು ವಿಶ್ವ ದೃಷ್ಟಿಕೋನವನ್ನು ಈ ಹಾಡುಗಳಲ್ಲಿ ಕಾಣಬಹುದು.

ವೀಡಿಯೊ ವೀಕ್ಷಿಸಿ: 'ಏಕತಾರಿ ಬಳಸಿ ಯಾವುದೇ ಹಾಡನ್ನು ಹಾಡಬಹುದು'

ಕಬೀರ್ ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವ ಜನರಿಗೆ ಆಧ್ಯಾತ್ಮಿಕ ಮತ್ತು ಸಂಗೀತ ಸ್ಫೂರ್ತಿಯಾಗಿದ್ದಾರೆ. ಅಲೆಮಾರಿ ಸಮುದಾಯಗಳು ಮತ್ತು ಅನಿವಾಸಿ ಗಾಯಕರು, ಕೈಯಲ್ಲಿ ಏಕತಾರಿಯನ್ನು ಹಿಡಿದು, ಅವರ ಸಂದೇಶವನ್ನು ದೇಶಾದ್ಯಂತ ಹರಡಿದ್ದಾರೆ. ಕಬೀರ ವಿದ್ವಾಂಸರಾದ ಪುರುಷೋತ್ತಮ್ ಅಗರವಾಲ್ ಹೇಳುವಂತೆ ಕಬೀರರ ಪ್ರಭಾವ ಹಿಂದಿ ಮಾತನಾಡುವ ಪ್ರದೇಶಗಳು ಮತ್ತು ಪಂಜಾಬಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಒಡಿಯಾ ಮತ್ತು ತೆಲುಗು ಮಾತನಾಡುವ ಪ್ರದೇಶಗಳು ಮತ್ತು ಗುಜರಾತ್ ಮತ್ತು ಮಹಾರಾಷ್ಟ್ರವನ್ನು ಸಹ ತಲುಪಿದ್ದರು.

1956ಕ್ಕೂ ಮೊದಲು ಮಹಾರಾಷ್ಟ್ರ ಮತ್ತು ಅದರ ಗಡಿಯುದ್ದದ ಆಂಧ್ರ, ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶಗಳಲ್ಲಿ 'ಅಸ್ಪೃಶ್ಯರು' ಎಂದು ಪರಿಗಣಿಸಲ್ಪಟ್ಟ ಮಹರ್ ಮತ್ತು ಇತರ ಸಮುದಾಯಗಳು ಕಬೀರರ ಅನುಯಾಯಿಗಳಾಗಿದ್ದವು. ಅವರು ಕಬೀರಪಂಥಿ. ಮಹಾರಾಷ್ಟ್ರದ ವಿದ್ವಾಂಸ ಸಂತ ತುಕಾರಾಮ ಕಬೀರರಿಂದ ಪ್ರಭಾವಿತನಾಗಿದ್ದರು. ಕಬೀರರ ಪ್ರಭಾವ ಮತ್ತು ಕಬೀರಪಂಥಿ ಸಂಪ್ರದಾಯವು ಈ ಸಮುದಾಯಗಳ ನಡುವೆ ಏಕತಾರಿಯನ್ನು ತಂದಿತು ಎಂದು ನಂಬಲಾಗಿದೆ.

ದಲಿತ ಕುಟುಂಬಗಳು, ವಿಶೇಷವಾಗಿ ಮಹಾರ್ ಮತ್ತು ಇತರ ಐತಿಹಾಸಿಕವಾಗಿ ಅಸ್ಪೃಶ್ಯ ಸಮುದಾಯಗಳು ಏಕತಾರಿಯೊಂದಿಗೆ ಹಾಡುವ ಅಭ್ಯಾಸವನ್ನು ಅನುಸರಿಸುತ್ತವೆ. ಈ ಉಪಕರಣವು ಇಂದಿಗೂ ಬಳಕೆಯಲ್ಲಿದೆ. ಕುಟುಂಬದಲ್ಲಿ ಸಾವು ಸಂಭವಿಸಿದಾಗ ಅವರು ಏಕತಾರಿಯಲ್ಲಿ ಭಜನೆಗಳನ್ನು ಹಾಡುತ್ತಾರೆ. ಮಹಾರ್ ಸಮುದಾಯವು ಕಬೀರರ ತತ್ವಗಳನ್ನು ವಿವರಿಸುವ ಭಜನೆಗಳನ್ನು ಹಾಡುತ್ತದೆ. ಜೀವನದ ಫಲಪ್ರದತೆ, ಅದರ ಅಭಿವ್ಯಕ್ತಿ, ಸತ್ಕಾರ್ಯಗಳ ಪ್ರಾಮುಖ್ಯತೆ ಮತ್ತು ಸಾವಿನ ಖಚಿತತೆಯು ಕಬೀರರ ಲೋಕದೃಷ್ಟಿಯ ಆಧಾರವಾಗಿದೆ, ಇದನ್ನು ಅವರು ತಮ್ಮ ದೋಹೆ (ದ್ವಿಪದಿಗಳು) ಮತ್ತು ಭಜನೆಗಳ ಮೂಲಕ ವಿವರಿಸಿದರು. [ಭಕ್ತಿ ಯುಗದ] ಕಬೀರ್, ನಾಥ್ ಮತ್ತು ವಾರ್ಕರಿ ಪಂಥಗಳಿಗೆ ಸೇರಿದ ನೂರಾರು ಹಾಡುಗಳನ್ನು ಕಡೂಬಾಯಿ ಹಾಡುತ್ತಾರೆ.

ಕಬೀರರ 'ಗಗನ್ ಮೇ ಆಗ್ ಲಗಿ ಹೈ ಭಾರಿ[ಆಕಾಶದಲ್ಲಿ ಕಾಳ್ಗಿಚ್ಚು ಹಬ್ಬಿದೆ]' ಹಾಡನ್ನು ಕಡೂಬಾಯಿ ಹಾಡುತ್ತಾರೆ.
ಮತ್ತು ತುಕಾರಾಮರ ಒಂದು ಅಭಂಗ್:

विठ्ठला तुझे धन अपार
करीन नामाचा या गजर
धन चोरला दिसत नाही

डोळे असून ही शोधत राही

ಓ ವಿಠ್ಠಲ, ನಿನ್ನ ಹೆಸರಿನ ಸಿರಿವಂತಿಕೆ ಅಪರಿಮಿತ
ನಿನ್ನ ನಾಮ ಪಠಿಸುವೆ ನಾನು!
ಕಳ್ಳ ಇದನ್ನು ನೋಡಲಾರ
ಕಣ್ಣ ಮುಂದೆಯೇ ಇದ್ದರೂ ಅವ ಹುಡುಕುತ್ತಲೇ ಇರುವ

ಕಡೂಬಾಯಿಯಂತಹ ಅನೇಕರು ಅಂತಹ ರಚನೆಗಳನ್ನು ಹಾಡುತ್ತಿದ್ದರಾದರೂ, ಡಾ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಚಳವಳಿಯ ಹೆಚ್ಚುತ್ತಿರುವ ಪ್ರಭಾವದಿಂದಾಗಿ ಅವರು ಇತರ ಹಾಡುಗಳನ್ನು ಹಾಡಲು ಪ್ರಾರಂಭಿಸಿದರು.

ಕಬೀರರ ಭಜನೆಗಳನ್ನು ಏಕತಾರಿಯೊಂದಿಗೆ ವಿವಿಧ ಸ್ಥಳಗಳಿಗೆ ಕೊಂಡೊಯ್ದ ಮಧ್ಯಪ್ರದೇಶದ ಪ್ರಸಿದ್ಧ ಗಾಯಕ ಪ್ರಹ್ಲಾದ್ ಸಿಂಗ್ ತಿಪಾನಿಯಾ ಅವರು ಬಲಾಯಿ ಜಾತಿ ಗುಂಪಿಗೆ ಸೇರಿದವರು. ಈ ಸಮುದಾಯದ ಸ್ಥಾನಮಾನವು ಮಹಾರಾಷ್ಟ್ರದ ಮಹರ್ ಸಮುದಾಯವನ್ನು ಹೋಲುತ್ತದೆ. ಬಲಾಯಿಗಳು ಮಧ್ಯಪ್ರದೇಶದ ಬುರ್ಹಾನ್ಪುರ, ಮಾಲ್ವಾ ಮತ್ತು ಖಾಂಡ್ವಾ ಪ್ರದೇಶಗಳಲ್ಲಿ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ನೆಲೆಸಿದ್ದಾರೆ. ಡಾ. ಅಂಬೇಡ್ಕರ್ ಅವರು ದಲಿತರು ಎದುರಿಸುತ್ತಿರುವ ಜಾತಿ ದೌರ್ಜನ್ಯಗಳನ್ನು ವಿಸ್ತೃತವಾಗಿ ವಿವರಿಸಿದಾಗ, ಅವರು ಬಲಾಯಿ ಸಮುದಾಯದ ಉದಾಹರಣೆಗಳನ್ನು ಉಲ್ಲೇಖಿಸಿದ್ದರು. ನಾವು ಹಳ್ಳಿಗಳ ಕಂದಾಯ ದಾಖಲೆಗಳನ್ನು ಪರಿಶೀಲಿಸಿದರೆ, ಸುಮಾರು ನೂರು ವರ್ಷಗಳ ಹಿಂದೆ, ನಿವಾಸಿಗಳನ್ನು ರಕ್ಷಿಸಲು, ಭೂಮಿಯನ್ನು ಅಳೆಯಲು ಸಹಾಯ ಮಾಡಲು ಮತ್ತು ಸಂಬಂಧಿಕರಿಗೆ ಮರಣದ ಸುದ್ದಿಗಳನ್ನು ಕೊಂಡೊಯ್ಯಲು ಮಹರ್‌ ಜನರನ್ನು ಊರು ನೇಮಿಸಿಕೊಂಡಿತ್ತು ಎನ್ನುವುದನ್ನು ಕಾಣಬಹುದು. ಇದು ಸಮಾಜದಲ್ಲಿ ಅವರ ಪಾತ್ರವಾಗಿತ್ತು. ಮಧ್ಯಪ್ರದೇಶದಲ್ಲಿ, ಅದೇ ಕಾರ್ಯಗಳನ್ನು ಬಲಾಯಿ ಸಮುದಾಯಕ್ಕೆ ವಹಿಸಲಾಗಿತ್ತು - ಗ್ರಾಮದ ಕಾವಲುಗಾರನನ್ನು ಬಲಾಯಿ ಎಂದು ಕರೆಯಲಾಗುತ್ತಿತ್ತು. ಬ್ರಿಟೀಷರ ಕಾಲದಲ್ಲಿ ಅದೇ ಜಾತಿಗೆ ಮಹರ್ ಎಂದು ಹೆಸರಿಡಲಾಯಿತು. ಈ ರೂಪಾಂತರವು ಹೇಗೆ ಸಂಭವಿಸಿತು? ಖಾಂಡ್ವಾ ಮತ್ತು ಬುರ್ಹಾನ್ಪುರದ ಬ್ರಿಟಿಷ್ ಆಡಳಿತವು ಮಧ್ಯಪ್ರದೇಶದ ಬಲಾಯಿ ಮತ್ತು ಮಹಾರಾಷ್ಟ್ರದ ಮಹರ್ ಒಂದೇ ಆಗಿರುವುದನ್ನು ಗಮನಿಸಿತ್ತು - ಅವರ ಜೀವನ ವಿಧಾನ, ಪದ್ಧತಿಗಳು, ಸಾಮಾಜಿಕ ಆಚರಣೆಗಳು ಮತ್ತು ಕೆಲಸವೂ ಒಂದೇ ಆಗಿತ್ತು. ಆದ್ದರಿಂದ, ಮಧ್ಯಪ್ರದೇಶದಲ್ಲಿ ಮಹರ್ ಜಾತಿಗೆ ಸೇರಿದವರನ್ನು ಬಲಾಯಿ ಎಂದು ಘೋಷಿಸಲಾಯಿತು. 1942-43ರಲ್ಲಿ ಅವರ ಜಾತಿಯನ್ನು ಮತ್ತೆ ಮಹರ್ ಎಂದು ಕಾಗದದ ಮೇಲೆ ದಾಖಲಿಸಲಾಯಿತು. ಇದು ಬಲಾಯಿಗಳ ಕಥೆ.

*****

PHOTO • Imaad ul Hasan

ಕಡೂಬಾಯಿ ಇಂದು ಮಹಾರಾಷ್ಟ್ರದಲ್ಲಿ ಸೆಲೆಬ್ರಿಟಿಯಾಗಿದ್ದಾರೆ. ಏಕತಾರಿ 30 ವರ್ಷಗಳಿಗಿಂತ ಹೆಚ್ಚು ಕಾಲದ ಅವರ ಒಡನಾಡಿ

ಪ್ರಹ್ಲಾದ್ ಸಿಂಗ್ ತಿಪಾನಿಯಾ ಮತ್ತು [ ಕಬೀರ್ ಯೋಜನೆಯ ] ಶಬ್ನಮ್ ವಿರ್ಮಾನಿ ಅವರು ಕಬೀರ್ ಭಜನೆಗಳನ್ನು ಹಾಡುವಾಗ ಏಕತಾರಿ ಬಳಸಿ ಹಾಡುತ್ತಾರೆ.

ಏಕತಾರಿ ವಾದ್ಯವು ದೇಶದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ - ಭಜನಾ ಗಾಯಕರು ಮತ್ತು ಅಲೆಮಾರಿ ಕಲಾವಿದರೊಂದಿಗೆ. ಸುಮಾರು 100-120 ಸೆಂಟಿಮೀಟರ್ ಉದ್ದವಿರುವ ಏಕತಾರಿ ಅನೇಕ ಹೆಸರುಗಳನ್ನು ಹೊಂದಿದೆ. ಕರ್ನಾಟಕದಲ್ಲಿ, ಇದನ್ನು ಏಕನಾದ ಎಂದು ಕರೆಯಲಾಗುತ್ತದೆ; ಪಂಜಾಬಿನಲ್ಲಿ ತುಂಬಿ; ಬಂಗಾಳದಲ್ಲಿ ಬೌಲ್; ಮತ್ತು ನಾಗಾಲ್ಯಾಂಡ್ ನಲ್ಲಿ ತತಿ. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಇದನ್ನು ಬುರ್ರಾ ವೀಣೆ ಎಂದು ಕರೆಯಲಾಗುತ್ತದೆ. ಛತ್ತೀಸಗಢದ ಆದಿವಾಸಿಗಳು ತಮ್ಮ ಸಂಗೀತ ಮತ್ತು ನೃತ್ಯದಲ್ಲಿ ಏಕತಾರಿಯನ್ನು ಬಳಸುತ್ತಾರೆ.

ಖಂಡವನ್ನು ತೆಗೆದು, ಒಣಗಿದ ಕುಂಬಳಕಾಯಿಯನ್ನು ಏಕ್ತಾರಿಯಲ್ಲಿ ಅನುರಣಕವಾಗಿ ಬಳಸಲಾಗುತ್ತದೆ. ಚರ್ಮದ ತುಂಡು ಅನುರಣಕದ ಕಿರಿದಾದ ಬಾಯಿಯನ್ನು ಮುಚ್ಚುತ್ತದೆ. ಟೊಳ್ಳಾದ ವೇಲು [ಒಂದು ರೀತಿಯ ಬಿದಿರು] ವನ್ನು ಅನುರಣಕದಲ್ಲಿ ಸೇರಿಸಲಾಗುತ್ತದೆ. ಕೆಳಭಾಗದಲ್ಲಿ ಸೋರೆ ಬುರುಡೆಯೊಂದನ್ನು ಕಟ್ಟಲಾಗುತ್ತದೆ. ವೇಲುವಿನ ಆ ತುದಿಯಿಂದ ಈ ತುದಿಗೆ ತಂತಿಯೊಂದನ್ನು ಬಿಗಿಯಲಾಗುತ್ತದೆ. ಆ ತಂತಿಯನ್ನು ತೋರುಬೆರಳು ಅಥವಾ ನಡುಬೆರಳಿನಿಂದ ನುಡಿಸಲಾಗುತ್ತದೆ.

ಏಕತಾರಿ [one-string drone lute] ತಯಾರಿಸುವ ವಿನ್ಯಾಸ ಮತ್ತು ಪ್ರಕ್ರಿಯೆಯು ಇತರ ತಂತಿ ವಾದ್ಯಗಳಿಗಿಂತ ಸರಳವಾದುದು. ಕುಂಬಳಕಾಯಿ, ಮರ, ಬಿದಿರು ಮತ್ತು ದಾರ ಸುಲಭವಾಗಿ ಲಭ್ಯವಿದೆ. ಕುಂಬಳಕಾಯಿಯನ್ನು ಅತ್ಯುತ್ತಮ ಅನುರಣಕವೆಂದು ಪರಿಗಣಿಸಲಾಗಿದೆ. ಇದನ್ನು ಆಫ್ರಿಕನ್ ವಾದ್ಯಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ. ಏಕತಾರಿ ಮೂಲ ನೋಟ್ ಮತ್ತು ಮೂಲ ಲಯವನ್ನು ಸಹ ಒದಗಿಸುತ್ತದೆ. ಗಾಯಕರು ತಮ್ಮ ಧ್ವನಿಯನ್ನು ಟ್ಯೂನ್ ಮಾಡಬಹುದು, ಮತ್ತು ಹಾಡನ್ನು ಧ್ವನಿಗೆ ವೇಗಗೊಳಿಸಬಹುದು. ಇದೊಂದು ಪ್ರಾಚೀನ, ಸ್ಥಳೀಯ ವಾದ್ಯ. ಆರಂಭದಲ್ಲಿ, ತಂತಿಯನ್ನು ಪ್ರಾಣಿಗಳ ಚರ್ಮದ ಒಳಪದದಿಂದ ತಯಾರಿಸಲಾಗುತ್ತಿತ್ತು. ಕರ್ನಾಟಕದಲ್ಲಿ, ಯಲ್ಲಮ್ಮನ ಪೂಜೆಯಲ್ಲಿ ಚರ್ಮದ ದಾರ ಹೊಂದಿರುವ ಏಕತಾರಿಯನ್ನು ಈಗಲೂ ನುಡಿಸಲಾಗುತ್ತದೆ. ಇದನ್ನು ಜುಂಬಾರುಕ್ ಎಂದು ಕರೆಯಲಾಗುತ್ತದೆ. ಚರ್ಮದ ದಾರವು ಚರ್ಮದ ತಳಕ್ಕೆ ವಿರುದ್ಧವಾಗಿ ಪ್ರತಿಧ್ವನಿಸಿದಾಗ ಮೊಟ್ಟಮೊದಲ ನೋಟ್ ಮತ್ತು ಮೊದಲ ಲಯವನ್ನು ರಚಿಸಲಾಯಿತು ಎಂದು ನಾವು ಹೇಳಬಹುದು. ಮತ್ತು ಅದು, ಮೊದಲ ಸಂಗೀತ ವಾದ್ಯವಾಗಿತ್ತು. ಕೃಷಿ ಸಮಾಜದಲ್ಲಿ ಲೋಹವನ್ನು ಆವಿಷ್ಕರಿಸಿದ ನಂತರ ಲೋಹದ ತಂತಿಗಳನ್ನು ಬಳಸಲಾಯಿತು. ಪ್ರಪಂಚದಾದ್ಯಂತ, ಅನೇಕ ಏಕ-ತಂತಿ ವಾದ್ಯಗಳನ್ನು ಕಂಡುಹಿಡಿಯಲಾಯಿತು ಮತ್ತು ನುಡಿಸಲಾಯಿತು. ಬೀದಿ ಸಂಗೀತಗಾರರು ಮತ್ತು ಅಲೆಮಾರಿಗಳು ರಚಿಸಿದ ಮತ್ತು ನುಡಿಸುತ್ತಿದ್ದ ವಾದ್ಯಗಳು ಸಹ ಅವರ ಜೀವನ ವಿಧಾನದೊಂದಿಗೆ ನಿಕಟ ಸಂಬಂಧ ಹೊಂದಿದ್ದವು.

ಭಾರತದಲ್ಲಿ ಭಕ್ತಿ ಚಳುವಳಿಯ ಸಂತರು ಮತ್ತು ಕವಿಗಳು ಏಕತಾರಿಯನ್ನು ವ್ಯಾಪಕವಾಗಿ ಬಳಸುತ್ತಿದ್ದರು ಎಂದು ನಂಬಲಾಗಿದೆ. ಆದರೆ, ಐತಿಹಾಸಿಕವಾಗಿ, ಇದು ಪೂರ್ತಿಯಾಗಿ ನಿಜವಲ್ಲ. ಕಬೀರ್, ಮೀರಾಬಾಯಿ ಮತ್ತು ಕೆಲವು ಸೂಫಿ ಸಂತರು ಹಾಡುವಾಗ ಏಕತಾರಿಯನ್ನು ಬಳಸಿದ್ದಾರೆ ಎನ್ನುವುದು ನಮಗೆ ತಿಳಿದಿದೆ, ಆದರೆ ಮಹಾರಾಷ್ಟ್ರದಲ್ಲಿ, ನಾಮದೇವನಿಂದ ತುಕಾರಾಮ್ ತನಕ ಅನೇಕ ಕವಿ-ಸಂತರು ತಾಲ್ (ತಾಳ), ಚಿಪ್ಲಿ (ಲೋಹದ ತಟ್ಟೆಗಳನ್ನು ಹೊಂದಿರುವ ಮರದ ಕೈತಾಳ) ಮತ್ತು ಮೃದಂಗವನ್ನು ಬಳಸಿದ್ದಾರೆ. ಅನೇಕ ರೇಖಾಚಿತ್ರಗಳು ಮತ್ತು ಚಿತ್ರಗಳಲ್ಲಿ, ಸಂತರು ತಮ್ಮ ಕೈಯಲ್ಲಿ ವೀಣೆಯನ್ನು ಹಿಡಿದಿರುವುದನ್ನು ತೋರಿಸಲಾಗಿದೆ.

ಮರಾಠಿ ವಿಶ್ವಕೋಶವು ಹೀಗೆ ಹೇಳುತ್ತದೆ: "ವೀಣೆಯು ಭಾರತೀಯ ಸಂಗೀತದಲ್ಲಿ ಬಳಸಲಾಗುವ ಪ್ರಾಚೀನ ತಂತಿ ವಾದ್ಯವಾಗಿದೆ. ವೈದಿಕ ಮಂತ್ರಗಳನ್ನು ಪಠಿಸುವಾಗ ನೋಟ್‌ಗಳನ್ನು ಎಣಿಸಲು ಇದನ್ನು ಬಳಸಲಾಗುತ್ತಿತ್ತು. ನಾಮದೇವ ಮತ್ತು ತುಕಾರಾಮರಂತಹ ಸಂತರ ಚಿತ್ರಗಳಲ್ಲಿ ನಾವು ಇದನ್ನು ನೋಡುತ್ತೇವೆಯಾದರೂ, ತುಕಾರಾಮನು ಬರೆದ ಯಾವುದೇ ಅಭಂಗಿನಲ್ಲಿ ಅದರ ಉಲ್ಲೇಖವನ್ನು ನಾವು ಕಾಣುವುದಿಲ್ಲ. ಆದರೆ ಇತರ ವಾದ್ಯಗಳ ಹಲವಾರು ಉಲ್ಲೇಖಗಳನ್ನು ನಾವು ಕಾಣುತ್ತೇವೆ: ತಾಳ, ಕೈತಾಳ ಮತ್ತು ಮೃದಂಗ.

ವೀಣೆ ಹಿಡಿದಿರುವ ಸಂತ ತುಕಾರಾಮನ ಚಿತ್ರವು ಬ್ರಾಹ್ಮಣ ಪ್ರತಿನಿಧಿಯಾಗಿದೆ ಎಂದು ನಾವು ಹೇಳಬಹುದು.

ವೀಡಿಯೊ ವೀಕ್ಷಿಸಿ: 'ವಾಮನ್‌ ದಾದಾ ಪ್ರತಿಭೆಗೆ ಯಾರೂ ಸರಿಸಾಟಿಯಿಲ್ಲ'

ಜನರ ದೈನಂದಿನ ಜೀವನದ ಭಾಗವಾಗಿರುವ ಅಂಶಗಳನ್ನು ಬ್ರಾಹ್ಮಣವಾದಿ ಚಿಂತನೆಯು ಯಾವಾಗಲೂ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ರೀತಿಯಾಗಿ ದೇವತೆಗಳು, ಸಾಂಸ್ಕೃತಿಕ ಆಚರಣೆಗಳು ಮತ್ತು ಜನಸಾಮಾನ್ಯರ ಇತರ ಸಂವೇದನೆಗಳನ್ನು ಬ್ರಾಹ್ಮಣ ಸಂಪ್ರದಾಯದ ಅಡಿಯಲ್ಲಿ ಪ್ರತಿಪಾದಿಸಲಾಗಿದೆ, ಹೀಗೆ ಮಾಡುವಾಗ ಅವುಗಳ ಮೂಲ ಸ್ವರೂಪ ಮತ್ತು ಪಾತ್ರವನ್ನು ಬದಲಾಯಿಸಲಾಗುತ್ತದೆ. ಬ್ರಿಟಿಷರು ಭಾರತವನ್ನು ವಶಪಡಿಸಿಕೊಂಡಾಗ, ಪೇಶ್ವೆಗಳ ಪತನದ ನಂತರ ಬ್ರಾಹ್ಮಣ ವ್ಯವಸ್ಥೆಯು ತನ್ನ ಅಧಿಕಾರವನ್ನು ಕಳೆದುಕೊಂಡಿತು. ಸಮಾಜದಲ್ಲಿ ಆ ಸ್ಥಾನಮಾನದ ನಷ್ಟವನ್ನು ಸರಿದೂಗಿಸಲು, ಬ್ರಾಹ್ಮಣರು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಆಡಳಿತವನ್ನು ಸ್ಥಾಪಿಸಿದರು. ಮತ್ತು, ಆ ಪ್ರಕ್ರಿಯೆಯಲ್ಲಿ, ಕಾರ್ಮಿಕ ವರ್ಗಗಳಿಗೆ ಸೇರಿದ ಅನೇಕ ಕಲಾ ಪ್ರಕಾರಗಳು ಮತ್ತು ಸಂಗೀತ ವಾದ್ಯಗಳನ್ನು ಈ ಉದಯೋನ್ಮುಖ ಸಾಂಸ್ಕೃತಿಕ ಅಧಿಕಾರ ಕೇಂದ್ರಗಳು ಸ್ವಾಧೀನಪಡಿಸಿಕೊಂಡವು.

ದುಡಿಯುವ ವರ್ಗವು ಈ ಕಲೆಗಳು ಮತ್ತು ವಾದ್ಯಗಳ ಮೇಲೆ ತನ್ನ ಮಾಲೀಕತ್ವ ಮತ್ತು ಸರಿಯಾದ ನಿಯಂತ್ರಣವನ್ನು ಕಳೆದುಕೊಂಡಿತು, ಮತ್ತು ಅಂತಿಮವಾಗಿ, ಅವುಗಳನ್ನು ರಚಿಸಿದ ಜನರನ್ನು ಕಲೆ ಮತ್ತು ಸಂಗೀತದ ಕ್ಷೇತ್ರಗಳಿಂದ ಹೊರಹಾಕಲಾಯಿತು.

ವಾರ್ಕರಿ ಸಂಪ್ರದಾಯದಲ್ಲಿ ಬಳಸಲಾಗುವ ಮೃದಂಗವು ಚರ್ಮದಿಂದ ತಯಾರಿಸಿದ ದ್ರಾವಿಡ ವಾದ್ಯವಾಗಿದ್ದು, ಇದನ್ನು ದಕ್ಷಿಣ ಭಾರತದ ಅಸ್ಪೃಶ್ಯರು ತಯಾರಿಸುತ್ತಾರೆ. ಮತ್ತೊಂದೆಡೆ, ಭಾಗವತ ಸಂಪ್ರದಾಯಕ್ಕೆ ಸೇರಿದ ವೀಣೆ, ಇದನ್ನು ಉತ್ತರ ಭಾರತದಲ್ಲಿ ಹೆಚ್ಚು ಅನುಸರಿಸುತ್ತಾರೆ. ಈ ಗುಂಪುಗಳು ವೀಣೆಯನ್ನು ವಾರ್ಕರಿ ಪಂಥಕ್ಕೆ ಪರಿಚಯಿಸಿರುವ ಸಾಧ್ಯತೆಯಿದೆ. ಏಕತಾರಿ, ಸಂಬಲ್, ಟಿಮ್ಕಿ, ತುಣ್‌ತುಣೆ ಮತ್ತು ಕಿಂಗ್ರಿ ಭಾರತದ ವಂಚಿತ ಮತ್ತು ತುಳಿತಕ್ಕೊಳಗಾದ ಸಮುದಾಯಗಳು ರಚಿಸಿದ ಸಾಧನಗಳಾಗಿವೆ. ವೀಣೆ, ಸಂತೂರ್ ಮತ್ತು ಸಾರಂಗಿ - ಶಾಸ್ತ್ರೀಯ ಸಂಗೀತದಲ್ಲಿ ಬಳಸುವ ಈ ವಾದ್ಯಗಳು ಪರ್ಷಿಯಾದಲ್ಲಿ ಹುಟ್ಟಿಕೊಂಡವು ಮತ್ತು ಸಿಲ್ಕ್ ರೂಟ್ ಮೂಲಕ ಭಾರತಕ್ಕೆ ಬಂದವು. ಅತ್ಯಂತ ಪ್ರಸಿದ್ಧ ವೀಣಾ ಕಲಾವಿದರು ಪಾಕಿಸ್ತಾನದಲ್ಲಿದ್ದಾರೆ, ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ಸಂಪ್ರದಾಯವು ಅಲ್ಲಿ ಸುರಕ್ಷಿತ ಕೈಯಲ್ಲಿದೆ. ಪಾಕಿಸ್ತಾನದ ಕ್ವೆಟ್ಟಾದಲ್ಲಿ ವೀಣೆ ಮತ್ತು ಸಂತೂರ್‌ನಂತಹ ವಾದ್ಯಗಳನ್ನು ತಯಾರಿಸುವ ಅನೇಕ ಕಲಾವಿದರಿದ್ದಾರೆ, ಇದನ್ನು ಮುಖ್ಯವಾಗಿ ಬ್ರಾಹ್ಮಣ ಶಾಸ್ತ್ರೀಯ ಸಂಗೀತದಲ್ಲಿ ಬಳಸಲಾಗುತ್ತದೆ. ಭಾರತದಲ್ಲಿ, ಕಾನ್ಪುರ, ಅಜ್ಮೀರ್ ಮತ್ತು ಮೀರಜ್‌ನಲ್ಲಿನ ಮುಸ್ಲಿಂ ಕುಶಲಕರ್ಮಿಗಳು ಅವುಗಳನ್ನು ತಯಾರಿಸುತ್ತಾರೆ.

ನಮ್ಮ ದೇಶದಲ್ಲಿ ತುಳಿತಕ್ಕೊಳಗಾದ ಮತ್ತು ಅಂಚಿನಲ್ಲಿರುವ ಸಮುದಾಯಗಳು ಮೂಲತಃ ಚರ್ಮದ ಉಪಕರಣಗಳು ಮತ್ತು ಹಲವಾರು ತಂತಿ ವಾದ್ಯಗಳನ್ನು ಉತ್ಪಾದಿಸಿದವು. ಇವು ಬ್ರಾಹ್ಮಣ ಸಂಪ್ರದಾಯದ ಸಂಗೀತ ಮತ್ತು ಕಲೆಗಳಿಗೆ ಅವರ ಸಾಂಸ್ಕೃತಿಕ ಪರ್ಯಾಯಗಳಾಗಿದ್ದವು. ಬ್ರಾಹ್ಮಣರು ಸಾಂಸ್ಕೃತಿಕ ಬದುಕನ್ನು ಆಳಲು ಶಾಸ್ತ್ರೀಯ ಸಂಗೀತ ಮತ್ತು ನೃತ್ಯವನ್ನು ಬಳಸಿದರು.

*****

ಕಡೂಬಾಯಿಯವರ ಹಾಡುಗಳು ಏಕತಾರಿತೊಡನೆ ಸುಂದರವಾಗಿ ಬೆರೆತಿವೆ. ಈ ವಾದ್ಯವು ಅವರ ಗಾಯನದಲ್ಲಿನ ಸ್ಪಷ್ಟತೆ ಮತ್ತು ಭಾವನಾತ್ಮಕ ಆಳವನ್ನು ಹೊರತರುತ್ತದೆ.

ವಿಲಾಸ್ ಘೋಗರೆ, ಪ್ರಹ್ಲಾದ್ ಶಿಂಧೆ, ವಿಷ್ಣು ಶಿಂಧೆ ಮತ್ತು ಕಡೂಬಾಯಿ ಖಾರತ್ ಅವರಂತಹ ಅಂಬೇಡ್ಕರ್ ಶಾಹಿರ್‌ಗಳು ಬೀದಿಗಳಲ್ಲಿ ಸಂಚರಿಸಿ ತಮ್ಮ ಏಕತಾರಿಯಲ್ಲಿ ಅಂಬೇಡ್ಕರ್ ಗೀತೆಗಳನ್ನು ಹಾಡುತ್ತಾ ಮನೆ ಮನೆಗೆ ತಲುಪಿದ್ದಾರೆ. ಪ್ರಪಂಚದಾದ್ಯಂತದ ಅಲೆಮಾರಿ ಜನರ ಸಾಧನವಾದ ಏಕತಾರಿ ಯಾವಾಗಲೂ ಅವರೊಡನೆ ಪ್ರಯಾಣದಲ್ಲಿರುತ್ತದೆ.

ವೀಡಿಯೊ ನೋಡಿ: 'ನಾನು ಮೂಢನಂಬಿಕೆಗಳನ್ನು ತೊಡೆದುಹಾಕಿದೆ'

ಏಕತಾರಿಯು ಅಸ್ಪೃಶ್ಯರ ಸಂಗೀತ ಪ್ರಪಂಚದ ಅವಿಭಾಜ್ಯ ಅಂಗವಾಗಿರುವಂತೆ, ಅದು ಅವರ ಆಧ್ಯಾತ್ಮಿಕ ವಿಕಸನದಲ್ಲಿ ಬಹಳ ಮುಖ್ಯವಾದ ಸಾಧನವಾಗಿದೆ. ವಿಜ್ಞಾನ ಬೆಳೆದಂತೆ ಮತ್ತು ಹೊಸ ವಾದ್ಯಗಳನ್ನು ಪರಿಚಯವಾಗುತ್ತಿದ್ದಂತೆ, ಜಾನಪದ ಸಂಪ್ರದಾಯಗಳು ಮತ್ತು ಏಕತಾರಿಯಂತಹ ಜಾನಪದ ವಾದ್ಯಗಳನ್ನು ಬದಲಾಯಿಸಲಾಯಿತು. ಕಡೂಬಾಯಿಯೇ ತನ್ನ ಕೈಯಲ್ಲಿ ಏಕತಾರಿ ಹಿಡಿದು ಪ್ರದರ್ಶನ ನೀಡುವ ಕೊನೆಯ ಕಲಾವಿದೆಯಾಗಿರಬಹುದು. ಇತ್ತೀಚಿನ ದಿನಗಳಲ್ಲಿ, ಅಂಬೇಡ್ಕರ್ ಗಾಯಕರಲ್ಲಿ ಏಕತಾರಿಯನ್ನು ತ್ಯಜಿಸಿ, ಬ್ರಾಹ್ಮಣವಾದಿ ಮತ್ತು ಆಧುನಿಕ ಸಂಗೀತ ಬಳಸುವುದು ಹೆಚ್ಚಾಗಿದೆ.

ಜನಪ್ರಿಯ ಮರಾಠಿ ಹಾಡುಗಳಾದ 'ವಾಟ್ ಮಾಝಿ ಬಘ್ತೋಯ್ ರಿಕ್ಷಾವಾಲಾ' ('ರಿಕ್ಷಾಲಾ ನನಗಾಗಿ ಕಾಯುತ್ತಿದ್ದಾನೆ') ರಾಗಗಳಿಗೆ ಅಂಬೇಡ್ಕರ್ ಕುರಿತ ಹೊಸ ಹಾಡುಗಳನ್ನು ಹೊಂದಿಸಲಾಗುತ್ತಿದೆ. ಆಧುನಿಕ ಸಂಗೀತ ಅಥವಾ ವಾದ್ಯಗಳನ್ನು ಬಳಸಬಾರದು ಎಂದಲ್ಲ, ಆದರೆ ಅದು ನಿಮ್ಮ ಶೈಲಿಯು ವಾದ್ಯಕ್ಕೆ ಹೊಂದಿಕೆಯಾಗುತ್ತದೆಯೇ? ತಲುಪಬೇಕಿರುವ ಸಂದೇಶವು ತಲುಪುತ್ತದೆಯೇ? ಇದು ಜನರನ್ನು ತಲುಪುತ್ತಿದೆಯೇ? ಅದು ಏನನ್ನು ಹಾಡಲಾಗುತ್ತಿದೆ ಎಂಬುದರ ಅರ್ಥವನ್ನು ತಿಳಿಸುತ್ತದೆಯೇ? ಇವು ನಿಜವಾದ ಪ್ರಶ್ನೆಗಳು. ಆಧುನಿಕ ವಾದ್ಯಗಳನ್ನು ಮಾನವ ಸಮಾಜದಲ್ಲಿ ರಚಿಸಲಾಗಿದೆ, ಮತ್ತು ಅವುಗಳನ್ನು ನಮ್ಮ ಸಂಗೀತವನ್ನು ಅಭಿವೃದ್ಧಿಪಡಿಸಲು ಬಳಸಬೇಕು. ಆದರೆ ಅಂಬೇಡ್ಕರ್ ಗೀತೆಗಳನ್ನು ಚಲನಚಿತ್ರ ರಾಗಗಳಿಗೆ ಹೊಂದಿಸಲಾಗುತ್ತಿದೆ. ಅವು ಜೋರಾಗಿ, ಗದ್ದಲದಿಂದ ಕೂಡಿರುತ್ತವೆ ಮತ್ತು ಕೇಳಲು ಕಠೋರವಾಗಿರುತ್ತವೆ. ಈ ಹಾಡುಗಳಲ್ಲಿ ಅಸ್ಮಿತೆಯ ಪ್ರತಿಪಾದನೆಯನ್ನು ಹೊರತುಪಡಿಸಿ ಅಂಬೇಡ್ಕರ್ ಅವರ ಆಳವಾದ ತತ್ತ್ವವಿಲ್ಲ. ಪ್ರಜ್ಞೆ ಇಲ್ಲದ ಪ್ರಯೋಗ ಮತ್ತು ತತ್ವಶಾಸ್ತ್ರದ ತಿಳುವಳಿಕೆ ಜನರನ್ನು ನೃತ್ಯ ಮಾಡಲು ಮಾತ್ರ ಮಾಡುತ್ತದೆ. ಅವು ಹೆಚ್ಚು ಕಾಲ ಉಳಿಯುವುದಿಲ್ಲ, ಜನರನ್ನು ತಲುಪುವುದಿಲ್ಲ ಮತ್ತು ಜನರ ಸಾಮೂಹಿಕ ಸ್ಮರಣೆಯ ಭಾಗವಾಗುವುದಿಲ್ಲ.

ಕಡೂಬಾಯಿಯ ಧ್ವನಿಯಲ್ಲಿ ಸಾವಿರಾರು ವರ್ಷಗಳ ಗುಲಾಮಗಿರಿಯ ವಿರುದ್ಧದ ಕೂಗಿದೆ. ಅವರು ತೀವ್ರ ಬಡತನ ಮತ್ತು ಪ್ರತಿಕೂಲತೆಯಿಂದ ಹೊರಬಂದ ಜನರ ಗಾಯಕಿ. ಅವರ ಹಾಡುಗಳು ಜಾತಿ ಮತ್ತು ಧರ್ಮ ಮತ್ತು ಅಸ್ಪೃಶ್ಯತೆ ಮತ್ತು ಗುಲಾಮಗಿರಿಯ ಕ್ರೌರ್ಯ ಮತ್ತು ಅಮಾನವೀಯತೆಯ ಬಗ್ಗೆ ನಮಗೆ ಅರಿವು ಮೂಡಿಸುತ್ತವೆ. ತನ್ನ ಏಕತಾರಿಯಲ್ಲಿ, ಅವರು ತನ್ನ ಕುಟುಂಬ ಮತ್ತು ಸಮುದಾಯದ ಶ್ರೀಮಂತ ಪರಂಪರೆಯನ್ನು ಹೊತ್ತಿದ್ದಾರೆ. ಅವರ ಏಕತಾರಿ ಹಾಡುಗಳು ನಮ್ಮ ಹೃದಯವನ್ನು ಸ್ಪರ್ಶಿಸುತ್ತವೆ.

मह्या भिमाने माय सोन्याने भरली ओटी
किंवा
माझ्या भीमाच्या नावाचं
कुंकू लावील रमाने
अशी मधुर, मंजुळ वाणी
माझ्या रमाईची कहाणी

ನನ್ನ ಭೀಮ ಬದುಕನ್ನು ಬಂಗಾರವಾಗಿಸಿದ
ಅಥವಾ
ನನ್ನ ಭೀಮನ ಹೆಸರಿನಲ್ಲಿ
ರಮಾ ಕುಂಕುಮವಿಟ್ಟುಕೊಂಡಳು
ಬಹಳ ಸವಿ ಮತ್ತು ಇಂಪು ಬೆರೆತ ದನಿ
ಇದು ರಮಾಯಿಯ ಕಥನ

ಈ ಹಾಡಿನ ಮೂಲಕ ಸಾಮಾನ್ಯ ವ್ಯಕ್ತಿಯು ಅಂಬೇಡ್ಕರ್ ಅವರ ತತ್ತ್ವವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಇದು ಅಂಬೇಡ್ಕರ್ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ, ಬದುಕಿನ ದೈನಂದಿನ ಹೋರಾಟಗಳು ಮತ್ತು ನೋವುಗಳು, ಆಳವಾದ ಆಧ್ಯಾತ್ಮಿಕತೆ... ಅಲ್ಲದೆ ಬದುಕಿನ ಕುರಿತು ಆಳವಾದ ತಿಳುವಳಿಕೆ ಕೂಡಾ ಇದರಲ್ಲಿದೆ. ಕೆಲವರು ಮಾತ್ರ ತಮ್ಮ ಧ್ವನಿಯನ್ನು ಬಳಸಿಕೊಂಡು ವ್ಯವಸ್ಥೆಯ ವಿರುದ್ಧ ಬಡಿದಾಡುತ್ತಾ ಅಲೆದಾಡಿದ್ದಾರೆ ಮತ್ತು ಹೋರಾಡಿದ್ದಾರೆ. ಒಂದು ಕಡೆ ಅವರು ಸಾಮಾಜಿಕ ವ್ಯವಸ್ಥೆಯನ್ನು ವಿರೋಧಿಸುತ್ತಾರೆ, ಇದಲ್ಲದೆ, ನಮ್ಮ ಇತಿಹಾಸದ ನೆನಪನ್ನು ಅವರ ಧ್ವನಿಗಳು ಮತ್ತು ಸಾಧನಗಳು ಜೀವಂತವಾಗಿರಿಸುತ್ತವೆ. ಕಡೂಬಾಯಿ ಅವರಲ್ಲಿ ಒಬ್ಬರು.

ಈ ಬರೆಹ ಮೂಲದಲ್ಲಿ ಮರಾಠಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ.

ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಸಹಯೋಗದೊಂದಿಗೆ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ತಮ್ಮ ಆರ್ಕೈವ್ಸ್ ಅಂಡ್ ಮ್ಯೂಸಿಯಂಸ್ ಪ್ರೋಗ್ರಾಂ ಅಡಿಯಲ್ಲಿ ಜಾರಿಗೆ ತಂದ 'ಪ್ರಭಾವಶಾಲಿ ಶಾಹಿರ್‌ಗಳು, ಮರಾಠವಾಡಾದ ನಿರೂಪಣೆಗಳು' ಎಂಬ ಸಂಗ್ರಹದ ಭಾಗವಾಗಿದೆ. ನವದೆಹಲಿಯ ಗೋಥೆ-ಇನ್ಸ್ಟಿಟ್ಯೂಟ್ / ಮ್ಯಾಕ್ಸ್ ಮುಲ್ಲರ್ ಭವನದ ಭಾಗಶಃ ಬೆಂಬಲದಿಂದ ಇದು ಸಾಧ್ಯವಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Keshav Waghmare

କେଶବ ୱାଘମାରେ ମହାରାଷ୍ଟ୍ରର ପୁଣେଠାରେ ଅବସ୍ଥାପିତ ଜଣେ ଲେଖକ ଓ ଗବେଷକ। ସେ ୨୦୧୨ରେ ଗଠିତ ହୋଇଥିବା ଦଳିତ ଆଦିବାସୀ ଅଧିକାର ଆନ୍ଦୋଳନ (ଡିଏଏଏ)ର ଜଣେ ପ୍ରତିଷ୍ଠାତା ସଦସ୍ୟ ଏବଂ ବହୁ ବର୍ଷ ଧରି ମରାଠୱାଡ଼ା ସମ୍ପ୍ରଦାୟକୁ ନେଇ ଅଧ୍ୟୟନ ଜାରି ରଖିଛନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Keshav Waghmare
Illustration : Labani Jangi

ଲାବଣୀ ଜାଙ୍ଗୀ ୨୦୨୦ର ଜଣେ ପରୀ ଫେଲୋ ଏବଂ ପଶ୍ଚିମବଙ୍ଗ ନଦିଆରେ ରହୁଥିବା ଜଣେ ସ୍ୱ-ପ୍ରଶିକ୍ଷିତ ଚିତ୍ରକର। ସେ କୋଲକାତାସ୍ଥିତ ସେଣ୍ଟର ଫର ଷ୍ଟଡିଜ୍‌ ଇନ୍‌ ସୋସିଆଲ ସାଇନ୍ସେସ୍‌ରେ ଶ୍ରମିକ ପ୍ରବାସ ଉପରେ ପିଏଚଡି କରୁଛନ୍ତି।

ଏହାଙ୍କ ଲିଖିତ ଅନ୍ୟ ବିଷୟଗୁଡିକ Labani Jangi
Editor : Vinutha Mallya

ବିନୁତା ମାଲ୍ୟା ଜଣେ ସାମ୍ବାଦିକା ଓ ସମ୍ପାଦିକା। ପୂର୍ବରୁ ସେ ପିପୁଲ୍ସ ଆର୍କାଇଭ୍‌ ଅଫ ରୁରଲ ଇଣ୍ଡିଆର ସମ୍ପାଦକୀୟ ମୁଖ୍ୟ ଥିଲେ।

ଏହାଙ୍କ ଲିଖିତ ଅନ୍ୟ ବିଷୟଗୁଡିକ Vinutha Mallya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

ଏହାଙ୍କ ଲିଖିତ ଅନ୍ୟ ବିଷୟଗୁଡିକ Shankar N. Kenchanuru