ಅನಂತಪುರವು, ಏಪ್ರಿಲ್‌ 5ರ ಭಾನುವಾರಕ್ಕೆ ಅಣಿಯಾಗುತ್ತಿತ್ತು. ‘ನಮ್ಮನ್ನು ಆವರಿಸುತ್ತಿದ್ದ ಕತ್ತಲನ್ನು ದೂರಮಾಡಲು’ ಪ್ರಧಾನ ಮಂತ್ರಿಯವರು ರಾತ್ರಿ 9 ಗಂಟೆಗೆ ಮೇಣದ ಬತ್ತಿಗಳು, ದೀಪಗಳು, ಮೊಬೈಲ್‌ ಟಾರ್ಚ್‌ಗಳನ್ನು 9 ನಿಮಿಷಗಳ ಕಾಲ ಉರಿಸುವಂತೆ ನೀಡಿದ ಕರೆಗೆ ಈ ಊರು ಹೇಗೆ ಪ್ರತಿಕ್ರಿಯಿಸುತ್ತದೆ? ಸುತ್ತಮುತ್ತಲೂ ಸುಲಭವಾಗಿ ಹೊತ್ತಿ ಉರಿಯಬಹುದಾದ ಬಿದಿರಿನ ರಾಶಿಯಿಂದ ಕೂಡಿದ್ದು, ಐದು ಅಥವಾ ಆರು ಕುಟುಂಬಗಳು ಒಂದೇ ಬಾಲ್ಕನಿಯ ಕಿಷ್ಕಿಂಧದಲ್ಲಿ ಒಟ್ಟಾಗಿ ವಾಸಿಸುವ ಅನಿವಾರ್ಯತೆಯಿರುವ ಸಂಗಮೇಶ್‌ ನಗರದ ನನ್ನ ನೆರೆಹೊರೆಯಲ್ಲಿ ಇದು ಸ್ವಲ್ಪ ತ್ರಾಸದಾಕವೇ ಸರಿ.

ನನ್ನ ಕುಟುಂಬವು ಮಾರ್ಚ್‌ 19ರಂದು ಸ್ವಇಚ್ಛೆಯಿಂದ ಲಾಕ್‌ಡೌನ್‌ಗೆ ಒಳಪಟ್ಟ ಕಾರಣ, ಅಲ್ಪತಮ ಆದಾಯವುಳ್ಳ ನಗರದ ಈ ಬಹುತೇಕ ಶ್ರಮಿಕ ವರ್ಗವು ಇದನ್ನು ಹೇಗೆ ನಿಭಾಯಿಸುತ್ತದೆಂಬುದನ್ನು ಗಮನಿಸಲು ನನಗೆ ಹೆಚ್ಚಿನ ಸಮಯಾವಕಾಶವು ಲಭಿಸಿತು.

“ಕೊರೊನಾ ವೈರಸ್‌, ಚಿತ್ತೂರನ್ನು ತಲುಪಿದೆ. ಆದರೆ ಅದು ಅನಂತಪುರಕ್ಕೆ ಬರುವುದಿಲ್ಲ. ಇಲ್ಲಿನ ವಿಪರೀತ ತಾಪಮಾನದಲ್ಲಿ ಅದು ಉಳಿಯಲಾರದು” ಎಂಬುದಾಗಿ, ಮಾರ್ಚ್‌ 17ರಂದು, ನನ್ನ ಹಳೆಯ ಶಾಲೆಯ ಶಾಲಾ ಬಸ್ಸಿನ ಚಾಲಕ ನನಗೆ ತಿಳಿಸಿದ್ದರು. ಈ ಮುಗ್ಧ ಹೇಳಿಕೆಯು, ಇಡೀ ಸಮುದಾಯದ ಮನಸ್ಥಿತಿಯನ್ನು ಪ್ರತಿನಿಧಿಸುತ್ತಿತ್ತು. ಸರ್ವವ್ಯಾಪಿಯಾದ ಈ ವ್ಯಾಧಿಯ ತುರ್ತು, ಅನಂತಪುರದ ಅನೇಕರಿಗೆ ತಲುಪಿಲ್ಲ. ಆ ಸಮಯದಲ್ಲಂತೂ ಅದು ನಿಜಕ್ಕೂ ಅವರನ್ನು ತಲುಪಿರಲಿಲ್ಲ.

ಆಂಧ್ರ ಪ್ರದೇಶದ ರಾಯಲಸೀಮೆಯ ಅನಂತಪುರ ಜಿಲ್ಲೆಯ ಅದೇ ಹೆಸರನ್ನು ಹೊಂದಿದ ಪ್ರಧಾನ ಕಾರ್ಯಸ್ಥಳವಾದ ಅನಂತಪುರದ ಸಂಗಮೇಶ್‌ ನಗರದಲ್ಲಿನ ಓಣಿಗಳಲ್ಲಿ ಮಕ್ಕಳ ಗುಂಪು ಅತ್ತಿಂದಿತ್ತ ಠಳಾಯಿಸುತ್ತಿತ್ತು. ಶಾಲೆ ಹಾಗೂ ಪರೀಕ್ಷೆಗಳು ರದ್ದುಗೊಂಡ ಕಾರಣ, ಅವರ ಚಟುವಟಿಕೆಗಳಲ್ಲಿ ಹೊಸ ಹುರುಪು ಕಾಣುತ್ತಿತ್ತು. ಮಾರ್ಚ್‌ 29ರ ಭಾನುವಾರ, ತರಕಾರಿ ಮಾರುಕಟ್ಟೆಗಳಲ್ಲಿ ಜನಜಂಗುಳಿಗೇನು ಕಡಿಮೆಯಿರಲಿಲ್ಲ.

PHOTO • Rahul M.

ನಮ್ಮ ಮನೆಯ ಬಾಲ್ಕನಿಯಿಂದ, ಅಲ್ಪಸ್ವಲ್ಪ ಸಂಪಾದನೆಯನ್ನುಳ್ಳ ಶ್ರಮಿಕ ವರ್ಗದವರೇ ಬಬುತೇಕವಾಗಿ ನೆಲೆಸಿರುವ ನಗರದ ಭಾಗವಾದ ಸಂಗಮೇಶ್‌ ನಗರದ ಪಕ್ಷಿನೋಟವನ್ನು ಕಾಣಬಹುದು. ನಮ್ಮ ನೆರೆಹೊರೆಯ ಕುಟುಂಬಗಳು ಒತ್ತೊತ್ತಾಗಿರುವ ಮನೆಗಳಲ್ಲಿ ವಾಸಿಸುತ್ತಿದ್ದು, ಸದಾಕಾಲವೂ ಬೇಸಿಗೆಯಿರುವ ಅನಂತಪುರದಲ್ಲಿನ ಶುದ್ಧಗಾಳಿಯ ಕೊರತೆಯಿರುವ ಮನೆಯಲ್ಲಿ, ದಿನಗಟ್ಟಲೆ ಫ್ಯಾನಿನ ಕೆಳಗೆ ಬಂಧಿಯಾಗಿರುವುದು ಸುಲಭವಲ್ಲ

“ನನ್ನ ಹಿರಿಯ ಮಗ (ಆಟೋ ರಿಕ್ಷಾ ಚಾಲಕ) ಮತ್ತು ನನ್ನ ಸೊಸೆ, ಬೆಳಿಗ್ಗೆ ಪೋಲೀಸರು ಗಸ್ತು ತಿರುಗುವ ಮೊದಲೇ ತಮ್ಮ ಕೆಲಸಗಳಿಗಾಗಿ ಹೊರಹೋಗುತ್ತಾರೆ. ನನ್ನ ಮಗನು ಆಟೋದಲ್ಲಿ, ಸೊಸೆಯನ್ನು ಆಕೆಯು ಅಡಿಗೆಯ ಕೆಲಸವನ್ನು ನಿರ್ವಹಿಸುವ ಮನೆಗೆ ಕರೆದೊಯ್ಯುತ್ತಾನೆ. ಅವರು ಸಂಜೆಗೆ ಮನೆಗೆ ಮರಳುತ್ತಾರೆ,” ಎಂಬುದಾಗಿ ಹಿರಿಯ ವಯಸ್ಸಿನ ಹೆಂಗಸೊಬ್ಬರು ನನಗೆ ತಿಳಿಸಿದರು. ಶ್ರಮಿಕ ವರ್ಗದ ಜನರು ಹೀಗೆ ರಹಸ್ಯವಾಗಿ ಬೆವರುಹರಿಸುತ್ತಿದ್ದು, ಸ್ಥಿತಿವಂತರು ಈ ಸರ್ವವ್ಯಾಪಿ ವ್ಯಾಧಿಯನ್ನು ತಮ್ಮ ಜೀವನಕ್ಕೆ ಅತ್ಯಂತ ಅಗತ್ಯವಾಗಿದ್ದ ಬಿಡುವು ಎಂಬುದಾಗಿ ಭಾವಿಸುತ್ತಾರೆ. ಮಾರ್ಚ್‌ 19ರಂದು ಸೂಪರ್‌ಮಾರ್ಕೆಟ್‌ನ ಹೊರಗಡೆ ವ್ಯಕ್ತಿಯೊಬ್ಬರು, “ಕೊರೊನಾ ವೈರಸ್‌ ರಜಾ ದಿನಗಳು ಪ್ರಾರಂಭಗೊಂಡಿವೆ” ಎನ್ನುತ್ತಿದ್ದುದನ್ನು ನಾನು ಆಲಿಸಿದೆ.

ನಮ್ಮ ಮನೆಯ ಬಾಲ್ಕನಿಯಿಂದ ಸಂಗಮೇಶ್‌ ನಗರದ ಪಕ್ಷಿನೋಟವನ್ನು ನಾವು ಕಾಣಬಹುದು. ನಮ್ಮ ನೆರೆಹೊರೆಯ ಕುಟುಂಬಗಳು ಒಂದು ಅಥವಾ ಎರಡು ಕೋಣೆಗಳ ಒತ್ತೊತ್ತಾಗಿರುವ ಮನೆಗಳಲ್ಲಿ ವಾಸಿಸುತ್ತವೆ. ತಮ್ಮ ಬಹುತೇಕ ಸಮಯವನ್ನು ಅವರು ಮನೆಯ ಹೊರಗಡೆ ಕಳೆಯುತ್ತಾರೆ. ನಮ್ಮ ಕೆಲವು ನೆರೆಹೊರೆಯವರಿಗೆ ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ಮಹತ್ವವನ್ನು ವಿವರಿಸಲು ನಾವು ಪ್ರಯತ್ನಿಸಿದೆವಾದರೂ, ಸದಾಕಾಲವೂ ಬೇಸಿಗೆಯಿರುವ ಅನಂತಪುರದಲ್ಲಿನ ಶುದ್ಧಗಾಳಿಯ ಕೊರತೆಯಿರುವ ಮನೆಯಲ್ಲಿ, ದಿನಗಟ್ಟಲೆ ಫ್ಯಾನಿನ ಕೆಳಗೆ ಬಂಧಿಯಾಗಿರುವುದು ಸುಲಭವಲ್ಲ. ನಮ್ಮ ಅಕ್ಕಪಕ್ಕದಲ್ಲಿನ ಜನರು ಆಟೋ ಚಾಲಕರು, ತರಕಾರಿ ಮಾರುವವರು, ಹಂದಿಗಳನ್ನು ಸಾಕುವವರು, ಉಪಾಧ್ಯಾಯರು ಮತ್ತು ಮನೆಕೆಲಸದ ಉದ್ಯೋಗದಲ್ಲಿರುವವರು. ಇತರೆ ಅನೇಕರು ಬುಟ್ಟಿಗಳನ್ನು ಅಥವಾ ಕೇರುವ ಮೊರಗಳನ್ನು ಹೆಣೆಯುತ್ತಾರೆ. ಈ ಕೊನೆಯ ಎರಡು ಗುಂಪಿನವರಿಗೆ ಪ್ರತಿದಿನವೂ ಮನೆಯಿಂದಲೇ ಕೆಲಸವನ್ನು ನಿರ್ವಹಿಸುವ (work-from-home) ದಿನವಾಗಿರುತ್ತದೆ. ಲಾಕ್‌ಡೌನ್‌ ಹೊರತಾಗಿಯೂ ಅವರು ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ.

ಬಹುತೇಕ ದಿನಗಳಲ್ಲಿ, ಇಲ್ಲಿನ ಮಕ್ಕಳು ಬೇಗನೇ ಎದ್ದು, ಅನಂತಪುರದಲ್ಲಿ ಅತ್ಯಂತ ಪ್ರಮುಖ  ಹಾಗೂ ದುರ್ಲಭ ವಸ್ತುವೆನಿಸಿರುವ ನೀರನ್ನು ಹಿಡಿಯಲು ತಮ್ಮ ತಂದೆ ತಾಯಿಗಳಿಗೆ ನೆರವಾಗುತ್ತಾರೆ. ರೂಪಾಂತರಗೊಳಿಸಿದ ಆಟೋ ರಿಕ್ಷಾಗಳ ಹಿಂಬದಿಯಲ್ಲಿ, ಕೆಲವು ಸ್ಥಳೀಯ ಕಂಪನಿಗಳು ‘ಪರಿಶುದ್ಧ ಕುಡಿಯುವ ನೀರನ್ನು’ ಮಾರುತ್ತವೆ. ಅವರಲ್ಲೊಬ್ಬರು, 2014ರ ತೆಲುಗು ಚಲನಚಿತ್ರದ ಉಲ್ಲಾಸಭರಿತ ಹಾಡೊಂದನ್ನು ಧ್ವನಿವರ್ಧಕದಲ್ಲಿ ಕೇಳಿಸುವ ಮೂಲಕ ಪ್ರತಿದಿನದ ತಮ್ಮ ಉತ್ಪನ್ನದ ಆಗಮನವನ್ನು ಸಾರುತ್ತಾರೆ. ಮಾರ್ಚ್‌ 30ರಂದು ಸಹ ಇದನ್ನು ಕಾಣಬಹುದಿತ್ತು. ಕೆಲವು ಸ್ತ್ರೀಯರು, ತಮ್ಮ ಪ್ಲಾಸ್ಟಿಕ್‌ ಬಿಂದಿಗೆಗಳನ್ನು ನೀರಿನಿಂದ ತುಂಬಿಸಿಕೊಂಡರು. ಇತರೆ ಮೂಲಗಳಲ್ಲಿನ ನೀರು, ‘ಬ್ಯಾಕ್ಟೀರಿಯ ಮತ್ತು ವೈರಸ್‌ನಿಂದ’ ಕಲುಷಿತಗೊಂಡಿರುವ ಈ ಸಮಯದಲ್ಲಿ, ತಮ್ಮ ‘ಪರಿಶುದ್ಧ’ ನೀರನ್ನು ಕೊಳ್ಳುವಂತೆ ಮೊದಲೇ ಧ್ವನಿಮುದ್ರಿಸಿದ್ದ ಕಂಪನಿಯ ಪ್ರಕಟಣೆಯು ಜನರನ್ನು ಪ್ರಚೋದಿಸುತ್ತಿತ್ತು.

ಲಾಕ್‌ಡೌನ್‌ನ ನಿಯತ ಕ್ರಮಗಳು ನಿಧಾನವಾಗಿ ಬದಲಾಗುತ್ತಿದ್ದಾಗ್ಯೂ, ಪ್ರತ್ಯೇಕತೆಗೆ ಸಂಬಂಧಿಸಿದಂತೆ, ನಗರ ಪ್ರದೇಶದ ಪ್ರವೃತ್ತಿಯನ್ನು ಕೇಂದ್ರೀಕರಿಸಿದ ಸರ್ಕಾರದ ಸೂಚನೆಗಳನ್ನು ಪಾಲಿಸುವುದು, ಜನರಿಗೆ ಕಷ್ಟದಾಯಕ. ಮಕ್ಕಳು ಬೀದಿಯಲ್ಲಿ ತಮ್ಮ ಆಟಗಳನ್ನು (ಯಾವುದೇ ಪರಿಕರಗಳ ಅವಶ್ಯಕತೆಯಿಲ್ಲದ ಕಣ್ಣಾಮುಚ್ಚಾಲೆ, ಕಳ್ಳ ಪೋಲೀಸ್‌) ಮುಂದುವರಿಸುತ್ತಾರೆ. ಈ ಮಕ್ಕಳಿಗೆ ಲಾಕ್‌ಡೌನ್‌ ಎಂಬುದು ರಜೆಯ ಮುಂದುವರಿಕೆಯಂತೆ. ತಿನಿಸುಗಳನ್ನು ಮಾರುವವರು ತೀರ ಇತ್ತೀಚೆಗಷ್ಟೇ ಮಾರಾಟಕ್ಕೆ ಬರುವುದನ್ನು ನಿಲ್ಲಿಸಿದ್ದಾರೆ. ಹುರಿದ ಕಡಲೆಬೀಜದ ಗುಣಗಾನ ಮಾಡುತ್ತಾ ನಮ್ಮ ಬೀದಿಗೆ ತನ್ನ ಪ್ರವೇಶವನ್ನು ತಿಳಿಯಪಡಿಸುತ್ತಿದ್ದ ಮಾರಾಟಗಾರನು, ಮಾರ್ಚ್‌ ೨೧ರಂದು ಬರುವುದನ್ನು ನಿಲ್ಲಿಸಿದ್ದಾನೆ. ಮಾರ್ಚ್‌ ೨೮ರಿಂದ ಐಸ್‌ಕ್ರೀಂ ಮಾರಾಟಗಾರನು ಸಹ ಕಾಣಿಸಿಕೊಂಡಿರುವುದಿಲ್ಲ. ತರಕಾರಿ ಮಾರಾಟಗಾರನು ತನ್ನ ಮಾರಾಟವನ್ನು ಮುಂದುವರಿಸಿದ್ದಾನೆ.

ನಮ್ಮ ನೆರೆಹೊರೆಯಲ್ಲಿನ ಮನೆಗಳಲ್ಲಿ ಸ್ಥಳಾವಕಾಶವಿಲ್ಲದ ಕಾರಣ, ಅವರೆಲ್ಲರೂ ಇಡೀ ದಿನ ಒಟ್ಟಾಗಿ ಮನೆಯೊಳಗೆ ಇರುವುದು ಅಸಾಧ್ಯವಾಗಿದೆ. ಅತ್ಯವಶ್ಯ ವಸ್ತುಗಳ ದಾಸ್ತಾನು ಅಥವಾ ‘ಸಾಮಾಜಿಕ ಅಂತರವನ್ನು’ ಪಾಲಿಸುವುದೂ ಸಹ ಸಾಧ್ಯವಾಗದ ಮಾತು. ವಯಸ್ಕರು, ನೆಲದಲ್ಲಿ ದಾಳದಿಂದ (dice) ಕೊರೆದ ಚೌಕಗಳ ಸುತ್ತಲೂ ಕುಳಿತು, ತಮ್ಮ ನೆಚ್ಚಿನ ಮೇಕ-ಪುಲಿ ಎಂಬ ಮಣೆ ಆಟದಲ್ಲಿ (board game) ತೊಡಗುವುದನ್ನು ಮುಂದುವರಿಸಿದ್ದಾರೆ.

PHOTO • Rahul M.

ಮಾರ್ಚ್‌ 18-19ರಂದು ಅನಂತಪುರದ ಸುತ್ತಮುತ್ತಲೂ ತೆಗೆದ ಛಾಯಾಚಿತ್ರಗಳು. ಕೋವಿಡ್‌-19, ಅನಂತಪುರಕ್ಕೆ ಬರುವುದಿಲ್ಲವೆಂಬುದು ಜನರ ನಂಬಿಕೆಯಾಗಿತ್ತು. ಆದರೆ ಸರ್ವವ್ಯಾಪಿ ವ್ಯಾಧಿಯ ಕಂಪನಗಳು ಅತಿ ಶೀಘ್ರದಲ್ಲೇ ಕಾಣಿಸಿಕೊಳ್ಳತೊಡಗಿದವು

ಇಷ್ಟೇ ಅಲ್ಲದೆ, ರಾಜ್ಯದಲ್ಲಿನ ರಾಜಕೀಯ ಗೊಂದಲಗಳು, ಜನತೆಗೆ ಈ ಸರ್ವವ್ಯಾಪಿ ವ್ಯಾಧಿಯ ತುರ್ತಿನ ಬಗ್ಗೆ ಅರಿವನ್ನು ಮೂಡಿಸುವಲ್ಲಿ ನೆರವಾಗಲಿಲ್ಲ. ಲಾಕ್‌ಡೌನ್‌ಗಿಂತಲೂ ಮೊದಲ ಕೆಲವು ವಾರಗಳಲ್ಲಿನ ಜನರ ನಿಶ್ಚಿಂತ ವರ್ತನೆಗೆ ಬಹುಶಃ ಇದು ಕಾರಣವಾಗಿರಬಹುದು. ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮುಂದೂಡಿಕೆಯ ಬಗ್ಗೆ ಚುನಾವಣಾ ಆಯೋಗದೊಂದಿಗೆ ಸಂಘರ್ಷದಲ್ಲಿ ತೊಡಗಿತ್ತು. ಮಾರ್ಚ್‌ ೨೧ರಂದು ನಡೆಯಬೇಕಿದ್ದ ಚುನಾವಣೆಗಳನ್ನು ಚುನಾವಣಾ ಆಯೋಗವು ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಿತು. ತೆಲುಗು ವಾರ್ತಾ ಮಾಧ್ಯಮಗಳು ಈ ಚುನಾವಣಾ ಪ್ರಹಸನವನ್ನು ಟಿ ಡಿ ಪಿ ಮತ್ತು ವೈ ಎಸ್‌ ಆರ್‌ ಪಿ ಪಕ್ಷಗಳ ನಡುವಿನ ಸಂಘರ್ಷವೆಂಬುದಾಗಿ ಬಿಂಬಿಸಿದವು. ಅನೇಕ ರಾಜಕೀಯ ಪಕ್ಷಗಳ ಕಾರ್ಯಕರ್ತರು ಇತ್ತೀಚಿನವರೆಗೂ ಮನೆ ಮನೆಯ ಪ್ರಚಾರದಲ್ಲಿ ತೊಡಗಿದ್ದರು. ಅನೇಕರಿಗೆ ಇವರು ಮಾಹಿತಿಯ ನಂಬಲರ್ಹ ಮೂಲಗಳಾದ ಕಾರಣ, ತಜ್ಞರ ಅಭಿಪ್ರಾಯಗಳಿಗೆ ಅಷ್ಟು ಮಾನ್ಯತೆಯಿರಲಿಲ್ಲ. ಅಲ್ಲದೆ, ಮಾಧ್ಯಮಗಳೂ ಸಹ ಇವನ್ನು ವಿಶೇಷ ಸುದ್ದಿಗಳೆಂಬಂತೆ ಪರಿಗಣಿಸಲಿಲ್ಲ.

ಕೋವಿಡ್‌-19 ಅನಂತಪುರಕ್ಕೆ ಬರುವುದಿಲ್ಲವೆಂಬುದು ಇಲ್ಲಿಯ ಜನರ ನಂಬಿಕೆಯಾಗಿತ್ತು. ಆದರೆ ಅದರ ಕಂಪನಗಳು ಸಾಕಷ್ಟು ಮೊದಲೇ ಕಾಣಿಸಿಕೊಂಡವು. ಮಾರ್ಚ್‌ 13ರಂದು, ನನ್ನ ಮನೆಯಲ್ಲಿನ ಡಿಶ್‌ ಅನ್ನು ಬಳಸಿ, ಕೆಲವೊಂದು ಚಾನೆಲ್‌ಗಳನ್ನು ಸಕ್ರಿಯಗೊಳಿಸಲು (activate) ನನಗೆ ಸಾಧ್ಯವಾಗಲಿಲ್ಲ. ನಮ್ಮ ಕೇಬಲ್‌ ತಂತ್ರಜ್ಞ, ಪಿ. ಸುಬ್ಬಯ್ಯ, ರೈತರೂ ಹೌದು. ಅವರು ತಮ್ಮ ಹಳ್ಳಿಯಾದ ಬಿ. ಪಪ್ಪುರು ಎಂಬಲ್ಲಿ, (ಅನಂತಪುರದ ನರ್ಪಲ ಮಂಡಲ್‌ನಲ್ಲಿರುವ) ತಮ್ಮ ಬಾಳೆಯ ಫಸಲಿನೊಂದಿಗೆ ಸಿಲುಕಿದ್ದರು. ಫಸಲನ್ನು ಕೊಳ್ಳುವವರು ಸಾಮಾನ್ಯವಾಗಿ ಖರೀದಿಯನ್ನು ತಡಮಾಡುತ್ತಾರೆ. ಏಕೆಂದರೆ ಖರೀದಿಯು ತಡವಾದಷ್ಟೂ, ಫಸಲು ಕಡಿಮೆ ಬೆಲೆಗೆ ದೊರೆಯುತ್ತದೆ. “ಖರೀದಿದಾರರ ಸಮಿತಿಯು ಈ ಬಾರಿಯೂ ಖರೀದಿಯನ್ನು ತಡಮಾಡಿತು. ಆದರೆ ಈ ವಿಪತ್ತಿನ ಕಾರಣದಿಂದಾಗಿ, ಈಗ ಫಸಲನ್ನು ಕೊಳ್ಳುವವರೇ ಇಲ್ಲದಂತಾಗಿದೆ” ಎಂದಿದ್ದರು ಸುಬ್ಬಯ್ಯ. ನಂತರ ಅನಂತಪುರಕ್ಕೆ ವಾಪಸ್ಸು ಬಂದ ಮೇಲೆ, ಅವರು, “ನಾನು ಬಾಳೆಯ ಹಣ್ಣುಗಳನ್ನು ಹಳ್ಳಿಯಲ್ಲೇ ಬಿಟ್ಟು ಬಂದೆ. ಈಗ ಅವು ಬಿಸಿಲಿಗೆ ಕಂದುಹೋಗುತ್ತವೆ. ನಾನು ಸುಮಾರು 15 ಲಕ್ಷ ರೂ.ಗಳನ್ನು ಕಳೆದುಕೊಂಡಂತಾಗಿದೆ” ಎಂದು ನನ್ನಲ್ಲಿ ಅಲವತ್ತುಕೊಂಡರು.

ಏಪ್ರಿಲ್‌ 1ರಂದು, ಒಂದೇ ದಿನಕ್ಕೆ ಆಂಧ್ರ ಪ್ರದೇಶದಲ್ಲಿ 67 ಪ್ರಕರಣಗಳು ಕಾಣಿಸಿಕೊಂಡಾಗ ಜನರ ಮನಸ್ಥಿತಿಯೂ ಬದಲಾಗತೊಡಗಿತು. ಕೋವಿಡ್‌ ಪ್ರಕರಣಗಳಲ್ಲಿ ಕೊನೆಯ ಸ್ಥಾನದಲ್ಲಿದ್ದ ಈ ರಾಜ್ಯವು, ೧೩೨ ಒಟ್ಟಾರೆ ಪ್ರಕರಣಗಳಿಂದಾಗಿ, ೫ನೇ ಸ್ಥಾನಕ್ಕೇರಿತು. ಅನಂತಪುರದಲ್ಲೀಗ 2 ಪಾಸಿಟಿವ್‌ ಪ್ರಕರಣಗಳಿವೆ. ಈಗಲೂ ಈ ವಿಶ್ವವ್ಯಾಪಿ ವ್ಯಾಧಿಯ ತುರ್ತು (urgency),  ಜಿಲ್ಲಾಮಟ್ಟಕ್ಕೆ ವ್ಯಾಪಿಸಿಲ್ಲ. ಹಲವು ಮಂಡಲ್‌ಗಳಾದ್ಯಂತ ದಾನಿಗಳು ಮತ್ತು ಅವರ ಗುಂಪಿನವರು ಊಟ, ಅಕ್ಕಿ, ತರಕಾರಿ ಮತ್ತು ಮಾಸ್ಕ್‌ಗಳನ್ನು ಉಚಿತವಾಗಿ ಹಂಚುತ್ತಿರುವ ಬಗ್ಗೆ ಸ್ಥಳೀಯ ಅನಂತ ಚಾನೆಲ್‌ ವರದಿಯನ್ನು ಬಿತ್ತರಿಸಿತು. ದುರದೃಷ್ಟವಶಾತ್‌, ಅತ್ಯಂತ ತುರ್ತು ಅವಶ್ಯಕತೆಗಳೆನಿಸಿದ ಈ ಸಾಮಗ್ರಿಗಳನ್ನು ಹಂಚುವ ಮತ್ತು ಸಂಗ್ರಹಿಸುವ ಕೆಲವರು, ಮಾಸ್ಕ್‌ ಮತ್ತು ಕೈಗವಸುಗಳನ್ನು ಧರಿಸುವ ಮುನ್ನೆಚ್ಚರಿಕೆಗಳನ್ನು ಪಾಲಿಸುತ್ತಿಲ್ಲ.

ಏಪ್ರಿಲ್ 5, ರಾತ್ರಿ 9ಕ್ಕೆ ಸಿದ್ಧರಾಗುತ್ತಿದ್ದ ಜನ…

ಅನುವಾದ : ಶೈಲಜ ಜಿ . ಪಿ .

Rahul M.

2017 ರ 'ಪರಿ' ಫೆಲೋ ಆಗಿರುವ ರಾಹುಲ್ ಎಮ್. ಅನಂತಪುರ, ಆಂಧ್ರಪ್ರದೇಶ ಮೂಲದ ಪತ್ರಕರ್ತರಾಗಿದ್ದಾರೆ.

Other stories by Rahul M.
Translator : Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Shailaja G. P.