“ಕಡಲಿಲೆ ರಾಜಾವು ತಿಮಿಂಗಳಾಣೆಂಕಿಲುಂ ನಮ್ಮಲೆ, ಮೀನ್ ಪನಿಕ್ಕಾರೆ ರಾಜವ್ ಮತಿಯಾನ್
[ಇಡೀ ಕಡಲಿಗೆ ರಾಜ ತಿಮಿಂಗಿಲವಾದರೂ, ನಮ್ಮಂತ ಮೀನು ಕೆಲಸಗಾರರ ರಾಜ ಮತ್ತಿ ಮೀನು]."
ಬಾಬು (ಹೆಸರು ಬದಲಾಯಿಸಲಾಗಿದೆ) ಕೇರಳದ ವಡಕರ ಪಟ್ಟಣದ ಚೊಂಬಲ್ ಫಿಶರಿ ಹಾರ್ಬರ್‌ನಲ್ಲಿ ಮೀನು ಲೋಡು ಮಾಡುವ ಕೆಲಸಗಾರ. ಕಳೆದ ಕೆಲವು ದಶಕಗಳಿಂದ ಅವರು ಮೀನುಗಳನ್ನು, ಅದರಲ್ಲೂ ಹೆಚ್ಚಾಗಿ ಎಣ್ಣೆ ಮತ್ತಿ ಮೀನುಗಳನ್ನು (ಸಾರ್ಡಿನೆಲ್ಲಾ ಲಾಂಗಿಸೆಪ್ಸ್) ಲೋಡ್ ಮಾಡುವ ಮತ್ತು ಲೋಡ್ ಇಳಿಸುವ ಕೆಲಸ ಮಾಡುತ್ತಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ಬಂದರಿಗೆ ಬರುವ ಬಾಬು ತಮ್ಮ ಬಟ್ಟೆಗಳನ್ನು ಕಳಚಿ ಒಂದು ಬದಿಯಲ್ಲಿ ತೆಗೆದಿಟ್ಟಿರುವ ನೀಲಿ ಮುಂಡು ಮತ್ತು ಟೀ ಶರ್ಟ್, ಜೊತೆಗೆ ಚಪ್ಪಲಿಗಳನ್ನು ತೊಟ್ಟು ಕೆಲಸಕ್ಕೆ ಸಿದ್ದವಾಗುತ್ತಾರೆ. 49 ವರ್ಷ ವಯಸ್ಸಿನ ಈ ಲೋಡರ್ ಮೊಣಕಾಲೆತ್ತರ ಬಂದಿರುವ ಕೆಸರು ನೀರಿನಲ್ಲಿ ನಡೆಯುತ್ತಾ ಸಮುದ್ರದ ಕಡೆಗೆ ಬಂದು ದೋಣಿಗಳ ಬಳಿ ಬರುತ್ತಾರೆ. "ಈ ನೀರು ತುಂಬಾ ವಾಸನೆ ಬರುವುದರಿಂದಾಗಿ ನಾವೆಲ್ಲಾ [ಲೋಡರ್‌ಗಳು] ಈ ಕೆಲಸಕ್ಕಾಗಿ ಬೇರೆಯೇ ಚಪ್ಪಲಿ ಮತ್ತು ಬಟ್ಟೆಗಳನ್ನು ತೊಟ್ಟುಕೊಳ್ಳುತ್ತೇವೆ," ಎಂದು ಅವರು ಹೇಳುತ್ತಾರೆ. ಸಂಜೆಯ ವೇಳೆಗೆ ಇಡೀ ಬಂದರು ಸ್ತಬ್ಧವಾದ ಮೇಲೆ ಅವರು ಹೊರಡುತ್ತಾರೆ.
ಡಿಸೆಂಬರ್ ತಿಂಗಳ ಒಂದು ದಿನ ಆಗಲೇ ಕೆಲಸ ಶುರುಮಾಡಿದ್ದ ಬಾಬು ಅವರೊಂದಿಗೆ ಮಾತನಾಡಲು ವರದಿಗಾರರು ಬಂದರಿಗೆ ಬಂದಾಗ ಇಡೀ ಬಂದರೇ ಕೆಲಸದಲ್ಲಿ ಮುಳುಗಿ ಹೋಗಿತ್ತು. ಉದ್ದ ಕತ್ತಿನ ಬಿಳಿ ಕೊಕ್ಕರೆಗಳು ಮೀನುಗಳನ್ನು ಕದಿಯಲು ದೋಣಿಗಳಲ್ಲಿದ್ದ ಬಿದಿರಿನ ಬುಟ್ಟಿಗಳ ಸುತ್ತಲೂ ಸುಳಿದಾಡುತ್ತಿದ್ದವು. ಮೀನುಗಳಿಂದ ತುಂಬಿಹೋಗಿದ್ದ ಬಲೆಗಳು ನೆಲದ ಮೇಲೆ ಬಿದ್ದಿದ್ದವು. ಗಿಜಿಗುಡುತ್ತಿದ್ದ ಜನಗಳ ಮಾತು ಇಡೀ ಬಂದರನ್ನು ಆವರಿಸಿತ್ತು.










