ಝಾಕೀರ್ ಹುಸೇನ್ ಮತ್ತು ಮಹೇಶ್ ಕುಮಾರ್ ಚೌಧರಿ ಬಾಲ್ಯದಿಂದಲೇ ಆತ್ಮೀಯ ಸ್ನೇಹಿತರು. ಈಗ ನಲವತ್ತರ ಹರೆಯದಲ್ಲಿರುವ ಇಬ್ಬರು ಇನ್ನೂ ತಮ್ಮ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಅಜ್ನಾ ಗ್ರಾಮದಲ್ಲಿ ವಾಸಿಸುವ ಝಾಕೀರ್ ಅವರು, ಪಾಕೂರ್‌ನಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಾರೆ. ಇದೇ ಪಟ್ಟಣದಲ್ಲಿ ಮಹೇಶ್ ಸಣ್ಣ ರೆಸ್ಟೋರೆಂಟೊಂದನ್ನು ನಡೆಸುತ್ತಿದ್ದಾರೆ.

“ಪಾಕೂರ್ [ಜಿಲ್ಲೆ] ಜನರು ಅತ್ಯಂತ ಶಾಂತಿಯಿಂದ ಬದುಕು ಕಟ್ಟಿಕೊಂಡಿರುವ ಸ್ಥಳ; ಇಲ್ಲಿಯ ಜನರ ನಡುವೆ ಸಹಬಾಳ್ವೆಯಿದೆ,” ಎಂದು ಹೇಳುತ್ತಾರೆ ಮಹೇಶ್.

"[ಅಸ್ಸಾಂನ ಮುಖ್ಯಮಂತ್ರಿ] ಹಿಮಂತ ಬಿಸ್ವಾ ಶರ್ಮಾ ಅವರಂತಹ ಹೊರಗಿನಿಂದ ಬರುವ ಜನರು ಭಾಷಣಗಳನ್ನು ಮಾಡಿ ಜನರನ್ನು ಪ್ರಚೋದಿಸುತ್ತಿದ್ದಾರೆ," ಎಂದು ಹೇಳುತ್ತಾ ಝಾಕೀರ್ ಅವರು ತಮ್ಮ ಸ್ನೇಹಿತನ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾರೆ.

ಸಂತಾಲ್ ಪರಗಣ ಪ್ರದೇಶದ ಒಂದು ಭಾಗವಾಗಿರುವ ಪಾಕೂರ್ ಜಾರ್ಖಂಡ್‌ನ ಪೂರ್ವ ಮೂಲೆಯಲ್ಲಿದೆ. ಇಲ್ಲಿ ನವೆಂಬರ್ 20, 2024 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಒಟ್ಟು 81 ಸ್ಥಾನಗಳನ್ನು ಕಬಳಿಸಲು ಎಲ್ಲಿಲ್ಲದ ಪ್ರಯತ್ನ ನಡೆಯುತ್ತಿದೆ. 2019 ರ ಕೊನೆಯ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟವು ಬಿಜೆಪಿಯನ್ನು ಕಿತ್ತೆಸೆದಿತ್ತು.

ಕಳೆದುಕೊಂಡಿರುವ ಅಧಿಕಾರವನ್ನು ಮತ್ತೆ ಪಡೆಯುವ ಉದ್ದೇಶದಿಂದ ಮತದಾರರನ್ನು ಹೇಗಾದರೂ ಮಾಡಿ ಓಲೈಸಲು  ಬಿಜೆಪಿಯು ಅಸ್ಸಾಂನ ಮುಖ್ಯಮಂತ್ರಿ ಸೇರಿದಂತೆ ಅನೇಕ ನಾಯಕರನ್ನು ಇಲ್ಲಿಗೆ ಚುನಾವಣಾ ಪ್ರಚಾರಕ್ಕಾಗಿ ಕಳುಹಿಸಿದೆ. ಇಲ್ಲಿಗೆ ಬಂದ ಬಿಜೆಪಿ ನಾಯಕರು ಮುಸ್ಲೀಮರನ್ನು ‘ಬಾಂಗ್ಲಾದೇಶದಿಂದ ಬಂದ ನುಸುಳುಕೋರರು’ ಎಂಬ ಕರೆದು ಇಡೀ ಸಮುದಾಯದ ವಿರುದ್ಧ ಇತರ ಸಮುದಾಯಗಳು ಹಗೆತನ ಸಾಧಿಸುವಂತೆ ಮಾಡುತ್ತಿದ್ದಾರೆ.

“ಹಿಂದೂಗಳು ನನ್ನ ನೆರೆಹೊರೆಯಲ್ಲೇ ವಾಸಿಸುತ್ತಿದ್ದಾರೆ; ಅವರು ನನ್ನ ಮನೆಗೆ ಬರುತ್ತಾರೆ, ನಾನು ಅವರ ಮನೆಗೆ ಹೋಗುತ್ತೇನೆ. ಚುನಾವಣೆಯ ಸಮಯದಲ್ಲಿ ಮಾತ್ರ ಯಾವಾಗಲೂ ಈ ರೀತಿ ಹಿಂದೂ-ಮುಸ್ಲಿಂ ಸಮಸ್ಯೆ ಬರುತ್ತದೆ. ಇಲ್ಲದಿದ್ದರೆ ಅವರು (ಬಿಜೆಪಿ) ಹೇಗೆ ಗೆಲ್ಲಲು ಸಾಧ್ಯ?” ಎಂದು ಝಾಕೀರ್ ಹೇಳುತ್ತಾರೆ.

2024 ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಜಮ್‌ಶೆಡ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಒಳನುಸುಳುಕೋರರ ಸಮಸ್ಯೆಗಳಿಗೆ ತಮ್ಮ ರಾಜಕೀಯ ಬಣ್ಣವನ್ನು ಬಳಿದರು. “ಸಂತಾಲ್ ಪರಗಣದಲ್ಲಿ [ಪ್ರದೇಶ] ಆದಿವಾಸಿಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ. ಆವರ ಭೂಮಿಯನ್ನು ಅತಿಕ್ರಮಣ ಮಾಡಲಾಗುತ್ತಿದೆ. ನುಸುಳುಕೋರರು ಪಂಚಾಯತಿಗಳಲ್ಲಿಯೂ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಾರೆ,” ಎಂದು ತುಂಬಿದ ಸಭೆಯಲ್ಲಿ ಮೋದಿಯವರು ಹೇಳಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಸಾರ್ವಜನಿಕ ಭಾಷಣಗಳಲ್ಲಿ ಈ ದಾಟಿಯಲ್ಲಿಯೇ ಮಾತನಾಡಿದರು. "ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶಿಗಳ ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಮತ್ತು ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ," ಎಂದು  ಬಿಜೆಪಿಯ ಚುನಾವಣಾ ಪ್ರಣಾಳಿಕೆ ಯೂ ಹೇಳುತ್ತದೆ.

PHOTO • Ashwini Kumar Shukla
PHOTO • Ashwini Kumar Shukla

ಎಡ: ಅಜ್ನಾದಲ್ಲಿ ಹೊಲ ಉಳುತ್ತಿರುವ ರೈತ. ಬಲ: ಝಾಕೀರ್ ಹುಸೇನ್ (ಬಲ) ಮತ್ತು ಮಹೇಶ್ ಕುಮಾರ್ ಚೌಧರಿ (ಎಡ) ಇಬ್ಬರೂ ಬಾಲ್ಯದ ಸ್ನೇಹಿತರು. ಮಹೇಶ್ ಅವರು  ಒಂದು ಸಣ್ಣ ರೆಸ್ಟೊರೆಂಟ್ ನಡೆಸುತ್ತಿದ್ದರೆ, ಝಾಕೀರ್ ಅವರು ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ

ಬಿಜೆಪಿ ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಶೋಕ್ ವರ್ಮಾ ಆಕ್ರೋಶ ಹೊರಹಾಕುತ್ತಾರೆ. “ಸುಳ್ಳು ನಿರೂಪಣೆಯನ್ನು ಹರಡಲಾಗುತ್ತಿದೆ. ಸಂತಾಲ್ ಪರಗಣದಲ್ಲಿ ಬಾಂಗ್ಲಾದೇಶಿ ಒಳನುಸುಳುಕೋರರ ಸಮಸ್ಯೆ ಇಲ್ಲ,” ಎಂದು ಅವರು ಹೇಳುತ್ತಾರೆ. ಚೋಟಾ ನಾಗ್ಪುರ ಮತ್ತು ಸಂತಾಲ್ ಪರಗಣ ಟೆನೆನ್ಸಿ ಕಾಯಿದೆಗಳು ಆದಿವಾಸಿಗಳ ಭೂಮಿಯನ್ನು ಮಾರಾಟ ಮಾಡುವುದನ್ನು ನಿಷೇಧಿಸುತ್ತವೆ ಮತ್ತು ಇಲ್ಲಿ ಕಂಡುಬರುವ ಭೂಮಾರಾಟದ ಪ್ರಕರಣಗಳಲ್ಲಿ ಸ್ಥಳೀಯರು ಭಾಗಿಗಳಾಗಿದ್ದಾರೆಯೇ ಹೊರತು ಬಾಂಗ್ಲಾದೇಶಿಯರಲ್ಲ ಎಂದು ಅಶೋಕ್‌ ವರ್ಮಾ ಹೇಳುತ್ತಾರೆ.

ಬಾಂಗ್ಲಾದೇಶಿ ಒಳನುಸುಳುಕೋರರಿಂದಾಗಿ ಜಾರ್ಖಂಡ್‌ನ ಸಂತಾಲ್ ಪರಗಣ ಪ್ರದೇಶದ 'ಜನಸಂಖ್ಯೆಯೇ' ಬದಲಾಗುತ್ತಿದೆ ಎಂದು ಹೇಳುವ ಬಿಜೆಪಿ ನಾಯಕರು, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ (ಎನ್‌ಸಿಎಸ್‌ಟಿ) ಇತ್ತೀಚಿನ ವರದಿಯನ್ನು ಉಲ್ಲೇಖಿಸುತ್ತಿದ್ದಾರೆ. ಎನ್‌ಸಿಎಸ್‌ಟಿಯು ಗೃಹ ಸಚಿವಾಲಯಕ್ಕೆ ಸಲ್ಲಿಸಿದ ಈ ವರದಿಯನ್ನು  ಜಾರ್ಖಂಡ್ ಹೈಕೋರ್ಟ್‌ನ ಮುಂದಿಡಲಾಯಿತು. ಆದರೆ ಈ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸಿಲ್ಲ.

ಅಶೋಕ್ ವರ್ಮಾ ಅವರು ಎನ್‌ಸಿಎಸ್‌ಟಿಯನ್ನು ತನಿಖೆ ನಡೆಸುವ ಸ್ವತಂತ್ರ ಸತ್ಯಶೋಧನಾ ತಂಡದ ಭಾಗವಾಗಿದ್ದರು. ಇವರು ಇವನ್ನು ಆಧಾರರಹಿತ ಸಂಶೋಧನೆಗಳು ಎಂದು ಕರೆಯುತ್ತಾರೆ. ಬಡತನ, ಅಪೌಷ್ಟಿಕತೆ, ಕಡಿಮೆ ಜನನ ಪ್ರಮಾಣ ಮತ್ತು ಹೆಚ್ಚಿದ ಮರಣ ಪ್ರಮಾಣಗಳಿಂದಾಗಿ ಆದಿವಾಸಿಗಳು ಈ ಪ್ರದೇಶವನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ಅವರು ಪ್ರತಿಪಾದಿಸುತ್ತಾರೆ.

ಕೋಮು ಧ್ರುವೀಕರಣದ ಸುತ್ತವೇ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳಿಂದ ಯಾವುದೇ ಉಪಯೋಗವಿಲ್ಲ.  “ಅದನ್ನು [ಟಿವಿ] ಆಫ್ ಮಾಡಿ, ಸೌಹಾರ್ದತೆ ಅದಾಗಿಯೇ ಮತ್ತೆ ಬರುತ್ತದೆ. ಪತ್ರಿಕೆಗಳನ್ನು ಹೆಚ್ಚಾಗಿ ವಿದ್ಯಾವಂತರು ಓದುತ್ತಾರೆ, ಹೆಚ್ಚಿನ ಎಲ್ಲರೂ  ಟಿವಿಯನ್ನೇ ನೋಡುತ್ತಾರೆ,” ಎಂದು ಝಾಕೀರ್ ಹೇಳುತ್ತಾರೆ.

ಅವರ ಪ್ರಕಾರ, “ಈ ಚುನಾವಣೆಯ ಮುಖ್ಯ ವಿಷಯವೆಂದರೆ ಹಣದುಬ್ಬರ. ಆಟಾ [ಗೋಧಿ ಹಿಟ್ಟು], ಚಾವಲ್ [ಅಕ್ಕಿ], ದಾಲ್ [ಬೇಳೆ], ತೇಲ್ [ಎಣ್ಣೆ]... ಎಲ್ಲದರ ಬೆಲೆಯೂ ಹೆಚ್ಚಾಗಿದೆ.”

ಜಾರ್ಖಂಡ್ ಜನಾಧಿಕಾರ್ ಮಹಾಸಭಾದ ಸದಸ್ಯ ಅಶೋಕ್, "ಸಂತಾಲ್ ಪರಗಣದ ಮುಸ್ಲೀಮರು ಮತ್ತು ಆದಿವಾಸಿಗಳ ಸಂಸ್ಕೃತಿಗಳಲ್ಲಿ, ಆಹಾರ ಪದ್ಧತಿಗಳಲ್ಲಿ ಸಾಮ್ಯತೆಗಳಿವೆ.  ಒಬ್ಬರು ಇನ್ನೊಬ್ಬರ ಹಬ್ಬಗಳನ್ನು ಆಚರಿಸುತ್ತಾರೆ. ನೀವು ಸ್ಥಳೀಯ ಆದಿವಾಸಿ ಹಾತ್ [ಮಾರುಕಟ್ಟೆಗಳಿಗೆ] ಹೋದರೆ ಎರಡೂ ಸಮುದಾಯಗಳನ್ನು ನೀವಲ್ಲಿ  ನೋಡಬಹುದು,” ಎನ್ನುತ್ತಾರೆ.

*****

2024 ರ ಜೂನ್ 17 ರಂದು ಮುಸ್ಲೀಮರ ಹಬ್ಬ ಬಕ್ರೀದ್ ದಿನ,  ಗೋಪಿನಾಥಪುರದಲ್ಲಿ ಅವರು ಪ್ರಾಣಿ ಬಲಿ ನೀಡುವ ಬಗ್ಗೆ ಕೋಮು ಉದ್ವಿಗ್ನತೆ ಉಂಟಾಗಿತ್ತು. ಅಜ್ನಾದಂತೆ, ಈ ಗ್ರಾಮವೂ ಪಾಕೂರ್ ಜಿಲ್ಲೆಯಲ್ಲಿದೆ. ಇಲ್ಲಿ ಹಿಂದೂ ಮತ್ತು ಮುಸ್ಲೀಂ ಸಮುದಾಯಗಳ ಜನರು ವಾಸಿಸುತ್ತಾರೆ.  ಕಿರಿದಾದ ನೀರಾವರಿ ಕಾಲುವೆಗೆ ಅಡ್ಡಲಾಗಿ ನೆರೆಯ ರಾಜ್ಯ ಪಶ್ಚಿಮ ಬಂಗಾಳವಿದೆ. ಈ ಗ್ರಾಮದ ಹೆಚ್ಚಿನ ನಿವಾಸಿಗಳು ಕಾರ್ಮಿಕರು, ಕೃಷಿ ಮಾಡುವವರು ಮತ್ತು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವವರು.

PHOTO • Ashwini Kumar Shukla
PHOTO • Ashwini Kumar Shukla

ಎಡ: ನೋಮಿತಾ ಮತ್ತು ಅವರ ಪತಿ ದೀಪಚಂದ್ ಮಂಡಲ್ ಅವರ ಮನೆಯ ಹೊರಗೆ 2024 ರ ಜೂನ್ ತಿಂಗಳಲ್ಲಿ ದಾಳಿ ನಡೆಯಿತು. ಬಲ: ಅವರು ಪರಿಹಾರವನ್ನು ಪಡೆಯುವ ಉದ್ದೇಶಕ್ಕೆ ಸಂಭವಿಸಿದ ಹಾನಿಯ ಫೋಟೋವನ್ನೂ ತೆಗೆದಿಟ್ಟುಕೊಂಡಿದ್ದಾರೆ

PHOTO • Ashwini Kumar Shukla
PHOTO • Ashwini Kumar Shukla

ಎಡ: ನೋಮಿತಾ ಅವರ ಮನೆಯ ಹೊರಗಿರುವ ಅಡುಗೆ ಕೋಣೆಯನ್ನು ಕೂಡ ಧ್ವಂಸ ಮಾಡಲಾಗಿದೆ. ಬಲ: ಪಶ್ಚಿಮ ಬಂಗಾಳ ಮತ್ತು ಜಾರ್ಖಂಡನ್ನು ಬೇರ್ಪಡಿಸುವ ಫೀಡರ್ ಕಾಲುವೆ

ಗಾಂಧಿಪುರ ಪಂಚಾಯಿತಿಯ ವಾರ್ಡ್ ನಂ.11ಕ್ಕೆ ಪೊಲೀಸರನ್ನು ಕರೆಸಲಾಯಿತು. ಸಮಸ್ಯೆಯನ್ನು ಒಮ್ಮೆ ತಣ್ಣಗೆ ಮಾಡಲಾಯಿತು, ಆದರೆ ಮರುದಿನ ಮತ್ತೆ ಸಂಘರ್ಷ ಸ್ಫೋಟಗೊಂಡಿತು. ನೂರಿನ್ನೂರು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬರುವುದನ್ನು ನೋಡಿದ್ದ ಸ್ಥಳೀಯ ನಿವಾಸಿ ಸುಧೀರ್ ಅವರು "ಜನರ ಗುಂಪು ಗುಂಪಾಗಿ ಕಲ್ಲುಗಳನ್ನು ಎಸೆಯುತ್ತಿದ್ದರು," ಎಂದು ಹೇಳುತ್ತಾರೆ. "ಎಲ್ಲೆಲ್ಲೂ ಹೊಗೆ ತುಂಬಿತ್ತು. ಅವರು ಮೋಟಾರು ಸೈಕಲ್‌ಗಳಿಗೆ, ಪೊಲೀಸರ ವಾಹನಕ್ಕೆ ಬೆಂಕಿ ಹಚ್ಚಿದ್ದರು, " ಎಂದು ಆ ಘಟನೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ.

ನೊಮಿತಾ ಮಂಡಲ್ ತಮ್ಮ ಮಗಳೊಂದಿಗೆ ಮನೆಯಲ್ಲಿದ್ದಾಗ ಸ್ಫೋಟದ ಶಬ್ದ ಕೇಳಿಸಿತು. “ಇದ್ದಕ್ಕಿದ್ದಂತೆ ನಮ್ಮ ಮನೆಯ ಮೇಲೆ ಕಲ್ಲುಗಳನ್ನು ಎಸೆದರು. ನಾವು ಒಳಗೆ ಓಡಿದೆವು,” ಎಂದು ಹೇಳುವಾಗ ಅವರ ದನಿ ಭಯದಿಂದ ಕಂಪಿಸುತ್ತಿತ್ತು.

ಅಷ್ಟೊತ್ತಿಗಾಗಲೇ ಬೀಗ ಒಡೆದು ಮನೆಯ ಒಳಗೆ ನುಗ್ಗಿದ ಕೆಲವರ ಗುಂಪು ತಾಯಿ ಮತ್ತು ಮಗಳು ಇಬ್ಬರನ್ನೂ ಥಳಿಸಲು ಆರಂಭಿಸಿತು. "ಅವರು ನನಗೆ ಇಲ್ಲಿ ಮತ್ತೆ ಇಲ್ಲಿ ಹೊಡೆದರು. ನೋವು ಇನ್ನೂ ಹಾಗೆಯೇ ಇದೆ," ಎಂದು 16 ವರ್ಷ ವಯಸ್ಸಿನ ಅವರ ಮಗಳು ತನ್ನ ಸೊಂಟ ಮತ್ತು ಭುಜಗಳನ್ನು ತೋರಿಸುತ್ತಾ ಹೇಳುತ್ತಾಳೆ. ಮನೆಗೆ ನುಗ್ಗಿದ ಆ ಗಂಡಸರ ಗುಂಪು ಮನೆಯಿಂದ ಪ್ರತ್ಯೇಕವಾಗಿರುವ ಅಡಿಗೆ ಮನೆಯನ್ನು ಸುಟ್ಟು ಹಾಕಿದರು ಎಂದು ಪರಿಗೆ ಆ ಸ್ಥಳವನ್ನು ತೋರಿಸುತ್ತಾ ನೋಮಿತಾ ಹೇಳುತ್ತಾರೆ.

ಮುಫಾಸಿಲ್‌ನ ಪೊಲೀಸ್ ಠಾಣೆಯ ಪ್ರಭಾರಿ ಸಂಜಯ್ ಕುಮಾರ್ ಝಾ ಅವರು ಘಟನೆಯನ್ನು ಬಗ್ಗೆ, “ಹೆಚ್ಚು ಹಾನಿಯೇನು ಆಗಿರಲಿಲ್ಲ. ಗುಡಿಸಲನ್ನು ಸುಟ್ಟು ಕರಕಲು ಮಾಡಿದ್ದರು, ಸಣ್ಣಪುಟ್ಟ ವಿಧ್ವಂಸಕ ಕೃತ್ಯಗಳು ನಡೆದಿವೆ. ಯಾರೂ ಸತ್ತಿಲ್ಲ,” ಎಂದು ಹೇಳುತ್ತಾರೆ.

32 ವರ್ಷದ ನೋಮಿತಾ ಜಾರ್ಖಂಡ್‌ನ ಪಾಕೂರ್ ಜಿಲ್ಲೆಯ ಗೋಪಿನಾಥಪುರದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಾರೆ. ಈ ಪ್ರದೇಶದಲ್ಲಿ ಅನೇಕ ತಲೆಮಾರುಗಳಿಂದ ವಾಸಿಸುತ್ತಿರುವ ಹಲವಾರು ಕುಟುಂಬಗಳಲ್ಲಿ ಇವರದ್ದೂ ಒಂದು.  "ಇದು ನಮ್ಮ ಮನೆ, ನಮ್ಮ ಭೂಮಿ," ಎಂದು ಅವರು ದೃಢವಾದ ದನಿಯಲ್ಲಿ ಹೇಳುತ್ತಾರೆ.

PHOTO • Ashwini Kumar Shukla
PHOTO • Ashwini Kumar Shukla

ಎಡ: ದಾಳಿ ನಡೆದಾಗಿನಿಂದ ಹೇಮಾ ಮಂಡಲ್ ಭಯದಲ್ಲೇ ಬದುಕುತ್ತಿದ್ದಾರೆ. 'ಹಿಂದೆ ಹಿಂದೂ-ಮುಸ್ಲಿಂ ಸಮಸ್ಯೆ ಇರಲಿಲ್ಲ, ಆದರೆ ಈಗ ಯಾವಾಗಲೂ ಭಯವೇ' ಎಂದು ಅವರು ಹೇಳುತ್ತಾರೆ. ಬಲ: ಧ್ವಂಸವಾಗಿರುವ ಅವರ ಅಡುಗೆ ಮನೆ

PHOTO • Ashwini Kumar Shukla
PHOTO • Ashwini Kumar Shukla

ಎಡ: 'ಇಲ್ಲಿನ ಮುಸ್ಲಿಮರು ಹಿಂದೂಗಳ ಪರವಾಗಿ ನಿಂತಿದ್ದಾರೆ' ಎಂದು ರಿಹಾನ್ ಶೇಖ್ ಹೇಳುತ್ತಾರೆ. ಬಲ: ಅವರ ಮೊಬೈಲ್ ಫೋನಿನಲ್ಲಿ ಆ ಘಟನೆಯ ವೀಡಿಯೊ ಇದೆ

ಪಾಕೂರ್ ಜಿಲ್ಲೆಯ ಗಂಧೈಪುರ ಪಂಚಾಯತ್‌ನ ಭಾಗವಾಗಿರುವ ಗೋಪಿನಾಥಪುರವು ಹಿಂದೂಗಳೇ ಬಹುಸಂಖ್ಯಾತರಾಗಿರುವ ಪ್ರದೇಶ ಎಂದು ಜಿಲ್ಲಾ ಕೌನ್ಸಿಲ್ ಸದಸ್ಯೆ ಪಿಂಕಿ ಮಂಡಲ್ ಹೇಳುತ್ತಾರೆ. ನೋಮಿತಾ ಅವರ ಪತಿ ದೀಪಚಂದ್ ಅವರ ಕುಟುಂಬ ಐದು ತಲೆಮಾರುಗಳಿಂದ ಇಲ್ಲಿ ವಾಸ ಮಾಡುತ್ತಿದೆ. "ಹಿಂದೆ ಯಾವುದೇ ಹಿಂದೂ-ಮುಸ್ಲಿಂ ಸಮಸ್ಯೆ ಇರಲಿಲ್ಲ, ಆದರೆ ಆ ಬಕ್ರೀದ್ ಘಟನೆಯ ನಂತರ ಪರಿಸ್ಥಿತಿ ಹದಗೆಟ್ಟಿದೆ," ಎಂದು ದಾಳಿ ನಡೆಯುವಾಗ ತಮ್ಮ ಇತರ ಇಬ್ಬರು ಮಕ್ಕಳೊಂದಿಗೆ ದೂರದೂರಿನಲ್ಲಿ ಇದ್ದ 34 ವರ್ಷ ಪ್ರಾಯದ ದೀಪಚಂದ್ ಹೇಳುತ್ತಾರೆ.

"ಯಾರೋ ಪೊಲೀಸರಿಗೆ ಫೋನ್ ಮಾಡಿದ್ದರು,‌ ಇಲ್ಲದಿದ್ದರೆ ಯಾರಿಗೆ ಗೊತ್ತಾಗುತ್ತಿತ್ತು ನಮಗೆ ಏನಾಗುತ್ತಿದೆ ಎಂದು,” ಎಂದು ನೋಮಿತಾ ಹೇಳುತ್ತಾರೆ. ಈ ಘಟನೆಯಾದ ನಂತರದ ವಾರವೇ ಆವರು ತಮ್ಮ ಅತ್ತೆ-ಮಾವನಿಂದ 50,000 ರುಪಾಯಿ ತೆಗೆದುಕೊಂಡು ಮನೆಯ ಕಿಟಕಿ ಮತ್ತು ಬಾಗಿಲುಗಳಿಗೆ ಗ್ರಿಲ್‌ಗಳನ್ನು ಹಾಕಿಸಿದರು. "ಇಲ್ಲದಿದ್ದರೆ ನಾವು ಇಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಆ ದಿನ ನಾನು ಕೆಲಸಕ್ಕೆ ಹೋಗಬಾರದಿತ್ತು," ಎಂದು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುವ ದೀಪಚಂದ್ ಹೇಳುತ್ತಾರೆ.

ಹೇಮಾ ಮಂಡಲ್ ಮನೆಯ  ಜಗುಲಿಯ ಮೇಲೆ ಕುಳಿತುಕೊಂಡು ಟೆಂಡು ಎಲೆಗಳಿಂದ ಬೀಡಿಗಳನ್ನು ಕಟ್ಟುತ್ತಾ, "ಹಿಂದೆ ಹಿಂದೂ-ಮುಸ್ಲಿಂ ಎಂಬ ಸಮಸ್ಯೆ ಇರಲಿಲ್ಲ, ಆದರೆ ಈಗ ಯಾವಾಗಲೂ ಭಯವೇ," ಎಂದು ಅವರು ಹೇಳುತ್ತಾರೆ. ಕಾಲುವೆಯಲ್ಲಿ ನೀರು ಬತ್ತಿಹೋದಾಗ, "ಮತ್ತೆ ಜಗಳಗಳು ಶುರುವಾಗುತ್ತದೆ," ಎನ್ನುತ್ತಾ ತಮ್ಮ  ಮಾತನ್ನು ಮುಂದುವರಿಸುತ್ತಾರೆ. ಅಲ್ಲದೇ,  ಬಂಗಾಳದ ಜನರೂ ಗಡಿಯಾಚೆಯಿಂದ ಬೆದರಿಕೆಗಳನ್ನು ಹಾಕುತ್ತಿದ್ದಾರೆ. "ಸಂಜೆ ಆರು ಗಂಟೆಯ ನಂತರ ಈ ಇಡೀ ರಸ್ತೆ ಮೌನವಾಗುತ್ತದೆ," ಎಂದು ಅವರು ಹೇಳುತ್ತಾರೆ.

ಸಂಘರ್ಷಕ್ಕೆ ಕಾರಣವಾಗಿರುವ ರಾಜಕಾಲುವೆಯು ಹೇಮಾ ಅವರ ಮನೆಗೆ ಹೋಗುವ ರಸ್ತೆಗೆ ಸಮಾನಾಂತರವಾಗಿ ಹಾದು ಹೋಗಿದೆ. ಮಧ್ಯಾಹ್ನದ ವೇಳೆಯಲ್ಲೂ ಈ ಪ್ರದೇಶ ನಿರ್ಜನವಾಗಿರುತ್ತದೆ, ಸಂಜೆ ವೇಳೆ ಬೀದಿ ದೀಪಗಳಿಲ್ಲದೆ ಕತ್ತಲಲ್ಲಿ ಮುಳುಗಿಹೋಗಿರುತ್ತದೆ.

ಕಾಲುವೆಯ ಬಗ್ಗೆ ಮಾತನಾಡುತ್ತಾ 27 ವರ್ಷದ ರಿಹಾನ್ ಶೇಖ್ ಅವರು, “ಈ ಘಟನೆಯಲ್ಲಿ ಭಾಗಿಗಳಾಗಿರುವ ಎಲ್ಲರೂ [ಪಶ್ಚಿಮ] ಬಂಗಾಳದಿಂದ ಬಂದವರು. ಇಲ್ಲಿನ ಮುಸಲ್ಮಾನರು ಹಿಂದೂಗಳ ಜೊತೆಗೆ ನಿಂತಿದ್ದಾರೆ,” ಎಂದು ಹೇಳುತ್ತಾರೆ. ರಿಹಾನ್ ಒಬ್ಬರು ಹಿಡುವಳಿ ರೈತರಾಗಿದ್ದು, ಭತ್ತ, ಗೋಧಿ, ಸಾಸಿವೆ ಮತ್ತು ಜೋಳ ಬೆಳೆಯುತ್ತಾರೆ.  ಏಳು ಜನರು ಇರುವ ಕುಟುಂಬದಲ್ಲಿ ಇವರೊಬ್ಬರೇ ಸಂಪಾದನೆ ಮಾಡುವವರು.

ಬಿಜೆಪಿಯವರು ಹಬ್ಬಿಸುತ್ತಿರುವ ಎಲ್ಲಾ ಕತೆಗಳನ್ನು ತಳ್ಳಿಹಾಕುವ ರಿಹಾನ್‌ ಅವರು, “ನಾವು ಅನೇಕ ತಲೆ ಮಾರುಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಾವು ಬಾಂಗ್ಲಾದೇಶೀಯರೇ?” ಎಂದು ಈ ವರದಿಗಾರನನ್ನು ಕೇಳುತ್ತಾರೆ.

ಅನುವಾದ: ಚರಣ್‌ ಐವರ್ನಾಡು

Ashwini Kumar Shukla

ಅಶ್ವಿನಿ ಕುಮಾರ್ ಶುಕ್ಲಾ ಜಾರ್ಖಂಡ್ ಮೂಲದ ಸ್ವತಂತ್ರ ಪತ್ರಕರ್ತ ಮತ್ತು ಹೊಸದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (2018-2019) ಕಾಲೇಜಿನ ಪದವೀಧರರು. ಅವರು 2023ರ ಪರಿ-ಎಂಎಂಎಫ್ ಫೆಲೋ ಕೂಡಾ ಹೌದು.

Other stories by Ashwini Kumar Shukla
Editor : Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Other stories by Sarbajaya Bhattacharya
Translator : Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Charan Aivarnad