2016ರಲ್ಲಿ ಸ್ನೇಹಿತನೊಬ್ಬನ ಮದುವೆಯಲ್ಲಿ ಮುತ್ತುರಾಜರನ್ನು ನೋಡಿದಾಗ ಮೊದಲ ನೋಟದಲ್ಲೇ ಅವರ ಮೇಲೆ ಚಿತ್ರಾರಿಗೆ ಪ್ರೇಮವಾಗಿತ್ತು. ಮುತ್ತುರಾಜ ಕೂಡ ಪ್ರೀತಿಯಲ್ಲಿ ಸಿಲುಕಿದರು, ಆದರೆ ಅವರು ಚಿತ್ರಾರನ್ನು ನೋಡಿರಲಿಲ್ಲ, ಏಕೆಂದರೆ ಅವರಿಂದ ನೋಡಲು ಸಾಧ್ಯವಿಲ್ಲ. ಚಿತ್ರಾರ ಮನೆಯವರು ಈ ಮದುವೆಯನ್ನು ವಿರೋಧಿಸಿದರು. ಅಂಧನನ್ನು ಮದುವೆಯಾಗುವ ಮೂಲಕ ಚಿತ್ರಾ ತನ್ನ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆನ್ನುವುದು ಅವರ ಅಭಿಪ್ರಾಯವಾಗಿತ್ತು. ಚಿತ್ರಾರೇ ಇಬ್ಬರಿಗಾಗುವಷ್ಟು ದುಡಿಯಬೇಕಾಗುತ್ತದೆ ಎಂದು ಕುಟುಂಬವು ಎಚ್ಚರಿಸುವುದರ ಜೊತೆಗೆ ಚಿತ್ರಾರನ್ನು ಮದುವೆಯಾಗದಂತೆ ತಡೆಯಲು ಬಹಳ ಪ್ರಯತ್ನಿಸಿತು.
ಮದುವೆಯಾದ ಒಂದು ತಿಂಗಳ ನಂತರ, ಚಿತ್ರಾರ ಕುಟುಂಬದ ಅಭಿಪ್ರಾಯ ತಪ್ಪಾಗಿತ್ತೆನ್ನುವುದು ಸಾಬೀತಾಯಿತು. ಚಿತ್ರಾರ ಹೃದಯದ ಖಾಯಿಲೆ ಪತ್ತೆಯಾದಾಗ, ಆ ಸಮಯದಲ್ಲಿ ಅವರನ್ನು ಪೂರ್ಣವಾಗಿ ನೋಡಿಕೊಳ್ಳುತ್ತಿದ್ದವರು ಮುತ್ತುರಾಜ. ಅಂದಿನಿಂದ, ಅವರ ಜೀವನವು ಕಷ್ಟಕರ ತಿರುವುಗಳಿಂದ ತುಂಬಿತ್ತು, ಅವುಗಳಲ್ಲಿ ಕೆಲವು ಭೀಕರವಾಗಿವೆ. ಆದರೆ ತಮಿಳುನಾಡಿನ ಮಧುರೈ ಜಿಲ್ಲೆಯ ಸೋಲಂಕುರುಣಿ ಗ್ರಾಮದಲ್ಲಿ ವಾಸಿಸುತ್ತಿರುವ ದಂಪತಿಗಳಾದ ಎಂ. ಚಿತ್ರಾ(25) ಮತ್ತು ವರ್ಷದ ಡಿ.ಮುತ್ತುರಾಜ (28) ಧೈರ್ಯ ಮತ್ತು ಭರವಸೆಯಿಂದ ಜೀವನವನ್ನು ಎದುರಿಸುತ್ತಿದ್ದಾರೆ. ಇದು ಅವರ ಪ್ರೇಮದ ಕಥೆ.
*****
ಚಿತ್ರಾ 10 ವರ್ಷ ವಯಸ್ಸಿನವಳಾಗಿದ್ದ ಸಮಯದಲ್ಲಿ ಅವರ ತಂದೆ ತನ್ನ ಮೂವರು ಹೆಣ್ಣುಮಕ್ಕಳು ಮತ್ತು ಹೆಂಡತಿಯನ್ನು ತೊರೆದು, ಜೊತೆಗೆ ಬಹಳಷ್ಟು ಸಾಲವನ್ನು ಸಹ ಬಿಟ್ಟುಹೋದರು. ಸಾಲ ನೀಡಿದವರು ಕಿರುಕುಳ ನೀಡಲು ಪ್ರಾರಂಭಿಸಿದ ಮೇಲೆ, ಅವರ ತಾಯಿ ತನ್ನ ಮಕ್ಕಳನ್ನು ಶಾಲೆಯಿಂದ ಬಿಡಿಸಿ ನೆರೆಯ ಆಂಧ್ರಪ್ರದೇಶದಲ್ಲಿ ನೆಲೆಸಿದರು, ಅಲ್ಲಿ ಅವರೆಲ್ಲರೂ (ಇಡೀ ಕುಟುಂಬ) ಹತ್ತಿ ನೂಲಿನ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಎರಡು ವರ್ಷಗಳ ನಂತರ ಅವರು ಮತ್ತೆ ಮಧುರೈಗೆ ಮರಳಿದರು ಮತ್ತು ಈ ಬಾರಿ ಅವರು ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 12 ವರ್ಷದ ಚಿತ್ರಾ 10 ಕಬ್ಬಿನ ಸಾಲುಗಳನ್ನು ಸ್ವಚ್ಛಗೊಳಿಸಲು ಮತ್ತು ಒಣ ಬುಡವನ್ನು ಕಿತ್ತುಹಾಕಲು 50 ರೂಪಾಯಿಗಳ ಸಂಬಳ ಪಡೆಯುತ್ತಿದ್ದರು. ಈ ಕೆಲಸವು ಅಪಾಯಕಾರಿಯಾಗಿತ್ತು, ಈ ಕಾರಣದಿಂದಾಗಿ ಅವರ ಕೈಗಳು ಕೊಯ್ದು ಹೋಗುತ್ತಿದ್ದವು ಮತ್ತು ಬೆನ್ನು ನೋವು ಕಾಡತೊಡಗಿತು. ಆದರೆ ಈ ದುಡಿಮೆಯಿಂದ ಅವರ ತಂದೆಯ ಸಾಲವನ್ನು ತೀರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಚಿತ್ರಾ ಮತ್ತು ಅವರ ಅಕ್ಕನನ್ನು ಹತ್ತಿ ಗಿರಣಿಯ ಕೆಲಸಕ್ಕೆ ಕಳುಹಿಸಲಾಯಿತು. ಅಲ್ಲಿ, ಅವರು ದಿನಕ್ಕೆ 30 ರೂ. ಸಂಪಾದಿಸುತ್ತಿದ್ದರು, ಮೂರು ವರ್ಷಗಳ ನಂತರ ಅವರು ಸಾಲವನ್ನು ಮರುಪಾವತಿಸುವ ಹೊತ್ತಿಗೆ ಅವರ ವೇತನವು ದಿನಕ್ಕೆ 50 ರೂ.ಗೆ ಏರಿತ್ತು. ಚಿತ್ರಾ ಅವರಿಗೆ ಸಾಲದ ಮೊತ್ತ ಅಥವಾ ಬಡ್ಡಿಯ ಈಗ ದರ ನೆನಪಿಲ್ಲ..
ಒಂದು ಸಾಲವನ್ನು ಮರುಪಾವತಿಸುತ್ತಿದ್ದಂತೆಯೇ ಎರಡನೆಯ ಸಾಲವು ತಕ್ಷಣವೇ ಎದುರಾಯಿತು - ಅವರ ಅಕ್ಕನ ಮದುವೆಯಾಗಬೇಕಿತ್ತು. ಚಿತ್ರಾ ಮತ್ತು ಆಕೆಯ ತಂಗಿ ಈ ಬಾರಿ ಮತ್ತೆ ಜವಳಿ ಗಿರಣಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ತಮಿಳುನಾಡಿನ ಖಾಸಗಿ ಜವಳಿ ಕಾರ್ಖಾನೆಗಳು ಆರಂಭಿಸಿದ ವಿವಾದಾತ್ಮಕ ಕಾರ್ಯಕ್ರಮವಾದ ಸುಮಂಗಲಿ ಯೋಜನೆಯಡಿಯಲ್ಲಿ ಅವರಿಗೆ ಕೆಲಸ ಸಿಕ್ಕಿತು. ಈ ಯೋಜನೆಯಡಿ ಹುಡುಗಿಯರಿಗೆ ತಮ್ಮ ಮದುವೆ ವೆಚ್ಚವನ್ನು ಭರಿಸಲು ಸಹಾಯ ಮಾಡುತ್ತಾರೆ ಎಂದು ಆರೋಪಿಸಲಾಗಿತ್ತು. ಬಡ ಮತ್ತು ದುರ್ಬಲ ಸಮುದಾಯಗಳ ಅವಿವಾಹಿತ ಮಹಿಳೆಯರನ್ನು ಸುಮಾರು ಮೂರು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು, ಮತ್ತು ಅವರ ಕುಟುಂಬಗಳಿಗೆ ಅವರ ಒಪ್ಪಂದದ ಕೊನೆಯಲ್ಲಿ ದೊಡ್ಡ ಮೊತ್ತದ ಹಣದ ಭರವಸೆ ನೀಡಲಾಗಿತ್ತು. ಚಿತ್ರಾ ವರ್ಷಕ್ಕೆ ರೂ. 18,000 ಗಳಿಸುತ್ತಿದ್ದರು, ಮತ್ತು ಅವರು ಆಗಿನ್ನೂ ಪ್ರಬುದ್ಧ ವಯಸ್ಕರಾಗಿರಲಿಲ್ಲ ಮತ್ತು ತನ್ನ ಸಾಲಗಳನ್ನು ತೀರಿಸಲು ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಆಕೆ ತನ್ನ 20ನೇ ವಯಸ್ಸಿನಲ್ಲಿ ಮುತ್ತುರಾಜರನ್ನು ಭೇಟಿಯಾದ ಸಮಯದಲ್ಲಿ, ಅದಕ್ಕಿಂತ ಹಿಂದಿನ ವರ್ಷ 2016ರವರೆಗೆ ಅವರು ಮನೆ ನಡೆಸುತ್ತಿದ್ದರು.
*****
ಚಿತ್ರಾರನ್ನು ಭೇಟಿಯಾಗುವ ಮೂರು ವರ್ಷಗಳ ಮೊದಲು, ಮುತ್ತುರಾಜ ತನ್ನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡರು. ಸಮಯ ಮತ್ತು ಆ ದಿನ ಅವರ ಮನಸ್ಸಿನಲ್ಲಿ ಅಚ್ಚೊತ್ತಿದೆ - ಅಂದು ಪೊಂಗಲ್ ಹಿಂದಿನ ರಾತ್ರಿ, 13 ಜನವರಿ 2013ರಂದು ಸಂಜೆ 7 ಗಂಟೆಯಾಗಿತ್ತು. ತಾನು ಇನ್ನು ಮುಂದೆ ಏನನ್ನೂ ನೋಡಲು ಸಾಧ್ಯವಿಲ್ಲವೆನ್ನುವುದು ಅರಿವಾದಾಗ ತಾನು ಅನುಭವಿಸುತ್ತಿದ್ದ ತೀವ್ರ ಚಡಪಡಿಕೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ.
ಮುಂದಿನ ಕೆಲವು ವರ್ಷಗಳು ಅವರ ಪಾಲಿಗೆ ತ್ರಾಸದಾಯಕವಾಗಿತ್ತು. ಅವರು ಹೆಚ್ಚಾಗಿ ಮನೆಯೊಳಗೇ ಇರುತ್ತಿದ್ದರು. ಅವರು ಯಾವಾಗಲೂ ಸಿಟ್ಟಿನಿಂದ ಅಳುತ್ತಿದ್ದರು, ಚಡಪಡಿಕೆ ಮತ್ತು ಆತ್ಮಹತ್ಯೆಯಂತಹ ಆಲೋಚನೆಗಳು ಅವರ ಮನಸ್ಸನ್ನು ಆಳುತ್ತಿದ್ದವು. ಆದರೆ, ಆ ಅವಧಿ ಹೇಗೋ ಕಳೆಯಿತು. ಚಿತ್ರಾರನ್ನು ಭೇಟಿಯಾಗುವ ಸಮಯದಲ್ಲಿ, ಅವರಿಗೆ 23 ವರ್ಷ ವಯಸ್ಸಾಗಿತ್ತು ಮತ್ತು ಅವರ ದೃಷ್ಟಿ ಇಲ್ಲವಾಗಿತ್ತು. ಅವರು ಮೃದುವಾಗಿ ಹೇಳುತ್ತಾರೆ, ನನಗೆ ನಾನು "ಒಂದು ಶವದಂತೆ ಭಾಸವಾಗುತ್ತಿದ್ದೆ" ಮತ್ತು ಚಿತ್ರಾರ ಪರಿಚಯ ಮುತ್ತುರಾಜರಿಗೆ ಬದುಕಿನ ಹೊಸ ಮಜಲನ್ನು ಪರಿಚಯಿಸಿತು.
ದುರದೃಷ್ಟಕರ ಅಪಘಾತಗಳ ಸರಣಿಯು ಮುತ್ತುರಾಜ ಸಂಪೂರ್ಣ ಕುರುಡರಾಗುವ ಮುನ್ನ ಅವರ ದೃಷ್ಟಿಯನ್ನು ಕುಗ್ಗಿಸಿತ್ತು. ಅವರು ಏಳು ವರ್ಷದವರಿದ್ದಾಗ, ಅವರು ಮತ್ತು ಅವರ ಸಹೋದರಿ ಮಧುರೈನಲ್ಲಿ ತಮ್ಮ ತೋಟದಲ್ಲಿ ಗುಲಾಬಿ ಗಿಡಗಳನ್ನು ಕಸಿ ಮಾಡುತ್ತಿದ್ದರು, ಅಲ್ಲಿ ಅವರು ಹೂವುಗಳನ್ನು ಮಾರಾಟಕ್ಕಾಗಿ ಬೆಳೆಸುತ್ತಿದ್ದರು. ಅವರ ಸಹೋದರಿ ಗಿಡವೊಂದನ್ನು ಕೀಳುವಾಗ ಸರಿಯಾಗಿ ಹಿಡಿದುಕೊಳ್ಳದ ಕಾರಣ ಆ ಗಿಡದ ಕಾಂಡವು ಅವರ ಮುಖಕ್ಕೆ ಬಡಿದು ಕಣ್ಣಿಗೆ ಮುಳ್ಳು ಚುಚ್ಚಿತು.
ಆರು ಶಸ್ತ್ರಚಿಕಿತ್ಸೆಗಳ ನಂತರ, ಅವರ ಎಡಗಣ್ಣಿನ ದೃಷ್ಟಿ ಒಂದಿಷ್ಟು ಮರಳಿತು. ಇದಕ್ಕಾಗಿ ಅವರ ಕುಟುಂಬವು ತಮ್ಮ ಮೂರು ಸೆಂಟ್ಸ್ (0.03 ಎಕರೆ) ಭೂಮಿಯನ್ನು ಮಾರಾಟ ಮಾಡಬೇಕಾಯಿತು ಮತ್ತು ಸಾಲವನ್ನು ಕೂಡಾ ಮಾಡಿಕೊಂಡಿತು. ಇದರ ನಂತರ ಬೈಕ್ ಅಪಘಾತವೊಂದರಲ್ಲಿ ಅವರ ಸರಿಯಿದ್ದ ಕಣ್ಣಿಗೆ ಹೊಡೆತ ಬಿದ್ದು ಶಾಲೆಯ ಕಪ್ಪು ಹಲಗೆ ಕಾಣದಂತಾಯಿತು. ಇದರಿಂದಾಗಿ ಶಾಲೆ ಮತ್ತು ಓದು ಎರಡೂ ಅವರ ಪಾಲಿಗೆ ಕಷ್ಟಕರವಾಯಿತು. ಕಪ್ಪುಹಲಗೆಯ ಮೇಲಿನ ಬಿಳಿ ಅಕ್ಷರಗಳು ಕಾಣದಾದವು. ಆದರೆ ಹೇಗೋ ತನ್ನ ಶಿಕ್ಷಕರ ಸಹಾಯದಿಂದ 10ನೇ ತರಗತಿಯವರೆಗೆ ಓದಲು ಸಾಧ್ಯವಾಯಿತು.
2013ರ ಜನವರಿಯಲ್ಲಿ ಅವರ ಮನೆಯ ಮುಂದೆ ರಸ್ತೆಯ ಮೇಲೆ ಕಬ್ಬಿಣದ ರಾಡ್ ಹೊಡೆದು ಮುತ್ತುರಾಜರ ಜಗತ್ತು ಸಂಪೂರ್ಣವಾಗಿ ಕತ್ತಲೆಯಾಯಿತು. ಚಿತ್ರಾರನ್ನು ಭೇಟಿಯಾದ ನಂತರ, ಬೆಳಕು ಮತ್ತು ಪ್ರೀತಿ ಅವನ ಜೀವನದಲ್ಲಿ ಮತ್ತೆ ಅರಳಿತು.
*****
ಮದುವೆಯಾದ ಒಂದು ತಿಂಗಳ ನಂತರ, 2017ರಲ್ಲಿ, ಚಿತ್ರಾರಿಗೆ ಉಸಿರಾಟದ ತೊಂದರೆ ಶುರುವಾಯಿತು. ಮಧುರೈನ ಅಣ್ಣಾನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ಪರೀಕ್ಷೆಗಳ ನಂತರ, ಚಿತ್ರಾರ ಹೃದಯ ದುರ್ಬಲವಾಗಿದೆ ಎಂದು ತಿಳಿದುಬಂದಿತು. ವೈದ್ಯರು ಚಿತ್ರಾ ಇಷ್ಟು ದಿನ ಬದುಕಿರುವುದೇ ಆಶ್ಚರ್ಯ ಎಂದು ಹೇಳಿದರು. (ಚಿತ್ರಾರಿಗೆ ತನಗಿರುವ ಆರೋಗ್ಯ ಸಮಸ್ಯೆಯ ಹೆಸರನ್ನು ಹೇಳಲು ತಿಳಿಯಲಿಲ್ಲ - ಅವರ ಆರೋಗ್ಯಕ್ಕೆ ಸಂಬಂಧಿಸಿದ ಕಡತ ಆಸ್ಪತ್ರೆಯಲ್ಲಿದೆ.) ಚಿತ್ರಾ ತನ್ನ ಕುಟುಂಬಕ್ಕಾಗಿ ತಮ್ಮ ಅಷ್ಟೂ ಬದುಕನ್ನು ಸವೆಸಿದ್ದರು ಆದರೆ ಅವರ ಕುಟುಂಬ ಇಂತಹ ಸಮಯದಲ್ಲಿ ಸಹಾಯಕ್ಕೆ ಬರಲು ನಿರಾಕರಿಸಿತು.
ಚಿತ್ರಾರ ಚಿಕಿತ್ಸೆಗಾಗಿ ಮುತ್ತುರಾಜ 30,000 ರೂ. ಬಡ್ಡಿಯ ಮೇಲೆ ಸಾಲ ಪಡೆದಿದ್ದಾರೆ. ಚಿತ್ರಾ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೂರು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ಮನೆಗೆ ಹಿಂತಿರುಗಿದ ನಂತರ ಅವರು ಆರೋಗ್ಯವಾಗಿದ್ದರು. ಆದರೆ ನಂತರ ಮುತ್ತುರಾಜರಿಗೆ ಕಿವಿಯ ಶಸ್ತ್ರಚಿಕಿತ್ಸೆಯ ಅಗತ್ಯ ಕಂಡುಬಂದಿತು. ಇದರಿಂದ ನಿರಾಶೆಗೊಂಡ ಇಬ್ಬರೂ ತಮ್ಮ ಬದುಕನ್ನು ಕೊನೆಗೊಳಿಸಲು ನಿರ್ಧರಿಸಿದರು. ಆದರೆ ಬದುಕು ಅದಕ್ಕೆ ಆಸ್ಪದ ನೀಡಲಿಲ್ಲ. ಚಿತ್ರಾ ತಾಯಿಯಾಗುವ ಹಂತದಲ್ಲಿದ್ದರು. ಚಿತ್ರಾರ ಹೃದಯ ಈ ಒತ್ತಡವನ್ನು ನಿಭಾಯಿಸಲು ಸಾಧ್ಯವೇ ಎನ್ನುವುದು ಮುತ್ತುರಾಜರ ಚಿಂತೆಯಾಗಿತ್ತು. ಆದರೆ ವೈದ್ಯರು ಗರ್ಭಾವಸ್ಥೆಯನ್ನು ಮುಂದುವರಿಸಲು ಸಲಹೆ ನೀಡಿದರು. ತಿಂಗಳುಗಳ ವಿಶ್ರಾಂತಿ ಮತ್ತು ಪ್ರಾರ್ಥನೆಯ ನಂತರ, ಅವರ ಮಗ ಜನಿಸಿದನು. ಈಗ ನಾಲ್ಕು ವರ್ಷದ ವಿಶಾಂತ್ ರಾಜಾ ಅವರ ಭರವಸೆ, ಅವರ ಭವಿಷ್ಯ ಮತ್ತು ಸಂತೋಷ.
*****
ದಂಪತಿಗಳ ಪಾಲಿಗೆ ದೈನಂದಿನ ಜೀವನವು ಇಂದಿಗೂ ಕಷ್ಟಕರವಾಗಿದೆ. ಚಿತ್ರಾ ತನ್ನ ಆರೋಗ್ಯದ ಸ್ಥಿತಿಯಿಂದಾಗಿ ಭಾರವಾದ ಏನನ್ನೂ ಎತ್ತಲು ಸಾಧ್ಯವಿಲ್ಲ. ಮುತ್ತುರಾಜ ತಮ್ಮ ಮನೆಯಿಂದ ಎರಡು ಬೀದಿಯ ಆಚೆಗಿರುವ ಹ್ಯಾಂಡ್‌ಪಂಪಿನಿಂದ ನೀರನ್ನು ತರುತ್ತಾರೆ. ಹಾಗೆ ನೀರು ತರುವಾಗ ಅವರು ಚಿತ್ರಾರ ಹೆಗಲ ಮೇಲೆ ಕೈ ಇರಿಸಿಕೊಂಡಿರುತ್ತಾರೆ. ಚಿತ್ರಾ ಅವರ ಕಣ್ಣಾಗಿ ಮುಂದೆ ನಡೆಯುತ್ತಾರೆ. ಚಿತ್ರಾ ಹತ್ತಿರದ ಅರಣ್ಯ ಪ್ರದೇಶದಿಂದ ಬೇವಿನ ಹಣ್ಣುಗಳನ್ನು ಸಂಗ್ರಹಿಸಿ ನಂತರ ಅವುಗಳನ್ನು ಒಣಗಿಸಿ ಒಂದು ಅಳತೆಗೆ ರೂ. 30ರಂತೆ ಮಾರುತ್ತಾರೆ. ಉಳಿದ ಸಮಯದಲ್ಲಿ ಮಂಞನತಿ ಕಾಯಿ (Indian mulberry/ನೋನಿ) ಹೆಕ್ಕಿ ಮಾರುತ್ತಾರೆ. ಇದರ ಒಂದು ಅಳತೆಗೆ 60 ರೂ. ದೊರೆಯುತ್ತದೆ. ಒಂದು ಕಿಲೋ ಅಥವಾ ಎರಡು ಮಲ್ಲಿಗೆ ಹೂವುಗಳನ್ನು ಹೊಲದಲ್ಲಿ ಕೊಯ್ದು ಕೊಟ್ಟು ದಿನವೊಂದಕ್ಕೆ 25-50 ರೂ. ಸಂಪಾದಿಸುತ್ತಾರೆ.
ಚಿತ್ರಾರ ದೈನಂದಿನ ಆದಾಯ ಸರಾಸರಿ ರೂ. 100, ಇದು ಅವರ ದಿನನಿತ್ಯದ ಖರ್ಚುಗಳಿಗೆ ಸರಿಹೋಗುತ್ತದೆ. ಚಿತ್ರಾ ಅವರ ಔಷಧಿ ಖರ್ಚುಗಳನ್ನು ಮುತ್ತುರಾಜ ತಿಂಗಳಿಗೊಮ್ಮೆ ತಮಿಳುನಾಡು ಸರ್ಕಾರದ ವಿಭಿನ್ನ ಸಾಮರ್ಥ್ಯದ ವ್ಯಕ್ತಿಗಳಿಗೆ ನೀಡಲಾಗುವ ಪಿಂಚಣಿ ಯೋಜನೆಯಡಿ ಪಡೆಯುವ ರೂ. 1,000ದಿಂದ ನಿಭಾಯಿಸುತ್ತಾರೆ. "ನನ್ನ ಬದುಕು ನಿಂತಿರುವುದೇ ಈ ಔಷಧಿಗಳ ಮೇಲೆ. ಅವುಗಳನ್ನು ತೆಗೆದುಕೊಳ್ಳದೆ ಹೋದರೆ ನನಗೆ ನೋವು ಪ್ರಾರಂಭವಾಗುತ್ತದೆ." ಚಿತ್ರಾ ಹೇಳುತ್ತಾರೆ.
ಕೋವಿಡ್ -19 ಲಾಕ್‌ಡೌನ್‌ಗಳು ಹಣ್ಣುಗಳನ್ನು ಸಂಗ್ರಹಿಸಿ ಮಾರುವ ಅವಕಾಶವನ್ನು ಕಸಿದುಕೊಂಡ ಕಾರಣ ಚಿತ್ರಾ ತನ್ನ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದರು. ಇದರಿಂದಾಗಿ ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದೆ. ಹಾಲು ಖರೀದಿಸಲು ಹಣವಿಲ್ಲದ ಕಾರಣ ಅವರ ಮಗ ಹಾಲು ಹಾಕಿಲ್ಲದ ಕಪ್ಪು ಚಹಾವನ್ನು ಕುಡಿಯಲಾರಂಭಿಸಿದ್ದಾನೆ. "ಆದರೆ ನನಗೆ ಇದೇ ಇಷ್ಟ" ಎಂದು ವಿಶಾಂತ್ ಹೇಳುತ್ತಾನೆ, ಅವನ ಮಾತಿನಲ್ಲಿ ತಂದೆ-ತಾಯಿಯ ಕಷ್ಟ ಅರ್ಥಮಾಡಿಕೊಂಡಿರುವ ಪ್ರಬುದ್ಧತೆ ಕಾಣುತ್ತಿತ್ತು.
ಈ ಲೇಖನದ ಪಠ್ಯವನ್ನು ವರದಿಗಾರರ ಸಹಯೋಗದೊಂದಿಗೆ ಅಪರ್ಣ ಕಾರ್ತಿಕೇಯನ್ ಬರೆದು ಸಿದ್ಧಗೊಳಿಸಿದ್ದಾರೆ.
ಅನುವಾದ: ಶಂಕರ ಎನ್. ಕೆಂಚನೂರು