ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅನೇಕರು ಅಂಗವೈಕಲ್ಯ ಅಥವಾ ವಿಭಿನ್ನ ಸಾಮರ್ಥ್ಯದೊಂದಿಗೆ ಬದುಕು ನಡೆಸುತ್ತಿದ್ದಾರೆ. ಜನ್ಮಜಾತ ಸಾಧ್ಯತೆಯನ್ನು ಹೊರತುಪಡಿಸಿ, ಅಂಗವೈಕಲ್ಯವು ಸಾಮಾಜಿಕ ಅಥವಾ ಸರ್ಕಾರದ ಕ್ರಿಯೆ ಅಥವಾ ನಿಷ್ಕ್ರಿಯತೆಯಿಂದಲೂ ಉಂಟಾಗಬಹುದು – ಉದಾಹರಣೆಗೆ, ಝಾರ್ಖಂಡ್‌ನ ಯುರೇನಿಯಂ ಗಣಿಗಳ ಕಾರಣದಿಂದಾಗಿ, ಅಥವಾ ಮರಾಠವಾಡದಲ್ಲಿ ಅನಿಯಂತ್ರಿತ ಬರಗಾಲದ ಕಾರಣಕ್ಕೆ ಜನರು ಫ್ಲೋರೈಡ್ ಕಲುಷಿತ ಅಂತರ್ಜಲವನ್ನು ಕುಡಿಯುವ ಅನಿವಾರ್ಯತೆಗೆ ಸಿಲುಕುವುದು. ಕೆಲವೊಮ್ಮೆ, ಅಂಗವೈಕಲ್ಯವು ರೋಗ ಅಥವಾ ವೈದ್ಯಕೀಯ ನಿರ್ಲಕ್ಷ್ಯದಿಂದ ಉಂಟಾಗುತ್ತದೆ – ಲಕ್ನೋದ ಕಸ ನಿರ್ವಹಣೆ ಕೆಲಸ ಮಾಡುವ ಪಾರ್ವತಿ ದೇವಿಯವರ ಬೆರಳುಗಳು ಕುಷ್ಠರೋಗದಿಂದ ಹಾನಿಗೊಳಗಾಗಿವೆ, ಮಿಝೋರಾಂನ ದೇಬಾಹಲ ಚಕ್ಮಾ ಚಿಕನ್‌ಪಾಕ್ಸ್ ಕಾಯಿಲೆಯಿಂದ ಕುರುಡಾಗಿದ್ದಾರೆ, ಮತ್ತು ಪಾಲ್ಘರ್‌ನ ಪ್ರತಿಭಾ ಹಿಲಿಮ್ ಗ್ಯಾಂಗ್ರೀನ್ ಸಮಸ್ಯೆಯಿಂದಾಗಿ ತಮ್ಮ ಎಲ್ಲ ಕೈಕಾಲುಗಳನ್ನು ಕಳೆದುಕೊಂಡಿದ್ದಾರೆ. ಕೆಲವರ ಪಾಲಿಗೆ, ಅಂಗವೈಕಲ್ಯವೆನ್ನುವುದು ಬೌದ್ಧಿಕ ರೂಪದಲ್ಲಿ ಕಾಡುತ್ತದೆ – ಶ್ರೀನಗರದ ಪುಟ್ಟ ಮೊಹ್ಸಿನ್‌ಗೆ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿದೆ, ಆದರೆ ಮಹಾರಾಷ್ಟ್ರದ ಪ್ರತೀಕ್‌ಗೆ ಡೌನ್ಸ್ ಸಿಂಡ್ರೋಮ್ ಇದೆ ಎಂದು ವೈದ್ಯರು ಹೇಳಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಬಡತನ, ಅಸಮಾನತೆ, ದುರ್ಬಲ ಆರೋಗ್ಯ ಸೇವೆಗಳು ಮತ್ತು ತಾರತಮ್ಯದಿಂದ ಈ ಸವಾಲುಗಳು ಇನ್ನಷ್ಟು ತೀವ್ರಗೊಳ್ಳುತ್ತವೆ. ಇವು ಪರಿ ವರದಿಗಾರರು ವಿವಿಧ ರಾಜ್ಯಗಳಿಂದ ವರದಿ ಮಾಡಿದ ಕಥೆಗಳಾಗಿದ್ದು, ಅಂಗವೈಕಲ್ಯದೊಂದಿಗೆ ಜೀವನ ನಡೆಸುತ್ತಿರುವ ಜನರ ಕುರಿತು ನಮ್ಮಲ್ಲಿ ಅರಿವು ಮೂಡಿಸುತ್ತವೆ