ಬಜರಂಗ್ ಗಾಯಕ್ವಾಡ್ ಯಾವಾಗ ಐದು ಕೆಜಿ ತೂಕ ಕಳೆದುಕೊಂಡನೋ ಆಗ ಅವರಿಗೆ ಆಗಿರುವ ಹಾನಿ ಮನವರಿಕೆಯಾಯಿತು. “ಇದಕ್ಕೂ ಮೊದಲು ನಾನು ಪ್ರತಿದಿನ ಆರು ಲೀಟರ್ ಎಮ್ಮೆ ಹಾಲು ಕುಡಿಯುತ್ತಿದ್ದೆ, 50 ಬಾದಾಮಿ ತಿನ್ನುತ್ತಿದ್ದೆ, 12 ಬಾಳೆ ಹಣ್ಣು ಮತ್ತು ಎರಡು ಮೊಟ್ಟೆ ತಿನ್ನುತ್ತಿದ್ದೆ, ಜತೆಯಲ್ಲಿ ದಿನಬಿಟ್ಟು ದಿನ ಮಾಂಸ ಸೇವಿಸುತ್ತಿದ್ದೆ,” ಎಂದು ಅವರು ಹೇಳಿದರು. ಈಗ ಅವರು ಒಂದು ದಿನದಲ್ಲಿ ಸೇವಿಸುತ್ತಿದ್ದ ಆಹಾರವನ್ನು ಏಳುದಿನಗಳ ಕಾಲ ಸೇವಿಸುತ್ತಾರೆ ಅಥವಾ ಕೆಲವೊಮ್ಮೆ ಇನ್ನೂ ಹೆಚ್ಚು ಅವಧಿಗೂ ಸೇವಿಸುವುದಿದೆ- ಇದರಿಂದಾಗಿ ಅವರ ತೂಕ 61 ಕೆಜಿಗೆ ಕುಸಿದಿದೆ.
”ಒಬ್ಬ ಕುಸ್ತಿಪಟು ತನ್ನ ತೂಕವನ್ನು ಕಳೆದುಕೊಳ್ಳಬಾರದು.” ಎನ್ನುತ್ತಾರೆ, ಕೊಲಾಪುರ ಜಿಲ್ಲೆಯ ಜುನೇ ಪರಗಣ ಗ್ರಾಮದ 25 ವರ್ಷ ಹರೆಯದ ಬಜರಂಗ್. “ಇದು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ, ಮತ್ತು ಇದರಿಂದಾಗಿ ನೀವು ಹೋರಾಡುವ ವೇಳೆ ಉತ್ತಮ ನಡೆಯನ್ನು ಪ್ರದರ್ಶಿಸಲು ಆಗದು. ನಮ್ಮ ಖುರಾಕ್ (ಆಹಾರ ಕ್ರಮ) ತರಬೇತಿಯಷ್ಟೇ ಪ್ರಮುಖವಾದುದು.”. ಪಶ್ಚಿಮ ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಿಂದ ಬಂದಿರುವ ಇತರ ಕುಸ್ತಿಪಟುಗಳಂತೆ ತನ್ನ ಭರ್ಜರಿ ಭೋಜನಕ್ಕಾಗಿ ಕೆಮ್ಮಣ್ಣು ಕಣದಲ್ಲಿ ಮುಕ್ತ ಕುಸ್ತಿಯಿಂದ -ಮುಕ್ತ ಕುಸ್ತಿ ಸ್ಪರ್ಧೆಗಳಲ್ಲಿ ಸಿಗುವ ನಗದು ಬಹುಮಾನವನ್ನು ಅವಲಂಬಿಸಿರುತ್ತಾರೆ.
ಕೊಲ್ಲಾಪುರದ ಡೊನೋಲಿ ಗ್ರಾಮದಲ್ಲಿ ನಡೆದ ಕುಸ್ತಿಯ ನಂತರ 500 ದಿನಗಳು ಕಳೆದರೂ ಬಜರಂಗ್ ಯಾವುದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿಲ್ಲ. “ತೀವ್ರವಾಗಿ ಗಾಯಗೊಂಡಾಗಲೂ ನಾನು ಈ ರೀತಿಯಲ್ಲಿ ದೀರ್ಘವಾದ ಬಿಡುವು ತೆಗೆದುಕೊಂಡಿಲ್ಲ,” ಎಂದು ಹೇಳಿದರು.













