ವಾಯವ್ಯ ಮಹಾರಾಷ್ಟ್ರದ ಸತ್ಪುಡಾ ಬೆಟ್ಟಗಳ ನಡುವಿನ ಫಲಾಯಿ ಗ್ರಾಮದ ಒಂದು ಹುಲ್ಲಿನ ಗುಡಿಸಲಿನೊಳಗೆ, ಎಂಟು ವರ್ಷದ ಶರ್ಮಿಳಾ ಪಾವ್ರಾ ದೊಡ್ಡ ಕತ್ತರಿಗಳು, ಬಟ್ಟೆ, ಸೂಜಿಗಳು ಮತ್ತು ದಾರದೊಂದಿಗೆ ತನ್ನ 'ಸ್ಟಡಿ ಟೇಬಲ್' ಬಳಿ ಕುಳಿತಿದ್ದಾಳೆ.

ಮೇಜಿನ ಮೇಲೆ ಹಳೆಯ ಹೊಲಿಗೆ ಯಂತ್ರವನ್ನು ಇರಿಸಲಾಗಿದೆ, ಅದರ ಮೇಲೆ ಹಿಂದಿನ ರಾತ್ರಿ ಶರ್ಮಿಳಾಳ ತಂದೆ ಮುಗಿಸದೆ ಇಟ್ಟಿದ್ದ ಬಟ್ಟೆಯಿತ್ತು. ಶರ್ಮಿಳಾ ಅದನ್ನು ಎತ್ತಿಕೊಂಡು ಹೊಲಿಯಲು ಪ್ರಾರಂಭಿಸುತ್ತಾ ತನ್ನ ಹೊಲಿಗೆ ಕೌಶಲದ ಸಹಾಯದಿಂದ ಯಂತ್ರವನ್ನು ಪೆಡಲ್ ಮಾಡಲು ಪ್ರಾರಂಭಿಸುತ್ತಾಳೆ.

ಈ ಅಂಟುರೋಗದ ಪಿಡುಗು ಆರಂಭವಾಗಿ ಲಾಕ್‌ ಡೌನ್‌ ಘೋಷಿಸಿದಾಗಿನಿಂದ ಈ ಟೇಬಲ್‌ ಆಕೆಯ ಕಲಿಕೆಯ ಟೇಬಲ್‌ ಆಗಿ ಮಾರ್ಪಟ್ಟಿದೆ. ಮಾರ್ಚ್‌ 2020ರ ಲಾಕ್‌ ಡೌನ್‌ ಜೊತೆ ಆಕೆಯ ವಸತಿ ಶಾಲೆಯೂ ಮುಚ್ಚಲ್ಪಟ್ಟಿತ್ತು. “ಮಾ ಮತ್ತು ಬಾಬಾ ಈ ಮಷೀನ್‌ ತುಳಿಯುವುದನ್ನು ನೋಡಿಯೇ ನಾನು ಕಲಿತಿದ್ದೆ,” ಎನ್ನುತ್ತಾಳಾಕೆ.

ಆದರೆ ಈ 18 ತಿಂಗಳುಗಳ ನಂತರ ಶಾಲೆಯಲ್ಲಿ ಈ ಹಿಂದೆ ತಾನು ಏನು ಕಲಿತಿದ್ದೇನೆನ್ನುವುದು ಅವಳಿಗೆ ಒಂದಿಷ್ಟೂ ನೆನಪಿಲ್ಲ.

ಫಲಾಯಿಯಲ್ಲಿ ಯಾವುದೇ ಶಾಲೆಯಿಲ್ಲ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಆಶಯದೊಂದಿಗೆ, ಜೂನ್ 2019ರಲ್ಲಿ, ಶರ್ಮಿಳಾಳ ಪೋಷಕರು ತಮ್ಮ ಊರಿನಿಂದ ಸುಮಾರು 140 ಕಿಮೀ ದೂರದಲ್ಲಿರುವ ನಂದೂರ್‌ಬಾರ್ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌ಗೆ ಅವಳನ್ನು ಸೇರಿಸಿದರು. ಈ ಶಾಲೆಯು ರಾಜ್ಯದ ಸುಮಾರು 60 ಆಶ್ರಮ ಶಾಲೆಗಳಲ್ಲಿ ಒಂದಾಗಿದೆ (ಮಹಾರಾಷ್ಟ್ರದಾದ್ಯಂತ ನಡೆಯುವ ಪರಿಶಿಷ್ಟ ಪಂಗಡದ ಮಕ್ಕಳಿಗಾಗಿ ಇರುವ ವಿಶೇಷ ಶಾಲೆಗಳು) ಜಿಲ್ಲಾ ಪರಿಷತ್ತು ನಡೆಸುವ ಈ ಶಾಲೆಗಳು ಮಹಾರಾಷ್ಟ್ರ ಇಂಟರ್ನ್ಯಾಷನಲ್ ಬೋರ್ಡ್ ಆಫ್ ಎಜುಕೇಶನ್‌ಗೆ ಸಂಯೋಜಿತವಾಗಿದೆ. 2018ರಲ್ಲಿ ರಚನೆಯಾದ ಮಂಡಳಿಯು 'ಅಂತರರಾಷ್ಟ್ರೀಯ ಮಟ್ಟದ' ಶಿಕ್ಷಣವನ್ನು ಒದಗಿಸುವುದಾಗಿ ಹೇಳಿಕೊಂಡಿದೆ ಮತ್ತು ಶಾಲೆಯನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಮರಾಠಿಯಲ್ಲಿ ಕಲಿಸಲಾಗುತ್ತದೆ. (ಆ ಮಂಡಳಿಯನ್ನು ರದ್ದುಗೊಳಿಸಲಾಗಿದ್ದು ಈಗ ಶಾಲೆಗಳು ಈಗ ರಾಜ್ಯ ಮಂಡಳಿಯ ಅಡಿಯಲ್ಲಿ ಬರುತ್ತವೆ.)

Sharmila Pawra's school days used to begin with the anthem and a prayer. At home, her timetable consists of household tasks and ‘self-study’ – her sewing ‘lessons’
PHOTO • Jyoti
Sharmila Pawra's school days used to begin with the anthem and a prayer. At home, her timetable consists of household tasks and ‘self-study’ – her sewing ‘lessons’
PHOTO • Jyoti

ಶರ್ಮಿಳಾ ಪಾವ್ರಾಳ ಶಾಲಾ ದಿನಗಳು ರಾಷ್ಟ್ರಗೀತೆ ಮತ್ತು ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುತ್ತಿದ್ದವು. ಮನೆಯಲ್ಲಿ, ಅವಳ ವೇಳಾಪಟ್ಟಿಯು ಮನೆಕೆಲಸಗಳು ಮತ್ತು ಅವಳ ʼಸ್ವಯಂ ಕಲಿಕೆಯʼ ಹೊಲಿಗೆಯ ʼಪಾಠಗಳನ್ನುʼ ಒಳಗೊಂಡಿದೆ

ಶರ್ಮಿಳಾ ಶಾಲೆಗೆ ಹೋಗತೊಡಗಿದಾಗ ಅವಳಿಗೆ ಮರಾಠಿ ಹೊಸ ಭಾಷೆಯಾಗಿತ್ತು. ಅವರು ಪಾವ್ರಿ ಸಮುದಾಯಕ್ಕೆ ಸೇರಿದವರಾಗಿದ್ದು ಅವರ ಮನೆಯಲ್ಲಿ 'ಪಾವ್ರಿ' ಭಾಷೆಯನ್ನು ಮಾತನಾಡುತ್ತಾರೆ. ನನ್ನ ನೋಟ್‌ಬುಕ್‌ನಲ್ಲಿರುವ ಮರಾಠಿ ಪದಗಳನ್ನು ನೋಡುತ್ತಾ, ಅವಳು ಕಲಿತ ಕೆಲವು ಅಕ್ಷರಗಳನ್ನು ನೆನಪಿಸಿಕೊಂಡಳು; ಆದರೆ ನನ್ನೊಂದಿಗೆ ಹಿಂದಿಯಲ್ಲಿ ಹೇಳಿದಳು, "ನನಗೆ ಎಲ್ಲಾ ಅಕ್ಷರಗಳು ನೆನಪಿಲ್ಲ..."

ಅವಳು ಶಾಲೆಯಲ್ಲಿದ್ದಿದ್ದು ಹೆಚ್ಚೆಂದರೆ 10 ತಿಂಗಳುಗಳ ಕಾಲವಿರಬಹುದು. ಶಾಲೆ ಮುಚ್ಚುವ ಸಮಯದಲ್ಲಿ ಅವಳು 1ನೇ ತರಗತಿಯಲ್ಲಿದ್ದಳು. ಅದೇ ಶಾಲೆಯಲ್ಲಿ ಓದುತ್ತಿದ್ದ ಅಕ್ರಾನಿ ತಾಲೂಕಿನ 476 ಮಕ್ಕಳನ್ನು (ಶರ್ಮಿಳಾಳ ಊರು ಕೂಡಾ ಇದೇ ತಾಲೂಕಿನಲ್ಲಿದೆ) ಮನೆಗೆ ಕಳುಹಿಸಲಾಯಿತು. ಮತ್ತೆ ಶಾಲೆ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ’ಎನ್ನುತ್ತಾಳೆ ಶರ್ಮಿಳಾ.

ಶಾಲೆಯಲ್ಲಿ ಅವಳ ದಿನಚರಿ ರಾಷ್ಟ್ರಗೀತೆ ಮತ್ತು ಬೆಳಗಿನ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುತ್ತಿತ್ತು. ಈಗ ಮನೆಯಲ್ಲಿ ಅವಳ ದಿನಚರಿ ಸಂಪೂರ್ಣ ಬದಲಾಗಿದೆ. “ಮೊದಲಿಗೆ ಬೋರ್‌ವೆಲ್‌ನಿಂದ ನೀರು ತರುತ್ತೇನೆ [ಬೋರ್‌ವೆಲ್‌ ಅವಳ ಮನೆಯ ಹೊರಗಿದೆ]. ನಂತರ ಅಮ್ಮನ ಕೆಲಸ ಮುಗಿಯುವವರೆಗೆ ರಿಂಕುವನ್ನು ನೋಡಿಕೊಳ್ಳುತ್ತೇನೆ [ಅವಳ ಒಂದು ವರ್ಷದ ತಂಗಿ]. ಅವಳನ್ನು ಎತ್ತಿಕೊಂಡು ಮನೆ ಸುತ್ತಲಿನ ಎಲ್ಲವನ್ನೂ ತೋರಿಸುತ್ತಾ ಓಡಾಡುತ್ತೇನೆ.” ಮತ್ತು ಅವಳ ಅಮ್ಮ-ಅಪ್ಪ ಹೊಲಿಗೆ ಮಷೀನ್‌ ಬಳಸದಿರುವಾಗಲೆಲ್ಲ ಅವಳ ʼಸ್ವಯಂಕಲಿಕೆಯಡಿʼ ಹೊಲಿಗೆಯ ʼಪಾಠʼವನ್ನು ಅಭ್ಯಾಸ ಮಾಡುತ್ತಾಳೆ.

ಶರ್ಮಿಳಾ ಮನೆಯ ನಾಲ್ಕು ಮಕ್ಕಳಲ್ಲಿ ಹಿರಿಯವಳು. ಅವಳ ತಮ್ಮ ರಾಜೇಶನಿಗೆ ಐದು, ಊರ್ಮಿಳಾಳಿಗೆ ಮೂರು, ಮತ್ತು ಇನ್ನೊಬ್ಬಳು ರಿಂಕು. “ಅವಳು ಪದ್ಯಗಳನ್ನು ಬಾಯಿಪಾಠ ಮಾಡಿದ್ದಳು ಮತ್ತು ಮರಾಠಿ ಅಕ್ಷರಗಳನ್ನು ಸಹ ಕಲಿತಿದ್ದಳು,” ಎನ್ನುತ್ತಾರೆ ಅವಳ 28 ವರ್ಷದ ತಂದೆ ರಾಕೇಶ್.‌ ಅವರು ಈಗ ತನ್ನ ಇನ್ನುಳಿದ ಮಕ್ಕಳ ಓದಿನ ಕುರಿತು ಚಿಂತಿತರಾಗಿದ್ದಾರೆ. ರಾಜೇಶ ಮತ್ತು ಊರ್ಮಿಳಾರಿಗೆ 6 ವರ್ಷವಾಗದೆ ಶಾಲೆಗೆ ಸೇರಿಸುವಂತಿಲ್ಲ. “ಅವಳಿಗೆ ಓದಲು ಮತ್ತು ಬರೆಯಲು ಬಂದಿದ್ದರೆ ತಮ್ಮ ಮತ್ತು ತಂಗಿಗೆ ಅವಳೇ ಹೇಳಿಕೊಡಬಹುದಿತ್ತು,” ಎನ್ನುತ್ತಾರವರು. “ದೋ ಸಾಲ್‌ ಮೇ ಇಸ್‌ ಬಚ್ಚೆ ಕೀ ಜಿಂದಗಿ ಕಾ ಖೇಲ್‌ ಬನ್‌ಗಯಾ ಹೇ. [ ಎರಡು ವರ್ಷಗಳಿಂದ ಈ ಮಗುವಿನ ಬದುಕು ಆಟವಾಗಿ ಹೋಗಿದೆ],” ಎಂದು ತನ್ನ ಮಗಳು ನುರಿತವರಂತೆ ಹೊಲಿಗೆ ಯಂತ್ರವನ್ನು ತುಳಿಯುತ್ತಿರುವ ಮಗಳನ್ನು ನೋಡುತ್ತಾ ಹೇಳುತ್ತಾರೆ.

Classmates, neighbours and playmates Sunita (in green) and Sharmila (blue) have both been out of school for over 18 months
PHOTO • Jyoti
Classmates, neighbours and playmates Sunita (in green) and Sharmila (blue) have both been out of school for over 18 months
PHOTO • Jyoti

ಸಹಪಾಠಿಗಳು, ನೆರೆಹೊರೆಯವರು ಮತ್ತು ಆಟದ ಸಂಗಾತಿಗಳಾದ ಸುನೀತಾ (ಹಸಿರು ಬಣ್ಣದ ಅಂಗಿಯಲ್ಲಿ) ಮತ್ತು ಶರ್ಮಿಳಾ (ನೀಲಿ) ಇಬ್ಬರೂ 18 ತಿಂಗಳುಗಳಿಂದ ಶಾಲೆಯಿಂದ ಹೊರಗುಳಿದಿದ್ದಾರೆ

“ನಾವು ಅವಳು ಓದಲು-ಬರೆಯಲು ಕಲಿತ ಆಫ್ಸರ್‌ [ಆಫೀಸರ್]‌ ಆಗಬೇಕೆಂದು ಬಯಸುತ್ತೇವೆ, ಅವಳು ನಮ್ಮಂತೆ ಟೈಲರ್‌ ಆಗುವುದು ಬೇಡ. ಓದು ಬರಹ ಗೊತ್ತಿಲ್ಲದಿದ್ದರೆ ಜನರು ಗೌರವ ನೀಡುವುದಿಲ್ಲ.” ಎನ್ನುತ್ತಾರೆ 25 ವರ್ಷದ ತಾಯಿ ಸರಳಾ.

ಸರಳಾ ಮತ್ತು ರಾಕೇಶ್‌ ಇಬ್ಬರೂ ಸೇರಿ ಹೊಲಿಗೆಯಿಂದ ತಿಂಗಳಿಗೆ 5,000-6,000 ರೂಪಾಯಿಗಳನ್ನು ಸಂಪಾದಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಇಬ್ಬರೂ ಹೊಲಗಳಲ್ಲಿ ಕೂಲಿ ಕೆಲಸಕ್ಕೆಂದು ಗುಜರಾತ್ ಅಥವಾ ಮಧ್ಯಪ್ರದೇಶಕ್ಕೆ ವಲಸೆ ಹೋಗುತ್ತಿದ್ದರು. “ಶರ್ಮಿಳಾ ಹುಟ್ಟಿದ ನಂತರ ನಾವು ಕೆಲಸಕ್ಕಾಗಿ ಹೊರಗೆ ಹೋಗುವುದನ್ನು ನಿಲ್ಲಿಸಿದೆವು. ಅವಳು ಮತ್ತೆ ಮತ್ತೆ ಹುಷಾರು ತಪ್ಪುತ್ತಿದ್ದದ್ದು ಇದಕ್ಕೆ ಕಾರಣ [ವಲಸೆ ತಿಂಗಳುಗಳಲ್ಲಿ ನಾವು ಅವಳನ್ನು ಜೊತೆಯಲ್ಲಿ ಕರೆದೊಯ್ದಾಗ]”ಎಂದು ಹೇಳಿದರು. “ಜೊತೆಗೆ ನಮಗೆ ಶರ್ಮಿಳಾಳನ್ನು ಶಾಲೆಗೆ ಕಳುಹಿಸುವ ಉದ್ದೇಶವೂ ಇತ್ತು.”

ಅವರು ಯುವಕನಿದ್ದಾಗ, ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ತನ್ನ ಚಿಕ್ಕಪ್ಪ ಗುಲಾಬ್ ಎನ್ನುವವರಿಂದ ಟೈಲರಿಂಗ್ ಕಲಿತಿದ್ದರು (ಅವರು 2019ರಲ್ಲಿ ನಿಧನರಾದರು). ಅವರ ಸಹಾಯದಿಂದ ರಾಕೇಶ್ ಹೊಲಿಗೆ ಯಂತ್ರಗಳನ್ನು ಖರೀದಿಸಿದರು ಮತ್ತು ಪತ್ನಿ ಸರಳಾರಿಗೂ ತರಬೇತಿಯನ್ನು ಪ್ರಾರಂಭಿಸಿದರು.

"ನಮ್ಮ ಬಳಿ ಯಾವುದೇ ಕೃಷಿಭೂಮಿ ಇರಲಿಲ್ಲ, ಹೀಗಾಗಿ ನಾವು 2012ರಲ್ಲಿ 15,000 ರೂಪಾಯಿಗಳಿಗೆ ಎರಡು ಸೆಕೆಂಡ್ ಹ್ಯಾಂಡ್ ಯಂತ್ರಗಳನ್ನು ಖರೀದಿಸಿದೆವು" ಎಂದು ಸರಳಾ ಹೇಳುತ್ತಾರೆ. ಇದಕ್ಕಾಗಿ, ಅವರು ತಮ್ಮ ಸಂಪೂರ್ಣ ಉಳಿತಾಯವನ್ನು ಮತ್ತು ರಾಕೇಶ್ ಅವರ ಹೆತ್ತವರಿಂದ ಪಡೆದ ಸ್ವಲ್ಪ ಹಣವನ್ನು ಖರ್ಚು ಮಾಡಿದರು, ಕೃಷಿ ಕಾರ್ಮಿಕರಾಗಿ ತಮ್ಮ ಜೀವಮಾನದ ಕೆಲಸದಿಂದ ಉಳಿಸಿದ್ದ ಹಣವಾಗಿತ್ತು ಅದು. ಅವರ ಚಿಕ್ಕಪ್ಪ ಗುಲಾಬ್ ತನ್ನ ಕೆಲವು ಗ್ರಾಹಕರನ್ನು ರಾಕೇಶ್ ಮತ್ತು ಸರಳಾ ಬಳಿ ಕಳುಹಿಸುವ ಮೂಲಕ ಸಹಾಯ ಮಾಡಿದರು.

"ನಮ್ಮ ಬಳಿ ಪಡಿತರ ಚೀಟಿಯಿಲ್ಲ; 3,000-4,000 ರೂಪಾಯಿಗಳು ಪಡಿತರವನ್ನು ಖರೀದಿಸುವುದಕ್ಕಾಗಿಯೇ ಖರ್ಚು ಮಾಡಬೇಕಿರುತ್ತದೆ" ಎಂದು ರಾಕೇಶ್ ಹೇಳುತ್ತಾರೆ. ಸರಳಾ ಅವರಿಗೆ ಅಗತ್ಯವಿರುವ ವಸ್ತುಗಳನ್ನು ಪಟ್ಟಿ ಮಾಡುತ್ತಾರೆ - ಗೋಧಿ ಹಿಟ್ಟು ಮತ್ತು ಅಕ್ಕಿ, ಬೇಳೆ, ಉಪ್ಪು, ಮೆಣಸಿನ ಪುಡಿ... "ಅವರು ಬೆಳೆಯುತ್ತಿರು ಮಕ್ಕಳು, ಅವರ ಖಾನಾ-ಪೀನಾ (ಆಹಾರ) ಕುರಿತು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ.

'If she could read and write, she could have taught her younger siblings. In these two years, my child’s life has turned into a game', Rakesh says
PHOTO • Jyoti
'If she could read and write, she could have taught her younger siblings. In these two years, my child’s life has turned into a game', Rakesh says
PHOTO • Jyoti

'ಅವಳಿಗೆ ಓದಲು-ಬರೆಯಲು ಬರುವಂತಿದ್ದರೆ, ಅವಳು ತನ್ನ ಒಡಹುಟ್ಟಿದವರಿಗೆ ಕಲಿಸಬಹುದಿತ್ತು. ಈ ಎರಡು ವರ್ಷಗಳಲ್ಲಿ, ನನ್ನ ಮಗುವಿನ ಜೀವನವು ಆಟವಾಗಿ ಮಾರ್ಪಟ್ಟಿದೆ' ಎಂದು ರಾಕೇಶ್ ಹೇಳುತ್ತಾರೆ

ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಉಳಿಸುವುದು ಅಸಾಧ್ಯ ಮತ್ತು ಅವರು ಆಶ್ರಮಗಳಿಗೆ ಈ ವಿಷಯದಲ್ಲಿ ಕೃತಜ್ಞರಾಗಿದ್ದಾರೆ. "ಅಲ್ಲಿ ಕನಿಷ್ಠ ಮಕ್ಕಳು ಓದುತ್ತಾರೆ ಮತ್ತು ತಿನ್ನುತ್ತಾರೆ" ಎಂದು ಸರಳಾ ಹೇಳುತ್ತಾರೆ. ಆದರೆ ಕ್ಯಾಂಪಸ್ 1ರಿಂದ 7ನೇ ತರಗತಿಗಳವರೆಗಿನ ಮಕ್ಕಳಿಗೆ ಮುಚ್ಚಲ್ಪಟ್ಟಿದೆ.

ಹಿಂದುಳಿದ ಪ್ರದೇಶವಾಗಿರುವ ಅಕ್ರಾಣಿ ತಾಲ್ಲೂಕಿನಲ್ಲಿ ಆನ್ ಲೈನ್ ಶಿಕ್ಷಣವು ಒಂದು ಪರಕೀಯ ಕಲ್ಪನೆಯಾಗಿದೆ. ಆಶ್ರಮ ಶಾಲೆಯ 476 ವಿದ್ಯಾರ್ಥಿಗಳಲ್ಲಿ, ಶರ್ಮಿಳಾ ಸೇರಿದಂತೆ 190 ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಶಿಕ್ಷಕರಿಗೆ ಸಾಧ್ಯವಾಗಿಲ್ಲ ಮತ್ತು ಆ ವಿದ್ಯಾರ್ಥಿಗಳು ಔಪಚಾರಿಕ ಶಿಕ್ಷಣದಿಂದ ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿದ್ದಾರೆ

"ಶೇಕಡಾ 90ಕ್ಕೂ ಹೆಚ್ಚು ಪೋಷಕರ ಬಳಿ ಬೇಸಿಕ್ ಹ್ಯಾಂಡ್ ಸೆಟ್ ಕೂಡಾ ಇಲ್ಲ" ಎಂದು ನಂದೂರ್ ಬಾರ್ ಮೂಲದ ಆಶ್ರಮ ಶಾಲೆಯ ಶಿಕ್ಷಕ 44 ವರ್ಷದ ಸುರೇಶ್ ಪಡವಿ ಹೇಳುತ್ತಾರೆ. ಮಹಾಮಾರಿಯ ಆರಂಭದಿಂದಲೂ ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಮತ್ತು ಅವರಿಗೆ ಪಾಠಗಳನ್ನು ಒದಗಿಸಲು ಅಕ್ರಾಣಿಯ ಹಳ್ಳಿಗಳಿಗೆ ಭೇಟಿ ನೀಡುತ್ತಿರುವ ಶಾಲೆಯ ಒಂಬತ್ತು ಶಿಕ್ಷಕರಲ್ಲಿ ಅವರೂ ಒಬ್ಬರು.

"ನಾವು ಮೂರು ದಿನಗಳ ಕಾಲ [ವಾರಕ್ಕೆ] ಇಲ್ಲಿಗೆ ಬರುತ್ತೇವೆ, ಹಳ್ಳಿಯ ಯಾವುದಾರೂ ಒಂದು ಮನೆಯಲ್ಲಿ ರಾತ್ರಿಗಳನ್ನು ಕಳೆಯುತ್ತೇವೆ" ಎಂದು ಸುರೇಶ್ ಹೇಳುತ್ತಾರೆ. ಪ್ರತಿ ಭೇಟಿಯಲ್ಲಿ ಶಿಕ್ಷಕರು 1ರಿಂದ 10ನೇ ತರಗತಿಗಳವರೆಗಿನ 10ರಿಂದ 12 ಮಕ್ಕಳನ್ನು ಒಟ್ಟುಗೂಡಿಸಲು ಸಾಧ್ಯವಾಗಿದೆ. "ಒಂದು ಮಗು 1ನೇ ತರಗತಿಯಿಂದ, ಮತ್ತೊಂದು ಮಗು 7ನೇ ತರಗತಿಯಿಂದ ಬಂದಿರಬಹುದು. ಆದರೆ ನಾವು [ಅವರೆಲ್ಲರಿಗೂ ಒಟ್ಟಿಗೆ] ಕಲಿಸಬೇಕು" ಎಂದು ಅವರು ಹೇಳುತ್ತಾರೆ.

ಆದರೆ, ಅವರ ಶಿಕ್ಷಕರ ತಂಡ ಶರ್ಮಿಳಾಳನ್ನು ತಲುಪಿಲ್ಲ. "ಅನೇಕ ಮಕ್ಕಳು ಫೋನ್ ಅಥವಾ ರಸ್ತೆ ಸಂಪರ್ಕವಿಲ್ಲದ ದೂರದ ಮತ್ತು ಒಳನಾಡು ಪ್ರದೇಶದಂತಹ ಸ್ಥಳಗಳಲ್ಲಿ ಉಳಿಯುತ್ತಾರೆ. ಅವರನ್ನು ಪತ್ತೆ ಹಚ್ಚುವುದು ಕಷ್ಟ' ಎನ್ನುತ್ತಾರೆ ಸುರೇಶ್.

Reaching Sharmila’s house in the remote Phalai village is difficult, it involves an uphill walk and crossing a stream.
PHOTO • Jyoti
Reaching Sharmila’s house in the remote Phalai village is difficult, it involves an uphill walk and crossing a stream.
PHOTO • Jyoti

ದುರ್ಗಮ ಪ್ರದೇಶದಲ್ಲಿರುವ ಫಲಾಯಿ ಗ್ರಾಮದ ಶರ್ಮಿಳಾಳ ಮನೆಯನ್ನು ತಲುಪುವುದು ಕಷ್ಟ; ಇಲ್ಲಿಗೆ ಗುಡ್ಡಗಳು ಮತ್ತು ಹೊಳೆಯನ್ನು ದಾಟಿ ಬರಬೇಕು

ಫಲಾಯಿ ಗ್ರಾಮದಲ್ಲಿರುವ ಶರ್ಮಿಳಾಳ ಮನೆಯನ್ನು ತಲುಪುವುದು ಕಷ್ಟ; ಇಲ್ಲಿಗೆ ಗುಡ್ಡಗಳು ಮತ್ತು ಹೊಳೆಯನ್ನು ದಾಟಿ ಬರಬೇಕು. ಇನ್ನೊಂದು ದಾರಿಯಿದೆಯಾದರೂ ಅದು ಕೆಸರು ತುಂಬಿದ ರಸ್ತೆಯಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ “ನಮ್ಮ ಮನೆ ಬಹಳ ಒಳಗಿನ ಪ್ರದೇಶದಲ್ಲಿದೆ”ಎಂದು ರಾಕೇಶ್‌ ಹೇಳುತ್ತಾರೆ. “ಶಿಕ್ಷಕರೂ ಎಂದೂ ಇತ್ತ ಬಂದಿಲ್ಲ.”

ಅಂದರೆ ಶಾಲೆ ಮುಚ್ಚಿದ್ದರಿಂದ ಶರ್ಮಿಳಾಳಂತಹ ಹಲವು ವಿದ್ಯಾರ್ಥಿಗಳು ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಜನವರಿ 2021ರ ಅಧ್ಯಯನವು ಮಹಾಮಾರಿಯ ಕಾರಣಕ್ಕಾಗಿ ಶಾಲೆಯನ್ನು ಮುಚ್ಚಿದಾಗಿನಿಂದ, 92 ಪ್ರತಿಶತದಷ್ಟು ಮಕ್ಕಳು ಕನಿಷ್ಟ ಒಂದು ಸಾಮರ್ಥ್ಯ ಅಥವಾ ಕೌಶಲವನ್ನು ಕಳೆದುಕೊಂಡಿದ್ದಾರೆಂದು ಹೇಳುತ್ತದೆ. ಒಂದು ಚಿತ್ರವನ್ನು ನೋಡಿ ವಿವರಿಸುವುದು ಅಥವಾ ತಮ್ಮ ಅನುಭವಗಳನ್ನು ಮಾತಿನ ಮೂಲಕ ವಿವರಿಸುವುದು; ಪರಿಚಿತ ಪದಗಳನ್ನು ಓದುವುದು; ಗ್ರಹಿಕೆಯಿಂದ ಓದುವುದು; ಅಥವಾ ಹಿಂದಿನ ವರ್ಷಗಳ ಚಿತ್ರವನ್ನು ಆಧರಿಸಿ ಸರಳ ವಾಕ್ಯಗಳನ್ನು ಬರೆಯುವುದು ಇವೆಲ್ಲವೂ ಅವರಿಗೆ ಮರೆತುಹೋಗಿದೆ.

*****

"ನಾನು ಶಾಲೆಯಲ್ಲಿ ನನ್ನ ಹೆಸರನ್ನು ಪೆನ್ಸಿಲ್ಲಿನಲ್ಲಿ ಬರೆಯಲು ಕಲಿತಿದ್ದೆ" ಎಂದು ಶರ್ಮಿಳಾಳ ಪಕ್ಕದ ಮನೆಯವಳಾದ ಮತ್ತು ಆಟದ ಸಂಗಾತಿಯಾದ ಎಂಟು ವರ್ಷದ ಸುನೀತಾ ಪಾವ್ರಾ ಹೇಳುತ್ತಾಳೆ, ಅವಳು ಕಳೆದ ವರ್ಷ ಶಾಲೆ ಮುಚ್ಚುವವರೆಗೂ 1ನೇ ತರಗತಿಯಲ್ಲಿ ಅದೇ ಶಾಲೆಯಲ್ಲಿ ಓದುತ್ತಿದ್ದಳು.

ಸುನೀತಾ ಉತ್ಸಾಹದಿಂದ ತನ್ನ ಮಣ್ಣಿನ ಮನೆಯ ಹೊರಗೆ ಒಣಗಿಸಿದ ಬಟ್ಟೆಯ ಸಾಲಿನಿಂದ ಶಾಲೆಯ ಉಡುಪನ್ನು ತೋರಿಸುತ್ತಾ, “ನಾನು ಈ ಉಡುಪನ್ನು ಶಾಲೆಗೆ ಹಾಕುತ್ತಿದ್ದೆ. ನಾನು ಕೆಲವೊಮ್ಮೆ ಅದನ್ನು ಮನೆಯಲ್ಲಿಯೂ ಧರಿಸುತ್ತೇನೆ. ಬಾಯಿ [ಶಿಕ್ಷಕರು] ಪುಸ್ತಕದಿಂದ [ಚಿತ್ರ ಪುಸ್ತಕ] ಹಣ್ಣುಗಳನ್ನು ತೋರಿಸುತ್ತಿದ್ದರು. ಬಣ್ಣಬಣ್ಣದ ಹಣ್ಣು. ಅದರ ಬಣ್ಣ ಕೆಂಪಾಗಿತ್ತು. ನನಗೆ ಹೆಸರು ಗೊತ್ತಿಲ್ಲ." ಅವಳು ನೆನಪಿಸಿಕೊಳ್ಳಲು ತುಂಬಾ ಪ್ರಯತ್ನಿಸಿದಳಾದರೂ ನೆನಪಾಗಲಿಲ್ಲ. ಅವಳ ನೆನಪುಗಳಲ್ಲಿ ಶಾಲೆಯು ಮಸುಕಾಗತೊಡಗಿದೆ.

Every year, Sunita's parents Geeta and Bhakiram migrate for work, and say, 'If we take the kids with us, they will remain unpadh like us'
PHOTO • Jyoti
Every year, Sunita's parents Geeta and Bhakiram migrate for work, and say, 'If we take the kids with us, they will remain unpadh like us'
PHOTO • Jyoti

ಪ್ರತಿ ವರ್ಷ, ಸುನೀತಾಳ ಹೆತ್ತವರಾದ ಗೀತಾ ಮತ್ತು ಭಕಿರಾಮ್ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ, ಮತ್ತು 'ನಾವು ಮಕ್ಕಳನ್ನು ನಮ್ಮೊಂದಿಗೆ ಕರೆದುಕೊಂಡು ಹೋದರೆ, ಅವರೂ ನಮ್ಮಂತೆ ಅನ್‌ಪಡ್ ಆಗಿ ಉಳಿಯುತ್ತಾರೆ' ಎಂದು ಹೇಳುತ್ತಾರೆ

‌ಸುನೀತಾ ಈಗ ತನ್ನ ನೋಟ್ ಬುಕ್ ನಲ್ಲಿ ಬರೆಯುವುದಿಲ್ಲ ಅಥವಾ ಚಿತ್ರ ಬಿಡಿಸುವುದಿಲ್ಲ, ಆದರೆ ತನ್ನ ಮನೆಯ ಬಳಿಯ ಟಾರ್ ರಸ್ತೆಯಲ್ಲಿ ಚೌಕಗಳನ್ನು ಬರೆದು ಶರ್ಮಿಳಾಳ ಜೊತೆ ಕುಂಟಾಬಿಲ್ಲೆ ಆಡುತ್ತಾಳೆ, ಅವಳಿಗೆ ಮೂವರು ಒಡಹುಟ್ಟಿದವರು - ದಿಲೀಪ್ ಆರು, ಅಮಿತಾ ಐದು, ಮತ್ತು ದೀಪಕ್ ನಾಲ್ಕು ವರ್ಷ. ಎಂಟು ವರ್ಷದ ಸುನೀತಾ ಅವರೆಲ್ಲರಿಗಿಂತ ಹಿರಿಯವಳು. ಈ ಮಕ್ಕಳಲ್ಲಿ ಸುನೀತಾ ಮಾತ್ರವೇ ಶಾಲೆಗೆ ಹೋಗುತ್ತಿದ್ದು ಪೋಷಕರು ತಮ್ಮ ಇತರ ಮಕ್ಕಳನ್ನು ಸಹ ಸೇರಿಸುವ ಯೋಚನೆಯಲ್ಲಿದ್ದಾರೆ.

ಅವಳ ಹೆತ್ತವರಾದ ಗೀತಾ ಮತ್ತು ಭಕಿರಾಮ್ ಮಾನ್ಸೂನ್ ಸಮಯದಲ್ಲಿ ಒಂದು ಎಕರೆ ಕಡಿದಾದ ಇಳಿಜಾರು ಭೂಮಿಯಲ್ಲಿ ಕೃಷಿ ಮಾಡಿ, ಕುಟುಂಬದ ಆಹಾರಕ್ಕಾಗಿ 2ರಿಂದ 3 ಕ್ವಿಂಟಾಲ್ ಜೋಳವನ್ನು ಬೆಳೆಯುತ್ತಾರೆ. "ಇದೊಂದರ ಮೇಲೆಯೇ ಅವಲಂಬಿತರಾಗಿ ಬದುಕುವುದು ಕಷ್ಟ. ನಾವು ಕೆಲಸಕ್ಕಾಗಿ ಬೇರೆಡೆ ಹೋಗುತ್ತೇವೆ" ಎಂದು 35 ವರ್ಷದ ಗೀತಾ ಹೇಳುತ್ತಾರೆ.

ಪ್ರತಿ ವರ್ಷ ಅವರು ಅಕ್ಟೋಬರ್ ಕೊಯ್ಲಿನ ನಂತರ ಗುಜರಾತ್ ಗೆ ವಲಸೆ ಹೋಗುತ್ತಾರೆ ಮತ್ತು ಹತ್ತಿ ಹೊಲಗಳಲ್ಲಿ ತಲಾ ರೂ. 200ರಿಂದ 300 ರೂ. ದಿನಗೂಲಿಗಾಗಿ ಕೆಲಸ ಮಾಡುತ್ತಾರೆ, ಏಪ್ರಿಲ್-ಮೇ ತನಕ ಎಂದರೆ ವರ್ಷಕ್ಕೆ ಸುಮಾರು 200 ದಿನಗಳವರೆಗೆ. "ನಾವು ಮಕ್ಕಳನ್ನು ನಮ್ಮೊಂದಿಗೆ ಕರೆದುಕೊಂಡು ಹೋದರೆ, ಅವರು ನಮ್ಮಂತೆ ಅನ್ಪಡ್ ಆಗಿ ಉಳಿಯುತ್ತಾರೆ. ನಾವು ಹೋಗುವ ಊರಿನಲ್ಲಿ ಯಾವುದೇ ಶಾಲೆಯಿಲ್ಲ" ಎಂದು 42 ವರ್ಷದ ಭಕಿರಾಮ್ ಹೇಳುತ್ತಾರೆ.

"ಆಶ್ರಮಗಳಲ್ಲಿ ಮಕ್ಕಳು ಅಲ್ಲೇ ಉಳಿದುಕೊಂಡು ಓದುತ್ತಾರೆ" ಎಂದು ಗೀತಾ ಹೇಳುತ್ತಾರೆ. "ಸರ್ಕಾರ ಈ ಶಾಲೆಗಳನ್ನು ಮತ್ತೆ ತೆರೆಯಬೇಕು."

'I used to wear this dress in school. I wear it sometimes at home', Sunita says. School for her is now a bunch of fading memories
PHOTO • Jyoti
'I used to wear this dress in school. I wear it sometimes at home', Sunita says. School for her is now a bunch of fading memories
PHOTO • Jyoti

'ಶಾಲೆಯಲ್ಲಿ ಈ ಉಡುಪನ್ನು ಧರಿಸುತ್ತಿದ್ದೆ. ನಾನು ಈಗ ಅದನ್ನು ಕೆಲವೊಮ್ಮೆ ಮನೆಯಲ್ಲಿ ಧರಿಸುತ್ತೇನೆ' ಎಂದು ಸುನೀತಾ ಹೇಳುತ್ತಾಳೆ, ಶಾಲೆಯೆನ್ನುವುದು ಅವಳ ಪಾಲಿಗೆ ಈಗ ಕೇವಲ ನೆನಪುಗಳ ಗುಚ್ಛವಾಗಿ ಮಾರ್ಪಡುತ್ತಿದೆ

ಜುಲೈ 15, 2021ರ ಸರ್ಕಾರದ ನಿರ್ಣಯವು ಹೀಗೆ ಹೇಳುತ್ತದೆ: "ಕೋವಿಡ್ ಮುಕ್ತ ಪ್ರದೇಶದಲ್ಲಿ 2021ರ ಆಗಸ್ಟ್ 2ರಿಂದ 8ರಿಂದ 12ನೇ ತರಗತಿಗೆ ಮಾತ್ರ ರಾಜ್ಯದ ಸರ್ಕಾರಿ ಅನುದಾನಿತ ವಸತಿ ಮತ್ತು ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ."

"ನಂದೂರ್ ಬಾರ್‌ನಲ್ಲಿ ಸುಮಾರು 139 ಸರ್ಕಾರಿ ವಸತಿ ಶಾಲೆಗಳಲ್ಲಿ 22,000 ವಿದ್ಯಾರ್ಥಿಗಳಿದ್ದಾರೆ" ಎಂದು ನಂದೂರ್ ಬಾರ್ ಜಿಲ್ಲಾ ಪರಿಷತ್ ಸದಸ್ಯ ಗಣೇಶ್ ಪಡ್ಕೆ ಅಂದಾಜಿಸುತ್ತಾರೆ. ಈ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಗುಡ್ಡಗಾಡು ಮತ್ತು ಅರಣ್ಯ ಪ್ರದೇಶಗಳಿರುವ ಅಕ್ರಾಣಿ ತಾಲ್ಲೂಕಿನವರು. ಆದರೆ ಈಗ, "ಅನೇಕರು ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಮತ್ತು ಹೆಚ್ಚಿನ ಹುಡುಗಿಯರಿಗೆ ಮದುವೆಯಾಗಿದೆ" ಎಂದು ಅವರು ಮುಂದುವರೆದು ಹೇಳುತ್ತಾರೆ.

*****

ಅಕ್ರಾಣಿ ತಾಲ್ಲೂಕಿನ ಸಿಂದಿಡಿಗರ್ ಗ್ರಾಮದ ಬಳಿ ಶರ್ಮಿಳಾ ಇರುವ ಮನೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ, 12 ವರ್ಷದ ರಹಿದಾಸ್ ಪಾವ್ರಾ ಮತ್ತು ಅವನ ಇಬ್ಬರು ಸ್ನೇಹಿತರು ತಮ್ಮ ಕುಟುಂಬಗಳು ಹೊಂದಿರುವ 12 ಆಡುಗಳು ಮತ್ತು ಐದು ಹಸುಗಳನ್ನು ಮೇಯಿಸುತ್ತಿದ್ದರು. "ಇಲ್ಲಿಂದ ನೀವು ಬೆಟ್ಟ, ದೂರದ ಊರುಗಳು ಆಕಾಶ ಎಲ್ಲವನ್ನೂ ನೋಡಬಹುದು. ಈ ಜಾಗವೆಂದರೆ ನಮಗೆ ಬಹಳ ಇಷ್ಟ. ದನ ಮೇಯಿಸಲು ಬಂಧಾಗ ಇಲ್ಲಿ ಒಂದಿಷ್ಟು ಹೊತ್ತು ನಿಲ್ಲುತ್ತೇವೆ" ಎಂದು ರಹಿದಾಸ್ ಹೇಳುತ್ತಾನೆ,‌ ಸುಮಾರು 150 ಕಿ.ಮೀ ದೂರದಲ್ಲಿರುವ ಅವನ ಶಾಲೆಯಾದ, ನವಾಪುರ ತಾಲ್ಲೂಕಿನ ಕಾಯ್ ಡಿ.ಜೆ. ಕೋಕಾನಿ ಆದಿವಾಸಿ ಛತ್ರಾಲಯ ಶ್ರಾವಣಿ ಕಳೆದ ವರ್ಷ ಮುಚ್ಚದಿದ್ದರೆ ಇತಿಹಾಸ ಅಥವಾ ಗಣಿತ ಅಥವಾ ಭೂಗೋಳಶಾಸ್ತ್ರ ಅಥವಾ 6ನೇ ತರಗತಿಯ ಇತರ ವಿಷಯಗಳನ್ನು ಕಲಿಯುವ ತರಗತಿಯಲ್ಲಿರುತ್ತಿದ್ದರು.

ರಹಿದಾಸನ ತಂದೆ 36 ವರ್ಷದ ಪ್ಯಾಣೆ ಮತ್ತು 32 ವರ್ಷದ ತಾಯಿ ಶೀಲ, ಮುಂಗಾರಿನ ಸಮಯದಲ್ಲಿ ತಮ್ಮ ಎರಡು ಎಕರೆಯ ಭೂಮಿಯಲ್ಲಿ ಮೆಕ್ಕೆಜೋಳ ಮತ್ತು ಜೋಳವನ್ನು ಬೆಳೆಯುತ್ತಾರೆ. "ನನ್ನ ಅಣ್ಣ ರಾಮದಾಸ್ ಅವರಿಗೆ ಜಮೀನಿನಲ್ಲಿ ಸಹಾಯ ಮಾಡುತ್ತಾನೆ" ಎಂದು ರಹಿದಾಸ್ ಹೇಳುತ್ತಾನೆ.

Rahidas Pawra and his friends takes the cattle out to grazing every day since the school closed. 'I don’t feel like going back to school', he says.
PHOTO • Jyoti
Rahidas Pawra and his friends takes the cattle out to grazing every day since the school closed. 'I don’t feel like going back to school', he says.
PHOTO • Jyoti

ಶಾಲೆ ಮುಚ್ಚಿದಾಗಿನಿಂದ ರಹಿದಾಸ್ ಪಾವ್ರಾ ಮತ್ತು ಅವನ ಸ್ನೇಹಿತರು ಪ್ರತಿದಿನ ಜಾನುವಾರುಗಳನ್ನು ಮೇಯಿಸಲು ಹೋಗುತ್ತಾರೆ. 'ನನಗೆ ಶಾಲೆಗೆ ಹಿಂತಿರುಗಲು ಮನಸಿಲ್ಲ' ಎಂದು ಹೇಳುತ್ತಾನೆ

ವಾರ್ಷಿಕ ಸುಗ್ಗಿಯ ನಂತರ, ಪಾಯನೇ, ಶೀಲಾ ಮತ್ತು 19 ವರ್ಷದ ರಾಮದಾಸ್ (4ನೇ ತರಗತಿಯವರೆಗೆ ಓದಿದ್ದಾರೆ) ಕೆಲಸಕ್ಕಾಗಿ ಗುಜರಾತ್‌ಗೆ ತೆರಳುತ್ತಾರೆ. ಅವರು ಗುಜರಾತ್‌ನ ನವಸಾರಿ ಜಿಲ್ಲೆಯ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಡಿಸೆಂಬರ್‌ನಿಂದ ಮೇ ವರೆಗೆ ದಿನಕ್ಕೆ 250 ರೂ ಗಳಿಸುತ್ತಾರೆ ಮತ್ತು ವರ್ಷದಲ್ಲಿ ಸುಮಾರು 180 ದಿನಗಳ ಕಾಲ ಕೆಲಸ ಮಾಡುತ್ತಾರೆ.

"ಕಳೆದ ವರ್ಷ ಅವರು ಕೊರೊನಾಗೆ ಹೆದರಿ ಹೋಗಲಿಲ್ಲ. ಆದರೆ ಈ ವರ್ಷ ನಾನು ಅವರೊಂದಿಗೆ ಹೋಗುತ್ತಿದ್ದೇನೆ" ಎಂದು ರಹಿದಾಸ್ ಹೇಳುತ್ತಾನೆ. ಕುಟುಂಬದ ಜಾನುವಾರುಗಳು ಆದಾಯದ ಮೂಲವಲ್ಲ; ಆಡುಗಳ ಹಾಲನ್ನು ಮನೆಯಲ್ಲಿ ಸೇವಿಸಲಾಗುತ್ತದೆ. ಕೆಲವೊಮ್ಮೆ, ಅವರು ಒಂದು ಮೇಕೆಯನ್ನು ಸ್ಥಳೀಯ ಮಾಂಸದ ವ್ಯಾಪಾರಿಗೆ ಪ್ರಾಣಿಯ ಗಾತ್ರ ಮತ್ತು ಆರೋಗ್ಯವನ್ನು ಅವಲಂಬಿಸಿ 5,000 ರಿಂದ 10,000 ರೂ.ಗಳವರೆಗೆ ಮಾರಾಟ ಮಾಡುತ್ತಾರೆ. ಆದರೆ ಇದು ಅಪರೂಪ, ಮತ್ತು ಹಣದ ಅಗತ್ಯವಿದ್ದಾಗ ಮಾತ್ರ ಆಶ್ರಯಿಸಲಾಗುತ್ತದೆ.

ಜಾನುವಾರುಗಳನ್ನು ಮೇಯಿಸುವ ಮೂವರು ಸ್ನೇಹಿತರು ಒಂದೇ ಶಾಲೆ ಮತ್ತು ತರಗತಿಯಲ್ಲಿದ್ದಾರೆ. "ನಾನು ಬೇಸಿಗೆ ಮತ್ತು ದೀಪಾವಳಿ ರಜೆಗಳಲ್ಲಿ ಮನೆಗೆ ಬಂದಾಗಲೆಲ್ಲಾ ನಮ್ಮ ಜಾನುವಾರುಗಳನ್ನು ಮೊದಲೂ (ಸಾಂಕ್ರಾಮಿಕ ರೋಗಕ್ಕೆ ಮೊದಲು) ಮೇಯಿಸುತ್ತಿದ್ದೆ" ಎಂದು ರಹಿದಾಸ್ ಹೇಳುತ್ತಾನೆ. "ಇದು ಹೊಸತೇನಲ್ಲ."

ಹೊಸದೆಂದರೆ ಅವನ ನೈತಿಕ ಸ್ಥೈರ್ಯ ಕುಸಿದಿರುವುದು. "ನಾನು ಶಾಲೆಗೆ ಹಿಂತಿರುಗಲು ಬಯಸುವುದಿಲ್ಲ" ಎಂದು ಅವನು ಹೇಳುತ್ತಾನೆ. ಅವರ ಶಾಲೆ ಮತ್ತೆ ತೆರೆಯುವ ಸಾಧ್ಯತೆಯ ಸುದ್ದಿ ಸ್ನೇಹಿತರಲ್ಲಿ ಉತ್ಸಾಹ ಹುಟ್ಟಿಸುತ್ತಿಲ್ಲ. "ನನಗೆ ಏನೂ ನೆನಪಿಲ್ಲ", ಎನ್ನುವ ರಹಿದಾಸ್ ಮುಂದುವರೆದು ಹೇಳುತ್ತಾನೆ. "ಒಂದು ಅವರು ಇನ್ನೊಮ್ಮೆ ಶಾಲೆ ಮುಚ್ಚಿದರೆ?"

ಅನುವಾದ: ಶಂಕರ. ಎನ್. ಕೆಂಚನೂರು

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Other stories by Jyoti
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru