"ಚಾಲೂನ್, ಚಾಲೂನ್, ಹುಟ್ಟಲಿರುವ ಮಗುವಿಗೆ ಭೂಮಿಯ ಕಡೆಗೆ ಚಲಿಸಲು ನಾನು ಸಹಾಯ ಮಾಡುತ್ತೇನೆ."
ಅವರು ಮಾಡಿಸಿದ ಹೆರಿಗೆಗಳ ಕುರಿತು ಮಾತು ಬರುತ್ತಿದ್ದಂತೆ ಗುಣಮಯ್ ಕಾಂಬ್ಳೆಯವರ ಕಣ್ಣುಗಳು ಮಿಂಚತೊಡಗಿದವು. ಅವರು ಮತ್ತೊಮ್ಮೆ ತಮ ಹೆರಿಗೆಯ ಲೋಕದಲ್ಲಿರುವವರಂತೆ ಚುರುಕಾದರು. ಮಹಾರಾಷ್ಟ್ರದಲ್ಲಿ ದಾಯಿ ಎಂದು ಕರೆಯಲ್ಪಡುವ ನುರಿತ ಸೂಲಗಿತ್ತಿಯಾದ ಅವರು ಹೆರಿಗೆ ಪ್ರಕ್ರಿಯೆಯನ್ನು ವಿವರಿಸತೊಡಗಿದರು. ಮಗು ಹೇಗೆ ಗರ್ಭಚೀಲದಿಂದ ಜನನಾಂಗದ ಕಡೆಗೆ ಬರುತ್ತದೆನ್ನುವುದನ್ನು ವಿವರಿಸುತ್ತಾ, "ಹಾತತ್ ಕಾಕಾನ ಘಲತೋ ನಾ, ಅಗಡಿ ತಸಾ! [ಬಳೆಗಳು ಕೈಯಿಂದ ಹೇಗೆ ಜಾರುತ್ತೇವೆಯೋ ಹಾಗೆ, ಅಷ್ಟೇ!],” ಎಂದು ವಿವರಿಸುವಾಗ ಅವರ ಕೈಗಳಲ್ಲಿದ್ದ ಬಳೆಗಳು ಮೊಳಕೈಯೆಡೆಗೆ ಸದ್ದು ಮಾಡುತ್ತ ಜಾರಿದವು.
ಏಳು ದಶಕಗಳ ಹಿಂದೆ ವಾಗ್ದಾರಿ ಗ್ರಾಮದ ಈ ದಲಿತ ಮಹಿಳೆ ಗುಣಮಯಿ ಚೊಚ್ಚಲ ಹೆರಿಗೆಗೆ ನೆರವಾದರು.ಆನಂತರ ಉಸ್ಮಾನಾಬಾದ್‌ನಲ್ಲಿ ನೂರಾರು ಮಕ್ಕಳನ್ನು ತಾಯಿಯ ಗರ್ಭದಿಂದ ಸುರಕ್ಷಿತವಾಗಿ ಹೊರತೆಗೆದಿದ್ದರು. "ಇದು ಕೈಗಳ ಮಾಂತ್ರಿಕತೆ," ಎಂದು ಅಜ್ಜಿ ಹೇಳುತ್ತಾರೆ, ನಾಲ್ಕು ವರ್ಷಗಳ ಹಿಂದೆ ತನ್ನ 82ನೇ ವಯಸ್ಸಿನಲ್ಲಿ ತನ್ನ ಕೊನೆಯ ಹೆರಿಗೆಗೆ ಸಹಾಯ ಮಾಡಿದ ಅಜ್ಜಿ. ಹೆಮ್ಮೆಯಿಂದ ತಮ್ಮ ಕೈಗಳನ್ನು ತೋರಿಸಿ ಹೇಳುತ್ತಾರೆ. "ನನ್ನ ಕೈಗಳು ಎಂದಿಗೂ ವಿಫಲವಾಗಿಲ್ಲ. ದೇವರು ನನ್ನೊಂದಿಗಿದ್ದಾನೆ.”
ಸೊಲ್ಲಾಪುರ ಸಿವಿಲ್ ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ಗುಣಮಯಿ ಅವರ ಪುತ್ರಿ ವಂದನಾ ನೆನಪಿಸಿಕೊಳ್ಳುತ್ತಾರೆ. ಸಿಸೇರಿಯನ್ ಮೂಲಕ ಮೂವರು ಮಕ್ಕಳನ್ನು ಹೆರಿಗೆ ಮಾಡಲು ಸಿದ್ಧರಾದ ವೈದ್ಯರಿಗೆ ಗುಣಮಯಿ ಅವರು ಏನು ಮಾಡುತ್ತಿದ್ದಾರೆಂದು ಅರ್ಥ ಮಾಡಿಕೊಳ್ಳುವಂತೆ ಸಲಹೆ ನೀಡಿದರು. "ಅಜ್ಜಿ, ನೀವು ನಮಗಿಂತ ಹೆಚ್ಚು ಅನುಭವಿ ಎಂದು ಅವರು ಹೇಳಿದರು," ಅವರಲ್ಲಿದ್ದ ಕೌತುಕ ಭಾವವನ್ನು ನೆನೆದು ಗುಣಮಯಿ ನಕ್ಕರು.
ಅವರ ಪರಿಣತಿಯು ಹೆರಿಗೆ ಮಾಡಿಸುವುದನ್ನು ಮೀರಿದೆ. ಹೀಗಾಗಿ ಸೊಲ್ಲಾಪುರ, ಕೊಲ್ಹಾಪುರ, ಪುಣೆಯಿಂದ ಆರಂಭಿಸಿ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಅವರನ್ನು ಕರೆಸಿಕೊಳ್ಳುತ್ತಾರೆ. "ಜನರು ನನ್ನ ಅಜ್ಜಿಯ ಮನೆಗೆ ಮಕ್ಕಳನ್ನು ಕರೆತರುತ್ತಿದ್ದರು - ಬೀಜಗಳು ಅಥವಾ ಮಣಿಗಳು - ಆಕಸ್ಮಿಕವಾಗಿ ಅವರ ಕಣ್ಣು, ಕಿವಿ ಮತ್ತು ಮೂಗುಗಳಲ್ಲಿ ಸಿಲುಕಿರುವ ಸಣ್ಣ ವಸ್ತುಗಳನ್ನು ಹೊರತೆಗೆಯಲು," ಎಂದು ಗುಣಮಯ್ ಅವರ ಮೊಮ್ಮಗಳು ಶ್ರೀದೇವಿ ಕೆಲವು ತಿಂಗಳ ಹಿಂದೆ ಪರಿಗೆ ಹೆಮ್ಮೆಯಿಂದ ಹೇಳಿದರು. ಮಕ್ಕಳನ್ನು ಹೊರತರುವಷ್ಟೇ ಪ್ರಾಮುಖ್ಯತೆಯನ್ನು ಈ ಕಾರ್ಯಗಳಿಗೂ ನೀಡುತ್ತಿದ್ದರು. ಅಲ್ಲದೆ, ಹೊಟ್ಟೆನೋವು, ಕಾಮಾಲೆ, ಜ್ವರ ಮತ್ತು ಕೆಮ್ಮುಗಳಿಗೆ ಗಿಡಮೂಲಿಕೆ ಪರಿಹಾರಗಳ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ.









