"ಕೋಯಿ ಸರ್ಕಾರ್ ನಹೀಂ ಚಾಂಗಿ ಆಮ್ ಲೋಕನ್ ಲಾಯಿ [ಜನರಿಗೆ ಯಾವ ಸರ್ಕಾರವೂ ಒಳ್ಳೆಯದನ್ನು ಮಾಡಿಲ್ಲ]," ಎಂದು 70 ವರ್ಷ ಪ್ರಾಯದ ಗುರ್ಮೀತ್ ಕೌರ್ ಹೇಳುತ್ತಾರೆ. ಲುಧಿಯಾನದ ಬಾಸ್ಸಿಯನ್ ಎಂಬ ಹಳ್ಳಿಯಿಂದ ಜಾಗರಾನ್‌ನಲ್ಲಿ ನಡೆಯುತ್ತಿರುವ ಕಿಸಾನ್-ಮಜ್ದೂರ್ ಮಹಾಪಂಚಾಯತ್‌ಗೆ (ರೈತರು ಮತ್ತು ಕಾರ್ಮಿಕರ ಮಹಾ ಗ್ರಾಮ ಸಭೆ) ಬಂದಿರುವ ಮಹಿಳೆಯರ ಗುಂಪಿನೊಂದಿಗೆ ಶೆಡ್‌ನಲ್ಲಿ ಅವರು ಕುಳಿತಿದ್ದಾರೆ.
“[ಪ್ರಧಾನಿ] ಮೋದಿಯವರು ಉದ್ಯೋಗದ ಭರವಸೆಯನ್ನು ನೀಡಿದ್ದರು, ಆದರೆ ಅವರು ಯಾವುದೇ ಭರವಸೆಗಳನ್ನೂ ಈಡೇರಿಸಲಿಲ್ಲ. [ಆದ್ದರಿಂದ ಈಗ] ಎಹ್ನಾ ದ ಕೋಯಿ ಹಕ್ಕ್ ನಹಿಂ ಸಾಡೆ ಎಥೆ ಆ ಕೆ ವೋಟಾನ್ ಮಂಗನ್ ದ [ಅವರಿಗೆ ಇಲ್ಲಿಗೆ ಬಂದು ಮತ ಕೇಳುವ ಹಕ್ಕಿಲ್ಲ],” ಎಂದು ಅವರು ಹೇಳುತ್ತಾರೆ. ಗುರ್ಮೀತ್ ಕೌರ್ ಅವರು ದಕೌಂಡಾದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು ಏಕ್ತಾ) ಜೊತೆಗೆ ಸಂಬಂಧವನ್ನು ಹೊಂದಿದ್ದಾರೆ ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ತಾವು ಮೋದಿಯವರಿಗೆ ಮತ ನೀಡಿದ್ದೇನೆ ಎಂದು ಪರಿಗೆ ಹೇಳುತ್ತಾರೆ.
ಮೇ 21ರಂದು ಜಾಗರಣ್‌ನ ಹೊಸ ಧಾನ್ಯ ಮಾರುಕಟ್ಟೆಯಲ್ಲಿ ನಡೆದ ಮಹಾಪಂಚಾಯತ್‌ಗೆ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಅಂಗನವಾಡಿ ನೌಕರರ ಸಂಘಗಳು ಮತ್ತು ವೈದ್ಯಾಧಿಕಾರಿಗಳ ಸಂಘಟನೆಗಳ ಬ್ಯಾನರ್‌ಗಳ ಅಡಿಯಲ್ಲಿ ರಾಜ್ಯದ ಅನೇಕ ಕಡೆಗಳಿಂದ ಸುಮಾರು 50,000 ಜನರು ಜಮಾಯಿಸಿದ್ದರು. ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವಿರುದ್ಧ ತಮ್ಮ ಪ್ರತಿಭಟನೆಯನ್ನು ಪ್ರದರ್ಶಿಸಿದರು. ‘ಬಿಜೆಪಿ ಹರಾವೋ, ಕಾರ್ಪೊರೇಟ್ ಭಜಾವೋ, ದೇಶ್ ಬಚಾವೋ [ಬಿಜೆಪಿಯನ್ನು ಸೋಲಿಸಿ. ಕಾರ್ಪೋರೇಟ್‌ಗಳನ್ನು ಓಡಿಸಿ. ದೇಶವನ್ನು ಉಳಿಸಿ],’ ಎಂದು ವೇದಿಕೆಯ ಮೇಲೆ ಬ್ಯಾನರ್ ಹಾಕಲಾಗಿತ್ತು.
"ನಾವು ಪಂಜಾಬ್‌ನಲ್ಲಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ," ಎಂದು ಮಹಾಪಂಚಾಯತ್‌ನಲ್ಲಿ ಉಪಸ್ಥಿತರಿರುವ ಬಿಕೆಯುನ ಲಖೋವಲ್ ಘಟಕದ ಅಧ್ಯಕ್ಷ ಹರಿಂದರ್ ಸಿಂಗ್ ಲಖೋವಾಲ್ ಹೇಳುತ್ತಾರೆ.
ಪಂಜಾಬ್‌ನಲ್ಲಿ ಜೂನ್ 1, 2024 ರಂದು ಚುನಾವಣೆ ನಡೆಯಲಿದೆ. ರೈತರು ಈ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದರು: ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತ್ರಿ, ಸಂಪೂರ್ಣ ಸಾಲ ಮನ್ನಾ, ಲಖೀಮ್‌ಪುರ್ ಖೇರಿ ಹತ್ಯಾಕಾಂಡದಲ್ಲಿ ಬಲಿಯಾದವರಿಗೆ ನ್ಯಾಯ, ರೈತರು ಹಾಗೂ ಕಾರ್ಮಿಕರಿಗೆ ಪಿಂಚಣಿ ಮತ್ತು 2020-2021ರ ಪ್ರತಿಭಟನೆಯಲ್ಲಿ ಹುತಾತ್ಮರಾದ ಕುಟುಂಬದವರಿಗೆ ಪರಿಹಾರ. ಒಂದು ಕಡೆ ರೈತರು ತಮ್ಮ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದು ಕಡೆ ಅದೇ ರಾಜ್ಯದಲ್ಲಿ ನರೇಂದ್ರ ಮೋದಿಯವರು ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದಾರೆ. ಓದಿ: ರೈತ ಹೋರಾಟಗಳ ಬಗ್ಗೆ ಪರಿಯ ಸಂಪೂರ್ಣ ವರದಿ


![́ಅವರಿಗೆ [ಬಿಜೆಪಿಗೆ] ಹಕ್ಕಿಲ್ಲ...́](/_next/image?url=https%3A%2F%2Fproduction.ruralindiaonline.org%2Fuploads%2F01_IMG_2898_AA_They_BJP_do_not_have_the_right_9bd52f9f21.jpg&w=1080&q=75)









