ಚಂಧ್ರಿಕಾ ಬೆಹೆರಾಳಿಗೆ ಈ ಒಂಬತ್ತು ವರ್ಷ. ಸುಮಾರು ಕಳೆದ ಎರಡು ವರ್ಷಗಳಿಂದ ಅವಳು ಶಾಲೆಗೆ ಹೋಗುತ್ತಿಲ್ಲ. ಬಾರಾಬಂಕಿಯಲ್ಲಿ ಶಾಲೆಯಿಂದ ಹೊರಗುಳಿದಿರುವ 1ರಿಂದ 5ನೇ ತರಗತಿಯ 19 ವಿದ್ಯಾರ್ಥಿಗಳಲ್ಲಿ ಅವಳೂ ಒಬ್ಬಳು. ಈ ಮಕ್ಕಳು 2020ರಿಂದ ನಿಯಮಿತವಾಗಿ ಶಾಲೆಗೆ ಹೋಗಿಲ್ಲ. ತನ್ನ ತಾಯಿ ಶಾಲೆಗೆ ಹೋಗಲು ಬಿಡುವುದಿಲ್ಲವೆನ್ನುವುದು ಅವಳು ಶಾಲೆಗೆ ಹೋಗದಿರುವುದಕ್ಕೆ ಕೊಡುವ ಕಾರಣ.
ಬಾರಾಬಂಕಿ 2007ರಲ್ಲಿ ಊರಿನಲ್ಲಿ ತನ್ನದೇ ಆದ ಶಾಲೆಯನ್ನು ಹೊಂದಿತ್ತು, ಆದರೆ ಇದನ್ನು ಒಡಿಶಾ ಸರ್ಕಾರವು 2020ರಲ್ಲಿ ಮುಚ್ಚಿತು. ಪ್ರಾಥಮಿಕ ಶಾಲಾ ಮಕ್ಕಳು, ಹೆಚ್ಚಾಗಿ ಹಳ್ಳಿಯಿಂದ ಬರುವ ಚಂದ್ರಿಕಾಳಂತಹ ಸಂತಾಲ್ ಮತ್ತು ಮುಂಡಾ ಆದಿವಾಸಿ ವಿದ್ಯಾರ್ಥಿಗಳನ್ನು ಸುಮಾರು 3.5 ಕಿಲೋಮೀಟರ್ ದೂರದಲ್ಲಿರುವ ಜಮುಪಾಸಿ ಗ್ರಾಮದ ಶಾಲೆಗೆ ದಾಖಲಿಸಲು ಹೇಳಲಾಯಿತು.
"ಮಕ್ಕಳು ಪ್ರತಿದಿನ ಅಷ್ಟು ದೂರ ನಡೆಯಲು ಸಾಧ್ಯವಿಲ್ಲ. ಅಲ್ಲದೆ ದೀರ್ಘ ನಡಿಗೆಯ ದಾರಿಯಲ್ಲಿ ಪರಸ್ಪರ ಜಗಳವಾಡುತ್ತಿರುತ್ತಾರೆ," ಎಂದು ಚಂದ್ರಿಕಾ ಅವರ ತಾಯಿ ಮಾಮಿ ಬೆಹೆರಾ ಹೇಳುತ್ತಾರೆ. "ನಾವು ಬಡ ಕಾರ್ಮಿಕರು. ಕೆಲಸ ಹುಡುಕೋದನ್ನ ಬಿಟ್ಟು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಸಾಧ್ಯವೆ? ಅಧಿಕಾರಿಗಳು ನಮ್ಮ ಊರಿನ ಶಾಲೆಯನ್ನು ಮತ್ತೆ ತೆರೆಯಬೇಕು," ಎಂದು ಅವರು ಹೇಳುತ್ತಾರೆ.
ಅಲ್ಲಿಯವರೆಗೆ ತನ್ನ ಕಿರಿಯ ಮಗಳಂತೆ 6ರಿಂದ 10 ವರ್ಷದೊಳಗಿನ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಿಲ್ಲವೆಂದು ಅವರು ಅಸಾಯಕತೆಯಿಂದ ನಿಟ್ಟುಸಿರಿಡುತ್ತಾರೆ. 30 ವರ್ಷದವರಾದ ಅವರು ಜಾಜ್ಪುರ ಜಿಲ್ಲೆಯ ದಾನಗಡಿ ಬ್ಲಾಕ್‌ನ ಕಾಡಿನಲ್ಲಿ ಮಕ್ಕಳ ಕಳ್ಳರು ಸಹ ಇರಬಹುದೆಂದು ಹೆದರುತ್ತಾರೆ.
ತನ್ನ ಮಗ ಜೋಗಿಗೆ ಮಾಮಿ ಒಂದು ಹಳೆಯ ಸೈಕಲ್ಲೊಂದನ್ನು ವ್ಯವಸ್ಥೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಜೋಗಿ ಊರಿನಿಂದ 6 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಹಿರಿಯ ಮಗಳು ಮೋನಿ ಜಮುಪಾಸಿಯಲ್ಲಿನ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅವಳು ಸಹ ನಡೆದೇ ಶಾಲೆಗೆ ಹೋಗುತ್ತಾಳೆ. ಕಿರಿಯ ಮಗಳು ಚಂದ್ರಿಕಾ ಮನೆಯಲ್ಲೇ ಇರುತ್ತಾಳೆ.
“ನಮ್ಮ ತಲೆಮಾರು ನಡೆಯುವುದು, ಏರಿಳಿಯುವುದು ಎಲ್ಲವನ್ನೂ ದೇಹ ಗಟ್ಟಿಯಿರುವ ತನಕವೂ ಮಾಡಿದೆ. ಈಗ ನಮ್ಮ ಮಕ್ಕಳೂ ಹಾಗೇ ಬದುಕಬೇಕೆ?” ಎಂದು ಕೇಳುತ್ತಾರೆ ಮಾಮಿ.
ಬಾರಾಬಂಕಿಯ 87 ಕುಟುಂಬಗಳಲ್ಲಿ ಹೆಚ್ಚಿನವರು ಆದಿವಾಸಿಗಳು. ಕೆಲವರು ಸಣ್ಣ ತುಂಡು ಭೂಮಿಯಲ್ಲಿ ಬೇಸಾಯ ಮಾಡುತ್ತಾರೆ, ಆದರೆ ಹೆಚ್ಚಿನವರು ಉಕ್ಕು ಸ್ಥಾವರ ಅಥವಾ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡಲು 5 ಕಿ.ಮೀ ದೂರದಲ್ಲಿರುವ ಸುಕಿಂಡಾದವರೆಗೆ ಹೋಗುವ ದಿನಗೂಲಿ ಕಾರ್ಮಿಕರು. ಕೆಲವು ಪುರುಷರು ಸ್ಪಿನ್ನಿಂಗ್ ಮಿಲ್ ಅಥವಾ ಬಿಯರ್ ಕ್ಯಾನ್ ಪ್ಯಾಕೇಜಿಂಗ್ ಘಟಕದಲ್ಲಿ ಕೆಲಸ ಮಾಡಲು ತಮಿಳುನಾಡಿಗೆ ವಲಸೆ ಹೋಗಿದ್ದಾರೆ.
ಬಾರಾಬಂಕಿಯಲ್ಲಿನ ಶಾಲೆ ಮುಚ್ಚಿದ್ದರಿಂದಾಗಿ ಆ ಭಾಗದ ಮಕ್ಕಳಿಗೆ ಸಿಗುತ್ತಿದ್ದ ಮಧ್ಯಾಹ್ನದ ಊಟ ಲಭ್ಯತೆಯ ಕುರಿತಾಗಿಯೂ ಅನುಮಾನಗಳಿವೆ. ಇದು ಬಡ ಕುಟುಂಬಗಳಿಗೆ ಬಹಳ ಅಗತ್ಯದ ಯೋಜನೆಯಾಗಿದೆ. ಕಿಶೋರ್ ಬೆಹೆರಾ ಹೇಳುವಂತೆ ʼಕನಿಷ್ಟ ಏಳು ತಿಂಗಳ ಕಾಲ ಬಿಸಿಯೂಟಕ್ಕೆ ಪರ್ಯಾಯವಾಗಿ ನೀಡಲಾಗುತ್ತದೆ ಎಂದು ಭರವಸೆ ನೀಡಲಾಗಿದ್ದ ಹಣವನ್ನಾಗಲೀ, ಅಕ್ಕಿಯನ್ನಾಗಲೀ ನನಗೆ ನೀಡಲಾಗಿಲ್ಲ.” ಕೆಲವು ಕುಟುಂಬಗಳು ಊಟ ಬದಲಾಗಿ ತಮ್ಮ ಖಾತೆಗಳಲ್ಲಿ ಹಣವನ್ನು ಸ್ವೀಕರಿಸಿದವು. 3.5 ಕಿ.ಮೀ ದೂರದಲ್ಲಿರುವ ಹೊಸ ಶಾಲೆಯ ಆವರಣದಲ್ಲಿ ವಿತರಣೆ ಇರುತ್ತದೆ ಎಂದು ಕೆಲವೊಮ್ಮೆ ಅವರಿಗೆ ತಿಳಿಸಲಾಯಿತು.
*****
ಪುರಣಮಂತಿರಾ ಎನ್ನುವುದು ಇದೇ ವಿಭಾಗದ ಪಕ್ಕದ ಊರು. ಅದು ಎಪ್ರಿಲ್ ತಿಂಗಳ ಮೊದಲ ವಾರದ ಒಂದು ಮಧ್ಯಾಹ್ನ. ಆ ಹಳ್ಳಿಯನ್ನು ಹಾದು ಹೋಗುವ ಇಕ್ಕಟ್ಟಾದ ರಸ್ತೆ ಚಟುವಟಿಕೆಯಿಂದ ಕೂಡಿತ್ತು. ಅಲ್ಲಿ ಇದ್ದಕ್ಕಿದ್ದಂತೆ ಜನರ ಗುಂಪು ಸೇರಿತು. ಮಹಿಳೆಯರು, ಪರುಷರು, ಅಜ್ಜಿ, ಸೈಕಲ್ಲಿನಲ್ಲಿ ಬಂದ ದೊಡ್ಡ ಹುಡುಗರು ಹೀಗೆ ಜನರ ಸಂತೆಯೇ ಅಲ್ಲಿ ನೆರೆದಿತ್ತು. ಮಾತನಾಡಿದರೆ ಎಲ್ಲಿ ಶಕ್ತಿ ನಷ್ಟವಾಗುತ್ತದೋ ಎನ್ನುವಂತೆ ಅಲ್ಲೊಂದು ಮೌನ ನೆಲೆಸಿತ್ತು. 42 ಡಿಗ್ರಿ ಬಿಸಿಲಿನಲ್ಲಿ ಎಲ್ಲರೂ ತಲೆಯ ಮೇಲೆ ಗಮ್ಚಾ(ಶಾಲು) ಸೆರಗು ಹೊದ್ದು ನೆರಳು ಮಾಡಿಕೊಳ್ಳುತ್ತಿದ್ದರು.
ಬಿಸಿಲಿನ ತಾಪವನ್ನು ಲೆಕ್ಕಿಸದೆ, ಪುರಾಣಮಂತಿರದ ನಿವಾಸಿಗಳಾದ ಇವರು ತಮ್ಮ ಪುಟ್ಟ ಹುಡುಗರು ಮತ್ತು ಹುಡುಗಿಯರನ್ನು ಶಾಲೆಯಿಂದ ಕರೆತರಲು 1.5 ಕಿ.ಮೀ ನಡೆದುಕೊಂಡು ಹೋಗುತ್ತಿದ್ದಾರೆ.
ದೀಪಕ್ ಮಲಿಕ್ ಪುರಣಮಂತಿರಾ ನಿವಾಸಿಯಾಗಿದ್ದು, ಸುಕಿಂಡಾ ಕಣಿವೆಯ ಸಿಮೆಂಟ್ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ, ಇದು ವಿಶಾಲವಾದ ಕ್ರೋಮೈಟ್ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ. ಅವರಂತೆಯೇ, ಪರಿಶಿಷ್ಟ ಜಾತಿ ಪ್ರಾಬಲ್ಯದ ಈ ಹಳ್ಳಿಯ ಇತರರು ಉತ್ತಮ ಭವಿಷ್ಯಕ್ಕಾಗಿ ಯೋಗ್ಯ ಶಿಕ್ಷಣವೇ ಮಕ್ಕಳಿಗೆ ದಾರಿ ಎನ್ನುವುದನ್ನು ತಿಳಿದಿದ್ದಾರೆ. "ನಮ್ಮ ಊರಿನಲ್ಲಿ ಅವತ್ತಿನ ರಾತ್ರಿ ಊಟ ಮಾಡಬೇಕೆಂದರೆ ಹಗಲಿನಲ್ಲಿ ದುಡಿಯಲೇಬೇಕಾದ ಪರಿಸ್ಥಿತಿಯಲ್ಲಿರುವವರೇ ಹೆಚ್ಚು," ಎಂದು ಅವರು ಹೇಳುತ್ತಾರೆ. “ಹೀಗಾಗಿಯೇ 2013-14ರಲ್ಲಿ ಇಲ್ಲಿ ಶಾಲೆ ಕಟ್ಟಿದ್ದು ನಮಗೆಲ್ಲ ಹಬ್ಬದ ಸಂಭ್ರಮ ತಂದಿತ್ತು.”
25 ಮನೆಗಳ ಈ ಊರಿನ ನಿವಾಸಿ ಸುಜಾತಾ ರಾಣಿ ಸಮಲ್ ಹೇಳುತ್ತಾರೆ, 2020ರಲ್ಲಿ ಸಾಂಕ್ರಾಮಿಕ ಪಿಡುಗು ಬಂದಾಗಿನಿಂದ, ಪುರಣಮಂದಿರದಲ್ಲಿನ 1-5ನೇ ತರಗತಿಯಲ್ಲಿ ಇರಬೇಕಿದ್ದ 14 ಮಕ್ಕಳಿಗೆ ಪ್ರಾಥಮಿಕ ಶಾಲೆಯಿಲ್ಲ. ಈಗ ಆ ಮಕ್ಕಳು, ಕಿರಿಯ ಪ್ರಾಥಮಿಕ ಶಾಲೆ ಓದುವ ಸಲುವಾಗಿ 1.5 ಕಿ.ಮೀ ದೂರದ ಜನನಿಬಿಡ ರೈಲು ಮಾರ್ಗದ ಬಳಿ ಇರುವ ಪಕ್ಕದ ಹಳ್ಳಿಯಾದ ಚಕುವಾಗೆ ಹೋಗಬೇಕು.
ರೈಲ್ವೆ ಮಾರ್ಗವನ್ನು ತಪ್ಪಿಸಲು ಮೇಲ್ಸೇತುವೆಯಿರುವ ಮೋಟಾರು ರಸ್ತೆಯನ್ನು ಬಳಸಬಹುದು, ಆದರೆ ಆಗ ದೂರವು 5 ಕಿ.ಮೀ. ಆಗುತ್ತದೆ. ಈ ದಾರಿಯಲ್ಲಿ ಶಾಲೆ ತಲುಪಲು ಹಳ್ಳಿಯ ಅಂಚಿನಲ್ಲಿರುವ ಹಳೆಯ ಶಾಲೆ ಮತ್ತು ಒಂದೆರಡು ದೇವಾಲಯಗಳನ್ನು ದಾಟಿ ಬ್ರಾಹ್ಮಣಿ ರೈಲ್ವೆ ನಿಲ್ದಾಣಕ್ಕೆ ಹೋಗುವ ರೈಲ್ವೆ ದಂಡೆಯಲ್ಲಿ ಕೊನೆಗೊಳ್ಳುವ ಸಣ್ಣ ರಸ್ತೆಯಲ್ಲಿ ಸಾಗಬೇಕು.
ಒಂದು ಗೂಡ್ಸ್ ರೈಲು ಆ ಹಳಿಗಳ ಮೇಲೆ ಹಾದು ಹೋಯಿತು.
ಭಾರತೀಯ ರೈಲ್ವೆಯ ಹೌರಾ-ಚೆನ್ನೈ ಮುಖ್ಯ ಮಾರ್ಗದಲ್ಲಿ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಸರಕು ಮತ್ತು ಪ್ರಯಾಣಿಕರ ರೈಲುಗಳು ಬ್ರಹ್ಮಣಿಯನ್ನು ದಾಟುತ್ತವೆ. ಇದೇ ಕಾರಣಕ್ಕಾಗಿ, ಪುರಣಮಂದಿರದ ಯಾವುದೇ ಕುಟುಂಬವು ತಮ್ಮ ಮಗುವನ್ನು ಜೊತೆಗೆ ಹಿರಿಯರಿಲ್ಲದೆ ಕಳುಹಿಸಲು ಒಪ್ಪುವುದಿಲ್ಲ.
ಹಳಿಗಳು ಇನ್ನೂ ಕಂಪಿಸುತ್ತಿರುವಾಗಲೇ ಜನರು ಇನ್ನೊಂದು ರೈಲು ಬರುವ ಮೊದಲೇ ಹಳಿಯ ಇನ್ನೊಂದು ಬದಿಯನ್ನು ತಲುಪುವ ಸಲುವಾಗಿ ಅತ್ತಿತ್ತ ಓಡಾಡತೊಡಗಿದರು. ಕೆಲವು ಮಕ್ಕಳು ಹಳಿಯ ದಂಡೆಯನ್ನು ಹಾರುವುದು, ಜಾರುವುದರ ಮೂಲಕ ಆತುರಾತುರದಿಂದ ದಾಟುತ್ತಿದ್ದರು. ಹಾದಿಹೋಕರು ಕೂಡಾ ಅವಸರದಲ್ಲಿದ್ದರು. ದಣಿದ ಪಾದಗಳು, ಗಟ್ಟಿ ಪಾದಗಳು, ಬಿಸಿಲಿಗೆ ಸುಟ್ಟ ಪಾದಗಳು, ಬರಿಗಾಲಿನ ಪಾದಗಳು, ದಣಿದ ಪಾದಗಳು ಹೀಗೆ ಎಲ್ಲವೂ 25 ನಿಮಿಷಗಳ ಈ ಪಾದಯಾತ್ರೆ ಮಾಡಲೇಬೇಕು.
*****
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ 'ಮಾನವ ಬಂಡವಾಳವನ್ನು ಪರಿವರ್ತಿಸುವ ಸುಸ್ಥಿರ ಕ್ರಿಯೆ (ಎಸ್ಎಟಿಎಚ್)' ಎಂಬ ಕೇಂದ್ರ ಸರ್ಕಾರದ ಕಾರ್ಯಕ್ರಮದ ಮೂಲಕ ಒಡಿಶಾದಲ್ಲಿ ಮುಚ್ಚಲಾದ ಸುಮಾರು 9,000 ಶಾಲೆಗಳಲ್ಲಿ ಬಾರಾಬಂಕಿ ಮತ್ತು ಪುರಣಮಂತಿರಾದಲ್ಲಿನ ಪ್ರಾಥಮಿಕ ಶಾಲೆಗಳು ಸೇರಿವೆ.
ಒಡಿಶಾ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಶಾಲಾ ಶಿಕ್ಷಣವನ್ನು 'ಸುಧಾರಿಸಲು' 2017ರ ನವೆಂಬರ್ ತಿಂಗಳಿನಲ್ಲಿ ಸಾಥ್-ಇ ಯೋಜನೆಯನ್ನು ಪ್ರಾರಂಭಿಸಲಾಯಿತು. 2018ರ ಪತ್ರಿಕಾ ಮಾಹಿತಿ ಬ್ಯೂರೋ ಪ್ರಕಟಣೆಯ ಪ್ರಕಾರ, "ಇಡೀ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಪ್ರತಿ ಮಗುವಿಗೆ ಸ್ಪಂದಿಸುವಂತೆ ಮಾಡುವುದು, ಮಹತ್ವಾಕಾಂಕ್ಷಿಯಾಗಿಸುವುದು ಮತ್ತು ಪರಿವರ್ತನಾತ್ಮಕವಾಗಿಸುವುದು," ಇದರ ಉದ್ದೇಶವಾಗಿತ್ತು.
ಹಳ್ಳಿಯ ಶಾಲೆಯನ್ನು ಮುಚ್ಚಿದ ನಂತರ ಬಾರಾಬಂಕಿಯಲ್ಲಿನ 'ಪರಿವರ್ತನೆ' ಸ್ವಲ್ಪ ಭಿನ್ನವಾಗಿದೆ. ಹಳ್ಳಿಯಲ್ಲಿ ಒಬ್ಬ ಡಿಪ್ಲೊಮಾ ಹೊಂದಿರುವವರಿದ್ದರು, ಕೆಲವರು ತಮ್ಮ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದರೆ ಇನ್ನೂ ಹಲವರು ಮೆಟ್ರಿಕ್ಯುಲೇಷನ್ನಲ್ಲಿ ಅನುತ್ತೀರ್ಣರಾಗಿದ್ದರು. "ಈಗ ನಮ್ಮಲ್ಲಿ ಅದೂ ಇಲ್ಲವಾಗಬಹುದು," ಎಂದು ಈಗ ಅಸ್ತಿತ್ವದಲ್ಲಿಲ್ಲದ ಶಾಲೆಯ ನಿರ್ವಹಣಾ ಸಮಿತಿಯ ಅಧ್ಯಕ್ಷ ಕಿಶೋರ್ ಬೆಹೆರಾ ಹೇಳುತ್ತಾರೆ.
ಹತ್ತಿರದ ಹಳ್ಳಿಗಳ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ʼಬಲವರ್ಧನೆʼಗೊಳಿಸುವುದು ಶಾಲೆ ಮುಚ್ಚುವುದು ಎನ್ನುವುದಕ್ಕೆ ಇರುವ ಸೌಮ್ಯೋಕ್ತಿಯಾಗಿದೆ. ನೀತಿ ಆಯೋಗದ ಅಂದಿನ ಸಿಇಒ ಅಮಿತಾಭ್ ಕಾಂತ್ ಅವರು ಸಾಥ್-ಇ ಕುರಿತ ನವೆಂಬರ್ 2021ರ ವರದಿಯಲ್ಲಿ ಈ ಬಲವರ್ಧನೆಯು (ಅಥವಾ ಶಾಲೆಗಳ ಮುಚ್ಚುವಿಕೆ) "ದಿಟ್ಟ, ಸುಧಾರಣೆಯ ಹೊಸ ಹಾದಿ,” ಎಂದು ವಿವರಿಸಿದ್ದರು.
ಆದರೆ ಪುಟ್ಟ ಹುಡುಗ ಸಿದ್ಧಾರ್ಥ್ ಮಲಿಕ್ ಪಾಲಿಗೆ ಚಕುವಾದ ಹೊಸ ಶಾಲೆಗೆ ನಡೆದು ಹೋಗಿ ಬರುವ ಅನುಭವವು ಬೇರೆಯಾಗಿದೆ. ಅವನು ದಿನವೂ ಅಷ್ಟು ದೂರ ನಡೆದು ಕಾಲು ನೋವು ಬರುತ್ತದೆಯೆಂದು ಹೇಳುತ್ತಾನೆ. ಅವನು ಅನೇಕ ಸಂದರ್ಭಗಳಲ್ಲಿ ಈ ಕಾರಣಕ್ಕಾಗಿ ಶಾಲೆಗೆ ರಜೆ ಹಾಕಿದ್ದಾಗಿ ಅವನ ತಂದೆ ದೀಪಕ್ ಹೇಳುತ್ತಾರೆ.
ಭಾರತದ ಸುಮಾರು 1.1 ಮಿಲಿಯನ್ ಸರ್ಕಾರಿ ಶಾಲೆಗಳಲ್ಲಿ, ಸರಿಸುಮಾರು 4 ಲಕ್ಷ ಶಾಲೆಗಳು 50ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿವೆ ಮತ್ತು 1.1 ಲಕ್ಷ ಶಾಲೆಗಳು 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿವೆ. ಸಾಥ್-ಇ ವರದಿಯು ಇವುಗಳನ್ನು "ಉಪ-ಪ್ರಮಾಣದ ಶಾಲೆಗಳು" ಎಂದು ಉಲ್ಲೇಖಿಸಿದೆ ಮತ್ತು ಅವುಗಳ ನ್ಯೂನತೆಗಳನ್ನು ಪಟ್ಟಿ ಮಾಡಿದೆ: ವಿಷಯ-ನಿರ್ದಿಷ್ಟ ಪರಿಣತಿಯಿಲ್ಲದ ಶಿಕ್ಷಕರು, ಸಮರ್ಪಿತ ಪ್ರಾಂಶುಪಾಲರ ಕೊರತೆ ಮತ್ತು ಆಟದ ಮೈದಾನಗಳು, ಗಡಿ ಗೋಡೆಗಳು ಮತ್ತು ಗ್ರಂಥಾಲಯಗಳಿಲ್ಲದಿರುವುದು.
ಆದರೆ ಪುರಣಮಂತಿರದಲ್ಲಿನ ಪೋಷಕರು ತಮ್ಮ ಸ್ವಂತ ಶಾಲೆಯಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ನಿರ್ಮಿಸಬಹುದಿತ್ತು ಎಂದು ಗಮನಸೆಳೆಯುತ್ತಾರೆ.
ಚಕುವಾದಲ್ಲಿನ ಶಾಲೆಯಲ್ಲಿ ಗ್ರಂಥಾಲಯವಿದೆಯೇ ಎನ್ನುವುದರ ಕುರಿತು ಯಾರಿಗೂ ಖಚಿತವಿಲ್ಲ; ಈ ಶಾಲೆಯು ಅವರ ಹಳೆಯ ಶಾಲೆಯಲ್ಲಿ ಇದ್ದಿರದ ಗಡಿ ಗೋಡೆಯನ್ನು ಹೊಂದಿದೆ.
ಒಡಿಶಾದಲ್ಲಿ, ಸಾಥ್-ಇ ಯೋಜನೆಯ ಮೂರನೇ ಹಂತವು ಪ್ರಸ್ತುತ ನಡೆಯುತ್ತಿದೆ. ಈ ಹಂತದಲ್ಲಿ ಒಟ್ಟು 15,000 ಶಾಲೆಗಳನ್ನು "ಬಲವರ್ಧನೆ"ಗಾಗಿ ಗುರುತಿಸಲಾಗಿದೆ.
*****
ಝಿಲ್ಲಿ ದೆಹುರಿ ಮನೆಯ ಹತ್ತಿರದ ಏರಿನಲ್ಲಿ ಸೈಕಲ್ ತಳ್ಳಲು ಕಷ್ಟಪಡುತ್ತಿದ್ದಳು. ಬಾರಾಬಂಕಿಯ ಹಳ್ಳಿಯೊಂದರಲ್ಲಿ ಮಾವಿನ ಮರದ ಕೆಳಗೆ ಕಿತ್ತಳೆ ಬಣ್ಣದ ಟಾರ್ಪಲಿನ್ ಶೀಟ್ ಹಾಸಿ ಅಲ್ಲಿ ಶಾಲೆಯ ಸಮಸ್ಯೆಯ ಕುರಿತು ಚರ್ಚಿಸಲು ವ್ಯವಸ್ಥೆ ಮಾಡಲಾಗಿತ್ತು. ಪೋಷಕರೆಲ್ಲರೂ ಅಲ್ಲಿ ಸೇರಿದ್ದರು. ದಣಿದ ಝಿಲ್ಲಿ ಕೂಡಾ ಅಲ್ಲಿಗೆ ಆಗಮಿಸಿದಳು.
ಬಾರಾಬಂಕಿಯ ಹಿರಿಯ ಪ್ರಾಥಮಿಕ ಮತ್ತು ಹಿರಿಯ ವಿದ್ಯಾರ್ಥಿಗಳು (11ರಿಂದ 16 ವರ್ಷ ವಯಸ್ಸಿನವರು) 3.5 ಕಿ.ಮೀ ದೂರದಲ್ಲಿರುವ ಜಮುಪಾಸಿಯ ಶಾಲೆಗೆ ಹೋಗುತ್ತಾರೆ. ಮಧ್ಯಾಹ್ನದ ಬಿಸಿಲಿನಲ್ಲಿ ನಡೆಯುವುದು ಮತ್ತು ಸೈಕ್ಲಿಂಗ್ ಮಾಡುವುದು ಎರಡೂ ಅವರು ಆಯಾಸಗೊಳಿಸುತ್ತದೆ ಎಂದು ಕಿಶೋರ್ ಬೆಹೆರಾ ಹೇಳುತ್ತಾರೆ. ಸಾಂಕ್ರಾಮಿಕ ಪಿಡುಗಿನ ನಂತರ 2022ರಲ್ಲಿ 5ನೇ ತರಗತಿಗೆ ಹೋಗಲು ಪ್ರಾರಂಭಿಸಿದ ಮತ್ತು ದೀರ್ಘ ನಡಿಗೆಯ ಅಭ್ಯಾಸವಿಲ್ಲದ ಅವರ ಸಹೋದರನ ಮಗಳು ಹಿಂದಿನ ವಾರ ಮನೆಗೆ ನಡೆದುಕೊಂಡು ಬರುವಾಗ ಮೂರ್ಛೆ ಹೋದಳು. ಜಮುಪಾಸಿಯ ಅಪರಿಚಿತರು ಅವಳನ್ನು ಮೋಟಾರು ಬೈಕಿನಲ್ಲಿ ಮನೆಗೆ ಕರೆತರಬೇಕಾಯಿತು.
"ನಮ್ಮ ಮಕ್ಕಳ ಬಳಿ ಮೊಬೈಲ್ ಫೋನ್ಗಳಿಲ್ಲ" ಎಂದು ಕಿಶೋರ್ ಹೇಳುತ್ತಾರೆ, "ತುರ್ತು ಸಂದರ್ಭಗಳಿಗಾಗಿ ಪೋಷಕರ ಫೋನ್ ಸಂಖ್ಯೆಗಳನ್ನು ಇಟ್ಟುಕೊಳ್ಳುವ ಯಾವುದೇ ಅಭ್ಯಾಸ ಶಾಲೆಗಳಲ್ಲಿ ಇಲ್ಲ."
ಜಾಜ್ಪುರ ಜಿಲ್ಲೆಯ ಸುಕಿಂಡಾ ಮತ್ತು ದಾನಗಡಿ ಬ್ಲಾಕ್‌ಗಳಲ್ಲಿ, ದೂರದ ಹಳ್ಳಿಗಳಲ್ಲಿನ ಹಲವಾರು ಪೋಷಕರು ಶಾಲೆಗೆ ಹೋಗಲು ದೂರ ಪ್ರಯಾಣಿಸುವ ಅಪಾಯಗಳ ಬಗ್ಗೆ ಮಾತನಾಡಿದರು: ದಟ್ಟವಾದ ಕಾಡಿನ ಮೂಲಕ ಅಥವಾ ಜನನಿಬಿಡ ಹೆದ್ದಾರಿಯಲ್ಲಿ, ಅಥವಾ ರೈಲ್ವೆ ಮಾರ್ಗದ ಮೂಲಕ, ಕಡಿದಾದ ಬೆಟ್ಟ ಇಳಿಯುವುದು, ಮಾನ್ಸೂನ್ ತೊರೆಗಳಿಂದ ಪ್ರವಾಹಕ್ಕೊಳಗಾದ ಹಾದಿಗಳ ಮೂಲಕ ಸಾಗುವುದು, ಕಾಡು ನಾಯಿಗಳು ಓಡಾಡುವ ಹಳ್ಳಿಯ ಹಳಿಗಳ ಮೇಲೆ. ಆನೆಗಳ ಹಿಂಡುಗಳು ಭೇಟಿ ನೀಡುವ ಹೊಲಗಳ ಮೂಲಕ ಹೋಗುವುದು ಹೀಗೆ ಹಲವು ಅಪಾಯಗಳನ್ನು ಈ ನಡಿಗೆ ಒಳಗೊಂಡಿದೆ.
ಸಾಥಿ-ಇ ವರದಿಯ ಪ್ರಕಾರ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ದತ್ತಾಂಶವನ್ನು ಮುಚ್ಚಲು ಪಟ್ಟಿ ಮಾಡಲಾದ ಶಾಲೆಗಳಿಂದ ನಿರೀಕ್ಷಿತ ಹೊಸ ಶಾಲೆಗಳ ದೂರವನ್ನು ಗುರುತಿಸಲು ಬಳಸಲಾಗಿದೆ. ಆದಾಗ್ಯೂ, ಜಿಐಎಸ್ ಆಧಾರಿತ ದೂರಗಳ ಅಚ್ಚುಕಟ್ಟಾದ ಗಣಿತದ ಲೆಕ್ಕಾಚಾರಗಳು ಈ ನೆಲದ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ.
ರೈಲು ಮತ್ತು ದೂರವನ್ನು ಮೀರಿದ ಚಿಂತೆ ಮಾಡುವ ವಿಷಯಗಳಿವೆ ತಾಯಂದಿರ ಪಾಲಿಗೆ ಎಂದು ಪುರಣಮಂತಿರಾದ ಮಾಜಿ ಪಂಚಾಯತ್ ವಾರ್ಡ್ ಸದಸ್ಯೆ ಗೀತಾ ಮಲಿಕ್ ಹೇಳುತ್ತಾರೆ. "ಇತ್ತೀಚಿನ ವರ್ಷಗಳಲ್ಲಿ ಹವಾಮಾನವು ಅನಿರೀಕ್ಷಿತವಾಗಿದೆ. ಮಾನ್ಸೂನ್ ಸಮಯದಲ್ಲಿ, ಕೆಲವೊಮ್ಮೆ ಬೆಳಿಗ್ಗೆ ಬಿಸಿಲು ಇರುತ್ತದೆ ಮತ್ತು ಶಾಲೆ ಮುಚ್ಚುವ ಹೊತ್ತಿಗೆ, ಬಿರುಗಾಳಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮಗುವನ್ನು ಬೇರೆ ಹಳ್ಳಿಗೆ ಹೇಗೆ ಕಳುಹಿಸುತ್ತೀರಿ?
ಗೀತಾರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಒಬ್ಬನಿಗೆ 11 ವರ್ಷ, ಅವನು 6ನೇ ತರಗತಿಯಲ್ಲಿದ್ದಾನೆ, ಮತ್ತು ಆರು ವರ್ಷದ ಮಗು ಈಗಷ್ಟೇ ಶಾಲೆಯನ್ನು ಪ್ರಾರಂಭಿಸಿದೆ. ಅವರ ಕುಟುಂಬವು ಭಾಗಚಾಶಿಗಳಾಗಿದ್ದರು (ಗೇಣಿದಾರರು) ಮತ್ತು ತಮ್ಮ ಮಕ್ಕಳು ಉತ್ತಮ ಭವಿಷ್ಯ ಹೊಂದಬೇಕೆಂದು ಅವರು ಬಯಸುತ್ತಾರೆ, ಉತ್ತಮವಾಗಿ ಸಂಪಾದಿಸಿ ಅವರದೇ ಆದ ಕೃಷಿ ಭೂಮಿ ಖರೀದಿಸಲಿ ಎನ್ನುವುದು ಅವರ ಕನಸು.
ಮಾವಿನ ಮರದ ಕೆಳಗೆ ನೆರೆದಿದ್ದ ಪ್ರತಿಯೊಬ್ಬ ಪೋಷಕರು ತಮ್ಮ ಹಳ್ಳಿಯ ಪ್ರಾಥಮಿಕ ಶಾಲೆ ಮುಚ್ಚಿದಾಗ, ತಮ್ಮ ಮಕ್ಕಳು ಶಾಲೆಗೆ ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಅಥವಾ ಅನಿಯಮಿತವಾಗಿ ಶಾಲೆಗೆ ಹೋಗುತ್ತಿದ್ದಾರೆ ಎಂದು ಒಪ್ಪಿಕೊಂಡರು. ಕೆಲವರು ತಿಂಗಳಿಗೆ 15 ದಿನಗಳ ಕಾಲ ರಜಾ ಹಾಕುತ್ತಿದ್ದಾರೆ.
ಪುರಣಮಂತಿರದಲ್ಲಿ, ಶಾಲೆ ಮುಚ್ಚಿದಾಗ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಅಂಗನವಾಡಿ ಕೇಂದ್ರವನ್ನು ಸಹ ಶಾಲಾ ಸಂಕೀರ್ಣದಿಂದ ಸ್ಥಳಾಂತರಿಸಲಾಯಿತು ಮತ್ತು ಈಗ ಅದು ಸುಮಾರು 3 ಕಿ.ಮೀ ದೂರದಲ್ಲಿದೆ.
*****
ಅನೇಕರ ಪಾಲಿಗೆ ಹಳ್ಳಿಯ ಶಾಲೆಯೆನ್ನುವುದು ಪ್ರಗತಿಯ ಸಂಕೇತವಾಗಿದೆ; ಸಾಧ್ಯತೆಗಳು ಮತ್ತು ಈಡೇರಿದ ಆಕಾಂಕ್ಷೆಗಳ ಶುಭಚಿನ್ಹೆ.
ಮಾಧವ್ ಮಲಿಕ್ ದಿನಗೂಲಿ ಕಾರ್ಮಿಕರಾಗಿದ್ದು, 6ನೇ ತರಗತಿಯವರೆಗೆ ಓದಿದ್ದಾರೆ. 2014ರಲ್ಲಿ ಪುರಣಮಂತಿರಾ ಗ್ರಾಮದಲ್ಲಿ ಶಾಲೆಯ ಆಗಮನವು ಅವರ ಮಕ್ಕಳಾದ ಮನೋಜ್ ಮತ್ತು ದೇಬಶಿಶ್ ಅವರಿಗೆ ಉತ್ತಮ ವರ್ಷಗಳನ್ನು ಘೋಷಿಸಿತು ಎಂದು ಅವರು ಹೇಳುತ್ತಾರೆ, "ನಾವು ನಮ್ಮ ಶಾಲೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದೇವೆ, ಏಕೆಂದರೆ ಅದು ನಮ್ಮ ಭರವಸೆಯ ಸಂಕೇತವಾಗಿತ್ತು."
ಈಗ ಮುಚ್ಚಲ್ಪಟ್ಟಿರುವ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಗಳು ಕಳಂಕರಹಿತವಾಗಿ ಸ್ವಚ್ಛವಾಗಿವೆ. ಗೋಡೆಗಳಿಗೆ ಬಿಳಿ ಮತ್ತು ನೀಲಿ ಬಣ್ಣ ಹೊಡೆಸಲಾಗಿದೆ ಮತ್ತು ಅದರ ಮೇಲೆ ಒಡಿಯಾ ವರ್ಣಮಾಲೆಗಳನ್ನು ಬರೆಯಲಾಗಿದೆ, ಸಂಖ್ಯೆಗಳು ಮತ್ತು ಚಿತ್ರಗಳನ್ನು ಪ್ರದರ್ಶಿಸುವ ಚಾರ್ಟ್‌ಗಳನ್ನು ಎಲ್ಲೆಡೆ ನೇತುಹಾಕಲಾಗಿದೆ. ಒಂದು ಗೋಡೆಯ ಮೇಲೆ ಕಪ್ಪು ಹಲಗೆ ಪೇಂಟ್ ಮಾಡಲಾಗಿದೆ. ತರಗತಿಗಳನ್ನು ಸ್ಥಗಿತಗೊಳಿಸಿದ್ದರಿಂದ, ಗ್ರಾಮಸ್ಥರು ಶಾಲೆಯು ಸಮುದಾಯ ಪ್ರಾರ್ಥನೆಗೆ ಲಭ್ಯವಿರುವ ಅತ್ಯಂತ ಪವಿತ್ರ ಸ್ಥಳವೆಂದು ನಿರ್ಧರಿಸಿದರು; ಒಂದು ತರಗತಿಯನ್ನು ಈಗ ಕೀರ್ತನೆಗಳನ್ನು (ಭಕ್ತಿಗೀತೆಗಳು) ಸಂಗ್ರಹಿಸುವ ಕೋಣೆಯಾಗಿ ಪರಿವರ್ತಿಸಲಾಗಿದೆ. ದೇವರ ಫ್ರೇಮ್ ಮಾಡಿದ ಚಿತ್ರದ ಪಕ್ಕದಲ್ಲಿ ಗೋಡೆಯೆದುರು ಹಿತ್ತಾಳೆ ತಾಳಗಳನ್ನು ಜೋಡಿಸಲಾಗಿದೆ.
ಶಾಲೆಯನ್ನು ನೋಡಿಕೊಳ್ಳುವುದರ ಜೊತೆಗೆ, ಪುರಣಮಂತಿರದ ನಿವಾಸಿಗಳು ತಮ್ಮ ಮಕ್ಕಳು ಸರಿಯಾದ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದಾರೆ. ಅವರು ಹಳ್ಳಿಯ ಪ್ರತಿ ವಿದ್ಯಾರ್ಥಿಗೆ ಟ್ಯೂಷನ್ ತರಗತಿಗಳನ್ನು ಆಯೋಜಿಸಿದ್ದಾರೆ, ಇದನ್ನು 2 ಕಿ.ಮೀ ದೂರದಲ್ಲಿರುವ ಮತ್ತೊಂದು ಹಳ್ಳಿಯಿಂದ ಸೈಕಲ್ ಸವಾರಿ ಮಾಡುವ ಶಿಕ್ಷಕರು ನಡೆಸುತ್ತಿದ್ದಾರೆ. ದೀಪಕ್ ಹೇಳುತ್ತಾರೆ, ಆಗಾಗ್ಗೆ ಮಳೆಗಾಲದ ದಿನಗಳಲ್ಲಿ, ಮುಖ್ಯ ರಸ್ತೆ ಪ್ರವಾಹಕ್ಕೆ ಸಿಲುಕಿರುವುದರಿಂದ ಟ್ಯೂಷನ್ ತರಗತಿಗಳನ್ನು ತಪ್ಪಿಸದಂತೆ ಖಚಿತಪಡಿಸಿಕೊಳ್ಳಲು ಅವರು ಅಥವಾ ಇನ್ನೊಬ್ಬ ಗ್ರಾಮದ ನಿವಾಸಿಯು ಬೋಧಕರನ್ನು ಮೋಟಾರುಬೈಕಿನಲ್ಲಿ ಕರೆತರುತ್ತಾರೆ. ಟ್ಯೂಷನ್ ಸೆಷನ್‌ಗಳನ್ನು ಹಳೆಯ ಶಾಲೆಯಲ್ಲಿ ನಡೆಸಲಾಗುತ್ತದೆ, ಪ್ರತಿ ಕುಟುಂಬವು ಬೋಧಕರಿಗೆ ತಿಂಗಳಿಗೆ 250ರಿಂದ 400 ರೂ.ಗಳನ್ನು ಪಾವತಿಸುತ್ತದೆ.
"ಬಹುತೇಕ ಎಲ್ಲಾ ಕಲಿಕೆಗಳು ಇಲ್ಲಿ, ಟ್ಯೂಷನ್ ತರಗತಿಯಲ್ಲಿ ನಡೆಯುತ್ತವೆ" ಎಂದು ದೀಪಕ್ ಹೇಳುತ್ತಾರೆ.
ಹೊರಗೆ ಬೆಂಕಿ ಕೆಂಡದಂತಹ ಹೂಗಳಿಂದ ತುಂಬಿದ ಪಲಾಶ ಮರದ ವಿರಳ ನೆರಳಿನಲ್ಲಿ ಕುಳಿತು ಗ್ರಾಮಸ್ಥರು ಶಾಲೆ ಮುಚ್ಚಿರುವುದು ಯಾವುದರ ಸೂಚನೆ ಎನ್ನುವುದರ ಕುರಿತು ಚರ್ಚಿಸುತ್ತಲೇ ಇದ್ದರು. ಮಳೆಗಾಲ ಪ್ರವಾಹದ ಸಮಯದಲ್ಲಿ ಪುರಣಮಂತಿರಕ್ಕೆ ಬರುವುದು ಸವಾಲಿನ ಕೆಲಸ. ನೆರೆಯ ಸಮಯದಲ್ಲಿ ಆಂಬುಲೆನ್ಸ್ ಬರದೆ ವೈದ್ಯಕೀಯ ಸಮಸ್ಯೆಗಳು ಮತ್ತು ವಿದ್ಯುತ್ ಸರಬರಾಜು ಇಲ್ಲದ ದಿನಗಳನ್ನು ಇಲ್ಲಿನ ಜನರು ಅನುಭವಿಸಿದ್ದಾರೆ.
"ಶಾಲೆಯನ್ನು ಮುಚ್ಚಿರುವುದು ನಾವು ಹಿಂದೆ ಸರಿಯುತ್ತಿದ್ದೇವೆ, ವಿಷಯಗಳು ಹದಗೆಡಲಿವೆ ಎಂಬುದರ ಸಂಕೇತವಾಗಿದೆ," ಎಂದು ಮಾಧವ್ ಹೇಳುತ್ತಾರೆ.
ಜಾಗತಿಕ ಸಲಹಾ ಸಂಸ್ಥೆ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಇದನ್ನು ಸುಧಾರಿತ ಕಲಿಕೆಯ ಫಲಿತಾಂಶಗಳನ್ನು ತೋರಿಸುವ " ಸ್ವಾಗತಾರ್ಹ ಶಿಕ್ಷಣ ರೂಪಾಂತರ ಕಾರ್ಯಕ್ರಮ " ಎಂದು ಕರೆದಿದೆ.
ಆದರೆ ಜಾಜ್ಪುರದ ಈ ಎರಡು ವಿಭಾಗಗಳಲ್ಲಿ ಮತ್ತು ಒಡಿಶಾದ ಇತರೆಡೆಗಳಲ್ಲಿನ ಹಳ್ಳಿಯಿಂದ ಹಳ್ಳಿಗೆ, ಶಾಲೆಗಳು ಮುಚ್ಚಿರುವುದರಿಂದ ಶಿಕ್ಷಣದ ಪ್ರವೇಶವೇ ಒಂದು ಸವಾಲಾಗಿದೆ ಎಂದು ಪೋಷಕರು ಹೇಳುತ್ತಾರೆ.
ಗುಂಡುಚಿಪಾಸಿ ಗ್ರಾಮವು 1954ರಲ್ಲಿಯೇ ಶಾಲೆಯನ್ನು ಹೊಂದಿತ್ತು. ಸುಕಿಂಡಾ ವಿಭಾಗದಲ್ಲಿರುವ ಈ ಗ್ರಾಮವು ಖರಾಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸಂಪೂರ್ಣವಾಗಿ ಸಬರ್ ಸಮುದಾಯದ ಸದಸ್ಯರಿಂದ ತುಂಬಿದೆ, ಈ ಸಮುದಾಯವನ್ನು ಶಬರ್ ಅಥವಾ ಸಾವರ್ ಎಂದೂ ಕರೆಯಲಾಗುತ್ತದೆ ಮತ್ತು ರಾಜ್ಯದಲ್ಲಿ ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಲಾಗಿದೆ.
ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆ ಮುಚ್ಚುವ ಮೊದಲು ಊರಿನ ಮೂವತ್ತೆರಡು ಮಕ್ಕಳು ಇಲ್ಲಿ ಹಾಜರಾಗುತ್ತಿದ್ದರು. ಶಾಲೆಗಳು ಮತ್ತೆ ತೆರೆದ ನಂತರ, ಮಕ್ಕಳು ನೆರೆಯ ಗ್ರಾಮವಾದ ಖರಾಡಿಗೆ ನಡೆದುಕೊಂಡು ಹೋಗಬೇಕಾಗಿತ್ತು. ಕಾಡಿನ ಮೂಲಕ ನಡೆದರೆ ಅದು ಕೇವಲ ಕಿಲೋಮೀಟರ್ ದೂರದಲ್ಲಿದೆ. ಪರ್ಯಾಯ ದಾರಿಯಾಗಿ, ನಿಭಿಡವಾಗಿರುವ ಮುಖ್ಯ ರಸ್ತೆಯಿದೆ, ಆದರೆ ಅದು ಸಣ್ಣ ಮಕ್ಕಳಿಗೆ ಅಪಾಯಕಾರಿ ಮಾರ್ಗವಾಗಿದೆ.
ಶಾಲಾ ಹಾಜರಾತಿ ಕುಸಿದಿದ್ದರೂ, ಇದು ಮಧ್ಯಾಹ್ನದ ಬಿಸಿಯೂಟ ಮತ್ತು ಸುರಕ್ಷತೆಯ ನಡುವಿನ ಜೂಜಾಟವೆನ್ನುವುದನ್ನು ಒಪ್ಪಿಕೊಳ್ಳುತ್ತಾರೆ.
2ನೇ ತರಗತಿಯಲ್ಲಿ ಓದುತ್ತಿರುವ ಓಂ ದೆಹುರಿ ಮತ್ತು 1ನೇ ತರಗತಿಯ ಸುರ್ಜಪ್ರಕಾಶ್ ನಾಯಕ್ ಇಬ್ಬರೂ ಒಟ್ಟಿಗೆ ಶಾಲೆಗೆ ನಡೆದು ಹೋಗುವುದಾಗಿ ಹೇಳುತ್ತಾರೆ. ಅವರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ಒಯ್ಯುತ್ತಾರೆ ಆದರೆ ಜೊತೆಗ ತಿಂಡಿ ಅಥವಾ ಹಣ ಕೊಂಡು ಹೋಗುವುದಿಲ್ಲ. 3ನೇ ತರಗತಿಯಲ್ಲಿ ಓದುತ್ತಿರುವ ರಾಣಿ ಬಾರಿಕ್ ಶಾಲೆ ತಲುಪಲು ಒಂದು ಗಂಟೆ ತೆಗೆದುಕೊಳ್ಳುವುದಾಗಿ ಹೇಳುತ್ತಾಳೆ, ಆದರೆ ಅದಕ್ಕೆ ಕಾರಣ ಹೆಚ್ಚಾಗಿ ಅವಳು ಅವಳ ಸ್ನೇಹಿತರ ಬರವಿಗಾಗಿ ಕಾಯುವುದು.
ಆರು ದಶಕಗಳ ತಮ್ಮ ಶಾಲೆಯನ್ನು ಮುಚ್ಚಿ ಮಕ್ಕಳನ್ನು ಕಾಡಿನ ಮೂಲಕ ನೆರೆಯ ಹಳ್ಳಿಗೆ ಕಳುಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ರಾಣಿಯ ಅಜ್ಜಿ ಬಕೋಟಿ ಬಾರಿಕ್ ಹೇಳುತ್ತಾರೆ. "ನಾಯಿಗಳು ಮತ್ತು ಹಾವು, ಕೆಲವೊಮ್ಮೆ ಕರಡಿಗಳು ಕೂಡಾ ದಾರಿಯಲ್ಲಿರುತ್ತವೆ - ನಿಮ್ಮ ನಗರದ ಪೋಷಕರು ಶಾಲೆಗೆ ಹೋಗಲು ಇದು ಸುರಕ್ಷಿತ ಮಾರ್ಗವೆಂದು ನಂಬುತ್ತಾರೆಯೇ?" ಎಂದು ಅವರು ಕೇಳುತ್ತಾರೆ.
7 ಮತ್ತು 8ನೇ ತರಗತಿಯ ಮಕ್ಕಳು ಈಗ ಕಿರಿಯರನ್ನು ಕರೆದುಕೊಂಡು ಹೋಗಿ ಬರುವ ಜವಾಬ್ದಾರಿಯನ್ನು ಹೊಂದಿದ್ದಾರೆ. 7ನೇ ತರಗತಿಯಲ್ಲಿ ಓದುತ್ತಿರುವ ಶುಭಶ್ರೀ ಬೆಹೆರಾ ತನ್ನ ಇಬ್ಬರು ಕಿರಿಯ ಸೋದರಸಂಬಂಧಿಗಳಾದ ಭೂಮಿಕಾ ಮತ್ತು ಓಂ ದೆಹುರಿ ಅವರನ್ನು ಸಂಭಾಳಿಸಲು ಕಷ್ಟಪಡುತ್ತಾಳೆ. "ಅವರು ಯಾವಾಗಲೂ ನಮ್ಮ ಮಾತನ್ನು ಕೇಳುವುದಿಲ್ಲ. ಅವರು ಓಡುವಾಗ ಒಬ್ಬೊಬ್ಬರನ್ನು ಅನುಸರಿಸುವುದು ಸುಲಭವಲ್ಲ" ಎಂದು ಅವಳು ಹೇಳುತ್ತಾಳೆ.
ಮಮಿನಾ ಪ್ರಧಾನ್ ಅವರ ಮಕ್ಕಳಾದ ರಾಜೇಶ್ 7ನೇ ತರಗತಿಯಲ್ಲಿ ಮತ್ತು ಲಿಜಾ 5ನೇ ತರಗತಿಯಲ್ಲಿ ಹೊಸ ಶಾಲೆಗೆ ನಡೆದುಕೊಂಡು ಹೋಗುತ್ತಾರೆ. "ಮಕ್ಕಳು ಸುಮಾರು ಒಂದು ಗಂಟೆ ನಡೆಯುತ್ತಾರೆ, ಆದರೆ ನಮಗೆ ಬೇರೆ ಆಯ್ಕೆ ಏನು?" ಎಂದು ಇಟ್ಟಿಗೆಗಳು ಮತ್ತು ಹುಲ್ಲಿನಿಂದ ಮಾಡಿದ ಮನೆಯಲ್ಲಿ ಕುಳಿತಿರುವ ಈ ದಿನಗೂಲಿ ಕಾರ್ಮಿಕ ಹೇಳುತ್ತಾರೆ. ಅವರು ಮತ್ತು ಅವರ ಪತಿ ಮಹಂತೋ ಕೃಷಿ ಋತುವಿನಲ್ಲಿ ಊರಿನವರ ಹೊಲಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಉಳಿದ ಸಮಯದಲ್ಲಿ ಕೃಷಿಯೇತರ ಕೆಲಸಗಳನ್ನು ಹುಡುಕುತ್ತಾರೆ.
ಪೋಷಕರು ತಮ್ಮ ಗುಂಡುಚಿಪಾಸಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟವು ತುಂಬಾ ಉತ್ತಮವಾಗಿತ್ತು ಎಂದು ಹೇಳುತ್ತಾರೆ. "ಇಲ್ಲಿ ನಮ್ಮ ಮಕ್ಕಳು ಶಿಕ್ಷಕರಿಂದ ವೈಯಕ್ತಿಕ ಗಮನವನ್ನು ಪಡೆಯುತ್ತಿದ್ದರು. [ಹೊಸ ಶಾಲೆಯಲ್ಲಿ] ನಮ್ಮ ಮಕ್ಕಳನ್ನು ತರಗತಿಗಳ ಹಿಂಭಾಗದಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗುತ್ತದೆ," ಎಂದು ಗ್ರಾಮದ ಮುಖಂಡ 68 ವರ್ಷದ ಗೋಲಕಚಂದ್ರ ಪ್ರಧಾನ್ ಹೇಳುತ್ತಾರೆ.
ಸುಕಿಂಡಾ ವಿಭಾಗಲ್ಲಿರುವ ಸಂತರಾಪುರ ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯನ್ನು 2019ರಲ್ಲಿ ಮುಚ್ಚಲಾಯಿತು. ಮಕ್ಕಳು ಈಗ ಜಮುಪಾಸಿಯ ಶಾಲೆಗೆ 1.5 ಕಿ.ಮೀ ನಡೆದುಕೊಂಡು ಹೋಗುತ್ತಾರೆ. ಹನ್ನೊಂದು ವರ್ಷದ ಸಚಿನ್ ಮಲಿಕ್ ಒಮ್ಮೆ ಕಾಡು ನಾಯಿ ತನ್ನನ್ನು ಬೆನ್ನಟ್ಟುವುದನ್ನು ತಪ್ಪಿಸಲು ಪ್ರಯತ್ನಿಸುವಾಗ ಸರೋವರಕ್ಕೆ ಬಿದ್ದನು. "ಇದು 2021ರ ಕೊನೆಯಲ್ಲಿ ನಡೆಯಿತು," ಎಂದು 10 ಕಿ.ಮೀ ದೂರದಲ್ಲಿರುವ ದುಬುರಿಯ ಉಕ್ಕಿನ ಸ್ಥಾವರದಲ್ಲಿ ಕೆಲಸ ಮಾಡುತ್ತಿರುವ ಸಚಿನ್‌ನ ಅಣ್ಣ 21 ವರ್ಷದ ಸೌರವ್ ಹೇಳುತ್ತಾರೆ. "ಇಬ್ಬರು ಹಿರಿಯ ಹುಡುಗರು ಅವನನ್ನು ಮುಳುಗದಂತೆ ರಕ್ಷಿಸಿದರು, ಆದರೆ ಎಲ್ಲರೂ ಆ ದಿನ ಎಷ್ಟು ಭಯಭೀತರಾಗಿದ್ದರೆಂದರೆ ಮರುದಿನ ಹಳ್ಳಿಯ ಹಲವಾರು ಮಕ್ಕಳು ಶಾಲೆಗೆ ಹೋಗಲಿಲ್ಲ," ಎಂದು ಅವರು ಹೇಳುತ್ತಾರೆ.
ಸಂತರಾಪುರ್-ಜಮುಪಾಸಿ ಮಾರ್ಗದಲ್ಲಿ ಕಾಡು ನಾಯಿಗಳು ವಯಸ್ಕರ ಮೇಲೂ ದಾಳಿ ಮಾಡಿವೆ ಎಂದು ಜಮುಪಾಸಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಅಡುಗೆಯ ಸಹಾಯಕಿಯಾಗಿ ಕೆಲಸ ಮಾಡುವ ವಿಧವೆ ಲಾಬೊಣ್ಯಾ ಮಲಿಕ್ ಹೇಳುತ್ತಾರೆ. "15-20 ನಾಯಿಗಳ ಗುಂಪು ನನ್ನನ್ನು ಬೆನ್ನಟ್ಟಿದಾಗ ನಾನು ಬೋರಲಾಗಿ ಬಿದ್ದೆ, ಒಂದು ನಾಯಿ ನನ್ನ ಮೇಲೆ ಹಾರಿ ಕಾಲಿಗೆ ಕಚ್ಚಿತು," ಎಂದು ಅವರು ಹೇಳುತ್ತಾರೆ.
ಸಂತರಾಪುರದ 93 ಮನೆಗಳಲ್ಲಿ, ನಿವಾಸಿಗಳು ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗದ ಕುಟುಂಬಗಳಿಗೆ ಸೇರಿದವರು. ಗ್ರಾಮದ ಪ್ರಾಥಮಿಕ ಶಾಲೆ ಮುಚ್ಚಿದಾಗ 28 ಮಕ್ಕಳು ಹಾಜರಾಗುತ್ತಿದ್ದರು. ಈಗ ಕೇವಲ 8-10 ಮಕ್ಕಳು ಮಾತ್ರ ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಾರೆ.
ಜಮುಪಾಸಿಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವ ಸಂತರಾಪುರದ ಗಂಗಾ ಮಲಿಕ್, ಕಾಡಿನ ಹಾದಿಯ ಅಂಚಿನಲ್ಲಿರುವ ಮಳೆಗಾಲದಲ್ಲಿ ತುಂಬಿಕೊಳ್ಳುವ ಸರೋವರಕ್ಕೆ ಬಿದ್ದು ಶಾಲೆಗೆ ಹೋಗುವುದನ್ನು ನಿಲ್ಲಿಸಿದಳು. ಆಕೆಯ ತಂದೆ, ದಿನಗೂಲಿ ಕಾರ್ಮಿಕ ಸುಶಾಂತ್ ಮಲಿಕ್ ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ: "ಅವಳು ಸರೋವರದ ಬಳಿ ಮುಖ ತೊಳೆಯುತ್ತಿದ್ದಾಗ ಜಾರಿ ಬಿದ್ದಳು. ಅವಳನ್ನು ರಕ್ಷಿಸುವ ಹೊತ್ತಿಗೆ ಅವಳು ಬಹುತೇಕ ಮುಳುಗಿದ್ದಳು. ಅದರ ನಂತರ ಅವಳು ಬಹುತೇಕ ಶಾಲೆಗೆ ಹೋಗುವುದನ್ನು ನಿಲ್ಲಿಸಿದಳು."
ಗಂಗಾಳಿಗೆ ಮತ್ತೆ ಶಾಲೆಗೆ ಹೋಗಲು ಬೇಕಾದ ಧೈರ್ಯ ಬರಲೇ ಇಲ್ಲ. “ಆದರೂ ನನ್ನನ್ನು ಪಾಸ್ ಅಂತೂ ಮಾಡಿದರು,” ಎನ್ನುತ್ತಾಳಾಕೆ.
ವರದಿಗಾರರು ಆಸ್ಪೈರ್-ಇಂಡಿಯಾದ ಸಿಬ್ಬಂದಿಗೆ ಅವರ ಸಹಾಯಕ್ಕಾಗಿ ಧನ್ಯವಾದ ಹೇಳಲು ಬಯಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು