ಅವನನ್ನು ಬಾಗಿಲ ಬಳಿ ಹಿಡಿಯಲಾಯಿತು
ಬೀದಿಯಲ್ಲಿ ಕೊಲ್ಲಲಾಯಿತು
ಓಹ್‌, ಹಮಿರಿಯೋ ಇನ್ನೂ ಬಂದಿಲ್ಲ

ಈ ಹಾಡು 200 ವರ್ಷಗಳಷ್ಟು ಹಳೆಯದು. ಜನಪ್ರಿಯ ಕಚ್ಛಿ ಜಾನಪದ ಕಥೆಯನ್ನು ಆಧರಿಸಿದ ಇದು ಹಮೀರ್ ಮತ್ತು ಹಮ್ಲಿ ಎಂಬ ಇಬ್ಬರು ಯುವ ಪ್ರೇಮಿಗಳ ಕಥೆಯನ್ನು ಹೇಳುತ್ತದೆ. ಅವರ ಕುಟುಂಬಗಳು ಅವರ ಪ್ರೀತಿಯನ್ನು ಒಪ್ಪುವುದಿಲ್ಲ, ಹೀಗಾಗಿ ಇಬ್ಬರೂ ಭುಜ್ ಬಳಿಯ ಹಮಿಸರ್ ಸರೋವರದ ದಡದಲ್ಲಿ ರಹಸ್ಯವಾಗಿ ಭೇಟಿಯಾಗುತ್ತಾರೆ. ಆದರೆ ಒಂದು ದಿನ, ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಹೋಗುವಾಗ, ಹಮೀರನನ್ನು ಕುಟುಂಬದ ಸದಸ್ಯರೊಬ್ಬರು ಗುರುತಿಸುತ್ತಾರೆ. ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ, ಆದರೆ ಹೊಡೆದಾಟದಲ್ಲಿ ಅವನನ್ನು ಬೆನ್ನಟ್ಟಿ ಕೊಲ್ಲಲಾಗುತ್ತದೆ. ಹಮ್ಲಿ ಎಂದಿಗೂ ಹಿಂತಿರುಗದ ತನ್ನ ಪ್ರೇಮಿಗಾಗಿ ಸರೋವರದ ಬಳಿ ಕಾಯುವುದನ್ನು ತಿಳಿಸುವ ಈ ಹಾಡು ಶೋಕಮಯವಾಗಿದೆ.

ಕುಟುಂಬಗಳು ಏಕೆ ಒಪ್ಪಲಿಲ್ಲ?

ರಸೂದಾ ಎಂದು ವ್ಯಾಪಕವಾಗಿ ಕರೆಯಲ್ಪಡುವ ಶೈಲಿಯ ರೂಪದಲ್ಲಿರುವ ಹಾಡಿನ ಪೂರ್ಣ ಸಾಹಿತ್ಯ ಹುಡುಗನ ಕೊಲೆಯಲ್ಲಿ ಜಾತಿಯು ನಿರ್ಣಾಯಕ ಅಂಶವಾಗಿರಬಹುದು ಎನ್ನುವುದನ್ನು ಸೂಚಿಸುತ್ತದೆ. ಆದಾಗ್ಯೂ, ಹೆಚ್ಚಿನ ಕಚ್ಛೀ ವಿದ್ವಾಂಸರು ಇದು ತನ್ನ ಪ್ರೇಮಿಯನ್ನು ಕಳೆದುಕೊಂಡ ಯಾವುದೇ ಹೆಣ್ಣು ಹಾಡಬಹುದಾದ ಹಾಡು ಎನ್ನುತ್ತಾರೆ. ಆದರೆ ಈ ವ್ಯಾಖ್ಯಾನವು ಹಾಡಿನಲ್ಲಿ ಬರು ದಾರಿ, ಬಾಗಿಲು ಇತ್ಯಾದಿ ವಿವರಗಳನ್ನು ಕಡೆಗಣಿಸುತ್ತದೆ.

2008ರಲ್ಲಿ ಕಚ್ಛ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಪ್ರಾರಂಭಿಸಿದ‌ ಕಮ್ಯುನಿಟಿ ರೇಡಿಯೋ ಸೂರ್ವಾನಿ ರೆಕಾರ್ಡ್ ಮಾಡಿದ 341 ಹಾಡುಗಳಲ್ಲಿ ಇದು ಒಂದಾಗಿದೆ. ಕೆಎಂವಿಎಸ್ ಮೂಲಕ ಪರಿಗೆ ಬಂದಿರುವ ಈ ಹಾಡುಗಳಲ್ಲಿ ಈ ಪ್ರದೇಶದ ಅಪಾರ ಸಾಂಸ್ಕೃತಿಕ, ಭಾಷಾ ಮತ್ತು ಸಂಗೀತ ವೈವಿಧ್ಯತೆಯನ್ನು ಸೆರೆಯಾಗಿವೆ. ಈ ಸಂಗ್ರಹವು ಕಚ್ಛ್‌ನ ಸಂಗೀತ ಸಂಪ್ರದಾಯವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ, ಪ್ರಸ್ತುತ ಈ ಸಂಗೀತ ಪ್ರಕಾರವು ಅವನತಿಯ ಹಾದಿಯಲ್ಲಿದ್ದು. ಮರುಭೂಮಿ ಪ್ರದೇಶದಿಂದ ಈ ಹಾಡುಗಳ ಸದ್ದು ಕಣ್ಮರೆಯಾಗತೊಡಗಿದೆ.

ಇಲ್ಲಿ ಪ್ರಸ್ತುತಪಡಿಸಲಾಗಿರುವ ಹಾಡನ್ನು ಕಚ್ಛ್‌ನ ಭಚೌ ತಾಲ್ಲೂಕಿನವರಾದ ಭಾವನಾ ಭಿಲ್ ಹಾಡಿದ್ದಾರೆ. ಈ ಪ್ರದೇಶದ ಮದುವೆಗಳಲ್ಲಿ ಹೆಚ್ಚಾಗಿ ರಸೂದಾವನ್ನು ಪ್ರದರ್ಶಿಸಲಾಗುತ್ತದೆ. ರಸೂದಾ ಕೂಡ ಕಚ್ಛೀ ಜಾನಪದ ನೃತ್ಯವಾಗಿದ್ದು, ಇದರಲ್ಲಿ ಮಹಿಳೆಯರು ಧೋಲ್ ನುಡಿಸುವವರ ಸುತ್ತಲೂ ಹಾಡುತ್ತಾ ಕುಣಿಯುತ್ತಾರೆ. ಓರ್ವ ಯುವತಿಗೆ ಮದುವೆ ಮಾಡಿಸುವಾಗ ಅವಳಿಗೆ ಬೇಕಾದ ಆಭರಣಗಳನ್ನು ಖರೀದಿಸಲು ಕುಟುಂಬ ದೊಡ್ಡ ಸಾಲ ಮಾಡುತ್ತದೆ. ಹಮಿರಿಯೋ ಸಾವಿನಿಂದಾಗಿ ಹಮ್ಲಿ ತನ್ನ ಆಭರಣ ಧರಿಸುವ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಈ ಹಾಡಿನ ಸಾಹಿತ್ಯ ಅವಳಿಗಾದ ನಷ್ಟ ಮತ್ತು ಸಾಲದ ಕುರಿತು ಮಾತನಾಡುತ್ತದೆ.

ಚಂಪಾರ್‌ನ ಭಾವನಾ ಭಿಲ್ ಹಾಡಿರುವ ಜಾನಪದ ಗೀತೆಯನ್ನು ಕೇಳಿ

કરછી

હમીરસર તળાવે પાણી હાલી છોરી હામલી
પાળે ચડીને વાટ જોતી હમીરિયો છોરો હજી રે ન આયો
ઝાંપલે જલાણો છોરો શેરીએ મારાણો
આંગણામાં હેલી હેલી થાય રે હમીરિયો છોરો હજી રે ન આયો
પગ કેડા કડલા લઇ ગયો છોરો હમિરીયો
કાભીયો (પગના ઝાંઝર) મારી વ્યાજડામાં ડોલે હમીરિયો છોરો હજી રે ન આયો
ડોક કેડો હારલો (ગળા પહેરવાનો હાર) મારો લઇ ગયો છોરો હમિરીયો
હાંસડી (ગળા પહેરવાનો હારલો) મારી વ્યાજડામાં ડોલે હમીરિયો છોરો હજી રે ન આયો
નાક કેડી નથડી (નાકનો હીરો) મારી લઇ ગયો છોરો હમિરીયો
ટીલડી મારી વ્યાજડામાં ડોલે હમીરિયો છોરો હજી રે ન આયો
હમીરસર તળાવે પાણી હાલી છોરી હામલી
પાળે ચડીને વાટ જોતી હમીરિયો છોરો હજી રે ન આયો

ಕನ್ನಡ

ಅವಳು ಕಾಯುತ್ತಾಳೆ ಕೆರೆ ನೀರಿಗಿಳಿದು; ಹಮಿಲಿ ಕಾಯುತ್ತಾಳೆ
ಅವಳು ಕಾಯುತ್ತಾಳೆ ಏರಿಯ ಮೇಲೆ, ತನ್ನ ಪ್ರೀತಿಯ ಹಮಿರಿಯೋಗಾಗಿ ಕಾಯುತ್ತಾಳೆ
ಅಯ್ಯೋ! ಹುಡುಗನಿನ್ನೂ ಬಂದಿಲ್ಲ.
ಅವನನ್ನು ಊರ ಬಾಗಿಲಿನಲ್ಲೇ ಹಿಡಿಯಲಾಗಿದೆ.
ಓಣಿಯಲ್ಲಿ ಕೊಲ್ಲಲಾಗಿದೆ.
ಬೀದಿಗಳ ತುಂಬಾ ಗದ್ದಲ
ಅಯ್ಯೋ! ಅಮಿರಿಯೋ ಇನ್ನೂ ಬಂದಿಲ್ಲ.
ಅವನು ನನ್ನ ಕಡಾಲ ಕೊಂಡು ಹೋದ.
ನನ್ನ ಕಾಲುಗಳ ಸಿಂಗಾರವಾಗಿದ್ದ ಆ ನನ್ನ ಹಮಿರಿಯೋ.
ನನ್ನ ಪಾದಗಳು ಕುಣಿಯುತ್ತಿವೆ, ನಾನು ಸಾಲದಲ್ಲಿರುವೆ.
ಅಯ್ಯೋ! ನನ್ನ ಹಮಿರಿಯೋ ಇನ್ನೂ ಬಂದಿಲ್ಲ.
ಕಂಠ ಹಾರ ಹಾಕಿಕೊಳ್ಳದಂತೆ ಮಾಡಿದೆ
ಅಯ್ಯೋ! ನನ್ನ ಹಮಿರಿಯೋ ಇನ್ನೂ ಬಂದಿಲ್ಲ.
ನನ್ನ ಕತ್ತಿನ ಹಾರ ಕುಣಿಯುತ್ತಿದೆ, ನಾನು ಸಾಲದಲ್ಲಿದ್ದೇನೆ
ಅಯ್ಯೋ! ಇನ್ನೂ ಬಂದಿಲ್ಲ ನನ್ನ ಹಮಿರಿಯೋ, ಇನ್ನೂ ಬಂದಿಲ್ಲ.
ನನ್ನ ಮೂಗಿನ ನತ್ತಿನ ಭಾಗ್ಯ ಕೊಂಡು ಹೋದ ಆ ಹುಡುಗ ಹಮಿರಿಯೋ.
ನನ್ನ ತಿಲಾಡಿ, ಬಿಂದಿ ಕುಣಿಯುತ್ತಿವೆ, ನಾನು ಸಾಲದಲ್ಲಿರುವೆ.
ಅಯ್ಯೋ! ಹಮಿರಿಯೋ ಇನ್ನೂ ಬಂದಿಲ್ಲ, ಇನ್ನೂ ಬಂದಿಲ್ಲ.
ಅವಳು ಕಾಯುತ್ತಾಳೆ ಕೆರೆ ನೀರಿಗಿಳಿದು; ಹಮಿಲಿ ಕಾಯುತ್ತಾಳೆ
ಅವಳು ಕಾಯುತ್ತಾಳೆ ಏರಿಯ ಮೇಲೆ, ತನ್ನ ಪ್ರೀತಿಯ ಹಮಿರಿಯೋಗಾಗಿ ಕಾಯುತ್ತಾಳೆ


PHOTO • Rahul Ramanathan

ಹಾಡಿನ ಪ್ರಕಾರ: ಸಾಂಪ್ರದಾಯಿಕ ಜಾನಪದ ಗೀತೆ

ವಿಭಾಗ : ಪ್ರೀತಿ, ಕಳೆದುಕೊಳ್ಳುವಿಕೆ ಮತ್ತು ಹಂಬಲದ ಹಾಡುಗಳು

ಹಾಡು: 2

ಹಾಡಿನ ಶೀರ್ಷಿಕೆ: ಹಮಿಸರ್ ತಲಾವೆ ಪಾನಿ ಹಾಲಿ ಚೋರಿ ಹಮಾಲಿ

ಸಂಗೀತ: ದೇವಲ್ ಮೆಹ್ತಾ

ಗಾಯಕಿ: ಭಚೌ ತಾಲ್ಲೂಕಿನ ಚಂಪಾರ್ ಗ್ರಾಮದ ಭಾವನಾ ಭಿಲ್

ಬಳಸಿದ ವಾದ್ಯಗಳು: ಹಾರ್ಮೋನಿಯಂ, ಡೋಲು

ರೆಕಾರ್ಡಿಂಗ್ ಮಾಡಲಾದ ವರ್ಷ: 2005, ಕೆಎಂವಿಎಸ್ ಸ್ಟುಡಿಯೋ

ಗುಜರಾತಿ ಅನುವಾದ: ಅಮದ್ ಸಮೇಜಾ, ಭಾರತಿ ಗೋರ್

ಪ್ರೀತಿ ಸೋನಿ, ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ, ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಗುಜರಾತಿ ಅನುವಾದದ ಅಮೂಲ್ಯ ಸಹಾಯಕ್ಕಾಗಿ ಭಾರತಿಬೆನ್ ಗೋರ್ ಅವರಿಗೆ ವಿಶೇಷ ಧನ್ಯವಾದಗಳು.

ಅನುವಾದ: ಶಂಕರ. ಎನ್. ಕೆಂಚನೂರು

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Other stories by Pratishtha Pandya
Illustration : Rahul Ramanathan

ರಾಹುಲ್ ರಾಮನಾಥನ್ ಕರ್ನಾಟಕದ ಬೆಂಗಳೂರಿನ 17 ವರ್ಷದ ವಿದ್ಯಾರ್ಥಿ. ಅವರು ಚಿತ್ರಕಲೆ, ಚಿತ್ರಕಲೆ ಮತ್ತು ಚೆಸ್ ಆಡುವುದನ್ನು ಆನಂದಿಸುತ್ತಾರೆ.

Other stories by Rahul Ramanathan
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru