ಹರ್ಮನ್‌ದೀಪ್ ಸಿಂಗ್ ಬಣ್ಣಬಣ್ಣದ ಗಾಳಿಪಟಗಳೊಂದಿಗೆ ನಿಂತಿದ್ದಾರೆ. ಅವರ ಮುಂದೆ ಪಂಜಾಬ್ ಮತ್ತು ಹರ್ಯಾಣದ ನಡುವೆ ಇರುವ ಶಂಭು ಗಡಿಯಲ್ಲಿ ದೆಹಲಿಗೆ ಮೆರವಣಿಗೆ ಹೊರಟಿರುವ ರೈತರನ್ನು ತಡೆಯಲು ಹಾಕಿರುವ ದೊಡ್ಡ ದೊಡ್ಡ ಪೊಲೀಸ್ ಬ್ಯಾರಿಕೇಡ್‌ಗಳಿವೆ.
17 ವರ್ಷ ಪ್ರಾಯದ ಅಮೃತಸರದ ಈ ಯುವಕ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಅಶ್ರುವಾಯು ಶೆಲ್‌ಗಳಿಂದ ದಾಳಿ ಮಾಡಲು ಬಳಸುತ್ತಿದ್ದ ಡ್ರೋನ್‌ಗಳನ್ನು ಉರುಳಿಸಲು ಗಾಳಿಪಟಗಳನ್ನು ಹಾರಿಸುತ್ತಿದ್ದನು. ಡ್ರೋನ್ ಮೂಲಕ ಅಶ್ರುವಾಯು ಶೆಲ್‌ಗಳನ್ನು ಎಸೆಯುವುದು ಪ್ರತಿಭಟನೆಯನ್ನು ಹತ್ತಿಕ್ಕಲು ಕಂಡುಕೊಂಡಿರುವ ಹೊಸ ಮಾರ್ಗವಾಗಿದೆ. “ಅಶ್ರುವಾಯುವಿನಿಂದ ಯಾವುದೇ ಪರಿಣಾಮಗಳಾಗದಂತೆ ತಡೆಯಲು ನಾನು ನನ್ನ ಕಣ್ಣುಗಳ ಸುತ್ತ ಟೂತ್‌ಪೇಸ್ಟ್ ಹಚ್ಚಿದ್ದೇನೆ. ನಾವು ಮುಂದೆ ಸಾಗುತ್ತೇವೆ ಮತ್ತು ಈ ಯುದ್ಧವನ್ನು ಗೆದ್ದೇ ಗೆಲ್ಲುತ್ತೇವೆ,” ಎಂದು ಅವನು ಹೇಳುತ್ತಾನೆ.
ಫೆಬ್ರವರಿ 13, 2024 ರಂದು ದೆಹಲಿ ಕಡೆಗೆ ಶಾಂತಿಯುತವಾಗಿ ಮೆರವಣಿಗೆ ಹೊರಟಿದ್ದ ಪಂಜಾಬ್‌ನ ಸಾವಿರಾರು ರೈತರು ಮತ್ತು ಕಾರ್ಮಿಕರಲ್ಲಿ ಹರ್ಮನ್‌ದೀಪ್ ಕೂಡ ಒಬ್ಬ. ಶಂಭು ಗಡಿಯಲ್ಲಿ ಇವರು ಪ್ಯಾರಾಮಿಲಿಟರಿ, ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮುಖಾಮುಖಿಯಾದರು. ದೆಹಲಿಯ ಪ್ರತಿಭಟನಾ ಸ್ಥಳಕ್ಕೆ ಈ ರೈತರು ತಲುಪದಂತೆ ತಡೆಯಲು ರಸ್ತೆಯ ಮೇಲೆ ಕಬ್ಬಿಣದ ಮೊಳೆಗಳು ಮತ್ತು ಕಾಂಕ್ರೀಟ್ ಗೋಡೆಗಳನ್ನು ಹಾಕಲಾಗಿತ್ತು.
ಮೊದಲ ಬ್ಯಾರಿಕೇಡ್‌ನಲ್ಲಿ ಗುರ್ಜಂದ್ ಸಿಂಗ್ ಖಾಲ್ಸಾ ಅವರು ಸಭೆಯನ್ನು ಉದ್ದೇಶಿಸಿ ಹೋರಾಟದ ಐದು ಪ್ರಮುಖ ಬೇಡಿಕೆಗಳನ್ನು ಪುನರುಚ್ಚಿಸಿದರು. ಅವೆಂದರೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವುದು, ರೈತರು ಮತ್ತು ರೈತ ಕಾರ್ಮಿಕರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದು, ಲಖೀಂಪುರ ಖೇರಿ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ರೈತರಿಗೆ ನ್ಯಾಯ ನೀಡುವುದು ಮತ್ತು ಅಪರಾಧಿಗಳನ್ನು ಬಂಧಿಸುವುದು, ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ ನೀಡುವುದು ಹಾಗೂ 2020-2021 ರ ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡುವುದು.
























