ಬಂಜರು ಪ್ರಸ್ಥಭೂಮಿಯಲ್ಲಿರುವ ದರ್ಗಾವು ಮಳಗಾಂವ್ ನಿವಾಸಿಗಳಿಗೆ ಉತ್ತಮ ಸೇವೆ ಸಲ್ಲಿಸಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಈ ದರ್ಗಾ ಶತಮಾನಗಳಿಂದ ಅಸ್ತಿತ್ವದಲ್ಲಿದೆ ಮತ್ತು ಎಂದಿನಿಂದಲೂ ಆಶ್ರಯ ತಾಣವಾಗಿ ಉಳಿದಿದೆ.
ಈ ದರ್ಗಾಕ್ಕೆ ಒರಗಿದಂತೆ ನಿಂತಿರುವ ಮರದ ಕೆಳಗೆ ಶಾಲಾ ಮಕ್ಕಳು ತಮ್ಮ ಮನೆಕೆಲಸವನ್ನು ಮಾಡುತ್ತಾರೆ. ಸುಡುವ ಬೇಸಿಗೆಯಲ್ಲಿ ತಂಪಾದ ಗಾಳಿ ಬೀಸುವ ಏಕೈಕ ಸ್ಥಳವಾದ ದರ್ಗಾದ ಪ್ರವೇಶದ್ವಾರದಲ್ಲಿ ಯುವಕರು ಮತ್ತು ಮಹಿಳೆಯರು ಸ್ಪರ್ಧಾತ್ಮಕ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ; ಮಹತ್ವಾಕಾಂಕ್ಷಿ ಪೊಲೀಸರು ಸುತ್ತಮುತ್ತಲಿನ ತೆರೆದ ಜಾಗದಲ್ಲಿ ಕಠಿಣ ಫಿಟ್ನೆಸ್ ತರಬೇತಿ ತರಬೇತಿಗಳನ್ನು ನಡೆಸುತ್ತಾರೆ.
"ನನ್ನ ಅಜ್ಜನ ಬಳಿಯೂ ಅದಕ್ಕೆ ಸಂಬಂಧಿಸಿದ [ದರ್ಗಾ] ಕಥೆಗಳಿವೆ" ಎಂದು ಗ್ರಾಮದಲ್ಲಿ 15 ಎಕರೆಗೂ ಹೆಚ್ಚು ಭೂಮಿಯನ್ನು ಹೊಂದಿರುವ 76 ವರ್ಷದ ರೈತ ವಿನಾಯಕ್ ಜಾಧವ್ ಹೇಳುತ್ತಾರೆ. "ಅದು ಎಷ್ಟು ಹಳೆಯದಿರಬಹುದು ಎಂದು ಊಹಿಸಿಕೊಳ್ಳಿ. ಹಿಂದೂಗಳು ಮತ್ತು ಮುಸ್ಲಿಮರು ಅದನ್ನು ಒಟ್ಟಿಗೆ ಉಳಿಸಿಕೊಂಡಿದ್ದಾರೆ. ಇದು ಶಾಂತಿಯುತ ಸಹಬಾಳ್ವೆಯ ಸಂಕೇತ.”
ಆದರೆ 2023ರ ಸೆಪ್ಟೆಂಬರ್ ತಿಂಗಳಿನಲ್ಲಇಲ್ಲಿ ವಿಷಯಗಳು ಬದಲಾದವು. ಮಳಗಾಂವ್ ಜನರ ಪಾಲಿಗೆ ಹೆಚ್ಚು ಪ್ರೀತಿಪಾತ್ರವಾದ ದರ್ಗಾ ಅಂದು ಹೊಸ ಅರ್ಥವನ್ನು ಪಡೆದುಕೊಂಡಿತು - ಸಣ್ಣ ಆದರೆ ಆಗ್ರಹಕಾರಿ ಯುವಕರ ಗುಂಪು ಇದನ್ನು ಅತಿಕ್ರಮಣ ಎಂದು ಹೇಳಿಕೊಂಡಿತು. ಹಿಂದುತ್ವವಾದಿ ಗುಂಪುಗಳ ಒಕ್ಕೂಟವು ಅವರನ್ನು ಇದಕ್ಕೆ ಪ್ರಚೋದಿಸಿತ್ತು.
ಮಳಗಾಂವ್ ಗ್ರಾಮದ 20-25 ವರ್ಷದೊಳಗಿನ ಈ ಹಿಂದೂ ನಿವಾಸಿಗಳು ಜಿಲ್ಲಾಡಳಿತಕ್ಕೆ ಪತ್ರ ಬರೆದು ಆ ಅಕ್ರಮ ಅತಿಕ್ರಮಣವನ್ನು ತೆಗೆದುಹಾಕುವಂತೆ ಒತ್ತಾಯಿಸಿದರು. ಅವರಲ್ಲಿ ಕೆಲವರು ಈಗಾಗಲೇ ಅದರ ಪಕ್ಕದ ನೀರಿನ ಟ್ಯಾಂಕ್ ಒಂದನ್ನು ನಾಶಪಡಿಸಿದ್ದರು. "ಮುಸ್ಲಿಂ ಸಮುದಾಯವು ತನ್ನ ಸುತ್ತಲಿನ ಸಾರ್ವಜನಿಕ ಭೂಮಿಯನ್ನು ಕಸಿದುಕೊಳ್ಳಲು ಬಯಸುತ್ತದೆ" ಎಂದು ಅವರ ಪತ್ರದಲ್ಲಿ ಬರೆಯಲಾಗಿತ್ತು. ಜೊತೆಗೆ "ಗ್ರಾಮ ಪಂಚಾಯಿತಿಯ ಇಚ್ಛೆಗೆ ವಿರುದ್ಧವಾಗಿ ದೇವಾಲಯವನ್ನು ನಿರ್ಮಿಸಲಾಗಿದೆ" ಎಂದೂ ನಮೂದಿಸಲಾಗಿತ್ತು













