ಈ ಮಹಾಮಾರಿಯು ನಮ್ಮನ್ನು ನಾವಿರುವ ವಲಯಗಳು ಮತ್ತು ಸಮೂಹಗಳಿಗೆ ಸೀಮಿತಗೊಳಿಸಿದೆ. ನಮಗೆ ಸೂಚಿಸಲಾಗಿರುವ ದೈಹಿಕ ಅಂತರವು ಜನರಲ್ಲಿ ದೊಡ್ಡ ಸಾಮಾಜಿಕ ಅಂತರವನ್ನು ಸೃಷ್ಟಿಸಿದೆ. ನಾವು ಪರಸ್ಪರ ಮುಟ್ಟುವುದಕ್ಕೆ ಮತ್ತು ಸಂಪರ್ಕಿಸುವುದಕ್ಕೆ ಹೆದರುತ್ತೇವೆ. ಎಲ್ಲಾ ಮಾಧ್ಯಮಗಳಲ್ಲಿ, ಸಾವಿರಾರು ವಲಸೆ ಕಾರ್ಮಿಕರು ಕಾಯುತ್ತಿರುವ ಮತ್ತು ಹಸಿವಿನಿಂದ ಬೇಸತ್ತು ಗ್ರಾಮೀಣ ಭಾರತದ ಪ್ರದೇಶದಲ್ಲಿರುವ ತಮ್ಮ ಮನೆಗಳನ್ನು ತಲುಪಲು ಹತಾಶರಾಗಿ ನೂರಾರು ಕಿಲೋಮೀಟರ್ ನಡೆದು ಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಂದು ಪೈಸೆಯೂ ಇಲ್ಲದೆ, ಲಾಠಿ ಚಾರ್ಜ್ಗಳು ಮತ್ತು ಬ್ಯಾರಿಕೇಡ್ಗಳನ್ನು ಎದುರಿಸುತ್ತಿರುವ ಅವರ ಸ್ಥಿತಿಯನ್ನು ನೋಡಿದಾಗ, ಮಾನವೀಯತೆ ಎಲ್ಲಿಯೂ ಉಳಿದಿಲ್ಲವೆನಿಸುತ್ತದೆ.
ತದನಂತರ ಒಬ್ಬ ವ್ಯಕ್ತಿಯು ತನ್ನ ವಯಸ್ಸಾಗಿರುವ ಚಿಕ್ಕಮ್ಮನನ್ನು ಹೆದ್ದಾರಿಯ ಮಧ್ಯದಲ್ಲಿ ತನ್ನ ತೋಳುಗಳಲ್ಲಿ ಹೊತ್ತುಕೊಂಡು, ಮೇ ತಿಂಗಳ ಬಿಸಿಲಿನಲ್ಲಿ ನಡೆಯುತ್ತಾ ಅವಳನ್ನು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ತನ್ನ ಮನೆಗೆ ಕರೆದುಕೊಂಡು ಹೋಗುವುದನ್ನು ನೀವು ನೋಡಿರುತ್ತೀರಿ. ಅವನು ಮಾನವನೋ ಅಥವಾ ದೇವಸ್ವರೂಪಿಯೋ? ಸಾಮಾನ್ಯ ಸಂದರ್ಭದಲ್ಲಿಯೂ ಜನರು ಮೇಳಗಳಲ್ಲಿ, ವೃದ್ಧಾಶ್ರಮಗಳಲ್ಲಿ ಅಥವಾ ವೃಂದಾವನದಲ್ಲಿ ವೃದ್ಧರನ್ನು ಕೈಬಿಡುತ್ತಾರೆ. ಒಂದೆಡೆಗೆ ಮಕ್ಕಳು ವೃತ್ತಿ ಮತ್ತು ಜೀವನವನ್ನು ಕಂಡುಕೊಳ್ಳಲು ದೂರ ಹೋಗುವುದರಿಂದಾಗಿ ಶ್ರೀಮಂತ ವಯಸ್ಸಾದ ಪೋಷಕರು ಏಕಾಂಗಿಯಾಗಿ ಉಳಿಯುವುದು ಸಹಜ. ಆದರೆ ಈ ವ್ಯಕ್ತಿಯನ್ನು ಸಾಮಾನ್ಯ ಹುಲುಮಾನವನಿಗೆ ಹೋಲಿಸಿದರೆ ಅಷ್ಟು ಸೂಕ್ತವೆನಿಸುವುದಿಲ್ಲ. ಅವನು ಬಡತನ ಮತ್ತು ಅವಮಾನದ ನಡುವೆಯೂ ಮಾನವೀಯತೆ ಜೀವಂತವಿದೆ ಎಂದು ತೋರಿಸುವ ದೇವಸ್ವರೂಪಿಯಾಗಿದ್ದಾನೆ.
ಸೂಚನೆ : ವಲಸೆ ಕಾರ್ಮಿಕನಾಗಿರುವ ವಿಶ್ವನಾಥ್ ಶಿಂಧೆ, ತನ್ನ ಚಿಕ್ಕಮ್ಮ ಬಚೇಲಾ ಬಾಯಿ ಅವರನ್ನು ಮುಂಬೈ-ನಾಸಿಕ್ ಹೆದ್ದಾರಿಯಲ್ಲಿ ಹೊತ್ತೊಯ್ಯುವ ಮೂಲಕ ನವಿ ಮುಂಬೈನಿಂದ ವಿದರ್ಭದ ಅಕೋಲಾಕ್ಕೆ ಪ್ರಯಾಣಿಸುತ್ತಿದ್ದರು. ಚಿತ್ರ ಕಲಾವಿದರಾದ, ಲಬಾನಿ ಜಂಗಿ, ಈ ದೃಶ್ಯವನ್ನು ರವೀಶ್ ಕುಮಾರ್ ಪ್ರೈಮ್ ಟೈಮ್ ನಲ್ಲಿ (ಎನ್ಡಿಟಿವಿ ಇಂಡಿಯಾ), ಮೇ 4, 2020ರಂದು ಪ್ರಸಾರವಾದ ಸೋಹಿತ್ ಮಿಶ್ರಾ ಅವರ ವರದಿಯಲ್ಲಿ ನೋಡಿದರು. ನಂತರ ಈ ಕುರಿತು ಲಬಾನಿ ತನ್ನ ಮಾತುಗಳಲ್ಲಿ ಅವರ ಭಾವನೆಗಳನ್ನು ವ್ಯಕ್ತಪಡಿಸಿದ್ದು ಅದನ್ನು ಸ್ಮಿತಾ ಖಾಟೋರ್ ಕೇಳಿಸಿಕೊಂಡು ಇಂಗ್ಲಿಷಿಗೆ ಅನುವಾದಿಸಿದ್ದಾರೆ.
ಅನುವಾದ - ಎನ್ . ಮಂಜುನಾಥ್