ನಗರದ ಅನೇಕ ಅಂಗಡಿಗಳು ಮುಚ್ಚಿದ್ದು ಮಾರುಕಟ್ಟೆಗಳು ನಿರ್ಜನವಾಗಿದ್ದುದೇ ಅಲ್ಲದೆ, ಬೀದಿಗಳು ನಿಶ್ಶಬ್ದವಾಗಿದ್ದಾಗ್ಯೂ ಅನಿತ ಘೊಟಲೆಗೆ ಮಾರ್ಚ್ 21ರ ಶನಿವಾರ ಎಂದಿನ ಕೆಲಸದ ದಿನವೇ ಆಗಿತ್ತು. ಕೊವಿಡ್-19 ವ್ಯಾಪಿಸಿದ್ದ ಕಾರಣ ಸರ್ಕಾರವು ಅಂದು ಲಾಕ್‍ಡೌನ್ ಘೋಷಿಸಿದ್ದರಿಂದಾಗಿ ಮುಂಬೈನಲ್ಲಿ ಅನೇಕರು ಮನೆಯಲ್ಲೇ ಉಳಿದಿದ್ದರು.
ಮಲೆತು ನಿಂತಿದ್ದ ಕಪ್ಪು ವರ್ಣದ ಕೊಳಕು ನೀರಿನಲ್ಲಿ ಕೆಸರಿನಂತಿದ್ದ ಕಸವನ್ನು ಗುಡಿಸುತ್ತ ಅನಿತ ಸದ್ದುಗದ್ದಲವಿಲ್ಲದ ರಸ್ತೆಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಒಂದಷ್ಟು ಕೊಳಕು ನೀರು ಆಕೆಯ ಗಾಲಿಗೆರಚಿತು. "ನಮಗೆ ಪ್ರತಿಯೊಂದು ದಿನವೂ ಅಪಾಯಕಾರಿಯೇ. ಈಗ ಕರೊನದಿಂದಷ್ಟೇ ಅಲ್ಲ, ಹಲವು ಪೀಳಿಗೆಗಳಿಂದಲೂ ಪರಿಸ್ಥಿತಿ ಹೀಗೆಯೇ ಮುಂದುವರಿದಿದೆ", ಎಂದರು ಆಕೆ.
ಆಗ ಸುಮಾರು ಮುಂಜಾನೆ 9ರ ಸಮಯ. ಪೂರ್ವ ಮುಂಬೈನ ಚೆಂಬೂರ್‍ನ ಮಾಹುಲ್ ಹಳ್ಳಿಯ ಎಂ-ಪಶ್ಚಿಮ ವಾರ್ಡ್‍ನಲ್ಲಿ ಆಕೆ, ಬೀದಿ ಹಾಗೂ ನೆಲಗಟ್ಟುಗಳನ್ನು(pavements) ಗುಡಿಸುವ ಕೆಲಸದಲ್ಲಿ ತೊಡಗಿ ಅದಾಗಲೇ ಎರಡು ಗಂಟೆಗಳು ಕಳೆದಿದ್ದವು.
ಈ ಕಠಿಣ ಪರಿಸ್ಥಿತಿಯಲ್ಲಿ ಆಕೆಯ ಆರೋಗ್ಯದ ಗತಿಯೇನು? "ವೈರಸ್‍ನಿಂದಾಗಿ ನಾವು ಒತ್ತಾಯಿಸಿದ ಕಾರಣ, ಈ ಮುಖಗವುಸುಗಳು ನಮಗೆ ನಿನ್ನೆಯಷ್ಟೇ (ಮಾರ್ಚ್ 20ರಂದು) ದೊರೆತವು", ಎಂದು ಆಕೆ ತಿಳಿಸಿದರು. ಮುಖಗವುಸನ್ನು ಆಕೆ ಸೊಂಟಕ್ಕೆ ಸಿಗಿಸಿಕೊಂಡಿದ್ದರು. 35ರ ಅನಿತ ರಕ್ಷಣೆಗಾಗಿ ತಮ್ಮ ಕುತ್ತಿಗೆಯ ಸುತ್ತಲೂ ಸ್ಕಾರ್ಫ್ ಧರಿಸಿದ್ದರು. ಈ ಮುಖಗವುಸುಗಳು ತೆಳುವಾಗಿದ್ದು ಮತ್ತೆ ಬಳಸಲು ಸಾಧ್ಯವಿಲ್ಲ (ಎರಡು ದಿನಗಳ ಬಳಕೆಯ ನಂತರ) ಎಂದು ಸಹ ಆಕೆ ತಿಳಿಸಿದರು. ಕೈಗವಸುಗಳ ಮಾತಂತೂ ಇಲ್ಲವೇ ಇಲ್ಲ. ಗಟ್ಟಿಮುಟ್ಟಾದ ಬೂಟುಗಳಂತಹ ರಕ್ಷಣಾ ಪಾದರಕ್ಷೆಗಳ ಬಗ್ಗೆ ಅವರ ಕಾರ್ಯಕ್ಷೇತ್ರದಲ್ಲಿ ಯಾರೂ ಕೇಳಿಯೇ ಇಲ್ಲ.
ಅನಿತ ಮಹಾರಾಷ್ಟ್ರದ ಹಿಂದುಳಿದ ಜಾತಿಯ ಪಟ್ಟಿಯಲ್ಲಿನ ಮಾತಂಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪೀಳಿಗೆಗಳಿಂದಲೂ ನಮ್ಮ ಕುಟುಂಬವು ಈ ಸ್ವಚ್ಛತೆಯ ಕೆಲಸದಲ್ಲಿ ತೊಡಗಿದೆಯೆಂಬುದಾಗಿ ಆಕೆ ತಿಳಿಸಿದರು. "ನಮ್ಮ ತಾತ ತೆರೆದ ಗುಂಡಿಗಳಲ್ಲಿನ ಮನುಷ್ಯರ ಮಲವನ್ನು ತಲೆಯ ಮೇಲೆ ಹೊರುತ್ತಿದ್ದರು (ಮುಂಬೈನಲ್ಲಿ)" ಎನ್ನುವ ಆಕೆ, "ಯಾವುದೇ ಪೀಳಿಗೆಯಲ್ಲಾಗಲಿ, ಯಾವುದೇ ವರ್ಷದಲ್ಲಾಗಲಿ ಮಾನವ ಹಕ್ಕುಗಳ ನಿಟ್ಟಿನ ನಮ್ಮ ಜನರ ಹೋರಾಟ ನಿರಂತರವಾಗಿ ಸಾಗಿದೆ", ಎಂದು ಅಲವತ್ತುಕೊಂಡರು.
ಹತ್ತಿರದ ರಾಸಾಯನಿಕ ಕಾರ್ಖಾನೆಗಳು ಹಾಗೂ ಸಂಸ್ಕರಣಾಗಾರಗಳಿಂದಾಗಿ ಅನಿತ ವಾಸಮಾಡುತ್ತಿರುವ ಹಾಗೂ ಕೆಲಸವನ್ನು ನಿರ್ವಹಿಸುತ್ತಿರುವ ಮಾಹುಲ್ ಪ್ರದೇಶವು ಕೆಲವು ವರ್ಷಗಳಿಂದಲೂ ಅತಿ ಹೆಚ್ಚಿನ ಮಟ್ಟದ ವಿಷಯುಕ್ತ ಹವೆಯಿಂದಾಗಿ ಸುದ್ದಿಯಲ್ಲಿದೆ.
ಕೊಳೆಗೇರಿಗಳ ಮರುವಸತಿ ಪ್ರಾಧಿಕಾರದ ಯೋಜನೆಯ ಅನುಸಾರ 2017ರಲ್ಲಿ ಈಶಾನ್ಯ ಮುಂಬೈನ ಪೂರ್ವಕ್ಕಿರುವ ವಿಖ್ರೋಲಿಯಿಂದ ಅನಿತ ಹಾಗೂ ಆಕೆಯ ಪರಿವಾರವನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಅವರು ಸುಭಾಷ್ ನಗರದಲ್ಲಿ ಒಂದು ಕೋಣೆಯೊಂದಿಗೆ ಅಡಿಗೆ ಕೋಣೆಯ ವ್ಯವಸ್ಥೆಯಿರುವ ಮನೆಯಲ್ಲಿ ನೆಲೆಸಿದ್ದಾರೆ. 6-7 ಮಹಡಿಗಳ ಅವರ ಸಮುದಾಯವು ರಸ್ತೆಯ ಆ ಬದಿಗೆ, ಭಾರತೀಯ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಸಂಸ್ಕರಣಾಗಾರದಿಂದ ಕೇವಲ 15 ಮೀಟರ್ ದೂರದಲ್ಲಿದೆ.
ಕಳೆದ ಒಂದು ದಶಕದಲ್ಲಿ 60 ಸಾವಿರ ಜನರ ಸಲುವಾಗಿ 17,205 ವಸತಿಗಳನ್ನೊಳಗೊಂಡ 72 ಕಟ್ಟಡಗಳು ‘ಯೋಜನೆಯಿಂದ ಬಾಧಿತರಾದ ಜನರಿಗಾಗಿ’ಕಾಲೋನಿಗಳ ರೂಪದಲ್ಲಿ ನಿರ್ಮಿಸಲ್ಪಟ್ಟವು. ನಗರದ ಹಲವು ಯೋಜನೆಗಳಿಂದ ಸ್ಥಳಾಂತರಗೊಂಡ ಜನರಿಗೆ ಇಲ್ಲಿ ಮರುವಸತಿ ಕಲ್ಪಿಸಲಾಯಿತು. ಪರಿಸರವನ್ನು ಅಪಾರವಾಗಿ ಕಲುಷಿತಗೊಳಿಸುತ್ತಿರುವ ಕಾರ್ಖಾನೆಗಳ ಸಾಮೀಪ್ಯ ಹಾಗೂ ನಿರಂತರವಾಗಿ ಈ ವಾತಾವರಣಕ್ಕೆ ಒಡ್ಡಲ್ಪಡುವ ಕಾರಣದಿಂದಾಗಿ ಇಲ್ಲಿನ ನಿವಾಸಿಗಳು ಉಸಿರಾಟದ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆಗಳು, ಕೆಮ್ಮು, ಕಣ್ಣು ಮತ್ತು ಚರ್ಮವನ್ನು ಕುರಿತಂತೆ ಹೆಚ್ಚು ಕಳವಳಕಾರಿಯಾದ ರೋಗಗಳಿಗೆ ತುತ್ತಾಗಿರುವ ಬಗ್ಗೆ ತಿಳಿಸಿರುತ್ತಾರೆ.
ದೀರ್ಘಕಾಲೀನ ಪ್ರತಿಭಟನೆಗಳು ಹಾಗೂ ನ್ಯಾಯಾಲಯದಲ್ಲಿನ ಅಹವಾಲುಗಳಿಂದಾಗಿ, ಬದಲಿ ಮರುವಸತಿ ವ್ಯವಸ್ಥೆಯು ಲಭ್ಯವಾಗುವವರೆಗೆ ಈ ಕುಟುಂಬಗಳಿಗೆ ಮುನಿಸಿಪಲ್ ಕಾರ್ಪೊರೇಷನ್ 15 ಸಾವಿರ ರೂ.ಗಳ ಟ್ರಾನ್ಸಿಟ್ ಬಾಡಿಗೆಯನ್ನು ನೀಡಬೇಕೆಂದು 2019ರ ಸೆಪ್ಟೆಂಬರಿನಲ್ಲಿ ಬಾಂಬೆ ಹೈಕೋರ್ಟ್ ಆದೇಶವನ್ನು ನೀಡಿತು. "ಆದರೆ ಕಳೆದ ನಾಲ್ಕು ತಿಂಗಳಿನಿಂದಲೂ ಬಿ.ಎಂ.ಸಿ ಯಾವುದೇ ಕ್ರಮವನ್ನೂ ಕೈಗೊಂಡಿರುವುದಿಲ್ಲ. ನನ್ನ 6 ವರ್ಷದ ಮಗ ಸಾಹಿಲ್ ಆಗಾಗ ಖಾಯಿಲೆಗೀಡಾಗುತ್ತಾನೆ. ಈ ಕಲುಷಿತ ಹವೆ ಹಾಗೂ ರಾಸಾಯನಿಕಗಳಿಂದಾಗಿ ಆತನಿಗೆ ಉಸಿರಾಟದ ತೊಂದರೆಗಳಿವೆ. ವೈರಸ್ ಇಲ್ಲಿಗೂ ದಾಳಿಯಿಟ್ಟಲ್ಲಿ ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ", ಎಂಬುದಾಗಿ ಅನಿತ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.
ಅನಿತ 200 ರೂ.ಗಳ ದಿನಗೂಲಿ ಗಳಿಸುತ್ತಾರೆ; ಆಕೆ ಗುತ್ತಿಗೆ ಕೆಲಸಗಾರರಾದ ಕಾರಣ ಕೆಲಸವನ್ನು ನಿರ್ವಹಿಸದ ದಿನಗಳಲ್ಲಿ ವೇತನವನ್ನು ಪಾವತಿಸುವುದಿಲ್ಲ. ಅಲ್ಲದೆ ಮೂರು ತಿಂಗಳಿನಿಂದಲೂ ಅವರು ವೇತನವನ್ನು ಪಡೆದಿಲ್ಲ. ಕಳೆದ ಹದಿನೈದು ವರ್ಷಗಳಿಂದಲೂ ಆಕೆಗೆ ಕೆಲಸವನ್ನು ನೀಡಿರುವ ಗುತ್ತಿಗೆದಾರನು, ಬೃಹನ್ಮುಂಬಯ್ ಮುನಿಸಿಪಲ್ ಕಾರ್ಪೊರೇಷನ್ನಿನ ಘನ ತ್ಯಾಜ್ಯ ನಿರ್ವಹಣಾ ಇಲಾಖೆಯಲ್ಲಿ ಹಣವನ್ನು ತಡೆಹಿಡಿಯಲಾಗಿದೆಯೆಂದು ಹೇಳುತ್ತ, ನಿಗದಿತ ಸಮಯದಲ್ಲಿ ಹಣವನ್ನು ಪಾವತಿಸುವುದಿಲ್ಲವೆಂದು ಸಹ ಆಕೆ ತಿಳಿಸುತ್ತಾರೆ.
ಆಕೆಯ ಇಬ್ಬರು ಹೆಣ್ಣು ಹಾಗೂ ಗಂಡುಮಕ್ಕಳು ಮಾಹುಲ್ ಮುನಿಸಿಪಲ್ ಶಾಲೆಯಲ್ಲಿ ಓದುತ್ತಿದ್ದು, ಪತಿ ನರೇಶ್ ಚೆಂಬೂರಿನ ಕಾಲೋನಿಗಳಲ್ಲಿ ಬೆಳ್ಳುಳ್ಳಿಯನ್ನು ಮಾರುತ್ತಾರೆ. ಬೇಡದ ಪ್ಲಾಸ್ಟಿಕ್ ವಸ್ತುಗಳಿಗೆ ಬೆಳ್ಳುಳ್ಳಿಯನ್ನು ವಿನಿಮಯಿಸುವ ಅವರು ಅವನ್ನು ರದ್ದಿಯ ವಿತರಕನಿಗೆ ಮಾರುತ್ತಾರೆ. ಆಕೆಯ ಅತ್ತೆಯು ಚೆಂಬೂರಿನಲ್ಲಿ ಕಸದ ರಾಶಿಯಿಂದ ಪ್ಲಾಸ್ಟಿಕ್‍ನ್ನು ಬೇರ್ಪಡಿಸುತ್ತಾರೆ. ಆಕೆಯೂ ಇದನ್ನು ರದ್ದಿಯ ವಿತರಕನಿಗೆ ಮಾರುತ್ತಾರೆ.
"ನಾವು ಮೂವರೂ ಸೇರಿ ದುಡಿದ ವರಮಾನ ತಿಂಗಳಿಗೆ 5 ಸಾವಿರದಿಂದ 6 ಸಾವಿರವನ್ನು ಮೀರುವುದಿಲ್ಲ", ಎನ್ನುತ್ತಾರೆ ಅನಿತ. ಈ ಹಣದಲ್ಲೇ 7 ಜನ ಸದಸ್ಯರ ಕುಟುಂಬವು ತಿಂಗಳ ಪಡಿತರ, ವಿದ್ಯುಚ್ಛಕ್ತಿ ಬಿಲ್ ಮುಂತಾದ ಖರ್ಚುಗಳನ್ನು, ವಿವಿಧ ಖಾಯಿಲೆಗಳು ಹಾಗೂ ಆರೋಗ್ಯದ ಕಾಳಜಿಯನ್ನು ನಿಭಾಯಿಸುತ್ತದೆ.
ಆದರೆ ಅನಿತಾಳ ವೇತನದ ವಿಳಂಬದಿಂದಾಗಿ ಪ್ರತಿ ತಿಂಗಳು ಕುಟುಂಬದ ಖರ್ಚು ವೆಚ್ಚಗಳ ನಿಭಾವಣೆ ಅತ್ಯಂತ ಕಠಿಣವಾಗುತ್ತಿದೆ. "ಸರ್ಕಾರವು ಕಾರ್ಮಿಕರಿಗೆ ಮುಂಗಡ ಕೂಲಿಯನ್ನು ನೀಡುವಂತೆ ಉದ್ಯೋಗದಾತರಿಗೆ ತಿಳಿಸುತ್ತಿದೆ.ಆದರೆ ತಿಂಗಳುಗಳಿಂದಲೂ ನಮಗೆ ಬಾಕಿಯಿರುವ ಹಣದ ವ್ಯವಸ್ಥೆಯೇನು?", ಎಂದು ಆಕೆ ಪ್ರಶ್ನಿಸುತ್ತಾರೆ.
ಅನಿತ ಕೆಲಸವನ್ನು ನಿರ್ವಹಿಸುತ್ತಿರುವ ಸ್ಥಳದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಅದೇ ವಾರ್ಡಿನ ಕಸ ಸಂಗ್ರಹಣೆಯ ಸ್ಥಳದಲ್ಲಿ, ಕತಿನ್ ಗಂಜೆ ಕೇವಲ ಚಪ್ಪಲಿಯನ್ನು ಧರಿಸಿ ಕಸದ ರಾಶಿಯ ನಡುವೆ ನಿಂತಿದ್ದಾರೆ. ಅನಿತ ಅವರಂತೆ ಈತನೂ ಸಹ ಘನ ತ್ಯಾಜ್ಯ ನಿರ್ವಹಣಾ ಇಲಾಖೆಯಿಂದ ಗುತ್ತಿಗೆಯ ಆಧಾರದಲ್ಲಿ ನೇಮಿಸಲ್ಪಟ್ಟಿರುತ್ತಾರೆ. ಮುನಿಸಿಪಲ್ ಕಾರ್ಪೊರೇಷನ್ 6,500 ಗುತ್ತಿಗೆಯಾಧಾರಿತ ಕೆಲಸಗಾರರನ್ನು ನೇಮಿಸಿಕೊಂಡಿದೆಯೆಂಬುದಾಗಿ ಆ ಇಲಾಖೆಯ ಮುಖ್ಯ ಅಧಿವೀಕ್ಷಕ ಜಯವಂತ್ ಪ್ರಡ್ಕರ್ ತಿಳಿಸುತ್ತಾರೆ.
ಕತಿನ್ ನಿರ್ವಹಿಸುತ್ತಿರುವ ಕಸವು ಮುರಿದ ಗಾಜಿನ ತುಂಡುಗಳು, ಕಿಲುಬುಗಟ್ಟಿದ ಮೊಳೆಗಳು, ಬಳಸಿದ ಸ್ಯಾನಿಟರಿ ನ್ಯಾಪ್ಕಿನ್‍ಗಳು ಹಾಗೂ ಕೊಳೆತ ಆಹಾರವನ್ನು ಒಳಗೊಂಡಿದೆ. ಆತ ಇವುಗಳನ್ನು ಹಾಗೂ ಇತರೆ ಅಪಾಯಕಾರಿ ನಿರುಪಯುಕ್ತ ವಸ್ತುಗಳನ್ನು ಬಿದಿರು ಕೋಲಿನ ತುದಿಗೆ ಅಳವಡಿಸಿರುವ ಅಗೆಯುವ ಕವಲುಗೋಲಿನಿಂದ ಒಟ್ಟುಗೂಡಿಸಿ ಪ್ಲಾಸ್ಟಿಕ್ ಚಾಪೆಯ ಮೇಲೆ ರಾಶಿ ಹಾಕುತ್ತಾರೆ. ಅವರ ತಂಡದಲ್ಲಿ ಐದು ಜನರಿದ್ದು ಮತ್ತೊಬ್ಬ ಕೆಲಸಗಾರನ ಸಹಾಯದಿಂದ ಚಾಪೆಯನ್ನು ಎತ್ತಿ, ಕಸವನ್ನೆಲ್ಲವನ್ನೂ ಲಾರಿಗೆ ಹಾಕಲಾಗುತ್ತದೆ.
"ನಮಗೆ ಈ ಕೈಗವಸುಗಳು (ರಬ್ಬರಿನ) ನಿನ್ನೆಯಷ್ಟೇ (ಮಾರ್ಚ್ 20) ದೊರೆತವು", ಎನ್ನುತ್ತಾರೆ 28 ವರ್ಷದ ಕತಿನ್. ಇವರೂ ಸಹ ಮಾತಂಗ್ ಸಮುದಾಯಕ್ಕೆ ಸೇರಿದವರು. ಸಾಮಾನ್ಯವಾಗಿ ಅವರು ತಮ್ಮ ಕೈಗಳಿಂದಲೇ ಕಸವನ್ನು ನಿರ್ವಹಿಸುತ್ತಾರೆ. "ಇವು ಹೊಸ ಕೈಗವಸುಗಳು. ಆದರೆ ನೋಡಿ, ಇದಾಗಲೇ ಹರಿದಿದೆ. ಇಂತಹ ಕೈಗವಸುಗಳಿಂದ ಈ ರೀತಿಯ ಕಸದಲ್ಲಿ ನಮ್ಮ ಕೈಗಳನ್ನು ಸಂರಕ್ಷಿಸುವುದಾದರೂ ಹೇಗೆ? ಈಗ ಈ ವೈರಸ್ ದಾಳಿಯಿಟ್ಟಿದೆ. ನಾವೂ ಮನುಷ್ಯರೇ ಅಲ್ಲವೇ?", ಎನ್ನುತ್ತಾರೆ ಕತಿನ್.
ಈಗ ಮುಂಜಾನೆ 9.30ರ ಸಮಯ. ಮಾಹುಲ್‍ನ ವಿವಿಧ ಭಾಗಗಳ 20 ಕಸ ಸಂಗ್ರಹಣಾ ಜಾಗಗಳನ್ನು 2 ಗಂಟೆಯವರೆಗೆ ಸ್ವಚ್ಛಗೊಳಿಸುವುದು ಆತನ ಕೆಲಸ. "ನಮ್ಮ ಜೀವವನ್ನು ಅಪಾಯಕ್ಕೊಡ್ಡುವುದು ನಮಗೇನೂ ಹೊಸದಲ್ಲ. ಆದರೆ ಕೊನೆಯ ಪಕ್ಷ ಈ ವೈರಸ್‍ನಿಂದಲಾದರೂ ನೀವು (ಮುನಿಸಿಪಲ್ ಕಾರ್ಪೊರೇಷನ್ ಮತ್ತು ಸರ್ಕಾರ) ನಮ್ಮ ಬಗ್ಗೆ ಯೋಚಿಸತಕ್ಕದ್ದು. ಜನರಿಗಾಗಿ ನಾವು ಈ ಕಸದ ನಡುವೆ ಇದ್ದೇವೆ. ಆದರೆ ಜನರು ನಮ್ಮ ಬಗ್ಗೆ ಯೋಚಿಸುತ್ತಾರೆಯೇ?", ಎನ್ನುತ್ತಾರೆ ಕತಿನ್.
ಹಲವು ಅಪಾಯಗಳನ್ನೊಳಗೊಂಡ ಈ ಕೆಲಸದಿಂದ ಕತಿನ್ 250 ರೂ.ಗಳನ್ನು ಸಂಪಾದಿಸುತ್ತಾರೆ. ಆತನ ಪತ್ನಿ ಸುರೇಖ ಮನೆಗಳಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ.
ಕೊರೊನ ವೈರಸ್ ನಗರಕ್ಕೆ ಹೊಸದು. ಆದರೆ ಸುರಕ್ಷಿತ ಹಾಗೂ ಶಾಶ್ವತ ಕೆಲಸ, ಆರೋಗ್ಯ ವಿಮೆ ಮತ್ತು ಮುಖಗವುಸು, ಕೈಗವುಸು ಮತ್ತು ಬೂಟುಗಳಂತಹ ಸುರಕ್ಷಾ ಸಾಮಗ್ರಿಗಳ ನಿಯತ ಸರಬರಾಜಿಗಾಗಿ ಆತ ಮತ್ತು ಆತನ ಸಹಚರರ ನಿರಂತರ ಬೇಡಿಕೆಗಳೇನು ಹೊಸದಲ್ಲ.
ಸಂರಕ್ಷಣೆಯ ತುರ್ತು ಈಗ ಹೆಚ್ಚಾಗಿದೆ. ಸಫಾಯಿ ಕರ್ಮಚಾರಿಗಳ ಹಕ್ಕುಗಳಿಗಾಗಿ ಹೋರಾಡುವ ಮುಂಬೈನ ಕಛರ ವಹ್ತುಕ್ ಶ್ರಮಿಕ್ ಸಂಘ್ ಎಂಬ ಸಂಘಟನೆಯು ಮಾರ್ಚ್ 18ರಂದು ಮುನಿಸಿಪಲ್ ಕಮಿಷನರ್ ಅವರಿಗೆ ಬರೆದ ಪತ್ರದಲ್ಲಿ ನೆಲದ ಮೇಲೆ ಕೆಲಸವನ್ನು ನಿರ್ವಹಿಸುವ ಕೆಲಸಗಾರರಿಗೆ ಸೂಕ್ತ ಸಂರಕ್ಷಣಾ ಸಾಧನಗಳನ್ನು ಒದಗಿಸಬೇಕೆಂಬ ಬೇಡಿಕೆಯನ್ನು ಸಲ್ಲಿಸಿತು. ಮಾರ್ಚ್ 20ರಂದು ಕೆಲವು ಕೆಲಸಗಾರರಿಗೆ ಮುಖಗವುಸನ್ನು ಒದಗಿಸಲಾಯಿತು.
"ವೈರಸ್‍ನಿಂದಾಗಿ ಕಸದ ಟ್ರಕ್‍ಗಳಲ್ಲಿನ ಕೆಲಸಗಾರರಿಗೆ ಸ್ಯಾನಿಟೈಜ಼ರ್ ಮತ್ತು ಸೋಪನ್ನು ನೀಡುವಂತೆ ಬಿ.ಎಂ.ಸಿ ಪ್ರಾಧಿಕಾರಕ್ಕೆ ಬೇಡಿಕೆ ಸಲ್ಲಿಸಿದೆವು. ಆದರೆ ನಮಗೇನೂ ಸಿಗಲಿಲ್ಲ. ಇತರರ ಮಾಲಿನ್ಯವನ್ನು ಸ್ವಚ್ಛಗೊಳಿಸುವ ಕೆಲಸಗಾರರಿಗೆ ನಿಯತವಾಗಿ ಆರೋಗ್ಯ ತಪಾಸಣೆ ಕೈಗೊಳ್ಳತಕ್ಕದ್ದು. ವೈರಸ್‍ನಿಂದಾಗಿ ಇವರು ಹೆಚ್ಚು ಅಪಾಯದಲ್ಲಿರುತ್ತಾರೆ", ಎಂಬುದಾಗಿ ಎಂ-ಪಶ್ಚಿಮ ವಾರ್ಡ್‍ನಲ್ಲಿ ಟ್ರಕ್‍ಗಳಲ್ಲಿ ಕೆಲಸವನ್ನು ನಿರ್ವಹಿಸುವ 45 ವರ್ಷದ ನವ ಬೌದ್ಧ (neo Buddhist) ದಾದಾರಾವ್ ಪಟೇಕರ್ ತಿಳಿಸುತ್ತಾರೆ.
"ನಾವು ಉತ್ತಮ ಗುಣಮಟ್ಟದ ಮುಖಗವುಸುಗಳು, ಕೈಗವುಸುಗಳು ಮತ್ತು ಸ್ಯಾನಿಟೈಜ಼ರ್ ಗಳನ್ನು ನಮ್ಮ ಎಲ್ಲ ಕೆಲಸಗಾರರಿಗೂ ನೀಡಿದ್ದೇವೆ. ವೈರಸ್‍ನ ಪ್ರಸರಣದಿಂದಾಗಿ ಇವರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುತ್ತಿದ್ದೇವೆ", ಎನ್ನುತ್ತಾರೆ ಮುಖ್ಯ ಅಧಿವೀಕ್ಷಕ ಪ್ರಡ್ಕರ್.
ಮಾರ್ಚ್ 20ರಂದು ಕೊವಿಡ್-19 ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಘೋಷಿಸಿದ ನಿಲುಗಡೆಯ ಹಲವಾರು ಕ್ರಮಗಳು ಮಾರ್ಚ್ 22ರಂದು ಸಂಪೂರ್ಣ ನಿಲುಗಡೆಗಳಾಗಿ ಮುಂದುವರಿಸಲ್ಪಟ್ಟವು. ಮಾರ್ಚ್ 21ರಂದು ಈ ವರದಿಯನ್ನು ನೀಡುವ ಸಮಯದಲ್ಲಿ ಕಾಯಂ ಹಾಗೂ ಗುತ್ತಿಗೆಯಾಧಾರಿತ ಸಫಾಯಿ ಕರ್ಮಚಾರಿಗಳು ನಗರದ ವಾರ್ಡುಗಳ ಚೌಕಿಗಳಲ್ಲಿ ಎಂದಿನಂತೆ ಮುಂಜಾನೆ 6.30ಕ್ಕೆ ಒಟ್ಟುಗೂಡಿದ್ದರು. ಅಲ್ಲಿ ಅವರ ದಿನದ ಹಾಜರಾತಿಯನ್ನು ದಾಖಲಿಸಿ ಸ್ವಚ್ಛಗೊಳಿಸಬೇಕಾದ ಜಾಗಗಳನ್ನು ಅವರಿಗೆ ಹಂಚಲಾಯಿತು.
"ನಮ್ಮ ಕೆಲಸವು ಅತ್ಯವಶ್ಯಕ ಸೇವೆಗಳ ಭಾಗವಾಗಿದೆ. ನಾವು ಹೊರಗೆ ಬರಲೇಬೇಕು. ಗಡಿಗಳಲ್ಲಿ ನಮ್ಮನ್ನು ರಕ್ಷಿಸುತ್ತಿರುವ ಸೈನಿಕರಂತೆ ಸಫಾಯಿ ಕರ್ಮಚಾರಿಗಳಾದ ನಾವು ನಮ್ಮ ನಾಗರಿಕರನ್ನು ಸಂರಕ್ಷಿಸಬೇಕು", ಎನ್ನುತ್ತಾರೆ ಪಾಟೆಕರ್.
ಆದರೆ ಸಫಾಯಿ ಕರ್ಮಚಾರಿಗಳು ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? "ಸರ್ಕಾರವು ನಿರಂತರವಾಗಿ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಹೇಳುತ್ತಿದೆ. ನಾವು ಅದನ್ನು ಹೇಗೆ ತಾನೇ ನಿರ್ವಹಿಸಲು ಸಾಧ್ಯ? ಇಲ್ಲಿ ಪ್ರತಿ ಎರಡು ದಿನಗಳಿಗೊಮ್ಮೆ ನೀರು ಬರುತ್ತದೆ. ಅಲ್ಲದೆ ಆ ಸ್ಯಾನಿಟೈಜ಼ರ್ ಖರ್ಚನ್ನು ನಾವು ನಿಭಾಯಿಸಲಾದೀತೇ? ನೂರಾರು ಜನರೊಂದಿಗೆ ನಾವು ಸಾರ್ವಜನಿಕ ಶೌಚಾಲಯವನ್ನು ಹಂಚಿಕೊಳ್ಳಬೇಕು", ಎನ್ನುತ್ತಾರೆ 38 ವರ್ಷದ ಅರ್ಚನ ಛಬುಸ್ಕ್ವರ್. ಈಕೆಯೂ ನವ ಬೌದ್ಧ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸುಭಾಷ್ ನಗರ ಪ್ರದೇಶದ 40ಕ್ಕೂ ಹೆಚ್ಚಿನ ಮನೆಗಳಿಂದ ಪ್ರತಿ ದಿನ ಕಸವನ್ನು ಸಂಗ್ರಹಿಸುವ ಆಕೆ 200 ರೂ.ಗಳ ದಿನಗೂಲಿ ಪಡೆಯುತ್ತಾರೆ.
100 ಚದರಡಿಗಳ ಆಕೆಯ ಮನೆಯು ಸುಭಾಷ್ ನಗರದ ಮಾಹುಲ್‍ನಿಂದ ಸುಮಾರು 4 ಕಿ.ಮೀ. ದೂರದ ಚೆಂಬೂರಿನ ಆನಂದ್ ನಗರದ ಕಿರಿದಾದ ಓಣಿಯಲ್ಲಿದೆ. ಕೊಳೆಗೇರಿ ಕಾಲೋನಿಯಲ್ಲಿ ಅನೇಕ ಸಫಾಯಿ ಕರ್ಮಚಾರಿಗಳು ನೆಲೆಸಿದ್ದಾರೆ. ಅವರಲ್ಲಿನ ಅನೇಕರು 1972ರ ಬರಗಾಲದಲ್ಲಿ ಜಲ್ನ, ಸತಾರ ಮತ್ತು ಸೋಲಾಪುರ್‍ನಿಂದ ಇಲ್ಲಿಗೆ ಬಂದರು. ಅರ್ಚನಾಳ ಪತಿ ರಾಜೇಶ್ ಹಾಗೂ ಇತರ ಕೆಲಸಗಾರರು ಭಾರವಾದ ಲೋಹದ ಕಸದ ತೊಟ್ಟಿಯನ್ನು ಹಿಡಿದೆತ್ತುವಾಗ ರಾಜೇಶ್ ನ ಕಾಲು ಅದರ ಕೆಳಗೆ ಸಿಕ್ಕು ನಜ್ಜುಗುಜ್ಜಾಯಿತು. ಶ್ವಾಸಕೋಶದ ವ್ಯಾಧಿಯಿಂದಾಗಿ ಅವರು 2017ರಲ್ಲಿ ಮೃತಪಟ್ಟರು.
"ನಮ್ಮ ಜನರು ಆಗಾಗ ಸಾಯುತ್ತಲೇ ಇರುತ್ತಾರೆ. ಆದರೆ ನಮ್ಮನ್ನು ಕೇಳುವವರು ಯಾರೂ ಇಲ್ಲ. ಈಗ ನಾವು ವೈರಸ್‍ನಿಂದ ಸತ್ತಲ್ಲಿ ಅದರಿಂದಾಗುವ ವ್ಯತ್ಯಾಸವಾದರೂ ಏನು?", ಎನ್ನುತ್ತಾರೆ ಅರ್ಚನ.
ಅನುವಾದ: ಶೈಲಜ ಜಿ. ಪಿ.