"ನಮ್ಮ ಬದುಕೇ ಒಂದು ಜೂಜಾಟದಂತಾಗಿದೆ. ಕಳೆದ ಎರಡು ವರ್ಷಗಳಲ್ಲಿ ನಾವು ಹೇಗೆ ಬದುಕನ್ನು ನಿರ್ವಹಿಸಿದ್ದೇವೆ ಎನ್ನುವುದು ದೇವರಿಗೆ ಮಾತ್ರ ಗೊತ್ತು" ಎಂದು ವಿ. ಧರ್ಮ ಹೇಳುತ್ತಾರೆ. "ನನ್ನ 47 ವರ್ಷಗಳ ಜಾನಪದ ಕಲೆಯ ಬದುಕಿನಲ್ಲಿ, ಇದೇ ಮೊದಲ ಬಾರಿಗೆ ಈ ಎರಡು ವರ್ಷಗಳಲ್ಲಿ ನಮಗೆ ಬದುಕಲೂ ಯಾವ ಮಾರ್ಗವೂ ಇದ್ದಿರಲಿಲ್ಲ."

60 ವರ್ಷದ ಧರ್ಮ ಅಮ್ಮ ತಮಿಳುನಾಡಿನ ಮಧುರೈ ನಗರದಲ್ಲಿ ವಾಸಿಸುವ ಟ್ರಾನ್ಸ್ ಮಹಿಳಾ ಜಾನಪದ ಕಲಾವಿದೆ. ಅವರು "ನಮಗೆ ನಿಗದಿತ ಸಂಬಳವೇನೂ ಇರುವುದಿಲ್ಲ", ಎಂದು ಮುಂದುವರೆದು ಹೇಳುತ್ತಾರೆ. ಮತ್ತು ಈ ಕೊರೊನಾ (ಮಹಾಮಾರಿ) ಕಾರಣದಿಂದಾಗಿ ನಾವು ನಮಗೆ ಬದುಕು ನಡೆಸಲು ಇದ್ದ ಕೆಲವು ಅವಕಾಶಗಳನ್ನು ಸಹ ಕಳೆದುಕೊಂಡಿದ್ದೇವೆ."

ಮಧುರೈ ಜಿಲ್ಲೆಯ ಟ್ರಾನ್ಸ್ ಜಾನಪದ ಕಲಾವಿದರ ಪಾಲಿಗೆ ವರ್ಷದ ಮೊದಲ ಆರು ತಿಂಗಳುಗಳು ಬಹಳ ನಿರ್ಣಾಯಕ. ಈ ಅವಧಿಯಲ್ಲಿ, ಹಳ್ಳಿಗಳು ತಮ್ಮ ಊರ ಹಬ್ಬಗಳನ್ನು ಆಯೋಜಿಸುತ್ತವೆ ಮತ್ತು ದೇವಾಲಯಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಆದರೆ ಲಾಕ್ ಡೌನ್ ಸಮಯದಲ್ಲಿ, ದೊಡ್ಡ ಸಾರ್ವಜನಿಕ ಸಭೆಗಳ ಮೇಲಿನ ನಿರ್ಬಂಧಗಳು ರಾಜ್ಯದ ಟ್ರಾನ್ಸ್ ಮಹಿಳಾ ಕಲಾವಿದರ ವೃತ್ತಿ ಜೀವನದ ಮೇಲೆ ತೀವ್ರ ಪರಿಣಾಮ ಬೀರಿವೆ. ಸುಮಾರು 500 ಮಂದಿ ಟ್ರಾನ್ಸ್ ಕಲಾವಿದರಿದ್ದಾರೆ ಎಂದು ಹೇಳುವ ಅಂದಾಜು 60 ವರ್ಷದ ಧರ್ಮ ಅಮ್ಮ (ಜನರು ಸಾಮಾನ್ಯವಾಗಿ ಅವರನ್ನು ಕರೆಯುವ ಹೆಸರು), ಅವರು ನಾಟಕ ಮತ್ತು ಜಾನಪದ ಕಲೆಯ ಟ್ರಾನ್ಸ್ ಮಹಿಳೆಯರ ರಾಜ್ಯ ಸಂಘಟನೆಯ ಕಾರ್ಯದರ್ಶಿಯಾಗಿದ್ದಾರೆ.

ಧರ್ಮ ಅಮ್ಮ ಮಧುರೈ ರೈಲ್ವೆ ನಿಲ್ದಾಣದ ಬಳಿಯ ಬಾಡಿಗೆ ಕೋಣೆಯಲ್ಲಿ, ಹೂವಿನ ಮಾರಾಟಗಾರನಾಗಿರುವ ಸೋದರಳಿಯ ಮತ್ತು ಅವನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಮಧುರೈ ನಗರದಲ್ಲಿ ಹುಟ್ಟಿ ಬೆಳೆದ ಅವರ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದರು. ಈ ಸಮಯದಲ್ಲಿ ಇತರ ಟ್ರಾನ್ಸ್ ವ್ಯಕ್ತಿಗಳು ದೇವಾಲಯಗಳಲ್ಲಿ ಮತ್ತು ಹತ್ತಿರದ ಹಳ್ಳಿಗಳಲ್ಲಿನ ಹಬ್ಬಗಳಲ್ಲಿ ಕಲಾ ಪ್ರದರ್ಶನ ಮಾಡುವುದನ್ನು ಅವರು ನೋಡುತ್ತಿದ್ದರು.

PHOTO • M. Palani Kumar

ಮಧುರೈನಲ್ಲಿರುವ ತನ್ನ ಕೋಣೆಯಲ್ಲಿ ಕುಳಿತಿರುವ ಧರ್ಮ ಅಮ್ಮ: ಈ ಕೊರೊನಾ (ಮಹಾಮಾರಿ) ಕಾರಣದಿಂದಾಗಿ ನಾವು ನಮಗೆ ಬದುಕು ನಡೆಸಲು ಇದ್ದ ಕೆಲವು ಅವಕಾಶಗಳನ್ನು ಸಹ ಕಳೆದುಕೊಂಡಿದ್ದೇವೆ

ಅವರು ತನ್ನ 14ನೇ ವಯಸ್ಸಿನಲ್ಲಿ ಹಾಡಲು ಪ್ರಾರಂಭಿಸಿದರು. "ಶ್ರೀಮಂತರು ತಮ್ಮ ಕುಟುಂಬಗಳಲ್ಲಿ ಯಾರಾದರೂ ತೀರಿಕೊಂಡ ಸಂದರ್ಭದಲ್ಲಿ ಹಾಡಲು ನಮ್ಮನ್ನು ಆಹ್ವಾನಿಸುತ್ತಿದ್ದರು" ಎಂದು ಧರ್ಮ ಅಮ್ಮ ಹೇಳುತ್ತಾರೆ. (ಅವರು ತನ್ನ ಸಮುದಾಯವನ್ನು ಉಲ್ಲೇಖಿಸುವಾಗ ಲಿಂಗಪರಿವರ್ತಿತ ವ್ಯಕ್ತಿಗಳಿಗೆ ತಮಿಳು ಪದ ತಿರುನಂಗೈ ಎನ್ನುವ ಪದ ಬಳಸುತ್ತಾರೆ.) "ನಮಗೆ ಒಪ್ಪಾರಿ (ಸತ್ತವರನ್ನು ಹೊಗಳುವ ಹಾಡು) ಮತ್ತು ಮರಡಿ ಪಾಟು (ಎದೆ ಬಡಿದುಕೊಂಡು ಹಾಡುವುದು) ಹಾಡಿಸಲು ಕರೆಸಲಾಗುತ್ತಿತ್ತು. ಕಾರ್ಯಕ್ರಮ ಮುಗಿದ ನಂತರ ನಮಗೆ ಹಣ ನೀಡುತ್ತಿದ್ದರು. ನಾನು ಜಾನಪದ ಕಲೆಯನ್ನು ಪ್ರವೇಶಿಸಿದ್ದು ಹೀಗೆ."

ಆ ದಿನಗಳಲ್ಲಿ ನಾಲ್ಕು ಟ್ರಾನ್ಸ್ ಕಲಾವಿದರ ಗುಂಪಿಗೆ 101 ರೂ ಸಂಭಾವನೆಯಾಗಿ ನೀಡಲಾಗುತ್ತಿತ್ತು. 2020ರ ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಪ್ರಾರಂಭವಾಗುವ ತನಕವೂ ಧರ್ಮ ಅಮ್ಮ ಕೆಲವೊಮ್ಮೆ ಈ ಕೆಲಸವನ್ನು ಮಾಡುತ್ತಿದ್ದರು, ಆ ವೇಳೆಗೆ ಒಬ್ಬರೇ ಕಾರ್ಯಕ್ರಮವೊಂದಕ್ಕೆ 600 ರೂ. ಸಂಪಾದಿಸುತ್ತಿದ್ದರು.

1970ರ ದಶಕದಲ್ಲಿ, ಅವರು ಹಿರಿಯ ಕಲಾವಿದರಿಂದ ತಾಳಾಟ್ಟು (ಲಾಲಿ ಹಾಡುಗಳು) ಮತ್ತು ನಾಟುಪುರ ಪಾಟ್ಟು (ಜಾನಪದ ಹಾಡುಗಳು) ಹಾಡುವುದನ್ನು ಕಲಿತರು. ಮತ್ತು ಕಾಲಾನಂತರದಲ್ಲಿ, ಪ್ರದರ್ಶನಗಳನ್ನು ನೋಡುವ ಮೂಲಕ ಹೆಜ್ಜೆಗಳನ್ನು ಕಲಿತು, ಅವರು ರಾಜಾ ರಾಣಿ ಆಟ್ಟಂ ಪ್ರದರ್ಶನದಲ್ಲಿ ರಾಣಿಯ ಪಾತ್ರವನ್ನು ಅಭಿನಯಿಸಲು ಪ್ರಾರಂಭಿಸಿದರು, ಇದು ಗ್ರಾಮೀಣ ತಮಿಳುನಾಡಿನ ಹಬ್ಬಗಳಲ್ಲಿ ಪ್ರದರ್ಶಿಸಲಾಗುವ ಸಾಂಪ್ರದಾಯಿಕ ನೃತ್ಯ-ನಾಟಕವಾಗಿದೆ.

"1970ರ ದಶಕದಲ್ಲಿ ಮಧುರೈನಲ್ಲಿ ಎಲ್ಲಾ ನಾಲ್ಕು ಪಾತ್ರಗಳನ್ನು [ಈ ನೃತ್ಯ-ನಾಟಕದ] ರಾಜ, ರಾಣಿಯರು ಮತ್ತು ವಿದೂಷಕನಂತೆ ವೇಷ ಧರಿಸಿದ ಪುರುಷರು ಪ್ರದರ್ಶಿಸುತ್ತಿದ್ದರು" ಎಂದು ಧರ್ಮ ಅಮ್ಮ ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮೊಂದಿಗೆ ಇನ್ನೂ ಮೂವರನ್ನು ಜೊತೆಗೆ ಸೇರಿಸಿಕೊಂಡು ಪೂರ್ಣ ಪ್ರಮಾಣದ ಟ್ರಾನ್ಸ್‌ ಮಹಿಳೆಯರನ್ನು ಒಳಗೊಂಡ ಮೊದಲ ರಾಜಾ ರಾಣಿ ಆಟ್ಟಮ್ ಪ್ರದರ್ಶವನ್ನು ಪ್ರದರ್ಶಿಸಿದ್ದಾಗಿ ಅವರು ಹೇಳುತ್ತಾರೆ.

A selfie of Tharma Amma taken 10 years ago in Chennai. Even applying for a pension is very difficult for trans persons, she says
PHOTO • M. Palani Kumar
A selfie of Tharma Amma taken 10 years ago in Chennai. Even applying for a pension is very difficult for trans persons, she says
PHOTO • M. Palani Kumar

ಚೆನ್ನೈನಲ್ಲಿ 10 ವರ್ಷಗಳ ಹಿಂದೆ ಧರ್ಮ ಅಮ್ಮ ತೆಗೆದುಕೊಂಡ ಸೆಲ್ಫಿ. ಪಿಂಚಣಿಗೆ ಅರ್ಜಿ ಸಲ್ಲಿಸುವುದು ಸಹ ಲಿಂಗ ಪರಿವರ್ತಿತ ವ್ಯಕ್ತಿಗಳಿಗೆ ಬಹಳ ಕಷ್ಟ ಎಂದು ಅವರು ಹೇಳುತ್ತಾರೆ

ಅವರು ಸ್ಥಳೀಯ ಶಿಕ್ಷಕರ ಮಾರ್ಗದರ್ಶನದಲ್ಲಿ ಕರಗಾಟ್ಟಮ್ ಅನ್ನು ಸಹ ಕಲಿತರು, ಈ ಪ್ರಕಾರದ ನೃತ್ಯದಲ್ಲಿ ತಲೆಯ ಮೇಲೆ ಮಡಕೆಯೊಂದನ್ನು ಸಮತೋಲನಗೊಳಿಸುತ್ತಾ ಕುಣಿಯಲಾಗುತ್ತದೆ. "ಇದು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಸರ್ಕಾರ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಪ್ರದರ್ಶನ ನೀಡಲು ನನಗೆ ಅವಕಾಶಗಳನ್ನು ನೀಡಿತು" ಎಂದು ಅವರು ಹೇಳುತ್ತಾರೆ.

ನಂತರ, ಅವರು ಮಾಡು ಆಟ್ಟಮ್ (ಇಲ್ಲಿ ಪ್ರದರ್ಶಕರು ಹಸುವನ್ನು ಹೋಲುವ ವೇಷಭೂಷಣದಲ್ಲಿ ಜಾನಪದ ಸಂಗೀತಕ್ಕೆ ನೃತ್ಯ ಮಾಡುತ್ತಾರೆ), ಮೈಯಿಲ್ ಆಟ್ಟಮ್ (ನವಿಲಿನ ವೇಷಭೂಷಣದೊಂದಿಗೆ ನೃತ್ಯ ಪ್ರದರ್ಶಿಸಲಾಗುತ್ತದೆ), ಮತ್ತು ಪೊಯಿ ಕಾಲ್ ಕುದುರೈ ಆಟ್ಟಮ್ (ಸುಳ್ಳು ಕಾಲಿನ ಕುದುರೆಯ ಕುಣಿತ) ಸೇರಿದಂತೆ ಇತರ ಕಲಾ ಪ್ರಕಾರಗಳಿಗೆ ತನ್ನ ಪರಿಣತಿಯನ್ನು ವಿಸ್ತರಿಸಿದರು. ಈ ಪ್ರದರ್ಶನಗಳು ತಮಿಳುನಾಡಿನಾದ್ಯಂತ ಹಲವಾರು ಹಳ್ಳಿಗಳಲ್ಲಿ ನಡೆಯುತ್ತಿದ್ದವು. "ನಮ್ಮ ಮುಖಕ್ಕೆ ಪೌಡರ್ (ಟಾಲ್ಕಮ್ ಪೌಡರ್) ಹಚ್ಚುವುದರಿಂದ, ನಾವು ರಾತ್ರಿ ೧೦ ಗಂಟೆಗೆ ನಮ್ಮ ಪ್ರದರ್ಶನವನ್ನು ಪ್ರಾರಂಭಿಸಿದರೆ ಬೆಳಗಿನ 4 ಅಥವಾ 5ರವರೆಗೆ ನಿರಂತರ ಮುಂದುವರೆಯುತ್ತದೆ" ಎಂದು ಧರ್ಮ ಅಮ್ಮ ಹೇಳುತ್ತಾರೆ.

ಜನವರಿಯಿಂದ ಜೂನ್-ಜುಲೈವರೆಗಿನ ಅವರ ಕೆಲಸದ ಸುಗ್ಗಿಯ ಅವಧಿಯಲ್ಲಿ, ಅವರು ತಿಂಗಳಿಗೆ 8,000ದಿಂದ 10,000 ರೂಪಾಯಿಗಳವರೆಗೆ ಗಳಿಸುತ್ತಿದ್ದರು. ವರ್ಷದ ಉಳಿದ ಅವಧಿಯಲ್ಲಿ ಧರ್ಮ ಅಮ್ಮ ತಿಂಗಳಿಗೆ ಸುಮಾರು 3,000 ರೂಪಾಯಿಗಳ ತನಕ ಸಂಪಾದಿಸುತ್ತಿದ್ದರು.

ಮಹಾಮಾರಿ-ಲಾಕ್‌ಡೌನ್‌ಗಳು ಅದೆಲ್ಲವನ್ನೂ ಬದಲಾಯಿಸಿದವು. "ತಮಿಳುನಾಡು ಯ್ಯಾಳ್‌ ಇಸೈ ನಾಟಕ ಮಂಡ್ರಮ್‌ ಸದಸ್ಯರಾಗಿ ನೋಂದಾಯಿಸಲ್ಪಟ್ಟರೂ ಅದರಿಂದ ಯಾವುದೇ ಸಹಾಯವಾಗಲಿಲ್ಲ" ಎಂದು ಅವರು ಹೇಳುತ್ತಾರೆ. ಇದು - ತಮಿಳುನಾಡು ಸಂಗೀತ, ನೃತ್ಯ, ನಾಟಕ ಮತ್ತು ಸಾಹಿತ್ಯಕ್ಕಾಗಿ ಇರುವ ಕೇಂದ್ರ - ರಾಜ್ಯದ ಕಲೆ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಒಂದು ಘಟಕವಾಗಿದೆ. "ಪುರುಷ ಮತ್ತು ಮಹಿಳಾ ಜಾನಪದ ಕಲಾವಿದರು ಪಿಂಚಣಿಗಾಗಿ ಸುಲಭವಾಗಿ ಅರ್ಜಿ ಸಲ್ಲಿಸಬಹುದಾದರೂ, ಟ್ರಾನ್ಸ್ ವ್ಯಕ್ತಿಗಳಿಗೆ ಇದು ಬಹಳ ಕಷ್ಟ. ನನ್ನ ಅರ್ಜಿಗಳನ್ನು ಅನೇಕ ಬಾರಿ ತಿರಸ್ಕರಿಸಲಾಯಿತು. ಅಧಿಕಾರಿಗಳು ಶಿಫಾರಸುಗಳನ್ನು ತರುವಂತೆ ಹೇಳುತ್ತಿದ್ದರು. ಇವುಗಳನ್ನು ಯಾರಿಂದ ಪಡೆಯಬೇಕು ಎಂದು ನನಗೆ ತಿಳಿದಿರಲಿಲ್ಲ. ನನಗೆ ಒಂದಿಷ್ಟು ಸೌಲಭ್ಯಗಳು ದೊರೆತಿದ್ದರೆ, ಅಂತಹ ಭಯಾನಕ ಸಮಯದಲ್ಲಿ ಅದು ನನಗೆ ಸಹಾಯವಾಗುತ್ತಿತ್ತು. ಈಗ ನಾವು ಕೇವಲ ಪಡಿತರ ಅಕ್ಕಿಯನ್ನು ಮಾತ್ರ ಬೇಯಿಸಿ ತಿನ್ನುತ್ತಿದ್ದೇವೆ, ತರಕಾರಿಗಳನ್ನು ಖರೀದಿಸಲು ನಮ್ಮಲ್ಲಿ ಹಣವಿಲ್ಲ."

*****

ಮಧುರೈ ನಗರದಿಂದ 10 ಕಿಲೋಮೀಟರಿಗಿಂತ ಕಡಿಮೆ ದೂರದಲ್ಲಿರುವ ವಿಲಂಗುಡಿ ಪಟ್ಟಣದ, ಮ್ಯಾಗಿ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷದವರೆಗೆ, ಅವರು ಮಧುರೈ ಮತ್ತು ಇತರ ಜಿಲ್ಲೆಗಳಲ್ಲಿ ಕುಮ್ಮಿ ಪಾಟ್ಟು ಹಾಡುತ್ತಾ ಜೀವನೋಪಾಯಕ್ಕಾಗಿ ಪ್ರಯಾಣಿಸುತ್ತಿದ್ದರು. ಬಿತ್ತನೆಯ ನಂತರ ಬೀಜಗಳು ಮೊಳಕೆಯೊಡೆಯುವುದನ್ನು ಆಚರಿಸಲು ಈ ಸಾಂಪ್ರದಾಯಿಕ ಹಾಡುಗಳನ್ನು ಪ್ರದರ್ಶಿಸುವ ಜಿಲ್ಲೆಯ ಕೆಲವು ಟ್ರಾನ್ಸ್ ಮಹಿಳೆಯರಲ್ಲಿ ಅವರು ಕೂಡಾ ಸೇರಿದ್ದಾರೆ.

PHOTO • M. Palani Kumar

ಮಧುರೈನ ತನ್ನ ಕೋಣೆಯಲ್ಲಿ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಮ್ಯಾಗಿ (ಕ್ಯಾಮೆರಾಕ್ಕೆ ಬೆನ್ನು ಹಾಕಿರುವವರು): ಶಾಲಿನಿ (ಎಡ), ಭವ್ಯಾಶ್ರೀ (ಶಾಲಿನಿಯವರ ಹಿಂದೆ), ಅರಸಿ (ಹಳದಿ ಕುರ್ತಾ), ಕೆ. ಸ್ವೆಸ್ತಿಕಾ (ಅರಸಿಯವರ ಪಕ್ಕದಲ್ಲಿರುವವರು), ಶಿಫಾನಾ (ಅರಸಿಯವರ ಹಿಂದೆ ಇರುವವರು). ಆಮಂತ್ರಣಗಳು ಮತ್ತು ಪ್ರದರ್ಶನಗಳ ಋತುವು ಜುಲೈನಲ್ಲಿ ಮುಕ್ತಾಯವಾಗುತ್ತಿರುವುದರಿಂದ, ಈ ವರ್ಷದ ಉಳಿದ ದಿನಗಳಲ್ಲಿ ಅವರಿಗೆ ಯಾವುದೇ ಕೆಲಸದ ಅವಕಾಶಗಳು ಸಿಗುವುದಿಲ್ಲ

"ನಾನು ಟ್ರಾನ್ಸ್ ವುಮೆನ್ ಆಗಿದ್ದ ಕಾರಣ ಮನೆಯಿಂದ ಹೊರಹೋಗುವಂತೆ ಒತ್ತಡ ಹೇರಲಾಯಿತು. (ಆಕೆಯ ಪೋಷಕರು ಮಧುರೈ ಪಟ್ಟಣದ ಹತ್ತಿರದ ಹಳ್ಳಿಯಲ್ಲಿ ಕೃಷಿ ಕಾರ್ಮಿಕರು)" ಎಂದು 30 ವರ್ಷದ ಮ್ಯಾಗಿ ಹೇಳುತ್ತಾರೆ (ಅದು ಅವರ ಹೆಸರು). “ಆ ಸಮಯದಲ್ಲಿ ನನಗೆ 22 ವರ್ಷ. ಮುಲ್ಲಪರಿ ಹಬ್ಬಕ್ಕೆ ಸ್ನೇಹಿತರೊಬ್ಬರು ನನ್ನನ್ನು ಕರೆದುಕೊಂಡು ಹೋದರು, ಅಲ್ಲಿ ನಾನು ಕುಮ್ಮಿ ಪಾಟ್ಟು ಕಲಿಯಲು ಆರಂಭಿಸಿದೆ.”

ತಾನು 25 ಇತರ ಟ್ರಾನ್ಸ್ ಮಹಿಳೆಯರ ಗುಂಪಿನೊಂದಿಗೆ ವಾಸಿಸುವ ವಿಲಂಗುಡಿಯ ಬೀದಿಯಲ್ಲಿ, ಇಬ್ಬರಿಗೆ ಮಾತ್ರ ಕುಮ್ಮಿ ಪಾಟ್ಟು ಹಾಡುವುದು ತಿಳಿದಿದೆ ಎಂದು ಮ್ಯಾಗಿ ವಿವರಿಸುತ್ತಾರೆ. ತಮಿಳುನಾಡಿನಲ್ಲಿ, ಈ ಹಾಡನ್ನು ಜುಲೈ ತಿಂಗಳಲ್ಲಿ 10 ದಿನಗಳ ಕಾಲ ನಡೆಯುವ ಮಳೈಪರಿ ಹಬ್ಬದ ಸಮಯದಲ್ಲಿ ಪ್ರಾರ್ಥನೆಯಾಗಿ ಹಾಡಲಾಗುತ್ತದೆ. ಮಳೆ, ಮಣ್ಣಿನ ಫಲವತ್ತತೆ ಮತ್ತು ಉತ್ತಮ ಫಸಲಿನ ಭರವಸೆಯಲ್ಲಿ ಹಾಡುಗಳನ್ನು ಹಾಡಲಾಗುತ್ತದೆ, ಮತ್ತು ಈ ನೃತ್ಯವನ್ನು ಗ್ರಾಮ ದೇವತೆಗೆ ಸಮರ್ಪಿಸಲಾಗುತ್ತದೆ. ಮ್ಯಾಗಿ ಹೇಳುತ್ತಾರೆ, “ಹಬ್ಬದಲ್ಲಿ ಹಾಡಿದ್ದಕ್ಕಾಗಿ ನಮಗೆ ಕನಿಷ್ಠ 4000ರಿಂದ 5000 ಸಿಗುತ್ತದೆ. ಮತ್ತು ನಾವು ದೇವಸ್ಥಾನಗಳಲ್ಲಿ ಹಾಡಲು ಅವಕಾಶಗಳನ್ನು ಪಡೆಯುತ್ತೇವೆ, ಆದರೆ ಅದು ಖಾತರಿಯಿರುವುದಿಲ್ಲ.

ಆದರೆ, ಈ ಹಬ್ಬವನ್ನು ಜುಲೈ 2020ರಲ್ಲಿ ಆಯೋಜಿಸಲಾಗಿಲ್ಲ ಮತ್ತು ಈ ಬಾರಿ ಕೂಡ ಈ ಜುಲೈ ತಿಂಗಳಿನಲ್ಲಿ ಆಯೋಜಿಸಲಾಗಿಲ್ಲ. ಮತ್ತು ಕಳೆದ ವರ್ಷ ಮಾರ್ಚ್‌ನಲ್ಲಿ ಲಾಕ್‌ಡೌನ್ ವಿಧಿಸಿದಾಗಿನಿಂದ, ಮ್ಯಾಗಿ ಕೆಲವೇ ಪ್ರದರ್ಶನಗಳನ್ನು ನೀಡಿದ್ದಾರೆ. ಅವರು ಹೇಳುತ್ತಾರೆ, “ಈ ವರ್ಷ ಲಾಕ್‌ಡೌನ್ ಹೇರುವ ಮುನ್ನ ಮಧುರೈನ ದೇವಸ್ಥಾನದಲ್ಲಿ 3 ದಿನಗಳ ಕಾಲವಷ್ಟೇ ಪ್ರದರ್ಶನ ನೀಡಲು ನಮಗೆ ಅವಕಾಶ ಸಿಕ್ಕಿದ್ದು (ಮಾರ್ಚ್ ಮಧ್ಯದಲ್ಲಿ).

ಪ್ರದರ್ಶನದ ಆಮಂತ್ರಣಗಳು ಮತ್ತು ಪ್ರದರ್ಶನಗಳ ಋತುವು ಜುಲೈನಲ್ಲಿ ಮುಕ್ತಾಯವಾಗುತ್ತಿರುವುದರಿಂದ, ಈ ವರ್ಷದ ಉಳಿದ ದಿನಗಳಲ್ಲಿ ಮ್ಯಾಗಿ ಮತ್ತು ಅವರ ಸಹವರ್ತಿಗಳಿಗೆ ಯಾವುದೇ ಕೆಲಸದ ಅವಕಾಶಗಳು ಸಿಗುವುದಿಲ್ಲ

At Magie's room, V. Arasi helping cook a meal: 'I had to leave home since I was a trans woman' says Magie (right)
PHOTO • M. Palani Kumar
At Magie's room, V. Arasi helping cook a meal: 'I had to leave home since I was a trans woman' says Magie (right)
PHOTO • M. Palani Kumar

ಮ್ಯಾಗಿಯವರ ಕೋಣೆಯಲ್ಲಿ ವಿ. ಅರಸಿ ಅಡುಗೆ ಮಾಡಲು ಸಹಾಯ ಮಾಡುತ್ತಿರುವುದು: 'ನಾನು ಟ್ರಾನ್ಸ್ ಮಹಿಳೆಯಾಗಿದ್ದರಿಂದ ನನ್ನನ್ನು ಮನೆಯಿಂದ ಹೊರಹೋಗುವಂತೆ ಮಾಡಲಾಯಿತು' ಎಂದು ಮ್ಯಾಗಿ ಹೇಳುತ್ತಾರೆ

ಕಳೆದ ವರ್ಷ ಲಾಕ್ ಡೌನ್‌ಗಳು ಪ್ರಾರಂಭವಾದಾಗಿನಿಂದ, ಸ್ವಯಂಸೇವಕರು ಟ್ರಾನ್ಸ್ ಕಲಾವಿದರಿಗೆ ಕೆಲವು ಬಾರಿ ಪಡಿತರವನ್ನು ನೀಡಿದ್ದಾರೆ ಎಂದು ಅವರು ಹೇಳುತ್ತಾರೆ. ಮತ್ತು ಮ್ಯಾಗಿ ಕಲೆ ಮತ್ತು ಸಂಸ್ಕೃತಿ ನಿರ್ದೇಶನಾಲಯದಲ್ಲಿ ನೋಂದಾಯಿಸಿಕೊಂಡಿದ್ದಾರೆ, ಹೀಗಾಗಿ ಈ ವರ್ಷದ ಮೇ ತಿಂಗಳಿನಲ್ಲಿ ಸರ್ಕಾರದಿಂದ 2,000 ರೂ. ಪಡೆದರು. "ಇನ್ನೂ ಅನೇಕರಿಗೆ ಸಿಗದಿರುವುದು ದುರದೃಷ್ಟಕರ" ಎಂದು ಅವರು ಹೇಳುತ್ತಾರೆ.

ಗರಿಷ್ಠ ಕಾರ್ಯಕ್ರಮಗಳು ಸಿಗುತ್ತಿದ್ದ ತಿಂಗಳುಗಳಲ್ಲಿಯೂ, ಲಾಕ್ ಡೌನ್‌ಗಳಿಗೆ ಮೊದಲೇ ಆಹ್ವಾನಗಳು ಕಡಿಮೆಯಾಗುತ್ತಿದ್ದವು ಎಂದು ಮ್ಯಾಗಿ ಹೇಳುತ್ತಾರೆ. "ಹೆಚ್ಚು ಹೆಚ್ಚು ಪುರುಷರು ಮತ್ತು ಮಹಿಳೆಯರು ಕುಮ್ಮಿ ಹಾಡುಗಳನ್ನು ಕಲಿಯುತ್ತಿದ್ದಾರೆ, ಮತ್ತು ದೇವಾಲಯದ ಪ್ರದರ್ಶನಗಳಲ್ಲಿ ಅವರಿಗೆ ಆದ್ಯತೆ ನೀಡಲಾಗುತ್ತದೆ. ಅನೇಕ ಸ್ಥಳಗಳಲ್ಲಿ, ನಾವು ಟ್ರಾನ್ಸ್ ವ್ಯಕ್ತಿಗಳಾಗಿರುವ ಕಾರಣಕ್ಕೆ ತಾರತಮ್ಯವನ್ನು ಎದುರಿಸುತ್ತೇವೆ. ಈ ಮೊದಲು, ಈ ಕಲಾ ಪ್ರಕಾರವು ಜಾನಪದ ಕಲಾವಿದರಿಗೆ ಸೀಮಿತವಾಗಿತ್ತು ಮತ್ತು ಅನೇಕ ಟ್ರಾನ್ಸ್ ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದರು, ಆದರೆ ಅದರ ಹೆಚ್ಚುತ್ತಿರುವ ಜನಪ್ರಿಯತೆಯೊಂದಿಗೆ ನಮಗೆ ಅವಕಾಶಗಳು ಕಡಿಮೆವಾಗುತ್ತಿವೆ."

*****

ಮಧುರೈ ನಗರದಿಂದ ಸುಮಾರು 100 ಕಿಮೀ ದೂರದಲ್ಲಿರುವ ಪುದುಕೋಟೈ ಜಿಲ್ಲೆಯ ವಿರಲಿಮಲೈ ಪಟ್ಟಣದಲ್ಲಿ ವಾಸಿಸುತ್ತಿರುವ ವರ್ಷಾ ಅವರ ಜೀವನವು 15 ತಿಂಗಳಿಗೂ ಹೆಚ್ಚು ಕಾಲದಿಂದ ಸಂಕಷ್ಟದಲ್ಲಿದೆ. ಹಣವಿಲ್ಲದೆ ಪರದಾಡುತ್ತಿರುವ ವರ್ಷಾ ಅವರಿಗೆ ತಮ್ಮ ಜೀವನದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಅವರು ತಮ್ಮ ಜೀವನ ನಿರ್ವಹಣೆಗಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರುವ ಮತ್ತು ಸ್ಥಳೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ತನ್ನ ತಮ್ಮನನ್ನು ಅವಲಂಬಿಸಿದ್ದಾರೆ.

ಮಧುರೈ ಕಾಮರಾಜ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯ ಎರಡನೇ ವರ್ಷದಲ್ಲಿರುವ ಮತ್ತು ಜಾನಪದ ಕಲೆಯನ್ನು ಕಲಿಯುತ್ತಿರುವ 29 ವರ್ಷದ ವರ್ಷಾ, ಈ ಮಹಾಮಾರಿ ಎರಗುವ ಮೊದಲು ಹಬ್ಬಗಳು ಮತ್ತು ದೇವಸ್ಥಾನಗಳಲ್ಲಿ ರಾತ್ರಿ ಜಾನಪದ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಮತ್ತು ಹಗಲಿನಲ್ಲಿ ಅಧ್ಯಯನ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಆಗ ಅವರಿಗೆ 2-3 ಗಂಟೆಗಳ ವಿಶ್ರಾಂತಿಯೂ ಸಿಗುತ್ತಿರಲಿಲ್ಲ.

Left: Varsha at her home in Pudukkottai district. Behind her is a portrait of her deceased father P. Karuppaiah, a daily wage farm labourer. Right: Varsha dressed as goddess Kali, with her mother K. Chitra and younger brother K. Thurairaj, near the family's house in Viralimalai
PHOTO • M. Palani Kumar
Left: Varsha at her home in Pudukkottai district. Behind her is a portrait of her deceased father P. Karuppaiah, a daily wage farm labourer. Right: Varsha dressed as goddess Kali, with her mother K. Chitra and younger brother K. Thurairaj, near the family's house in Viralimalai
PHOTO • M. Palani Kumar

ಎಡ: ವರ್ಷಾ ಪುದುಕೋಟೈ ಜಿಲ್ಲೆಯ ತನ್ನ ಮನೆಯಲ್ಲಿ. ಅವರ ಹಿಂದೆ ಅವರ ತಂದೆ ದಿವಂಗತ ಪಿ.ಕರುಪ್ಪಯ್ಯನವರ ಚಿತ್ರವಿದೆ, ಅವರು ದಿನಗೂಲಿ ಕೃಷಿ ಕಾರ್ಮಿಕರಾಗಿದ್ದರು. ಬಲ: ವರ್ಷಾ ಕಾಳಿ ದೇವಿಯ ವೇಷದಲ್ಲಿ, ಅವರ ತಾಯಿ ಕೆ. ಚಿತ್ರಾ, ಮತ್ತು ಅವರ ಕಿರಿಯ ಸಹೋದರ ದುರೈರಾಜ್ ಅವರೊಂದಿಗೆ ತನ್ನ ಕುಟುಂಬದ ಮನೆಯೆದುರು

ಅವರು ಕಟ್ಟ ಕಾಲ್ ಆಟ್ಟಮ್ ಪ್ರದರ್ಶಿಸಿದ ಮೊದಲ ಟ್ರಾನ್ಸ್ ವುಮೆನ್ ನಾನೆಂದು ಎಂದು ಹೇಳುತ್ತಾರೆ (ಅವರು ಇದನ್ನು ದೃಢಪಡಿಸುವ ಸ್ಥಳೀಯ ಪತ್ರಿಕೆಯ ಲೇಖನವೊಂದನ್ನು ನನಗೆ ಕಳುಹಿಸಿದ್ದಾರೆ), ಇದರಲ್ಲಿ ಪ್ರದರ್ಶಕರು ಎರಡು ಉದ್ದವಾದ ಮರದ ಕಾಲುಗಳನ್ನು ಕಟ್ಟಿಕೊಂಡು ಸಂಗೀತಕ್ಕೆ ನೃತ್ಯ ಮಾಡುತ್ತಾರೆ. ಸಮತೋಲನವನ್ನು ಕಂಡುಕೊಳ್ಳಲು ಇದಕ್ಕೆ ಸಾಕಷ್ಟು ಅನುಭವ ಮತ್ತು ಕೌಶಲದ ಅಗತ್ಯವಿದೆ.

ವರ್ಷಾ ಅವರ ಪ್ರದರ್ಶನಗಳ ಪಟ್ಟಿಯಲ್ಲಿ ಇತರ ಹಲವು ನೃತ್ಯ ಪ್ರಕಾರಗಳು ಸಹ ಇವೆ. ಉದಾಹರಣೆಗೆ, ದಪ್ಪಾಟ್ಟಾಮ್, ಇದರಲ್ಲಿ ಪ್ರದರ್ಶಕರು ದಪ್ಪುವಿನ ತಾಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಾರೆ. ದಪ್ಪು (ಪರೈ) ಒಂದು ರೀತಿಯ ಸಾಂಪ್ರದಾಯಿಕ ತಮಟೆಯಂತಹದು, ಇದನ್ನು ಸಾಮಾನ್ಯವಾಗಿ ದಲಿತ ಸಮುದಾಯದ ಜನರು ನುಡಿಸುತ್ತಾರೆ. ಆದರೆ ಆಕೆ ಹೇಳುವಂತೆ ದೈವಿಗ ನಡನಂ (ದೇವತೆಗಳ ನೃತ್ಯ) ತನ್ನ ನೆಚ್ಚಿನದು. ಅವರು ತಮಿಳುನಾಡಿನ ಜನಪ್ರಿಯ ಜಾನಪದ ಕಲಾವಿದೆ ಮತ್ತು ಅವರ ಪ್ರದರ್ಶನಗಳನ್ನು ತಮಿಳುನಾಡಿನ ಪ್ರಮುಖ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗಿದೆ. ಅವರು ಸ್ಥಳೀಯ ಕಲಾ ಸಂಸ್ಥೆಗಳಿಂದ ಮನ್ನಣೆಯನ್ನು ಪಡೆದಿದ್ದಾರೆ ಮತ್ತು ಬೆಂಗಳೂರು, ಚೆನ್ನೈ ಮತ್ತು ದೆಹಲಿ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ತಮ್ಮ ಪ್ರದರ್ಶನಗಳನ್ನು ನೀಡಿದ್ದಾರೆ.

ವರ್ಷಾ 2018ರಲ್ಲಿ ರೂಪುಗೊಂಡ ಟ್ರಾನ್ಸ್ ವುಮೆನ್ ಕಲಾವಿದರ ಗುಂಪಾಗಿರುವ ಅರ್ಧನಾರಿ ಕಲೈ ಕುಳು ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದು, ಅವರ ಸಂಘದ ಏಳು ಸದಸ್ಯರು ಮಧುರೈ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಕರೋನಾದ ಮೊದಲ ಮತ್ತು ಎರಡನೆಯ ಅಲೆಯ ಮೊದಲು, ಅವರು ಜನವರಿಯಿಂದ ಜೂನ್ ತನಕ ಕನಿಷ್ಠ 15 ಕಾರ್ಯಕ್ರಮಗಳಿಗೆ ಆಹ್ವಾನಗಳನ್ನು ಪಡೆಯುತ್ತಿದ್ದರು. "ನಮ್ಮಲ್ಲಿ ಪ್ರತಿಯೊಬ್ಬರೂ ತಿಂಗಳಿಗೆ ಕನಿಷ್ಠ 10,000 ರೂ. ಗಳಿಸುತ್ತಿದ್ದರು" ಎಂದು ವರ್ಷಾ ಹೇಳುತ್ತಾರೆ.

ಅವರು ಮುಂದುವರಿದು ಹೇಳುತ್ತಾರೆ, “ನನ್ನ ಕಲೆಯೇ ನನ್ನ ಬದುಕು. ನಾವು ನಮ್ಮ ಕಲೆಯನ್ನು ಪ್ರದರ್ಶಿಸಿದಾಗಲಷ್ಟೇ ಏನಾದರೂ ತಿನ್ನಲು ಸಾಧ್ಯ. ಆ ಮೊದಲ ಆರು ತಿಂಗಳಲ್ಲಿ ನಾವು ಏನನ್ನು ಗಳಿಸುತ್ತಿದ್ದೆವೋ ಅದನ್ನು ಬಳಸಿ ನಾವು ಉಳಿದ ಆರು ತಿಂಗಳ ಕಾಲ ಜೀವನವನ್ನು ನಡೆಸುತ್ತಿದ್ದೆವು." ಇದು ಅವರ ಮತ್ತು ಇತರ ಟ್ರಾನ್ಸ್ ಮಹಿಳೆಯರ ಜೀವನ ನಡೆಸಲು ಸಾಕಾಗುತ್ತಿತ್ತು ಎಂದು ಅವರು ಹೇಳುತ್ತಾರೆ, "ಇಂತಹ ಪರಿಸ್ಥಿತಿಯಲ್ಲಿ ಉಳಿತಾಯ ತುಂಬಾ ಕಷ್ಟ, ಏಕೆಂದರೆ ನಾವು ನಮ್ಮ ಬಟ್ಟೆ, ಪ್ರಯಾಣ ಮತ್ತು ಆಹಾರಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ನಾವು ಸ್ವಲ್ಪ ಹಣವನ್ನು ಸಾಲ ಪಡೆಯಲೆಂದು ಪಂಚಾಯತ್ ಕಚೇರಿಗೆ ಹೋದಾಗ, ನಮ್ಮ ಅರ್ಜಿಯನ್ನು ತಿರಸ್ಕರಿಸಲಾಯಿತು. ಯಾವುದೇ ಬ್ಯಾಂಕ್ ನಮಗೆ ಸಾಲ ನೀಡಲು ಸಿದ್ಧವಿಲ್ಲ (ಅಗತ್ಯ ದಾಖಲೆಗಳ ಕೊರತೆಯ ಕಾರಣ). ನಮ್ಮ ಪರಿಸ್ಥಿತಿ ಹೇಗಿದೆಯೆಂದರೆ ನಾವು ಈಗ ಕೇವಲ 100 ರೂ. ಕೊಟ್ಟರೂ ನಮ್ಮ ಕಲೆಯನ್ನು ಪ್ರದರ್ಶಿಸಲು ಸಿದ್ಧರಿದ್ದೇವೆ. "

Varsha, a popular folk artist in Tamil Nadu who has received awards (displayed in her room, right), says 'I have been sitting at home for the last two years'
PHOTO • M. Palani Kumar
Varsha, a popular folk artist in Tamil Nadu who has received awards (displayed in her room, right), says 'I have been sitting at home for the last two years'
PHOTO • M. Palani Kumar

ವರ್ಷಾ, ತಮಿಳುನಾಡಿನ ಜನಪ್ರಿಯ ಜಾನಪದ ಕಲಾವಿದೆಯಾಗಿದ್ದು, ಅವರ ಕಲಾ ಸೇವೆಗಾಗಿ ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ (ಬಲಭಾಗದಲ್ಲಿರುವ ಚಿತ್ರದಲ್ಲಿ ಅವರ ಕೋಣೆಯಲ್ಲಿ ಅವುಗಳನ್ನು ನೋಡಬಹುದು), 'ಕಳೆದ ಎರಡು ವರ್ಷಗಳಿಂದ ನಾನು ಈ ಮನೆಯಿಂದ ಹೊರಬಂದಿಲ್ಲ

ವರ್ಷಾ ತನ್ನ 10ನೇ ವಯಸ್ಸಿನಲ್ಲಿ  5ನೇ ತರಗತಿಯಲ್ಲಿರುವಾಗ ತನ್ನ ಟ್ರಾನ್ಸ್ ಐಡೆಂಟಿಟಿಯ ಕುರಿತು ತಿಳಿದುಕೊಂಡರು ಮತ್ತು 12ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಜಾನಪದ ನೃತ್ಯವನ್ನು ಪ್ರದರ್ಶಿಸಿದರು - ಸ್ಥಳೀಯ ಜಾತ್ರೆಗಳಲ್ಲಿ ನೃತ್ಯಗಳನ್ನು ನೋಡುವ ಮೂಲಕ ಅವರು ನೃತ್ಯಗಳನ್ನು ಕಲಿತರು. ಅವರು ಜಾನಪದ ಕಲೆಯಲ್ಲಿ ವಿಶ್ವವಿದ್ಯಾಲಯದ ಕೋರ್ಸ್‌ ಸೇರಿಕೊಂಡ ನಂತರವೇ ಔಪಚಾರಿಕ ತರಬೇತಿಯನ್ನು ಪಡೆದಿದ್ದು.

"ನನ್ನ ಕುಟುಂಬವು ನನ್ನನ್ನು ಒಪ್ಪಿಕೊಳ್ಳಲು ನಿರಾಕರಿಸಿತು, ಇದರ ಪರಿಣಾಮವಾಗಿ ನಾನು ನನ್ನ 17ನೇ ವಯಸ್ಸಿನಲ್ಲಿ ಮನೆಯಿಂದ ಹೊರ ಬರಬೇಕಾಯಿತು. ಜಾನಪದ ಕಲೆಯ ಮೇಲಿನ ನನ್ನ ಉತ್ಸಾಹವೇ ನನ್ನ ಕುಟುಂಬವನ್ನು [ಕೊನೆಗೂ] ನನ್ನನ್ನು ಒಪ್ಪಿಕೊಳ್ಳುವಂತೆ ಮಾಡಿತು" ಎಂದು ತಾಯಿಯೊಂದಿಗೆ (ನಿವೃತ್ತ ಕೃಷಿ ಕಾರ್ಮಿಕರು) ಮತ್ತು ತಮ್ಮನ ಜೊತೆ ವಿರಲಿಮಲೈ ಗ್ರಾಮದಲ್ಲಿ ವಾಸಿಸುತ್ತಿರುವ ವರ್ಷಾ ಹೇಳುತ್ತಾರೆ.

"ಆದರೆ ನಾನು ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಕುಳಿತಿದ್ದೇನೆ [ಮಾರ್ಚ್ 2020ರ ಮೊದಲ ಲಾಕ್‌ಡೌನ್‌ನಿಂದ. ನಾವು ಯಾರಿಂದಲೂ [ಸ್ನೇಹಿತರನ್ನು ಹೊರತುಪಡಿಸಿ] ಯಾವುದೇ ಪರಿಹಾರವನ್ನು ಪಡೆದಿಲ್ಲ. ನಾನು ಸಹಾಯಕ್ಕಾಗಿ NGOಗಳು ಮತ್ತು ವ್ಯಕ್ತಿಗಳನ್ನು ಸಂಪರ್ಕಿಸಿದೆ. ಕಳೆದ ವರ್ಷ ನಮಗೆ ಸಹಾಯ ಮಾಡಲು ಸಾಧ್ಯವಾದವರು ಕೂಡ ಈ ವರ್ಷ ಹಾಗೆ ಮಾಡಲು ಸಾಧ್ಯವಾಗಲಿಲ್ಲ,” ಎಂದು ಅವರು ಹೇಳುತ್ತಾರೆ. "ಗ್ರಾಮೀಣ ಪ್ರದೇಶದ ಟ್ರಾನ್ಸ್ ಜಾನಪದ ಕಲಾವಿದರು ಸರ್ಕಾರದಿಂದ ಯಾವುದೇ ಹಣಕಾಸಿನ ನೆರವನ್ನು ಪಡೆದಿಲ್ಲ. ಕಳೆದ ವರ್ಷದಂತೆ, ಈ ವರ್ಷವೂ ನಾವು ಯಾವುದೇ ಕೆಲಸವಿಲ್ಲದೆ ಪರದಾಡಬೇಕಾಯಿತು. ನಾವು ಯಾರಿಗೂ ಕಾಣದವರಾಗಿ ಉಳಿದು ಹೋಗಿದ್ದೇವೆ.”

ಈ ಲೇಖನದ ಸಂದರ್ಶನಗಳನ್ನು ಫೋನಿನ ಮುಖಾಂತರ ಮಾಡಲಾಯಿತು.

ಅನುವಾದ: ಶಂಕರ ಎನ್. ಕೆಂಚನೂರು

Reporting : S. Senthalir

एस. सेंतलिर, पीपल्स आर्काइव ऑफ़ रूरल इंडिया में बतौर सहायक संपादक कार्यरत हैं, और साल 2020 में पारी फ़ेलो रह चुकी हैं. वह लैंगिक, जातीय और श्रम से जुड़े विभिन्न मुद्दों पर लिखती रही हैं. इसके अलावा, सेंतलिर यूनिवर्सिटी ऑफ़ वेस्टमिंस्टर में शेवनिंग साउथ एशिया जर्नलिज्म प्रोग्राम के तहत साल 2023 की फ़ेलो हैं.

की अन्य स्टोरी S. Senthalir
Photographs : M. Palani Kumar

एम. पलनी कुमार पीपल्स आर्काइव ऑफ़ रूरल इंडिया के स्टाफ़ फोटोग्राफर हैं. वह अपनी फ़ोटोग्राफ़ी के माध्यम से मेहनतकश महिलाओं और शोषित समुदायों के जीवन को रेखांकित करने में दिलचस्पी रखते हैं. पलनी को साल 2021 का एम्प्लीफ़ाई ग्रांट और 2020 का सम्यक दृष्टि तथा फ़ोटो साउथ एशिया ग्रांट मिल चुका है. साल 2022 में उन्हें पहले दयानिता सिंह-पारी डॉक्यूमेंट्री फ़ोटोग्राफी पुरस्कार से नवाज़ा गया था. पलनी फ़िल्म-निर्माता दिव्य भारती की तमिल डॉक्यूमेंट्री ‘ककूस (शौचालय)' के सिनेमेटोग्राफ़र भी थे. यह डॉक्यूमेंट्री तमिलनाडु में हाथ से मैला साफ़ करने की प्रथा को उजागर करने के उद्देश्य से बनाई गई थी.

की अन्य स्टोरी M. Palani Kumar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru