ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೊಸ ಸಂಸತ್ ಭವನದಲ್ಲಿ ನಡೆಯುತ್ತಿದ್ದ ಕಲಾಪಗಳ ಮೇಲೆ ಯಾವಾಗಲೂ ಸಂಶಯದ ದೃಷ್ಟಿಯನ್ನು ಇಟ್ಟುಕೊಂಡಿದ್ದರು. ಅಲ್ಲದೇ, "ಸಂವಿಧಾನದ ದುರುಪಯೋಗವಾಗುವುದು ಕಂಡುಬಂದರೆ, ಅದನ್ನು ಸುಡುವವರಲ್ಲಿ ನಾನೇ ಮೊದಲಿರುತ್ತೇನೆ," ಎಂದು ಹೇಳಿರುವುದು ಕೂಡ ಅವರೇ.
2023 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ, ನಾಗರಿಕರ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ತರುವ ಪ್ರಮುಖ ಹೊಸ ಮಸೂದೆಗಳನ್ನು ಪರಿ ಗ್ರಂಥಾಲಯವು ತೀಕ್ಣವಾಗಿ ಓರೆಗೆ ಹಚ್ಚಿ ನೋಡುತ್ತದೆ.
ಅರಣ್ಯ (ಸಂರಕ್ಷಣೆ) ತಿದ್ದುಪಡಿ ಕಾಯಿದೆ, 2023 ರ ಪ್ರಕರಣವನ್ನೇ ತೆಗೆದುಕೊಳ್ಳಿ. ಭಾರತದ ಗಡಿಯ ಸಮೀಪ ಇರುವ ಅರಣ್ಯಗಳ ಬಳಕೆ ಇನ್ನು ಮುಂದೆ ಕಾನೂನು ಉಲ್ಲಂಘನೆಯಾಗುವುದಿಲ್ಲ. ಬೇರೆ ಬೇರೆ ದೇಶಗಳೊಂದಿಗೆ ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಳ್ಳುವ ಭಾರತದ ಈಶಾನ್ಯ ಭಾಗದ ಉದಾಹರಣೆಯನ್ನೇ ನೋಡಿ. ಈಶಾನ್ಯ ಭಾರತದಲ್ಲಿರುವ 'ವರ್ಗೀಕರಿಸದ ಅರಣ್ಯಗಳಲ್ಲಿ' ಶೇಕಡಾ 50 ಕ್ಕಿಂತಲೂ ಹೆಚ್ಚು ದಾಖಲೆಯಾಗಿರುವ ಅರಣ್ಯ ಪ್ರದೇಶಗಳನ್ನು ಹೊಂದಿವೆ. ಈಗ ಈ ತಿದ್ದುಪಡಿಯ ನಂತರ ಮಿಲಿಟರಿ ಮತ್ತು ಇತರ ಬಳಕೆಗಳಿಗೆ ಇವುಗಳನ್ನು ತೆಗೆದುಕೊಳ್ಳಬಹುದು.
ಡಿಜಿಟಲ್ ಗೌಪ್ಯತೆ ಜಾಗದಲ್ಲಿ, ಈಗ ಭಾರತೀಯ ನಾಗರಿಕ್ ಸುರಕ್ಷಾ (ಎರಡನೇ) ಸಂಹಿತಾ ಕಾಯಿದೆ ಎಂಬ ಹೊಸ ಕಾನೂನು ಬಂದಿದೆ. ಇದನ್ನು ಬಳಸಿ ತನಿಖಾ ಸಂಸ್ಥೆಗಳು ತನಿಖೆಯ ಸಂದರ್ಭಲ್ಲಿ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳುವುದು ಇನ್ನು ಸುಲಭವಾಗಲಿದೆ. ಇದು ನಾಗರಿಕರ ಗೌಪ್ಯತೆಯ ಮೂಲಭೂತ ಹಕ್ಕಿನ ಮೇಲೆ ನಡೆಸುವ ಸವಾರಿಯಾಗುತ್ತದೆ. ಅದೇ ರೀತಿ ಹೊಸ ದೂರಸಂಪರ್ಕ ಕಾಯಿದೆಯೂ ದೂರಸಂಪರ್ಕ ಸೇವೆಗಳ ಅಧಿಕೃತ ಘಟಕದಿಂದ ಪರಿಶೀಲಿಸಬಹುದಾದ ಬಯೋಮೆಟ್ರಿಕ್ ಆಧಾರಿತ ಗುರುತಿನ ಬಳಕೆಯ ಬಗ್ಗೆ ಹೇಳುತ್ತದೆ. ಬಯೋಮೆಟ್ರಿಕ್ ದಾಖಲೆಗಳ ಸ್ವಾಧೀನ ಮತ್ತು ಶೇಖರಣೆಯು ಗೌಪ್ಯತೆ ಮತ್ತು ಸೈಬರ್ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.







