ಫೂಲ್‌ವತಿಯಾಳ 12 ವರ್ಷದ ತಮ್ಮ ಆ ದಿನದ ಕೊನೆಯ ಸೈಕಲ್‌ ಸವಾರಿಯಾಗಿ ಹತ್ತಿರದ ಬೇವಿನ ಮರದ ಬಳಿಗೆ ಹೋಗುತ್ತಿದ್ದಾನೆ. "ನಾನೂ ಒಂದು ಸಣ್ಣ ರೌಂಡ್‌ ಹೋಗಿ ಬೇಗ ಬರುತ್ತೇನೆ" ಎಂದು 16 ವರ್ಷದ ಫೂಲ್‌ವತಿಯಾ ಹೇಳುತ್ತಾಳೆ. "ಇನ್ನು ನಾಳೆಯಿಂದ ಐದು ದಿನಗಳವರೆಗೆ ನನಗೆ ಸೈಕಲ್‌ ಓಡಿಸಲು ಸಾಧ್ಯವಿಲ್ಲ. ಬಟ್ಟೆ ಬಳಸುವಾಗ ಸೈಕಲ್‌ ಬಳಸುವುದು ಬಹಳ ಕಷ್ಟ" ಎಂದು ರಸ್ತೆಬದಿಯ ನಾಯಿ ಮರಿಯನ್ನು ಮುದ್ದು ಮಾಡುತ್ತಾ ಹೇಳುತ್ತಾಳೆ.

ಫೂಲ್ವಾತಿಯಾ ನಾಳಿನ ತನ್ನ ಮುಟ್ಟಿನ ದಿನದ ನಿರೀಕ್ಷೆಯಲ್ಲಿದ್ದಾಳೆ. (ಹೆಸರು ಬದಲಾಯಿಸಲಾಗಿದೆ) ಆದರೆ ಅವಳು ಈ ತಿಂಗಳು ಹಿಂದಿನ ತಿಂಗಳಿನಂತೆ ತನ್ನ ಶಾಲೆಯಲ್ಲಿ ನೀಡಲಾಗುವ ಸ್ಯಾನಿಟರಿ ನ್ಯಾಪಿಕಿನ್‌ ಪಡೆಯಲು ಸಾಧ್ಯವಿಲ್ಲ. "ಸಾಮಾನ್ಯವಾಗಿ ನಮ್ಮ ಮುಟ್ಟಿನ ದಿನಗಳಲ್ಲಿ ಶಾಲೆಯಲ್ಲಿ ಸ್ಯಾನಿಟರಿ ನ್ಯಾಪ್‌‌ಕಿನ್ ಪಡೆಯುತ್ತಿದ್ದೆವು. ಆದರೆ ಈ ತಿಂಗಳು ಬಟ್ಟೆಯನ್ನೇ ಬಳಸಬೇಕು."‌

ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ಇತರೆಲ್ಲೆಡೆಯಂತೆ ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿರುವ ಅವಳ ಶಾಲೆಯನ್ನೂ ಮುಚ್ಚಲಾಗಿದೆ.

ಫೂಲ್ವಾತಿಯಾ ಕಾರ್ವಿ ತಹಸಿಲ್‌ನ ತಾರೌಹಾ ಗ್ರಾಮದಲ್ಲಿರುವ ಸೋನೆಪುರ ಎಂಬ ಕುಗ್ರಾಮದಲ್ಲಿ ತನ್ನ ಹೆತ್ತವರು ಮತ್ತು ಇಬ್ಬರು ಸಹೋದರರೊಂದಿಗೆ ವಾಸಿಸುತ್ತಿದ್ದಾಳೆ. ಆಕೆಗೆ ಇಬ್ಬರು ಸಹೋದರಿಯರಿದ್ದು ಮದುವೆಯಾಗಿ ಬೇರಡೆ ವಾಸಿಸುತ್ತಿದ್ದಾರೆ. ಮಾರ್ಚ್ 24 ರಂದು ಲಾಕ್ ಡೌನ್ ಘೋಷಿಸಿದಾಗ ಅವರು 10 ನೇ ತರಗತಿ ಪರೀಕ್ಷೆಗಳನ್ನು ಮುಗಿಸಿದ್ದಳು. ಹತ್ತು ದಿನಗಳ ವಿರಾಮದ ನಂತರ ಮತ್ತೆ ಶಾಲೆಗೆ ಹೊರಟಿದ್ದಳು. ಅವಳು ಕಾರ್ವಿ ಬ್ಲಾಕ್‌ನ ರಾಜ್ಕಿಯಾ ಬಾಲಿಕಾ ಇಂಟರ್ ಕಾಲೇಜಿನ ವಿದ್ಯಾರ್ಥಿನಿ.

"ಈ ದಿನಗಳಲ್ಲಿ ನಾನು ಬೇರೆ ಯಾವುದಕ್ಕೂ ಬಳಸದ ಬಟ್ಟೆಯ ತುಂಡನ್ನು ಹುಡುಕಿ ಅದನ್ನು ಬಳಸಿ ನಂತರ ಎರಡನೇ ಬಾರಿಗೆ ಅದನ್ನು ಬಳಸುವ ಮೊದಲು ಅದನ್ನು ತೊಳೆದುಕೊಳ್ಳುತ್ತೇನೆ" ಎಂದು ಫೂಲ್ವಾತಿಯಾ ಹೇಳುತ್ತಾಳೆ. ಬಹುಶಃ ಬರಿಗಾಲಿನಲ್ಲಿ ನಡೆದಿದ್ದರಿಂದ ಇರಬೇಕು, ಅವಳ ಗುಲಾಬಿ ಉಗುರು ಬಣ್ಣ ಹಚ್ಚಿದ ಕಪ್ಪು ಕಾಲುಗಳು ಧೂಳಿನಿಂದ ಕೂಡಿತ್ತು.
Phoolwatiya, 16, says, 'We normally get pads there [at school] when our periods begin. But now I will use any piece of cloth I can'
PHOTO • Jigyasa Mishra

ʼಸಾಮಾನ್ಯವಾಗಿ ನಮಗೆ ಮುಟ್ಟಾದಾಗ ಅಲ್ಲಿ (ಶಾಲೆಯಲ್ಲಿ) ಪ್ಯಾಡ್‌ಗಳನ್ನು ಪಡೆಯುತ್ತೇವೆ. ಈಗ ಶಾಲೆಯಿಲ್ಲದ ಕಾರಣ ನಾನು ಯಾವುದಾದರೂ ಬಟ್ಟೆಯನ್ನೇ ಬಳಸುತ್ತೇನೆʼ ಎಂದು 16 ವರ್ಷದ ಫೂಲ್ವಾತಿಯಾ ಹೇಳುತ್ತಾಳೆ

ಇದು ಫೂಲ್ವಾತಿಯಾ ಒಬ್ಬಳ ಕತೆಯಲ್ಲ. ಉತ್ತರಪ್ರದೇಶದಲ್ಲಿ ಅವಳಂತಹ ಕೋಟಿಗಿಂತಲೂ ಹೆಚ್ಚು ಹುಡುಗಿಯರು ಉಚಿತ ಸ್ಯಾನಿಟರಿ ಪ್ಯಾಡ್‌ ಪಡೆಯಲು ಅರ್ಹರಾಗಿದ್ದಾರೆ.ಫೂಲ್ವಾತಿಯಾ ಹಾಗೆ ಎಷ್ಟು ಜನ ಹುಡುಗಿಯರು ನಿಜವಾಗಿಯೂ ಈ ಸೌಲಭ್ಯ ಪಡೆಯುತ್ತಿದ್ದಾರೆನ್ನುವ ಮಾಹಿತಿಯನ್ನು ಪಡೆಯುವ ನಮ್ಮ ಯತ್ನ ಫಲಿಸಲಿಲ್ಲ. ಆದರೆ ಈಗ ಉಚಿತ ನ್ಯಾಪ್ಕಿನ್‌ ಸೌಲಭ್ಯ ಪಡೆಯಲಾಗದ ಬಡ ಕುಟುಂಬದ ಹುಡುಗಿಯರ ಸಂಖ್ಯೆ ಹತ್ತು ಲಕ್ಷಕ್ಕೂ ಮೀರಿ ಇರಬಹುದು.

ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಆಡಳಿತ ಸಂಸ್ಥೆಯ ವರದಿಯ ಪ್ರಕಾರ ಯುಪಿ ಯಲ್ಲಿ 6 ರಿಂದ 12 ನೇ ತರಗತಿಯ ಬಾಲಕಿಯರ ಸಂಖ್ಯೆ 10.86 ಮಿಲಿಯನ್. ಇದು ನೋದಾಯಿತ ಶಾಲೆಗಳಿಲ್ಲಿನ ಸಂಖ್ಯೆ. ಈ ಸಂಖ್ಯೆಗಳು 2016-17ರ ಮಾಹಿತಿಯಾಗಿದ್ದು. ಇಲ್ಲಿಂದ ಮುಂದಿನ ವರ್ಷಗಳ ಮಾಹಿತಿ ಅಲ್ಲಿ ಲಭ್ಯವಿಲ್ಲ.

ಕಿಶೋರಿ ಸುರಕ್ಷ ಯೋಜನೆ (ದೇಶದ ಪ್ರತಿಯೊಂದು ಬ್ಲಾಕ್ ಅನ್ನು ಒಳಗೊಂಡ ಭಾರತ ಸರ್ಕಾರದ ಕಾರ್ಯಕ್ರಮ)ಯಡಿಯಲ್ಲಿ 6 ನೇ ತರಗತಿಯಿಂದ 12 ನೇ ತರಗತಿಯ ಬಾಲಕಿಯರು ಉಚಿತ ನ್ಯಾಪ್ಕಿನ್‌ ಪಡೆಯಲು ಅರ್ಹರಾಗಿದ್ದಾರೆ. ಉತ್ತರಪ್ರದೇಶದಲ್ಲಿ ಈ ಕಾರ್ಯಕ್ರಮವನ್ನು ಅಂದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು 2015ರಲ್ಲಿ ಉದ್ಘಾಟಿಸಿದ್ದರು.

*****

ಅವಳು ಆ ಬಟ್ಟೆಯನ್ನು ತೊಳೆದ ನಂತರ ಎಲ್ಲಿ ಒಣಗಿಸುತ್ತಾಳೆ? “ನಾನು ಅದನ್ನು ಮನೆಯೊಳಗೆ ಎಲ್ಲೋ ಒಣಗಿಸುತ್ತೇನೆ ಅಲ್ಲಿ ಯಾರೂ ಅದನ್ನು ಗುರುತಿಸುವುದಿಲ್ಲ. ನನ್ನ ತಂದೆ ಅಥವಾ ಸಹೋದರರಿಗೆ ಅದನ್ನು ನೋಡಲು ನಾನು ಬಿಡಲಾಗದು” ಎಂದು ಫೂಲ್ವಾತಿಯಾ ಹೇಳುತ್ತಾಳೆ. ಬೇರೆಡೆ ಇರುವಂತೆಯೇ ಬಳಸಿದ ಮತ್ತು ತೊಳೆದ ಮುಟ್ಟಿನ ಬಟ್ಟೆಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸದಿರುವುದು, ಅದನ್ನು ಮನೆಯ ಪುರುಷರಿಂದ ಮರೆಮಾಡುವುದು ಇಲ್ಲಿನ ಅನೇಕ ಹುಡುಗಿಯರು ಮತ್ತು ಮಹಿಳೆಯರಲ್ಲಿ ಸಾಮಾನ್ಯ ಅಭ್ಯಾಸವಾಗಿದೆ.

Before the lockdown: Nirasha Singh, principal of the Upper Primary School in Mawaiya village, Mirzapur district, distributing sanitary napkins to students
PHOTO • Jigyasa Mishra

ಲಾಕ್‌ಡೌನ್‌ಗೂ ಮೊದಲು: ಮಿರ್ಜಾಪುರ ಜಿಲ್ಲೆಯ ಮಾವಾಯಾ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾದ ನಿರಶಾ ಸಿಂಗ್, ವಿದ್ಯಾರ್ಥಿಗಳಿಗೆ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುತ್ತಿರುವುದು

ಫೂಲ್ವಾತಿಯಾ ಆ ಬಟ್ಟೆ ಒಗೆದು ಒಣಣಗಿಸುವುದೆಲ್ಲಿ? “ಮನೆಯಲ್ಲೇ ತಂದೆ ಅಥವಾ ಸಹೋದ ಯಾರಿಗೂ ಕಾಣದ ಸ್ಥಳದಲ್ಲಿ ಒಣಹಾಕುತ್ತೇನೆ” ಬಳಸಿದ ಮತ್ತು ತೊಳೆದ ಮುಟ್ಟಿನ ಬಟ್ಟೆಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸದಿರುವುದು ಇಲ್ಲಿ ತೀರಾ ಸಾಮಾನ್ಯ

ಯುನಿಸೆಫ್ ಹೇಳುವಂತೆ , "ಮುಟ್ಟಿನ ಕುರಿತಾದ ಮಾಹಿತಿಯ ಕೊರತೆಯು ತಪ್ಪು ಕಲ್ಪನೆ ಮತ್ತು ತಾರತಮ್ಯವನ್ನು ಉಂಟುಮಾಡುತ್ತದೆ, ಮತ್ತು ಇದು ಹುಡುಗಿಯರು ತಮ್ಮ ಸಾಮಾನ್ಯ ಬಾಲ್ಯದ ಅನುಭವಗಳು ಮತ್ತು ಚಟುವಟಿಕೆಗಳನ್ನು ಕಳೆದುಕೊಳ್ಳಲು ಕಾರಣವಾಗಬಹುದು."

ಮೃದುವಾದ ಹತ್ತಿ ಬಟ್ಟೆಯನ್ನು ಮುಟ್ಟಿನ ರಕ್ತದ ಹೀರಿಕೊಳ್ಳಲು ಬಳಸುವುದು ಆ ಬಟ್ಟೆ ಸ್ವಚ್ಛವಾಗಿದ್ದು ತೊಳೆದ ನಂತರ ಸೂರ್ಯನ ಬಿಸಿಲಿನಲ್ಲಿ ಒಣಗಿಸಿದರೆ ಮಾತ್ರ ಅದು ಸುರಕ್ಷಿತ. ಆಗ ಮಾತ್ರ ಬ್ಯಾಕ್ಟೀರಿಯಾ ಸೋಂಕನ್ನು ದೂರವಿರಿಸಬಹುದು. ಇದೆಲ್ಲವನ್ನೂ ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ಪಾಲಿಸುವುದು ಸಾಧ್ಯವಿಲ್ಲ. ಇದರಿಂದಾಗಿ ಯೋನಿ ಸೋಂಕುಗಳು (ಹುಡುಗಿಯರು ಮತ್ತು ಯುವತಿಯರಲ್ಲಿ) ಸಾಮಾನ್ಯ ಸಮಸ್ಯೆಯಾಗಿದೆ "ಎಂದು ಲಕ್ನೋದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಹಿರಿಯ ಸ್ತ್ರೀರೋಗತಜ್ಞರಾದ ಡಾ. ನೀತು ಸಿಂಗ್ ಹೇಳುತ್ತಾರೆ. ಫೂಲ್ವಾತಿಯಾರಂತಹ ಹುಡುಗಿಯರು ಈಗ ಪ್ಯಾಡ್‌ಗಳಿಗೆ ಬದಲಾಗಿ ಆರೋಗ್ಯಕರವಲ್ಲದ ವಸ್ತುಗಳನ್ನು ಪುನಃ ಬಳಸಲಾರಂಭಿಸಿದ್ದಾರೆ. ಇದು ಅವರನ್ನು ಅಲರ್ಜಿ ಮತ್ತು ಇತರ ಕಾಯಿಗೆಳಿಗೆ ಈಡು ಮಾಡಬಹುದು.

"ನಮ್ಮ ಶಾಲೆಯಲ್ಲಿ ಜನವರಿಯಲ್ಲಿ ನಮಗೆ 3-4 ಪ್ಯಾಕೆಟ್ ಪ್ಯಾಡ್‌ಗಳನ್ನು ನೀಡಲಾಯಿತು" ಎಂದು ಫೂಲ್ವಾತಿಯಾ ಹೇಳುತ್ತಾಳೆ. "ಆದರೆ ಅದು ಈಗ ಮುಗಿದಿದೆ." ಮತ್ತು ಅವಳು ಮಾರುಕಟ್ಟೆಯಲ್ಲಿ ಅವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಅವಳು ತಿಂಗಳಿಗೆ ಕನಿಷ್ಠ ರೂ. 60 ರೂಗಳನ್ನು ನ್ಯಾಪ್‌ಕಿನ್‌ಗಳಿಗಾಗಿ ಖರ್ಚು ಮಾಡಬೇಕು. ಅವಳು ಖರೀದಿಸಬಹುದಾದ ಅಗ್ಗದ ಬೆಲೆಯ ಆರು ನ್ಯಾಪ್‌ಕಿನ್‌ಗಳ ಪ್ಯಾಕ್‌ನ ಬೆಲೆ ರೂ. 30. ಆಕೆಗೆ ಪ್ರತಿ ತಿಂಗಳು ಎರಡು ಪ್ಯಾಕ್‌ಗಳು ಬೇಕಾಗುತ್ತವೆ.

ಆಕೆಯ ತಂದೆ, ತಾಯಿ ಮತ್ತು ಅಣ್ಣ ಎಲ್ಲರೂ ದಿನಗೂಲಿ ಕೃಷಿ ಕಾರ್ಮಿಕರಾಗಿದ್ದು, ಎಲ್ಲರೂ ಸೇರಿ ಒಟ್ಟಿಗೆ ಸಾಮಾನ್ಯ ಸಮಯದಲ್ಲಿ ದಿನಕ್ಕೆ 400 ರೂ ದುಡಿಯುತ್ತಾರೆ. “ಈಗ 100 ರೂಪಾಯಿ ಸಿಕ್ಕರೆ ಅದೇ ಹೆಚ್ಚು. ಅಲ್ಲದೆ ಈಗ ಯಾರೂ ನಮಗೆ ಹೊಲಗಳಲ್ಲಿ ಕೆಲಸ ನೀಡಲು ಬಯಸುವುದಿಲ್ಲ" ಎಂದು ಮೊಮ್ಮಗನಿಗೆ ಖಿಚ್ಡಿ ತಿನ್ನಿಸುತ್ತಾ ಫೂಲ್ವಾತಿಯಾತಾಯಿ ರಾಮ್ ಪಿಯಾರಿ, 52, ಹೇಳಿದರು.

ಇಲ್ಲಿ ಪರ್ಯಾಯ ವಿತರಣಾ ವ್ಯವಸ್ಥೆಗಳು ಅಸ್ತಿತ್ವದಲ್ಲಿಲ್ಲ. "ನಾವು ಇದೀಗ ಮೂಲಭೂತ ಅಗತ್ಯಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ, ಅವುಗಳು ಪಡಿತರ ಮತ್ತು ಆಹಾರ. ಈ ಸ್ಥಿತಿಯಲ್ಲಿ ಜೀವ ಉಳಿಸುವುದು ಮಾತ್ರ ನಮ್ಮ ಆದ್ಯತೆಯಾಗಿದೆ" ಎಂದು ಚಿತ್ರಕೂಟ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಶೇಶ್ ಮಣಿ ಪಾಂಡೆ ನಮಗೆ ತಿಳಿಸಿದರು.
Ankita (left) and her sister Chhoti: '... we have to think twice before buying even a single packet. There are three of us, and that means Rs. 90 a month at the very least'
PHOTO • Jigyasa Mishra
Ankita (left) and her sister Chhoti: '... we have to think twice before buying even a single packet. There are three of us, and that means Rs. 90 a month at the very least'
PHOTO • Jigyasa Mishra

ಅಂಕಿತಾ (ಎಡ) ಮತ್ತು ಅವಳ ಸಹೋದರಿ ಛೋಟಿ: '... ಒಂದೊಂದೇ ಪ್ಯಾಕೆಟ್ ಖರೀದಿಸುವುದಾದರೂ ಮೊದಲು ನಾವು ಎರಡು ಬಾರಿ ಯೋಚಿಸಬೇಕು. ನಮ್ಮಲ್ಲಿ ಮೂವರು ಇದ್ದಾರೆ ಮತ್ತು ಇದರರ್ಥ ಕನಿಷ್ಠ ತಿಂಗಳಿಗೆ 90 ರೂಪಾಯಿಗಳು ಬೇಕು'

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( ಎನ್‌ಎಫ್‌ಎಚ್‌ಎಸ್ -4 ) ಹೇಳುವಂತೆ, ದೇಶದಲ್ಲಿ 15-24 ವಯೋಮಾನದ ಶೇಕಡಾ 62 ರಷ್ಟು ಯುವತಿಯರು 2015-16ರಲ್ಲಿ ಮುಟ್ಟಿನ ಸಮಯದಲ್ಲಿ ರಕ್ಷಣೆಗಾಗಿ ಬಟ್ಟೆಯನ್ನು ಬಳಸುತ್ತಿದ್ದರು. ಉತ್ತರ ಪ್ರದೇಶದಲ್ಲಿ ಆ ಸಂಖ್ಯೆ ಶೇಕಡಾ 81ರಷ್ಟಿತ್ತು.

ಈ ಮೇ 28ರಂದು ಮೆನ್ಸ್ಟ್ರುವಲ್‌ ಹೈಜಿನ್ ದಿನ ಬಂದಾಗ ಈ ವಿಷಯದಲ್ಲಿ ಹೆಮ್ಮೆಪಡುವಂತಹದ್ದು ಈ ವರ್ಷ ಏನೂ ಇಲ್ಲ.

*****

ಎಲ್ಲ ಜಿಲ್ಲೆಗಳಲ್ಲೂ ಈ ಸಮಸ್ಯೆ ಸಾಮಾನ್ಯವಾಗಿರುವಂತಿದೆ. "ಲಾಕ್‌ಡೌನ್‌ಗೆ ಒಂದು ದಿನ ಮೊದಲು ನಾವು ಹೊಸ ಸ್ಯಾನಿಟರಿ ಪ್ಯಾಡ್‌ಗಳನ್ನು ಸ್ವೀಕರಿಸಿದ್ದೇವೆ ಮತ್ತು ನಾವು ಅವುಗಳನ್ನು ಹುಡುಗಿಯರಿಗೆ ವಿತರಿಸುವ ಮೊದಲೇ ಶಾಲೆಯನ್ನು ಮುಚ್ಚಬೇಕಾಯಿತು" ಎಂದು ಲಕ್ನೋ ಜಿಲ್ಲೆಯ ಗೋಸಾಯ್‌ಗಂಜ್ ಬ್ಲಾಕ್‌ನ ಸಲೌಲಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ  ಪ್ರಾಂಶುಪಾಲರಾದ ಯಶೋದಾನಂದ್ ಕುಮಾರ್ ಹೇಳುತ್ತಾರೆ.

"ನಾನು ಯಾವಾಗಲೂ ಮುಟ್ಟಿನ ದಿನಗಳ ಆರೋಗ್ಯದ ಕುರಿತು ಖಾತರಿಯಾಗಿ ಖಚಿತಪಡಿಸಿಕೊಳ್ಳುತ್ತೇನೆ. ಅವರಿಗೆ ನ್ಯಾಪಕಿನ್‌ ನೀಡುವುದರ ಹೊರತಾಗಿ, ನಾನು ಮುಟ್ಟಿನ ದಿನಗಳ ನೈರ್ಮಲ್ಯದ ಮಹತ್ವದ ಬಗ್ಗೆ ಮಾತನಾಡಲು ಹುಡುಗಿಯರು ಮತ್ತು ಮಹಿಳಾ ಸಿಬ್ಬಂದಿಯೊಂದಿಗೆ ಮಾಸಿಕ ಸಭೆ ನಡೆಸುತ್ತಿದ್ದೆ. ಆದರೆ ಈಗ ಸುಮಾರು ಎರಡು ತಿಂಗಳಿನಿಂದ ಶಾಲೆಯನ್ನು ಮುಚ್ಚಲಾಗಿದೆ” ಎಂದು ನಿರಶಾ ಸಿಂಗ್‌ ಫೋನ್‌ ಮೂಲಕ ತಿಳಿಸಿದರು. ಅವರು ಮಿರ್ಜಾಪುರ ಜಿಲ್ಲೆಯ ಮಾವಾಯಾ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. "ನನ್ನ ಅನೇಕ ವಿದ್ಯಾರ್ಥಿನಿಯರಿಗೆ ಪ್ಯಾಡ್‌ ಪ್ಯಾಕೆಟ್‌ ಸಿಗುವ ಹತ್ತಿರದ ಅಂಗಡಿಗೆ ಹೋಗಲು ಸೌಲಭ್ಯಗಳಿಲ್ಲ. ಅಲ್ಲದೆ ಅನೇಕರು ತಿಂಗಳಿಗೆ 30-60 ರೂಗಳನ್ನು ಖರ್ಚು ಮಾಡುವುದಿಲ್ಲ ಎಂದು ಹೇಳಬೇಕಾಗಿಲ್ಲ.”

ಮರಳಿ ಚಿತ್ರಕೂಟ ಜಿಲ್ಲೆಗೆ ಬಂದರೆ ಅಂಕಿತಾ ದೇವಿ, 17, ಮತ್ತು ಅವಳ ಸಹೋದರಿ ಛೋಟಿ 14 (ಎರಡೂ ಹೆಸರುಗಳನ್ನು ಬದಲಾಯಿಸಲಾಗಿದೆ) ಖಂಡಿತವಾಗಿಯೂ ಅಷ್ಟು ಮೊತ್ತವನ್ನು ಖರ್ಚು ಮಾಡಲು ಸಾಧ್ಯವಿಲ್ಲ. ಫೂಲ್ವಾತಿಯಾ ಮನೆಯಿಂದ 22 ಕಿಲೋಮೀಟರ್ ದೂರದಲ್ಲಿರುವ ಚಿತಾರಾ ಗೋಕುಲಪುರ ಗ್ರಾಮದಲ್ಲಿ ವಾಸಿಸುತ್ತಿರುವ ಈ ಇಬ್ಬರೂ ಹುಡುಗಿಯರು ಸಹ ಬಟ್ಟೆಯನ್ನು ಬಳಸುವುದಕ್ಕೆ ಪ್ರಾರಂಭಿಸಿದ್ದಾರೆ.11 ನೇ ತರಗತಿಯಲ್ಲಿರುವ ಅಂಕಿತಾ ಮತ್ತು 9 ನೇ ತರಗತಿಯಲ್ಲಿರುವ ಛೋಟಿ ಇಬ್ಬರೂ ಚಿತಾರಾ ಗೋಕುಲ‌ಪುರದ ಶಿವಾಜಿ ಇಂಟರ್ ಕಾಲೇಜಿನಲ್ಲಿ ಓದುತ್ತಾರೆ. ಅವರ ತಂದೆ ರಮೇಶ್ ಪಹಾಡಿ (ಹೆಸರು ಬದಲಾಯಿಸಲಾಗಿದೆ) ಸ್ಥಳೀಯ ಸರ್ಕಾರಿ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಾರೆ ಮತ್ತು ತಿಂಗಳಿಗೆ ಸುಮಾರು ರೂ. 10,000 ರೂ ಸಂಪಾದಿಸುತ್ತಾರೆ.
The Shivaji Inter College (let) in Chitara Gokulpur village, where Ankita and Chhoti study, is shut, cutting off their access to free sanitary napkins; these are available at a pharmacy (right) three kilometers from their house, but are unaffordable for the family
PHOTO • Jigyasa Mishra
The Shivaji Inter College (let) in Chitara Gokulpur village, where Ankita and Chhoti study, is shut, cutting off their access to free sanitary napkins; these are available at a pharmacy (right) three kilometers from their house, but are unaffordable for the family
PHOTO • Jigyasa Mishra

ಅಂಕಿತಾ ಮತ್ತು ಛೋಟಿ ಓದುತ್ತಿರುವ ಚಿತಾರಾ ಗೋಕುಲಪುರ ಗ್ರಾಮದ ಶಿವಾಜಿ ಇಂಟರ್ ಕಾಲೇಜ್ ಮುಚ್ಚಲ್ಪಟ್ಟಿದೆ. ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಸೌಲಭ್ಯವೂ ಇದರೊಂದಿಗೆ ಕಡಿತಗೊಂಡಿದೆ. ನ್ಯಾಪ್ಕಿನ್‌ಗಳು ಅವರ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಔಷಧಾಲಯದಲ್ಲಿ (ಬಲ) ಲಭ್ಯವಿದೆ, ಆದರೆ ಕುಟುಂಬಕ್ಕೆ ಅಷ್ಟು ಖರ್ಚನ್ನು ನಿಭಾಯಿಸಲು ಸಾಧ್ಯವಿಲ್ಲ

"ಈ ಎರಡು ತಿಂಗಳುಗಳ ಸಂಬಳ ದೊರೆಯುತ್ತದೆಯೋ ಅಥವಾ ಇಲ್ಲವೋ ಎಂದು ನನಗೆ ತಿಳಿದಿಲ್ಲ. ನನ್ನ ಮನೆ ಮಾಲಿಕರು ಮನೆ ಬಾಡಿಗೆ ಪಾವತಿಸಿಲ್ಲವೆಂದು ನೆನಪಿಸಲು ಕರೆ ಮಾಡುತ್ತಿದ್ದಾರೆ." ಎಂದು ಹೇಳುವ ರಮೇಶ್ ಮೂಲತಃ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯವರಾಗಿದ್ದು, ಕೆಲಸಕ್ಕಾಗಿ ಇಲ್ಲಿಗೆ ವಲಸೆ ಬಂದಿದ್ದಾರೆ.

ಹತ್ತಿರದ ಫಾರ್ಮಸಿಯೆಂದರೆ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿದೆ ಎಂದು ಅಂಕಿತಾ ಹೇಳುತ್ತಾಳೆ. ಅವಳ ಮನೆಯಿಂದ ಕೇವಲ 300 ಮೀಟರ್ ದೂರದಲ್ಲಿ ಒಂದು ಜನರಲ್‌ ಸ್ಟೋರ್‌ ಇದೆ, ಅಲ್ಲಿ ಸ್ಯಾನಿಟರಿ ಪ್ಯಾಡ್‌ ಮಾರುತ್ತಾರೆ. "ಆದರೆ ನಾವು ಒಂದು ಪ್ಯಾಕೆಟ್‌ ತೆಗೆದುಕೊಳ್ಳಬೇಕೆಂದರೆ ಎರಡೆರಡು ಸಲ ಯೋಚಿಸಬೇಕು. ಯಾಕೆಂದರೆ ನಾವು ಮೂರು ಜನ ಇದ್ದೀವಿ ಒಬ್ಬೊಬ್ಬರಿಗೆ 30 ರೂಪಾಯೊ ಅಂದರೂ 90 ರೂಪಾಯಿ ಬೇಕು." ಎಂದು ಅಂಕಿತಾ ಹೇಳುತ್ತಾಳೆ.

ಇಲ್ಲಿ ಹೆಚ್ಚಿನ ಹುಡುಗಿಯರಿಗೆ ಪ್ಯಾಡ್ ಖರೀದಿಸಲು ಹಣವಿಲ್ಲ ಎಂಬುದು ಸ್ಪಷ್ಟ. "ಲಾಕ್‌ಡೌನ್ ನಂತರ ಸ್ಯಾನಿಟರಿ ಪ್ಯಾಡ್‌ಗಳ ಮಾರಾಟದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ" ಎಂದು ಚಿತ್ರಕೂಟದಸೀತಾಪುರ ಪಟ್ಟಣದಲ್ಲಿ ಫಾರ್ಮಸಿ ನಡೆಸುವ ರಾಮ್‌ ಬರ್ಸೈಯಾ ನನ್ನೊಡನೆ ಮಾತನಾಡುತ್ತ ಹೇಳಿದರು. ಬಹುಶಃ ಎಲ್ಲೆಡೆಯೂ ಇದೇ ಸ್ಥಿತಿ ಇರುವಂತಿದೆ.

ಅಂಕಿತ ಮಾರ್ಚ್‌ ತಿಂಗಳಲ್ಲಿ ಪರೀಕ್ಷೆಗಳನ್ನು ಮುಗಿಸಿದ್ದಾಳೆ. "ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೇನೆ. ನಾನು 11ನೇ ತರಗತಿಯಲ್ಲಿ ಬಯಾಲಜಿ ತೆಗೆದುಕೊಳ್ಳಲು ಬಯಸಿದ್ದೆ. ನಾನು ನನ್ನ ಕೆಲವು ಸೀನಿಯರ್ಸ್‌ ಬಳಿ ಅವರ ಹಳೆಯ ಬಯಾಲಜಿ ಪುಸ್ತಕಗಳನ್ನು ಕೇಳಿದ್ದೆ ಆದರೆ ಅಷ್ಟರಲ್ಲಿ ಶಾಲೆಗಳು ಮುಚ್ಚಿಬಿಟ್ಟವು" ಎಂದು ಅವಳು ಹೇಳುತ್ತಾಳೆ.

ಬಯಾಲಜಿ ಏಕೆ? "ಲಡ್ಕಿಯೋನ್ ಔರ್ ಮಹಿಲಾವೋಂ ಕಾ ಇಲಾಜ್ ಕರೂಂಗಿ (ನಾನು ಹುಡುಗಿಯರು ಮತ್ತು ಮಹಿಳೆಯರಿಗೆ ಸಹಾಯ ಮಾಡಲು ಬಯಸುತ್ತೇನೆ)," ಎಂದು ನಸುನಗುವ ಅವಳು "ಆದರೆ ಅದಕ್ಕಾಗಿ ಹೇಗೆ ಮುಂದುವರಿಯಬೇಕೆಂದು ನನಗೆ ಇನ್ನೂ ತಿಳಿದಿಲ್ಲ." ಎನ್ನುತ್ತಾಳೆ

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು
Jigyasa Mishra

ಉತ್ತರ ಪ್ರದೇಶದ ಚಿತ್ರಕೂಟ ಮೂಲದ ಜಿಗ್ಯಾಸ ಮಿಶ್ರಾ ಸ್ವತಂತ್ರ ಪತ್ರಕರ್ತೆಯಾಗಿ ಕೆಲಸ ಮಾಡುತ್ತಾರೆ.

Other stories by Jigyasa Mishra
Illustration : Priyanka Borar

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

Other stories by Priyanka Borar

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Series Editor : Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Other stories by Sharmila Joshi
Translator : Shankar N Kenchanuru

ಅನುವಾದಕರು: ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N Kenchanuru