ಸೆಪ್ಟೆಂಬರ್ ಆರಂಭದಲ್ಲಿ ಘೋಡಾಮಾರ ದ್ವೀಪದ ಹಡಗಿನ ಬಂದರಿನಲ್ಲಿ ಚಟುವಟಿಕೆಗಳು ತೀವ್ರಗೊಳ್ಳುತ್ತವೆ. ಪುರುಷರು, ಮಹಿಳೆಯರು, ಮಕ್ಕಳು ಮತ್ತು ದನಕರುಗಳು ಸಹ ದೋಣಿಯಿಂದ ಇಳಿದು ದಿನದ ಕೆಲಸಕ್ಕೆ ಹೋಗಲು ಹಾತೊರೆಯುತ್ತಾರೆ.ಉಬ್ಬರವಿಳಿತದ ಸಮಯದಲ್ಲಿ ಬೇರೆಡೆ ಆಶ್ರಯ ಪಡೆಯುವ ಅವರು, ನೀರು ಕಡಿಮೆಯಾದ ನಂತರ ನಿಧಾನವಾಗಿ ಸಂಬಂಧಿಕರೊಂದಿಗೆ ದ್ವೀಪಕ್ಕೆ ಮರಳುತ್ತಾರೆ.ಮುಖ್ಯ ಭೂಭಾಗವಾದ ಕಾಕ್‌ಡ್ವಿಪ್‌ನಿಂದ ಸುಂದರಬನ್ಸ್ ನದಿ ಮುಖಜ ಭೂಮಿಯಲ್ಲಿರುವ ದ್ವೀಪವನ್ನು ದೋಣಿ ಮೂಲಕ ತಲುಪಲು ಸುಮಾರು 40 ನಿಮಿಷಗಳು ಹಿಡಿಯುತ್ತದೆ, ಅಂತಹ ಪ್ರಯಾಣಿಕರನ್ನು ತಿಂಗಳಿಗೆ ಎರಡು ಬಾರಿಯಾದರೂ ಮುಖ್ಯ ಭೂಭಾಗದಿಂದ ದ್ವೀಪದ ಪ್ರದೇಶದವರೆಗೆ ಸಾಗಿಸಲಾಗುತ್ತದೆ. ಆದಾಗ್ಯೂ, ಈ ದಿನಚರಿಯು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ ಸಣ್ಣ ದ್ವೀಪದಲ್ಲಿನ ಘೋರಮಾರ ಗ್ರಾಮಸ್ಥರ ಸುದೀರ್ಘ ಹೋರಾಟವನ್ನು ಹುಸಿಗೊಳಿಸಿದೆ.
ಪದೇ ಪದೇ ಉಂಟಾಗುವ ಚಂಡಮಾರುತಗಳು, ಹೆಚ್ಚುತ್ತಿರುವ ಸಮುದ್ರ ಮಟ್ಟಗಳು ಮತ್ತು ಅತಿವೃಷ್ಟಿ - ಇವೆಲ್ಲವುಗಳು ಕೂಡ ಹವಾಮಾನದ ಬದಲಾವಣೆಯಲ್ಲಾಗಿರುವ ಸೂಚನೆಗಳನ್ನು ನೀಡುತ್ತವೆ. ಇದರಿಂದಾಗಿ ಈಗ ಘೋಡಾಮಾರದ ಜನಜೀವನವನ್ನು ಅಸ್ತ್ಯವಸ್ಥಗೊಳಿಸಿದೆ . ಇನ್ನೂ ದಶಕಗಳಿಂದ ಸಂಭವಿಸುತ್ತಿರುವ ಪ್ರವಾಹಗಳು ಮತ್ತು ಅದರಿಂದಾದ ಮಣ್ಣಿನ ಸವಕಳಿಯಿಂದಾಗಿ ಹೂಗ್ಲಿ ನದಿ ಮುಖಜದಲ್ಲಿರುವ ಅವರ ಪ್ರತ್ಯೇಕ ಭೂಪ್ರದೇಶವು ಒಂದು ರೀತಿ ತೇಲುವ ಭೂಮಿಯಾಗಿ ಮಾರ್ಪಟ್ಟಿದೆ.
ಯಾಸ್ ಚಂಡಮಾರುತವು ಮೇ ತಿಂಗಳಲ್ಲಿ ಭೂಮಿಗೆ ಅಪ್ಪಳಿಸಿದಾಗ, ಸಾಗರ್ ಬ್ಲಾಕ್‌ನಲ್ಲಿರುವ ಘೋರಮಾರ ಪ್ರದೇಶವು, ಸುಂದರಬನ್ಸ್‌ನಲ್ಲಿಯೇ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ಮೇ 26ರಂದು, ಹೆಚ್ಚಿನ ಉಬ್ಬರವಿಳಿತದ ಜೊತೆಗೆ ಚಂಡಮಾರುತವು ದ್ವೀಪದ ಏರುಪ್ರದೇಶಗಳಿಗೆ ನುಗ್ಗಿ ಕೇವಲ 15-20 ನಿಮಿಷಗಳಲ್ಲಿ ಅದನ್ನು ಮುಳುಗಿಸಿದೆ. ಈ ಹಿಂದೆ ಅಂಫಾನ್ (2020) ಮತ್ತು ಬುಲ್‌ಬುಲ್ (2019) ಚಂಡಮಾರುತದ ಪ್ರಭಾವವನ್ನು ಎದುರಿಸಿದ್ದ ದ್ವೀಪದ ವಾಸಿಗಳು ಈಗ ಮತ್ತೊಮ್ಮೆ ಅಂತಹ ವಿನಾಶದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.ಅವರ ಮನೆಗಳು ಕಿತ್ತು ಹೋಗಿವೆ ಮತ್ತು ಭತ್ತದ ಉಗ್ರಾಣಗಳು, ವೀಳ್ಯದೆಲೆ ಬೆಳೆಗಳು ಮತ್ತು ಸೂರ್ಯಕಾಂತಿ ಹೊಲಗಳು ಸಂಪೂರ್ಣವಾಗಿ ಕೊಚ್ಚಿಹೋಗಿವೆ.
ಚಂಡಮಾರುತದ ರಭಸಕ್ಕೆ ಖಾಸಿಮರ ಘಾಟ್ ಬಳಿಯ ಅಬ್ದುಲ್ ರೌಫ್ ಅವರ ಮನೆ ಧ್ವಂಸಗೊಂಡಿದೆ. "ನಮಗೆ ಆ ಮೂರು ದಿನಗಳವರೆಗೆ ಆಹಾರವಿದ್ದಿರಲಿಲ್ಲ ಮತ್ತು ಮಳೆನೀರಿನ ಮೇಲೆ ಬದುಕಿದ್ದೇವೆ ಮತ್ತು ಕೇವಲ ಪ್ಲಾಸ್ಟಿಕ್ ಹಾಳೆಗಳಿಂದ ರಕ್ಷಿಸಲ್ಪಟ್ಟಿದ್ದೇವೆ" ಎಂದು 90 ಕಿಲೋಮೀಟರ್ ದೂರದಲ್ಲಿರುವ ಕೋಲ್ಕತ್ತಾದಲ್ಲಿ ಕೆಲಸ ಮಾಡುವ ಟೈಲರ್ ರೌಫ್ ಹೇಳುತ್ತಿದ್ದರು. ಅವರು ಮತ್ತು ಅವರ ಹೆಂಡತಿ ಅನಾರೋಗ್ಯಕ್ಕೆ ಒಳಗಾದಾಗ “ಎಲ್ಲರೂ ನಮಗೆ ಕೋವಿಡ್ ಇದೆ ಎಂದು ಶಂಕಿಸಿದ್ದರು, ಹಲವರು ಹಳ್ಳಿಯನ್ನು ತೊರೆದರು” ಎಂದು ರೌಫ್ ಹೇಳಿದರು. "ನಾವು ಅಲ್ಲಿಯೇ ಮಲಗಿದ್ದೇವೆ, ಸುರಕ್ಷಿತವಾಗಿ ನಮಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ." ರೌಫ್ ಮತ್ತು ಅವರ ಪತ್ನಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಬಗ್ಗೆ ನಿಗಾವಹಿಸಬೇಕೆಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ದೂರು ಬಂದಾಗ. “ಬಿಡಿಒ ನಮಗೆ ಹೇಗಾದರೂ ಮಾಡಿ ಕಾಕದ್ವೀಪ್ ತಲುಪಲು ವಿನಂತಿಸಿಕೊಂಡರು. ಅಲ್ಲಿಂದ ಅವರು ನಮಗೆ ಆಂಬ್ಯುಲೆನ್ಸ್‌ಗೆ ವ್ಯವಸ್ಥೆ ಮಾಡಿದರು. ನಾವು ವೈದ್ಯಕೀಯ ಆರೈಕೆಗಾಗಿ ಸುಮಾರು 22,000 ರೂಪಾಯಿಗಳನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಬಂತು” ಎಂದು ಅವರು ಹೇಳಿದರು. ಅಂದಿನಿಂದ ರೌಫ್ ಮತ್ತು ಅವರ ಕುಟುಂಬವು ದ್ವೀಪದಲ್ಲಿರುವ ಆಶ್ರಯದಲ್ಲಿ ವಾಸಿಸುತ್ತಿದೆ.
ಹಲವಾರು ಮನೆಗಳು ನಾಶವಾದ ನಂತರ ಅಲ್ಲಿನ ಅನೇಕ ಜನರನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಮಂದಿರ್ತಾಲಾ ಗ್ರಾಮದ ನಿವಾಸಿಗಳು ದ್ವೀಪದ ಅತಿ ಎತ್ತರದ ಸ್ಥಳವಾದ ಮಂದಿರ್ತಾಲ ಬಜಾರ್ (ಬಜಾರ್) ಬಳಿಯ ಟ್ಯಾಂಕ್ ಗ್ರೌಂಡ್‌ನಲ್ಲಿರುವ ಆಶ್ರಯದಲ್ಲಿ ನೆಲೆಸಿದ್ದಾರೆ. ಅವರಲ್ಲಿ ಕೆಲವರು ಹತ್ತಿರದ ಕಿರಿದಾದ ರಸ್ತೆಯಲ್ಲಿ ಬಿಡಾರ ಹೂಡಿದ್ದಾರೆ. ದ್ವೀಪದ ಹತ್ಖೋಲಾ, ಚುನ್‌ಪುರಿ ಮತ್ತು ಖಾಸಿಮಾರಾ ಪ್ರದೇಶಗಳಲ್ಲಿನ 30 ಕುಟುಂಬಗಳು ಘೋರಮಾರದ ದಕ್ಷಿಣ ಭಾಗದಲ್ಲಿರುವ ಸಾಗರ್ ದ್ವೀಪದಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿವೆ. ಅವರಿಗೆ ಸ್ಥಳಾಂತರಗೊಳ್ಳಲು ಅಲ್ಲಿ ಭೂಮಿಯನ್ನು ಮಂಜೂರು ಮಾಡಲಾಗಿದೆ.
ಅದರಲ್ಲಿ ರೆಜಾಲ್ ಖಾನ್ ಕುಟುಂಬವೂ ಒಂದು. ಖಾಸಿಮಾರದಲ್ಲಿರುವ ಅವರ ಮನೆ ಈಗ ಪಾಳು ಬಿದ್ದಿದೆ. “ನಾನು ದ್ವೀಪವನ್ನು ತೊರೆಯಬೇಕೆನೋ ಸರಿ, ಆದರೆ ಅದನ್ನ ನಾನ್ಯಾಕೆ ಬೀಡಬೇಕು ಹೇಳಿ?” ಎಂದು ಅವರು ಚಂಡಮಾರುತದಿಂದಾಗಿ ಹಾನಿಯಾಗಿದ್ದ ಮಸೀದಿಯ ಮಸುಕಿನಲ್ಲಿ ಅವರು ಕುಳಿತಿದ್ದಾಗ ಒಂದೆಡೆ ರಬಸದಿಂದ ಬಿರುಗಾಳಿ ಬೀಸುತ್ತಿತ್ತು, ಆಗ ಅವರು ನನಗೆ ಎಲ್ಲವನ್ನು ಕಥೆ ಮಾಡಿ ವಿವರಿಸುತ್ತಿದ್ದರು."ನನ್ನ ಬಾಲ್ಯದ ಗೆಳೆಯ ಗಣೇಶ್ ಪರುವಾನನ್ನು ಬಿಟ್ಟು ನಾನು ಹೇಗೆ ಹೋಗಲಿ ಹೇಳಿ ? ಅವರ ತೋಟದಲ್ಲಿ ಬೆಳೆದಿದ್ದ ಹಾಗಲಕಾಯಿಂದಲೇ ನಿನ್ನೆ ನಮ್ಮ ಮನೆಯಲ್ಲಿ ಅಡುಗೆಯನ್ನು ಸಿದ್ದಪಡಿಸಲಾಗಿದೆ." ಎಂದು ಅವರು ಹೇಳಿದರು.
ಗ್ರಾಮಸ್ಥರು ಈಗಾಗಲೇ ಆಗಿರುವ ನಷ್ಟದಿಂದ ಚೇತರಿಸಿಕೊಳ್ಳುವ ಮೊದಲೇ, ಯಾಸ್ ಚಂಡಮಾರುತದಿಂದ ಮತ್ತೆ ಉಂಟಾದ ಉಬ್ಬರವಿಳಿತದ ಅಲೆಗಳು ಜೂನ್‌ನಲ್ಲಿ ಘೋರಮಾರದಲ್ಲಿ ಪ್ರವಾಹಕ್ಕೆ ಕಾರಣವಾಗಿದ್ದವು, ತದನಂತರ ಮುಂಗಾರು ಮಳೆಯಿಂದಾಗಿ ಅದು ಇನ್ನಷ್ಟು ಮುಳುಗಡೆಗೆ ಕಾರಣವಾಯಿತು. ಈ ಘಟನೆಗಳ ವಿನಾಶಕಾರಿ ಪರಿಣಾಮಗಳ ಬಗ್ಗೆ ಚಿಂತಿಸುತ್ತಿದ್ದ ರಾಜ್ಯ ಆಡಳಿತವು ಜನರ ಜೀವಹಾನಿಯನ್ನು ತಡೆಗಟ್ಟಲು ಅಲ್ಲಿನ ನಿವಾಸಿಗಳಿಗೆ ಪುನರ್ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಯಿತು.
"ಆ ದಿನಗಳಲ್ಲಿ [ಚಂಡಮಾರುತದ ನಂತರ] ಉಪ್ಪು ಮತ್ತು ಎಣ್ಣೆಯನ್ನು ಹೊರತುಪಡಿಸಿ ನನ್ನ ಅಂಗಡಿಯಲ್ಲಿ ಏನೂ ಇರಲಿಲ್ಲ" ಎಂದು ಮಂದಿರದ ಕಿರಾಣಿ ಅಂಗಡಿಯ ಮಾಲೀಕ ಅಮಿತ್ ಹಲ್ದಾರ್ ಹೇಳಿದರು. "ಎಲ್ಲವೂ ಅಲೆಗಳಲ್ಲಿ ಮುಳುಗಿಹೋಗಿದ್ದವು, ಇದಕ್ಕೂ ಮೊದಲು ನಮ್ಮ ದ್ವೀಪದಲ್ಲಿನ ಹಿರಿಯ ತಲೆಮಾರಿನವರು ಸಹಿತ ಅಂತಹ ಬೃಹದಾಕಾರದ ಅಲೆಗಳನ್ನು ನೋಡಿರಲಿಲ್ಲ. ಅವು ಎಷ್ಟು ಎತ್ತರವಾಗಿದ್ದವು ಎಂದರೆ, ನಮ್ಮಲ್ಲಿ ಬಹುತೇಕರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಮರಗಳನ್ನು ಏರಬೇಕಾಯಿತು.ಕೆಲವು ಮಹಿಳೆಯರನ್ನು ಪ್ರವಾಹದಲ್ಲಿ ಕೊಚ್ಚಿಹೋಗದಂತೆ ದ್ವೀಪದ ಎತ್ತರದ ಸ್ಥಳಗಳಲ್ಲಿ ಮರಗಳಿಗೆ ಕಟ್ಟಿಹಾಕಲಾಯಿತು, ನೀರಿನ ಮಟ್ಟವು ಅವರ ಕುತ್ತಿಗೆಯವರೆಗೂ ತಲುಪಿತ್ತು, ಈ ಸಂದರ್ಭದಲ್ಲಿ ನಮ್ಮ ಬಹುತೇಕ ಜಾನುವಾರುಗಳನ್ನು ನಮಗೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಹಲ್ದಾರ್ ಹೇಳಿದರು.
ಸುಂದರಬನ್ಸ್‌ನಲ್ಲಿನ ಹವಾಮಾನ ಬದಲಾವಣೆಯ ಬಿಕ್ಕಟ್ಟಿನ ಕುರಿತು 2014 ರ ಅಧ್ಯಯನದ ಪ್ರಕಾರ, ಹೆಚ್ಚುತ್ತಿರುವ ಸಮುದ್ರ ಮಟ್ಟಗಳು ಮತ್ತು ಸಂಕೀರ್ಣ ಜಲ-ಚಲನಶೀಲ ಪರಿಸ್ಥಿತಿಗಳು ಘೋರಮಾರದಲ್ಲಿ ತೀವ್ರ ಕರಾವಳಿ ಸವೆತಕ್ಕೆ ಕಾರಣವಾಗಿವೆ. 1975ರಲ್ಲಿ 8.51 ಚದರ ಕಿಲೋಮೀಟರ್‌ಗಳಿದ್ದ ದ್ವೀಪದ ಒಟ್ಟು ಭೂಪ್ರದೇಶವು 2012 ರ ವೇಳೆಗೆ 4.43 ಚದರ ಕಿಮೀಗೆ ಕುಸಿದಿದೆ.ಪುನರಾವರ್ತಿತ ಸ್ಥಳಾಂತರ ಮತ್ತು ಪರಿಸರ ವ್ಯವಸ್ಥೆಯ ಕ್ರಮೇಣ ನಷ್ಟದಿಂದಾಗಿ ದ್ವೀಪದಿಂದ ವಲಸೆ ಹೋಗುವ ಜನರ ಪ್ರಮಾಣವು ಅಧಿಕವಾಗಿದೆ ಎಂದು ಅಧ್ಯಯನವು ತಿಳಿಸಿದೆ. ಘೋಡಾಮಾರ ಜನಸಂಖ್ಯೆಯು 2001 ಮತ್ತು 2011ರ ನಡುವೆ 5,236ರಿಂದ 5,193ಕ್ಕೆ ಇಳಿದಿದೆ, ಇದು ವಲಸೆ ಕಾರಣದಿಂದಾಗಿಯೇ ಇಳಿಮುಖವಾಗಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.
ಅವರ ಇಂತಹ ದುರಾದೃಷ್ಟದ ಹೊರತಾಗಿಯೂ, ಘೋಡಾಮಾರದಲ್ಲಿನ ಎಲ್ಲ ಜನರು ಪರಸ್ಪರ ಬೆಂಬಲಕ್ಕಾಗಿ ಒಗ್ಗೂಡುತ್ತಾರೆ. ಸೆಪ್ಟೆಂಬರ್‌ನಲ್ಲಿ ಆ ದಿನ, ಹತ್‌ಖೋಲಾದಲ್ಲಿನ ಆಶ್ರಯದಲ್ಲಿದ್ದ ಪ್ರತಿಯೊಬ್ಬರೂ ಆರು ತಿಂಗಳ ವಯಸ್ಸಿನ ಅವಿಕ್‌ನ ಅನ್ನಪ್ರಾಶನದ ತಯಾರಿಯಲ್ಲಿ ಸಹಾಯ ಮಾಡಲು ತಮ್ಮನ್ನು ತೊಡಗಿಸಿಕೊಂಡಿದ್ದರು, ಈ ಸಮಾರಂಭದಲ್ಲಿ ಮಗುವಿಗೆ ಮೊದಲ ಬಾರಿಗೆ ಅನ್ನವನ್ನು ತಿನ್ನಿಸಲಾಗುತ್ತದೆ. ಅವರ ಕುಗ್ಗುತ್ತಿರುವ ಭೂಮಿ ಈ ಪರಿಸರ ನಿರಾಶ್ರಿತರನ್ನು ತಮ್ಮ ಜೀವನದ ಅನಿರೀಕ್ಷಿತತೆಗೆ ಸಮನ್ವಯಗೊಳಿಸಲು ಒತ್ತಾಯಿಸುತ್ತದೆ- ಹೀಗಾಗಿ ಅವರು ಈಗ ತಮ್ಮ ಮನೆಗಳನ್ನು ಪುನರ್ನಿರ್ಮಿಸಬೇಕು ಇಲ್ಲವೇ ಹೊಸ ಆಶ್ರಯವನ್ನು ಹುಡುಕಬೇಕು.
ಅನುವಾದ - ಎನ್. ಮಂಜುನಾಥ್