ಪೊಲಮರಸೆಟ್ಟಿ ಪದ್ಮಜ ಅವರ ಪರಿವಾರವು ೨೦೦೭ರಲ್ಲಿ ನಡೆದ ಅವರ ಮದುವೆಯ ಸಂದರ್ಭದಲ್ಲಿ ೨೫ ತೊಲ (೨೫೦ ಗ್ರಾಂ) ಚಿನ್ನದ ಒಡವೆಗಳ ವರದಕ್ಷಿಣೆಯನ್ನು ನೀಡಿತ್ತು. “ನನ್ನ ಪತಿ ಅದೆಲ್ಲವನ್ನೂ ಖರ್ಚು ಮಾಡಿಕೊಂಡ ಮೇಲೆ ನನ್ನನ್ನೂ ತ್ಯಜಿಸಿದರು”, ಎಂದು ಅಲವತ್ತುಕೊಂಡರು, ೩೧ರ ವಯಸ್ಸಿನ ಪದ್ಮಜ. ಇವರು ತಮ್ಮ ಜೀವನೋಪಾಯಕ್ಕಾಗಿ ಗಡಿಯಾರಗಳ ರಿಪೇರಿಯ ಉದ್ಯೋಗದಲ್ಲಿ ತೊಡಗಿದ್ದಾರೆ.

ಪದ್ಮಜ ಅವರ ಪತಿ ಒಂದೊಂದೇ ಒಡವೆಗಳನ್ನು ಮಾರಿ, ಸರಾಯಿಗೆಂದು ಖರ್ಚುಮಾಡಿದರು. “ನನ್ನ ಹಾಗೂ ನನ್ನ ಕುಟುಂಬದ ಜವಾಬ್ದಾರಿಯನ್ನು, ಅದರಲ್ಲೂ ವಿಶೇಷವಾಗಿ ಮಕ್ಕಳ ಜವಾಬ್ದಾರಿಯನ್ನು ನಾನೇ ಹೊರಬೇಕಾಯಿತು” ಎಂದರಾಕೆ. ೨೦೧೮ರಲ್ಲಿ ಪತಿಯು ತನ್ನನ್ನು ತ್ಯಜಿಸಿದ ನಂತರ, ಅವರು ಕೈ ಗಡಿಯಾರಗಳ ರಿಪೇರಿಯನ್ನು ಪ್ರಾರಂಭಿಸಿದರು. ಬಹುಶಃ ಆಂಧ್ರ ಪ್ರದೇಶದ ವಿಶಾಖಪಟ್ನಂ ನಗರದಲ್ಲಿ ಗಡಿಯಾರಗಳನ್ನು ರಿಪೇರಿ ಮಾಡುವ ಏಕೈಕ ಮಹಿಳೆ ಈಕೆ.

ಆಗಿನಿಂದಲೂ ಇವರು ಚಿಕ್ಕ ಗಡಿಯಾರದ ಅಂಗಡಿಯೊಂದರಲ್ಲಿ ಕೆಲಸವನ್ನು ನಿರ್ವಹಿಸುತ್ತ, ಪ್ರತಿ ತಿಂಗಳು ೬,೦೦೦ ರೂ.ಗಳ ಸಂಬಳವನ್ನು ಪಡೆಯುತ್ತಿದ್ದಾರೆ. ಆದರೆ ಮಾರ್ಚ್‌ನಲ್ಲಿ ಕೋವಿಡ್‌-೧೯ ಲಾಕ್‌ಡೌನ್‌ ಪ್ರಾರಂಭವಾದಾಗಿನಿಂದಲೂ ಆಕೆಯ ಸಂಪಾದನೆಗೆ ಹೊಡೆತ ಬಿದ್ದಿದೆ. ಆ ತಿಂಗಳಿನಲ್ಲಿ ಈಕೆ ಕೇವಲ ತಮ್ಮ ಸಂಬಳದ ಅರ್ಧದಷ್ಟನ್ನು ಪಡೆದರಾದರೂ, ಏಪ್ರಿಲ್‌ ಮತ್ತು ಮೇನಲ್ಲಿ ಅದೂ ಸಹ ದೊರೆಯಲಿಲ್ಲ.

ತನ್ನ ಮಕ್ಕಳಾದ ೧೩ ವರ್ಷದ ಅಮನ್‌ ಮತ್ತು ೧೦ ವರ್ಷದ ರಾಜೇಶ್‌ ಜೊತೆಗೆ ಕಂಚರಪಲೆಮ್‌ ಪ್ರದೇಶದಲ್ಲಿ ವಾಸಿಸುತ್ತಿರುವ ಪದ್ಮಜ, “ಮೇ ತಿಂಗಳವರೆಗೂ ನನ್ನ ಉಳಿತಾಯದಿಂದ ಬಾಡಿಗೆಯನ್ನು ನಿಭಾಯಿಸಿದೆ. ಮಕ್ಕಳನ್ನು ಸ್ಕೂಲಿಗೆ ಕಳುಹಿಸುವುದನ್ನು ಮುಂದುವರೆಸಲು ನನಗೆ ಸಾಧ್ಯವಾಗಲೆಂದು ಆಶಿಸುತ್ತೇನೆ. ನನಗಿಂತಲೂ ಅವರು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಬೇಕೆಂಬುದು ನನ್ನ ಇಚ್ಛೆ (೧೦ನೇ ತರಗತಿಗಿಂತಲೂ ಹೆಚ್ಚಿನ ವ್ಯಾಸಂಗ)” ಎಂದು ತಿಳಿಸಿದರು.

ಪದ್ಮಜಾರ ಸಂಪಾದನೆಯಲ್ಲೇ ಆಕೆಯ ತಂದೆ ತಾಯಿಯರನ್ನೊಳಗೊಂಡ ಅವರ ಸಂಪೂರ್ಣ ಪರಿವಾರವನ್ನು ನಿಭಾಯಿಸಬೇಕಿದೆ. ನಿರುದ್ಯೋಗಿಯಾಗಿರುವ ಈಕೆಯ ಪತಿಯಿಂದ ಯಾವುದೇ ಹಣಕಾಸಿನ ಬೆಂಬಲವಿಲ್ಲ. “ಹಣವಿಲ್ಲದ ಸಂದರ್ಭಗಳಲ್ಲಿ ಈಗಲೂ ಅವರು ಬರುತ್ತಾರೆ” ಎನ್ನುವ ಪದ್ಮಜ, ಆತನು ಬಂದಾಗ, ತಮ್ಮಲ್ಲಿ ಉಳಿದುಕೊಳ್ಳಲು ಆಸ್ಪದ ನೀಡುತ್ತಾರೆ.

“ಗಡಿಯಾರಗಳ ರಿಪೇರಿಯನ್ನು ಕಲಿಯುವ ನಿರ್ಧಾರವು ಅನಿರೀಕ್ಷಿತ. ನನ್ನ ಪತಿಯು ತೊರೆದು ಹೋದಾಗ, ನನಗೆ ದಿಕ್ಕುತೋಚದಂತಾಯಿತು. ಸೌಮ್ಯ ಸ್ವಭಾವದವಳಾದ ನನಗಿದ್ದ ಸ್ನೇಹಿತರು ಕಡಿಮೆ. ನನ್ನ ಸ್ನೇಹಿತರಲ್ಲೊಬ್ಬರು ಇದರ ಸಲಹೆ ನೀಡುವವರೆಗೂ ಏನು ಮಾಡಬೇಕೆಂದು ನನಗೆ ತೋಚುತ್ತಿರಲಿಲ್ಲ” ಎಂದರಾಕೆ. ಈಕೆಯ ಸ್ನೇಹಿತೆಯ ಸಹೋದರ, ಎಂ. ಡಿ. ಮುಸ್ತಫ, ಪದ್ಮಜಾರಿಗೆ ರಿಪೇರಿ ಕೆಲಸವನ್ನು ಕಲಿಸಿದರು. ಸದಾ ಚಟುವಟಿಕೆಯಿಂದ ಕೂಡಿರುವ ವಿಶಾಖಪಟ್ಟಣದ ಜಗದಂಬ ಪ್ರದೇಶದಲ್ಲಿ ಇವರ  ಗಡಿಯಾರದ ಅಂಗಡಿಯಿದೆ. ಪದ್ಮಜ ಕೆಲಸವನ್ನು ನಿರ್ವಹಿಸುವ ಅಂಗಡಿಯೂ ಇಲ್ಲೇ ಇದ್ದು, ಆರು ತಿಂಗಳಲ್ಲಿ ಪದ್ಮಜ, ಇದರಲ್ಲಿ ನೈಪುಣ್ಯವನ್ನು ಪಡೆದರು.

Polamarasetty Padmaja’s is perhaps the only woman doing this work in Visakhapatnam; her friend’s brother, M. D. Mustafa (right), taught her this work
PHOTO • Amrutha Kosuru
Polamarasetty Padmaja’s is perhaps the only woman doing this work in Visakhapatnam; her friend’s brother, M. D. Mustafa (right), taught her this work
PHOTO • Amrutha Kosuru
Polamarasetty Padmaja’s is perhaps the only woman doing this work in Visakhapatnam; her friend’s brother, M. D. Mustafa (right), taught her this work
PHOTO • Amrutha Kosuru

ಪೊಲಮರಸೆಟ್ಟಿ ಪದ್ಮಜ, ಬಹುಶಃ ವಿಶಾಖಪಟ್ಟಣಂನಲ್ಲಿ ಈ ಕೆಲಸವನ್ನು ನಿರ್ವಹಿಸುತ್ತಿರುವ ಏಕೈಕ ಮಹಿಳೆ; ಆಕೆಯ ಸ್ನೇಹಿತೆಯ ಸಹೋದರ, ಎಂ.ಡಿ. ಮುಸ್ತಫ (ಬಲಕ್ಕೆ), ಆಕೆಗೆ ಈ ಕೆಲಸವನ್ನು ಕಲಿಸಿದರು.

ಲಾಕ್‌ಡೌನ್‌ಗೆ ಮೊದಲು ಪದ್ಮಜ, ದಿನವೊಂದಕ್ಕೆ ಸುಮಾರು ಹನ್ನೆರಡು ಗಡಿಯಾರಗಳನ್ನು ರಿಪೇರಿ ಮಾಡುತ್ತಿದ್ದರು. “ನಾನು ಗಡಿಯಾರಗಳ ಮೆಕ್ಯಾನಿಕ್‌ ಆಗುತ್ತೇನೆಂದು ಎಂದಿಗೂ ಎಣಿಸಿರಲಿಲ್ಲ, ಈ ಕೆಲಸದಲ್ಲಿ ನನಗೆ ಖುಷಿಯಿದೆ” ಎಂದ ಪದ್ಮಜ, ಗಿರಾಕಿಯೊಬ್ಬರ ಕೈ ಗಡಿಯಾರದ ಮುರಿದ ʼಕ್ರಿಸ್ಟಲ್‌ʼ ಅನ್ನು (ಪಾರದರ್ಶಕ ಮುಸುಕು) ಬದಲಾಯಿಸುತ್ತ, ಲಾಕ್‌ಡೌನ್‌ ಕಾರಣದಿಂದಾಗಿ ರಿಪೇರಿಗೆ ಹೆಚ್ಚಿನ ಕೈ ಗಡಿಯಾರಗಳು ದೊರೆಯಲಿಲ್ಲ. “ಕ್ಲಿಕ್‌, ಟಿಕ್‌-ಟಾಕ್‌ ಹಾಗೂ ಮುರಿದ ವಾಚುಗಳ ರಿಪೇರಿಯ ಶಬ್ದಗಳಿಂದ ನಾನು ದೂರವಾಗಿದ್ದೆ” ಎಂದು ಸಹ ತಿಳಿಸಿದರು.

ಯಾವ ಸಂಪಾದನೆಯೂ ಇಲ್ಲದೆ ಮನೆಯನ್ನು ನಿಭಾಯಿಸುವುದು ಪ್ರಯಾಸಕರವಾಗಿತ್ತು. ಲಾಕ್‌ಡೌನ್‌ನ ನಿರ್ಬಂಧಗಳು ಕಡಿಮೆಯಾಗತೊಡಗಿದಂತೆ, ಜೂನ್‌ನಲ್ಲಿ ಪದ್ಮಜ ಕೆಲಸಕ್ಕೆ ತೆರಳಿದರಾದರೂ, ಪ್ರತಿ ತಿಂಗಳೂ ಸಂಬಳದಲ್ಲಿನ ಅರ್ಧದಷ್ಟು ಅಂದರೆ ೩,೦೦೦ ರೂ.ಗಳು ಮಾತ್ರವೇ ಅವರಿಗೆ ದೊರೆಯುತ್ತಿತ್ತು. ಜಗದಂಬ ಜಂಕ್ಷನ್‌ ನಿರ್ಬಂಧಿತ ಪ್ರದೇಶವಾದ ಕಾರಣ, ಜುಲೈನಲ್ಲಿ ಎರಡು ವಾರಗಳವರೆಗೆ ಅಲ್ಲಿನ ಗಡಿಯಾರದ ಅಂಗಡಿಗಳು ಮುಚ್ಚಿದ್ದವು. ಆಗಿನಿಂದ ಈ ಉದ್ಯಮವಿನ್ನೂ ಚೇತರಿಸಿಕೊಂಡಿಲ್ಲ. “ನಾನು ಮುಂಜಾನೆ ೧೦ರಿಂದ ಸಂಜೆ ೭ರವರೆಗೂ ದುಡಿಯುತ್ತೇನೆ. ಬೇರೆ ಯಾವ ಕೆಲಸವನ್ನೂ ನಾನು ಪ್ರಯತ್ನಿಸಲಾರೆ” ಎಂದು ಆಕೆ ತಿಳಿಸಿದರು.

ಈಕೆಯು ಕೆಲಸ ಮಾಡುವ ಅಂಗಡಿಯ ಎದುರಿನ ಕಾಲುದಾರಿಯಲ್ಲಿ ಮುಸ್ತಫಾ ಅವರ ಗೂಡಂಗಡಿ ಇದೆ. ನೀಲಿ ಬಣ್ಣದ ಈ ಅಂಗಡಿಯಲ್ಲಿ ಮಕ್ಕಳು ಮತ್ತು ವಯಸ್ಕರ ಕೆಲವು ಕೈ ಗಡಿಯಾರಗಳು, ಡಿಜಿಟಲ್‌ ಮತ್ತು ಅನುರೂಪದ ವಾಚುಗಳನ್ನು ಕಪಾಟಿನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಕಪಾಟಿನ ಕೆಳಗೆ ಬಿಡಿಭಾಗಗಳು, ಪುಟ್ಟ ಚಿಮುಟದಂತಹ ಪರಿಕರಗಳು ಮತ್ತು ಅವರು ಬಳಸುವ ಕಣ್ಣಿನ ಚಿಕ್ಕ ಮಸೂರಗಳನ್ನು ದಾಸ್ತಾನು ಮಾಡಲಾಗಿದೆ.

ಜೂನ್‌ನಲ್ಲಿ ಗೂಡಂಗಡಿಯನ್ನು ಮತ್ತೆ ಪ್ರಾರಂಭಿಸಿದ ನಂತರ, ಮುಸ್ತಫ ಅವರ ದಿನನಿತ್ಯದ ಸಂಪಾದನೆ ೭೦೦-೧,೦೦೦ ರೂ.ಗಳಿಂದ ೫೦ ರೂ.ಗಳಿಗೆ ಇಳಿಯಿತು. ಹೀಗಾಗಿ ನಿರ್ಬಂಧದ ಕಾರಣದಿಂದಾಗಿ ಅವರು ಜುಲೈನಲ್ಲಿ ಅಂಗಡಿಯನ್ನು ಮುಚ್ಚಬೇಕಾದ ಸಂದರ್ಭದಲ್ಲಿ ಅದನ್ನು ಹಾಗೆಯೇ ಬಿಟ್ಟರು. “ವ್ಯಾಪಾರವಿಲ್ಲದ ಕಾರಣ ನನ್ನ ಪ್ರಯಾಣದ ವೆಚ್ಚವು ಆದಾಯಕ್ಕಿಂತಲೂ ಹೆಚ್ಚಾಗಿತ್ತು” ಎಂದರವರು. ಪ್ರತಿ ಆರು ತಿಂಗಳಿಗೊಮ್ಮೆ ಸರಕನ್ನು ಪುನಃ ಭರ್ತಿಮಾಡಲು ಅವರಿಗೆ ೪೦,೦೦೦-೫೦,೦೦೦ ರೂ.ಗಳ ಅವಶ್ಯಕತೆಯಿದೆ. ಹೀಗಾಗಿ ಅವರು ಜುಲೈನಿಂದಲೂ ತಮ್ಮ ಉಳಿತಾಯದಿಂದ ಜೀವನ ಸಾಗಿಸುತ್ತಿದ್ದಾರೆ.

ಮುಸ್ತಫ ಅವರು ಸುಮಾರು ೫೦ ವರ್ಷಗಳಿಂದಲೂ ಗಡಿಯಾರಗಳ ಕೆಲಸದಲ್ಲಿ ತೊಡಗಿದ್ದಾರೆ. ಬಿ.ಕಾಂ ಪದವಿ ಪಡೆದಿರುವ ೫೯ ವರ್ಷದ ಮುಸ್ತಫ, “ನಾನು ೧೦ ವರ್ಷದವನಾಗಿದ್ದಾಗಿನಿಂದಲೂ ನನ್ನ ತಾತ ಹಾಗೂ ತಂದೆಯಿಂದ ಈ ಕಸುಬನ್ನು ಕಲಿತೆ” ಎಂದು ತಿಳಿಸಿದರು. ಕಂಚರಪಲೆಮ್‌ನಲ್ಲಿ ಅಂಗಡಿಯನ್ನು ಹೊಂದಿದ್ದ ಈ ಇಬ್ಬರೂ, ಗಡಿಯಾರ ಹಾಗೂ ಕೈ ಗಡಿಯಾರಗಳ ತಯಾರಕರು ಹಾಗೂ ಅವುಗಳನ್ನು ರಿಪೇರಿಮಾಡುತ್ತಿದ್ದರು (horologists). ೧೯೯೨ರಲ್ಲಿ ಮುಸ್ತಫ ತಮ್ಮ ಸ್ವಂತ ಅಂಗಡಿಯನ್ನು ತೆರೆದರು.

M.D. Mustafa, who has been using up his savings since July, says, '''When mobile phones were introduced, watches began losing their value and so did we'
PHOTO • Amrutha Kosuru
M.D. Mustafa, who has been using up his savings since July, says, '''When mobile phones were introduced, watches began losing their value and so did we'
PHOTO • Amrutha Kosuru

ಜುಲೈನಿಂದಲೂ ತನ್ನ ಉಳಿತಾಯವನ್ನೇ ಬಳಸುತ್ತಿರುವ ಎಂ. ಡಿ. ಮುಸ್ತಫ, “ಮೊಬೈಲ್‌ ಫೋನುಗಳು ಪರಿಚಯಿಸಲ್ಪಟ್ಟಾಗ, ಕೈ ಗಡಿಯಾರಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳತೊಡಗಿದವು. ನಮಗೂ ಬೇಡಿಕೆಯಿಲ್ಲದಂತಾಯಿತು”, ಎಂದರು.

“ಹಿಂದೆಲ್ಲಾ ನಮ್ಮ ವೃತ್ತಿಯನ್ನು ಗೌರವಿಸಲಾಗುತ್ತಿತ್ತು. ನಮ್ಮನ್ನು ಗಡಿಯಾರಗಳ ತಯಾರಕರೆನಿಸಿಕೊಂಡಿದ್ದೆವು. ಮೊಬೈಲ್‌ ಫೋನುಗಳು ಪರಿಚಯಿಸಲ್ಪಟ್ಟಾಗ, ಕೈ ಗಡಿಯಾರಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳತೊಡಗಿದವು. ನಮಗೂ ಅದೇ ಗತಿ ತಲೆದೋರಿತು,” ಎಂದು ಅವರು ತಿಳಿಸಿದರು. ೨೦೦೩ರವರೆಗೂ ಇವರು ವಿಸಾಖ ಗಡಿಯಾರಗಳ ತಯಾರಕರ ಸಂಘದ ಸದಸ್ಯರಾಗಿದ್ದರು. “ಸುಮಾರು ೬೦ ಹಿರಿಯ ಗಡಿಯಾರಗಳ ತಂತ್ರಜ್ಞರನ್ನೊಳಗೊಂಡ ಅದು ಒಕ್ಕೂಟದಂತಿತ್ತು. ಪ್ರತಿ ತಿಂಗಳು ನಾವು ಒಟ್ಟಾಗಿ ಕಲೆಯುತ್ತಿದ್ದವು. ಅದು ಒಳ್ಳೆಯ ಕಾಲವಾಗಿತ್ತು”, ಎಂದು ಅವರು ನೆನಪಿಸಿಕೊಂಡರು. ೨೦೦೩ರಲ್ಲಿ ಈ ಸಮೂಹವು ವಿಸರ್ಜಿಸಲ್ಪಟ್ಟು, ಇವರ ಅನೇಕ ಸಹವರ್ತಿಗಳು ತಮ್ಮ ಉದ್ಯಮವನ್ನು ತ್ಯಜಿಸಿದರು ಅಥವ ನಗರವನ್ನೇ ಬಿಟ್ಟು ಹೋದರು. ಆದರೆ ಮುಸ್ತಫ ಈಗಲೂ ತನ್ನ ಸದಸ್ಯತ್ವದ ಕಾರ್ಡನ್ನು ಪರ್ಸಿನಲ್ಲಿಟ್ಟುಕೊಂಡಿದ್ದಾರೆ. “ಇದು ನನಗೆ ಅಸ್ಮಿತೆಯ ಭಾವವನ್ನು ಮೂಡಿಸುತ್ತದೆ,” ಎನ್ನುತ್ತಾರವರು.

ಮುಸ್ತಫಾರ ಗೂಡಂಗಡಿಯ ಹತ್ತಿರದಲ್ಲೇ ಇರುವ ಮೊಹಮ್ಮದ್‌ ತಾಜುದ್ದೀನ್‌ ಅವರೂ ಸಹ ಬದಲಾವಣೆಗಳ ಬಗ್ಗೆ ಹೀಗೆನ್ನುತ್ತಾರೆ: “ತಂತ್ರಜ್ಞಾನದಲ್ಲಿನ ಪ್ರಗತಿಯಿಂದಾಗಿ ಈ ಉದ್ಯಮವು ಮರೆಯಾಗುತ್ತಿದೆ. ಮುಂದೊಂದು ದಿನ ಗಡಿಯಾರಗಳನ್ನು ರಿಪೇರಿ ಮಾಡುವವರೇ ಇಲ್ಲವಾಗಬಹುದು.” ೪೯ರ ವಯಸ್ಸಿನ ತಾಜುದ್ದೀನ್‌ ೨೦ ವರ್ಷಗಳಿಂದಲೂ ಗಡಿಯಾರಗಳ ರಿಪೇರಿಯಲ್ಲಿ ತೊಡಗಿದ್ದಾರೆ.

ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ನಗರದ ಮೂಲದವರಾದ ತಾಜುದ್ದೀನ್‌, ನಾಲ್ಕು ವರ್ಷಗಳ ಹಿಂದೆ ತಮ್ಮ ಪತ್ನಿ ಹಾಗೂ ಮಗನೊಂದಿಗೆ ವಿಶಾಖಪಟ್ನಂಗೆ ಸ್ಥಳಾಂತರಗೊಂಡರು. “ನಮ್ಮ ಮಗನಿಗೆ ಇಲ್ಲಿನ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಂಪೂರ್ಣ ಸ್ಕಾಲರ್‌ಶಿಪ್‌ ದೊರೆಯಿತು” ಎಂದು ಅವರು ತಿಳಿಸಿದರು.

“ಲಾಕ್‌ಡೌನ್‌ನಿಂದಾಗಿ ನನಗೆ ವಿವಿಧ ಕೈ ಗಡಿಯಾರಗಳನ್ನು ಅನ್ವೇಷಿಸಲು ಸಮಯ ದೊರೆಯಿತಾದರೂ, ಅದು ನನ್ನ ಸಂಬಳಕ್ಕೆ ಕುತ್ತು ತಂದಿತು” ಎಂದರವರು. ಮಾರ್ಚ್‌ನಿಂದ ಮೇವರೆಗೂ ಇವರಿಗೆ ತಮ್ಮ ಸಂಬಳದ ಅರ್ಧದಷ್ಟು ಮಾತ್ರವೇ ದೊರೆಯಿತು. ಮುಂದಿನ ಎರಡು ತಿಂಗಳು ಯಾವುದೇ ಸಂಬಳವೂ ದೊರೆಯಲಿಲ್ಲ.

ತಾಜುದ್ದೀನ್‌ ದಿನವೊಂದಕ್ಕೆ ೨೦ ಗಡಿಯಾರಗಳನ್ನು ನಿರ್ವಹಿಸುತ್ತಿದ್ದರೂ ಲಾಕ್‌ಡೌನ್‌ ಸಂದರ್ಭದಲ್ಲಿ ರಿಪೇರಿಗೆ ಗಡಿಯಾರಗಳೇ ದೊರೆಯಲಿಲ್ಲ. ಮನೆಯಿಂದಲೇ ಕೆಲವನ್ನು ಅಣಿಗೊಳಿಸಿದರು. “ನಾನು ಬ್ಯಾಟರಿಗಳನ್ನು ದುರಸ್ತಿಗೊಳಿಸಿ, ಅಗ್ಗದ, ಬ್ರ್ಯಾಂಡ್‌ರಹಿತ ಕೈ ಗಡಿಯಾರಗಳ ಗಾಜು (ಕ್ರಿಸ್ಟಲ್‌) ಅಥವ ಪಟ್ಟಿಯನ್ನು ಬದಲಾಯಿಸುತ್ತಿದ್ದೆ” ಎಂದು ಅವರು ತಿಳಿಸಿದರು. ಆಗಸ್ಟ್‌ನಲ್ಲಿ ತಾಜುದ್ದೀನ್‌, ಪೂರ್ಣ ವೇತನವನ್ನು ಪಡೆದರು.

ಗಡಿಯಾದ ರಿಪೇರಿಯು ಯಾವುದೇ ನಿರ್ದಿಷ್ಟ ಸಮುದಾಯದ ರೂಢಿಯೇನಲ್ಲ. ಇದಕ್ಕೆ ಯಾವುದೇ ಮೂಲದಿಂದ ಬೆಂಬಲವೇನೂ ದೊರೆಯುವುದಿಲ್ಲ. ಇವನ್ನು ರಿಪೇರಿ ಮಾಡುವವರಿಗೆ ಸರ್ಕಾರದಿಂದ ನೆರವು ದೊರೆಯತಕ್ಕದ್ದು ಎಂದು ಅವರು ತಿಳಿಸಿದರು.

Mohammad Tajuddin (top row) used to work on about 20 watches a day, but he had hardly any to repair during the lockdown. S.K. Eliyaseen (bottom right) says, 'Perhaps some financial support would do, especially in these hard times'
PHOTO • Amrutha Kosuru

ಮೊಹಮ್ಮದ್‌ ತಾಜುದ್ದೀನ್‌ (ಮೇಲಿನ ಸಾಲು), ದಿನವೊಂದಕ್ಕೆ ಸುಮಾರು ೨೦ ಗಡಿಯಾರಗಳ ರಿಪೇರಿ ಮಾಡುತ್ತಿದ್ದರು. ಆದರೆ ಲಾಕ್‌ಡೌನ್‌ ಸಮಯದಲ್ಲಿ ರಿಪೇರಿಗೆ ಒಂದು ಗಡಿಯಾರವೂ ದೊರೆಯಲಿಲ್ಲ. ‘ಬಹುಶಃ ಸ್ವಲ್ಪ ಹಣದ ಸಹಾಯ ದೊರೆತಲ್ಲಿ, ಅದರಲ್ಲೂ ವಿಶೇಷವಾಗಿ ಈ ಲಾಕ್‌ಡೌನ್‌ ಸಮಯದಲ್ಲಿ ಅದು ಲಭ್ಯವಾದಲ್ಲಿ ಸಹಾಯವಾಗಬಹುದು’ ಎನ್ನುತ್ತಾರೆ ಎಸ್‌. ಕೆ. ಇಲಿಯಸೀನ್‌ (ಕೆಳಗಿನ ಸಾಲು)

“ಬಹುಶಃ ಸ್ವಲ್ಪ ಹಣದ ಸಹಾಯವು ದೊರೆತಲ್ಲಿ, ಅದರಲ್ಲೂ ವಿಶೇಷವಾಗಿ, ಈ ಲಾಕ್‌ಡೌನ್‌ ಸಮಯದಲ್ಲಿ ಅದು ಲಭ್ಯವಾದಲ್ಲಿ ಸಹಾಯವಾಗಬಹುದು” ಎನ್ನುತ್ತಾರೆ ಜಗದಂಬ ಜಂಕ್ಷನ್‌ನ ಜನಪ್ರಿಯ ಅಂಗಡಿಯೊಂದರ ಗಡಿಯಾರಗಳನ್ನು ರಿಪೇರಿ ಮಾಡುವ ಎಸ್‌.ಕೆ. ಇಲಿಯಸೀನ್‌. ಇವರಿಗೂ ಸಹ ಏಪ್ರಿಲ್‌ನಿಂದ ಜೂನ್‌ವರೆಗಿನ ೧೫,೦೦೦ ರೂ.ಗಳ ವೇತನವು ದೊರೆತಿಲ್ಲ. ಮಾರ್ಚ್‌, ಜುಲೈ ಮತ್ತು ಆಗಸ್ಟ್‌ನಲ್ಲಿ ವೇತನದ ಅರ್ಧ ಭಾಗವಷ್ಟೇ ದೊರೆತಿದೆ. ೧೦ ಹಾಗೂ ೯ ವರ್ಷ ವಯಸ್ಸಿನ ಎರಡು ಮಕ್ಕಳ ತಂದೆಯಾದ ೪೦ ವರ್ಷದ ಇವರು, “ನನ್ನ ಮಕ್ಕಳ ಶಾಲೆಯು, ಶುಲ್ಕವನ್ನು ಪಾವತಿಸಿ ಪುಸ್ತಕಗಳನ್ನು ಕೊಳ್ಳುವಂತೆ ಕರೆ ಮಾಡುತ್ತಲೇ ಇತ್ತು. ನನ್ನ ಪತ್ನಿಯ ಸಂಪಾದನೆಯಿಂದ ಮನೆಯನ್ನು ನಿಭಾಯಿಸುತ್ತಿದ್ದೇವೆ” ಎಂದರು. ಪ್ರಾಥಮಿಕ ಶಾಲಾ ಶಿಕ್ಷಕಿಯಾದ ಇವರ ಪತ್ನಿ ಅಬಿದ, ಮಾಹೆಯಾನ ೭,೦೦೦ ರೂ.ಗಳನ್ನು ಸಂಪಾದಿಸುತ್ತಾರೆ. ಇವರು ಶುಲ್ಕ ಹಾಗೂ ಪುಸ್ತಕಗಳಿಗಾಗಿ ತಮ್ಮ ಹೆತ್ತವರಿಂದ ೧೮,೦೦೦ ರೂ.ಗಳ ಸಾಲವನ್ನು ಪಡೆದಿದ್ದಾರೆ.

ಇಲಿಯಸೀನ್‌ ತಮ್ಮ ೨೫ನೇ ವರ್ಷದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. “ಗಡಿಯಾರಗಳ ರಿಪೇರಿಯು ನನ್ನ ಪತ್ನಿಯ ಕುಟುಂಬದ ಉದ್ಯಮವಾಗಿತ್ತು. ನನಗೆ ಈ ಕೆಲಸವು ಬಹಳ ಆಸಕ್ತಿಯನ್ನುಂಟುಮಾಡಿದ ಕಾರಣ, ಮದುವೆಯ ನಂತರ ನನ್ನ ಮಾವನವರಿಂದ ಇದನ್ನು ಕಲಿತೆ. ಈ ಕೌಶಲ್ಯವು ನನ್ನ ಬದುಕಿಗೆ ಭರವಸೆ ಹಾಗೂ ಆದಾಯವನ್ನೊದಗಿಸಿದೆ” ಎಂದರು ಇಲಿಯಸೀನ್‌. ವಿಶಾಖಪಟ್ನಂನಲ್ಲಿ ಬೆಳೆದು ದೊಡ್ಡವರಾದ ಇವರು ಶಾಲೆಗೆ ಹೋದವರಲ್ಲ.

ಇಲಿಯಸೀನ್‌ ತಾವು ರಿಪೇರಿ ಮಾಡುವ ದುಬಾರಿ ಕೈ ಗಡಿಯಾರಗಳನ್ನು ಕೊಳ್ಳುವಷ್ಟು ಶ್ರೀಮಂತರಲ್ಲ. ಅವುಗಳ ರಿಪೇರಿಗಷ್ಟೇ ಅವರು ತೃಪ್ತರು. ಆದರೆ “ಗಡಿಯಾರದ ದೊಡ್ಡ ಬ್ರ್ಯಾಂಡ್‌ಗಳು ಸಾಮಾನ್ಯವಾಗಿ ರಿಪೇರಿಯನ್ನು ನಿರ್ಲಕ್ಷಿಸಿ, ಈ ಕೆಲಸಕ್ಕೆಂದು ಯಾರನ್ನೂ ನೇಮಿಸಿಕೊಳ್ಳುವುದಿಲ್ಲ. ಗಡಿಯಾರದ ಆಂತರಿಕ ವಿನ್ಯಾಸವಾದ ‘ಚಲನೆ’ಯನ್ನು (movement) ಸದಾ ಹೊಸ ಉಪಕರಣದಿಂದ ಬದಲಿಸುತ್ತಾರೆಯೇ ಹೊರತು ಅದನ್ನು ಸರಿಪಡಿಸುವುದಿಲ್ಲ. ಗಡಿಯಾರದ ತಂತ್ರಜ್ಞರಾದ ನಾವು ಚಲನೆಯನ್ನು ರಿಪೇರಿ ಮಾಡಬಲ್ಲೆವು. ಜಗತ್ತಿನ ಉನ್ನತ ಕೈ ಗಡಿಯಾರದ ಬ್ರ್ಯಾಂಡ್‌ಗಳಿಂದ ಅನವಶ್ಯಕವಾಗಿ ಬದಲಾಯಿಸಲ್ಪಡುವ ಭಾಗಗಳನ್ನು ನಾವು ದುರಸ್ತಿಗೊಳಿಸಬಲ್ಲೆವು. ಈ ಕೆಲಸದಲ್ಲಿ ನನಗೆ ಹೆಮ್ಮೆಯಿದೆ”, ಎನ್ನುತ್ತಾರವರು.

ಗಡಿಯಾರದ ರಿಪೇರಿಯಲ್ಲಿ ಇವರು ಸ್ವತಃ ಕೌಶಲವನ್ನು ಹೊಂದಿದ್ದಾಗ್ಯೂ ಇಲಿಯಸೀನ್‌, ಮುಸ್ತಫ ಮತ್ತು ಜಗದಂಬ ಜಂಕ್ಷನ್‌ನ ಇತರೆ ಗಡಿಯಾರದ ತಂತ್ರಜ್ಞರು, ೬೮ ವರ್ಷದ ಮೊಹಮ್ಮದ್‌ ಹಬೀಬುರ್‌ ಅವರ ಬಗ್ಗೆ ಆದರಾಭಿಮಾನವನ್ನು ಹೊಂದಿದ್ದಾರೆ. ಅವರು ಲೋಲಕ (pendulum) ಗಡಿಯಾರಗಳನ್ನೊಳಗೊಂಡಂತೆ ಯಾವುದೇ ರೀತಿಯ ಪ್ರಾಚೀನ ಗಡಿಯಾರಗಳನ್ನು ರಿಪೇರಿ ಮಾಡಬಲ್ಲರು. ಹಿಂದಿನ ಕಾಲದ ಗಡಿಯಾರಗಳ ಸಂಕೀರ್ಣ ಯಂತ್ರ ಸಂಯೋಜನೆಯನ್ನು ತ್ವರಿತವಾಗಿ ನಿಭಾಯಿಸುವ ಇವರು, ಮುಳುಗು (diving) ಗಡಿಯಾರಗಳು ಹಾಗೂ ಕ್ವಾರ್ಟ್ಸ್‌ ಗಡಿಯಾರಗಳಲ್ಲಿ ಪರಿಣತಿಯನ್ನು ಹೊಂದಿದ್ದಾರೆ. “ಪೆಂಡ್ಯುಲಮ್‌ ಅನ್ನು ನಿಜವಾಗಿಯೂ ಶ್ಲಾಘಿಸುವ ಕೆಲವೇ ಮಂದಿ ಉಳಿದಿದ್ದಾರಷ್ಟೇ. ಈಗಿನದೆಲ್ಲವೂ ಡಿಜಿಟಲ್‌ ರೂಪದಲ್ಲಿದೆ”, ಎನ್ನುತ್ತಾರೆ ಹಬೀಬುರ್‌ (ಮೇಲಿನ ಮುಖಪುಟ ಚಿತ್ರದಲ್ಲಿರುವವರು).

'Even before the coronavirus, I had very few watches to repair. Now it's one or two a week', says Habibur, who specialises in vintage timepieces (left)
PHOTO • Amrutha Kosuru
'Even before the coronavirus, I had very few watches to repair. Now it's one or two a week', says Habibur, who specialises in vintage timepieces (left)
PHOTO • Amrutha Kosuru

ʼಕೊರೊನಾ ವೈರಸ್‌ಗಿಂತ ಮೊದಲು ಸಹ, ನನಗೆ ರಿಪೇರಿಗೆಂದು ದೊರೆತಿದ್ದ ಗಡಿಯಾರಗಳು ಕಡಿಮೆಯೇ. ಈಗ ವಾರಕ್ಕೆ ಒಂದೋ ಎರಡೋ ದೊರೆಯುತ್ತಿವೆಯಷ್ಟೇ’ ಎನ್ನುತ್ತಾರೆ ಪ್ರಾಚೀನ ಗಡಿಯಾರಗಳಲ್ಲಿ ಪರಿಣತಿಯಿರುವ ಹಬೀಬುರ್‌ (ಎಡಕ್ಕೆ)

ಹಬೀಬುರ್‌ ಕೆಲಸದಲ್ಲಿರುವ ಅಂಗಡಿಯ ಮಾಲೀಕರು, ಕೊರೊನಾ ವೈರಸ್‌ನಿಂದಾಗಿ ಮನೆಯಲ್ಲೇ ಉಳಿಯುವಂತೆ ಅವರಿಗೆ ತಿಳಿಸಿದರಾದರೂ, “ರಿಪೇರಿಗೆ ಗಡಿಯಾರಗಳು ಇರುವ ಕಾರಣ, ನಾನು ಅಂಗಡಿಗೆ ಬರುತ್ತಿದ್ದೇನೆ” ಎಂದರವರು. ೨೦೧೪ರವರೆಗೆ ೮,೦೦೦-೧೨,೦೦೦ ರೂ.ಗಳವರೆಗೂ ಸಂಬಳವು ದೊರೆಯುತ್ತಿತ್ತು. ಕಳೆದ ೫-೬ ವರ್ಷಗಳಿಂದ ಇವರಿಗೆ ದೊರೆಯುತ್ತಿರುವ ಸಂಬಳ ೪,೫೦೦ ರೂ.ಗಳು ಮಾತ್ರ. ಅಂಗಡಿಯನ್ನು ಸುಪರ್ದಿಗೆ ಪಡೆದ ಹೊಸ ಮಾಲೀಕರು, ಪ್ರಾಚೀನ ಗಡಿಯಾರಗಳನ್ನು ಕುರಿತ ಇವರ ಪರಿಣತಿಗೆ ಹೆಚ್ಚಿನ ಬೇಡಿಕೆಯಿದೆಯೆಂದು ಭಾವಿಸಿಲ್ಲ.

“ಕೊರೊನಾ ವೈರಸ್‌ಗಿಂತ ಮೊದಲು ಸಹ ನನಗೆ ರಿಪೇರಿಗೆಂದು ದೊರೆಯುತ್ತಿದ್ದ ಗಡಿಯಾರಗಳು ಕಡಿಮೆಯೇ. ಬಹುಶಃ ನಾನು ತಿಂಗಳಿಗೆ ೪೦ ಗಡಿಯಾರಗಳನ್ನು ರಿಪೇರಿ ಮಾಡುತ್ತಿದ್ದೆ. ಈಗ ವಾರಕ್ಕೆ ಎರಡು ಮೂರು ಮಾತ್ರವೇ ದೊರೆಯುತ್ತಿವೆ” ಎನ್ನುತ್ತಾರೆ ಹಬೀಬ್.‌ ಇವರಿಗೆ ಏಪ್ರಿಲ್‌ ಮತ್ತು ಮೇ ತಿಂಗಳ ಸಂಬಳ ದೊರೆತಿಲ್ಲವಾದರೂ, ಜೂನ್‌ನಿಂದ ಪೂರ್ತಿ ಸಂಬಳವನ್ನು ಪಾವತಿಸಲಾಗಿದೆ. “ಅವರು ನನ್ನ ಸಂಬಳವನ್ನು ಕಡಿತಗೊಳಿಸಿದಲ್ಲಿ, ಜೀವನ ನಡೆಸುವುದು ಕಷ್ಟವಾಗುತ್ತದೆ” ಎಂದು ಅವರು ಅಲವತ್ತುಕೊಂಡರು. ಹಬೀಬುರ್‌ ಹಾಗೂ ೫೫ ವರ್ಷದ ಅವರ ಪತ್ನಿ ಜು಼ಲೇಖ, ಇಬ್ಬರ ಸಂಬಳವನ್ನು ಒಟ್ಟುಗೂಡಿಸಿ ಮನೆಯ ಖರ್ಚುಗಳನ್ನು ನಿಭಾಯಿಸುತ್ತಾರೆ. ಲಾಕ್‌ಡೌನ್‌ಗಿಂತಲೂ ಮೊದಲು ಇವರು ಬಟ್ಟೆಗಳನ್ನು ಹೊಲೆದು, ತಿಂಗಳಿಗೆ ೪,೦೦೦-೫,೦೦೦ ರೂ.ಗಳನ್ನು ಗಳಿಸುತ್ತಿದ್ದರು.

ಹಬೀಬುರ್‌ ತಮ್ಮ ೧೫ನೇ ವಯಸ್ಸಿನಲ್ಲಿ ಕೆಲಸವನ್ನು ಅರಸುತ್ತಾ ವಿಶಾಖಪಟ್ನಂಗೆ ಬಂದರು. ಒರಿಸ್ಸಾದ ಗಜಪತಿ ಜಿಲ್ಲೆಯ ಪರ್ಲಾಖೆಮುಂಡಿ ಎಂಬ ಅವರ ಊರಿನಲ್ಲಿ ಇವರ ತಂದೆಯು ಗಡಿಯಾರಗಳನ್ನು ತಯಾರಿಸುತ್ತಿದ್ದರು. ಅವರು ೨೦ ವರ್ಷ ವಯಸ್ಸಿನವರಿದ್ದಾಗ ವಿಶಾಖಪಟ್ನಂನಲ್ಲಿ ಸುಮಾರು ೨೫೦-೩೦೦ ಗಡಿಯಾರಗಳ ತಂತ್ರಜ್ಞರಿದ್ದರು ಎಂಬುದನ್ನು ಇವರು ನೆನಪಿಸಿಕೊಳ್ಳುತ್ತಾರೆ. “ಆದರೆ ಈಗ ಇವರ ಸಂಖ್ಯೆ ಕೇವಲ ೫೦ರಷ್ಟಿದೆ. ಈ ಸರ್ವವ್ಯಾಪಿ ವ್ಯಾಧಿಯು ಕೊನೆಗೊಂಡ ನಂತರ, ಇಲ್ಲಿ ಯಾರೂ ಉಳಿಯುವುದಿಲ್ಲ” ಎಂದರವರು.

ತಮ್ಮ ನಾಲ್ಕು ಪುತ್ರಿಯರಲ್ಲಿ ಎಲ್ಲರಿಗಿಂತ ಕಿರಿಯವಳಿಗೆ ಇವರು ತಮ್ಮ ಕೌಶಲ್ಯಗಳನ್ನು ಕಲಿಸಿದ್ದಾರೆ. ಉಳಿದ ಮೂವರು ವಿವಾಹಿತರು. “೧೯ ವರ್ಷದ ಈಕೆ, ಬಿ.ಕಾಂ ಪದವಿಯ ವ್ಯಾಸಂಗದಲ್ಲಿ ತೊಡಗಿದ್ದು ಈ ಕೆಲಸವನ್ನು ಇಷ್ಟಪಡುತ್ತಾಳೆ. ಈಕೆಯು ಎಲ್ಲರಿಗಿಂತ ಅತ್ಯುತ್ತಮ ಗಡಿಯಾರ ತಯಾರಕಳಾಗುತ್ತಾಳೆಂಬ ಭರವಸೆಯಿದೆ” ಎಂದು ಅವರು ತಿಳಿಸಿದರು.

ಹಬೀಬುರ್‌ಗೆ ತಮ್ಮದೇ ಸ್ವಂತ ಗಡಿಯಾರದ ಬ್ರ್ಯಾಂಡ್‌ ಅನ್ನು ಪ್ರಾರಂಭಿಸುವ ಕನಸಿದೆ. “ಗಡಿಯಾರದ ರಿಪೇರಿಯೆಂದರೆ ಸಮಯವನ್ನೇ ತಿದ್ದಿ ಸರಿಪಡಿಸಿದಂತೆ. ನನಗೆ ನನ್ನ ವಯಸ್ಸಿನ ಪರಿವೆಯಿಲ್ಲ. ಗಡಿಯಾರದೊಂದಿಗೆ ಕೆಲಸಕ್ಕೆ ತೊಡಗಿದೆನೆಂದರೆ, ಅದಕ್ಕೆ ಎಷ್ಟು ಸಮಯ ಹಿಡಿಯುತ್ತದೆಂಬ ಲೆಕ್ಕವೇ ಇರುವುದಿಲ್ಲ. ಅದನ್ನು ಸರಿಪಡಿಸುವವರೆಗೂ ಕೆಲಸವನ್ನು ನಿಲ್ಲಿಸುವುದಿಲ್ಲ. ೨೦ರ ವಯಸ್ಸಿನ ಹುಮ್ಮಸ್ಸಿನಲ್ಲಿರುತ್ತೇನೆ” ಎನ್ನುತ್ತಾರೆ ಹಬೀಬ್.

ಅನುವಾದ: ಶೈಲಜ ಜಿ. ಪಿ.

Amrutha Kosuru

ವಿಶಾಖಪಟ್ನಂನಲ್ಲಿ ಸ್ವತಂತ್ರ ಪತ್ರಕೋದ್ಯಮದಲ್ಲಿ ತೊಡಗಿರುವ ಅಮೃತ ಕೊಸುರು, ಚೆನ್ನೈನ ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂನ ಪದವೀಧರೆ.

Other stories by Amrutha Kosuru
Translator : Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Shailaja G. P.