ಜೀವನ್‌ಭಾಯ್ ಬರಿಯಾ ಅವರಿಗೆ ನಾಲ್ಕು ವರ್ಷಗಳಲ್ಲಿ ಎರಡು ಬಾರಿ  ಹೃದಯಾಘಾತವಾಗಿತ್ತು. 2018 ರಲ್ಲಿ ಮೊದಲನೆಯ ಬಾರಿ ಹೃದಯಾಘಾತವಾದಾಗ ಅವರು ಮನೆಯಲ್ಲಿದ್ದರು. ಅವರ ಪತ್ನಿ ಗಭಿಬೆನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಏಪ್ರಿಲ್ 2022 ರಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯುವ ಟ್ರಾಲರೊಂದನ್ನು ನಡೆಸುತ್ತಿದ್ದ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಅವರ ಜೊತೆಯಲ್ಲಿ ಇದ್ದವರು ಸ್ಟೇರಿಂಗನ್ನು ಅವರ ಕೈಯಿಂದ ತೆಗೆದುಕೊಂಡರೆ  ಇನ್ನೊಬ್ಬರು  ಜೀವನ್‌ಭಾಯ್  ಬರಿಯಾ ಅವರಿಗೆ ಮಲಗಲು ಸಹಾಯ ಮಾಡಿದರು. ಅವರು  ಸುಮಾರು ಐದು ಗಂಟೆಗಳ ಕಾಲ ಸಮುದ್ರದಲ್ಲಿಯೇ ಇದ್ದರು. ಜೀವನ್‌ಭಾಯ್ ಆ ಎರಡೂ ಬಾರಿಯೂ ಬದುಕಿ ಉಳಿದರು.

ಗಭಿಬೆನ್ ಅವರ ದುಸ್ವಪ್ನ ಒಂದು ದಿನ ನಿಜವಾಯಿತು.

ಮೊದಲ ಹೃದಯಾಘಾತವಾಗಿ ಒಂದು ವರ್ಷದ ನಂತರ ಜೀವನ್‌ಭಾಯ್ ಮೀನುಗಾರಿಕೆಯನ್ನು ಮತ್ತೆ ಆರಂಭಿಸಿದ್ದು ಗಭಿಬೆನ್ ಅವರಿಗೆ ಹೆಚ್ಚು ಆತಂಕ ಉಂಟುಮಾಡಿತ್ತು. ಇದು ಅಪಾಯಕಾರಿ ಎಂದು ಅವರಿಗೆ ಗೊತ್ತಿತ್ತು. ಜೀವನಭಾಯಿಯವರಿಗೆ ಕೂಡ ಆ ಭಯ ಇತ್ತು. ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಣ್ಣ ಕರಾವಳಿ ಪಟ್ಟಣವಾದ ಜಫ್ರಾಬಾದ್‌ನಲ್ಲಿರುವ ತನ್ನ ಮಂದಬೆಳಕಿನ ಗುಡಿಸಲಿನಲ್ಲಿ ಕುಳಿತುಕೊಂಡು "ನಾನು ಅವರಿಗೆ ಇದು ಬೇಡ ಎಂದು ಹೇಳಿದ್ದೆ" ಎಂದು ಗಭಿಬೆನ್ ಹೇಳುತ್ತಾರೆ.

ಆದರೆ ಊರಿನ ಬಹುತೇಕರಂತೆ 60ರ ಹರೆಯದ ಜೀವನ್‌ಭಾಯ್‌ಗೆ ಮೀನುಗಾರಿಕೆ ಬಿಟ್ಟರೆ ಬೇರೆ ಕೆಲಸವೇ ಗೊತ್ತಿರಲಿಲ್ಲ. ಈ ವೃತ್ತಿಯಿಂದ ಪ್ರತೀ ವರ್ಷಕ್ಕೆ ಸುಮಾರು 2 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದರು. "ಅವರು 40 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದರು. ಹೃದಯಾಘಾತದ ನಂತರ ಅವರು ಒಂದು ವರ್ಷ ಮನೆಯಲ್ಲಿಯೇ ಇದ್ದಾಗ ನಾನು ನಮ್ಮ ಮನೆ ನಡೆಸಲು [ಇತರ ಮೀನುಗಾರರ ಮೀನುಗಳನ್ನು ಒಣಗಿಸುವ ಕೆಲಸ] ಕೂಲಿ ಕೆಲಸ ಮಾಡಿದೆ. ಅವರು ಚೇತರಿಸಿಕೊಳ್ಳುತ್ತಿದ್ದಂತೆ ಮೆತ್ತೆ ಕೆಲಸಕ್ಕೆ ಹೋಗಲು ತೀರ್ಮಾನಿಸಿದರು." ಎಂದು  55 ವರ್ಷದ ಗಭಿಬೆನ್ ಹೇಳುತ್ತಾರೆ.

ಜೀವನ್‌ಭಾಯ್ ಜಾಫ್ರಾಬಾದ್‌ನಲ್ಲಿ ದೊಡ್ಡ ಮೀನುಗಾರರೊಬ್ಬರ ಒಡೆತನದ ಟ್ರಾಲರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು.  ಮಾನ್ಸೂನ್ ಸಮಯವನ್ನು ಹೊರತುಪಡಿಸಿ ವರ್ಷದ ಎಂಟು ತಿಂಗಳುಗಳ ಕಾಲ  ಕಾರ್ಮಿಕರು ಈ ಟ್ರಾಲರ್‌ಗಳನ್ನು ಅರಬ್ಬಿ ಸಮುದ್ರಕ್ಕೆ  ಕೊಂಡೊಯ್ದು 10-15 ದಿನಗಳ ಕಾಲ ಮೀನು ಹಿಡಿಯುತ್ತಾರೆ. ಆಗ ಆ ಎರಡು ವಾರಗಳಿಗೆ ಬೇಕಾಗುವಷ್ಟು  ನೀರು ಮತ್ತು ಆಹಾರವನ್ನು ಒಯ್ಯುತ್ತಾರೆ.

"ತುರ್ತು ಸೇವೆಗಳಿಲ್ಲದೆ ತುಂಬಾ ದಿನಗಳ ವರೆಗೆ ದೂರ ಸಮುದ್ರದಲ್ಲಿ ಇರುವುದು ಎಂದಿಗೂ ಸುರಕ್ಷಿತವಲ್ಲ. ಹೃದ್ರೋಗಿಗಳಿಗೆ ಇದು ಅಪಾಯಕಾರಿ. ಅವರ ಬಳಿ ಇರುವುದು ಕೇವಲ ಪ್ರಥಮ ಚಿಕಿತ್ಸಾ ಕಿಟ್ ಮಾತ್ರ," ಎಂದು ಗಭಿಬೆನ್ ಹೇಳುತ್ತಾರೆ.

Gabhiben holding a portrait of her late husband, Jeevanbhai, at their home in Jafrabad, a coastal town in Gujarat’s Amreli district
PHOTO • Parth M.N.

ಗುಜರಾತಿನ ಅಮ್ರೇಲಿ ಜಿಲ್ಲೆಯ ಕರಾವಳಿ ಪಟ್ಟಣವಾದ ಜಫ್ರಾಬಾದ್‌ನಲ್ಲಿರುವ ಮನೆಯಲ್ಲಿ ನಿಧನ ಹೊಂದಿರುವ ತಮ್ಮ ಪತಿ ಜೀವನ್‌ಭಾಯ್ ಅವರ ಭಾವಚಿತ್ರವನ್ನು ಹಿಡಿದಿರುವ ಗಭಿಬೆನ್

ಗುಜರಾತ್ ಭಾರತದ ಅತ್ಯಂತ ಉದ್ದದ ಕರಾವಳಿಯನ್ನು ಹೊಂದಿರುವ ರಾಜ್ಯ. ಇದು 39 ತಾಲೂಕುಗಳು, 13 ಜಿಲ್ಲೆಗಳನ್ನು ವ್ಯಾಪಿಸಿದೆ ಮತ್ತು 1,600 ಕಿ.ಮೀ ಉದ್ದ ಇದೆ. ದೇಶದ ಸಮುದ್ರ ಉತ್ಪಾದನೆಯ ಶೇಕಡಾ 20 ರಷ್ಟು ಭಾಗ ಈ ಕರಾವಳಿಯಿಂದ ಬರುತ್ತದೆ. ಮೀನುಗಾರಿಕೆ ಆಯುಕ್ತರ ವೆಬ್‌ಸೈಟ್ ಪ್ರಕಾರ, ಈ ರಾಜ್ಯದ 1,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರಲ್ಲಿ ಹೆಚ್ಚಿನವರಿಗೆ ನಾಲ್ಕು ತಿಂಗಳಿಂದ ಸಂಪೂರ್ಣವಾಗಿ ವೈದ್ಯಕೀಯ ಸೇವೆ ಕಡಿತಗೊಂಡಿದೆ.

ಅವರು ಪ್ರತಿ ವರ್ಷ ಸಮುದ್ರದಲ್ಲಿಯೇ ಕಳೆಯುತ್ತಾರೆ.

ಜೀವನ್‌ಭಾಯ್ ತನ್ನ ಮೊದಲ ಹೃದಯಾಘಾತದ ನಂತರ ಮೀನು ಹಿಡಿಯಲು ಸಮುದ್ರಕ್ಕೆ ಹೊರಟಾಗಲೆಲ್ಲಾ ಗಭಿಬೆನ್ ಅವರಿಗೆ ಆತಂಕವಾಗುತ್ತಿತ್ತು. ಭರವಸೆ ಮತ್ತು ಭಯದ ನಡುವೆ ಜೋಕಾಲಿಯಾಡುತ್ತಿದ್ದ ತನ್ನ ಆಲೋಚನೆಗಳೊಂದಿಗೆ ಒಬ್ಬಂಟಿಯಾಗಿ ಸೀಲಿಂಗ್ ಫ್ಯಾನ್‌ ಕಡೆಗೆ ಶೂನ್ಯವಾಗಿ ನೋಡುತ್ತಾ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದರು. ಜೀವನ್ ಭಾಯಿ ಸುರಕ್ಷಿತವಾಗಿ ಮನೆಗೆ ಹಿಂದಿರುಗಿದಾಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು.

ಆದರೆ ಒಂದು ದಿನ ಅವರು ಮರಳಲಿಲ್ಲ.

*****

ಗುಜರಾತ್ ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ಐದು ವರ್ಷಗಳ ಹಿಂದೆ ನೀಡಿದ ಮಾತಿನಂತೆ ನಡೆದುಕೊಂಡಿದ್ದರೆ ಜೀವನ್‌ಭಾಯ್ ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

ಏಪ್ರಿಲ್ 2017 ರಲ್ಲಿ ಜಾಫ್ರಾಬಾದ್ ಕರಾವಳಿಯಲ್ಲಿರುವ ಶಿಯಾಲ್ ಬೆಟ್‌ ದ್ವೀಪದ ನಿವಾಸಿ 70 ವರ್ಷದ ಜಂದೂರ್‌ ಭಾಯ್ ಬಲಾಧಿಯಾ ಅವರು ಗುಜರಾತ್‌ನ ಹೈಕೋರ್ಟ್‌ನಲ್ಲಿ ಬೋಟ್ ಆಂಬ್ಯುಲೆನ್ಸ್ ಗಾಗಿ ಬೇಡಿಕೆಯನ್ನು ಇಟ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.  ಈ ಅರ್ಜಿಯನ್ನು ಸಲ್ಲಿಸಲು ದುರ್ಬಲ ಸಮುದಾಯಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಅಹಮದಾಬಾದ್ ಮೂಲದ ಸಂಸ್ಥೆಯಾದ ಸೆಂಟರ್ ಫಾರ್ ಸೋಶಿಯಲ್ ಜಸ್ಟೀಸ್‌ನ ವಕೀಲ ಹಾಗೂ  ಸಾಮಾಜಿಕ ಕಾರ್ಯಕರ್ತ 43 ವರ್ಷ ಪ್ರಾಯದ ಅರವಿಂದಭಾಯ್ ಖುಮಾನ್ ಮಾರ್ಗದರ್ಶನ ನೀಡಿದ್ದರು.

ಈ ಅರ್ಜಿಯಲ್ಲಿ ರಾಜ್ಯ ಸರ್ಕಾರವು ದೇಶದ ನಾಗರಿಕನ ಬದುಕುವ ಹಕ್ಕನ್ನು ಖಾತರಿಪಡಿಸುವ ಭಾರತದ ಸಂವಿಧಾನದ 21 ನೇ ವಿಧಿಯನ್ನು ನಿರ್ಲಕ್ಷಿಸಿ ಮೀನುಗಾರರ "ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದೆ" ಎಂದು ಪ್ರಸ್ತಾಪಿಸಲಾಗಿತ್ತು.

ಅಲ್ಲದೇ, ಅರ್ಜಿಯಲ್ಲಿ "ಔದ್ಯೋಗಿಕ ಸುರಕ್ಷತೆ, ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಸೇವೆಗಳಿಗೆ ಸಂಬಂಧಿಸಿದಂತೆ ಕನಿಷ್ಠ ಅವಶ್ಯಕತೆಗಳನ್ನು" ಪೂರೈಸುವ 2007 ರ (Fishing Convention, 2007) ಮೀನುಗಾರಿಕೆ ಸಮಾವೇಶದ ತೀರ್ಮಾನವನ್ನು ಉಲ್ಲೇಖಿಸಿತ್ತು.

Standing on the shore of Jafrabad's coastline, 55-year-old Jeevanbhai Shiyal says fisherfolk say a silent prayer before a trip
PHOTO • Parth M.N.

55 ವರ್ಷ ಪ್ರಾಯದ ಜೀವನ್‌ಭಾಯ್ ಶಿಯಾಲ್ ಅವರು ಮೀನು ಹಿಡಿಯಲು ಹೋಗುವ ಮುನ್ನ ಜಾಫ್ರಾಬಾದ್‌ನ ಸಮುದ್ರ ತೀರದಲ್ಲಿ ನಿಂತು ಪ್ರಾರ್ಥನೆ ಮಾಡುತ್ತಿರುವುದು

ಆಗಸ್ಟ್ 2017 ರಲ್ಲಿ ರಾಜ್ಯ ಸರ್ಕಾರ ಕೆಲವು ಭರವಸೆಗಳನ್ನು ನೀಡಿದ ನಂತರ ಹೈಕೋರ್ಟ್ ಈ ಅರ್ಜಿಯನ್ನು ಕೈಬಿಟ್ಟಿತು. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಮನೀಶಾ ಲವ್‌ಕುಮಾರ್ ಅವರು, “ಮೀನುಗಾರರು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರ ಹಕ್ಕುಗಳ ಬಗ್ಗೆ ರಾಜ್ಯವು ಹೆಚ್ಚು ಜಾಗೃತವಾಗಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಮುಖ್ಯವಾಗಿ, ಕರಾವಳಿಯ 1,600 ಕಿಲೋಮೀಟರ್‌ಗಳಲ್ಲಿ ಕಾರ್ಯನಿರ್ವಹಿಸಲು "ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಸಂಪೂರ್ಣ ಸುಸಜ್ಜಿತವಾದ" ಏಳು ಬೋಟ್ ಆಂಬ್ಯುಲೆನ್ಸ್‌ಗಳನ್ನು ಖರೀದಿಸಲು ರಾಜ್ಯವು ನಿರ್ಧರಿಸಿದೆ ಎಂದು ನ್ಯಾಯಾಲಯದ ಆದೇಶ ಉಲ್ಲೇಖಿಸಿತ್ತು.

ಇದಾದ ಐದು ವರ್ಷಗಳ ನಂತರವೂ ಮೀನುಗಾರರು ಆರೋಗ್ಯ ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ. ಆದರೆ ಈ ಏಳು ಬೋಟ್ ಆಂಬ್ಯುಲೆನ್ಸ್‌ಗಳಲ್ಲಿ ಎರಡು ಮಾತ್ರ ಓಖಾ ಮತ್ತು ಪೋರಬಂದರ್‌ನಲ್ಲಿ ಜಾರಿಗೆ ಬಂದು ಕೆಲಸ ಮಾಡುತ್ತಿವೆ.

ಜಫ್ರಾಬಾದ್‌ನಿಂದ ಉತ್ತರಕ್ಕೆ 20 ಕಿಮೀ ದೂರದಲ್ಲಿರುವ ರಾಜುಲಾ ಎಂಬ ಸಣ್ಣ ಪಟ್ಟಣದಲ್ಲಿ ವಾಸಿಸುತ್ತಿರುವ ಅರವಿಂದ್‌ಭಾಯ್ ಅವರು "ಬಹುತೇಕ ಕರಾವಳಿಯು ಇನ್ನೂ ಸಂಕಷ್ಟದಲ್ಲಿದೆ. ನೀರಿನಲ್ಲಿ ಚಲಿಸುವ ಆಂಬ್ಯುಲೆನ್ಸ್‌ಗಳು ಸ್ಪೀಡ್ ಬೋಟ್‌ಗಳಾಗಿದ್ದು, ಮೀನುಗಾರಿಕೆಗೆ ಬಳಸುವ ಟ್ರಾಲರ್‌ಗಳು ತೆಗೆದುಕೊಳ್ಳುವ ಅರ್ಧದಷ್ಟು ಸಮಯವನ್ನು ಅಷ್ಟೇ ದೂರವನ್ನು ಕ್ರಮಿಸಲು ತೆಗೆದುಕೊಳ್ಳುತ್ತವೆ. ಈ ದಿನಗಳಲ್ಲಿ ಮೀನುಗಾರರು ದಡದ ಹತ್ತಿರ ಮಾತ್ರ ಮೀನು ಹಿಡಿಯದೆ ಆಳ ಸಮುದ್ರಕ್ಕೆ ಇಳಿಯುವ ಕಾರಣ ಆಂಬ್ಯುಲೆನ್ಸ್‌ಗಳ ಅಗತ್ಯ ತುಂಬಾ ಇದೆ." ಎಂದು ಹೇಳುತ್ತಾರೆ.

ಜೀವನ್‌ಭಾಯ್ ಅವರಿಗೆ  ಮಾರಣಾಂತಿಕ ಹೃದಯಾಘಾತವಾದಾಗ ಸಮುದ್ರ ತೀರದಿಂದ 40 ನಾಟಿಕಲ್ ಮೈಲುಗಳು, ಅಂದ್ರೆ ಸರಿಸುಮಾರು 75 ಕಿಲೋಮೀಟರ್ ದೂರದಲ್ಲಿದ್ದರು. ಸುಮಾರು 20 ವರ್ಷಗಳ ಹಿಂದೆ ಮೀನುಗಾರರು ಅಪರೂಪಕ್ಕೊಮ್ಮೆ ಅಷ್ಟು ದೂರ ಹೋಗುತ್ತಿದ್ದರು.

ಗಭಿಬೆನ್ ತನ್ನ ಪತಿ "ಮೀನುಗಾರಿಕೆ ಪ್ರಾರಂಭಿಸಿದ ಮೊದಮೊದಲು ಐದು ಅಥವಾ ಎಂಟು ನಾಟಿಕಲ್ ಮೈಲುಗಳ ಒಳಗೆ ಹೋಗಿ ಸಾಕಷ್ಟು ಮೀನುಗಳನ್ನು ಹಿಡಿದು ತರುತ್ತಿದ್ದರು" ಎಂದು ಹೇಳುತ್ತಾರೆ. "ಕರಾವಳಿಯಿಂದ ಇಷ್ಟು ದೂರ ಹೋಗಲು ಒಂದು ಗಂಟೆ ಅಥವಾ ಎರಡು ಗಂಟೆ ಕೂಡ ಬೇಕಾಗಿಲ್ಲ. ಕೆಲವು ವರ್ಷಗಳಿಂದ ಇದು ತುಂಬಾ ಕಷ್ಟವಾಗುತ್ತಿದೆ. ಈಗ ನಾವು ಕರಾವಳಿಯಿಂದ 10 - 12 ಗಂಟೆಗಳಷ್ಟು ಕ್ರಮಿಸಿ ಮೀನು ಮೀನುಗಾರಿಕೆ ಮಾಡಬೇಕಾಗಿದೆ," ಎಂದು ಅವರು ಹೇಳುತ್ತಾರೆ.

Gabhiben recalls the stress and anxiety she felt every time Jeevanbhai set off to sea after his first heart attack. Most fisherfolk in Gujarat are completely cut off from medical services during time they are at sea
PHOTO • Parth M.N.

ಜೀವನಭಾಯ್ ತಮಗೆ ಮೊದಲ ಹೃದಯಾಘಾತವಾದ  ನಂತರ ಮೀನು ಹಿಡಿಯಲು ಹೊರಟಾಗಲೆಲ್ಲಾ ತಾನು ಅನುಭವಿಸಿದ ಆತಂಕವನ್ನು ಗಭಿಬೆನ್ ನೆನಪಿಸಿಕೊಳ್ಳುತ್ತಾರೆ. ಗುಜರಾತಿನ ಹೆಚ್ಚಿನ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ವೈದ್ಯಕೀಯ ಸೇವೆಗಳಿಂದ ಸಂಪೂರ್ಣವಾಗಿ ಕಡಿತಗೊಳ್ಳುತ್ತಾರೆ

*****

ಮೀನುಗಾರರು ಆಳ ಸಮುದ್ರದ ಮೀನುಗಾರಿಕೆ ಮಾಡಲು ಎರಡು ಕಾರಣಗಳಿವೆ: ಕರಾವಳಿಯಲ್ಲಿ ಹೆಚ್ಚಿದ ಮಾಲಿನ್ಯ ಮತ್ತು ಮ್ಯಾಂಗ್ರೋವ್ ಹೊದಿಕೆ ಕಡಿಮೆಯಾಗಿರುವುದು.

ಕರಾವಳಿಯ ಉದ್ದಕ್ಕೂ ಕೈಗಾರಿಕೆಗಳು ಉಂಟುಮಾಡುವ ಮಾಲಿನ್ಯವು ಸಮುದ್ರದ ಒಟ್ಟಾರೆ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ರಾಷ್ಟ್ರೀಯ ಮೀನುಗಾರರ ವೇದಿಕೆಯ (National Fishworkers Forum) ಕಾರ್ಯದರ್ಶಿ ಉಸ್ಮಾನ್ ಗನಿ ಹೇಳುತ್ತಾರೆ. "ಇದರಿಂದ ಮೀನುಗಳು ಕರಾವಳಿಯಿಂದ ದೂರ ಹೋಗುತ್ತವೆ. ಹೀಗಾಗಿ ಮೀನುಗಾರರು ಆಳಕ್ಕೆ ಹೋಗಿ ಮೀನು ಹಿಡಿಯಬೇಕಾಗುತ್ತದೆ. ಅವರು ಸಮುದ್ರದಲ್ಲಿ ಹೆಚ್ಚು ಹೆಚ್ಚು ದೂರ ಹೋದಂತೆ ಅವರಿಗೆ ಹೆಚ್ಚಿನ ತುರ್ತು ಸೇವೆಗಳ ಅಗತ್ಯವಿದೆ" ಎಂದು ಅವರು ಹೇಳುತ್ತಾರೆ.

ಸ್ಟೇಟ್ ಆಫ್ ಎನ್ವಿರಾನ್‌ಮೆಂಟ್ ರಿಪೋರ್ಟ್ 2013ರ (SOE- State of Environment Report 2013)  ಪ್ರಕಾರ ಗುಜರಾತ್‌ನ ಕರಾವಳಿ ಜಿಲ್ಲೆಗಳಲ್ಲಿ ರಾಸಾಯನಿಕ, ಪೆಟ್ರೋಕೆಮಿಕಲ್‌, ಉಕ್ಕು ಮತ್ತು ಲೋಹಗಳು ಸೇರಿದಂತೆ 58 ಪ್ರಮುಖ ಕೈಗಾರಿಕೆಗಳಿವೆ. ಅಲ್ಲದೇ, 822 ಗಣಿಗಾರಿಕೆ ಮತ್ತು 3156 ಕ್ವಾರಿಗಳಿವೆ. ಈ ವರದಿ ಬಂದಿದ್ದು 2013 ರಲ್ಲಿ . ಆ ನಂತರ ಈ ಸಂಖ್ಯೆ ಹೆಚ್ಚಾಗಿರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು ಭಾವಿಸುತ್ತಾರೆ.

ಈ ವರದಿಯ ಪ್ರಕಾರ ರಾಜ್ಯದ ಶೇಕಡಾ 70 ರಷ್ಟು ವಿದ್ಯುತ್ ಉತ್ಪಾದನಾ ಯೋಜನೆಗಳು 13 ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದ್ದರೆ, ಇನ್ನುಳಿದ ಶೇಕಡಾ 30 ಉಳಿದ 20 ಜಿಲ್ಲೆಗಳಲ್ಲಿವೆ.

"ಕೈಗಾರಿಕೆಗಳು ಸಾಮಾನ್ಯವಾಗಿ ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತವೆ. ಪ್ರತಿಯೊಬ್ಬರೂ ತ್ಯಾಜ್ಯವನ್ನು ನೇರವಾಗಿ ಇಲ್ಲವೇ ನದಿಗಳ ಮೂಲಕ ಸಮುದ್ರಕ್ಕೆ ಸುರಿಯುತ್ತಾರೆ ”ಎಂದು ಬರೋಡಾ ಮೂಲದ ಪರಿಸರ ಹೋರಾಟಗಾರ ರೋಹಿತ್ ಪ್ರಜಾಪತಿ ಹೇಳುತ್ತಾರೆ. "ಗುಜರಾತ್ 20 ಕಲುಷಿತ ನದಿಗಳನ್ನು ಹೊಂದಿದೆ. ಅವುಗಳಲ್ಲಿ ಹಲವು ಅರಬ್ಬೀ ಸಮುದ್ರವನ್ನು ಸೇರುತ್ತವೆ" ಎಂದು ಅವರು ಹೇಳುತ್ತಾರೆ.

ಕರಾವಳಿಯಾದ್ಯಂತ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯವು ಮ್ಯಾಂಗ್ರೋವ್ ಕಾಡುಗಳನ್ನು ಸಹ ಹಾಳು ಮಾಡಿದೆ. "ಮ್ಯಾಂಗ್ರೋವ್ ಕಾಡುಗಳು ಕರಾವಳಿಯನ್ನು ರಕ್ಷಿಸುತ್ತವೆ ಮತ್ತು ಮೀನುಗಳಿಗೆ ಮೊಟ್ಟೆಗಳನ್ನು ಇಡಲು ಸುರಕ್ಷಿತ ಸ್ಥಳವನ್ನು ಒದಗಿಸುತ್ತವೆ" ಎಂದು ಗನಿ ಹೇಳುತ್ತಾರೆ. “ಆದರೆ ಗುಜರಾತ್ ನ ಕರಾವಳಿಯಲ್ಲಿ ವಾಣಿಜ್ಯ ಕೈಗಾರಿಕೆಗಳು ಎಲ್ಲೆಲ್ಲಿ ಬಂದಿವೆಯೋ ಅಲ್ಲೆಲ್ಲಾ ಮ್ಯಾಂಗ್ರೋವ್‌ಗಳನ್ನು ಕಡಿಯಲಾಗಿದೆ. ಮ್ಯಾಂಗ್ರೋವ್‌ಗಳ ಇಲ್ಲದ ಕಡೆ ಮೀನುಗಳು ಕರಾವಳಿಗೆ ಬರುವುದೂ ಇಲ್ಲ" ಎಂದು ಅವರು ಹೇಳುತ್ತಾರೆ.

Jeevanbhai Shiyal on a boat parked on Jafrabad's shore where rows of fish are set to dry by the town's fishing community (right)
PHOTO • Parth M.N.
Jeevanbhai Shiyal on a boat parked on Jafrabad's shore where rows of fish are set to dry by the town's fishing community (right)
PHOTO • Parth M.N.

ಮೀನುಗಾರರು ಮೀನುಗಳನ್ನು ಒಣಗಿಸುವ ಜಾಫ್ರಾಬಾದ್‌ನ ಸಮುದ್ರ ಕಿನಾರೆಯ ಬಳಿ ಇರುವ ದೋಣಿಯಲ್ಲಿ ಜೀವನ್‌ಭಾಯ್ ಶಿಯಾಲ್ (ಬಲ) ಫೋಟೋ: ಪಾರ್ಥ್ ಎಂ.ಎನ್

2021 ರ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ವರದಿಯ ಪ್ರಕಾರ ಗುಜರಾತ್‌ನ ಮ್ಯಾಂಗ್ರೋವ್ ಕಾಡಿನ ವ್ಯಾಪ್ತಿ 2019 ರಿಂದ ಶೇಕಡಾ 2 ರಷ್ಟು ಕಡಿಮೆಯಾಗಿದೆ. ಆದರೆ ಅದೇ ಅವಧಿಯಲ್ಲಿ ಒಟ್ಟಾರೆ ದೇಶದಲ್ಲಿ ಶೇಕಡಾ 17 ರಷ್ಟು  ಹೆಚ್ಚಾಗಿದೆ.

ಗುಜರಾತ್‌ನ 39 ಕರಾವಳಿ ತಾಲೂಕುಗಳು 38 ವಿವಿಧ ಹಂತದ ಕಡಲ್ಕೊರೆತ  ಒಳಗಾಗುತ್ತವೆ ಎಂದು ಈ ವರದಿಯು ಹೇಳುತ್ತದೆ. ಇದನ್ನು ಸಾಮಾನ್ಯವಾಗಿ ಮ್ಯಾಂಗ್ರೋವ್‌ ಕಾಡುಗಳು ತಡೆಯುತ್ತಿದ್ದವು.

"ಗುಜರಾತ್ ಕರಾವಳಿಯಲ್ಲಿ ಸಮುದ್ರ ಮಟ್ಟ ಏರಿಕೆಯಾಗಲು ಮ್ಯಾಂಗ್ರೋವ್‌ ಕಾಡುಗಳು ಇಲ್ಲದಿರುವುದೇ ಕಾರಣವಾಗಿದೆ. ಸಮುದ್ರವು ಈಗ ನಾವು ಎಸೆಯುವ ಕೈಗಾರಿಕಾ ಮಾಲಿನ್ಯವನ್ನು ಮತ್ತೆ ತೀರಕ್ಕೆ ಎಸೆಯುತ್ತವೆ ”ಎಂದು ಪ್ರಜಾಪತಿ ಹೇಳುತ್ತಾರೆ. "ಮಾಲಿನ್ಯ ಮತ್ತು ಇದರ ಪರಿಣಾಮವಾಗಿ ಮ್ಯಾಂಗ್ರೋವ್‌ಗಳು ಕಡಿಮೆಯಾಗಿರುವುದು ಕರಾವಳಿಯ ಸುತ್ತಮುತ್ತಲಿನ ನೀರು ಕಲುಷಿತವಾಗಲು ಕಾರಣವಾಗಿದೆ" ಎಂದು ಹೇಳುತ್ತಾರೆ.

ಕರಾವಳಿಯಿಂದ ದೂರ ಹೋಗಿ ಸಮುದ್ರದಲ್ಲಿ ಮೀನ್ನು ಹಿಡಿಯುವ ಮೀನುಗಾರರು ಈಗ ತೀವ್ರವಾದ ನೀರಿನ ಪ್ರವಾಹ, ಅಪಾಯಕಾರಿ ಗಾಳಿ ಮತ್ತು ಅನಿರೀಕ್ಷಿತ ಹವಾಮಾನದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.   ಸಣ್ಣ ಮೀನುಗಾರಿಕಾ ದೋಣಿಗಳನ್ನು ಬಳಸಿ ನ್ಯಾವಿಗೇಟ್ ಮಾಡುವ ಬಡ ಮೀನುಗಾರರು ಇಂತಹ ಕಠಿಣ  ಪರಿಸ್ಥಿತಿಗಳನ್ನು ಎದುರಿಸುವಲ್ಲಿ ಹೈರಾಣಾಗಿ ಹೋಗುತ್ತಾರೆ.

ಏಪ್ರಿಲ್ 2016 ರಲ್ಲಿ ಸನಾಭಾಯಿ ಶಿಯಾಲ್ ಅವರ ದೋಣಿ ಸಮುದ್ರದ ಮಧ್ಯದಲ್ಲಿ ಮುರಿದುಹೋಯಿತು. ಬಲವಾದ ಪ್ರವಾಹಕ್ಕೆ ಒಂದು ಸಣ್ಣ ಬಿರುಕು ತೆರೆದುಕೊಂಡು ಹಡಗಿನಲ್ಲಿದ್ದ ಎಂಟು ಮೀನುಗಾರರ ಪ್ರಯತ್ನದ ಹೊರತಾಗಿಯೂ ನೀರು ದೋಣಿಯ ಒಳಗೆ ನುಗ್ಗಿತು. ಸಹಾಯಕ್ಕಾಗಿ ಕೂಗಿದರೂ ಪ್ರಯೋಜನವಿಲ್ಲ ಎಂದು ತಮ್ಮಷ್ಟಕ್ಕೇ ಇದ್ದರು. ಏಕೆಂದರೆ ಅವರ ಸುತ್ತ ಯಾರೂ ಇರಲಿಲ್ಲ.

ಮೀನುಗಾರರು ಭಯದಿಂದ ಪ್ರಾಣ ಉಳಿಸಿಕೊಳ್ಳಲು ಸಮುದ್ರಕ್ಕೆ ಹಾರುತ್ತಿದ್ದಂತೆಯೇ ಬೋಟ್ ಹಾಳಾಗಿ ನೀರಿನಲ್ಲಿ ಮುಳುಗಿತು. ಪ್ರತಿಯೊಬ್ಬರೂ ನೀರಿನಲ್ಲಿ ತೇಲುತ್ತಿದ್ದ ಮರದ ತುಂಡೊಂದನ್ನು ಹಿಡಿದುಕೊಂಡರು. ಆರು ಮಂದಿ ಬದುಕುಳಿದರು. 60 ವರ್ಷದ ಸನಾಭಾಯಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.

ಬದುಕುಳಿದವರು ಸುಮಾರು 12 ಗಂಟೆಗಳ ಕಾಲ ಸಮುದ್ರದಲ್ಲಿಯೇ ಇದ್ದರು. ನಂತರ ಅವರನ್ನು ನೋಡಿದ ಬೇರೆ ಟ್ರಾಲರ್ ನಲ್ಲಿದ್ದ ಮೀನುಗಾರರು ಅವರನ್ನು ಕಾಪಾಡಿದರು.

Jamnaben's husband Sanabhai was on a small fishing boat which broke down in the middle of the Arabian Sea. He passed away before help could reach him
PHOTO • Parth M.N.

ಜಮ್ನಾಬೆನ್ ಅವರ ಪತಿ ಸನಾಭಾಯಿ ಇದ್ದ ಸಣ್ಣ ದೋಣಿ ಅರಬ್ಬಿ ಸಮುದ್ರದ ಮಧ್ಯದಲ್ಲಿ ಮುರಿದುಹೋಯಿತು. ಬೇರೆ ಮೀನುಗಾರರು ನೆರವಿಗೆ ಬರುವ ಮುನ್ನವೇ ಅವರು ಸಾವನ್ನಪ್ಪಿದರು.  ಫೋಟೋ: ಪಾರ್ಥ್ ಎಂ.ಎನ್

"ಮೂರು ದಿನಗಳ ನಂತರ ಅವರ ಶವ ಪತ್ತೆಯಾಯಿತು" ಎಂದು ಜಾಫ್ರಾಬಾದ್‌ನ ನಿವಾಸಿ ಸನಾಭಾಯ್ ಅವರ 65 ವರ್ಷ ಪ್ರಾಯದ ಪತ್ನಿ ಜಮ್ನಾಬೆನ್ ಹೇಳುತ್ತಾರೆ. "ಸ್ಪೀಡ್ ಬೋಟ್ ನಿಂದ ಅವರನ್ನು ಉಳಿಸಲು ಸಾಧ್ಯವಿತ್ತೇ ಎಂಬುದು ನನಗೆ ತಿಳಿದಿಲ್ಲ. ಆದರೆ ಅವರಿಗೆ ಬದುಕುವ ಒಂದು ಸಣ್ಣ ಅವಕಾಶವಾದರೂ ಇತ್ತು. ದೋಣಿಯಲ್ಲಿ ಏನೋ ಸಮಸ್ಯೆ ಇದೆ ಎಂದು ತಿಳಿದ ಮೇಲೆ ತುರ್ತು ಸಹಾಯಕ್ಕಾಗಿ ಕರೆ ಮಾಡಬಹುದಿತ್ತು. ವಿಪರ್ಯಾಸ ಏನೆಂದರೆ ಅಲ್ಲಿ ಏನಾಗಿರಬಹುದು ಎಂದು ಆಶ್ಚರ್ಯ ಪಡುತ್ತೇವೆ," ಎಂದು ಅವರು ಹೇಳುತ್ತಾರೆ.

ಅವರ ಮಕ್ಕಳಾದ 30 ವರ್ಷದ ದಿನೇಶ್ ಮತ್ತು 35 ವರ್ಷದ ಭೂಪಾದ್ ಇಬ್ಬರೂ ಮದುವೆಯಾಗಿದ್ದಾರೆ. ಅವರಿಬ್ಬರೂ ಮೀನುಗಾರರು. ಇರ್ವರಿಗೂ ಎರಡೆರಡು ಮಕ್ಕಳಿದ್ದಾರೆ. ಸನಾಭಾಯಿಯ ಮರಣ ಇವರಲ್ಲಿ ಒಂದು ರೀತಿಯ ನಡುಕವನ್ನು ಹುಟ್ಟಿಸಿದೆ.

“ದಿನೇಶ್ ಈಗಲೂ ಮೀನುಗಾರಿಕೆಗೆ ಹೋಗುತ್ತಾರೆ. ಭೂಪಾದ್ ಅವರು ಎಷ್ಟು ಸಾಧ್ಯವೋ ಅಷ್ಟು ಅವರನ್ನು ವಿರೋಧಿಸುತ್ತಾರೆ, ”ಎಂದು ಜಮ್ನಾಬೆನ್ ಹೇಳುತ್ತಾರೆ. “ಆದರೆ ನಮ್ಮನೇ ನಂಬಿರುವ ಕುಟುಂಬವೊಂದಿದೆ. ಇರುವುದು ಒಂದೇ ಒಂದು ಆದಾಯದ ಮೂಲ. ನಮ್ಮ ಇಡೀ ಜೀವನ ಸಮುದ್ರಕ್ಕೆ ಮುಡಿಪಾಗಿದೆ." ಎಂದು ಅವರು ಹೇಳುತ್ತಾರೆ.

*****

ಮೀನುಗಾರಿಕೆ ಟ್ರಾಲರನ್ನು ಹೊಂದಿರುವ ಐವತ್ತೈದು ವರ್ಷದ ಜೀವನ್‌ಭಾಯ್ ಶಿಯಾಲ್, ಮೀನುಗಾರರು ಪ್ರವಾಸವನ್ನು ಪ್ರಾರಂಭಿಸುವ ಮೊದಲು ಮೌನ ಪ್ರಾರ್ಥನೆ ಮಾಡುತ್ತಾರೆ ಎಂದು ಹೇಳುತ್ತಾರೆ.

"ಸುಮಾರು ಒಂದು ವರ್ಷದ ಹಿಂದೆ, ನನ್ನ ಜೊತೆ ಕೆಲಸ ಮಾಡುವ ಒಬ್ಬರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ತಕ್ಷಣವೇ ನಾವು ಸಮುದ್ರ ತೀರದ ಕಡೆಗೆ ಪ್ರಯಾಣವನ್ನು ಆರಂಭಿಸಿದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.  ಐದು ಗಂಟೆಗಳ ಕಾಲ ಅವರು ಎದೆಯ ಮೇಲೆ ಕೈ ಇಟ್ಟು ಉಸಿರು ಹಿಡಿದುಕೊಂಡಿದ್ದರು. ಟ್ರಾಲರ್ ಮರಳಿ ಕರಾವಳಿಯತ್ತ ಸಾಗಿತು. ಐದು ದಿನಗಳೇ ಆದವೇನೋ ಎಂಬಂತೆ ಭಾಸವಾಗುತ್ತಿತ್ತು ಎಂದು ಶಿಯಾಲ್ ಹೇಳುತ್ತಾರೆ. ಪ್ರತಿ ಸೆಕೆಂಡ್ ಹಿಂದಿನದಕ್ಕಿಂತ ಹೆಚ್ಚು ದೀರ್ಘವಾಗಿರುವಂತೆ ಕಾಣುತ್ತಿತ್ತು. ಪ್ರತಿ ನಿಮಿಷಕ್ಕೂ ಮೊದಲಿಗಿಂತ ಹೆಚ್ಚು ಒತ್ತಡ ಉಂಟಾಗುತ್ತಿತ್ತು. ದಡ ತಲುಪಿದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಆ ಕಾರ್ಮಿಕ ಬದುಕುಳಿದರು.

ಶಿಯಾಳ್ ಅವರಿಗೆ ಆ ಒಂದು ಟ್ರಿಪ್ ಗೆ  50,000. ರೂಪಾಯಿ ವೆಚ್ಚವಾಗುತ್ತದೆ. ಅದಕ್ಕೆ ಅವರು ಒಂದು ದಿನದೊಳಗೆ ಹಿಂತಿರುಗಬೇಕಾಗಿತ್ತು. "ಒಂದು ಸುತ್ತಿನ ಪ್ರಯಾಣಕ್ಕೆ 400 ಲೀಟರ್ ಇಂಧನ ಬೇಕಾಗುತ್ತದೆ. ಅವತ್ತು ನಾವು ಮೀನು ಹಿಡಿಯದೆ ಹಾಗೆಯೇ ಹಿಂತಿರುಗಿದೆವು," ಎಂದು ಅವರು ಹೇಳುತ್ತಾರೆ.

When one of Jeevanbhai Shiyal's workers suddenly felt chest pains onboard his trawler, they immediately turned back without catching any fish. The fuel expenses for that one trip cost Shiyal over Rs. 50,000
PHOTO • Parth M.N.

ಜೀವನಭಾಯಿ ಶಿಯಾಲ್ ಜೊತೆಗಿದ್ದ ಕಾರ್ಮಿಕರೊಬ್ಬರಿಗೆ ಇದ್ದಕ್ಕಿದ್ದಂತೆ ಟ್ರಾಲರ್‌ನಲ್ಲಿ ಎದೆ ನೋವು ಕಾಣಿಸಿಕೊಂಡಾಗ, ಅವರು ತಕ್ಷಣ ಮೀನು ಹಿಡಿಯದೆ ಬರಿಗೈಯಲ್ಲಿ ಹಿಂತಿರುಗಿದರು. ಶಿಯಾಲ್‌ ಅವರ ಆ ಒಂದು ಪ್ರಯಾಣದ ಇಂಧನ ವೆಚ್ಚ  ರೂ. 50,000

'We bear the discomfort when we fall sick on the boat and get treated only after we are back home,' says Jeevanbhai Shiyal
PHOTO • Parth M.N.

"ದೋಣಿಯಲ್ಲಿ ಅನಾರೋಗ್ಯಕ್ಕೆ ಒಳಗಾದರೆ ನಾವು ಅದನ್ನು ಹೇಗೋ ಸಹಿಸಿಕೊಳ್ಳುತ್ತೇವೆ. ಮನೆಗೆ ಮರಳಿದ ನಂತರವೇ ಚಿಕಿತ್ಸೆ ಪಡೆಯುತ್ತೇವೆ' ಎಂದು ಜೀವನ್ ಭಾಯಿ ಶಿಯಾಲ್ ಹೇಳುತ್ತಾರೆ

"ಮೀನುಗಾರಿಕೆಯಲ್ಲಿ ಮಿತಿಗಿಂತ ಮೀರಿ ವೆಚ್ಚವಾಗುವ ಕಾರಣ ಆರೋಗ್ಯ ಹದಗೆಟ್ಟಾಗ ಅದನ್ನು ನಿರ್ಲಕ್ಷಿಸುವುದು ಒಂದು ಅಭ್ಯಾಸವಾಗಿ ಹೋಗಿದೆ. ಇದು ಅಪಾಯಕಾರಿಯಾಗಬಹುದು, ಆದರೆ ನಾವು ಯಾವುದೇ ಉಳಿತಾಯವಿಲ್ಲದೆ ಸಾಧಾರಣ ಜೀವನವನ್ನು ನಡೆಸುತ್ತೇವೆ. ಈ ಪರಿಸ್ಥಿತಿ ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುವಂತೆ ಮಾಡಿದೆ. ನಾವು ದೋಣಿಯಲ್ಲಿ ಅನಾರೋಗ್ಯಕ್ಕೆ ಒಳಗಾದಾಗ ಹೇಗೋ ಸಹಿಸಿಕೊಂಡು ಮನೆಗೆ ಬಂದ ನಂತರವೇ ಚಿಕಿತ್ಸೆ ಪಡೆಯುತ್ತೇವೆ," ಎಂದು ಶಿಯಾಲ್ ಹೇಳುತ್ತಾರೆ.

ಶಿಯಾಳ್ ಬೆಟ್ ನ ನಿವಾಸಿಗಳ ಮನೆಯಲ್ಲಿಯೂ ಆರೋಗ್ಯ ಸೇವೆ ಇಲ್ಲ. ಆ ದ್ವೀಪಕ್ಕೆ 15 ನಿಮಿಷಗಳ ಕಾಲ ದೋಣಿಯಲ್ಲಿಯೇ ಬರಬೇಕು. ಆ ನಡುಗುವ ದೋಣಿಯನ್ನು ಹತ್ತಲು ಮತ್ತು ಇಳಿಯಲು ಐದು ನಿಮಿಷ ಪರದಾಡಬೇಕು.

ಮೀನುಗಾರಿಕೆಯನ್ನೇ ಜೀವನಕ್ಕೆ ಅವಲಂಬಿಸಿರುವ ಸುಮಾರು 5000 ನಿವಾಸಿಗಳಿರುವ ಶಿಯಾಲ್ ಬೆಟ್‌ನಲ್ಲಿ ಬೋಟ್ ಆಂಬ್ಯುಲೆನ್ಸ್‌ಗಳ ಜೊತೆಗೆ  ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (PHC) ಸ್ಥಾಪಿಸಲು ಬಲಾಧಿಯಾ ಅವರ ವರದಿ ಕೋರಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ಜಿಲ್ಲೆಯ ಮತ್ತು ಸುತ್ತಮುತ್ತಲಿನ ವೈದ್ಯಾಧಿಕಾರಿಗಳನ್ನು ವಾರದಲ್ಲಿ ಐದು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಉಪ ಆರೋಗ್ಯ ಕೇಂದ್ರಕ್ಕೆ ನಿಯೋಜಿಸುವಂತೆ ಆದೇಶ ನೀಡಿತ್ತು.

ಆದರೆ ತಳಮಟ್ಟದಲ್ಲಿ ಇದು ಜಾರಿಯಾಗಲೇ ಇಲ್ಲ ಎಂದು ನಿವಾಸಿಗಳು ಹೇಳುತ್ತಾರೆ.

Kanabhai Baladhiya outside a Primary Health Centre in Shiyal Bet. He says, 'I have to get on a boat every time I need to see a doctor'
PHOTO • Parth M.N.

ಶಿಯಾಲ್ ಬೆಟ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರಗೆ ಕನಾಭಾಯಿ ಬಲಾಧಿಯಾ. 'ನಾನು ಡಾಕ್ಟರನ್ನು ಬೇಟಿಯಾಗಲು ದೋಣಿಯಲ್ಲಿ ಹೋಗಬೇಕು' ಎಂದು ಅವರು ಹೇಳುತ್ತಾರೆ

Hansaben Shiyal is expecting a child and fears she won’t get to the hospital on time
PHOTO • Parth M.N.

ಮಗುವಿನ ನಿರೀಕ್ಷೆಯಲ್ಲಿರುವ  ಹಂಸಾಬೆನ್ ಶಿಯಾಲ್ ಅವರಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗುತ್ತದೆಯೋ ಇಲ್ಲವೋ ಎನ್ನುವ ಭಯ ಕಾಡುತ್ತಿರುತ್ತದೆ

ಆಗಾಗ ಕಾಣಿಸಿಕೊಳ್ಳುವ ಮೊಣಕಾಲು ಸಮಸ್ಯೆಗೆ ಚಿಕಿತ್ಸೆ  ಪಡೆಯಲು ಜಾಫ್ರಾಬಾದ್ ಅಥವಾ ರಾಜುಲಾಗೆ ಹೋಗಬೇಕು ಎಂದು ನಿವೃತ್ತ ಬೆಸ್ತ ಕನಾಭಾಯಿ ಬಲಾಧಿಯಾ ಹೇಳುತ್ತಾರೆ. "ಇಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರ ಸಾಮಾನ್ಯವಾಗಿ ಮುಚ್ಚಿರುತ್ತದೆ" ಎಂದು 75 ವರ್ಷ ಪ್ರಾಯದ ಬಲಾಧಿಯಾ ಹೇಳುತ್ತಾರೆ. “ನ್ಯಾಯಾಲಯವು ವಾರದಲ್ಲಿ ಐದು ದಿನ ಇಲ್ಲಿ ವೈದ್ಯರು ಇರಬೇಕು ಎಂದು ಹೇಳಿದೆ. ವಾರಾಂತ್ಯದಲ್ಲಿ ಜನರಿಗೆ ಖಾಯಿಲೆಗಳೇ ಬರುವುದಿಲ್ಲವೇನೋ. ಆದರೆ ಇಲ್ಲಿ ವಾರದ ದಿನಗಳು ಕೂಡ ಉತ್ತಮವಾಗಿಲ್ಲ. ನಾನು ವೈದ್ಯರನ್ನು ನೋಡಬೇಕಾದಾಗಲೆಲ್ಲಾ ದೋಣಿಯಲ್ಲಿ ಹೋಗಬೇಕು," ಎಂದು ಅವರು ಹೇಳುತ್ತಾರೆ.

ಗರ್ಭಿಣಿಯರಿಗೆ ಇದು ಇನ್ನೂ ದೊಡ್ಡ ಸಮಸ್ಯೆಯಾಗಿದೆ.

28 ವರ್ಷದ ಹನ್ಸಾಬೆನ್ ಶಿಯಾಲ್ ಅವರು ಎಂಟು ತಿಂಗಳ ಗರ್ಭಿಣಿ. ಬೇರೆ ಬೇರೆ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಮೂರು ಬಾರಿ ಜಫ್ರಾಬಾದ್‌ನ ಆಸ್ಪತ್ರೆಗೆ ಹೋಗಬೇಕು. ಆರು ತಿಂಗಳ ಗರ್ಭಿಣಿಯಾಗಿದ್ದಾಗ ತೀವ್ರ ಹೊಟ್ಟೆ ನೋವನ್ನು ಅನುಭವಿಸಿದ್ದನ್ನು ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಆಗ ತಡರಾತ್ರಿಯಾಗಿದ್ದರಿಂದ ಹಗಲು ದೋಣಿಗಳು ಬಹಳ ಕಾಲ ಕೆಲಸ ನಿಲ್ಲಿಸಿದ್ದವು. ರಾತ್ರಿ ಕೆಳೆದು ಬೆಳಗಾಗುವವರೆಗೆ ಕಾಯಬೇಕಾಯಿತು. ಅದು ಅವರ ದೀರ್ಘ ಮತ್ತು ಆತಂಕದ ರಾತ್ರಿಯಾಗಿತ್ತು.

ಮುಂಜಾನೆ ನಾಲ್ಕು ಗಂಟೆಯವರೆಗೆ ಕಾದ ಹಂಸಾಬೆನ್‌ಗೆ ಇನ್ನು ಕಾಯಲು ಸಾಧ್ಯವೇ ಇರಲಿಲ್ಲ. ತನಗೆ ನೆರವಾಗುವಂತೆ ದೋಣಿಯವನನ್ನು ಬೇಡಿಕೊಂಡರು. "ಗರ್ಭಿಣಿಯಾಗಿದ್ದಾಗ ಮತ್ತು ನೋವಿನಿಂದ ಬಳಲುತ್ತಿರುವಾಗ ದೋಣಿಯನ್ನು ಹತ್ತುವುದು ಮತ್ತು ಇಳಿಯುವುದು ತುಂಬಾ ಕಷ್ಟ," ಎಂದು ಅವರು ಹೇಳುತ್ತಾರೆ. “ದೋಣಿ ಅಲ್ಲಾಡುತ್ತಲೇ ಇರುತ್ತದೆ. ನಮ್ಮನ್ನು ನಾವು ಸಂಬಾಲಿಸಿಕೊಳ್ಳಬೇಕು. ಸಣ್ಣ ಅಚಾತುರ್ಯವೂ ನಮ್ಮನ್ನು ನೀರಿಗೆ ತಳ್ಳಬಹುದು. ನಮ್ಮ ಜೀವನವೂ ದಾರ ಒಂದರಲ್ಲಿ ತೂಗಾಡುತ್ತಿರುತ್ತದೆ," ಎಂದು ಅವರು ಹೇಳುತ್ತಾರೆ.

ಅವರು ದೋಣಿ ಏರಿದಾಗ ಅವರ ಅತ್ತೆ 60 ವರ್ಷ ಪ್ರಾಯದ ಮಂಜುಬೆನ್ ಆಂಬ್ಯುಲೆನ್ಸ್ ಗೆ ಕರೆ ಮಾಡಿದರು. "ಅವರಿಗೆ ಮುಂಚಿತವಾಗಿ ಕರೆ ಮಾಡುವ ಮೂಲಕ ನಾವು ಸ್ವಲ್ಪ ಸಮಯವನ್ನು ಉಳಿಸಬಹುದು ಎಂದು ನಾವು ಅಂದುಕೊಂಡಿದ್ದೆವು. ಆದರೆ ನಾವು ಜಾಫ್ರಾಬಾದ್ ಬಂದರಿನಲ್ಲಿ ಇಳಿದ ನಂತರ ಮತ್ತೆ ಕರೆ ಮಾಡಲು ಅವರು ಹೇಳಿದರು," ಎಂದು ಅವರು ಹೇಳುತ್ತಾರೆ.

ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಬರುವುದಕ್ಕೆ ಇವರು ಇನ್ನೂ 5-7 ನಿಮಿಷ ಕಾಯಬೇಕಾಯಿತು.

Passengers alighting at Shiyal Bet (left) and Jafrabad ports (right)
PHOTO • Parth M.N.
Passengers alighting at Shiyal Bet (left) and Jafrabad ports (right)
PHOTO • Parth M.N.

ಶಿಯಾಲ್ ಬೆಟ್ (ಎಡ) ಮತ್ತು ಜಾಫ್ರಾಬಾದ್ (ಬಲ)  ಬಂದರುಗಳಲ್ಲಿ ದೋಣಿಯಿಂದ ಇಳಿಯುತ್ತಿರುವ ಪ್ರಯಾಣಿಕರು

ಈ ಅನುಭವ ಹಂಸಾಬೆನ್ ಅವರನ್ನು ತುಂಬಾ ಕಾಡಿದೆ. "ನನ್ನ ಹೆರಿಗೆಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ ಎಂಬುದನ್ನು ನೆನೆಸಿಕೊಂಡಾಗ ಭಯವಾಗಾಗುತ್ತದೆ," ಎಂದು ಅವರು ಹೇಳುತ್ತಾರೆ. "ನಾನು ನನ್ನ ಹೆರಿಗೆಗೆ ಹೋಗುವಾಗ ದೋಣಿಯಿಂದ ಬೀಳುತ್ತೇನೆ ಎಂದು ಭಯಪಡುತ್ತೇನೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪದೇ ಸಾವನ್ನಪ್ಪಿದ ನನ್ನ ಗ್ರಾಮದ ಮಹಿಳೆಯರ ಬಗ್ಗೆ ನನಗೆ ಗೊತ್ತು. ಶಿಶುಗಳು ಸತ್ತಿರುವ ಪ್ರಕರಣಗಳ ಬಗ್ಗೆ ನನಗೆ ತಿಳಿದಿದೆ." ಎಂದು ಅವರು ಹೇಳುತ್ತಾರೆ.

ದೂರು ಅರ್ಜಿಯನ್ನು ಸಲ್ಲಿಸಿರುವ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಅರವಿಂದಭಾಯ್  "ಇತ್ತೀಚಿನ ವರ್ಷಗಳಲ್ಲಿ ಶಿಯಾಲ್ ಬೆಟ್‌ನಿಂದ ಹೆಚ್ಚುತ್ತಿರುವ ವಲಸೆಗೆ ಆರೋಗ್ಯ ಸೇವೆ ಇಲ್ಲದೇ ಇರುವುದು ಒಂದು ಪ್ರಮುಖ ಕಾರಣವಾಗಿದೆ. ತಮ್ಮಲ್ಲಿರುವ ಎಲ್ಲಾ ಸೊತ್ತನ್ನು ಮಾರಿದ ಕುಟುಂಬಗಳನ್ನು ನೀವು ಇಲ್ಲಿ ಕಾಣಬಹುದು" ಎಂದು ಹೇಳುತ್ತಾರೆ. "ಈ ಹೆಚ್ಚಿನ ಕುಟುಂಬಗಳು ಸರಿಯಾದ ಆರೋಗ್ಯದ ಸೌಲಭ್ಯ ಇಲ್ಲದೆ ಇರುವುದರಿಂದ ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ. ಅವರು ಕರಾವಳಿಯನ್ನು ಬಿಟ್ಟು ಹೋಗುತ್ತಿದ್ದಾರೆ. ಮತ್ತೆ ಯಾವತ್ತೂ ಹಿಂತಿರುಗುವಿದಿಲ್ಲ ಎಂದು ಕಠಿಣ ನಿರ್ಧಾರ ಮಾಡಿದ್ದಾರೆ," ಎಂದು ಅವರು ಹೇಳುತ್ತಾರೆ.

ಕರಾವಳಿಯಲ್ಲಿ ವಾಸಿಸುವ ಗಭಿಬೆನ್ ಅವರು ನಿರ್ಧಾರ ಹೀಗಿದೆ: ಅವರ ಕುಟುಂಬದ ಮುಂದಿನ ಪೀಳಿಗೆಯು ತಮ್ಮ ಪೂರ್ವಜರ ವೃತ್ತಿಯನ್ನು ಎಂದಿಗೂ ಮುಂದುವರಿಸುವುದಿಲ್ಲ. ಜೀವನ್ ಭಾಯಿಯವರ ಮರಣದ ನಂತರ ಇವರು ಮೀನು ಒಣಗಿಸುವ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಇದು ಕಠಿಣ ಕೆಲಸವಾಗಿದ್ದು ದಿನಕ್ಕೆ ಕೇವಲ 200 ರೂಪಾಯಿ ಸಿಗುತ್ತದೆ. ಅವರು ಗಳಿಸುವ ಪ್ರತಿ ರೂಪಾಯಿಯು ಜಾಫ್ರಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ತನ್ನ 14 ವರ್ಷದ ಮಗ ರೋಹಿತ್‌ನ ಭವಿಷ್ಯದ ಶಿಕ್ಷಣಕ್ಕಾಗಿ ತೆಗೆದಿಡುತ್ತಾರೆ. ಮೀನುಗಾರಿಕೆಯೊಂದನ್ನು ಬಿಟ್ಟು ತನ್ನ  ಮಗ ಅವನಿಗೆ ಬೇಕಾದಂತೆ ಬೆಳೆಯಲಿ ಎಂದು ಅವರು ಬಯಸುತ್ತಾರೆ.

ರೋಹಿತ್ ಜಾಫ್ರಾಬಾದ್‌ನಿಂದ ಹೊರಹೋಗಿ ತನ್ನ ವೃದ್ಧಾಪ್ಯದಲ್ಲಿ ತಾನು ಒಂಟಿಯಾಗಿ ಬದುಕಿದರೂ ಚಿಂತೆ ಇಲ್ಲ ಎಂದು ಗಭಿಬೆನ್ ಭಾವಿಸಿದ್ದಾರೆ. ಜಾಫ್ರಾಬಾದ್‌ನಲ್ಲಿ ಸಾಕಷ್ಟು ಜನರು ಒಂದು ತೆರನಾದ ಭಯದಿಂದ ಬದುಕುತ್ತಿದ್ದಾರೆ. ಅವರಲ್ಲಿ ಗಭಿಬೆನ್ ಕೂಡ ಒಬ್ಬರು.

ಪಾರ್ಥ್ ಎಂ.ಎನ್ ಅವರು ಠಾಕೂರ್ ಫ್ಯಾಮಿಲಿ ಫೌಂಡೇಶನ್‌ ನಡೆಸುತ್ತಿರುವ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಕುರಿತು ವರದಿಗಳನ್ನು ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಮಾಡುವುದಿಲ್ಲ.

ಅನುವಾದ: ಚರಣ್‌ ಐವರ್ನಾಡು

Parth M.N.

पार्थ एम एन, साल 2017 के पारी फ़ेलो हैं और एक स्वतंत्र पत्रकार के तौर पर विविध न्यूज़ वेबसाइटों के लिए रिपोर्टिंग करते हैं. उन्हें क्रिकेट खेलना और घूमना पसंद है.

की अन्य स्टोरी Parth M.N.
Editor : Sangeeta Menon

संगीता मेनन, मुंबई स्थित लेखक, संपादक और कम्युनिकेशन कंसल्टेंट हैं.

की अन्य स्टोरी Sangeeta Menon
Translator : Charan Aivarnad

Charan Aivarnad is a poet and a writer. He can be reached at: [email protected]

की अन्य स्टोरी Charan Aivarnad