ಐದು ದಿನಗಳು, 200 ಕಿಲೋಮೀಟರ್ ಮತ್ತು 27,000 ರೂ.ವ್ಯಯಿಸಿರುವುದು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ರೆಮ್‌ಡೆಸಿವಿರ್ ಇಂಜೆಕ್ಷನ್‌ಗಾಗಿ  ಹುಡುಕುತ್ತಿರುವ ರವಿ ಬೋಬ್ಡೆ ಅವರ ಹತಾಶೆಯ ಸಂಪೂರ್ಣ ಚಿತ್ರಣವನ್ನು ತಿಳಿಸುತ್ತದೆ.

ಈ ವರ್ಷದ ಏಪ್ರಿಲ್ ಕೊನೆಯ ವಾರದಲ್ಲಿ ಅವರ ಪೋಷಕರಿಗೆ ಕೋವಿಡ್ -19ನ ಲಕ್ಷಣಗಳು ಕಂಡು ಬಂದನಂತರ ಇದು ಪ್ರಾರಂಭವಾಯಿತು. "ಅವರು ತೀವ್ರವಾಗಿ ಕೆಮ್ಮಲು ಪ್ರಾರಂಭಿಸಿದರು ಮತ್ತು ಅವರಿಗೆ ಉಸಿರಾಟ ಮತ್ತು ಎದೆನೋವುಗಳ ಸಮಸ್ಯೆ ಇತ್ತು. ಇದರಿಂದಾಗಿ ನಾನು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು." ಎಂದು 25 ವರ್ಷದ ರವಿ, ಬೀಡ್‌ನ ಹರ್ಕಿ ನಿಮ್‌ಗಾಂವ್ ಗ್ರಾಮದಲ್ಲಿ ತಮ್ಮ ಏಳು ಎಕರೆ ಜಮೀನಿನಲ್ಲಿ ನಡೆದುಕೊಂಡು ಹೋಗುವಾಗ ನೆನಪಿಸಿಕೊಳ್ಳುತ್ತಿದ್ದರು.

ವೈದ್ಯರು ತಕ್ಷಣವೇ ರೆಮ್‌ಡೆಸಿವಿರ್ ಅನ್ನು ಶಿಫಾರಸು ಮಾಡಿದರು-ಕೋವಿಡ್ -19ಗೆ ಚಿಕಿತ್ಸೆ ನೀಡಲು ಬಳಸಲಾಗುವ ಆಂಟಿವೈರಲ್ ಔಷಧ-ಇದು ಬೀಡಿನಲ್ಲಿ ಅಷ್ಟಾಗಿ ಪೂರೈಕೆಯಲ್ಲಿರಲಿಲ್ಲ." ಇದಕ್ಕಾಗಿ ನಾನು ಐದು ದಿನಗಳ ಕಾಲ ಅಲೆದಾಡಿದೆ, ಆದರೆ ಆಗಲೇ ಸಮಯ ಮೀರಿತ್ತು, ಆಗ ಏನು ಮಾಡಬೇಕು ಎನ್ನುವುದು ನನಗೆ ತೋಚಿರಲಿಲ್ಲ. ಹಾಗಾಗಿ ನಾನು ಆಂಬ್ಯುಲೆನ್ಸ್ ಅನ್ನು ಬಾಡಿಗೆಗೆ ಪಡೆದುಕೊಂಡು ನನ್ನ ತಂದೆ ತಾಯಿ ಅವರನ್ನು ಸೊಲ್ಲಾಪುರದ ಆಸ್ಪತ್ರೆಗೆ ವರ್ಗಾಯಿಸಿದೆ." ಎಂದು ರವಿ ಹೇಳುತ್ತಿದ್ದರು. ಅವರು ತಮ್ಮ ಪ್ರಯಾಣದುದ್ದಕ್ಕೂ ಆತಂಕದಲ್ಲಿದ್ದರು. "ಆಂಬುಲೆನ್ಸ್‌ನಲ್ಲಿ ಕಳೆದ ಆ ನಾಲ್ಕು ಗಂಟೆಗಳನ್ನು ನಾನು ಎಂದಿಗೂ ಮರೆಯುವುದಿಲ್ಲ." ಎಂದು ಅವರು ಹೇಳುತ್ತಾರೆ.

ಆಂಬ್ಯುಲೆನ್ಸ್ ಚಾಲಕ ಮಜಲಗಾಂವ್ ತಾಲೂಕಿನಲ್ಲಿರುವ ಅವರ ಗ್ರಾಮದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಸೋಲಾಪುರ ನಗರಕ್ಕೆ ತಮ್ಮ ತಂದೆ ತಾಯಿಗಳಾಗಿರುವ 55 ವರ್ಷ ವಯಸ್ಸಿನ ಅರ್ಜುನ್, ಮತ್ತು 48 ವರ್ಷದ ಗೀತಾ, ಅವರನ್ನು ಕರೆದುಕೊಂಡು ಹೋಗಲು 27,000 ರೂ. ಚಾರ್ಜ್ ಮಾಡಿದ. "ನನಗೆ ದೂರದ ಸಂಬಂಧಿಯೊಬ್ಬರು ಸೊಲ್ಲಾಪುರದಲ್ಲಿ ವೈದ್ಯರಾಗಿದ್ದಾರೆ" ಎಂದು ರವಿ ವಿವರಿಸಿದರು. "ಅವರು ಇಂಜೆಕ್ಷನ್ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಬೀಡಿನಾದ್ಯಂತ ಜನರು ಔಷಧವನ್ನು ಪಡೆಯಲು ಹೆಣಗಾಡುತ್ತಿದ್ದರು”

ಮೂಲತಃ ಎಬೋಲಾ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾದ ರೆಮ್‌ಡೆಸಿವಿರ್, ಸಾಂಕ್ರಾಮಿಕ ರೋಗದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾದ ಕೋವಿಡ್ -19 ರೋಗಿಗಳಿಗೆ ಪರಿಣಾಮಕಾರಿ ಎಂದು ತಿಳಿದುಬಂದಿದೆ. ಆದಾಗ್ಯೂ, ನವೆಂಬರ್ 2020ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ರೆಮ್‌ಡೆಸಿವಿರ್ ಬಳಕೆಯ ವಿರುದ್ಧ ಷರತ್ತಿನ ಶಿಫಾರಸ್ಸನ್ನು ನೀಡಿತು. ರೋಗದ ತೀವ್ರತೆಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಕೋವಿಡ್ -19 ರೋಗಿಗಳಲ್ಲಿ ಔಷಧವು ಬದುಕುಳಿಯುವಿಕೆ ಮತ್ತು ಇತರ ಫಲಿತಾಂಶಗಳನ್ನು ಸುಧಾರಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಆದರೆ ಆಂಟಿವೈರಲ್ ಔಷಧವನ್ನು ಇನ್ನು ಮುಂದೆ ಚಿಕಿತ್ಸಾ ಮಾರ್ಗಸೂಚಿಗಳಲ್ಲಿ ಸೇರಿಸದಿದ್ದರೂ, ಅದನ್ನು ನಿಷೇಧಿಸಲಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಮಹಾರಾಷ್ಟ್ರ ವಿಭಾಗದ ಮಾಜಿ ಅಧ್ಯಕ್ಷ ಡಾ. ಅವಿನಾಶ್ ಭೋಂಡ್ವೆ ಹೇಳುತ್ತಾರೆ. "ಹಿಂದಿನ ಕರೋನವೈರಸ್ ಸೋಂಕನ್ನು ನಿಭಾಯಿಸಲು ರೆಮ್‌ಡೆಸಿವಿರ್ ಅನ್ನು ಬಳಸಲಾಯಿತು, [SARS-CoV-1] ಮತ್ತು ಇದು ಪರಿಣಾಮಕಾರಿ ಎಂದು ಕಂಡುಬಂದಿತು, ಅದಕ್ಕಾಗಿಯೇ ಮೊದಲು ನಾವು ಹೊಸ ಕರೋನವೈರಸ್ ಕಾಯಿಲೆ [SARS-CoV-2 ಅಥವಾ Covid-19] ಭಾರತದ ಹೊರಗೆ ಕಾಣಿಸಿಕೊಂಡಾಗಿನಿಂದ ಅದನ್ನು ಬಳಸಲು ಪ್ರಾರಂಭಿಸಿದ್ದೇವೆ.” ಎಂದು ಅವರು ತಿಳಿಸಿದರು.

The farm in Harki Nimgaon village, where Ravi Bobde (right) cultivated cotton, soyabean and tur with his late father
PHOTO • Parth M.N.
The farm in Harki Nimgaon village, where Ravi Bobde (right) cultivated cotton, soyabean and tur with his late father
PHOTO • Parth M.N.

ರವಿ ಬೊಬ್ಡೆ ( ಬಲ ) ತನ್ನ ದಿವಂಗತ ತಂದೆಯೊಂದಿಗೆ ಹತ್ತಿ , ಸೋಯಾಬೀನ್ ಮತ್ತು ತೊಗರಿಯನ್ನು ಬೆಳೆದ ಹರ್ಕಿ ನಿಮ್ಗಾಂವ್ ಗ್ರಾಮದ ಜಮೀನಿನಲ್ಲಿ

ಐದು ದಿನಗಳ ಔಷಧದ ಕೋರ್ಸಿನ ಅವಧಿಯಲ್ಲಿ ಆರು ಚುಚ್ಚುಮದ್ದುಗಳನ್ನು ಒಳಗೊಂಡಿರುತ್ತದೆ."ಕೋವಿಡ್-19 ಸೋಂಕಿನ ಆರಂಭಿಕ ದಿನಗಳಲ್ಲಿ ಬಳಸಿದರೆ, ರೆಮ್‌ಡೆಸಿವಿರ್ ದೇಹದಲ್ಲಿ ವೈರಸ್‌ನ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಅದು ಪರಿಣಾಮಕಾರಿಯಾಗಬಹುದು" ಎಂದು ಡಾ.ಭೋಂಡ್ವೆ ವಿವರಿಸಿದರು.

ಆದಾಗ್ಯೂ, ಸೋಂಕು ತಗುಲಿದಾಗ, ವಿಳಂಬ ಮತ್ತು ಔಷಧದ ಕೊರತೆಯಿಂದಾಗಿ ಬೀಡ್‌ನಲ್ಲಿರುವ ಕೋವಿಡ್ ರೋಗಿಗಳಿಗೆ ರೆಮ್‌ಡೆಸಿವಿರ್‌ನ ಬಳಕೆ ಸಾಧ್ಯವಾಗಿರಲಿಲ್ಲ. ಜಿಲ್ಲೆಯು ರಾಜ್ಯ ಸರ್ಕಾರ ಮತ್ತು ಪ್ರಿಯಾ ಏಜೆನ್ಸಿ ಎಂಬ ಖಾಸಗಿ ಸಂಸ್ಥೆಯಿಂದ ಅದರ ಪೂರೈಕೆ ದೊರೆಯುತ್ತದೆ. "ವೈದ್ಯರು ರೆಮ್‌ಡೆಸಿವಿರ್ ಅನ್ನು ಶಿಫಾರಸು ಮಾಡಿದಾಗ, ರೋಗಿಯ ಸಂಬಂಧಿಕರು ಫಾರ್ಮ್ ಅನ್ನು ಭರ್ತಿ ಮಾಡಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು" ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರಾಧಾಕೃಷ್ಣ ಪವಾರ್ ಹೇಳುತ್ತಾರೆ. “ಸರಬರಾಜಿನ ಆಧಾರದ ಮೇಲೆ ಆಡಳಿತವು ಪಟ್ಟಿಯನ್ನು ಮಾಡುತ್ತದೆ ಮತ್ತು ಸಂಬಂಧಪಟ್ಟ ರೋಗಿಗಳಿಗೆ ರೆಮ್‌ಡೆಸಿವಿರ್ ಅನ್ನು ಒದಗಿಸುತ್ತದೆ.ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊರತೆ ಕಂಡುಬಂದಿದೆ”

ಬೀಡ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಜಗತಾಪ್ ಅವರು ನೀಡಿದ ಅಂಕಿ-ಅಂಶವು ರೆಮೆಡಿಸಿವಿರ್‌ನ ಬೇಡಿಕೆ ಮತ್ತು ಪೂರೈಕೆಯಲ್ಲಿ ಅಪಾರ ವ್ಯತ್ಯಾಸವಿದೆ ಎಂದು ತೋರಿಸುತ್ತದೆ. ಈ ವರ್ಷದ ಏಪ್ರಿಲ್ 23 ಮತ್ತು ಮೇ 12 ರ ನಡುವೆ - ದೇಶದಲ್ಲಿ ಎರಡನೇ ಕೋವಿಡ್ ಅಲೆಯ ಉತ್ತುಂಗದಲ್ಲಿ - ಜಿಲ್ಲೆಯಲ್ಲಿ 38,000 ರೆಮ್‌ಡೆಸಿವಿರ್ ಚುಚ್ಚುಮದ್ದು ಅಗತ್ಯವಿತ್ತು. ಆದಾಗ್ಯೂ, ಕೇವಲ 5,720 ಮಾತ್ರ ಲಭ್ಯವಿತ್ತು, ಇದು ಒಟ್ಟು ಅಗತ್ಯದ ಶೇಕಡಾ 15 ರಷ್ಟಿತ್ತು.

ರೆಮೆಡಿಸಿವಿರ್‌ ಔಷದದ ಕೊರತೆಯು ಬೀಡಿನಲ್ಲಿ ದೊಡ್ಡ ಪ್ರಮಾಣದ ಬ್ಲಾಕ್ ಮಾರ್ಕೆಟ್ ನ್ನು ಸೃಷ್ಟಿಸಿತು. ರಾಜ್ಯ ಸರ್ಕಾರವು ಪ್ರತಿ ಬಾಟಲಿಗೆ ನಿಗದಿಪಡಿಸಿದ ಚುಚ್ಚುಮದ್ದಿನ ದರ 1,400 ರೂ.ಗೆ ಲಭ್ಯವಾಗುತ್ತಿದ್ದದ್ದು, ಕಾಳಸಂತೆಯಲ್ಲಿ 50,000 ರೂ.ಗೆ ಏರಿತು - ಇದು 35 ಪಟ್ಟು ಹೆಚ್ಚು ದುಬಾರಿಯಾಗಿದೆ.

ಬೀಡ್ ತಾಲೂಕಿನ ಪಂಢರ್ಯಾಚಿವಾಡಿ ಗ್ರಾಮದಲ್ಲಿ ನಾಲ್ಕು ಎಕರೆ ಕೃಷಿ ಭೂಮಿ ಹೊಂದಿರುವ ರೈತೆ ಸುನಿತಾ ಮಗರ್ ಅದಕ್ಕಿಂತ ತುಸು ಕಡಿಮೆ ಹಣವನ್ನು ನೀಡಿದ್ದಾರೆ.‌ ಏಪ್ರಿಲ್ ಮೂರನೇ ವಾರದಲ್ಲಿ ಅವರ 40 ವರ್ಷದ ಪತಿ ಭರತ್ ಅವರಿಗೆ ಕೋವಿಡ್ -19 ತಗುಲಿದಾಗ, ಸುನೀತಾ ರೆಮ್‌ಡೆಸಿವಿರ್ ಬಾಟಲಿಗೆ 25,000 ರೂ.ನೀಡಿದ್ದರು. ಆದರೆ ಅವರಿಗೆ ಆರು ಬಾಟಲುಗಳು ಬೇಕಾಗಿದ್ದವು ಮತ್ತು ಕಾನೂನುಬದ್ಧವಾಗಿ ಒಂದನ್ನು ಮಾತ್ರ ಪಡೆಯಲು ಸಾಧ್ಯವಾಯಿತು.“ನಾನು ಬರಿ ಚುಚ್ಚುಮದ್ದಿಗಷ್ಟೇ 1.25 ಲಕ್ಷ ಖರ್ಚು ಮಾಡಿದೆ, ”ಎಂದು ಅವರು ಹೇಳುತ್ತಾರೆ.

Sunita Magar and her home in Pandharyachiwadi village. She borrowed money to buy remdesivir vials from the black market for her husband's treatment
PHOTO • Parth M.N.
Sunita Magar and her home in Pandharyachiwadi village. She borrowed money to buy remdesivir vials from the black market for her husband's treatment
PHOTO • Parth M.N.

ಪಂಢರ್ಯಾಚಿವಾಡಿ ಗ್ರಾಮದಲ್ಲಿ ಸುನೀತಾ ಮಗರ್ ಮತ್ತು ಅವರ ಮನೆ. ತಮ್ಮ ಪತಿಯ ಚಿಕಿತ್ಸೆಗಾಗಿ ಕಾಳಸಂತೆಯಿಂದ ರೆಮ್‌ಡೆಸಿವಿರ್ ಬಾಟಲಿಗಳನ್ನು ಖರೀದಿಸಲು ಹಣವನ್ನು ಸಾಲ ಪಡೆದಿದ್ದರು

ಸುನೀತಾ,ಅವರು ತಮ್ಮ ಬಾಟಲಿಗಳ ಅಗತ್ಯವನ್ನು ಆಡಳಿತಕ್ಕೆ ಸಲ್ಲಿಸಿದಾಗ, ಅದು ಲಭ್ಯವಾದಾಗ ಅವರಿಗೆ ತಿಳಿಸಲಾಗುವುದು ಎಂದು ಅವರಿಗೆ ಹೇಳಲಾಯಿತು. "ನಾವು 3-4 ದಿನಗಳವರೆಗೆ ಕಾಯುತ್ತಿದ್ದೆವು, ಆದರೆ ಇನ್ನೂ ಯಾವುದೇ ದಾಸ್ತಾನು ಇರಲಿಲ್ಲ. ಹೀಗಾಗಿ ನಾವು ಶಾಶ್ವತವಾಗಿ ಕಾಯಲು ಸಾಧ್ಯವಿರಲಿಲ್ಲ, ರೋಗಿಗೆ ಸಮಯಕ್ಕೆ ಸೂಕ್ತ ಚಿಕಿತ್ಸೆಯ ಅಗತ್ಯವಿತ್ತು, ಆದ್ದರಿಂದ ನಮ್ಮಿಂದ ಮಾಡಬೇಕಾಗಿದ್ದ ಎಲ್ಲಾ ಪ್ರಯತ್ನವನ್ನು ಮಾಡಿದ್ದೇವೆ.” ಎಂದು ಅವರು ಹೇಳುತ್ತಾರೆ.

ರೆಮ್‌ಡೆಸಿವಿರ್‌ನ ಹುಡುಕಾಟದಲ್ಲಿ ಕಾಲ ಹರಣ ಮಾಡಿದ ನಂತರ ಕೊನೆಗೆ ಕಾಳಸಂತೆಯಲ್ಲಿ ಅದನ್ನು ಪಡೆಯುವಲ್ಲಿ ಯಶಸ್ವಿಯಾದರು, ಆದರೆ ಅದಾದ ಎರಡು ವಾರಗಳ ನಂತರ ಭರತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. “ನಾನು ಸಂಬಂಧಿಕರು ಮತ್ತು ಸ್ನೇಹಿತರಿಂದ ಹಣವನ್ನು ಎರವಲು ಪಡೆದಿದ್ದೇನೆ,” ಎಂದು ಸುನೀತಾ ಹೇಳುತ್ತಾರೆ. “ಅವರಲ್ಲಿ ಸುಮಾರು 10 ಜನರು ನನಗೆ ತಲಾ 10,000 ರೂ.ನೀಡಿ ಸಹಾಯ ಮಾಡಿದರು.ನಾನು ಹಣವನ್ನೂ ಮತ್ತು ನನ್ನ ಪತಿಯನ್ನೂ ಕಳೆದುಕೊಂಡೆ.ನಮ್ಮಂತಹವರಿಗೆ ಔಷಧಿಗಳೂ ಸಿಗುತ್ತಿಲ್ಲ. ನೀವು ಶ್ರೀಮಂತರಾಗಿದ್ದರೆ ಮತ್ತು ಸಂಪರ್ಕದಲ್ಲಿದ್ದರೆ ಮಾತ್ರ ನಿಮ್ಮ ಪ್ರೀತಿಪಾತ್ರರನ್ನು ಉಳಿಸಬಹುದು.” ಎಂದು ಅವರು ಹೇಳುತ್ತಾರೆ.

ರೆಮ್‌ಡೆಸಿವಿರ್‌ನ ಹುಡುಕಾಟವು ಬೀಡಿನ ಸುನೀತಾ ಅವರಂತಹ ಅನೇಕ ಕುಟುಂಬಗಳನ್ನು ನಾಶಮಾಡಿದೆ. "ನನ್ನ ಮಗ ತನ್ನ ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗ ನಮ್ಮ ಜಮೀನಿನಲ್ಲಿ ನನಗೆ ಸಹಾಯ ಮಾಡಬೇಕಾಗಿತ್ತು" ಎಂದು ಅವರು ಹೇಳುತ್ತಾರೆ, ತಮ್ಮ ಸಾಲವನ್ನು ಮರುಪಾವತಿಸಲು, ಅವರು ಇತರರ ತೋಟಗಳಲ್ಲಿಯೂ ಕೆಲಸ ಮಾಡಬೇಕಾಗಿತ್ತು. “ಕೆಲವೇ ದಿನಗಳಲ್ಲಿ ನಮ್ಮ ಜೀವನ ತಲೆಕೆಳಗಾದಂತಿದೆ. ಏನು ಮಾಡಬೇಕೆಂದು ನನಗೆ ತೋಚುತ್ತಿಲ್ಲ. ಇಲ್ಲಿ ನೋಡಿದ್ರೆ ಹೆಚ್ಚಿನ ಉದ್ಯೋಗಾವಕಾಶಗಳಿಲ್ಲ.” ಎಂದು ಅವರು ಹೇಳುತ್ತಿದ್ದರು.

ನಿರುದ್ಯೋಗ ಮತ್ತು ಬಡತನವು ರೈತರು ಮತ್ತು ಕೃಷಿ ಕಾರ್ಮಿಕರು ಬೀಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ನಗರಗಳಿಗೆ ಕೆಲಸ ಹುಡುಕಲು ವಲಸೆ ಹೋಗುವಂತೆ ಮಾಡಿದೆ. ಇದುವರೆಗೆ 94,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಮತ್ತು 2,500 ಸಾವುಗಳನ್ನು ದಾಖಲಿಸಿರುವ ಜಿಲ್ಲೆಯು ಮರಾಠವಾಡ ಪ್ರದೇಶದಲ್ಲಿದೆ, ಇದು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆಗೆ ಕಾರಣವಾಗಿದೆ. ಈಗಾಗಲೇ ಹವಾಮಾನ ಬದಲಾವಣೆ, ನೀರಿನ ಕೊರತೆ ಮತ್ತು ಕೃಷಿ ಸಂಕಷ್ಟದಿಂದ ಸಾಲದ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲೆಯ ಜನರು ಅಕ್ರಮವಾಗಿ ರೆಮ್‌ಡೆಸಿವಿರ್ ಅನ್ನು ಖರೀದಿಸಲು ಹೆಚ್ಚಿನ ಸಾಲದ ಸುಳಿಗೆ ಸಿಳುಕಿದ್ದಾರೆ.

ರಾಜ್ಯ ಸರ್ಕಾರದ ದೂರದೃಷ್ಟಿಯ ಕೊರತೆಯ ಪರಿಣಾಮವೇ ರೆಮೆಡಿಸಿವಿರ್‌ನ ಅಕ್ರಮ ವ್ಯಾಪಾರವಾಗಿದೆ ಎಂದು ಡಾ.ಬೋಂಡ್ವೆ ಹೇಳುತ್ತಾರೆ. "ಎರಡನೇ ಅಲೆಯ ವೇಳೆ ಕೋವಿಡ್ -19 ಪ್ರಕರಣಗಳ ಹೆಚ್ಚಳವನ್ನು ನಾವು ನೋಡಬಹುದು. ಏಪ್ರಿಲ್‌ನಲ್ಲಿ, ಪ್ರತಿದಿನ ರಾಜ್ಯದಲ್ಲಿ ಸುಮಾರು 60,000 ಪ್ರಕರಣಗಳ ಪರೀಕ್ಷೆ ಮಾಡಲಾಗುತ್ತಿತ್ತು.

Left: Sunita says that from now on her young son will have to help her with farm work. Right: Ravi has taken on his father's share of the work at the farm
PHOTO • Parth M.N.
Left: Sunita says that from now on her young son will have to help her with farm work. Right: Ravi has taken on his father's share of the work at the farm
PHOTO • Parth M.N.

ಎಡ: ಇನ್ನು ಮುಂದೆ ತನ್ನ ಚಿಕ್ಕ ಮಗ ತನಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡಬೇಕು ಎಂದು ಸುನೀತಾ ಹೇಳುತ್ತಾರೆ. ಬಲ: ರವಿ ಜಮೀನಿನಲ್ಲಿ ತಂದೆಯ ಪಾಲಿನ ಕೆಲಸ ಮಾಡುತ್ತಿದ್ದಾರೆ

ಸರಾಸರಿ ಶೇ 10ರಷ್ಟು ಕೋವಿಡ್-ಪಾಸಿಟಿವ್ ರೋಗಿಗಳಿಗೆ ಆಸ್ಪತ್ರೆಯ ಅಗತ್ಯವಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. "ಅವರಲ್ಲಿ, ಶೇ 5-7ರಷ್ಟು ಜನರಿಗೆ ರೆಮ್‌ಡೆಸಿವಿರ್ ಅಗತ್ಯವಿರುತ್ತದೆ."ಅಧಿಕಾರಿಗಳು ಅಗತ್ಯವನ್ನು ಅಂದಾಜಿಸಿ ಔಷಧವನ್ನು ಸಂಗ್ರಹಿಸಿರಬೇಕು ಎಂದು ಡಾ.ಭೋಂಡ್ವೆ ಹೇಳುತ್ತಾರೆ. "ಕೊರತೆ ಇದ್ದಾಗ ಬ್ಲಾಕ್ ಮಾರ್ಕೆಟಿಂಗ್ ನಡೆಯುತ್ತದೆ. ಕ್ರೋಸಿನ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ನೀವು ಎಂದಿಗೂ ಕಾಣುವುದಿಲ್ಲ.”

ತನಗೆ ರೆಮ್‌ಡೆಸಿವಿರ್ ಬಾಟಲಿಗಳನ್ನು ಯಾರು ಪೂರೈಸಿದ್ದಾರೆ ಎಂಬ ಬಗ್ಗೆ ಕೇಳಿದಾಗ ಅದಕ್ಕೆ ಸುನೀತಾ ಅವರು ಪ್ರತಿಕ್ರಿಯಿಸಲಿಚ್ಚಿಸಲಿಲ್ಲ.“ನನ್ನ ಕಷ್ಟದ ಸಮಯದಲ್ಲಿ ಅವರು ನನಗೆ ಸಹಾಯ ಮಾಡಿದರು. ಹಾಗಾಗಿ ನಾನು ಅವರಿಗೆ ದ್ರೋಹ ಮಾಡುವುದಿಲ್ಲ” ಎಂದು ಅವರು ಹೇಳುತ್ತಾರೆ.

ಹೆಸರು ಹೇಳಲಿಚ್ಛಿಸದ ಮಜಲಗಾಂವ್‌ನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು, ಔಷಧವು ಹೇಗೆ ಕಾಳಸಂತೆಗೆ ಹೋಗಿರಬಹುದು ಎಂಬುದರ ಕುರಿತು ಸುಳಿವು ನೀಡುತ್ತಾರೆ: “ಆಡಳಿತವು ಚುಚ್ಚುಮದ್ದನ್ನು ಕೇಳಿರುವ ರೋಗಿಗಳ ಪಟ್ಟಿಯನ್ನು ಹೊಂದಿದೆ. ಹಲವಾರು ಸಂದರ್ಭಗಳಲ್ಲಿ, ಔಷಧಿ ಬರಲು ಒಂದು ವಾರಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ, ರೋಗಿಯು ಚೇತರಿಸಿಕೊಳ್ಳುತ್ತಾನೆ ಇಲ್ಲವೇ ಸಾಯುತ್ತಾನೆ. ಆದ್ದರಿಂದ ಸಂಬಂಧಿಕರು ಅದನ್ನು ಅನುಸರಿಸುವುದಿಲ್ಲ. ಆಗ ಆ ಇಂಜೆಕ್ಷನ್ ಎಲ್ಲಿಗೆ ಹೋಗುತ್ತದೆ ಹೇಳಿ ?" ಎಂದು ಅವರು ಪ್ರಶ್ನಿಸುತ್ತಾರೆ.

ಆದರೆ, ಬೀಡಿನಲ್ಲಿ ಔಷಧಿಯನ್ನು ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಜಗತಾಪ್ ಹೇಳುತ್ತಾರೆ.

ಅಕ್ರಮವಾಗಿ ರೆಮ್‌ಡೆಸಿವಿರ್ ಖರೀದಿಸುವವರಲ್ಲಿ ಹೆಚ್ಚಿನವರು ರಾಜಕೀಯ ಸಂಪರ್ಕದ ಮೂಲಕ ಪಡೆಯುತ್ತಾರೆ ಎಂದು ಬೀದರ ನಗರದ ದೈನಿಕ್ ಕಾರ್ಯಾರಂಭ ಪತ್ರಿಕೆಯ ಪತ್ರಕರ್ತ ಬಾಲಾಜಿ ಮಾರ್ಗುಡೆ ಹೇಳುತ್ತಾರೆ. "ಪಕ್ಷದ ವ್ಯಾಪ್ತಿಯಲ್ಲಿರುವ ಸ್ಥಳೀಯ ನಾಯಕರು ಅಥವಾ ಅವರೊಂದಿಗೆ ಸಂಪರ್ಕ ಹೊಂದಿದ ಜನರು ಇದನ್ನು ಸುಲಭವಾಗಿ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ” ಎಂದು ಅವರು ಹೇಳುತ್ತಾರೆ. "ನಾನು ಮಾತನಾಡಿಸಿದ ಬಹುತೇಕರು ಇದನ್ನು ಹೇಳಿದ್ದಾರೆ, ಆದರೆ ಅವರು ಭಯಪಡುವ ಕಾರಣ ಹೆಚ್ಚಿನ ವಿವರಗಳನ್ನು ನೀಡುವುದಿಲ್ಲ. ಜನರು ಮರುಪಾವತಿಸಲು ಸಾಧ್ಯವಾಗದ ಹಣವನ್ನು ಎರವಲು ಪಡೆದಿದ್ದಾರೆ. ತಮ್ಮ ಜಮೀನು, ಒಡವೆಗಳನ್ನು ಮಾರಾಟ ಮಾಡಿದ್ದಾರೆ. ರೆಮೆಡಿಸಿವಿರ್‌ಗಾಗಿ ಕಾಯುತ್ತಿರುವಾಗ ಅನೇಕ ರೋಗಿಗಳು ಸಾವನ್ನಪ್ಪಿದ್ದಾರೆ.”

ರೋಗಿಯ ರಕ್ತದ ಆಮ್ಲಜನಕದ ಮಟ್ಟವು ಇಳಿಯುವ ಮೊದಲು ಕೊರೊನಾವೈರಸ್ ಸೋಂಕಿನ ಆರಂಭಿಕ ಹಂತಗಳಲ್ಲಿ ರೆಮ್‌ಡೆಸಿವಿರ್ ಪರಿಣಾಮಕಾರಿಯಾಗಿದೆ ಎಂದು ಡಾ ಬೊಂಡ್ವೆ ವಿವರಿಸುತ್ತಾರೆ. "ಇದು ಭಾರತದಲ್ಲಿ ಹಲವಾರು ಸಂದರ್ಭಗಳಲ್ಲಿ ಕೆಲಸ ಮಾಡುವುದಿಲ್ಲ, ಏಕೆಂದರೆ ರೋಗಿಗಳು ಹೆಚ್ಚಾಗಿ ಆಸ್ಪತ್ರೆಗೆ ನಿರ್ಣಾಯಕವಾಗಿದ್ದಾಗ ಮಾತ್ರ ಬರುತ್ತಾರೆ.” ಎಂದು ಅವರು ಹೇಳುತ್ತಾರೆ.

ಬಹುಶಃ ರವಿ ಬೋಬ್ಡೆಯವರ ತಂದೆ-ತಾಯಿಯ ವಿಷಯದಲ್ಲೂ ಹೀಗೇ ಆಗಿರಬಹುದು.

Ravi is trying to get used to his parents' absence
PHOTO • Parth M.N.

ತಂದೆ - ತಾಯಿ ಅನುಪಸ್ಥಿತಿಯಿಂದ ಹೊರ ಬರಲು ರವಿ ಪ್ರಯತ್ನಿಸುತ್ತಿದ್ದಾರೆ

ರೆಮ್‌ಡೆಸಿವಿರ್ ಕೊರತೆಯು ಬೀಡಿನಲ್ಲಿ ಬೃಹತ್ ಪ್ರಮಾಣದ ಕಾಳಸಂತೆ ನಿರ್ಮಾಣಕ್ಕೆ ಕಾರಣವಾಯಿತು. ರಾಜ್ಯ ಸರ್ಕಾರವು 1,400 ರೂ.ಗೆ ನಿಗದಿಪಡಿಸಿದ ಪ್ರತಿ ಚುಚ್ಚುಮದ್ದಿನ ದರವು ಕಾಳಸಂತೆಯಲ್ಲಿ 50,000 ರೂ.ಗೆ ಏರಿತು

ಆಂಬ್ಯುಲೆನ್ಸ್ ಅವರನ್ನು ಸೊಲ್ಲಾಪುರದ ಆಸ್ಪತ್ರೆಗೆ ಕರೆದೊಯ್ದ ನಂತರ, ಅರ್ಜುನ್ ಮತ್ತು ಗೀತಾ ಬೋಬ್ಡೆ ಒಂದು ವಾರದ ಅವಧಿಯಲ್ಲಿ ಸಾವನ್ನಪ್ಪಿದರು. "ನಾಲ್ಕು ಗಂಟೆಗಳ ಪ್ರಯಾಣವು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.ರಸ್ತೆಗಳು ಉತ್ತಮವಾಗಿಲ್ಲ, ಆದ್ದರಿಂದ ಅವುಗಳ ಮೇಲೆ ಇದು ಇನ್ನಷ್ಟೂ ಪರಿಣಾಮ ಬೀರಿರಬೇಕು, ”ಎಂದು ರವಿ ಹೇಳುತ್ತಾರೆ. “ಆದರೆ ನಾನು ಇನ್ನೊಂದು ಆಯ್ಕೆಯನ್ನು ಯೋಚನೆ ಮಾಡಲು ಸಾಧ್ಯವಾಗಲಿಲ್ಲ. ಬೀಡಿನಲ್ಲಿ ರೆಮ್‌ಡೆಸಿವಿರ್ ಪಡೆಯಲು ನಾನು ಐದು ದಿನಗಳ ಕಾಲ ಕಾಯುತ್ತಿದ್ದೆ.” ಎಂದು ಹೇಳಿದರು.

ತಂದೆ-ತಾಯಿಯರು ತೀರಿದ ನಂತರ, ರವಿ ಈಗ ಹರ್ಕಿ ನಿಮಗಾಂವ್‌ನ ಮನೆಯಲ್ಲಿ ಒಬ್ಬರೇ ಇದ್ದಾರೆ. ಅವರ ಹಿರಿಯ ಸಹೋದರ ಜಲೀಂದರ್ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಜಲ್ನಾದಲ್ಲಿಯೇ ವಾಸಿಸುತ್ತಿದ್ದು, ಅಲ್ಲಿಯೇ ಅವರು ಕೆಲಸ ಮಾಡುತ್ತಾರೆ. "ನನಗೆ ವಿಚಿತ್ರ ಅನಿಸುತ್ತಿದೆ" ಎಂದು ರವಿ ಹೇಳುತ್ತಾರೆ. “ನನ್ನ ಸಹೋದರ ಬಂದು ನನ್ನೊಂದಿಗೆ ಸ್ವಲ್ಪ ಸಮಯ ಇರುತ್ತಾನೆ, ಆದರೆ ಅವನಿಗೆ ಕೆಲಸವಿದೆ. ಅವನು ಮತ್ತೆ ಜಲ್ನಾಗೆ ಹೋಗಬೇಕು ಹಾಗಾಗಿ ಈಗ ನಾನು ಒಬ್ಬಂಟಿಯಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.” ಎನ್ನುತ್ತಾರೆ.

ರವಿ ತಮ್ಮ ತೋಟದಲ್ಲಿ ಹತ್ತಿ, ಸೋಯಾಬೀನ್ ಮತ್ತು ತೊಗರಿ ಬೆಳೆದ ತಮ್ಮ ತಂದೆಗೆ ಕೃಷಿ ಮಾಡಲು ಸಹಾಯ ಮಾಡುತ್ತಿದ್ದರು. "ಅವರು ಬಹುತೇಕ ಕೆಲಸವನ್ನು ಮಾಡಿ ಮುಗಿಸಿದ್ದಾರೆ, ನಾನು ಅವರಿಗೆ ಸಹಾಯ ಮಾಡುತ್ತಿದ್ದೆ" ಎಂದು ತಮ್ಮ ಮನೆಯ ಹಾಸಿಗೆಯಲ್ಲಿ ಚಿಂತಾಕ್ರಾಂತರಾಗಿ ಕುಳಿತಿದ್ದ ರವಿ ಹೇಳುತಿದ್ದರು. ಅವರ ಕಣ್ಣುಗಳು ಈಗಲೇ ಹೆಚ್ಚಿನ ಜವಾಬ್ದಾರಿಗಳನ್ನು ಹೊರಿಸಿರುವ ವ್ಯಕ್ತಿಯಂತೆ ಕಾಣುತ್ತಿದ್ದವು. “ನನ್ನ ತಂದೆ ನಾಯಕರಾಗಿದ್ದರು. ಹಾಗಾಗಿ ನಾನು ಅವರನ್ನು ಹಿಂಬಾಲಿಸಿದೆ,” ಎಂದು ಹೇಳುತ್ತಿದ್ದರು.

ಜಮೀನಿನಲ್ಲಿ, ಅರ್ಜುನನು ಬಿತ್ತನೆಯಂತಹ ಹೆಚ್ಚಿನ ಕೌಶಲ್ಯದ ಅಗತ್ಯವಿರುವ ಕೆಲಸದ ಮೇಲೆ ಕೇಂದ್ರೀಕರಿಸುತ್ತಾನೆ, ಆದರೆ ರವಿಯು ಶ್ರಮದಾಯಕ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಆದರೆ ಈ ವರ್ಷದ ಬಿತ್ತನೆ ಕಾರ್ಯ ಜೂನ್ ಮಧ್ಯಭಾಗದಲ್ಲಿ ಪ್ರಾರಂಭವಾದಾಗ, ರವಿ ತಮ್ಮ ತಂದೆಯ ಜವಾಬ್ದಾರಿಯನ್ನು ಹೊರಬೇಕಾಯಿತು. ಇದು ಈಗ ಅವರಿಗೆ ಕೃಷಿ ಋತುವನ್ನು ಆರಂಭಿಸಲು ಒಂದು ರೀತಿ ಭೀತಿಯನ್ನು ಸೃಷ್ಟಿಸಿದೆ, ಈಗ ಅವರು ಅನುಕರಿಸಬೇಕೆಂದರೆ ಅವರಿಗೆ ನಾಯಕನಿಲ್ಲ.

ಹಿಂತಿರುಗಿ ನೋಡಿದರೆ ಐದು ದಿನಗಳು, 200 ಕಿಲೋಮೀಟರ್ ಮತ್ತು 27,000 ರೂ. ವ್ಯಯಿಸಿರುವುದು ನೋಡಿದರೆ ರೆಮ್‌ಡೆಸಿವಿರ್‌ನ ಹತಾಶ ಹುಡುಕಾಟದಲ್ಲಿ ರವಿ ಕಳೆದುಕೊಂಡದ್ದನ್ನು ಹೇಳುವುದಕ್ಕೂ ಕಷ್ಟವೆನಿಸುತ್ತದೆ.

ಅನುವಾದ: ಎನ್. ಮಂಜುನಾಥ್

Parth M.N.

पार्थ एम एन, साल 2017 के पारी फ़ेलो हैं और एक स्वतंत्र पत्रकार के तौर पर विविध न्यूज़ वेबसाइटों के लिए रिपोर्टिंग करते हैं. उन्हें क्रिकेट खेलना और घूमना पसंद है.

की अन्य स्टोरी Parth M.N.
Translator : N. Manjunath