ಲಾಕ್‌ಡೌನ್‌ ಕಾರಣದಿಂದಾಗಿ ಸತ್ತಾರ್‌, ಬೆಂಗಳೂರನ್ನು ತೊರೆದು ನಾಲ್ಕು ತಿಂಗಳಿಗೂ ಹೆಚ್ಚಿನ ದಿನಗಳು ಕಳೆದಿವೆ.

“ನಾವು ಹೇಗಾದರೂ ಮಾಡಿ, ಇಲ್ಲಿಂದ ತೆರಳುತ್ತೇವೆ. ತಡವಾದರೂ ಸರಿಯೇ” ಎಂದು ಅವರು ತಿಳಿಸಿದ್ದರು. ಇದು, ಅಂಫನ್‌ ಚಂಡಮಾರುತವು ಮೇ ೨೦ರಂದು ಭೂಕುಸಿತವನ್ನು ಉಂಟುಮಾಡುವುದಕ್ಕೂ ಮೊದಲು. ಇಂತಹ ಸಂದರ್ಭದಲ್ಲಿಯೂ, ಅಬ್ದುಲ್ ಹಾಗೂ ಆತನ ಸ್ನೇಹಿತರು ೧,೮೦೦ ಕಿ.ಮೀ.ಗಳ ದೀರ್ಘ ಪ್ರಯಾಣವನ್ನು ಕೈಗೊಂಡು, ಪಶ್ಚಿಮ ಬಂಗಾಳದಲ್ಲಿನ ಪಶ್ಚಿಮ ಮೇದಿನಿಪುರ್‌ ಜಿಲ್ಲೆಯಲ್ಲಿನ ತಮ್ಮ ಚಕ್‌ ಲಚ್ಛೀಪುರ್‌ ಊರಿಗೆ ತೆರಳುವ ಸಾಹಸಕ್ಕೆ ಸಿದ್ಧರಿದ್ದರು.

ಅಬ್ದುಲ್‌ ಅವರು ಮುಂಬೈನಿಂದ ಜನವರಿ ಅಥವಾ ಫೆಬ್ರುವರಿ ತಿಂಗಳಿನಲ್ಲಿ ಬೆಂಗಳೂರಿಗೆ ಬಂದಿದ್ದು, ಕೇವಲ ಕೆಲವು ತಿಂಗಳುಗಳಷ್ಟೇ ಕಳೆದಿವೆ. ಇವರ ಪತ್ನಿ 32ರ ಗೃಹಿಣಿ ಹಮೀದ ಬೇಗಂ, ಹಾಗೂ ಅವರ ಮಕ್ಕಳಾದ 13ರ ವಯಸ್ಸಿನ ಸಲ್ಮಾ ಖಾತುನ್‌, ಮತ್ತು 12ರ ವಯಸ್ಸಿನ ಯಾಸಿರ್‌ ಹಮೀದ್‌, ಘಟಲ್‌ ತಾಲ್ಲೂಕಿನ ತಮ್ಮ ಹಳ್ಳಿಯಲ್ಲಿನ ಮೂರು ಕೋಣೆಗಳ ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ಇವರ ಕುಟುಂಬವು, ೨೪ ಡಿಸ್ಮಿಲ್‌ (ಕಾಲು ಎಕರೆ) ಭೂಮಿಯನ್ನು ಹೊಂದಿದ್ದು, ಅದರಲ್ಲಿ ಇವರ ಸಹೋದರ ಭತ್ತವನ್ನು ಬೆಳೆಯುತ್ತಿದ್ದಾರೆ.

೮ನೇ ತರಗತಿಯ ನಂತರ ಶಾಲೆಯನ್ನು ತೊರೆದ ಅಬ್ದುಲ್‌, ತಮ್ಮ ಹಳ್ಳಿಯಲ್ಲಿನ ಅನೇಕರಂತೆ ಕಸೂತಿಯನ್ನು ಕಲಿಯಲಾರಂಭಿಸಿದರು. ಆಗಿನಿಂದಲೂ, ಅವರು ವಿಭಿನ್ನ ಸ್ಥಳಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ದೆಹಲಿಯಲ್ಲಿ ಕೆಲವು ವರ್ಷಗಳವರೆಗೆ ಕೆಲಸಕ್ಕಿದ್ದ ಅವರು, ನಂತರ ಮುಂಬೈಗೆ ತೆರಳಿದರು. 5-6 ತಿಂಗಳಿಗೊಮ್ಮೆ ಇವರು ಮನೆಗೆ ಭೇಟಿ ನೀಡುತ್ತಿದ್ದರು. “ನಾನು ಯಂತ್ರದಿಂದ ಕಸೂತಿಯನ್ನು ಮಾಡುತ್ತೇನೆ. ಮುಂಬೈಯಲ್ಲಿ ನನಗೆ ಸಾಕಷ್ಟು ಕೆಲಸವು ದೊರೆಯುತ್ತಿರಲಿಲ್ಲವಾದ್ದರಿಂದ ನನ್ನ ಸಂಬಂಧಿಯೊಬ್ಬರ ಜೊತೆಗೂಡಿ ಕೆಲಸದಲ್ಲಿ ತೊಡಗಲು ನಿಶ್ಚಯಿಸಿದೆ.”

ಬೆಂಗಳೂರಿನ ದಕ್ಷಿಣ ಭಾಗದಲ್ಲಿ, 33 ವರ್ಷದ ತನ್ನ ಸಂಬಂಧಿ, ಹಸನುಲ್ಲಾ ಖಾನ್‌ (ಇವರ ಆಧಾರ್‌ ಕಾರ್ಡಿನಲ್ಲಿರುವ ಹೆಸರು) ಪ್ರಾರಂಭಿಸಿರುವ ಚಿಕ್ಕ ಹೊಲಿಗೆ ಉದ್ಯಮದಲ್ಲಿ 40ರ ವಯಸ್ಸಿನ ಅಬ್ದುಲ್‌ ಸಹ ಜೊತೆಯಾದರು. ಐದು ಜನ ಇತರರೊಂದಿಗೆ ಇವರು ಕೋಣೆಯೊಂದನ್ನು ಹಂಚಿಕೊಂಡಿದ್ದರು. ಚಕ್‌ ಲಚ್ಛಿಪುರ್‌ ಊರಿನವರಾದ ಈ ಆರು ಜನರು ಹಸನ್‌ ಅವರ ಅಂಗಡಿಯಲ್ಲಿ ಹೊಲಿಗೆ ಹಾಗೂ ಕಸೂತಿಯ ಕೆಲಸವನ್ನು ನಿರ್ವಹಿಸುತ್ತಿದ್ದರು.

Despite the uncertainty, Abdul Sattar, who does machine embroidery (left) and his cousin Hasanullah Sekh (right) were prepared to brave the 1,800-kilometre journey home to Chak Lachhipur village
PHOTO • Courtesy: Abdul Settar
Despite the uncertainty, Abdul Sattar, who does machine embroidery (left) and his cousin Hasanullah Sekh (right) were prepared to brave the 1,800-kilometre journey home to Chak Lachhipur village
PHOTO • Smitha Tumuluru

ಯಂತ್ರದಿಂದ ಕಸೂತಿಯ ಕೆಲಸವನ್ನು ನಿರ್ವಹಿಸುವ ಅಬ್ದುಲ್‌ ಸತ್ತಾರ್‌ (ಎಡಕ್ಕೆ) ಹಾಗೂ ಆತನ ಸಂಬಂಧಿ, ಹಸನುಲ್ಲಾ ಶೇಖ್‌ (ಬಲಕ್ಕೆ), ಅನಿಶ್ಚಿತತೆಯ ನಡುವೆಯೂ, ೧೮೦೦ ಕಿ.ಮೀ. ದೂರವನ್ನು ಕ್ರಮಿಸಿ, ಚಕ್‌ ಲಚ್ಛಿಪುರ್‌ನಲ್ಲಿರುವ ತಮ್ಮ ಮನೆಗೆ ತೆರಳಲು ಸಿದ್ಧರಿದ್ದರು.

ಹಸನ್‌, ತಮ್ಮ ಪತ್ನಿ ಹಾಗೂ ಆರು ವರ್ಷದ ಮಗನೊಂದಿಗೆ 12 ವರ್ಷದಿಂದಲೂ ಬೆಂಗಳೂರಿನಲ್ಲಿ ನೆಲೆಸಿದ್ದರು. ಇವರು ಹಾಗೂ ಇವರ ತಂಡದವರು ಏಪ್ರಿಲ್‌ ಹಾಗೂ ಮೇ ತಿಂಗಳಿಗಾಗಿ ಎದುರು ನೋಡುತ್ತಿದ್ದರು. ಈ ತಿಂಗಳುಗಳಲ್ಲಿ ಮದುವೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜರುಗುತ್ತವಲ್ಲದೆ, ಇದು, ರಂಜಾ಼ನ್‌  ಋತುವೂ ಹೌದು. ಈ ಋತುವಿನಲ್ಲಿ ಪ್ರತಿಯೊಬ್ಬರಿಗೂ ದಿನಂಪ್ರತಿ ಸುಮಾರು 400-500 ರೂ.ಗಳ ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಪಾದನೆಯಿರುತ್ತಿತ್ತು. ಪ್ರತಿಯೊಬ್ಬರೂ ಮಾಹೆಯಾನ ಕನಿಷ್ಟ 15,000-16,000 ರೂ.ಗಳಷ್ಟು ಸಂಪಾದನೆಯ ನಿರೀಕ್ಷೆಯಲ್ಲಿದ್ದರು. ಖರ್ಚುಗಳೆಲ್ಲವನ್ನೂ ಕಳೆದು ಹಸನ್‌, 25,000 ರೂ.ಗಳನ್ನು ಸಂಪಾದಿಸಬಹುದಿತ್ತು.

ನಮ್ಮಲ್ಲಿ ಬಹುತೇಕರು ಬಾಡಿಗೆ ಹಾಗೂ ಇತರೆ ಖರ್ಚುಗಳನ್ನು 5,000-6,000 ರೂ.ಗಳಲ್ಲಿ ನಿಭಾಯಿಸಿ, ಉಳಿದುದನ್ನು ಮನೆ ಕಳುಹಿಸುತ್ತೇವೆ. “ಮನೆಯನ್ನು ನಾನೇ ನಿಭಾಯಿಸಬೇಕು. ಮಕ್ಕಳ ಸ್ಕೂಲಿನ ಖರ್ಚನ್ನು ಭರಿಸಬೇಕು. ನನ್ನ ತಂದೆ ತಾಯಿಯರ ಆರೋಗ್ಯ ಹಾಗೂ ಇತರೆ ಖರ್ಚುಗಳಿಗೆ ಸಹ ನಾನು ಸ್ವಲ್ಪ ಹಣವನ್ನು ಕೊಡುತ್ತೇನೆ” ಎಂದರು ಅಬ್ದುಲ್‌. (ತಂದೆ ತಾಯಿಯರು ಇವರ ಹಿರಿಯ ಸಹೋದರನೊಂದಿಗೆ ವಾಸಿಸುತ್ತಿದ್ದಾರೆ. ಇವರು ನಾಲ್ಕು ಜನ ಸಹೋದರರಿದ್ದು, ಒಬ್ಬ ಸಹೋದರಿಯಿದ್ದಾಳೆ. ಭತ್ತವನ್ನು ಬೆಳೆಯುವ ಹಿರಿಯ ಅಣ್ಣನು, ಅಂಫನ್‌ ಚಂಡಮಾರುತವು ಅವರ ಜಮೀನನ್ನು ಜಲಾವೃತಗೊಳಿಸಿದ ಕಾರಣ, ಅಪಾರ ನಷ್ಟಕ್ಕೀಡಾದರು.)

ಲಾಕ್‌ಡೌನ್‌ ಘೋಷಣೆಯಾದಾಗ ಅಬ್ದುಲ್‌, ಬೆಂಗಳೂರಿನಲ್ಲಿ ಕೇವಲ ಎರಡು ತಿಂಗಳ ಕೆಲಸವನ್ನು ನಿರ್ವಹಿಸಿದ್ದರಷ್ಟೇ. ಅವರ ಉದ್ಯಮದ ನಿಲುಗಡೆಯಿಂದಾಗಿ, ದಿನಸಿಯು ಬೇಗನೇ ಖಾಲಿಯಾಗತೊಡಗಿತು. “ನಾವು ಹೊರಗೆ ಹೋಗುವಂತಿರಲಿಲ್ಲ. ನಮ್ಮ ಪ್ರದೇಶದಲ್ಲಿನ ಅಂಗಡಿಗಳೆಲ್ಲವೂ ಮುಚ್ಚಿದ್ದವು. ತಿನ್ನಲು ಏನನ್ನಾದರೂ ಖರೀದಿಸಲು ನಾವು ಎಲ್ಲಿಗೆ ಹೋಗಬೇಕೆಂದು ತಿಳಿಯಲಿಲ್ಲ. ಅದೃಷ್ಟವಶಾತ್‌ ನಮಗೆ ಹತ್ತಿರದಲ್ಲಿ ಮಸೀದಿಯಿತ್ತು. ಅಲ್ಲಿನ ಸ್ವಯಂಸೇವಕರು ದಿನಕ್ಕೆ ಎರಡು ಹೊತ್ತಿನ ಊಟವನ್ನು ನಮಗೆ ಪೂರೈಸಲಾರಂಭಿಸಿದರು.”

“ನಮ್ಮ ಹಳ್ಳಿ ಹಾಗೂ ಅದಕ್ಕೆ ಹತ್ತಿರದ ಸ್ಥಳಗಳ ಅನೇಕ ಜನರು ಬೆಂಗಳೂರಿನಲ್ಲಿದ್ದಾರೆ. ಈ ಎಲ್ಲರೂ ಹೊಲಿಗೆ ಅಥವಾ ಕಸೂತಿಯ ಕೆಲಸದಲ್ಲೇ ತೊಡಗಿದ್ದಾರೆ. ಸಾಮಾನ್ಯವಾಗಿ, 5-6 ಜನರು ಒಂದು ಕೋಣೆಯನ್ನು ಹಂಚಿಕೊಳ್ಳುತ್ತಾರೆ. ಇವರಲ್ಲಿ ಅನೇಕರ ಬಳಿ ದವಸ ಧಾನ್ಯಗಳಾಗಲಿ, ಹಣವಾಗಲಿ ಉಳಿದಿಲ್ಲವೆಂಬುದನ್ನು ನಾವು ಕಂಡುಕೊಂಡೆವು. ನಾಗರಿಕ ಸ್ವಯಂಸೇವಕರು (citizen volunteers) ಧಾನ್ಯಗಳ ಸಹಾಯವನ್ನು ಒದಗಿಸಿದರು. ನಮಗೆ ಸರಬರಾಜು ಮಾಡಿದುದನ್ನು ನಮ್ಮ ಗುರುತಿನವರಿಗೆ ಹಂಚಿ, ನಾವೂ ಸಹ ಅಲ್ಪ ಸ್ವಲ್ಪ ಸಹಾಯವನ್ನು ಒದಗಿಸಿದೆವು. ನಾವು ಬೇರೆಯವರಿಗೆ ಸಹಾಯಮಾಡುವಲ್ಲಿ ನಿರತರಾಗಿರುವುದನ್ನು ನೋಡಿದ ಪೊಲೀಸಿನವರು ಬೈಕಿನ ಮೇಲೆ ಪ್ರಯಾಣಿಸಲು ನಮಗೆ ಅವಕಾಶವಿತ್ತರು” ಎಂಬುದಾಗಿ ಅಬ್ದುಲ್‌ ನನಗೆ ಮಾಹಿತಿಯಿತ್ತರು.

After returning home to his wife Hamida and children Salma and Yasir, Abdul worked as a farm labourer to manage expenses
PHOTO • Courtesy: Abdul Settar
After returning home to his wife Hamida and children Salma and Yasir, Abdul worked as a farm labourer to manage expenses
PHOTO • Courtesy: Abdul Settar

ಪತ್ನಿ ಹಮೀದ ಮತ್ತು ಮಕ್ಕಳಾದ ಸಲ್ಮಾ ಮತ್ತು ಯಾಸಿರ್‌ ಅವರಿದ್ದ ಮನೆಗೆ ಹಿಂದುರಿಗಿದ ನಂತರ ಅಬ್ದುಲ್‌, ಖರ್ಚನ್ನು ನಿಭಾಯಿಸಲು ಕೃಷಿ ಕಾರ್ಮಿಕರಾಗಿ ದುಡಿಯತೊಡಗಿದರು.

ಎರಡು ತಿಂಗಳವರೆಗೆ ಯಾವುದೇ ಸಂಪಾದನೆಯಿಲ್ಲದೆ, ಪರಿಸ್ಥಿತಿಯ ಕುರಿತಂತೆ ಅನಿಶ್ಚಿತತೆಯಿದ್ದ ಕಾರಣ,  ಅಬ್ದುಲ್‌, ಹಸನ್‌ ಮತ್ತು ಅವರ ಹಳ್ಳಿಗರು ಚಕ್‌ ಲಚ್ಛಿಪುರಕ್ಕೆ ವಾಪಸ್ಸಾಗುವ ಹತಾಶೆಯಲ್ಲಿದ್ದರು. “ಎಲ್ಲಿಯವರೆಗೂ ನಾವು ಸಹಾಯಕ್ಕಾಗಿ ಇತರರನ್ನು ಅವಲಂಬಿಸಲು ಸಾಧ್ಯ? ವಾಪಸ್ಸು ತೆರಳಿದಲ್ಲಿ, ನಮ್ಮ ಸಂಬಂಧಿಕರೆಲ್ಲರೂ ಅಲ್ಲಿದ್ದಾರೆ. ಕನಿಷ್ಟ ಪಕ್ಷ ನಮ್ಮ ಊಟಕ್ಕಾದರೂ ವ್ಯವಸ್ಥೆಯಾಗುತ್ತದೆ” ಎಂದರು ಹಸನ್‌.

“ನಾವೀಗ ವಾಪಸ್ಸಾಗಲೇ ಬೇಕಿದೆ. ನಮ್ಮ ಕುಟುಂಬದವರೂ ನಾವು ಮರಳುವುದನ್ನೇ ಬಯಸುತ್ತಾರೆ. ಇಲ್ಲಿ ರೋಗಕ್ಕೀಡಾಗಲು ಬಯಸುವುದಿಲ್ಲ. ಈ ಕೊರೊನಾ ಜ್ವರದಿಂದಾಗಿ ನಮ್ಮ ಸಂಬಂಧಿಕರಲ್ಲೊಬ್ಬರು ಮುಂಬೈಯಲ್ಲಿ ಸಾವಿಗೀಡಾದರು. ಅವರ ಕುಟುಂಬ ಹಾಗೂ ಸಂಬಂಧಿಕರು ದೂರದಲ್ಲಿದ್ದರು. ಇಲ್ಲಿ ನಮಗೆ ಅಂತಹ ಸಂದರ್ಭವೊದಗಿದಲ್ಲಿ, ನಮ್ಮ ಕಾಳಜಿ ವಹಿಸಲು ಕುಟುಂಬದವರಾರೂ ಇಲ್ಲ. ನಾವು ಮನಸ್ಸು ಮಾಡಿಯಾಗಿದೆ” ಎಂದರು ಅಬ್ದುಲ್.

ಆದರೆ ಮನೆಗೆ ಮರಳುವುದು ಪ್ರಯಾಸಕರವೆನಿಸಿತು. ಅನುಮತಿಗಾಗಿ ಮನವಿ ಸಲ್ಲಿಸಬೇಕೆಂಬ ಬಗ್ಗೆ ಬಹಳಷ್ಟು ಗೊಂದಲಗಳಿದ್ದವು. ಪಶ್ಚಿಮ ಬಂಗಾಳವನ್ನು ಪ್ರವೇಶಿಸಲು ಅಪ್ಪಣೆ ಚೀಟಿ ಪಡೆಯಬೇಕೆ ಹಾಗೂ ರೈಲು ಯಾವಾಗ ಅಲ್ಲಿಗೆ ತೆರಳುತ್ತದೆ ಎಂಬ ಬಗ್ಗೆ ಇವರಿಗೆ ಮಾಹಿತಿಯಿರಲಿಲ್ಲ. ಅಂತರ್ಜಾಲದ ಒದಗಣೆಯು ಅಲ್ಪ ಪ್ರಮಾಣದಲ್ಲಿದ್ದಾಗ್ಯೂ, ಅಂತಿಮವಾಗಿ ಅವರು ರಾಜ್ಯ ಸರ್ಕಾರದ ಸೇವಾ ಸಿಂಧು ಜಾಲತಾಣದಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕಾದ ಫಾರಂಅನ್ನು ತುಂಬಿದರು. ಎಸ್‌ಎಂಎಸ್‌ನಲ್ಲಿ ರವಾನಿಸಲಾಗುವ ಇದರ ಅನುಮೋದನೆಗಾಗಿ ಅವರು 10 ದಿನಗಳವರೆಗೂ ಕಾದರು. ಪ್ರಯಾಣದ ಬೇಡಿಕೆಯನ್ನು ಸಲ್ಲಿಸಲು ಅಬ್ದುಲ್‌ ಅವರು ಹತ್ತಿರದ ಪೊಲೀಸ್‌ ಠಾಣೆಗೆ ಸಹ ಭೇಟಿಯಿತ್ತರು.

“ನಾನು ಉಪವಾಸದಲ್ಲಿದ್ದು, ಈ ಬಿಸಿಲಿನಲ್ಲಿ ದೀರ್ಘಾವಧಿಯವರೆಗೂ ಪೊಲೀಸ್‌ ಠಾಣೆಯೆದುರಿಗೆ ಕಾಯುವುದು ಬಹಳ ತ್ರಾಸದಾಯಕದವೆಂಬುದಾಗಿ” ಅವರು ನನಗೆ ತಿಳಿಸಿದ್ದರು. ರೈಲುಗಳನ್ನು ಕುರಿತ ಅನಿಶ್ಚಿತತೆ ಹಾಗೂ ಆಸನವನ್ನು ಕಾಯ್ದಿರಿಸುವ ವೇಳೆಗೆ ಅನುಮೋದಿಸಲ್ಪಟ್ಟ ಅಪ್ಪಣೆ ಚೀಟಿಯ ಅವಧಿಯು ಮುಗಿದುಹೋಗಬಹುದೆಂಬ ಭಯದಿಂದಾಗಿ, ಇವರು ಇತರೆ ಅವಕಾಶಗಳನ್ನು ಹುಡುಕತೊಡಗಿದರು. ಖಾಸಗಿ ವ್ಯಾನುಗಳಲ್ಲಿ 5 ಜನಕ್ಕೆ 70,000  ರೂ.ಗಳನ್ನು ನೀಡಬೇಕಿತ್ತು. ಒಬ್ಬ ಬಸ್‌ ಸಂಚಾಲಕನು ಪ್ರಯಾಣಕ್ಕೆ 2.7  ಲಕ್ಷವನ್ನು ಪಾವತಿಸುವಂತೆ ಕೇಳಿದನು.

Farmers in Chak Lachhipur village, including Abdul's eldest brother, suffered huge losses due to Cyclone Amphan
PHOTO • Courtesy: Abdul Settar

ಅಂಫನ್‌ ಚಂಡಮಾರುತದಿಂದಾಗಿ ಅಬ್ದುಲ್‌ ಅವರ ಹಿರಿಯ ಸಹೋದರನೂ ಸೇರಿದಂತೆ ಛಕ್‌ ಲಚ್ಛಿಪುರ್‌ ಹಳ್ಳಿಯ ರೈತರು ಅಪಾರ ನಷ್ಟಕ್ಕೀಡಾದರು.

ಸಾಕಷ್ಟು ಪ್ರಯತ್ನದ ನಂತರ, ಕೊನೆಗೂ ಅಬ್ದುಲ್‌ ಹಾಗೂ ಹಸನ್‌, ಬಸ್ಸೊಂದನ್ನು ವ್ಯವಸ್ಥೆ ಮಾಡಿದರು (ಮೇಲ್ಕಂಡ ಮುಖಪುಟ ಚಿತ್ರವನ್ನು ನೋಡಿ) ”ನಮ್ಮ ಹಳ್ಳಿಯಲ್ಲೊಬ್ಬರು ಬಸ್ಸಿನ ಸೇವೆಯನ್ನು ಒದಗಿಸುತ್ತಾರೆ.ನಮಗೆ ಬಸ್ಸನ್ನು ಕಳುಹಿಸುವಂತೆ ಅವರ ಮನವೊಲಿಸಲು ನಾವು ಬಹಳ ಕಷ್ಟಪಡಬೇಕಾಯಿತು. ಬಂಗಾಳದಿಂದ ನಮ್ಮೆಲ್ಲ ಅಪ್ಪಣೆ ಚೀಟಿ ಹಾಗೂ ಅನುಮತಿಗೆ ಅವರು ವ್ಯವಸ್ಥೆ ಮಾಡಿದರು. ನಾವು 30 ಜನರ ಸಮೂಹವನ್ನು ಒಟ್ಟುಗೂಡಿಸಿದೆವು. ಈ ಎಲ್ಲರೂ ಒಂದೇ ಹಳ್ಳಿಗೆ ಸೇರಿದವರಾಗಿದ್ದು, ಕಸೂತಿ ಮತ್ತು ಹೊಲಿಗೆಯ ಉದ್ಯಮವನ್ನು ನಡೆಸುತ್ತಿದ್ದೇವೆ. ನಾವು 1.5 ಲಕ್ಷ ರೂ.ಗಳನ್ನು ಪಾವತಿಸುತ್ತಿದ್ದೇವೆ. ಕೆಲವು ಹುಡುಗರು ಒಡವೆ ಹಾಗೂ ಭೂಮಿಯನ್ನು ಇದಕ್ಕಾಗಿ ಅಡವಿಡಬೇಕಾಯಿತು. ನಾಳೆ ಮುಂಜಾನೆ ಬಸ್ಸು ಬರುವುದರಲ್ಲಿದ್ದು, ಪ್ರಯಾಣ ಹೊರಡುತ್ತೇವೆ” ಎಂಬುದಾಗಿ ಮೇ ತಿಂಗಳಿನಲ್ಲಿ ಹಸನ್‌ ನಮಗೆ ತಿಳಿಸಿದ್ದರು.

ಆಂಧ್ರ ಪ್ರದೇಶದ ಸರಹದ್ದಿನಲ್ಲಿ ವಿಳಂಬವಾದ ಕಾರಣ, ಇವರ ಯೋಜನೆಗೆ ತಕ್ಕಂತೆ ಮರುದಿನ ಬಸ್ಸು ಹೊರಡಲಿಲ್ಲ. ಕೊನೆಗೂ ಅವರು ಒಂದು ದಿನ ತಡವಾಗಿ, ಅಂದರೆ ಅಂಫನ್‌ ಚಂಡಮಾರುತವು ಪಶ್ಚಿಮ ಬಂಗಾಳದಲ್ಲಿ ಭೂ ಕುಸಿತವನ್ನುಂಟುಮಾಡಿದ ಮೇ 20ರಂದು ಪ್ರಯಾಣ ಬೆಳೆಸಿದರು. ಅನೇಕ ತಪಾಸಣಾ ಜಾಗಗಳಲ್ಲಿನ ಹಲವಾರು ವಿಳಂಬದ ನಂತರ ಮೇ 23ರಂದು ಬಸ್ಸು, ಚಕ್‌ ಲಚ್ಛಿಪುರ್‌ ತಲುಪಿತು. ಮನೆಯನ್ನು ತಲುಪಿದ ನಂತರ ಅಬ್ದುಲ್‌ ಮತ್ತು ಇತರರು ತಮ್ಮ ಚಿಕ್ಕ ಮನೆಗಳಲ್ಲಿ ಎರಡು ವಾರಗಳವರೆಗೆ ಪ್ರತ್ಯೇಕ ವಾಸದಲ್ಲಿದ್ದರು.

ಊರಿಗೆ ತೆರಳಿದಾಗ, ಇವರ ಕುಟುಂಬವು ಬೆಂಗಳೂರಿನ ತಮ್ಮ ಮನೆಯನ್ನು ಖಾಲಿ ಮಾಡಿದರಾದರೂ, ಹೊಲಿಗೆ ಯಂತ್ರದೊಂದಿಗೆ ಅಂಗಡಿಯಿದ್ದ ಜಾಗವನ್ನು ಮತ್ತು ಕೆಲಸಗಾರರು ವಾಸಿಸುತ್ತಿದ್ದ ಕೊಠಡಿಯನ್ನು ಹಾಗೆಯೇ ಉಳಿಸಿಕೊಂಡರು. ಮಾಲೀಕರು ಎರಡು ತಿಂಗಳ ಮುಂಗಡ 10,000 ರೂ.ಗಳನ್ನು ಏಪ್ರಿಲ್‌ ಮತ್ತು ಮೇ ತಿಂಗಳ ಬಾಡಿಗೆಗೆ ವಜಾ ಮಾಡಿಕೊಂಡು, ಮೇ ತಿಂಗಳ ನಂತರದ ಬಾಡಿಗೆಗೆ ಇವರು ವಾಪಸ್ಸಾಗುವವರೆಗೂ ಕಾಯುವುದಾಗಿ ತಿಳಿಸಿದರು.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಹಸನ್‌, ಬೆಂಗಳೂರಿಗೆ ಹಿಂದಿರುಗಿದರು. ಲಾಕ್‌ಡೌನ್‌ ನಿರ್ಬಂಧವಿಲ್ಲದಾಗ್ಯೂ, ಉದ್ಯಮವು ಚೇತರಿಸಿಕೊಳ್ಳಲಿಲ್ಲ. “ನಾವು ಅಂಗಡಿಯನ್ನು ತೆರೆದರೂ ಸಹ ಇನ್ನೂ ಕೆಲವು ದಿನಗಳವರೆಗೂ ಕಸೂತಿ  ಅಥವಾ ದೊಡ್ಡ ಹೊಲಿಗೆ ಕೆಲಸಗಳಿಗಾಗಿ ಯಾರಾದರೂ ಬರಬಹುದೆಂಬ ನಿರೀಕ್ಷೆಯಿರಲಿಲ್ಲ. ಸ್ವಲ್ಪ ಕಾಲದವರೆಗೆ ಉದ್ಯಮದ ಚೇತರಿಕೆಯ ಭರವಸೆಯಿರಲಿಲ್ಲ. ನಮ್ಮದು ಚಿಕ್ಕ ಉದ್ಯಮ. ದಿನಂಪ್ರತಿ ಹಣವು ದೊರೆಯದಿದ್ದಲ್ಲಿ, ನಗರದಲ್ಲಿ ವಾಸಿಸುವುದು ಸಾದ್ಯವಿಲ್ಲ” ಎಂದು ಅವರು ಅಲವತ್ತುಕೊಂಡರು.

ಅಬ್ದುಲ್‌ ಈಗಲೂ ತಮ್ಮ ಹಳ್ಳಿಯಲ್ಲೇ ಇದ್ದಾರೆ. ಇಲ್ಲಿ ಅವರಿಗೆ 300 ರೂ.ಗಳ ದಿನಗೂಲಿಗೆ 25 ದಿನಗಳ ಭತ್ತದ ಗದ್ದೆಯ ಕೆಲಸವು ದೊರೆಯಿತು. ತಮ್ಮ ಉಳಿತಾಯ ಹಾಗೂ ಈ ಕೆಲವು ದಿನಗಳ ಕೃಷಿಯ ಕೂಲಿ ಕೆಲಸದಲ್ಲಿನ ಸಂಪಾದನೆಯಿಂದ ಮನೆಯ ಖರ್ಚನ್ನು ನಿಭಾಯಿಸುತ್ತಿರುವುದಾಗಿ ಅವರು ತಿಳಿಸಿದರು. “ಈಗ ಹಳ್ಳಿಯಲ್ಲಿ ಯಾವ ಕೆಲಸವೂ ದೊರೆಯುತ್ತಿಲ್ಲ. ನಾವು ನಮ್ಮ ಮೊದಲ ಜಾಗವನ್ನು ತೊರೆದಿದ್ದೇ ಈ ಕಾರಣದಿಂದ. ನಾವು ವಾಪಸ್ಸಾಗಬೇಕು (ಬೆಂಗಳೂರಿಗೆ) ಎಂದು ಅವರು ತಿಳಿಸಿದರು.”

ಆದರೆ ಬೆಂಗಳೂರಿನಲ್ಲಿ ಕೋವಿಡ್‌-19 ಪ್ರಕರಣಗಳು ಏರುಗತಿಯಲ್ಲಿರುವ ಕಾರಣ, ಅಬ್ದುಲ್‌ ಅಧೀರರಾಗಿದ್ದಾರೆ. “ಹಸನ್‌ ಭಾಯಿಯ ಸೂಚನೆಯ ಅನುಸಾರ ನಾನು ಪ್ರಯಾಣವನ್ನು ನಿರ್ಧರಿಸುತ್ತೇನೆ. ಸಂಪಾದನೆಯಿಲ್ಲದಂತೆ ನಾವು ಹೀಗೆ ಮುಂದುವರಿಯುವುದು ಸಾಧ್ಯವಾಗದು. ಬಹಳ ದಿನ ದೂರವುಳಿಯುವಂತಿಲ್ಲ (ಕಸೂತಿ ಕೆಲಸದಿಂದ). ನಾವು ವಾಪಸ್ಸಾಗುತ್ತೇವೆ. ಪರಿಸ್ಥಿತಿಯು ತಹಬಂದಿಗೆ ಬಂದ ನಂತರ ಮರಳುತ್ತೇವೆ” ಎಂದರು ಹಸನ್‌.

ಕನ್ನಡ ಅನುವಾದ: ಶೈಲಜ ಜಿ. ಪಿ.

Smitha Tumuluru

स्मिता तुमुलुरु, बेंगलुरु की डॉक्यूमेंट्री फ़ोटोग्राफ़र हैं. उन्होंने पूर्व में तमिलनाडु में विकास परियोजनाओं पर लेखन किया है. वह ग्रामीण जीवन की रिपोर्टिंग और उनका दस्तावेज़ीकरण करती हैं.

की अन्य स्टोरी Smitha Tumuluru
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

की अन्य स्टोरी Shailaja G. P.