“ಕುಂಚೂರಲ್ಲಿ ಮೂರ್ ವರ್ಷ, ಕುರಗುಂದದಲ್ಲಿ ಒಂದು ವರ್ಷ ಆಮೇಲೆ ಕೋಣನತಲೆ” ಮಂಗಳ ಹರಿಜನ ಕೆಲಸಕ್ಕೆಂದು ತಿರುಗಾಡಿದ ಊರುಗಳ ಹೆಸರನ್ನು ನೆನಪಿಸಿಕೊಳ್ಳುತ್ತಿದ್ದರು. ಇವೆಲ್ಲವೂ ಕರ್ನಾಟಕದ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಊರುಗಳು. ಕೃಷಿ ಕೂಲಿಯಾಗಿರುವ ಮಂಗಳಾ ದಿನವೊಂದಕ್ಕೆ ದಿನಗೂಲಿ ಕೆಲಸಕ್ಕಾಗಿ 17 – 20 ಕೊಲೋಮೀಟರುಗಳಷ್ಟು ಪ್ರಯಾಣ ಮಾಡುತ್ತಾರೆ.
“ಎರಡು ವರ್ಷದಿಂದ ಕೋಣನತಲಿಗೆ ಹೋಗ್ತಿದ್ದೀನಿ,” ಎಂದು ನನ್ನೊಂದಿಗೆ ಹೇಳಿದರು. ಕೋಣನತಲಿ ಮತ್ತು ಮಂಗಳಾರ ಊರು ಮೆಣಸಿನಹಾಳ ಎರಡೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿವೆ. ಹಿರೇಕೆರೂರಿಗೆ ಅಲ್ಲಿಂದ 35 ಕಿಲೋಮೀಟರ್ ದೂರವಿದೆ. ಮಂಗಳಾ ಮತ್ತು ಅವರ ನೆರೆಹೊರೆಯ ಮಹಿಳೆಯರು 8 – 10ಜನರ ತಂಡವಾಗಿ ಅವರ ಮನೆಯಿರುವ ಮೆಣಸಿನ ಹಾಳದ ಮಾದಿಗರ ಕೇರಿಯಿಂದ (ಮಂಗಳಾ ಅದೇ ಸಮುದಾಯಕ್ಕೆ ಸೇರಿದವರು) ಹಾವೇರಿಯ ಸುತ್ತಮುತ್ತಲ ಊರುಗಳಲ್ಲಿ ಕೆಲಸ ಮಾಡಲೆಂದು ತೆರಳುತ್ತಾರೆ.
ಅವರು ಹೀಗೆ ಕೆಲಸ ಮಾಡುವ ಮೂಲಕ ದಿನವೊಂದಕ್ಕೆ 150 ರೂಪಾಯಿಗಳನ್ನು ಗಳಿಸುತ್ತಾರೆ, ಆದರೆ ವರ್ಷದ ಕೆಲವು ತಿಂಗಳು ಕೈ ಪರಾಗಸ್ಪರ್ಶ ನಡೆಸುವ ಕೆಲಸ ಮಾಡುವ ಮೂಲಕ 90 ರೂಪಾಯಿಗಳಷ್ಟು ಹೆಚ್ಚು ಗಳಿಸುತ್ತಾರೆ. ಅವರು ಈ ಕೆಲಸಕ್ಕಾಗಿ ಜಿಲ್ಲೆಯಾದ್ಯಂತ ಪ್ರಾಯಾಣಿಸುತ್ತಾರೆ. ಈ ಕೆಲಸಕ್ಕೆ ಹೊಲಗಳ ಮಾಲಿಕರು ಕೆಲಸಕ್ಕೆ ಹೋಗಿ ಬರಲು ಆಟೋರಿಕ್ಷಾ ವ್ಯವಸ್ಥೆ ಮಾಡಿಸುತ್ತಾರೆ. “ರಿಕ್ಷಾದಂವ ದಿನಕ್ಕ 800-900 ಚಾರ್ಜ್ ಮಾಡ್ತಾನೆ, ಅದಕ್ಕ ಮಾಲಿಕ್ರು ನಮ್ ಪಗಾರಾದಾಗ 10 ರೂಪಾಯಿ ಹಿಡ್ಕೊತಾರ, ಆಗ ಆಟೊ – ಪಾಟೋ ಏನಿಲ್ಲ ಹಂಗೆ ನಡ್ಕೊಂಡು ಹೋಗ್ತಿದ್ವಿ,” ಎನ್ನುತ್ತಾರೆ ಮಂಗಳಾ.
ಸಣ್ಣ ದೇಹದ, ತೂಕದ ಕೊರತೆ ಎದ್ದುಕಾಣಿಸುವ, 30 ವರ್ಷದ ಮಂಗಳಾ ತನ್ನ ಹುಲ್ಲಿನ ಗುಡಿಸಲಿನಲ್ಲಿ ಕೂಲಿ ಕಾರ್ಮಿಕರಾಗಿರುವ ಪತಿ ಮತ್ತು ನಾಲ್ವರು ಮಕ್ಕಳ ಜೊತೆ ಬದುಕು ನಡೆಸುತ್ತಿದ್ದಾರೆ. ಇಡೀ ಮನೆಗೆ ಒಂದು ಬುರುಡೆ (incandescent) ಬಲ್ಬ್ ಉರಿಯುತ್ತಿರುತ್ತದೆ. ಮನೆಯ ಒಂದು ಮೂಲೆ ಅವರ ಅಡುಗೆಮನೆಯಾದರೆ, ಇನ್ನೊಂದು ಮೂಲೆಯಲ್ಲಿ ಬಟ್ಟೆಗಳನ್ನು ಜೋಡಿಸಿಡಲಾಗಿದೆ. ಅಲ್ಲೇ ಗೋಡೆಗೆ ಒಂದು ಮುರಿದ ಕಬ್ಬಿಣದ ಬೀರುವನ್ನು ಒರಗಿಸಿಡಲಾಗಿದೆ. ಇಷ್ಟೆಲ್ಲ ವಸ್ತುಗಳ ನಂತರ ಕೋಣೆಯ ಉಳಿದ ಜಾಗವು ಅವರ ಮಲಗುವ ಕೋಣೆ ಮತ್ತು ಊಟದ ಕೋಣೆಯಾಗಿ ಕೆಲಸ ನಿರ್ವಹಿಸುತ್ತದೆ. ಮನೆಯ ಹೊರಗೆ ಎತ್ತರದ ಸ್ಥಳದಲ್ಲಿ ಕಲ್ಲುಗಳನ್ನು ಜೋಡಿಸಿರುವಲ್ಲಿ ಬಟ್ಟೆ ಒಗೆಯುವುದು, ಪಾತ್ರ ತೊಳೆಯುವ ಕೆಲಸಗಳನ್ನು ಮಾಡುತ್ತಾರೆ.










