ಮೊದಲ ಸಲ ದಿಯಾ ಬಹುತೇಕ ತಪ್ಪಿಸಿಕೊಂಡಿದ್ದರು.
ಸೂರತ್ ನಗರದಿಂದ ಝಲೋಡ್ ಎನ್ನುವಲ್ಲಿಗೆ ಟಿಕೆಟ್ ಖರೀದಿಸಿದ್ದ ಅವರು ಬಸ್ ಜನರಿಂದ ತುಂಬುವುದನ್ನೇ ಕಾಯುತ್ತಿದ್ದರು. ಅಲ್ಲಿಗೆ ತಲುಪಿಕೊಂಡರೆ ಅಲ್ಲಿಂದ ಗುಜರಾತ್ ಗಡಿ ದಾಟಿ ತನ್ನ ಊರಾದ ಕುಶಾಲಗಢ ತಲುಪುವುದು ಸುಲಭವೆನ್ನುವುದು ದಿಯಾರಿಗೆ ತಿಳಿದಿತ್ತು.
ಅವರು ಬಸ್ಸಿನ ಕಿಟಕಿಯಿಂದ ಹೊರಗೆ ನೋಡುತ್ತಿದ್ದರೆ ರವಿ ಅವರ ಹಿಂದೆ ಬಂದು ನಿಂತಿದ್ದ. ಅದು ಅವರ ಅರಿವಿಗೆ ಬರುವ ಮೊದಲೇ ಅವನು ಅವರ ಕೈ ಹಿಡಿದು ಬಸ್ಸಿನಿಂದ ಹೊರಗೆ ಎಳೆಯತೊಡಗಿದ್ದ.
ಬಸ್ಸಿನಲ್ಲಿದ್ದ ಜನರು ಲಗೇಜ್ ಇರಿಸುವುದು, ಮಕ್ಕಳನ್ನು ಸಂಭಾಳಿಸುವುದರಲ್ಲಿ ಮುಳುಗಿಹೋಗಿದ್ದರು. ಅವರ್ಯಾರೂ ಆ ಆಕ್ರೋಶಭರಿತ ಯುವಕ ಮತ್ತು ಹೆದರಿದ ಹದಿಹರೆಯದ ಹುಡುಗಿಯ ಕಿತ್ತಾಟದತ್ತ ಗಮನ ನೀಡಿರಲಿಲ್ಲ. “ನಾನಂತೂ ಹೆದರಿ ಹೋಗಿದ್ದೆ” ಎನ್ನುತ್ತಾರೆ ದಿಯಾ. ರವಿಯ ಸಿಟ್ಟಿನ ಅರಿವಿದ್ದ ಅವರಿಗೆ ಸುಮ್ಮನಿರುವುದೇ ಒಳ್ಳೆಯದು ಅನ್ನಿಸಿತು.
ಕಳೆದ ಆರು ತಿಂಗಳಿನಿಂದ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಅವರ ಪಾಲಿಗೆ ಮನೆ ಮತ್ತು ಜೈಲು ಎರಡೂ ಆಗಿತ್ತು. ಅವರು ಒಂದು ದಿನವೂ ಮಲಗಿರಲಿಲ್ಲ. ಅವರ ಇಡೀ ಮೈ-ಕೈ ನೋಯುತ್ತಿತ್ತು. ರವಿಯ ಹೊಡೆತಗಳಿಂದಾಗಿ ಚರ್ಮ ಹರಿದು ಅಲ್ಲಲ್ಲಿ ಗಾಯಗಳಾಗಿದ್ದವು. “ಅವನು ಮುಷ್ಟಿಗಟ್ಟಿ ಹೊಡೆಯುತ್ತಿದ್ದ, ಒದೆಯುತ್ತಿದ್ದ” ಎಂದು ನೆನಪಿಸಿಕೊಳ್ಳುತ್ತಾರೆ. ಯಾರಾದರೂ ಗಂಡಸರು ತಪ್ಪಿಸಲು ಬಂದರೆ ಅವರ ಮೇಲೆ ದಿಯಾ ಮೇಲೆ ಕಣ್ಣು ಹಾಕಿರುವ ಆರೋಪವನ್ನು ಹೊರಿಸಲಾಗುತ್ತಿತ್ತು. ರವಿಯ ಬೈಗುಳಕ್ಕೆ ಅಂಜಿ ಹೆಂಗಸರೂ ದೂರ ಉಳಿಯುತ್ತಿದ್ದರು. ಯಾರಾದರೂ ಧೈರ್ಯ ಮಾಡಿ ಪ್ರಶ್ನಿಸಿದರೆ, 'ಮೇರಿ ಘರ್ವಾಲಿ ಹೈ, ತುಮ್ ಕ್ಯೂಂ ಬೀಚ್ ಮೇ ಆ ರಹೇ ಹೋ [ಅವಳು ನನ್ನ ಹೆಂಡತಿ. ನೀವು ಏಕೆ ನಡುವೆ ಬರುತ್ತಿದ್ದೀರಿ]?ʼ ಎಂದು ರವಿ ಕೇಳುತ್ತಿದ್ದ.
“ಪ್ರತಿ ಸಲ ಏಟು ಬಿದ್ದಾಗಲೂ ಆಸ್ಪತ್ರೆಗೆ ಹೋಗಿ ಮಲ್ಲಮ್ ಪಟ್ಟಿ [ಗಾಯದ ಬ್ಯಾಂಡೇಜ್] ಮಾಡಿಸಲು ನನಗೆ 500 ರೂಪಾಯಿ ಬೇಕಾಗುತ್ತಿತ್ತು. ಕೆಲವೊಮ್ಮೆ ರವಿಯ ಸಹೋದರ ನನಗೆ ಹಣ ನೀಡುತ್ತಿದ್ದ, ಮತ್ತೆ ಜೊತೆಗೆ ಆಸ್ಪತ್ರೆಗೂ ಬರುತ್ತಿದ್ದ. ಅವನು “ತುಮ್ ಘರ್ ಪೆ ಚಲೇ ಜಾ [ನೀನು ತವರಿಗೆ ಹೋಗಿಬಿಡು]” ಎನ್ನುತ್ತ್ತಿದ್ದ. ಆದರೆ ಹೋಗುವುದು ಹೇಗೆ ಎನ್ನುವುದು ಇಬ್ಬರಿಗೂ ತಿಳಿದಿರಲಿಲ್ಲ.

















