ಇಂದು ಫೆಬ್ರವರಿ 26, ಶೈಲಾ ಅವರ 18ನೇ ಹುಟ್ಟುಹಬ್ಬ. ಮುಡಿಯಲ್ಲಿ ಮಲ್ಲಿಗೆ ಹೂ ಮುಡಿದು, ಹೊಸ ಉಡುಗೆ ತೊಟ್ಟಿದ್ದಾರೆ. ತಾಯಿ ಆಕೆಗೆ ಇಷ್ಟವಾದ ಚಿಕನ್ ಬಿರಿಯಾನಿ ಮಾಡಿದ್ದಾರೆ. ಕಾಲೇಜಿನಲ್ಲಿ ಶೈಲಾ ತನ್ನ ಸ್ನೇಹಿತೆಯರಿಗೆ ಸಣ್ಣದೊಂದು ಔತಣವನ್ನೂ ನೀಡಿದ್ದಾರೆ.
ಶೈಲಾ ಚೆನ್ನೈನ ಪ್ರಸಿದ್ಧ ಖಾಸಗಿ ನರ್ಸಿಂಗ್ ಕಾಲೇಜು ಶ್ರೀ ಸಾಸ್ತಾ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ಓದುತ್ತಿದ್ದಾರೆ. ಅವರಿಗೆ ಈ ಆಂಗ್ಲ ಮಾಧ್ಯಮ ಕಾಲೇಜಿನಲ್ಲಿ ಪ್ರವೇಶ ಪಡೆಯುವುದು ಹರಸಾಹಸದಿಂದ ಕೂಡಿತ್ತು. ಅನುಮೋದನೆ ಪಡೆಯುವುದು ಇನ್ನಷ್ಟು ಕಷ್ಟಕರವಾಗಿತ್ತು.
ಆಕೆಯ ತಂದೆ ಐ.ಕಣ್ಣನ್ ಅವರು ಸೆಪ್ಟಿಕ್ ಟ್ಯಾಂಕ್ ಕ್ಲೀನ್ ಮಾಡುವಾಗ ಸಾವನ್ನಪ್ಪಿದ್ದಾರೆಂದು ಇತರ ವಿದ್ಯಾರ್ಥಿಗಳು ತಿಳಿದ ದಿನ, ಅವರ ಮುಂದಿನ ಪ್ರಶ್ನೆ ಅವರ ಜಾತಿಯ ಕುರಿತಾಗಿತ್ತು.
“ಆಗ ಇದ್ದಕ್ಕಿದ್ದಂತೆ ನಮ್ಮ ನಡುವೆ ಗೋಡೆಯೊಂದು ಬೆಳೆದು ನಿಂತಂತೆ ಭಾಸವಾಯಿತು,” ಎನ್ನುತ್ತಾರೆ ಶೈಲಾ.
ಅವರು ಮತ್ತು ಅವರ ತಾಯಿ ಸೆಪ್ಟೆಂಬರ್ 27, 2007ರಂದು ಕಣ್ಣನ್ ಇತರ ಇಬ್ಬರು ಸಹೋದ್ಯೋಗಿಗಳೊಂದಿಗೆ ಸತ್ತಾಗಿನಿಂದ ಆ ಅದೃಶ್ಯ ಗೋಡೆಯನ್ನು ಬಡಿಯುತ್ತಿದ್ದಾರೆ. ಅವರು ಆದಿ ದ್ರಾವಿಡ ಮಾದಿಗ ಸಮುದಾಯದ ಮೇಸ್ತ್ರಿ ಮತ್ತು ಹಮಾಲಿಯಾಗಿದ್ದರು. ಇದು ಪರಿಶಿಷ್ಟ ಜಾತಿಯಾಗಿದ್ದು, ಮುಖ್ಯವಾಗಿ ಕೈಯಿಂದ ಶೌಚ ಗುಂಡಿ ಸ್ವಚ್ಛಗೊಳಿಸುವುದರಲ್ಲಿ ತೊಡಗಿದೆ. ಅವರು ಜನ ಕರೆದಾಗ ಸೆಪ್ಟಿಕ್ ಟ್ಯಾಂಕ್, ಚರಂಡಿ ಸ್ವಚ್ಛಗೊಳಿಸಲು ಹೋಗುತ್ತಿದ್ದರು.
ಶೈಲಾ ಹೇಳುತ್ತಾರೆ, “ಬದುಕೊಂದು ಸುದೀರ್ಘ ಹೋರಾಟವಾಗಿದೆ. ನಾನು ಇಂಗ್ಲಿಷ್ ಭಾಷೆಯನ್ನು ಕರಗತ ಮಾಡಿಕೊಳ್ಳಲು ಶ್ರಮಿಸುತ್ತಿದ್ದೇನೆ. ನನ್ನ ತಂದೆ ನಾನು ವೈದ್ಯಳಾಗಬೇಕೆಂದು ಬಯಸಿದ್ದರು, ಆದರೆ ಅವರಿಲ್ಲದೆ ಅದು ಕಷ್ಟದ ಕನಸಾಗಿತ್ತು. ಬದಲಿಗೆ ನರ್ಸಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದೆ. ನಮ್ಮ ಏರಿಯಾದ ಯಾರೂ ಈ ಕೋರ್ಸ್ ಮಾಡಿಲ್ಲ. ನಾನು ನರ್ಸ್ ಆಗಿ ಆಯ್ಕೆಯಾದರೆ ಅದು ನನ್ನ ತಂದೆಗೆ ಸಲ್ಲುವ ಗೌರವ. ನನಗೆ ಜಾತಿಯಲ್ಲಿ ನಂಬಿಕೆ ಇಲ್ಲ ಮತ್ತು ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಇರಬಾರದು. ನಾನು ಇಡೀ ಜಗತ್ತಿಗೆ ಹೇಳಲು ಬಯಸುವ ಒಂದು ವಿಷಯವೆಂದರೆ ನನ್ನ ತಂದೆಯಂತೆ ಯಾರೂ ಸಾಯಬಾರದು.”
ಶೈಲಾ ಮುಂದುವರೆದು ಹೇಳುತ್ತಾರೆ, “ಕ್ರಮೇಣ, ನಾನು ನನ್ನ ಕಾಲೇಜು ಸ್ನೇಹಿತರೊಂದಿಗೆ ಸಮಾನ ಹೆಜ್ಜೆಯಲ್ಲಿ ಸಂವಹನ ನಡೆಸಲು ಸಾಧ್ಯವಾಯಿತು. ಈಗ ಅವರಲ್ಲಿ ಕೆಲವರು ನನ್ನ ಓದಿಗೆ ಸಹಾಯ ಮಾಡುತ್ತಾರೆ. ನಾನು ತಮಿಳು ಮಾಧ್ಯಮದಲ್ಲಿ ಓದಿದ್ದೇನೆ, ಹೀಗಾಗಿ ನನ್ನ ಇಂಗ್ಲಿಷ್ ಅಷ್ಟು ಚೆನ್ನಾಗಿಲ್ಲ. ಎಲ್ಲರೂ ಇಂಗ್ಲೀಷ್ ಕೋಚಿಂಗ್ ಕ್ಲಾಸ್ ಮಾಡ್ತೀವಿ ಅಂತ ಕೇಳ್ತಾರೆ ಆದ್ರೆ ಫೀಸ್ ಕಟ್ಟಲು ಆಗಲ್ಲ ಅಂತ ನಾನೇ ಕಲಿಯೋ ಪ್ರಯತ್ನ ಮಾಡ್ತಿದ್ದೇನೆ. ನನ್ನ ಪಾಲಿಗೆ ಸೋಲೆನ್ನುವುದು ಎಂದಿಗೂ ಒಂದು ಆಯ್ಕೆಯಲ್ಲ."
ಶೈಲಾ ಅವರು 12ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ದಾಖಲೆ ನಿರ್ಮಿಸಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ. ಆಕೆಯ ಯಶಸ್ಸಿನ ಕಥೆಯನ್ನು ಮಾಧ್ಯಮಗಳು ವರದಿ ಮಾಡಿದವು, ಇದು ನರ್ಸಿಂಗ್ ಶಿಕ್ಷಣಕ್ಕೆ ಹಣಕಾಸಿನ ನೆರವು ಪಡೆಯಲು ಸಹಾಯ ಮಾಡಿತು.
ಇಡೀ ಕಥೆ ನಿಧಾನವಾಗಿ ತೆರೆದುಕೊಳ್ಳತೊಡಗಿತು. ಅವರ ತಾಯಿ, 40 ವರ್ಷದ ನಾಗಮ್ಮ ಕೆ. ಶೈಲಾ ನಾಚಿಕೆ ಸ್ವಭಾವದ ಹುಡುಗಿಯಾಗಿರುವುದರಿಂದ ಇಷ್ಟು ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಕ್ಕೀಡಾಗಿದ್ದರು. ಅವರು ಮಗಳು ಇಷ್ಟು ಮುಕ್ತವಾಗಿ ಮಾತನಾಡುತ್ತಿರುವುದನ್ನು ನೋಡುತ್ತಿರುವುದು ಇದೇ ಮೊದಲು.
ನಾಗಮ್ಮ ತಮ್ಮ ಹೆಣ್ಣುಮಕ್ಕಳು ಸುಖೀ ಭವಿಷ್ಯದ ಕನಸು ಕಾಣುವಂತಾಗಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಅವರ ಕಿರಿಯ ಮಗಳು, 10 ವರ್ಷದ ಕೆ. ಆನಂದಿ 10ನೇ ತರಗತಿ ಓದುತ್ತಿದ್ದಾಳೆ.
ಗಂಡನ ಸಾವಿನ ಸುದ್ದಿ ಕೇಳಿದ ದಿನ ನಾಗಮ್ಮ ಆಘಾತಕ್ಕೊಳಗಾಗಿದ್ದರು. ಆ ಸಮಯದಲ್ಲಿ ಅವರ ತಂದೆ ತಾಯಿ ಅವರನ್ನು ನೋಡಿಕೊಂಡರು. ಆಗ ಶೈಲಾಗೆ ಎಂಟು ವರ್ಷ ಮತ್ತು ಆನಂದಿಗೆ ಕೇವಲ ಆರು ವರ್ಷ, ಮತ್ತು ಇನ್ನೂ ಶಾಲೆಯ ಮುಖವನ್ನು ನೋಡಿರಲಿಲ್ಲ.
“ನಾನು ನನ್ನ ಗಂಡನ ಶವದೊಂದಿಗೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಾಮುರು ಎಂಬ ಹಳ್ಳಿಗೆ ಹೋಗಿದ್ದಾಗಲಿ ಅಥವಾ ಅವರ ಅಂತ್ಯಕ್ರಿಯೆಯನ್ನು ಹೇಗೆ ಮಾಡಲಾಯಿತು ಎನ್ನುವುದಾಗಲಿ ನನಗೆ ನೆನಪಿಲ್ಲ. ನನ್ನ ಮಾವ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ನನಗೆ ಎಲೆಕ್ಟ್ರೋಕನ್ವಲ್ಸಿವ್ ಥೆರಪಿ ಮತ್ತು ಇತರ ಚಿಕಿತ್ಸೆಗಳನ್ನು ನೀಡಲಾಯಿತು, ನಂತರ ನಾನು ಪ್ರಜ್ಞೆಯನ್ನು ಮರಳಿ ಪಡೆದೆ. ನನ್ನ ಪತಿ ನಿಜವಾಗಿಯೂ ಸತ್ತಿದ್ದಾರೆ ಎಂದು ಒಪ್ಪಿಕೊಳ್ಳಲು ನನಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು.”
ಈ ಘಟನೆ ನಡೆದು 10 ವರ್ಷ ಕಳೆದರೂ ನಾಗಮ್ಮ ಪತಿಯ ಸಾವನ್ನು ನೆನೆದು ಕುಸಿದು ಹೋಗುತ್ತಾರೆ. “ನಂತರ ನನ್ನ ಸಂಬಂಧಿಕರು ನನ್ನ ಹೆಣ್ಣುಮಕ್ಕಳಿಗಾಗಿ ಬದುಕಬೇಕು ಎಂದು ಹೇಳಿದರು, ಆ ಕ್ಷಣದಿಂದ ನಾನು ನನ್ನ ಬದುಕಿನ ಹೋರಾಟವನ್ನು ಪ್ರಾರಂಭಿಸಿದೆ. ನನಗೆ ಹತ್ತಿರದ ಕಾರ್ಖಾನೆಯಲ್ಲಿ ನೈರ್ಮಲ್ಯ ನೋಡಿಕೊಳ್ಳುವ ಕೆಲಸ ಸಿಕ್ಕಿತು, ಆದರೆ ನಾನು ಆ ಕೆಲಸವನ್ನು ದ್ವೇಷಿಸುತ್ತೇನೆ. ನನ್ನ ಹೆತ್ತವರು ಸಹ ನೈರ್ಮಲ್ಯ ಕೆಲಸಗಾರರಾಗಿದ್ದರು - ನನ್ನ ತಂದೆ ಸೆಪ್ಟಿಕ್ ಟ್ಯಾಂಕ್ / ಮ್ಯಾನ್‌ಹೋಲ್ ಸ್ವಚ್ಛಗೊಳಿಸುತ್ತಿದ್ದರು ಮತ್ತು ಕಸವನ್ನು ಸಂಗ್ರಹಿಸುತ್ತಿದ್ದರು ಮತ್ತು ನನ್ನ ತಾಯಿ ಗುಡಿಸುತ್ತಿದ್ದರು.
ತಮಿಳುನಾಡಿನಲ್ಲಿನ ಬಹುತೇಕ ನೈರ್ಮಲ್ಯ ಕಾರ್ಮಿಕರು ಆಂಧ್ರಪ್ರದೇಶದವರು; ಅವರು ತೆಲುಗು ಮಾತನಾಡುತ್ತಾರೆ. ತಮಿಳುನಾಡಿನ ಅನೇಕ ಭಾಗಗಳಲ್ಲಿ, ನೈರ್ಮಲ್ಯ ಕಾರ್ಮಿಕರ ಸಮುದಾಯಕ್ಕಾಗಿ ವಿಶೇಷ ತೆಲುಗು ಮಾಧ್ಯಮ ಶಾಲೆಗಳಿವೆ.
ನಾಗಮ್ಮ ಮತ್ತು ಆಕೆಯ ಪತಿ ಮೂಲತಃ ಪಾಮೂರು ಗ್ರಾಮದವರು. ನಾಗಮ್ಮ ಹೇಳುತ್ತಾರೆ, “ನಾನು 1995ರಲ್ಲಿ 18 ವರ್ಷ ವಯಸ್ಸಿನವಳಾಗಿದ್ದಾಗ ನನಗೆ ಮದುವೆಯಾಯಿತು. ನಾನು ಹುಟ್ಟುವ ಮೊದಲೇ ನನ್ನ ಹೆತ್ತವರು ಚೆನ್ನೈಗೆ ಬಂದಿದ್ದರು. ನಾವು ನಮ್ಮ ಮದುವೆಗೆ ಹಳ್ಳಿಗೆ ಹೋದೆವು ಮತ್ತು ಚೆನ್ನೈಗೆ ಹಿಂದಿರುಗುವ ಮೊದಲು ಕೆಲವು ವರ್ಷಗಳ ಕಾಲ ಅಲ್ಲಿಯೇ ಇದ್ದೆವು. ನನ್ನ ಪತಿ ನಿರ್ಮಾಣ ಸ್ಥಳಗಳಲ್ಲಿ ಮೇಸ್ತ್ರಿ ಕೆಲಸ ಮಾಡಲು ಪ್ರಾರಂಭಿಸಿದರು. ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ಯಾರಾದರೂ ಕರೆದರೆ, ಅವರು ಹೋಗುತ್ತಿದ್ದರು. ಆತ ಚರಂಡಿಯಲ್ಲಿ ಕೆಲಸ ಮಾಡುತ್ತಾನೆ ಎಂದು ತಿಳಿದಾಗ ನಾನು ಅದನ್ನು ಬಲವಾಗಿ ವಿರೋಧಿಸಿದೆ. ಅದಾದ ನಂತರ ಈ ಕೆಲಸಕ್ಕೆ ಹೋದಾಗಲೆಲ್ಲ ಈ ಬಗ್ಗೆ ಹೇಳುತ್ತಿರಲಿಲ್ಲ. 2007ರಲ್ಲಿ ಸೆಪ್ಟಿಕ್ ಟ್ಯಾಂಕ್‌ನೊಳಗೆ ಅವರು ಮತ್ತು ಇತರ ಇಬ್ಬರು ಸತ್ತಾಗ, ಯಾರನ್ನೂ ಬಂಧಿಸಲಾಗಿಲ್ಲ; ಅವರ ಹತ್ಯೆಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ದೇಶ ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತದೆ ನೋಡಿ; ನಮ್ಮ ಜೀವನ ಮುಖ್ಯವಲ್ಲ. ನಮಗೆ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ - ಸರ್ಕಾರವಿಲ್ಲ, ಅಧಿಕಾರಿಗಳು ಇಲ್ಲ. ಇದೆಲ್ಲದರ ನಡುವೆ, ಸಫಾಯಿ ಕರ್ಮಾಚಾರಿ ಆಂದೋಲನ (ಎಸ್‌ಕೆಎ) ನನ್ನ ಹಕ್ಕುಗಳಿಗಾಗಿ ಹೇಗೆ ಹೋರಾಡಬೇಕೆಂದು ನನಗೆ ಕಲಿಸಿದೆ. ನಾನು 2013ರಲ್ಲಿ ಚಳವಳಿಯ ಸಂಪರ್ಕಕ್ಕೆ ಬಂದೆ.
ತನ್ನ ಹಕ್ಕುಗಳ ಅರಿವಾದ ನಂತರ ನಾಗಮ್ಮ ಅನ್ಯಾಯದ ವಿರುದ್ಧ ದನಿಯೆತ್ತತೊಡಗಿರು. ಅವರು ತಮ್ಮ ಗಂಡ ಅಥವಾ ಪ್ರೀತಿಪಾತ್ರರನ್ನು ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳಲ್ಲಿ ಕಳೆದುಕೊಂಡ ಇತರ ಮಹಿಳೆಯರನ್ನು ಭೇಟಿಯಾದರು. "ಜೀವನ ಸಂಗಾತಿಯನ್ನು ಗಟಾರದಲ್ಲಿ ಕಳೆದುಕೊಂಡಿರುವುದು ನಾನೊಬ್ಬಳೇ ಅಲ್ಲ, ನನ್ನಂತೆಯೇ ಅದೇ ದುಃಖವನ್ನು ಹೊಂದಿರುವ ನೂರಾರು ಮಹಿಳೆಯರು ಇದ್ದಾರೆ ಎಂದು ತಿಳಿದಾಗ, ನನ್ನ ದುಃಖವನ್ನು ನನ್ನ ಸ್ವಂತ ಶಕ್ತಿಯಾಗಿ ಪರಿವರ್ತಿಸಲು ಪ್ರಾರಂಭಿಸಿದೆ."
ಆ ಶಕ್ತಿಯೇ ನಾಗಮ್ಮನಿಗೆ ಹೌಸ್ ಕೀಪಿಂಗ್ ಬಿಡುವಂತೆ ಮಾಡಿತು. 20,000 ಸಾಲ ಪಡೆದು ತಂದೆ ಹಾಗೂ ಅಖಿಲ ಭಾರತ ಸಂಘಟನೆ ಎಸ್‌ಕೆಎ ನೆರವಿನಿಂದ ಇಂದಿರಾನಗರದಲ್ಲಿರುವ ಮನೆ ಮುಂದೆ ಕಿರಾಣಿ ಅಂಗಡಿ ತೆರೆದರು.
ತನ್ನ ಪತಿಯ ಮರಣದ ನಂತರ, ಪರಿಹಾರಕ್ಕಾಗಿ ಅವರ ಹೋರಾಟವು ಈ 21ನೇ ಶತಮಾನದ ಭಾರತದಲ್ಲಿನ ಜಾತೀಯತೆಯ ಆಳವಾದ ಕಂದಕವನ್ನು ಅವರ ಮುಂದೆ ತೆರೆದಿಟ್ಟಿತು. 2016ರ ನವೆಂಬರ್‌ನಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಅಂತಿಮವಾಗಿ ಅವರಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಿತು, 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ಚರಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸತ್ತವರ ಸಂಬಂಧಿಕರಿಗೆ ಪಾವತಿಸುವುದನ್ನು ಕಡ್ಡಾಯಗೊಳಿಸಿತು. ನಾಗಮ್ಮ ಸಾಲವನ್ನು ತೀರಿಸಿ, ತನ್ನ ಅಂಗಡಿಯಲ್ಲಿ ಇನ್ನೂ ಸ್ವಲ್ಪ ಹಣವನ್ನು ಹೂಡಿ, ಉಳಿದ ಹಣವನ್ನು ಬ್ಯಾಂಕ್‌ನಲ್ಲಿ ತನ್ನ ಹೆಣ್ಣುಮಕ್ಕಳ ಹೆಸರಿನಲ್ಲಿ ಸ್ಥಿರ ಠೇವಣಿ ಖಾತೆ (ಎಫ್‌ಡಿ) ತೆರೆದರು.
ಆನಂದಿ ಹೆಮ್ಮೆಯಿಂದ ಹೇಳುತ್ತಾಳೆ, “ನನ್ನ ತಾಯಿ ನಿರ್ಭೀತ ಮಹಿಳೆ. ಅವಳು ಅನಕ್ಷರಸ್ಥಳಾಗಿರಬಹುದು, ಆದರೆ ಅವಳು ಎಷ್ಟೇ ದೊಡ್ಡವರಾಗಿದ್ದರೂ ಯಾವುದೇ ಅಧಿಕಾರಿಯೊಂದಿಗೆ ಬೇಕಿದ್ದರೂ ಆತ್ಮವಿಶ್ವಾಸದಿಂದ ಮಾತನಾಡುತ್ತಾಳೆ. ಅವಳು ತನ್ನ ಅರ್ಜಿಯನ್ನು ಎಲ್ಲೆಡೆ ಸಲ್ಲಿಸಿದಳು. ಅಧಿಕಾರಿಗಳು ತಮ್ಮ ಕಛೇರಿಗಳನ್ನು ಪ್ರವೇಶಿಸಿದಾಗ, ಅವಳ ವಿಷಯದಲ್ಲಿ ಜಾಗರೂಕರಾಗಿರುತ್ತಿದ್ದರು, ಅವಳು ಗಂಟೆಗಳ ಕಾಲ ಕಾಯುತ್ತಾಳೆ ಮತ್ತು ಅವಳ ಹಕ್ಕುಗಳ ಬಗ್ಗೆ ಅನಂತವಾಗಿ ವಾದಿಸುತ್ತಾಳೆ ಎಂದು ಅವರಿಗೆ ತಿಳಿದಿತ್ತು.”
2007ರಲ್ಲಿ ನನ್ನ ಪತಿ ತೀರಿಕೊಂಡಿದ್ದು, ಸಾಕಷ್ಟು ಹೋರಾಟ ನಡೆಸಿ ಸಂಘಟನೆಯೊಂದರ ನೆರವಿನಿಂದ 2016ರ ಅಂತ್ಯಕ್ಕೆ ಪರಿಹಾರ ಸಿಕ್ಕಿದೆ ಎಂದು ನಾಗಮ್ಮ ಹೇಳುತ್ತಾರೆ. ಸುಪ್ರೀಂ ಕೋರ್ಟ್ 2014ರ ತೀರ್ಪಿನ ಪ್ರಕಾರ ನನಗೆ ಅದೇ ವರ್ಷ ಪರಿಹಾರ ಸಿಗಬೇಕಿತ್ತು. ಆದರೆ ಇಲ್ಲಿ ನ್ಯಾಯಯುತ ವ್ಯವಸ್ಥೆ ಇಲ್ಲ. ಯಾರು ತಲೆಕೆಡಿಸಿಕೊಳ್ಳಲ್ಲ. ಈ ವ್ಯವಸ್ಥೆಯು ನನ್ನನ್ನು ಸಫಾಯಿ ಕರ್ಮಾಚಾರಿ ಆಗಲು ಒತ್ತಾಯಿಸಿತು. ಯಾಕೆ ಹೀಗೆ? ನಾನು ಅದನ್ನು ಸ್ವೀಕರಿಸಲು ನಿರಾಕರಿಸಿದೆ. ನನ್ನ ಮತ್ತು ನನ್ನ ಹೆಣ್ಣುಮಕ್ಕಳಿಗೆ ಜಾತಿ ಮುಕ್ತ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇನೆ. ನೀವು ಯಾರ ಕಡೆ ಇದ್ದೀರಿ?"
ಅನುವಾದ: ಶಂಕರ. ಎನ್. ಕೆಂಚನೂರು