ಅಪೂರ್ಣಗೊಂಡಿರುವ ಕೆಸರಿನ ದಾರಿಗಳು ಕಿ.ಮೀ.ಗಳವರೆಗೆ ವ್ಯಾಪಿಸಿವೆ. ಇವುಗಳನ್ನು ದಾಟಿ, ಸೌರಾದಲ್ಲಿನ ಆಸ್ಪತ್ರೆಯೆಡೆಗಿನ ಪ್ರಯಾಣವು ಪುನರಾವರ್ತಿತ ಹೋರಾಟವೇ ಸರಿ. ತಮ್ಮ ಮಗ ಮೊಹ್ಸಿನ್‌ನ ವೈದ್ಯಕೀಯ ಸಮಾಲೋಚನೆಗಾಗಿ ಮುಬಿನ ಮತ್ತು ಅರ್ಷಿದ್ ಹುಸೇನ್ ಅಖೂನ್, ಕನಿಷ್ಠ ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗೆ ಭೇಟಿ ನೀಡಬೇಕು. ರಖ್-ಎ-ಅರ್ಥ್ ಪುನರ್ವಸತಿ ಕಾಲೋನಿಯಲ್ಲಿ ಕೆಲವೊಮ್ಮೆ ಕೊಳಚೆ ನೀರು ಮತ್ತು ಕರಗುತ್ತಿರುವ ಹಿಮದಿಂದ ತುಂಬಿ ಹರಿಯುತ್ತಿರುವ ಬೀದಿಗಳನ್ನು ದಾಟಿ ಅರ್ಷಿದ್, ಸುಮಾರು ಒಂಬತ್ತು ವರ್ಷದ ಬಾಲಕನನ್ನು ತಮ್ಮ ತೋಳುಗಳಲ್ಲಿ ಹೊತ್ತೊಯ್ಯುತ್ತಾರೆ.
ಸಾಮಾನ್ಯವಾಗಿ, 2-3 ಕಿ.ಮೀ. ನಡೆದ ನಂತರ ಅವರಿಗೆ ಆಟೊರಿಕ್ಷಾ ದೊರೆಯುತ್ತದೆ. 500 ರೂ.ಗಳನ್ನು ಪಾವತಿಸಿದಲ್ಲಿ, ಅದು ಅವರನ್ನು ಸುಮಾರು 10 ಕಿ. ಮೀ ದೂರದಲ್ಲಿನ ಶ್ರೀನಗರದ ಉತ್ತರ ಭಾಗದಲ್ಲಿರುವ ಸೌರ ಪ್ರದೇಶದ ಶೇರ್-ಇ-ಕಾಶ್ಮೀರ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆದೊಯ್ಯುತ್ತದೆ. ಕೆಲವೊಮ್ಮೆ ಈ ಕುಟುಂಬವು ಇಡೀ ದಾರಿಯನ್ನು ಕಾಲ್ನಡಿಗೆಯಲ್ಲಿ ಸವೆಸಬೇಕಾಗುತ್ತದೆ. ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ ಆಸ್ಪತ್ರೆಯನ್ನು ತಲುಪಲು ಅವರು ಹೀಗೆ ಮಾಡಬೇಕಾಯಿತು. ಇದಕ್ಕೆ ಇಡೀ ದಿನ ತೆಗೆದುಕೊಳ್ಳುತ್ತದೆ ಎಂದರು ಮುಬಿನ.
ಮುಬಿನ ಮತ್ತು ಅರ್ಷದ್ ಅವರ ಪ್ರಪಂಚವು ಬದಲಾಗಿ ಸುಮಾರು 9 ವರ್ಷಗಳು ಸಂದಿವೆ. 2012ರಲ್ಲಿ, ಮೊಹ್ಸಿನ್, ಅತ್ಯಂತ ಹೆಚ್ಚಿನ ಮಟ್ಟದ ಬಿಲ್‌ರುಬಿನ್‌ನೊಂದಿಗೆ ಜ್ವರ ಮತ್ತು ಕಾಮಾಲೆಗೆ ಒಳಗಾದಾಗ ಆತನು ಹುಟ್ಟಿ ಕೆಲವೇ ದಿನಗಳಾಗಿದ್ದವು. ನಂತರದಲ್ಲಿ ವೈದ್ಯರ ಭೇಟಿಗಳ ಸರಣಿ ಮುಂದುವರಿಯಿತು. ಆತನು ಎರಡು ತಿಂಗಳ ಕಾಲ ಶ್ರೀನಗರದಲ್ಲಿನ ಮಕ್ಕಳ ಜಿ.ಬಿ. ಪಂತ್ ಸರ್ಕಾರಿ ಆಸ್ಪತ್ರೆಯಲ್ಲಿದ್ದನು. ಕೊನೆಗೆ, ಆತನ ಪರಿಸ್ಥಿತಿ ʼಅಸಹಜವಾಗಿದೆʼ ಎಂದು ಅವರಿಗೆ ತಿಳಿಸಲಾಯಿತು.
“ಆತನ ಪರಿಸ್ಥಿತಿಯು ಸುಧಾರಿಸದ ಕಾರಣ, ನಾವು ಖಾಸಗಿ ವೈದ್ಯರ ಬಳಿ ಕರೆದೊಯ್ದೆವು. ಅವರು, ಮೆದುಳು ಸಂಪೂರ್ಣವಾಗಿ ಹಾನಿಗೀಡಾಗಿದ್ದು, ಆತನಿಗೆ ಕುಳಿತುಕೊಳ್ಳಲು ಹಾಗೂ ನಡೆದಾಡಲು ಎಂದಿಗೂ ಸಾಧ್ಯವಾಗದು” ಎಂದು ತಿಳಿಸಿದರು ಎಂಬುದಾಗಿ 30ರ ವಯಸ್ಸಿನ ಮುಬಿನ ನೆನಪಿಸಿಕೊಳ್ಳುತ್ತಾರೆ.
ಕೊನೆಗೆ, ಮೊಹ್ಸಿನ್‌ಗೆ ಸೆರೆಬ್ರಲ್ ಪಾಲ್ಸಿ ಇರುವುದು ಪತ್ತೆಯಾಯಿತು. ಈ ರೋಗನಿರ್ಣಯವಾದಾಗಿನಿಂದಲೂ, ಮುಬಿನ ತನ್ನ ಬಹುತೇಕ ಸಮಯವನ್ನು ಮಗನ ಪಾಲನೆ ಹಾಗೂ ಆತನ ಆರೋಗ್ಯದ ಕಾಳಜಿಯಲ್ಲಿ ಕಳೆದಿದ್ದಾರೆ. “ನಾನು ಆತನ ಮೂತ್ರವನ್ನು ಸ್ವಚ್ಛಗೊಳಿಸಬೇಕು, ಹಾಸಿಗೆಯನ್ನು ತೊಳೆಯಬೇಕಲ್ಲದೆ, ಅವನನ್ನು ಕುಳಿತುಕೊಳ್ಳುವಂತೆ ಮಾಡಬೇಕು. ದಿನವಿಡೀ ಅವನು ನನ್ನ ಮಡಿಲಿನಲ್ಲಿರುತ್ತಾನೆ” ಎಂದರವರು.
ಆದರೂ, ಬಿರುಕುಬಿಟ್ಟ ಗೋಡೆಗಳು ಹಾಗೂ ಅಪೂರ್ಣಗೊಂಡ ಛಾವಣಿಗಳೊಂದಿಗಿನ ಖಾಲಿ ಕಾಂಕ್ರೀಟ್ ರಚನೆಗಳನ್ನು ಒಳಗೊಂಡ ರಖ್-ಎ-ಅರ್ಥ್‌ನ ಪುನರ್ವಸತಿ ಕಾಲೋನಿಗೆ 2019ರಲ್ಲಿ ಈ ಕುಟುಂಬವು ತೆರಳುವುದಕ್ಕೂ ಮೊದಲು ಅವರ ಹೆಣಗಾಟಗಳು ಅಷ್ಟೇನು ತೀವ್ರವಾಗಿರಲಿಲ್ಲ.
ಆಗ ಅವರು ದಾಲ್ ಸರೋವರದ ಮಿರ್ ಬೆಹ್ರಿಯಲ್ಲಿ ನೆಲೆಸಿದ್ದರು. ಮುಬಿನ ಅವರಿಗೆ ಕೆಲಸ ಹಾಗೂ ಆದಾಯವಿತ್ತು. “ತಿಂಗಳಲ್ಲಿ 10ರಿಂದ 15 ದಿನಗಳು, ನಾನು ದಾಲ್ ಸರೋವರದಲ್ಲಿ ಹುಲ್ಲು ಕತ್ತರಿಸುತ್ತಿದ್ದೆ” ಎಂದು ಆಕೆ ತಿಳಿಸಿದರು. ಈ ಹುಲ್ಲಿನಿಂದ ತಯಾರಿಸಿದ ಚಾಪೆಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ತಲಾ 50 ರೂ.ಗಳಿಗೆ ಮಾರುತ್ತಿದ್ದರು. ತಿಂಗಳಿನ ಸುಮಾರು 15ರಿಂದ 20 ದಿನಗಳಲ್ಲಿ ಸರೋವರದಿಂದ ನೈದಿಲೆಗಳನ್ನು ಕೀಳುವ ನಾಲ್ಕು ತಾಸುಗಳ ಕೆಲಸದಿಂದ 300 ರೂ.ಗಳನ್ನು ಗಳಿಸುತ್ತಿದ್ದರು. ಅರ್ಷಿದ್, ತಿಂಗಳಿಗೆ 20-25 ದಿನಗಳು (ಋತುವಿನಲ್ಲಿ) ಕೃಷಿಯ ಕೂಲಿ ಕೆಲಸಗಳಲ್ಲಿ ತೊಡಗಿದ್ದು, ದಿನಂಪ್ರತಿ 1000 ರೂ.ಗಳನ್ನು ಗಳಿಸುತ್ತಿದ್ದರಲ್ಲದೆ, ಮಂಡಿಯಲ್ಲಿ ತರಕಾರಿಗಳನ್ನು ಮಾರಿ ದಿನವೊಂದಕ್ಕೆ ಕನಿಷ್ಠ 500 ರೂ.ಗಳ ಲಾಭವನ್ನು ಪಡೆಯುತ್ತಿದ್ದರು.
ಕುಟುಂಬದ ಮಾಸಿಕ ಆದಾಯವು ತಕ್ಕಮಟ್ಟಿಗಿತ್ತು. ಜೀವನ ನಿರ್ವಹಣೆಯನ್ನು ಸಹ ಉತ್ತಮವಾಗಿ ನಿಭಾಯಿಸುತ್ತಿದ್ದರು. ಮೊಹ್ಸಿನ್ ಸಲುವಾಗಿ ಅವರು ಭೇಟಿನೀಡಬೇಕಿದ್ದ ಆಸ್ಪತ್ರೆಗಳು ಮತ್ತು ವೈದ್ಯರನ್ನು ಸಹ ಮಿರ್ ಬೆಹ್ರಿಯಿಂದ ತಲುಪಬಹುದಿತ್ತು.
ಮುಬಿನ ಹೀಗೆಂದರು: "ಆದರೆ ಮೊಹ್ಸಿನ್ ಹುಟ್ಟಿದ ನಂತರ ನಾನು ಕೆಲಸ ಮಾಡುವುದನ್ನು ನಿಲ್ಲಿಸಿದೆ. “ಆಗ ನನ್ನ ಅತ್ತೆ, ನಾನು ಸದಾ ಮಗನ ಕೆಲಸ ಕಾರ್ಯಗಳಲ್ಲಿ ಮಗ್ನಳಾಗಿದ್ದು, ಗೃಹಕೃತ್ಯಗಳಲ್ಲಿ ಆಕೆಗೆ ನೆರವಾಗಲು ಸಮಯವಿಲ್ಲದ ಕಾರಣ, ನಮ್ಮನ್ನು ಅಲ್ಲಿ (ಮಿರ್ ಬೆಹ್ರಿಯಲ್ಲಿ) ಇರಿಸಿಕೊಳ್ಳುವುದರ ಅರ್ಥವೇನು?” ಎಂದರು.
ಹೀಗಾಗಿ ಮುಬಿನ ಮತ್ತು ಅರ್ಷದ್ ಅವರಿಗೆ ಅಲ್ಲಿಂದ ತೆರಳಲು ತಿಳಿಸಲಾಯಿತು. ಅವರು ಹತ್ತಿರದಲ್ಲಿ ಒಂದು ಸಣ್ಣ ಟಿನ್ ಶೆಡ್ ಅನ್ನು ನಿರ್ಮಿಸಿದರು. ಸೆಪ್ಟೆಂಬರ್ 2014ರ ಪ್ರವಾಹದಿಂದ ದುರ್ಬಲವಾಗಿದ್ದ ಆ ವಾಸಸ್ಥಳವು ಹಾನಿಗೀಡಾಯಿತು. ಅವರು ಸಂಬಂಧಿಕರೊಂದಿಗೆ ವಾಸಿಸತೊಡಗಿದರು. ನಂತರದಲ್ಲಿ ಮತ್ತೊಮ್ಮೆ ಸ್ಥಳಾಂತರಗೊಂಡು, ಪ್ರತಿ ಬಾರಿಯೂ ತಾತ್ಕಾಲಿಕ ಶೆಡ್‌ಗಳಲ್ಲಿ ನೆಲೆಸತೊಡಗಿದರು.
ಆದರೆ ಪ್ರತಿ ಬಾರಿಯೂ, ಮೊಹಿನ್‌ನ ನಿಯಮಿತ ತಪಾಸಣೆ ಮತ್ತು ಔಷಧಿಗಳಿಗಾಗಿ ವೈದ್ಯರು ಮತ್ತು ಆಸ್ಪತ್ರೆಗಳನ್ನು ಸುಲಭವಾಗಿ ತಲುಪಬಹುದಿತ್ತು.
2017ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸರೋವರಗಳು ಮತ್ತು ಜಲಮಾರ್ಗಗಳ ಅಭಿವೃದ್ಧಿ ಪ್ರಾಧಿಕಾರವು (LAWDA) ದಾಲ್ ಲೇಕ್ ಪ್ರದೇಶದಲ್ಲಿ ʼಪುನರ್ವಸತಿʼ ಅಭಿಯಾನವೊಂದನ್ನು ಪ್ರಾರಂಭಿಸಿತು. ಅಧಿಕಾರಿಗಳು ಸರೋವರದ ದ್ವೀಪಗಳಲ್ಲಿ ರೈತರಾಗಿರುವ ಅರ್ಷಿದ್ ಅವರ ತಂದೆ, 70ರ ವಯಸ್ಸಿನ ಗುಲಾಮ್ ರಸೂಲ್ ಅಖೂನ್ ಅವರನ್ನು ಸಂಪರ್ಕಿಸಿದರು. ಬೆಮಿನಾ ಪ್ರದೇಶದಲ್ಲಿ ದಾಲ್ ಸರೋವರದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಹೊಸ ಪುನರ್ವಸತಿ ಕಾಲೋನಿ ರಾಖ್-ಎ-ಅರ್ತ್‌ನಲ್ಲಿ ಸುಮಾರು 2,000 ಚದರ ಅಡಿ ಜಮೀನಿನಲ್ಲಿ ಮನೆ ನಿರ್ಮಿಸಲು 1 ಲಕ್ಷ ರೂ.ಗಳ ಪ್ರಸ್ತಾವಕ್ಕೆ ಅವರು ಸಮ್ಮತಿಸಿದರು.
“ಆ ಜಾಗವನ್ನು ತೊರೆದು ಬೇರೆಡೆಗೆ ತೆರಳುತ್ತಿದ್ದ ಕಾರಣ, ನಾನು ಅವರೊಂದಿಗೆ ತೆರಳಬಹುದು ಅಥವಾ ಅಲ್ಲಿಯೇ ವಾಸಿಸಬಹುದೆಂಬುದಾಗಿ ನನ್ನ ತಂದೆ ತಿಳಿಸಿದರು. ಆ ಹೊತ್ತಿಗೆ ನನಗೆ 2014ರಲ್ಲಿ ಮತ್ತೊಬ್ಬ ಮಗ, ಅಲಿ ಜನಿಸಿದ್ದನು. ನಾನು ಅವರೊಂದಿಗೆ ಹೋಗಲು ಒಪ್ಪಿದೆ. ರಖ್-ಎ-ಅರ್ಥ್‌ನ ಮನೆಯ ಹಿಂದಿನ ಚಿಕ್ಕವನ್ನು ಅವರು ನನಗೆ ನೀಡಿದರು. ಅಲ್ಲಿ ನಾವು ನಾಲ್ವರಿಗೆ ಚಿಕ್ಕ ಗುಡಿಸಲನ್ನು ನಿರ್ಮಸಿದ್ದೇವೆ” ಎಂದರು ಅರ್ಷಿದ್.
2019ರಲ್ಲಿ, ರಸ್ತೆಗಳು, ಸೂಕ್ತ ಸಾರಿಗೆ, ಶಾಲೆ ಅಥವಾ ಆಸ್ಪತ್ರೆಗಳು ಹಾಗೂ ಕೆಲಸದ ಆಯ್ಕೆಗಳಿಲ್ಲದ, ಕೇವಲ ನೀರು ಮತ್ತು ವಿದ್ಯುಚ್ಛಕ್ತಿ ಮಾತ್ರವೇ ಲಭ್ಯವಿದ್ದ ದೂರದ ಕಾಲೋನಿಗೆ ತೆರಳಿದ 1000 ಕುಟುಂಬಗಳಲ್ಲಿ ಅಖೂನ್‌ಗಳದ್ದೂ ಒಂದು. “ಒಟ್ಟಾರೆ ಮೂರು ಸಮೂಹಗಳಲ್ಲಿ ಒಂದು ಸಮೂಹವನ್ನು ಹಾಗೂ 4600 ನಿವೇಶನಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಇಲ್ಲಿಯವರೆಗೆ 2280 ಕುಟುಂಬಗಳಿಗೆ ನಿವೇಶನಗಳನ್ನು ನೀಡಲಾಗಿದೆ” ಎನ್ನುತ್ತಾರೆ ಎಲ್‌ಎಡಬ್ಲ್ಯೂಡಿಎ ಉಪಾಧ್ಯಕ್ಷ, ತುಫೈಲ್ ಮಟ್ಟೂ.
ಅರ್ಷಿದ್, ರಖ್-ಎ- ಅರ್ಥ್‌ನಿಂದ ಸುಮಾರು ಮೂರು ಕಿ.ಮೀ. ದೂರದ ಕಾರ್ಮಿಕ ನಾಕಾಕ್ಕೆ ತೆರಳಿ ಯಾವುದಾದರೂ ದಿನಗೂಲಿ ಕೆಲಸವನ್ನು ಹುಡುಕಲು ಪ್ರಯತ್ನಿಸುತ್ತಾರೆ. “ಅನೇಕ ಜನರು ಮುಂಜಾನೆ 7 ಗಂಟೆಗೆ ಅಲ್ಲಿಗೆ ಬಂದು, ಕೆಲಸಕ್ಕಾಗಿ ಮಧ್ಯಾಹ್ನದವರೆಗೆ ಕಾಯುತ್ತಾರೆ. ಸಾಮಾನ್ಯವಾಗಿ ನನಗೆ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿರುವ ನಿವೇಶನಗಳಲ್ಲಿ ಕಲ್ಲುಗಳನ್ನು ತೆಗೆಯುವ ಕೆಲಸವು ಸಿಗುತ್ತದೆ. ಆದರೆ 500 ರೂ.ಗಳ ದಿನಗೂಲಿಗೆ ಮಾಹೆಯಾನ ಕೇವಲ 12-15 ದಿನಗಳು ಮಾತ್ರ ಈ ಕೆಲಸವು ದೊರೆಯುತ್ತದೆ.” ಎಂದು ಅವರು ತಿಳಿಸಿದರು. ಪರಿವಾರವು ದಾಲ್ ಲೇಕ್‌ನಲ್ಲಿ ವಾಸಿಸುತ್ತಿದ್ದಾಗ ಈತನ ಗಳಿಕೆಯು ಗಮನಾರ್ಹವಾಗಿ ಕಡಿಮೆಯಾಗಿತ್ತು.”
ಕೆಲಸವು ದೊರೆಯದಿದ್ದಾಗ, ತಮ್ಮ ಉಳಿತಾಯದಿಂದ ಅವರು ಜೀವನ ನಿರ್ವಹಣೆಗೆ ಪ್ರಯತ್ನಿಸುತ್ತಾರೆ. “ಆದರೆ ನಮ್ಮಲ್ಲಿ ಹಣವಿಲ್ಲದಿದ್ದಾಗ ನಾವು ಮೊಹ್ಸಿನ್‌ನನ್ನು ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯವಾಗುವುದಿಲ್ಲ” ಎನ್ನುತ್ತಾರೆ.
ರಖ್-ಎ-ಅರ್ತ್ ಕೇವಲ ಒಂದು ಉಪ-ಆರೋಗ್ಯ ಕೇಂದ್ರವನ್ನು ಹೊಂದಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆ ಮತ್ತು ಮಕ್ಕಳ ಪ್ರತಿರಕ್ಷಣೆ (immunisation) ಹಾಗೂ ಪ್ರಸವಪೂರ್ವ ತಪಾಸಣೆಗಳನ್ನು ಮಾತ್ರ ಇದು ನಿರ್ವಹಿಸುತ್ತದೆ ಎಂಬುದಾಗಿ ಪುನರ್ವಸತಿ ಕಾಲೋನಿಯು ನೆಲೆಗೊಂಡಿರುವ ಶ್ರೀನಗರದ ಬಟಮಲು ಪ್ರಾಂತ್ಯದ ವಲಯ ವೈದ್ಯಾಧಿಕಾರಿ, ಡಾ.ಸಮೀನಾ ಜಾನ್ ಹೇಳುತ್ತಾರೆ.
ರಖ್-ಎ-ಆರ್ಥ್‌ನಲ್ಲಿ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ ಮತ್ತು "ಕಟ್ಟಡವು ಪೂರ್ಣಗೊಂಡಿದ್ದು, ಮತ್ತು ಶೀಘ್ರದಲ್ಲೇ ಕಾರ್ಯನಿರ್ವಹಿಸಬೇಕು" ಎನ್ನುತ್ತಾರೆ LAWDಯ ತುಫೈಲ್ ಮಟ್ಟೂ. “ಸದ್ಯಕ್ಕೆ, ಉಪ ಆರೋಗ್ಯ ಕೇಂದ್ರದಲ್ಲಿ ಕೇವಲ ಒಂದು ಸಣ್ಣ ಔಷಧಾಲಯ ಮಾತ್ರ ಕಾರ್ಯನಿರ್ವಹಿಸುತ್ತಿದೆ. ದಿನಕ್ಕೆ ಕೆಲವು ಗಂಟೆಗಳ ಕಾಲ ವೈದ್ಯರು ಇಲ್ಲಿಗೆ ಬರುತ್ತಾರೆ. ಹೀಗಾಗಿ ತುರ್ತು ಸಂದರ್ಭಗಳಲ್ಲಿ ಜನರು 15 ಕಿಲೋಮೀಟರ್ ದೂರದ ಪಂಥ ಚೌಕ್‌ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಿದೆಸ ಅಥವಾ ಅಖೂನ್ ಕುಟುಂಬದವರಂತೆ ಸೌರಾದ ಆಸ್ಪತ್ರೆಗೆ ಹೋಗಬೇಕು.
ಇವರು ಈ ಕಾಲೋನಿಗೆ ಹೋದಾಗಿನಿಂದ ಮುಬೀನಾ ಅವರ ಸ್ವಂತ ಆರೋಗ್ಯವು ಹದಗೆಟ್ಟಿದ್ದು, ಉದ್ವೇಗದ ಎದೆ ಬಡಿತದಿಂದ ಬಳಲುತ್ತಿದ್ದಾರೆ. "ನನ್ನ ಮಗು ಅನಾರೋಗ್ಯಕ್ಕೀಡಾಗಿರುವ ಕಾರಣ ನಾನು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಅವನ ಕೈಗಳು, ಪಾದಗಳು ಹಾಗೂ ಮೆದುಳು ಕೆಲಸ ಮಾಡುವುದಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ಅವನನ್ನು ನನ್ನ ಮಡಿಲಲ್ಲಿರಿಸಿಕೊಳ್ಳುತ್ತೇನೆ. ದಿನದ ಅಂತ್ಯದ ವೇಳೆಗೆ, ನನ್ನ ದೇಹವು ಅಪಾರ ನೋವಿನಿಂದ ಕೂಡಿರುತ್ತದೆ. ನಾನು ಅವನ ಬಗ್ಗೆ ಚಿಂತಿಸುತ್ತಾ, ಅವನ ಕಾಳಜಿವಹಿಸುತ್ತಾ ಅನಾರೋಗ್ಯಕ್ಕೆ ಒಳಗಾಗಿದ್ದೇನೆ. ವೈದ್ಯರ ಬಳಿ ಹೋದರೆ ಚಿಕಿತ್ಸೆ ಪಡೆಯಿರಿ, ಹೆಚ್ಚಿನ ಪರೀಕ್ಷೆ ಮಾಡಿಸಿಕೊಳ್ಳಿ ಎನ್ನುತ್ತಾರೆ. ನನ್ನ ಚಿಕಿತ್ಸೆಗಾಗಿ ಪಾವತಿಸಲು ನನಗೆ 10 ರೂ.ಗಳ ಆದಾಯವೂ ಇಲ್ಲ. .
ಆಕೆಯ ಮಗನ ಔಷಧಿಗಳ ಬೆಲೆ ಪ್ರತಿ ಬ್ಯಾಚ್‌ಗೆ 700 ರೂ.ಗಳಿದ್ದು, ಸುಮಾರು 10 ದಿನಗಳವರೆಗೆ ಸಾಲುತ್ತದೆಯಷ್ಟೇ. ಮರುಕಳಿಸುವ ಜ್ವರ, ಹುಣ್ಣು ಮತ್ತು ದದ್ದುಗಳ ಕಾಳಜಿವಹಿಸಲು ಆತನನ್ನು ಪ್ರತಿ ತಿಂಗಳು ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾದ ಲೇಬರ್ ಕಾರ್ಡ್‌ನಲ್ಲಿ ಚಿಕಿತ್ಸೆಗಳು ಉಚಿತವಾಗಿ ದೊರೆಯತಕ್ಕದ್ದು. ಇದರಿಂದ ಅರ್ಷಿದ್ ಅವರು ತಮ್ಮ ಅವಲಂಬಿತರಿಗೆ ಒಂದು ಲಕ್ಷ ರೂ.ವರೆಗೆ ವೈದ್ಯಕೀಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಆದರೆ ಕಾರ್ಡ್ನ ಮಾನ್ಯತೆಗಾಗಿ, ಅವರು ಸಣ್ಣ ವಾರ್ಷಿಕ ಶುಲ್ಕವನ್ನು ಪಾವತಿಸಬೇಕಿದ್ದು, ನವೀಕರಣದ ಸಮಯದಲ್ಲಿ 90 ದಿನಗಳ ಉದ್ಯೋಗದ ಪ್ರಮಾಣಪತ್ರದ ಅಗತ್ಯವಿದೆ. ಇದೆಲ್ಲವನ್ನೂ ಅರ್ಷಿದ್ ನಿಯಮಿತವಾಗಿ ನಿರ್ವಹಿಸುತ್ತಿಲ್ಲ.
“ಮೊಹ್ಸಿನ್‌ಗೆ ಇತರ ಮಕ್ಕಳಂತೆ ನಡೆಯಲು, ಶಾಲೆಗೆ ಹೋಗಲು, ಆಟವಾಡಲು ಅಥವಾ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ" ಎಂದು ಜಿ.ಬಿ. ಪಂತ್ ಆಸ್ಪತ್ರೆಯ ಡಾ. ಮುದಾಸಿರ್ ರಾಥರ್ ಹೇಳುತ್ತಾರೆ. ವೈದ್ಯರು ಸೋಂಕುಗಳು, ಮೂರ್ಛೆ ಮತ್ತು ಇತರ ಆರೋಗ್ಯ ಸಮಸ್ಯೆಗಳ ಆರೈಕೆಗಾಗಿ ಕೇವಲ ಸಹಾಯಕ ಚಿಕಿತ್ಸೆಯನ್ನು ಮತ್ತು ಸ್ಪಾಸ್ಟಿಸಿಟಿಗಾಗಿ ಫಿಸಿಯೊಥೆರಪಿಯನ್ನು ಒದಗಿಸಬಹುದು. "ಸೆರೆಬ್ರಲ್ ಪಾಲ್ಸಿ ಗುಣಪಡಿಸಲಾಗದ ನರ ಸಂಬಂಧಿತ ಕಾಯಿಲೆಯಾಗಿದೆ" ಎಂದು ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞ ಡಾ. ಆಸಿಯಾ ಅಂಜುಮ್ ವಿವರಿಸುತ್ತಾರೆ. “ನವಜಾತ ಶಿಶುವಿನ ಕಾಮಾಲೆಗೆ ಜನನದ ಸಮಯದಲ್ಲಿ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಈ ಸ್ಥಿತಿಗೆ ಕಾರಣವಾಗಬಹುದು. ಇದು ಮೆದುಳಿನ ಹಾನಿ, ಚಲನೆಯ ಅಸ್ವಸ್ಥತೆ, ಸ್ಪಾಸ್ಟಿಸಿಟಿ, ಬುದ್ಧಿಮಾಂದ್ಯತೆಯನ್ನು ಉಂಟುಮಾಡಬಹುದು.”
ಕೆಲಸದ ಹುಡುಕಾಟ ಮತ್ತು ವೈದ್ಯರುಗಳ ನಡುವೆ ಹೆಣಗಾಡುತ್ತಿರುವ ಮುಬೀನಾ ಮತ್ತು ಅರ್ಷಿದ್ ತಮ್ಮ ಹೆಚ್ಚಿನ ಸಮಯ ಮತ್ತು ಹಣವನ್ನು ಮೊಹ್ಸಿನ್‌ನ ಕಾಳಜಿವಹಿಸಲು ಮತ್ತು ತಮ್ಮ ಕಿರಿಯ ಮಗನ ಪಾಲನೆಗೆ ಖರ್ಚು ಮಾಡುತ್ತಾರೆ. ಸುಮಾರು ಏಳು ವರ್ಷ ವಯಸ್ಸಿನ ಅಲಿ, “ಅವಳು ಬಯಾವನ್ನು [ಸಹೋದರ] ಸದಾ ತನ್ನ ಮಡಿಲಲ್ಲಿರಿಸಿಳ್ಳುತ್ತಾಳೆ. ಅವಳು ಎಂದಿಗೂ ನನ್ನನ್ನು ಈ ರೀತಿ ಮಡಿಲಲ್ಲಿರಿಸಿಕೊಳ್ಳುವುದಿಲ್ಲ.” ಎಂದು ದೂರುತ್ತಾನೆ. ”ಅವನಿಗೆ ತನ್ನ ಸಹೋದರನೊಂದಿಗಿನ ಒಡನಾಟವು ಕಷ್ಟವೆನಿಸುತ್ತಿದೆ. ಏಕೆಂದರೆ "ಅವನು ನನ್ನೊಂದಿಗೆ ಮಾತನಾಡುವುದಿಲ್ಲ ಅಥವಾ ನನ್ನೊಂದಿಗೆ ಆಟವಾಡುವುದಿಲ್ಲ, ನಾನು ಅವನಿಗೆ ಸಹಾಯ ಮಾಡಲು ತುಂಬಾ ಚಿಕ್ಕವನು."
ಅಲಿ ಶಾಲೆಗೆ ಹೋಗುವುದಿಲ್ಲ. "ನನ್ನ ತಂದೆಯ ಬಳಿ ಹಣವಿಲ್ಲ, ನಾನು ಹೇಗೆ ಹೋಗಲಿ?" ಎಂದು ಕೇಳುತ್ತಾನೆ. ಅಲ್ಲದೆ, ರಖ್-ಎ-ಆರ್ಥ್‌ನಲ್ಲಿ ಯಾವುದೇ ಶಾಲೆಗಳಿಲ್ಲ. LAWDA ಭರವಸೆ ನೀಡಿದ ಒಂದು ಶಾಲೆಯು ಅಪೂರ್ಣವಾಗಿಯೇ ಉಳಿದಿದೆ. ಹತ್ತಿರದ ಸರ್ಕಾರಿ ಶಾಲೆಯು ಎರಡು ಕಿಲೋಮೀಟರ್ ದೂರದಲ್ಲಿರುವ ಬೆಮಿನಾದಲ್ಲಿದೆಯಾದರೂ, ಅದು ಹಿರಿಯ ಮಕ್ಕಳ ಶಾಲೆ.
"ರಖ್-ಎ-ಅರ್ತ್‌ಗೆ ಸ್ಥಳಾಂತರಗೊಂಡ ಆರು ತಿಂಗಳೊಳಗೆ,” “ನಾವು ಇಲ್ಲಿ ಹೆಚ್ಚು ಕಾಲ ವಾಸಿಸಲು ಸಾಧ್ಯವಾಗುವುದಿಲ್ಲ ಎಂದು ನಮಗೆ ತಿಳಿದಿತ್ತು" ಎಂದು ಮುಬಿನಾ ಹೇಳುತ್ತಾರೆ. ಇಲ್ಲಿನ ಸ್ಥಿತಿ ನಿಜಕ್ಕೂ ಕೆಟ್ಟದಾಗಿದೆ. ಮೊಹ್ಸಿನ್ ಅನ್ನು ಆಸ್ಪತ್ರೆಗೆ ಕರೆದೊಯ್ಯಲು ನಮಗೆ ಸಾರಿಗೆಯ ಆಯ್ಕೆಗಳಿಲ್ಲ. ಮತ್ತು ನಮ್ಮ ಬಳಿ [ಅದಕ್ಕಾಗಿ] ಹಣವಿಲ್ಲದಿದ್ದಾಗ, ನಾವು ದೊಡ್ಡ ಸಮಸ್ಯೆಯನ್ನು ಎದುರಿಸುತ್ತೇವೆ.”
"ಇಲ್ಲಿ ಯಾವುದೇ ಕೆಲಸವಿಲ್ಲ." “ನಾವೇನು ಮಾಡಬೇಕು? ನಾನು ಕೆಲಸ ಹುಡುಕುತ್ತೇನೆ, ಅಥವಾ ಸಾಲ ತೆಗೆದುಕೊಳ್ಳುತ್ತೇನೆ. ನಮಗೆ ಯಾವುದೇ ಆಯ್ಕೆಗಳಿಲ್ಲ.” ಎನ್ನುತ್ತಾರೆ ಅರ್ಷಿದ್.
ಅನುವಾದ: ಶೈಲಜಾ ಜಿ.ಪಿ