ಮಧುರೈ ಜಿಲ್ಲೆಯ ಟ್ರಾನ್ಸ್ ಜಾನಪದ ಕಲಾವಿದರ ಪಾಲಿಗೆ ವರ್ಷದ ಮೊದಲ ಆರು ತಿಂಗಳುಗಳು ನಿರ್ಣಾಯಕವಾದುದು. ಏಕೆಂದರೆ ಈ ಅವಧಿಯಲ್ಲಿ, ಹಳ್ಳಿಗಳು ತಮ್ಮ ಊರಿನ ಹಬ್ಬಗಳನ್ನು ಆಯೋಜಿಸುತ್ತವೆ ಮತ್ತು ದೇವಾಲಯಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಆದರೆ ಲಾಕ್‌ಡೌನ್ ಸಮಯದಲ್ಲಿ, ದೊಡ್ಡ ಸಾರ್ವಜನಿಕ ಕೂಟಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳು ತಮಿಳುನಾಡಿನ ಸರಿಸುಮಾರು 500 ಟ್ರಾನ್ಸ್ ಮಹಿಳಾ ಕಲಾವಿದರ ಮೇಲೆ ತೀವ್ರ ಪರಿಣಾಮ ಬೀರಿವೆ.

ಅಂತಹ ಒಬ್ಬ ಜಾನಪದ ಕಲಾವಿದರಾದ ಮ್ಯಾಗಿಯವರ ಮನೆ ಮಧುರೈನಿಂದ 10 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ವಿಲಂಗುಡಿ ಪಟ್ಟಣದಲ್ಲಿದೆ. ಇಂದು ಅವರ ಎರಡು ಕೋಣೆಗಳ ಮನೆ ಇತರ ಟ್ರಾನ್ಸ್ ಮಹಿಳೆಯರಿಗೆ ನೆಲೆ ಮತ್ತು ಪರಸ್ಪರ ಭೇಟಿಯ ಸ್ಥಳವಾಗಿದೆ. ಬೀಜ ಮೊಳಕೆಯೊಡೆಯುವ ಸಂದರ್ಭದ ಆಚರಣೆಯ ಭಾಗವಾಗಿ ಬಿತ್ತನೆಯ ನಂತರ ಸಾಂಪ್ರದಾಯಿಕ ಕುಮ್ಮಿ ಪಾಟ್ಟು ಹಾಡುಗಳನ್ನು ಪ್ರದರ್ಶಿಸುವ ಜಿಲ್ಲೆಯ ಕೆಲವು ಟ್ರಾನ್ಸ್ ಮಹಿಳೆಯರಲ್ಲಿ ಮ್ಯಾಗಿ ಒಬ್ಬರು. ಈ ನೃತ್ಯ-ಸಂಗೀತವನ್ನು ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ತಮಿಳುನಾಡಿನಲ್ಲಿ ನಡೆಯುವ 10 ದಿನಗಳ ಮುಲೈಪರಿ ಹಬ್ಬದಲ್ಲಿ ಆಚರಿಸಲಾಗುತ್ತದೆ, ಈ ಹಾಡನ್ನು ಮಳೆ, ಮಣ್ಣಿನ ಫಲವತ್ತತೆ ಮತ್ತು ಉತ್ತಮ ಫಸಲಿಗಾಗಿ ಗ್ರಾಮ ದೇವತೆಗಳ ಪ್ರಾರ್ಥನೆಯಾಗಿ ಹಾಡಲಾಗುತ್ತದೆ.

ಅವರ ಸ್ನೇಹಿತರು ಮತ್ತು ಸಹೋದ್ಯೋಗಿಗಳೆಲ್ಲರೂ ಈ ಹಾಡುಗಳಿಗೆ ನೃತ್ಯ ಮಾಡುತ್ತಾರೆ. ಇದು ಅವರ ಬಹುಕಾಲದ ಆದಾಯ ಮೂಲವಾಗಿದೆ. ಆದರೆ ಕೊರೋನಾ-ಲಾಕ್‌ಡೌನ್‌ಗಳ ಕಾರಣ ಈ ಹಬ್ಬವು ಜುಲೈ 2020ರಲ್ಲಿ ನಡೆಯಲಿಲ್ಲ ಮತ್ತು ಈ ಬಾರಿಯೂ ನಡೆಯಲಿಲ್ಲ (ನೋಡಿ: In Madurai: the trauma of trans folk artists ). ಅವರ ಇತರ ನಿಯಮಿತ ಆದಾಯದ ಮೂಲವಾಗಿದ್ದ ಮಧುರೈ ಮತ್ತು ಸುತ್ತಮುತ್ತಲಿನ ಅಂಗಡಿಗಳಿಂದ ಅಥವಾ ಬೆಂಗಳೂರಿನಲ್ಲಿ ಹಣವನ್ನು ಸಂಗ್ರಹಿಸುವುದು ಸಹ ನಿಂತುಹೋಯಿತು. ಇದರೊಂದಿಗೆ, ಅವರ ಸರಿಸುಮಾರು ರೂ. 8,000ದಿಂದ 10,000 ರೂ. ತನಕ ಇದ್ದ ಮಾಸಿಕ ಆದಾಯವು ಲಾಕ್‌ಡೌನ್‌ಗಳ ಅವಧಿಯಲ್ಲಿ ಬಹುತೇಕ ಸೊನ್ನೆಗೆ ಬಂದು ನಿಂತಿತು.

PHOTO • M. Palani Kumar
PHOTO • M. Palani Kumar

ಕೆ.ಸ್ವೇಸ್ತಿಕಾ (ಎಡ) 24 ವರ್ಷದ ಕುಮ್ಮಿ ನರ್ತಕಿ-ಪ್ರದರ್ಶಕಿ.ಟ್ರಾನ್ಸ್ ಮಹಿಳೆಯಾಗಿದ್ದಕ್ಕಾಗಿ ಎದುರಿಸಿದ ಕಿರುಕುಳವನ್ನು ಸಹಿಸಲಾರದೆ, ಆಕೆ ಬಿಎ ಪದವಿ ಓದುವುದನ್ನು ನಿಲ್ಲಿಸಬೇಕಾಯಿತು - ಆದರೆ ಉದ್ಯೋಗದ ಕಾರಣಕ್ಕಾಗಿ ಈಗಲೂ ಶಿಕ್ಷಣದ ಕನಸು ಕಾಣುತ್ತಾರೆ. ತನ್ನ ಜೀವನೋಪಾಯವನ್ನು ಗಳಿಸಲು ಅವರು ಅಂಗಡಿಗಳಿಂದ ಹಣವನ್ನು ಸಂಗ್ರಹಿಸುತ್ತಾರೆ ಆದರೆ ಆ ಚಟುವಟಿಕೆ ಮತ್ತು ಆದಾಯಕ್ಕೆ ಲಾಕ್‌ಡೌನ್‌ಗಳಿಂದಾಗಿ ಹೊಡೆತ ಬಿದ್ದಿದೆ.

ಭವ್ಯಶ್ರೀ (ಬಲ), 25, ಬಿಕಾಂ ಪದವಿಯಿದ್ದೂ ಅವರಿಗೊಂದು ಕೆಲಸ ಹುಡುಕಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಕೂಡ ಕುಮ್ಮಿ ನರ್ತಕಿ-ಪ್ರದರ್ಶಕಿಯಾಗಿದ್ದು ತಾನು ಇತರ ಟ್ರಾನ್ಸ್ ಮಹಿಳೆಯರೊಂದಿಗೆ ಇದ್ದಾಗಲಷ್ಟೇ ಸಂತೋಷವಾಗಿರುತ್ತೇನೆಂದು ಹೇಳುತ್ತಾರೆ. ಅವರು ಮಧುರೈಯಲ್ಲಿರುವ ತನ್ನ ಮನೆಯನ್ನು ಆಗಾಗ ನೆನಪಿಸಿಕೊಳ್ಳುತ್ತಾರಾದರೂ ಅಲ್ಲಿಗೆ ಹೋಗುವುದನ್ನು ತಪ್ಪಿಸುತ್ತಾರೆ. "ನಾನು ಮನೆಗೆ ಹೋದಾಗ, ಅವರು ನನಗೆ ಮನೆಯೊಳಗೆ ಇರುವಂತೆ ಹೇಳುತ್ತಿದ್ದರು. ಮನೆಯ ಹೊರಗೆ ಯಾರೊಂದಿಗೂ ಮಾತನಾಡಬಾರದೆಂದು ಅವರು ನನಗೆ ಹೇಳುತ್ತಿದ್ದರು."

PHOTO • M. Palani Kumar
PHOTO • M. Palani Kumar
PHOTO • M. Palani Kumar

ಆರ್. ಶಿಫಾನಾ (ಎಡ) 23 ವರ್ಷದ ಕುಮ್ಮಿ ನರ್ತಕಿ- ಟ್ರಾನ್ಸ್ ಮಹಿಳೆ ಎಂಬ ಕಾರಣಕ್ಕೆ ಎದುರಾದ ನಿರಂತರ ಕಿರುಕುಳದಿಂದಾಗಿ ಎರಡನೇ ವರ್ಷದಲ್ಲಿ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ ಪ್ರದರ್ಶಕಿ. ನಂತರ ತನ್ನ ತಾಯಿಯ ಒತ್ತಾಯದ ಮೇರೆಗೆ ಓದನ್ನು ಪುನರಾರಂಭಿಸಿ ಬಿಕಾಂ ಪದವಿ ಪಡೆದರು. ಮಾರ್ಚ್ 2020ರ ಲಾಕ್‌ಡೌನ್ ಪ್ರಾರಂಭವಾಗುವವರೆಗೂ ಅವರು ಮಧುರೈಯಲ್ಲಿ ಅಂಗಡಿಗಳಿಂದ ಹಣ ಸಂಗ್ರಹಿಸುವ ಮೂಲಕ ತನ್ನ ಜೀವನೋಪಾಯವನ್ನು ಗಳಿಸುತ್ತಿದ್ದರು.

ವಿ. ಅರಸಿ (ನಡುವೆ) 34 ವರ್ಷದ ಇವರು ತಮಿಳು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಕುಮ್ಮಿ ನರ್ತಕಿ-ಪ್ರದರ್ಶಕರು ಹಾಗೂ ಇವರು ಎಂಫಿಲ್ ಮತ್ತು ಬಿಎಡ್ ಪದವಿಗಳನ್ನು ಸಹ ಹೊಂದಿದ್ದಾರೆ. ತನ್ನ ಸಹಪಾಠಿಗಳಿಂದ ಸಾಕಷ್ಟು ಕಿರುಕುಳಕ್ಕೊಳಗಾಗಿದ್ದರೂ, ಅವರು ತನ್ನ ಓದಿನತ್ತಲೇ ತಮ್ಮ ಗಮನ ಹರಿಸಿದರು. ನಂತರ ಉದ್ಯೋಗಕ್ಕಾಗಿ ಹಲವೆಡೆ ಅರ್ಜಿ ಸಲ್ಲಿಸಿದರಾದರೂ ಕೆಲಸ ಸಿಗಲಿಲ್ಲ. ಲಾಕ್‌ಡೌನ್‌ಗಳಿಗೆ ಮೊದಲು, ಅವರೂ ತನ್ನ ಖರ್ಚುಗಳನ್ನು ನಿಭಾಯಿಸಲು ಅಂಗಡಿಗಳಿಂದ ಹಣವನ್ನು ಸಂಗ್ರಹಿಸುವುದನ್ನೇ ಆಶ್ರಯಿಸಿದ್ದರು.

ಐ. ಶಾಲಿನಿ (ಬಲ) 30 ವರ್ಷ ವಯಸ್ಸಿನ ಕುಮ್ಮಿ ನರ್ತಕಿ-ಪ್ರದರ್ಶಕಿಯಾಗಿದ್ದು, ಅವರು 11ನೇ ತರಗತಿಯಲ್ಲಿರುವಾಗ ಕಿರುಕುಳಗಳನ್ನು ಇನ್ನು ಸಹಿಸಲು ಸಾಧ್ಯವಿಲ್ಲವೆನ್ನಿಸಿ ಪ್ರೌಢಶಾಲೆಯನ್ನು ತೊರೆದರು. ಅವರು ಅಂಗಡಿಗಳಿಂದ ಹಣವನ್ನು ಸಂಗ್ರಹಿಸುತ್ತಿದ್ದರು ಜೊತೆಗೆ ಸುಮಾರು 15 ಪ್ರದರ್ಶನಗಳನ್ನು ನೀಡುತ್ತಿದ್ದರು, ಆದರೆ ಲಾಕ್‌ಡೌನ್‌ಗಳು ಶುರುವಾದ ದಿನಗಳಿಂದ ಬದುಕನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ.  ಶಾಲಿನಿ ತನಗೆ ತನ್ನ ತಾಯಿ ನೆನಪು ಸದಾ ಕಾಡುತ್ತದೆಯೆಂದು ಹೇಳುತ್ತಾರೆ. ಅವರು ನನ್ನೊಂದಿಗೆ ಇರುವಂತಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ಅವರ ಭಾವನೆ. ಜೊತೆಗೆ "ನಾನು ಸಾಯುವ ಮೊದಲು ಒಮ್ಮೆಯಾದರೂ ನನ್ನ ತಂದೆ ನನ್ನೊಂದಿಗೆ ಮಾತನಾಡಬೇಕೆನ್ನುವುದು ನನ್ನ ಬಯಕೆ" ಎಂದು ಭಾವುಕರಾಗಿ ನುಡಿಯುತ್ತಾರೆ.

ಅನುವಾದ: ಶಂಕರ ಎನ್. ಕೆಂಚನೂರು

Reporting : S. Senthalir

ಸೆಂದಳಿರ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರು. ಅವರು ಲಿಂಗ, ಜಾತಿ ಮತ್ತು ಶ್ರಮದ ವಿಭಜನೆಯ ಬಗ್ಗೆ ವರದಿ ಮಾಡುತ್ತಾರೆ. ಅವರು 2020ರ ಪರಿ ಫೆಲೋ ಆಗಿದ್ದರು

Other stories by S. Senthalir
Photographs : M. Palani Kumar

ಪಳನಿ ಕುಮಾರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಟಾಫ್ ಫೋಟೋಗ್ರಾಫರ್. ದುಡಿಯುವ ವರ್ಗದ ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರ ಬದುಕನ್ನು ದಾಖಲಿಸುವುದರಲ್ಲಿ ಅವರಿಗೆ ಆಸಕ್ತಿ. ಪಳನಿ 2021ರಲ್ಲಿ ಆಂಪ್ಲಿಫೈ ಅನುದಾನವನ್ನು ಮತ್ತು 2020ರಲ್ಲಿ ಸಮ್ಯಕ್ ದೃಷ್ಟಿ ಮತ್ತು ಫೋಟೋ ದಕ್ಷಿಣ ಏಷ್ಯಾ ಅನುದಾನವನ್ನು ಪಡೆದಿದ್ದಾರೆ. ಅವರು 2022ರಲ್ಲಿ ಮೊದಲ ದಯನಿತಾ ಸಿಂಗ್-ಪರಿ ಡಾಕ್ಯುಮೆಂಟರಿ ಫೋಟೋಗ್ರಫಿ ಪ್ರಶಸ್ತಿಯನ್ನು ಪಡೆದರು. ಪಳನಿ ತಮಿಳುನಾಡಿನ ಮ್ಯಾನ್ಯುವಲ್‌ ಸ್ಕ್ಯಾವೆಂಜಿಗ್‌ ಪದ್ಧತಿ ಕುರಿತು ಜಗತ್ತಿಗೆ ತಿಳಿಸಿ ಹೇಳಿದ "ಕಕ್ಕೂಸ್‌" ಎನ್ನುವ ತಮಿಳು ಸಾಕ್ಷ್ಯಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

Other stories by M. Palani Kumar
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru