ಶೋಭಾ ಸಾಹ್ನಿ ತನ್ನ ಮಗನ ಸಾವಿಗೆ ಕಾರಣವೇನೆನ್ನುವುದು ತನಗೆ ತಿಳಿದಿದೆ ಎಂದು ಭಾವಿಸಿದ್ದರು. ಆದರೆ ಏಳು ತಿಂಗಳುಗಳ ನಂತರವೂ ಆಕೆಗೆ ಕಾರಣದ ಕುರಿತು ಸ್ಪಷ್ಟತೆ ಇಲ್ಲ.

ಅದು ಫೆಬ್ರವರಿ ತಿಂಗಳ ಒಂದು ಶಾಂತ ಮಧ್ಯಾಹ್ನವಾಗಿತ್ತು. ಬ್ರಹ್ಮಸಾರಿ ಗ್ರಾಮದ  ಮೂವತ್ತು ವರ್ಷದ ಶೋಭಾ  ತನ್ನ  ಆರು ವರ್ಷದ ಮಗ   ಆಯುಷ್  ಅನಾರೋಗ್ಯಕ್ಕೆ ತುತ್ತಾದ ದಿನವನ್ನು ನೆನಪಿಸಿಕೊಳ್ಳುತ್ತಾ ತನ್ನ ಒಂದು ಕೋಣೆಯ ಮನೆಯ   ಹೊಸ್ತಿಲಲ್ಲಿ ಕುಳಿತಿದ್ದರು. "ಅವನು ಜ್ವರದಿಂದ ಬಳಲುತ್ತಿದ್ದ,  ನಂತರ   ಹೊಟ್ಟೆನೋಯುತ್ತಿರುವುದಾಗಿ ಹೇಳಿದ" ಎಂದು ಅವರು ಹೇಳಿದರು.

ಜುಲೈ 2021ರ ಕೊನೆಯಲ್ಲಿ ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ಅವರ ಹಳ್ಳಿಯಲ್ಲಿ ಮಳೆಯಿಂದ ಪ್ರವಾಹ ಉಂಟಾದ ನಂತರ ಇದು ಸಂಭವಿಸಿತು. ಇಲ್ಲಿ ಪ್ರವಾಹಗಳು ಸಂಭವಿಸುವುದು ಸಾಮಾನ್ಯವಾಗಿದೆ. "ಇದು ಪ್ರತಿ ವರ್ಷ ನಡೆಯುತ್ತದೆ. ಆದರೆ ನೀರು ಹೊರಹೋಗಲು ಯಾವುದೇ ಮಾರ್ಗವಿಲ್ಲ" ಎಂದು ಅವರು ಹೇಳಿದರು.

ಪ್ರತಿ ಬಾರಿ ಮಳೆ ಬಂದಾಗ ಇಡೀ ಬ್ರಹ್ಮಸಾರಿ ನೀರಿನಲ್ಲಿ ಮುಳುಗುತ್ತದೆ. ಹಸುವಿನ ಸಗಣಿ ಮತ್ತು ಮಾನವ ಮಲಮೂತ್ರ - ಬಯಲು ಮಲವಿಸರ್ಜನೆಯಿಂದಾಗಿ - ಗ್ರಾಮದಾದ್ಯಂತ ಮಳೆ ನೀರಿನಲ್ಲಿ ಸೇರಿಕೊಳ್ಳುತ್ತದೆ. “ನೀರಿನಲ್ಲಿ ಸತ್ತ ಹುಳುಗಳು ಮತ್ತು ಸೊಳ್ಳೆಗಳು ಇವೆ. ನಮ್ಮ ಅಡುಗೆ ಕೋಣೆಗೆ ಕೊಳಕು ನೀರು ನುಗ್ಗುತ್ತಿದೆ" ಎಂದು ಶೋಭಾ ಹೇಳಿದರು. "ನಾವು ಎಷ್ಟೇ ತಡೆಯಲು ಪ್ರಯತ್ನಿಸಿದರೂ ನಮ್ಮ ಮಕ್ಕಳು ಅದೇ ನೀರಿನಲ್ಲಿ ಆಟವಾಡುತ್ತಾರೆ.ಇಲ್ಲಿನ ಜನರು ಮಳೆಗಾಲದಲ್ಲಿ ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ."

ಕಳೆದ ವರ್ಷ ಅವರ ಮಗ ಸಾವನ್ನಪ್ಪಿದ್ದ. ನಾವು ಮೊದಲು ಬರ್ಹಲ್‌ಗಂಜ್ ಮತ್ತು ಸಿಕ್ರಿಗಂಜ್‌ನಲ್ಲಿರುವ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದೆವು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಶೋಭಾ ಹೇಳಿದರು.

ಜ್ವರ ಬಂದ ಒಂದು ವಾರದ ನಂತರ ಶೋಭಾ ಆಯುಷ್‌ನನ್ನು  7 ಕಿ.ಮೀ ದೂರದಲ್ಲಿರುವ ಬೇಲ್‌ಘಾಟ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ಕರೆದೊಯ್ಯಲಾಯಿತು. ಅಲ್ಲಿ ಅವರು ಮಗುವನ್ನು ಗೋರಖ್‌ಪುರದ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿಗೆ (ಬಿಆರ್‌ಡಿ ವೈದ್ಯಕೀಯ ಕಾಲೇಜು) ಕರೆದೊಯ್ಯಲು ಸಲಹೆ ನೀಡಿದರು. ಇದು ಬ್ರಹ್ಮಸಾರಿಯಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ.

PHOTO • Parth M.N.

ಗೋರಖ್ಪುರ ಜಿಲ್ಲೆಯ ಬ್ರಹ್ಮಸಾರಿ ಗ್ರಾಮದಲ್ಲಿರುವ ಶೋಭಾ ಸಾಹ್ನಿ ತನ್ನ ಮನೆಯ ಹೊರಗೆ ಹ್ಯಾಂಡ್ ವಾಟರ್ ಪಂಪಿನಿಂದ ನೀರೆತ್ತುತ್ತಿರುವುದು

ಬಿಆರ್‌ಡಿ ವೈದ್ಯಕೀಯ ಕಾಲೇಜು, ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ. ಇದು ಈ ಪ್ರದೇಶದಲ್ಲಿನ ಸಂರಕ್ಷಣಾ ಸೌಲಭ್ಯಗಳಲ್ಲಿ ಮೂರನೇಯದು. ಇದು ಪೂರ್ವ ಉತ್ತರ ಪ್ರದೇಶ, ನೆರೆಯ ರಾಜ್ಯ ಬಿಹಾರ ಮತ್ತು ನೇಪಾಳದ ರೋಗಿಗಳಿಗೆ ಸೇವೆ ಸಲ್ಲಿಸುತ್ತದೆ. ಆಸ್ಪತ್ರೆಯು 5 ಕೋಟಿ ಜನಸಂಖ್ಯೆಗೆ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿಕೊಳ್ಳುತ್ತದೆ. ಆಸ್ಪತ್ರೆಯು ರೋಗಿಗಳಿಂದ ತುಂಬಿ ತುಳುಕುತ್ತಿರುತ್ತದೆ; ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಕೆಲಸದ ಒತ್ತಡದಲ್ಲಿರುತ್ತಾರೆ.

ಗೋರಖ್‌ಪುರದ ಆಸ್ಪತ್ರೆಗೆ ಹೋದ ನಂತರ ಆಯುಷ್‌ಗೆ ಮೂರ್ಛೆ ಬರಲಾರಂಭಿಸಿತು. ಮಗುವಿಗೆ ಮೆದುಳು ಜ್ವರವಿದೆ ಎಂದು ವೈದ್ಯರು ಹೇಳಿದ್ದರು ಎಂದು ಶೋಭಾ ನೆನಪಿಸಿಕೊಂಡರು. ಸುಮಾರು ಐದು ದಿನಗಳ ನಂತರ, ಆಗಸ್ಟ್ 4, 2021ರಂದು, ಆಯುಷ್ ನಿಧನಹೊಂದಿದ. ನನ್ನ ಮಗುವಿಗೆ ಹೀಗಾಗಬಾರದಿತ್ತು, ಬಹಳ ಒಳ್ಳೆಯ ಮಗು ಅವನು ಎಂದು ಶೋಭಾ ಕಣ್ಣೀರಿಟ್ಟರು.

1978ರಲ್ಲಿ ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ಮೊದಲ ಬಾರಿಗೆ ಹರಡಿದಾಗಿನಿಂದ ಗೋರಖ್‌ಪುರ ಜಿಲ್ಲೆ ಮೆದುಳುಜ್ವರದಿಂದ ಪೀಡಿತವಾಗಿದೆ. ನಾಲ್ಕು ದಶಕಗಳಿಂದ, ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್-) ಮರುಕಳಿಸುವಿಕೆಯು ಈ ಪ್ರದೇಶದಲ್ಲಿ ಹತ್ತಾರು ಸಾವಿರ ಜೀವಗಳನ್ನು ಬಲಿ ತೆಗೆದುಕೊಂಡಿದೆ.‌

ಮೆದುಳು ಜ್ವರಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ವಿವರಿಸಲು ಬಳಸಲಾಗುವ ಎಇಎಸ್ ಪದವು, ಭಾರತದಲ್ಲಿ ಗಂಭೀರವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ . ಸೊಳ್ಳೆಯಿಂದ ಹರಡುವ ಜಪಾನೀಸ್ ಎನ್ಸೆಫಾಲಿಟಿಸ್ ವೈರಸ್ (ಜೆಇವಿ) ವೈರಸ್, ಎಇಎಸ್‌ಗೆ ಪ್ರಮುಖ ಕಾರಣವಾಗಿದೆ. ಆದಾಗ್ಯೂ, ರೋಗದ ಶಾಸ್ತ್ರೀಯ ಅಧ್ಯಯನದ ಪ್ರಕಾರ, ಇದು ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಸಾಂಕ್ರಾಮಿಕವಲ್ಲದ ಏಜೆಂಟ್‌ಗಳನ್ನು ಒಳಗೊಂಡಂತೆ ವಿವಿಧ ವೈರಸ್‌ಗಳಿಂದ ಉಂಟಾಗುತ್ತದೆ.

ತೀವ್ರ ಜ್ವರ, ಮಾನಸಿಕ ಸ್ಥಿತಿಯಲ್ಲಿ ವ್ಯತ್ಯಾಸ (ಗೊಂದಲ, ತಲೆತಿರುಗುವಿಕೆ, ಮರೆವು ಅಥವಾ ಕೋಮಾ), ಮತ್ತು ಮೂರ್ಛೆ ಹೋಗುವುದು ಇದರ ರೋಗಲಕ್ಷಣಗಳು. AES ವರ್ಷದ ಯಾವುದೇ ಸಮಯದಲ್ಲಿ ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದಾದರೂ, ಸಾಮಾನ್ಯವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ತನ್ಮೂಲಕ ಗಂಭೀರ ಅನಾರೋಗ್ಯ, ಅಂಗವೈಕಲ್ಯ ಮತ್ತು ಅಂತಿಮವಾಗಿ ಸಾವಿಗೆ ಕಾರಣವಾಗುತ್ತದೆ. ಮಾನ್ಸೂನ್ ಋತುವಿನಲ್ಲಿ, ಮಾನ್ಸೂನ್ ಆರಂಭದ ನಂತರದ ಅವಧಿಯಲ್ಲಿ ಈ ರೋಗದ ಸಂಭವವು ಉತ್ತುಂಗಕ್ಕೇರುತ್ತದೆ.

ನೈರ್ಮಲ್ಯ, ಪರಿಶುದ್ಧತೆ ಮತ್ತು ಶುದ್ಧ ನೀರಿನ ಕೊರತೆಯಿರುವ ಪ್ರದೇಶಗಳು ಹೆಚ್ಚು ರೋಗಕ್ಕೆ ಒಳಗಾಗುತ್ತವೆ.

ಮೇಲೆ ಹೇಳಿದ ಎಲ್ಲಾ ರೋಗಕಾರಕ ಸ್ಥಿತಿಗಳು ಬ್ರಹ್ಮಸಾರಿಯಲ್ಲಿವೆ.

PHOTO • Parth M.N.

ಪ್ರವಾಹದ ಅವಶೇಷಗಳು ಮತ್ತು ಕೆಸರು ಬ್ರಹ್ಮಸಾರಿಯನ್ನು ಎನ್ಸೆಫಾಲಿಟಿಸ್‌ಗೆ ಕಾರಣವಾಗುವ ಸೋಂಕುಗಳಿಗೆ ತುತ್ತಾಗುವಂತೆ ಮಾಡುತ್ತದೆ

ಆಯುಷ್‌ಗೆ ಮೆದುಳು ಜ್ವರವಿತ್ತು ಎಂದು ಖಚಿತಪಡಿಸಿಕೊಳ್ಳಲು, ಬಿಆರ್ ಡಿ ವೈದ್ಯಕೀಯ ಕಾಲೇಜು ನೀಡಿದ ಅವನ ಮರಣ ಪ್ರಮಾಣಪತ್ರವನ್ನು ತೋರಿಸಲು ಹೇಳಿದೆವು. "ಅದು ನನ್ನ ಮೈದುನನ ಬಳಿ ಇದೆ" ಎಂದು ಶೋಭಾ ಹೇಳಿದರು. "ಅವನ ನಂಬರ್‌ ತಗೊಳ್ಳಿ ಮತ್ತು ಅದನ್ನು ವಾಟ್ಸಾಪ್ ಮೂಲಕ ಕಳುಹಿಸಲು ಅವನಿಗೆ ಹೇಳಿ."

ನಾವು ಹಾಗೇ ಮಾಡಿದೆವು. ಕೆಲವು ನಿಮಿಷಗಳ ನಂತರ ಫೋನ್ ರಿಂಗಣಿಸಿತು. ಆಯುಷ್ ತೀವ್ರವಾದ ಮೆನಿಂಜೈಟಿಸ್‌ನಿಂದ ಬಳಲುತ್ತಿದ್ದ ಮತ್ತು ಹೃದಯ ಸ್ತಂಭನದಿಂದ ಸಾವಿಗೀಡಾಗಿದ್ದಾನೆ ಎಂದು ದಾಖಲೆಯಲ್ಲಿ ಹೇಳಲಾಗಿದೆ. "ಆದರೆ ಆಯುಷ್‌ಗೆ ಮೆದುಳು ಜ್ವರಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು" ಎಂದು ಶೋಭಾ ಅಚ್ಚರಿಯಿಂದ ಹೇಳಿದರು. "ಅವರು ನನಗೆ ಒಂದು ವಿಷಯ ಹೇಳುವುದು ಮತ್ತು ಮರಣ ಪ್ರಮಾಣಪತ್ರದಲ್ಲಿ ಇನ್ನೊಂದನ್ನು ಹೇಗೆ ಬರೆಯಲು ಸಾಧ್ಯ!?"

*****

ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಒಮ್ಮೆ ಆಗಸ್ಟ್ 2017ರಲ್ಲಿ ಮುಖ್ಯಾಂಶಗಳಲ್ಲಿ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಪೈಪ್‌ ಮೂಲಕ ಸರಬರಾಜಾಗುವ ಆಮ್ಲಜನಕ ಖಾಲಿಯಾಗಿ ಎರಡು ದಿನಗಳಲ್ಲಿ (ಆಗಸ್ಟ್ 10) ಮೂವತ್ತು ಮಕ್ಕಳು ಸಾವನ್ನಪ್ಪಿದ್ದರು. ಆಕ್ಸಿಜನ್ ಕೊರತೆಯಿಂದ ಈ ಅವಘಡ ಸಂಭವಿಸಿದೆ ಎನ್ನುವುದನ್ನು ಆಗ ರಾಜ್ಯ ಸರ್ಕಾರ ನಿರಾಕರಿಸಿತ್ತು. ಎನ್ಸೆಫಾಲಿಟಿಸ್ ಸೇರಿದಂತೆ ನೈಸರ್ಗಿಕ ಕಾರಣಗಳಿಂದ ಸಾವುಗಳು ಸಂಭವಿಸಿವೆ ಮತ್ತು ಆಗಸ್ಟ್ 7 ಮತ್ತು 9ರ ನಡುವೆ ಕೂಡಾ ಅದೇ ಸಂಖ್ಯೆಯ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು.

ಆಸ್ಪತ್ರೆಯಲ್ಲಿ ಹೆಚ್ಚಿನ ಮರಣ ಪ್ರಮಾಣ ಇರುವುದು ಅಸಾಧಾರಣ ಸಂಗತಿಯೇನೂ ಅಲ್ಲ.

2012 ಮತ್ತು ಆಗಸ್ಟ್ 2017ರ ನಡುವೆ, ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ 3,000ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಕಳೆದ ಮೂವತ್ತು ವರ್ಷಗಳಲ್ಲಿ ಈ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡ 50,000 ಮಕ್ಕಳಲ್ಲಿ ಇವರೂ ಸೇರಿದ್ದಾರೆ. ಇವರಲ್ಲಿ ಹೆಚ್ಚಿನ ಮಕ್ಕಳು ಜೆಇ ಅಥವಾ ಎಇಎಸ್‌ನಿಂದಾಗಿ ಕೊಲ್ಲಲ್ಪಟ್ಟರು. 2017 ರ ಘಟನೆಯು ಕಳೆದ ದಶಕಗಳಿಂದ ಗೋರಖ್‌ಪುರದ ಈ ಅತ್ಯಂತ ದಟ್ಟಣೆಯ ಆಸ್ಪತ್ರೆಯ ಮೇಲೆ ನೆರಳಿನಂತೆ ಸುಳಿದಾಡುತ್ತಿರುವ ಘಟನೆಗಳ ಪುನರಾವರ್ತನೆಯಾಗಿದೆ. ಈ ಭಾಗದ ಬಹುತೇಕ ಎಲ್ಲ ಎಇಎಸ್ ರೋಗಿಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಇದಕ್ಕೆ ಒಂದು ಕಾರಣ.

ಗೋರಖ್‌ಪುರದ ತವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಇದು ನೋವು ತರುವ ವಿಷಯವಾಗಿದೆ. ಮುಖ್ಯಮಂತ್ರಿಯಾಗುವ ಮೊದಲು, ಅವರು 1998ರಿಂದ ಸತತವಾಗಿ ಐದು ಬಾರಿ ಗೋರಖ್‌ಪುರ ಸಂಸತ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, 2017ರ ಘಟನೆಯಿಂದ ಎನ್ಸೆಫಾಲಿಟಿಸ್ ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನಗಳ ಬಗ್ಗೆ ಮುಖ್ಯಮಂತ್ರಿ ವೈಯಕ್ತಿಕ ಆಸಕ್ತಿ ತೋರಿಸಿದ್ದಾರೆ. ಗೋರಖ್‌ಪುರದ ಮುಖ್ಯ ವೈದ್ಯಾಧಿಕಾರಿ (ಸಿಎಮ್‌ಒ) ಡಾ. ಅಶುತೋಷ್ ದುಬೆ, “ನಾವು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯಲು ಕೀಟನಾಶಕಗಳನ್ನು ನಿಯಮಿತವಾಗಿ ಸಿಂಪಡಿಸುವುದನ್ನು ಅತ್ಯಂತ ತ್ವರಿತವಾಗಿ ಮಾಡುತ್ತಿದ್ದೇವೆ. ಜೆಇ ನಿಯಂತ್ರಣಕ್ಕಾಗಿ ನಾವು ಏಪ್ರಿಲ್‌ನಿಂದಲೇ ಲಸಿಕೆ ಅಭಿಯಾನ ಆರಂಭಿಸಿದ್ದೇವೆ. ಮೊದಲು ಇದು ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಯುತ್ತಿತ್ತು. ಅದು ತುಂಬಾ ತಡವಾಗಿತ್ತು, ಏಕೆಂದರೆ ಮಳೆಗಾಲದಲ್ಲಿ ರೋಗಿಗಳ ಸಂಖ್ಯೆ ಅಸಮಾನವಾಗಿ ಏರುತ್ತಿತ್ತು.”

PHOTO • Parth M.N.

ಗೋರಖ್‌ಪುರ ಜಿಲ್ಲೆಯಲ್ಲಿ ಮಲ, ಸಗಣಿ ಮತ್ತು ಕಸದಿಂದ ಕಲುಷಿತಗೊಂಡ ಅಂತರ್ಜಲವು ಹೆಚ್ಚಿನ ಸೋಂಕಿನ ಸಂಖ್ಯೆಗೆ ಕಾರಣವಾಗಿದೆ

ರಾಜ್ಯದಲ್ಲಿ ಎಇಎಸ್ ಅನ್ನು ತಮ್ಮ ಸರ್ಕಾರ ನಿಯಂತ್ರಿಸಿದೆ ಎಂದು ಕಳೆದ ಕೆಲವು ವರ್ಷಗಳಿಂದ ಸಿಎಂ ಆದಿತ್ಯನಾಥ್ ಹೇಳುತ್ತಿದ್ದಾರೆ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ನಿರ್ದೇಶನಾಲಯ ಪ್ರಕಟಿಸಿರುವ ಮಾಹಿತಿ ಮುಖ್ಯಮಂತ್ರಿಯವರ ಮಾತನ್ನು ಸಮರ್ಥಿಸುತ್ತದೆ.

ಉತ್ತರ ಪ್ರದೇಶದಲ್ಲಿ ವರದಿಯಾಗುತ್ತಿರುವ ಎಇಎಸ್ ಮತ್ತು ಜೆಇ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಇಳಿಮುಖವಾಗುತ್ತಿದೆ. ಉತ್ತರ ಪ್ರದೇಶವು 2017ರಲ್ಲಿ 4,742 ಎಇಎಸ್ ಪ್ರಕರಣಗಳನ್ನು ದಾಖಲಿಸಿದೆ, ಅದರಲ್ಲಿ 693 ಜೆಇ ಪ್ರಕರಣಗಳಾಗಿವೆ. ಒಟ್ಟು ಸಾವಿನ ಸಂಖ್ಯೆ 654 ಆಗಿದ್ದರೆ, 93 ಸಾವಿಗೆ ಜೆಇ ಕಾರಣ.

2020ರಲ್ಲಿ ರಾಜ್ಯದಲ್ಲಿ 1,646 ಎಇಎಸ್‌ ಪ್ರಕರಣಗಳು ಮತ್ತು 83 ಸಾವುಗಳು ದಾಖಲಾಗಿವೆ. ಇದು 2021ರಲ್ಲಿ ಇನ್ನೂ ಉತ್ತಮವಾಗಿದೆ- 1,657 ಪ್ರಕರಣಗಳಲ್ಲಿ 58 ಸಾವುಗಳನ್ನು ದಾಖಲಿಸಿದೆ. ಈ ಪೈಕಿ ನಾಲ್ಕು ಸಾವುಗಳು ಮಾತ್ರ ಜೆಇಯಿಂದ ಸಂಭವಿಸಿವೆ.

2017 ರಿಂದ 2021 ರವರೆಗೆ ಎಇಎಸ್ ಮತ್ತು ಜೆಇ ಸಾವುಗಳಲ್ಲಿ ಇಳಿಕೆಯು ಅನುಕ್ರಮವಾಗಿ 91 ಮತ್ತು 95 ಪ್ರತಿಶತದಷ್ಟು ಆಶ್ಚರ್ಯಕರ ಮಟ್ಟದಲ್ಲಿದೆ.

ಇತ್ತೀಚಿನ ಅಸೆಂಬ್ಲಿ ಚುನಾವಣೆಯಲ್ಲಿ ಜಯಗಳಿಸಿದ ಒಂದು ತಿಂಗಳೊಳಗೆ, ಏಪ್ರಿಲ್ 2, 2022ರಂದು, ಆದಿತ್ಯನಾಥ್ ತಮ್ಮ ಸರ್ಕಾರವು ರಾಜ್ಯದಲ್ಲಿ " ಎನ್ಸೆಫಾಲಿಟಿಸ್ ನಿರ್ಮೂಲನೆ ಮಾಡುವಲ್ಲಿ " ಯಶಸ್ವಿಯಾಗಿದೆ ಎಂದು ಹೇಳಿಕೊಂಡರು.

ಆದಾಗ್ಯೂ, ಆಯುಷ್ ಪ್ರಕರಣದಲ್ಲಿ ತೋರಿಸಿರುವಂತೆ, ಮರಣ ಪ್ರಮಾಣಪತ್ರದಲ್ಲಿ ದಾಖಲಾದ ಸಾವಿನ ಕಾರಣದಲ್ಲಿ ಕಂಡುಬರುವ ವಿರೋಧಾಭಾಸವು ಮಾಹಿತಿ ಒದಗಿಸುವಲ್ಲಿ ನಿರ್ಲಕ್ಷ್ಯ ಉಂಟಾಗಿರಬಹುದು ಎನ್ನುವ ಅನುಮಾನವನ್ನು ಹುಟ್ಟುಹಾಕುತ್ತದೆ.

ಆಯುಷ್ ಮೆದುಳು ಜ್ವರದಿಂದ ಸಾವನ್ನಪ್ಪಿಲ್ಲ ಎಂದು ಬೇಲ್‌ಘಾಟ್ ಬ್ಲಾಕ್‌ನ ಸಿಎಚ್‌ಸಿ ಪ್ರಭಾರಿ ಡಾ.ಸುರೇಂದ್ರ ಕುಮಾರ್ ತಿಳಿಸಿದರು. ಬ್ರಹ್ಮಸಾರಿ ಗ್ರಾಮವು ಇದೇ ಬ್ಲಾಕ್‌ನಲ್ಲಿದೆ. "ನೀವು ಹೇಳುತ್ತಿರುವ ಪ್ರಕರಣದ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಇದು ಎಇಎಸ್ ಸಾವು ಅಲ್ಲ. ನನ್ನ ಏರಿಯಾದ ಎಇಎಸ್ ರೋಗಿಯೊಬ್ಬರು ದಾಖಲಾಗಿದ್ದರೆ, ವೈದ್ಯಕೀಯ ಕಾಲೇಜು ಅದನ್ನು ನನಗೆ ತಿಳಿಸುತ್ತಿತ್ತು." ಅವರು ಹೇಳಿದರು.

ಫೆಬ್ರವರಿಯಲ್ಲಿ PARI ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ ಗಣೇಶ್ ಕುಮಾರ್ ಅವರನ್ನು ಭೇಟಿಯಾದಾಗ, ಅವರು ಬೇಲ್‌ಘಾಟ್ ಸಿಎಚ್‌ಸಿಯ ಇಂಚಾರ್ಜ್‌ ಅವರ ಮಾತುಗಳನ್ನು ಒಪ್ಪಲಿಲ್ಲ. "ತಾಂತ್ರಿಕವಾಗಿ ಮೆನಿಂಜೈಟಿಸ್ ಕೂಡ ಎಇಎಸ್ ಅಡಿಯಲ್ಲಿ ಬರುತ್ತದೆ. ಆಸ್ಪತ್ರೆಗೆ ದಾಖಲಾದ ನಂತರ ರೋಗಿಗೆ ಎಇಎಸ್ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ." ಅವರು ಹೇಳಿದರು.‌

ನಾವು ಮೆದುಳು ಜ್ವರವೇ ಸಾವಿಗೆ ಕಾರಣ ಎಂಬ ಆಯುಷ್ ಮರಣ ಪ್ರಮಾಣ ಪತ್ರವನ್ನು ತೋರಿಸಿದೆವು. "ಇಲ್ಲಿ ಎಇಎಸ್ ನಂಬರ್ ಇರಬೇಕು, ಆದರೆ ಇಲ್ಲ!" ಗಣೇಶ್ ಕುಮಾರ್ ಅವರು ತಮ್ಮ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನೀಡಿದ ದಾಖಲೆಯನ್ನು ನೋಡಿ ಗೊಂದಲಕ್ಕೊಳಗಾದರು.

PHOTO • Parth M.N.

ʼನಮ್ಮ ಮಕ್ಕಳು ಕೊಳಕು ನೀರಿನಲ್ಲಿ ಆಟವಾಡುತ್ತಾರೆ, ನಾವು ಅವರನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ,ʼ ಎಂದು ಶೋಭಾ ಹೇಳುತ್ತಾರೆ

ಎಇಎಸ್ ರೋಗಿಯನ್ನು ಗುರುತಿಸುವುದು ಕಷ್ಟವೇನಲ್ಲ ಎಂದು ಡಾ.ಕಫೀಲ್ ಖಾನ್ ಹೇಳುತ್ತಾರೆ. "ಎಇಎಸ್ ಪ್ರಾಥಮಿಕ ರೋಗನಿರ್ಣಯವಾಗಿದೆ. ರೋಗಿಯು 15 ದಿನಗಳಿಗಿಂತ ಕಡಿಮೆ ಅವಧಿಯ ಜ್ವರವನ್ನು ಹೊಂದಿದ್ದರೆ ಮತ್ತು ಯಾವುದೇ ಬದಲಾವಣೆಗಳನ್ನು ಗಮನಿಸಿದರೆ (ಉದಾಹರಣೆಗೆ ಮೂರ್ಛೆ ಹೋಗುವುದು), ನೀವು ಅವರಿಗೆ ಎಇಸಿ ಸಂಖ್ಯೆಯನ್ನು ನೀಡಬಹುದು. ಅದಕ್ಕಾಗಿ ಯಾವುದೇ ಪರೀಕ್ಷೆಗಳನ್ನು ಮಾಡುವ ಅಗತ್ಯವಿಲ್ಲ. ಆಗಸ್ಟ್ 2017ರ ಘಟನೆಯವರೆಗೂ ನಾವು ಅದನ್ನು ಮಾಡಿದ್ದೇವೆ.

2017ರ ಆಗಸ್ಟ್ 10ರಂದು 23 ಮಕ್ಕಳು ಮೃತಪಟ್ಟ ದಿನ ಖಾನ್ ಅವರು ಬಿಆರ್‌ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದರು. ಘಟನೆಯ ನಂತರ, ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಯುಪಿ ಸರ್ಕಾರ ಅವರನ್ನು ಅಮಾನತುಗೊಳಿಸಿತ್ತು. ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಇತರ ಆರೋಪಗಳ ಮೇಲೆ ಅವರನ್ನು ಬಂಧಿಸಲಾಗಿತ್ತು. ಏಪ್ರಿಲ್ 2018ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗುವವರೆಗೆ ಅವರಿಗೆ ಏಳು ತಿಂಗಳ ಜೈಲು ಶಿಕ್ಷೆ ಅನುಭವಿಸಿದರು.

2017ರ ದುರಂತದ ನಂತರ ಅವರನ್ನು ಬಲಿಪಶುವಾಗಿ ಪರಿವರ್ತಿಸಲಾಯಿತು ಎಂದು ಅವರು ನಂಬುತ್ತಾರೆ. "ಆಸ್ಪತ್ರೆ ದತ್ತಾಂಶವನ್ನು ತಿದ್ದಿದೆ. ಹಾಗಾಗಿ ಅವರು ನನಗೆ ಕೆಲಸ ನೀಡಲು ನಿರಾಕರಿಸಿದರು," ಎಂದು ಅವರು ಹೇಳಿದರು. ನವೆಂಬರ್ 2021ರಲ್ಲಿ, ಉತ್ತರ ಪ್ರದೇಶ ಸರ್ಕಾರವು ಬಿಆರ್‌ಡಿಯಲ್ಲಿ ಪೀಡಿಯಾಟ್ರಿಕ್ಸ್ ಉಪನ್ಯಾಸಕರಾಗಿ ಅವರ ಸೇವೆಯನ್ನು ಕೊನೆಗೊಳಿಸಿತು. ಸರ್ಕಾರದ ಕ್ರಮವನ್ನು ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು.

ಧನಾತ್ಮಕ ಸಂಖ್ಯೆಗಳನ್ನು ತೋರಿಸಲು ಎಇಎಸ್ ಪ್ರಕರಣಗಳನ್ನು ಅಕ್ಯೂಟ್ ಫೈಬ್ರಿಲ್ ಇಲ್ನೆಸ್ ಎಎಫ್‌ಐ - ತೀವ್ರ ಜ್ವರಸಂಬಂಧಿ ರೋಗ) ಎಂದು ಪಟ್ಟಿ ಮಾಡಲಾಗಿದೆ ಎಂದು ಖಾನ್ ಹೇಳಿದರು. "ಆದರೆ ಎಎಫ್‌ಐ ಮೆದುಳು ಜ್ವರವನ್ನು ಒಳಗೊಂಡಿಲ್ಲ. ಇದು ಕೇವಲ ತೀವ್ರ ಜ್ವರ.”

ಜಿಲ್ಲಾ ಸಿಎಂಒ ಅಶುತೋಷ್ ದುಬೆ ಅವರು ಯಾವುದೇ ಸುಳ್ಳು ವರದಿಗಳನ್ನು ನಿರಾಕರಿಸಿದ್ದಾರೆ. "ಕೆಲವು ಎಎಫ್‌ಐ ಪ್ರಕರಣಗಳು ಎಇಎಸ್ ಪ್ರಕರಣಗಳಾಗಿರಬಹುದು" ಎಂದು ಅವರು ಹೇಳಿದರು. "ಅದಕ್ಕಾಗಿಯೇ ಪ್ರಕರಣಗಳನ್ನು ಮೊದಲು ಪರೀಕ್ಷಿಸಲಾಗುತ್ತದೆ ಮತ್ತು ನಂತರ ಅದಕ್ಕೆ ಅನುಗುಣವಾಗಿ ವರ್ಗೀಕರಿಸಲಾಗುತ್ತದೆ. ಆದರೆ ಎಲ್ಲಾ ಎಎಫ್‌ಐ ಪ್ರಕರಣಗಳು ಎಇಎಸ್ ಪ್ರಕರಣಗಳಲ್ಲ."‌

ಅಕ್ಯೂಟ್‌ ಫೆಬ್ರೈಲ್‌ ಇಲ್‌ನೆಸ್ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ ಆಗಿ ಬೆಳೆಯಬಹುದು ಮತ್ತು ಎರಡೂ ಕಾಯಿಲೆಗಳು ಸಾಮಾನ್ಯ ಕಾರಣಗಳನ್ನು ಹೊಂದಿವೆ. ಸ್ಕ್ರಬ್ ಟೈಫಸ್ ಎಂಬ ಬ್ಯಾಕ್ಟೀರಿಯಾ ಸಂಬಂಧಿತ ಸೋಂಕು ಕೂಡ ಇದೆ. ಇತ್ತೀಚಿನ ವರ್ಷಗಳಲ್ಲಿ ಗೋರಖ್‌ಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿೆಇಎಸ್ ಹರಡಲು ಈ ಸೋಂಕನ್ನು ಪ್ರಮುಖ ಕಾರಣವೆಂದು ಗುರುತಿಸಲಾಗಿದೆ. 2015 ಮತ್ತು 2016ರಲ್ಲಿ ನಡೆಸಿದ ಅಧ್ಯಯನಗಳ ಪ್ರಕಾರ, 60 ಪ್ರತಿಶತ ಎಇಎಸ್ ಪ್ರಕರಣಗಳಿಗೆ ಸ್ಕ್ರಬ್ ಟೈಫಸ್ ಕಾರಣವಾಗಿದೆ.‌

ತೀರಾ ಇತ್ತೀಚೆಗೆ, 2019ರಲ್ಲಿ, ಬಿಆರ್‌ಡಿ ವೈದ್ಯಕೀಯ ಕಾಲೇಜು ತೀವ್ರವಾದ ಜ್ವರಸಂಬಂಧಿ ಕಾಯಿಲೆಯನ್ನು ವಿಶೇಷ ಕಾಯಿಲೆ ಎಂದು ಗುರುತಿಸಲು ಪ್ರಾರಂಭಿಸಿತು. ಆದರೆ ಈ ಕಾಯಿಲೆಯ ಸಂಖ್ಯೆಯ ಬಗ್ಗೆ ದುಬೆ ಅಥವಾ ಗಣೇಶ್ ಕುಮಾರ್ ಬಳಿ ಮಾಹಿತಿ ಇಲ್ಲ

PHOTO • Parth M.N.

ಶೋಭಾ ಅವರ ಪುತ್ರ ಆಯುಷ್ ಮೆದುಳು ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ಆದಾಗ್ಯೂ ಅವನ ಮರಣ ಪ್ರಮಾಣಪತ್ರವು ಸಾವಿನ ಕಾರಣವಾಗಿ ಇತರ ಕಾಯಿಲೆಗಳನ್ನು ಉಲ್ಲೇಖಿಸಿದೆ

ಎಇಎಸ್ ತೀವ್ರ ಜ್ವರ, ಮಾನಸಿಕ ಸ್ಥಿತಿಯ ಬದಲಾವಣೆಗಳು ಮತ್ತು ಮೂರ್ಛೆ ಹೋಗುವುದು ಇದರ ಲಕ್ಷಣಗಳೆಂದು ನಿರೂಪಿಸಲ್ಪಟ್ಟಿದೆ. ಇದು ವರ್ಷದ ಯಾವುದೇ ಸಮಯದಲ್ಲಿ ಯಾವುದೇ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಇದು ಸಾಮಾನ್ಯವಾಗಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ

ಆದಾಗ್ಯೂ, PARI ಗೆ ಆ ವರ್ಷ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ಪಟ್ಟಿಯನ್ನು ಪಡೆಯಲು ಸಾಧ್ಯವಾಯಿತು. ಎಇಎಸ್ ಮತ್ತು ಜೆಇಗಳಂತೆ ಮಳೆಗಾಲದ ಆಸುಪಾಸಿನಲ್ಲಿ ಸಂಖ್ಯೆಗಳು ಉತ್ತುಂಗಕ್ಕೇರಿದ್ದವು. (ಡೆಂಗ್ಯೂ, ಚಿಕೂನ್ ಗುನ್ಯಾ ಮತ್ತು ಮಲೇರಿಯಾಗಳು ಎಎಫ್ಐಗೆ ಕಾರಣವಾಗುವ ಸೋಂಕುಗಳಲ್ಲಿ ಸೇರಿವೆ.) ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ 2019ರಲ್ಲಿ ಒಟ್ಟು 1,711 ಎಎಫ್ಐ ಪ್ರಕರಣಗಳಲ್ಲಿ, 2019ರ ಆಗಸ್ಟ್‌ ತಿಂಗಳಿನಲ್ಲಿ 240 ಪ್ರಕರಣಗಳು ವರದಿಯಾಗಿವೆ ಮತ್ತು ಸೆಪ್ಟೆಂಬರ್ ಮತ್ತು ಅಕ್ಟೋಬರಿನಲ್ಲಿ ಕ್ರಮವಾಗಿ 683 ಮತ್ತು 476 ಪ್ರಕರಣಗಳು ದಾಖಲಾಗಿವೆ. ಆದರೆ ವರ್ಷದ ಮೊದಲ ಆರು ತಿಂಗಳಲ್ಲಿ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ.

ಕೆಲವು ಮಾಹಿತಿಯನ್ನು ಪತ್ರಕರ್ತ ಮನೋಜ್ ಸಿಂಗ್ ಅವರು ತಮ್ಮ ವೆಬ್‌ಸೈಟ್ ಗೋರಖ್‌ಪುರ ನ್ಯೂಸ್‌ಲೈನ್‌ನಲ್ಲಿ 2019ರ ಕೊನೆಯಲ್ಲಿ ಪ್ರಕಟಿಸಿದರು. ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ದೀರ್ಘಕಾಲದಿಂದ ಎನ್‌ಸೆಫಾಲಿಟಿಸ್ ಪ್ರಕರಣಗಳನ್ನು ವರದಿ ಮಾಡುತ್ತಿರುವ ಮನೋಜ್ ಸಿಂಗ್, “ಆಸ್ಪತ್ರೆಯ ಆಡಳಿತವು ಏನನ್ನೂ ಮುಚ್ಚಿಡಲು ಬಯಸದಿದ್ದರೆ, ಹಿಂದಿನಂತೆ ಬಲಿಯಾದವರ ಸಂಖ್ಯೆಯ ಬಗ್ಗೆ ನಿಖರವಾದ ಮಾಹಿತಿಯನ್ನು ಏಕೆ ನೀಡುವುದಿಲ್ಲ?” ಎಂದು ಕೇಳಿದರು. 2019ರಲ್ಲಿ ದಾಖಲಾದ ಎಎಫ್‌ಐ ರೋಗಿಗಳಲ್ಲಿ ಜೆಇ ಪ್ರಕರಣಗಳ ಸಂಖ್ಯೆಯನ್ನು ಅವರು ಉಲ್ಲೇಖಿಸಿದರು. ಈ ಅಂಕಿ ಅಂಶದ ಪ್ರಕಾರ, ಒಟ್ಟು 1,711 ಎಎಫ್‌ಐ ರೋಗಿಗಳಲ್ಲಿ, ಜೆಇ ರೋಗಿಗಳ ಸಂಖ್ಯೆ 288 ಆಗಿತ್ತು.

ಆದಾಗ್ಯೂ, ಉತ್ತರ ಪ್ರದೇಶವು ಆ ವರ್ಷ ಒಟ್ಟು 235 ಜೆಇ ಪ್ರಕರಣಗಳನ್ನು ದಾಖಲಿಸಿದೆ.

"ಬಿಆರ್‌ಡಿಯಲ್ಲಿರುವ 288 ರೋಗಿಗಳಲ್ಲಿ ಕೆಲವರು ಉತ್ತರ ಪ್ರದೇಶದವರಲ್ಲದಿರಬಹುದು ಏಕೆಂದರೆ ವೈದ್ಯಕೀಯ ಕಾಲೇಜು ಪಶ್ಚಿಮ ಬಿಹಾರ ಮತ್ತು ನೇಪಾಳದ ರೋಗಿಗಳನ್ನೂ ದಾಖಲಿಸಿಕೊಳ್ಳುತ್ತದೆ" ಎಂದು ಸಿಂಗ್ ಹೇಳಿದರು. "ಆದರೆ ಹೆಚ್ಚಿನ ಪ್ರಕರಣಗಳು ರಾಜ್ಯ (ಯುಪಿ) ದಿಂದಲೇ ಬಂದಿರುವುದರಿಂದ, ಸಂಖ್ಯೆಗಳು ಅನುಮಾನಗಳನ್ನು ಹುಟ್ಟುಹಾಕುತ್ತವೆ."

ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಗಣೇಶ್ ಕುಮಾರ್, "ಬಿಹಾರ ಮತ್ತು ನೇಪಾಳದಿಂದ ಬಂದಿರುವ ನಿಖರವಾದ ಪ್ರಕರಣಗಳ ಸಂಖ್ಯೆಯನ್ನು ಹೇಳುವುದು ಕಷ್ಟ, ಆದರೆ ಅವು ಸಾಮಾನ್ಯವಾಗಿ ಶೇಕಡಾ 10 " ಮೀರುವುದಿಲ್ಲ.

ಇದು ಎಇಎಸ್ ಪ್ರಕರಣಗಳನ್ನು ತಪ್ಪಾಗಿ ವರದಿ ಮಾಡಿರುವ ಮತ್ತು ಕಡಿಮೆ ಅಂದಾಜು ಮಾಡಿರುವ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ.

*****

PHOTO • Parth M.N.

ತನ್ನ ಕಿರಿಯ ಮಗ ಕುನಾಲ್ ಜೊತೆ ಶೋಭಾ. ಮಳೆಗಾಲದಲ್ಲಿ ತನ್ನ ಪುತ್ರರಿಗೆ ಎನ್ಸೆಫಾಲಿಟಿಸ್ ಬರುವ ಅಪಾಯವಿದೆ ಎಂದು ಅವರು ಭಯಪಡುತ್ತಾರೆ

ಎಇಎಸ್‌ ಪ್ರಕರಣಗಳನ್ನು ಎಎಫ್‌ಐ ಎಂದು ಪರಿಗಣಿಸುವುದು ದೂರಗಾಮಿ ಪರಿಣಾಮಗಳನ್ನು ಉಂಟುಮಾಡಬಹುದು. "ಎಇಎಸ್‌ ಮತ್ತು ಎಎಫ್‌ಐ ಚಿಕಿತ್ಸೆಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಮ್ಯಾನಿಟಲ್ ಎಂಬ ಔಷಧದ ಬಳಕೆಯಾಗಿದೆ, ಇದನ್ನು ಮೆದುಳಿನ ಉರಿಯೂತವನ್ನು ತಡೆಗಟ್ಟಲು ನೀಡಲಾಗುತ್ತದೆ. ಈ ಔಷಧಿಯ ಬಳಕೆಯನ್ನು ಪ್ರಾರಂಭಿಸಿದ ತಕ್ಷಣ, ಪ್ರಕರಣಗಳನ್ನು ಎಇಎಸ್ ಎಂದು ವರ್ಗೀಕರಿಸಲಾಗುತ್ತದೆ,” ಎಂದು ಕಫೀಲ್ ಖಾನ್ ಹೇಳಿದರು. “ಎಇಎಸ್ ರೋಗಿಗೆ ಎಎಫ್‌ಐ‌ ರೋಗಿಯಂತೆ ಚಿಕಿತ್ಸೆ ನೀಡುವುದು ಎಂದರೆ ಅವನಿಗೆ ಮ್ಯಾನಿಟಲ್ ನೀಡಲಾಗುತ್ತಿಲ್ಲ ಎಂದರ್ಥ. ಮತ್ತು ನೀವು ಈ ಔಷಧವನ್ನು ನೀಡದಿದ್ದರೆ, ಬದುಕುಳಿದ ನಂತರವೂ, ಎಇಎಸ್ ಹೊಂದಿರುವ ಮಕ್ಕಳು ಜೀವಿತಾವಧಿಯಲ್ಲಿ ಅಂಗವಿಕಲರಾಗುವ ಅಪಾಯವನ್ನು ಹೊಂದಿರುತ್ತಾರೆ."

ಮೆದುಳುಜ್ವರ ರೋಗಿಯ ಕುಟುಂಬವು ಈ ಪ್ರಕರಣಕ್ಕೆ ನಿಗದಿಪಡಿಸಿದ ಎಇಎಸ್ ಸಂಖ್ಯೆಯಿಲ್ಲದೆ ಸರ್ಕಾರಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಮರಣದ ಸಂದರ್ಭದಲ್ಲಿ, ಕುಟುಂಬವು ರಾಜ್ಯದಿಂದ 50,000 ರೂ.ಗಳನ್ನು ಪಡೆಯಲು ಅರ್ಹವಾಗಿರುತ್ತದೆ, ಮತ್ತು ಬದುಕುಳಿದವರು 1 ಲಕ್ಷ ರೂ.ಗಳನ್ನು ಪಡೆಯುತ್ತಾರೆ, ಏಕೆಂದರೆ ಅನೇಕರು ಮೆದುಳಿನ ಉರಿಯೂತದ ದೀರ್ಘಕಾಲೀನ ಆರೋಗ್ಯ ಪರಿಣಾಮಗಳೊಂದಿಗೆ ಹೋರಾಡುತ್ತಾರೆ.

AES ಮುಖ್ಯವಾಗಿ ಬಡವರು ಮತ್ತು ದೀನದಲಿತರ ಕುಟುಂಬಗಳ ಮೇಲೆ ದಾಳಿ ಮಾಡುತ್ತದೆ. ಅವರಿಗೆ ಈ ಪರಿಹಾರದ ಅಗತ್ಯ ಹೆಚ್ಚಿರುತ್ತದೆ.

ಅವರಲ್ಲಿ ಶೋಭಾ ಕೂಡ ಒಬ್ಬರು.

ಆಯುಷ್‌ನನ್ನು ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವ ಮೊದಲು ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಒಟ್ಟು 1 ಲಕ್ಷ ರೂ. ಸಂಬಂಧಿಕರಿಂದ ಸಾಲ ಪಡೆದಿದ್ದೇವೆ ಎಂದು ಶೋಭಾ ತಿಳಿಸಿದರು. ಶೋಭಾ ನಿಶಾದ್ ಸಮುದಾಯಕ್ಕೆ ಸೇರಿದವರು, ಇದು ಯುಪಿಯಲ್ಲಿ ಇತರ ಹಿಂದುಳಿದ ವರ್ಗಗಳ ಪಟ್ಟಿಯ ಅಡಿಯಲ್ಲಿ ಬರುತ್ತದೆ. ಅವರ ಪತಿ ರವಿ ತಮ್ಮ ಗ್ರಾಮದಿಂದ ಸುಮಾರು 75 ಕಿಮೀ ದೂರದಲ್ಲಿರುವ ಆಜಂಗಢ ಜಿಲ್ಲೆಯ ಮುಬಾರಕ್‌ಪುರ ಪಟ್ಟಣದಲ್ಲಿ ಸಣ್ಣ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದಾರೆ. ಅವರು ತಿಂಗಳಿಗೆ ಸುಮಾರು ರೂ. 4,000 ಗಳಿಸುತ್ತಾರೆ.

ಆಯುಷ್ ಗೆ ಎಇಎಸ್ ನಂಬರ್ ಸಿಕ್ಕಿದ್ದರೆ ಶೋಭಾಗೆ ಮೈದುನನ ಸಾಲವನ್ನಾದರೂ ತೀರಿಸಲು ಸಾಧ್ಯವಾಗುತ್ತಿತ್ತು. “ನನ್ನ ಮೈದುನ ತನ್ನ ಓದಿಗಾಗಿ 50,000 ರೂ. ಉಳಿಸಿದ್ದ, ಅದನ್ನೂ ಖರ್ಚು ಮಾಡಿದ್ದೇವೆ."

ಕುಟುಂಬವು ಒಂದು ಎಕರೆಗಿಂತ ಕಡಿಮೆ ಕೃಷಿಭೂಮಿಯನ್ನು ಹೊಂದಿದೆ. ಅದರಲ್ಲಿ ತಮ್ಮ ಮನೆ ಬಳಕೆಗಾಗಿ ಗೋಧಿಯನ್ನು ಬೆಳೆಯುತ್ತಾರೆ. "ಮಳೆಗಾಲದಲ್ಲಿ ನಮ್ಮ ಜಮೀನು ಜಲಾವೃತವಾಗುವುದರಿಂದ ವರ್ಷಕ್ಕೆ ಒಂದು ಬೆಳೆ ಮಾತ್ರ ಕೊಯ್ಲು ಸಾಧ್ಯ" ಬ್ರಹ್ಮಸಾರಿಯಲ್ಲಿರುವ ತನ್ನ ಮನೆಯ ಹೊರಗೆ ಹ್ಯಾಂಡ್ ವಾಟರ್ ಪಂಪಿನಿಂದ ನೀರು ಸಂಗ್ರಹಿಸುತ್ತಾ ಶೋಭಾ ಹೇಳಿದರು.

PHOTO • Parth M.N.
PHOTO • Parth M.N.

ಬೇಲ್‌ಘಾಟ್ ಗ್ರಾಮ ಪಂಚಾಯತಿಯಲ್ಲಿರುವ ಕರಂಬಿರ ಬೆಲ್ದಾರ್ ಅವರ ಮನೆಯ ಹೊರಗೆ. ಅವರ ಐದು ವರ್ಷದ ಸೋದರ ಸೊಸೆ ರಿಯಾ ಕಳೆದ ವರ್ಷ ಎನ್ಸೆಫಾಲಿಟಿಸ್ ಅನ್ನು ಹೋಲುವ ರೋಗಲಕ್ಷಣಗಳಿಂದ ಬಳಲುತ್ತಿದ್ದಳು. 'ಮರಣ ಪ್ರಮಾಣ ಪತ್ರದಲ್ಲಿ ಸ್ಪಷ್ಟ ಕಾರಣ ಇಲ್ಲದಿದ್ದರೂ ಪ್ರತಿ ವರ್ಷ ಮಕ್ಕಳು ಸಾಯುತ್ತಿದ್ದಾರೆ'

ಗ್ರಾಮದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಬೇಲ್‌ಘಾಟ್ ಗ್ರಾಮ ಪಂಚಾಯತ್‌ ವ್ಯಾಪ್ತಿಯ, 26 ವರ್ಷದ ಕರಂಬೀರ್ ಬೆಲ್ದಾರ್ ತನ್ನ ಸೊಸೆಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಬಿಆರ್‌ಡಿ ಕಾಲೇಜು ಆಸ್ಪತ್ರೆಯಲ್ಲಿ ತನ್ನ ವೈದ್ಯರನ್ನು ಕೇಳಿಕೊಂಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಯಾರೂ ಅವರಿಗೆ ಉತ್ತರಿಸಲಿಲ್ಲ- ಅಂತಿಮವಾಗಿ ಅವಳು ಸತ್ತ ನಂತರವೂ.

ಅವರ ಐದು ವರ್ಷದ ಸೊಸೆ ರಿಯಾ ಆಗಸ್ಟ್ 2021ರಲ್ಲಿ ಜ್ವರವನ್ನು ಹೊಂದಿದ್ದಳು. ಆಗ ಆಕೆಗೂ ಮೂರ್ಛೆ ಬಂದಿತ್ತು. "ಆ ವೈಶಿಷ್ಟ್ಯಗಳು ಎಇಎಸ್‌ ಹೋಲುತ್ತವೆ" ಎಂದು ಅವರು ಹೇಳುತ್ತಾರೆ. “ಇದು ಮಳೆಗಾಲ. ನಮ್ಮ ಮನೆಯ ಸುತ್ತಲೂ ಕಲುಷಿತ ನೀರು ತುಂಬಿದೆ. ನಾವು ಅವಳನ್ನು ತಕ್ಷಣ ಸಿಎಚ್‌ಸಿಗೆ ಕರೆದೊಯ್ದೆವು. ಅಲ್ಲಿ ಬಿಆರ್‌ಡಿಗೆ ಕರೆದೊಯ್ಯುವಂತೆ ಸೂಚಿಸಿದರು."

ರಿಯಾ ಆಸ್ಪತ್ರೆಯಲ್ಲಿ ಕುಖ್ಯಾತ ಮಕ್ಕಳ ವಾರ್ಡ್‌ಗೆ ದಾಖಲಾಗಿದ್ದಳು. "ನಾವು ಅವಳಿಗೆ ಏನಾಯಿತು ಎಂದು ನಾವು ವೈದ್ಯರನ್ನು ಕೇಳಿದ್ದೆವು, ಆದರೆ ಅವರು ಏನನ್ನೂ ಹೇಳಲಿಲ್ಲ" ಎಂದು ಬೆಲ್ದಾರ್ ಹೇಳಿದರು. "ನಾವು ಪ್ರಶ್ನೆಗಳನ್ನು ಕೇಳಿದಾಗ ಅವರು ನಮ್ಮನ್ನು ವಾರ್ಡ್‌ನಿಂದ ಹೊರಗೆ ಕಳುಹಿಸುತ್ತಾರೆ. ನೀನು ಅವಳಿಗೆ ಚಿಕಿತ್ಸೆ ನೀಡಲು ಹೋಗುತ್ತೀಯಾ? ಎಂದು ಅಲ್ಲಿದ್ದ ಕೆಲಸಗಾರರೊಬ್ಬರು ನನ್ನನ್ನು ಕೇಳಿದ್ದರು."

ಆಸ್ಪತ್ರೆಗೆ ದಾಖಲಾದ ಒಂದು ದಿನದ ನಂತರ ರಿಯಾ ಸಾವನ್ನಪ್ಪಿದ್ದಾಳೆ. ಆಕೆಯ ಮರಣ ಪ್ರಮಾಣಪತ್ರವು ಸಾವಿಗೆ ಕಾರಣ 'ಸೆಪ್ಟಿಕ್ ಶಾಕ್ ಕ್ರಷ್ ವೈಫಲ್ಯ' ಎಂದು ಹೇಳಿದೆ. ಅದರ ಅರ್ಥವೇನೆಂದು ನನಗೂ ತಿಳಿದಿಲ್ಲ ಎಂದು ಬೆಲ್ದಾರ್ ಹೇಳಿದರು. “ಇಂತಹ ಗೌಪ್ಯತೆಗೆ ಕಾರಣವೇನು? ಮರಣ ಪ್ರಮಾಣಪತ್ರವು ಮೆದುಳು ಜ್ವರವನ್ನು ಉಲ್ಲೇಖಿಸುವುದಿಲ್ಲ, ಆದರೆ ಮಕ್ಕಳು ಪ್ರತಿ ವರ್ಷ ಸಾಯುತ್ತಲೇ ಇರುತ್ತಾರೆ."

ಶೋಭಾ ಕೂಡಾ ಅದಕ್ಕೇ ಹೆದರುತ್ತಿರುವುದು.

ಆಯುಷ್ ಹೋಗಿಯಾಗಿದೆ, ಆದರೆ ಅವರು ತನ್ನ ಚಿಕ್ಕ ಮಕ್ಕಳಾದ ರಾಜವೀರ್ (5) ಮತ್ತು ಕುನಾಲ್ (3) ಬಗ್ಗೆ ಚಿಂತಿತಳಾಗಿದ್ದಾರೆ. ಪರಿಸ್ಥಿತಿ ಹೆಚ್ಚು ಬದಲಾಗಿಲ್ಲ. ಈ ವರ್ಷದ ಮಳೆಗಾಲದಲ್ಲೂ ಅವರ ಗ್ರಾಮ ಜಲಾವೃತವಾಗುವ ಸಾಧ್ಯತೆ ಇದೆ. ನೀರು ಕಲುಷಿತವಾಗುತ್ತದೆ; ಹ್ಯಾಂಡ್ ಪಂಪ್ ಮೂಲಕ ಸೇದಿದ ಕೊಳಕು ಅಂತರ್ಜಲವನ್ನೇ ಬಳಸಬೇಕಾಗುತ್ತದೆ. ಆಯುಷ್ ಕೊಲ್ಲಲ್ಪಟ್ಟ ಪರಿಸ್ಥಿತಿಗಳು ಅವನ ಕಿರಿಯ ಸಹೋದರರಿಗೂ ಬೆದರಿಕೆಯನ್ನುಂಟುಮಾಡಿವೆ. ಅವುಗಳ ಪರಿಣಾಮ ಏನಾಗಬಹುದು ಎಂಬುದು ಶೋಭಾ ಅವರಿಗೆ ಚೆನ್ನಾಗಿ ಗೊತ್ತು.

ಪಾರ್ಥ್ ಎಂ.ಎನ್. ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಹಕ್ಕುಗಳ ಕುರಿತಾದ ವರದಿಗಳನ್ನು ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನಿಂದ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಲ್ಲಿಸುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

Reporter : Parth M.N.

पार्थ एम एन, साल 2017 के पारी फ़ेलो हैं और एक स्वतंत्र पत्रकार के तौर पर विविध न्यूज़ वेबसाइटों के लिए रिपोर्टिंग करते हैं. उन्हें क्रिकेट खेलना और घूमना पसंद है.

की अन्य स्टोरी Parth M.N.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru