ಒಂದು ಒಳ್ಳೆಯ ನಿದ್ರೆಯಿಂದ ಕೂಡಿದ ರಾತ್ರಿಯೆನ್ನುವುದು ಶೀಲಾ ವಾಘ್ಮರೆಯವರ ಬದುಕಿನಿಂದ ದೂರವಾಗಿ ಬಹಳ ಕಾಲವಾಗಿದೆ.

"ನನಗೆ ರಾತ್ರಿ ಮಲಗಲು ಸಾಧ್ಯವಾಗುತ್ತಿಲ್ಲ... ಸರಿಯಾ ನಿದ್ರಿಸಿ ವರ್ಷಗಳೇ ಕಳೆದಿವೆ" ಎಂದು ನೆಲದ ಮೇಲೆ ಹರಡಿದ ಗೋಧಾಡಿಯ ಮೇಲೆ ಚಕ್ಕಂಬಕ್ಕಳ ಹಾಕಿ ಕುಳಿತಿದ್ದ 33 ವರ್ಷದ ಶೀಲಾ ಹೇಳುತ್ತಾರೆ, ಅವರ ಕೆಂಪಾಗಿದ್ದ ಕಣ್ಣುಗಳು ಆಳವಾದ ನೋವನ್ನು ಪ್ರತಿಫಲಿಸುತ್ತಿದ್ದವು. ಅವರು ತನ್ನ ನಿದ್ರೆಯಿಲ್ಲದ ರಾತ್ರಿಯ ಕುರಿತು ವಿವರಿಸತೊಡಗಿದಂತೆ ಒತ್ತರಿಸಿಕೊಂಡು ಬಂದ ಅಳುವಿಗೆ ದೇಹ ಕಂಪಿಸುತ್ತಿತ್ತು. ಅವರ ತನ್ನ ಅಳುವನ್ನು ಅಡಗಿಸಲು ಯತ್ನಿಸುತ್ತಿದ್ದರು. “ಇಡೀ ರಾತ್ರಿ ಅಳುತ್ತಾ ಕುಳಿತಿರುತ್ತೇನೆ... ಒಮ್ಮೊಮ್ಮೆ ಉಸಿರುಗಟ್ಟಿದಂತೆ ಭಾಸವಾಗುತ್ತದೆ.”

ಶೀಲಾ ಪ್ರಸ್ತುತ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬೀಡ್ ಪಟ್ಟಣದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ರಾಜೂರಿ ಘೋಡ್ಕಾ ಗ್ರಾಮದ ಹೊರವಲಯದಲ್ಲಿ ಎರಡು ಕೋಣೆಗಳ ಇಟ್ಟಿಗೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಮಲಗಿರುವ ಸಮಯದಲ್ಲಿ ಅವರ ನರಳುವಿಕೆಯಿಂದಾಗಿ, ಪತಿ ಮಾಣಿಕ್ ಮತ್ತು ಅವರ ಮೂವರು ಮಕ್ಕಳಾದ ಕಾರ್ತಿಕ್, ಬಾಬು ಮತ್ತು ರುತುಜಾ ಎಚ್ಚರಗೊಳ್ಳುತ್ತಾರೆಂದು ಹೇಳುತ್ತಾರೆ. "ನನ್ನ ಅಳು ಅವರ ನಿದ್ರೆಗೆ ಭಂಗ ತರುತ್ತದೆ. ನಂತರ ನಾನು ನನ್ನ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಂಡು ಮಲಗಲು ಪ್ರಯತ್ನಿಸುತ್ತೇನೆ."

ಆದರೆ ನಿದ್ರೆ ಬರುವುದಿಲ್ಲ. ಮತ್ತು ಕಣ್ಣೀರು ನಿಲ್ಲುವುದಿಲ್ಲ.

"ನಾನು ಯಾವಾಗಲೂ ನೋವಿನಲ್ಲಿರುತ್ತೇನೆ, ಆತಂಕಕ್ಕೊಳಗಾಗುತ್ತೇನೆ" ಎಂದು ಶೀಲಾ ಹೇಳುತ್ತಾರೆ. ಒಂದು ಕ್ಷಣದ ಮೌನದ ನಂತರ, ಅವರು ಕಿರಿಕಿರಿಗೊಂಡಂತೆ ಕಾಣಿಸಿದರು. "ನನ್ನ ಪಿಶ್ವಿ (ಗರ್ಭಕೋಶ) ತೆಗೆದುಹಾಕಿದ ನಂತರ ಇದೆಲ್ಲ ಪ್ರಾರಂಭವಾಯಿತು. ಇದು ನನ್ನ ಬದುಕನ್ನು ಶಾಶ್ವತವಾಗಿ ಬದಲಾಯಿಸಿತು." 2008ರಲ್ಲಿ ಹಿಸ್ಟೆರೆಕ್ಟಮಿಗೆ ಒಳಗಾದಾಗ ಅವರಿಗೆ ಕೇವಲ 20 ವರ್ಷವಾಗಿತ್ತು. ಅಂದಿನಿಂದ, ಅವರು ಭಾವನೆಗಳಲ್ಲಿನ ಏರಿಳಿತ, ನಿದ್ರೆಯಿಲ್ಲದ ರಾತ್ರಿಗಳು, ವಿವರಿಸಲಾಗದ ಕಿರಿಕಿರಿ ಮತ್ತು ದೀರ್ಘಕಾಲದವರೆಗೆ ಮುಂದುವರಿಯುವ ದೈಹಿಕ ನೋವುಗಳನ್ನು ಅನುಭವಿಸುತ್ತಿದ್ದಾರೆ.

PHOTO • Jyoti

ರಾಜೂರಿ ಘೋಡ್ಕಾ ಗ್ರಾಮದ ತನ್ನ ಮನೆಯಲ್ಲಿ ಶೀಲಾ ವಾಘ್ಮರೆ. ʼನಾನು ಯಾವಾಗಲೂ ನೋವಿನಲ್ಲಿರುತ್ತೇನೆ, ಆತಂಕಕ್ಕೊಳಗಾಗುತ್ತೇನೆʼ

"ಕೆಲವೊಮ್ಮೆ ನಾನು ವಿನಾಕಾರಣ ಮಕ್ಕಳ ಮೇಲೆ ಸಿಟ್ಟಾಗುತ್ತೇನೆ. ಅವರು ಪ್ರೀತಿಯಿಂದ ಏನನ್ನಾದರೂ ಕೇಳಿದರೂ, ನಾನು ಅವರ ಮೇಲೆ ಕೂಗಾಡುತ್ತೇನೆ" ಎಂದು ಶೀಲಾ ಅಸಹಾಯಕರಾಗಿ ಹೇಳುತ್ತಾರೆ. "ನಾನು ಪ್ರಯತ್ನಿಸುತ್ತೇನೆ. ನಾನು ನಿಜವಾಗಿಯೂ ಕಿರಿಕಿರಿಗೊಳಗಾಗದಿರಲು ಬಹಳಷ್ಟು ಪ್ರಯತ್ನಿಸುತ್ತೇನೆ. ನಾನು ಈ ರೀತಿ ಏಕೆ ವರ್ತಿಸುತ್ತೇನೆಂದು ನನಗೆ ಅರ್ಥವಾಗುತ್ತಿಲ್ಲ."

ಕೇವಲ 12 ವರ್ಷದವರಿದ್ದಾಗ ಅವರಿಗೆ ಮಾಣಿಕ್ ಅವರೊಡನೆ ಮದುವೆಯಾದ ಶೀಲಾ, 18 ವರ್ಷ ತುಂಬುವ ಮೊದಲು ಮೂರು ಮಕ್ಕಳ ತಾಯಿಯಾಗಿದ್ದರು.

ಊಸ್‌-ತೋಡ್‌ ಕಾಮ್‌ಗಾರ್‌ ಕರೆಯಲ್ಪಡುವ ಸುಮಾರು ಎಂಟು ಲಕ್ಷ ಕಬ್ಬು ಕಾರ್ಮಿಕರಲ್ಲಿ ಶೀಲಾ ಮತ್ತು ಮಾಣಿಕ್‌ ಕೂಡಾ ಸೇರಿದ್ದಾರೆ. ಅವರು ಆರು ತಿಂಗಳ ಕಾಲ ಕಬ್ಬಿನ ಕಟಾವಿನ ಸಮಯದಲ್ಲಿ ಮರಾಠಾವಾಡಾ ಪ್ರದೇಶದಿಂದ ವಾಡಿಕೆಯ ವಲಸೆ ಹೋಗುತ್ತಾರೆ ಮತ್ತು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತನಕ ಪಶ್ಚಿಮ ಮಹಾರಾಷ್ಟ್ರ ಮತ್ತು ಕರ್ನಾಟಕದ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಾ ಅಲ್ಲೇ ವಾಸಿಸುತ್ತಾರೆ.

ಹಿಸ್ಟೆರೆಕ್ಟಮಿ ನಂತರ ಶೀಲಾ ಅನುಭವಿಸುತ್ತಿರುವ ನೋವು ಕೇವಲ ಅವರೊಬ್ಬರದೇ ಅನುಭವವಲ್ಲ. ಇದು ಮಹಾರಾಷ್ಟ್ರದ ಈ ಪ್ರದೇಶದಲ್ಲಿ ಅಪರೂಪವೂ ಅಲ್ಲ. ಬೀಡಿನಲ್ಲಿ ಕಬ್ಬು ಕತ್ತರಿಸುವ ಮಹಿಳೆಯರಲ್ಲಿ ಅಸಹಜ ರೀತಿಯ ಹೆಚ್ಚಿನ ಸಂಖ್ಯೆಯ ಹಿಸ್ಟೆರಕ್ಟಮಿಗಳು ನಡೆದಿರುವುದರ ಹಿನ್ನೆಲೆಯನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು 2019ರಲ್ಲಿ ಸ್ಥಾಪಿಸಿದ ಏಳು ಸದಸ್ಯರ ಸಮಿತಿಯು ಅವರಲ್ಲಿ ಮನೋದೈಹಿಕ ತೊಂದರೆ ಸಾಮಾನ್ಯವಾಗಿದೆ ಎಂದು ಕಂಡುಹಿಡಿದಿದೆ.

ಆ ಸಮಯದಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಉಪಸಭಾಧ್ಯಕ್ಷರಾಗಿದ್ದ ಡಾ. ನೀಲಂ ಗೋರ್ಹೆ ಅವರ ಅಧ್ಯಕ್ಷತೆಯಲ್ಲಿ, ಸಮಿತಿಯು 2019ರ ಜೂನ್-ಜುಲೈನಲ್ಲಿ ಸಮೀಕ್ಷೆಯನ್ನು ನಡೆಸಿತು ಮತ್ತು ಈ ಸಮೀಕ್ಷೆ ಜಿಲ್ಲೆಯ 82,309 ಮಹಿಳೆಯರನ್ನು ಒಳಗೊಂಡಿತ್ತು. ಹಿಸ್ಟೆರೆಕ್ಟಮಿಗೆ ಒಳಗಾದ 13,861 ಮಹಿಳೆಯರಲ್ಲಿ, 45 ಪ್ರತಿಶತ - 6,314 – ಹಿಸ್ಟೆರೆಕ್ಟಮಿ ನಂತರ ನಿದ್ರೆಯ ತೊಂದರೆಗಳು, ಖಿನ್ನತೆಯ ಮನಸ್ಥಿತಿ ಮತ್ತು ನಿರಾಶೆಯಿಂದ ಕೂಡಿದ ಆಲೋಚನೆಗಳಿಂದ ಹಿಡಿದು ಕೀಲುಗಳು ನೋವು ಮತ್ತು ಬೆನ್ನು ನೋವಿನವರೆಗೆ ಮಾನಸಿಕ ಮತ್ತು ದೈಹಿಕ ಸಂಕಟವನ್ನು ಅನುಭವಿಸಿದರು ಎಂದು ಸಮೀಕ್ಷೆಯು ಹೇಳಿದೆ.

PHOTO • Jyoti
PHOTO • Jyoti

ಶೀಲಾ ಮತ್ತು ಅವರ ಮಕ್ಕಳಾದ ಕಾರ್ತಿಕ ಮತ್ತು ರುತುಜಾ (ಬಲ). ಕಬ್ಬಿನ ಕಟಾವಿನ ಕಾಲದಲ್ಲಿ ಇಡೀ ಕುಟುಂಬವು ವಲಸೆ ಹೋಗುತ್ತದೆ

ಹಿಸ್ಟೆರೆಕ್ಟಮಿ ಒಂದು ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ ಮಹಿಳೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ ಎಂದು ಮುಂಬೈ ಮೂಲದ ಸ್ತ್ರೀರೋಗ ತಜ್ಞ ಮತ್ತು ವಿ.ಎನ್.ದೇಸಾಯಿ ಮುನ್ಸಿಪಲ್ ಜನರಲ್ ಆಸ್ಪತ್ರೆಯ ಕನ್ಸಲ್ಟಂಟ್‌ ಆಗಿರುವ ಡಾ. ಕೋಮಲ್ ಚವಾಣ್ ಹೇಳುತ್ತಾರೆ. "ವೈದ್ಯಕೀಯ ಪರಿಭಾಷೆಯಲ್ಲಿ, ನಾವು ಇದನ್ನು ಸರ್ಜಿಕಲ್‌ ಮೆನೋಪಾಸ್‌ (surgical menopause) ಎಂದು ಕರೆಯುತ್ತೇವೆ" ಎಂದು ಡಾ. ಚವಾಣ್ ಹೇಳುತ್ತಾರೆ.

ಶಸ್ತ್ರಚಿಕಿತ್ಸೆಯ ನಂತರದ ವರ್ಷಗಳಲ್ಲಿ, ಶೀಲಾ ಕೀಲು ನೋವು, ತಲೆನೋವು, ಬೆನ್ನುನೋವು ಮತ್ತು ನಿರಂತರ ಆಯಾಸ ಸೇರಿದಂತೆ ಅನುಭವಿಸಿದ ದೈಹಿಕ ಕಾಯಿಲೆಗಳ ಸುದೀರ್ಘ ಪಟ್ಟಿಯೇ ಇದೆ. "ಪ್ರತಿ ಎರಡು-ಮೂರು ದಿನಗಳ ನಂತರ, ನನಗೆ ಒಂದಷ್ಟು ನೋವು ಬರುತ್ತದೆ" ಎಂದು ಅವರು ಹೇಳುತ್ತಾರೆ.

ನೋವು ನಿವಾರಕ ಮುಲಾಮುಗಳು ಮತ್ತು ಮೌಖಿಕ ಔಷಧೋಪಚಾರಗಳು ಕ್ಷಣಿಕ ಪರಿಹಾರವನ್ನು ನೀಡುತ್ತವೆ. "ನಾನು ಈ ಕ್ರೀಮ್ ಅನ್ನು ನನ್ನ ಮೊಣಕಾಲುಗಳು ಮತ್ತು ಬೆನ್ನು ನೋವಿಗೆ ಹಚ್ಚುತ್ತೇನೆ. ಒಂದು ತಿಂಗಳಲ್ಲಿ ಎರಡು ಟ್ಯೂಬ್‌ಗಳನ್ನು ಬಳಸುತ್ತೇನೆ" ಎಂದು 166 ರೂ.ಗಳ ಬೆಲೆಯ ಡೈಕ್ಲೋಫೆನಾಕ್ ಜೆಲ್‌ನ ಟ್ಯೂಬ್ ತೋರಿಸುತ್ತಾ ಹೇಳುತ್ತಾರೆ. ವೈದ್ಯರು ಶಿಫಾರಸು ಮಾಡಿದ ಮಾತ್ರೆಗಳು ಸಹ ಇವೆ. ತಿಂಗಳಿಗೆ ಎರಡು ಬಾರಿ, ಆಯಾಸ ಕಡಿಮೆ ಮಾಡಲು ಅವರಿಗೆ ನರಗಳ ಮೂಲಕ ಗ್ಲೂಕೋಸ್‌ ನೀಡಲಾಗುತ್ತದೆ.

ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಔಷಧಿಗಳ ವೆಚ್ಚ ತಿಂಗಳಿಗೆ 1000ದಿಂದ 2000 ರೂಪಾಯಿಗಳಷ್ಟಾಗುತ್ತದೆ. ಬೀಡಿನಲ್ಲಿರುವ ಜಿಲ್ಲಾ ಆಸ್ಪತ್ರೆ ಆಕೆಯ ಮನೆಯಿಂದ 10 ಕಿ.ಮೀ ದೂರದಲ್ಲಿದೆ. ಆದ್ದರಿಂದ ಅವರು ಹತ್ತಿರದ ಆಸ್ಪತ್ರೆಗೆ ಹೋಗುತ್ತಾರೆ. "ಅಷ್ಟು ದೂರ ಯಾರು ಹೋಗ್ತಾರೆ? ಗಾಡಿ ಘೋಡಾ [ಪ್ರಯಾಣದ] ಖರ್ಚು," ಎನ್ನುತ್ತಾರವರು

ಔಷಧಿಗಳು ಮಾನಸಿಕ ತೊಂದರೆಗಳಿಗೆ ಸಹಾಯ ಮಾಡುವುದಿಲ್ಲ. "ಅಸ ಸಗ್ಲಾ ತ್ರಾಸ್ ಅಸ್ಲ್ಯಾವರ್ ಕಾ ಮ್ಹಾನುನ್ ಜಗಾವ ವತೇಲ್? [ಇಷ್ಟೆಲ್ಲಾ ತೊಂದರೆಗಳಿರುವಾಗ, ಬದುಕು ಬದುಕಲು ಯೋಗ್ಯವಾಗಿದೆ ಎಂದು ನಾನು ಹೇಗೆ ಭಾವಿಸಲಿ?]

ಗರ್ಭಕೋಶವನ್ನು ತೆಗೆದುಹಾಕಿದ ನಂತರ, ಹಾರ್ಮೋನುಗಳ ಸಮತೋಲನವು ತೊಂದರೆಗೊಳಗಾಗುತ್ತದೆ ಮತ್ತು ಇದು ದೈಹಿಕ ಅಸ್ವಸ್ಥತೆಯಲ್ಲದೆ ಖಿನ್ನತೆ ಮತ್ತು ಆತಂಕಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ಮುಂಬೈಯಲ್ಲಿ ಮನೋವೈದ್ಯರಾಗಿರುವ ಡಾ. ಅವಿನಾಶ್ ಡಿಸೋಜಾ. ಹಿಸ್ಟೆರೆಕ್ಟಮಿ ಅಥವಾ ನಿಷ್ಕ್ರಿಯ ಅಂಡಾಶಯಗಳಿಗೆ ಸಂಬಂಧಿಸಿದ ಕಾಯಿಲೆಗಳ ತೀವ್ರತೆಯು ಬದಲಾಗುತ್ತದೆ ಎಂದು ಅವರು ಹೇಳುತ್ತಾರೆ. "ಇದು ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿರುತ್ತದೆ. ಕೆಲವು ಮಹಿಳೆಯರು ತೀವ್ರವಾದ ಪರಿಣಾಮಗಳನ್ನು ಎದುರಿಸುತ್ತಾರೆ, ಮತ್ತು ಕೆಲವರು ಯಾವುದೇ ರೋಗಲಕ್ಷಣಗಳನ್ನು ಅನುಭವಿಸದಿರಬಹುದು."

PHOTO • Jyoti
PHOTO • Jyoti

ಮೌಖಿಕ ಔಷಧೋಪಚಾರ ಮತ್ತು ನೋವು ನಿವಾರಕ ಮುಲಾಮುಗಳಾದ ಡೈಕ್ಲೋಫೆನಾಕ್ ಜೆಲ್ ಶೀಲಾರಿಗೆ ಕ್ಷಣಿಕ ಪರಿಹಾರವನ್ನು ನೀಡುತ್ತದೆ.ʼನಾನು ಒಂದು ತಿಂಗಳಲ್ಲಿ ಎರಡು ಟ್ಯೂಬ್ ಗಳನ್ನು ಬಳಸುತ್ತೇನೆʼ

ಶಸ್ತ್ರಚಿಕಿತ್ಸೆಯ ನಂತರವೂ, ಶೀಲಾ ಅವರು ಮಾಣಿಕ್ ಅವರೊಂದಿಗೆ ಪಶ್ಚಿಮ ಮಹಾರಾಷ್ಟ್ರಕ್ಕೆ ಕಬ್ಬು ಕಡಿಯಲು ವಲಸೆ ಹೋಗುವುದನ್ನು ಮುಂದುವರಿಸಿದ್ದಾರೆ. ಅವರು ಸಾಮಾನ್ಯವಾಗಿ ತಮ್ಮ ಕುಟುಂಬದೊಂದಿಗೆ ಬೀಡ್‌ನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಕೊಲ್ಹಾಪುರದ ಕಬ್ಬು ಅರೆಯುವ ಕಾರ್ಖಾನೆಗೆ ಪ್ರಯಾಣಿಸುತ್ತಾರೆ.

"ನಾವು 16ರಿಂದ 18 ಗಂಟೆಗಳ ಕಾಲ ಕೆಲಸ ಮಾಡಿ ದಿನಕ್ಕೆ ಸುಮಾರು ಎರಡು ಟನ್ ಕಬ್ಬನ್ನು ಕತ್ತರಿಸುತ್ತಿದ್ದೆವು" ಎಂದು ಶೀಲಾ ತಮ್ಮ ಶಸ್ತ್ರಚಿಕಿತ್ಸೆಯ ಮುಂಚಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಕತ್ತರಿಸಿ ಕಟ್ಟಲಾದ  ಪ್ರತಿ ಟನ್ ಕಬ್ಬಿಗೆ 280 ರೂ.ಗಳನ್ನು ಪ್ರತಿ 'ಕೊಯ್ಟಾ'ಕ್ಕೆ ಪಾವತಿಸಲಾಗುತ್ತಿತ್ತು. ಕೊಯ್ಟಾ ಎಂಬ ಪದದ ಅಕ್ಷರಶಃ ಅರ್ಥ ವಕ್ರವಾದ ಕುಡುಗೋಲು. ಇದನ್ನು 7 ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಗಟ್ಟಿಯಾದ ಕಬ್ಬಿನ ಕಾಂಡಗಳನ್ನು ಕತ್ತರಿಸಲು ಬಳಸಲಾಗುತ್ತದೆ, ಆದರೆ ಆಡುಮಾತಿನಲ್ಲಿ, ಇದು ಕಬ್ಬನ್ನು ಒಟ್ಟಾಗಿ ಕತ್ತರಿಸುವ ದಂಪತಿಗಳನ್ನು ಸೂಚಿಸುತ್ತದೆ. ಕಾರ್ಮಿಕ ಗುತ್ತಿಗೆದಾರರು ನೇಮಿಸಿಕೊಂಡ ಇಬ್ಬರು ಸದಸ್ಯರ ಘಟಕಕ್ಕೆ ಮುಂಗಡವಾಗಿ ಒಂದು ದೊಡ್ಡ ಮೊತ್ತವನ್ನು ಪಾವತಿಸಲಾಗುತ್ತದೆ.

"ಆರು ತಿಂಗಳ ನಂತರ, ನಾವು ಸುಮಾರು 50,000 ರೂ.ಗಳಿಂದ 70,000 ರೂ.ಗಳವರೆಗೆ ಗಳಿಸುತ್ತೇವೆ" ಎಂದು ಶೀಲಾ ಹೇಳುತ್ತಾರೆ. ಹಿಸ್ಟೆರೆಕ್ಟಮಿ ನಂತರ, ದಂಪತಿಗಳು ಒಂದು ದಿನದಲ್ಲಿ ಒಂದು ಟನ್ ಕಬ್ಬನ್ನು ಕತ್ತರಿಸಿ ಕಟ್ಟು ಮಾಡಿ ಮುಗಿಸುವುದು ಕಷ್ಟಕರವಾಗಿದೆ. "ನನಗೆ ಭಾರವಾದ ಹೊರೆಗಳನ್ನು ಎತ್ತಲು ಸಾಧ್ಯವಿಲ್ಲ, ಮತ್ತು ಮೊದಲಿನಂತೆ ವೇಗವಾಗಿ ಕತ್ತರಿಸಲು ಸಾಧ್ಯವಾಗುತ್ತಿಲ್ಲ."

ಆದರೆ ಶೀಲಾ ಮತ್ತು ಮಾಣಿಕ್ ತಮ್ಮ ಮನೆಯನ್ನು ರಿಪೇರಿ ಮಾಡಲು 2019ರಲ್ಲಿ ವಾರ್ಷಿಕ ಶೇಕಡಾ 30ರಷ್ಟು ಬಡ್ಡಿ ದರದಲ್ಲಿ 50,000 ರೂ.ಗಳನ್ನು ಮುಂಗಡವಾಗಿ ಪಡೆದರು. ಆದ್ದರಿಂದ ಅವರು ಆ ಮೊತ್ತವನ್ನು ಪಾವತಿಸಲು ಕೆಲಸ ಮಾಡುತ್ತಲೇ ಇರಬೇಕು. "ಇದು ಎಂದಿಗೂ ಮುಗಿಯುವುದಿಲ್ಲ" ಎಂದು ಶೀಲಾ ಹೇಳುತ್ತಾರೆ.

*****

ಕಬ್ಬಿನ ಗದ್ದೆಗಳಲ್ಲಿ ಬೆನ್ನು ಮುರಿಯುವಂತೆ ದುಡಿಯುವ ಮಹಿಳೆಯರಿಗೆ ಅವರ ಮುಟ್ಟಿನ ಸಮಯದಲ್ಲಿ ಪರಿಸ್ಥಿತಿಗಳನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿದೆ. ಹೊಲಗಳಲ್ಲಿ ಟಾಯ್ಲೆಟ್‌ ಅಥವಾ ಬಾತ್‌ರೂಮ್‌ ವ್ಯವಸ್ಥೆ ಇರುವುದಿಲ್ಲ, ಜೊತೆಗೆ ಅಲ್ಲಿ ಅವರಿಗೆ ಜೀವನ ವ್ಯವಸ್ಥೆಗಳೂ ತೀರಾ ಕನಿಷ್ಟವಾಗಿರುತ್ತವೆ. ಕೊಯ್ಟಾಗಳು, ಕೆಲವೊಮ್ಮೆ ತಮ್ಮ ಮಕ್ಕಳೊಂದಿಗೆ, ಕಬ್ಬಿನ ಕಾರ್ಖಾನೆಗಳು ಮತ್ತು ಹೊಲಗಳ ಹತ್ತಿರದ ಡೇರೆಗಳಲ್ಲಿ ವಾಸಿಸುತ್ತಾರೆ. "ಪಾಳಿ [ಋತುಚಕ್ರದ] ಸಮಯದಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿತ್ತು" ಎಂದು ಶೀಲಾ ನೆನಪಿಸಿಕೊಳ್ಳುತ್ತಾರೆ.

ಒಂದು ದಿನದ ರಜೆಗೂ ಕೂಲಿ ಕಡಿತ ಮಾಡಲಾಗುತ್ತದೆ, ದಿನದ ವೇತನವನ್ನು ಮುಕಾಡಮ್ (ಕಾರ್ಮಿಕ ಗುತ್ತಿಗೆದಾರ) ದಂಡವಾಗಿ ವಿಧಿಸುತ್ತಾನೆ.

PHOTO • Jyoti
PHOTO • Jyoti

ಎಡಕ್ಕೆ: ಕಬ್ಬಿನ ಗದ್ದೆಗಳಲ್ಲಿ ದುಡಿಯಲು ವಲಸೆ ಹೋಗುವಾಗ ಶೀಲಾ ಕುಟುಂಬದ ವಸ್ತುಗಳನ್ನು ಒಯ್ಯುವ ಟ್ರಂಕ್. ಬಲ: ಗಟ್ಟಿಯಾದ ಕಬ್ಬಿನ ಕಾಂಡಗಳನ್ನು ಕತ್ತರಿಸಲು ಬಳಸಲಾಗುವ ಬಾಗಿದ ಕುಡುಗೋಲು, ಅಥವಾ ಕೊಯ್ಟಾ, ಇದು ಒಟ್ಟಿಗೆ ಕಬ್ಬು ಕತ್ತರಿಸುವ ದಂಪತಿಗಳನ್ನು ಸಹ ಸೂಚಿಸುತ್ತದೆ

ಮಹಿಳಾ ಕಾರ್ಮಿಕರು ಬಳಸಿದ ಹತ್ತಿಯ ಪೆಟಿಕೋಟ್‌ಗಳಿಂದ ತಯಾರಿಸಿದ ಬಟ್ಟೆಯ ಪ್ಯಾಡ್‌ಗಳನ್ನು ಧರಿಸಿ ಕೆಲಸಕ್ಕೆ ಹೋಗುತ್ತಾರೆ ಎಂದು ಶೀಲಾ ಹೇಳುತ್ತಾರೆ. ಅವರು ಅದನ್ನು ಬದಲಾಯಿಸದೆ ದಿನಕ್ಕೆ ಸುಮಾರು 16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. "ದಿನದ ಕೆಲಸದ ಕೊನೆಯಲ್ಲಿ ನಾನು ಅದನ್ನು ಬದಲಾಯಿಸುತ್ತೇನೆ" ಎಂದು ಅವರು ಹೇಳುತ್ತಾರೆ. "ರಕ್ತಾಣೇ ಪೂರ್ಣಾ ಭಿಜೂನ್ ರಕ್ತ ತಪಕಾಯ್ಚೆ ಕಪ್ಡ್ಯಾತೂನ್ [ಬಟ್ಟೆ ಪೂರ್ತಿಯಾಗಿ ನೆನೆದು ಅದರಿಂದ ರಕ್ತ ಸೋರುತ್ತಿರುತ್ತದೆ]."

ಸರಿಯಾದ ನೈರ್ಮಲ್ಯ ಸೌಲಭ್ಯಗಳು ಅಥವಾ ಬಳಸಿದ ಬಟ್ಟೆಯ ಪ್ಯಾಡ್ ಗಳನ್ನು ತೊಳೆಯಲು ಸಾಕಷ್ಟು ನೀರು ಅಥವಾ ಅವುಗಳನ್ನು ಒಣಗಿಸಲು ಸ್ಥಳಾವಕಾಶವಿಲ್ಲದೆ, ಆಗಾಗ್ಗೆ ಇನ್ನೂ ಒದ್ದೆಯಿರುವ ಪ್ಯಾಡ್‌ಗಳನ್ನೇ ಬಳಸುತ್ತಿದ್ದರು. "ಅದು ವಾಸನೆಯನ್ನು ಬೀರುತ್ತಿತ್ತು, ಆದರೆ ಅದನ್ನು ಬಿಸಿಲಿನಲ್ಲಿ ಒಣಗಿಸುವುದಕ್ಕೆ ಮುಜುಗರವಾಗುತ್ತಿತ್ತು; ಸುತ್ತಲೂ ಅದೆಷ್ಟೋ ಜನ ಇರುತ್ತಿದ್ದರು." ಅವರಿಗೆ ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆ ತಿಳಿದಿರಲಿಲ್ಲ. "ನನ್ನ ಮಗಳು ಮುಟ್ಟಾಗಲು ಪ್ರಾರಂಭಿಸಿದ ನಂತರವೇ ನನಗೆ ಆ ಕುರಿತು ತಿಳಿದಿದ್ದು" ಎಂದು ಅವರು ಹೇಳುತ್ತಾರೆ.

ಅವರು ತನ್ನ ಮಗಳಾದ 15 ವರ್ಷದ ರುತುಜಾಳಿಗಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿಸುತ್ತಾರೆ. "ನಾನು ಅವಳ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ."

2020ರಲ್ಲಿ, ಮಹಿಳಾ ರೈತರ ಪರ ಕೆಲಸ ಮಾಡುವ ಪುಣೆ ಮೂಲದ ಮಹಿಳಾ ಸಂಘಟನೆಗಳ ಒಕ್ಕೂಟವಾದ ಮಕಾಮ್, ಮಹಾರಾಷ್ಟ್ರದ ಎಂಟು ಜಿಲ್ಲೆಗಳಲ್ಲಿ ಸಂದರ್ಶಿಸಲಾದ 1,042 ಕಬ್ಬು ಕತ್ತರಿಸುವವರ ಕುರಿತಾದ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿತು. 83 ಪ್ರತಿಶತದಷ್ಟು ಮಹಿಳಾ ಕಬ್ಬು ಕಟಾವು ಕಾರ್ಮಿಕರು ತಮ್ಮ ಋತುಚಕ್ರದ ಸಮಯದಲ್ಲಿ ಬಟ್ಟೆಯನ್ನು ಬಳಸುತ್ತಾರೆ ಎಂದು ವರದಿ ಬಹಿರಂಗಪಡಿಸಿದೆ. ಕೇವಲ 59 ಪ್ರತಿಶತದಷ್ಟು ಜನರು ಮಾತ್ರ ಈ ಬಟ್ಟೆ ಪ್ಯಾಡ್ಗಳನ್ನು ತೊಳೆಯಲು ನೀರಿನ ಲಭ್ಯತೆಯನ್ನು ಹೊಂದಿದ್ದರು ಮತ್ತು ಸುಮಾರು 24 ಪ್ರತಿಶತದಷ್ಟು ಮಹಿಳೆಯರು ಒದ್ದೆಯಾದ ಪ್ಯಾಡ್ಗಳನ್ನು ಮರುಬಳಕೆ ಮಾಡುತ್ತಿದ್ದರು.

ನೈರ್ಮಲ್ಯ ಅಭ್ಯಾಸಗಳನ್ನು ಪಾಲಿಸದಿರುವುದು ಅತಿಯಾದ ರಕ್ತಸ್ರಾವ ಮತ್ತು ನೋವಿನ ಮುಟ್ಟಿನ ದಿನಗಳಂತಹ ಪುನರಾವರ್ತಿತ ಸ್ತ್ರೀರೋಗ ಸಮಸ್ಯೆಗಳನ್ನು ಉಂಟುಮಾಡುತ್ತವೆ. "ನನ್ನ ಕೆಳಹೊಟ್ಟೆಯಲ್ಲಿ ಆಗಾಗ್ಗೆ ನೋವು ಕಾಣಿಸಿಕೊಳ್ಳುತ್ತಿತ್ತು ಮತ್ತು ಬಿಳಿಸೆರಗು ಹೋಗುತ್ತಿತ್ತು" ಎಂದು ಶೀಲಾ ಹೇಳುತ್ತಾರೆ.

ಕಳಪೆ ಮುಟ್ಟಿನ ಸಮಯದ ನೈರ್ಮಲ್ಯದಿಂದ ಸೋಂಕುಗಳು ಸಾಮಾನ್ಯ, ಮತ್ತು ಇವುಗಳು ಸರಳ ಔಷಧಿಗಳೊಂದಿಗೆ ಚಿಕಿತ್ಸೆ ನೀಡಬಹುದು ಎಂದು ಡಾ. ಚವಾಣ್ ಹೇಳುತ್ತಾರೆ. "ಹಿಸ್ಟೆರೆಕ್ಟಮಿ ಪ್ರಾಥಮಿಕ ಆಯ್ಕೆಯಲ್ಲ ಆದರೆ ಕ್ಯಾನ್ಸರ್, ಗರ್ಭಕೋಶದ ಜಾರುವಿಕೆ ಅಥವಾ ಗಡ್ಡೆ ಬೆಳೆದ ಸಂದರ್ಭದಲ್ಲಿ ಇದು ಕೊನೆಯ ಮಾರ್ಗವಾಗಿದೆ."

PHOTO • Labani Jangi

ಕಬ್ಬಿನ ಗದ್ದೆಗಳಲ್ಲಿ ಬೆನ್ನು ಮುರಿಯುವಂತೆ ದುಡಿಯುವ ಮಹಿಳೆಯರಿಗೆ ಅವರ ಮುಟ್ಟಿನ ಸಮಯದಲ್ಲಿ ಪರಿಸ್ಥಿತಿಗಳನ್ನು ನಿಭಾಯಿಸುವುದು ಸವಾಲಿನ ಕೆಲಸವಾಗಿದೆ. ಹೊಲಗಳಲ್ಲಿ ಟಾಯ್ಲೆಟ್‌ ಅಥವಾ ಬಾತ್‌ರೂಮ್‌ ವ್ಯವಸ್ಥೆ ಇರುವುದಿಲ್ಲ, ಜೊತೆಗೆ ಅಲ್ಲಿ ಅವರಿಗೆ ಜೀವನ ವ್ಯವಸ್ಥೆಗಳೂ ತೀರಾ ಕನಿಷ್ಟವಾಗಿರುತ್ತವೆ

ಮರಾಠಿಯಲ್ಲಿ ತನ್ನ ಹೆಸರನ್ನು ಸಹಿ ಮಾಡುವುದನ್ನು ಮೀರಿ ಓದಲು ಅಥವಾ ಬರೆಯಲು ಸಾಧ್ಯವಾಗದ ಶೀಲಾಗೆ ಸೋಂಕುಗಳನ್ನು ಗುಣಪಡಿಸಬಹುದು ಎಂದು ತಿಳಿದಿರಲಿಲ್ಲ. ಇತರ ಅನೇಕ ಕಬ್ಬು ಕತ್ತರಿಸುವ ಮಹಿಳಾ ಕಾರ್ಮಿಕರಂತೆ, ಅವರು ಬೀಡ್ ಪಟ್ಟಣದ ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿದರು, ನೋವು ಕಡಿಮೆಯಾಗಲು ಏನಾದರೂ ಔಷಧ ಸಿಕ್ಕರೆ ಮುಟ್ಟಿನ ಸಮಯದಲ್ಲೂ ದುಡಿಯಬಹುದು, ಸಂಬಳದಲ್ಲಿ ಕಡಿತವಾಗುವುದಿಲ್ಲ ಎನ್ನುವುದು ಅವರ ಲೆಕ್ಕಾಚಾರವಾಗಿತ್ತು.

ಆಸ್ಪತ್ರೆಯಲ್ಲಿ, ವೈದ್ಯರು ಕ್ಯಾನ್ಸರ್ ಸಾಧ್ಯತೆಯನ್ನು ಸೂಚಿಸಿದರು. "ರಕ್ತ ಪರೀಕ್ಷೆ ಅಥವಾ ಸೋನೋಗ್ರಫಿ ಇಲ್ಲದೆ, ನನ್ನ ಗರ್ಭಕೋಶದಲ್ಲಿ ರಂಧ್ರಗಳಿವೆ ಮತ್ತು ನಾನು ಬಹುಶಃ ಐದು ಅಥವಾ ಆರು ತಿಂಗಳಲ್ಲಿ ಸಾಯುತ್ತೇನೆ ಎಂದು ನನಗೆ ಹೇಳಲಾಯಿತು" ಎಂದು ಅವರು ನೆನಪಿಸಿಕೊಂಡರು. ಸಂಪೂರ್ಣವಾಗಿ ಭಯಭೀತರಾದ ಶೀಲಾ ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡರು. ಆಪರೇಷನ್ ಆದ ಕೆಲವೇ ಗಂಟೆಗಳ ನಂತರ ತೆಗೆದ ಗರ್ಭಕೋಶದಲ್ಲಿನ ರಂಧ್ರಗಳನ್ನು ವೈದ್ಯರು ಪತಿಗೆ ತೋರಿಸಿದರು,'' ಎನ್ನುತ್ತಾರೆ ಶೀಲಾ.

ಶೀಲಾ ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ತನ್ನಲ್ಲಿದ್ದ ಉಳಿತಾಯದ ಹಣ, ಹಾಗೂ ಸಂಬಂಧಿಕರು, ಸ್ನೇಹಿತರ ಬಳಿ ಸಾಲ ಮಾಡಿದ ಹಣದಿಂದ ಮಾಣಿಕ್ 40‌,000 ರೂ. ಬಿಲ್ ಕಟ್ಟಿದ್ದಾರೆ.

“ಹೆಚ್ಚಾಗಿ ಇಂತಹ ಶಸ್ತ್ರಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತದೆ” ಎಂದು ಕಬ್ಬು ಕಾರ್ಮಿಕರ ಸ್ಥಿತಿಯನ್ನು ಸುಧಾರಿಸಲು ಶ್ರಮಿಸುತ್ತಿರುವ ಬೀದರ ಮೂಲದ ಸಮಾಜ ಸೇವಕ ಅಶೋಕ ತಾಂಗ್ಡೆ ಹೇಳಿದರು. "ಅನೇಕ ವೈದ್ಯರು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಇಂತಹ ಗಂಭೀರ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಾರೆ ಮತ್ತು ಇದು ಅಮಾನವೀಯವಾದುದು."

ಸಮೀಕ್ಷೆಗೆ ಒಳಗಾದ ಶೇ.90ರಷ್ಟು ಮಹಿಳೆಯರು ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಸರ್ಕಾರ ನೇಮಿಸಿದ ಸಮಿತಿಯು ಕಂಡುಹಿಡಿದಿದೆ.

ಸಂಭವನೀಯ ಅಡ್ಡ ಪರಿಣಾಮಗಳ ಬಗ್ಗೆ ಶೀಲಾ ಅವರಿಗೆ ಯಾವುದೇ ಮಾಹಿತಿಯನ್ನು ನೀಡಲಾಗಿರಲಿಲ್ಲ. “ನಾನು ಮುಟ್ಟಿನಿಂದ ಪಾರಾದೆ. ಆದರೆ ಈಗ ಬದುಕು ಹೆಚ್ಚು ಶೋಚನೀಯವಾಗಿದೆ,” ಎಂದು ಅವರು ಹೇಳುತ್ತಾರೆ.

ವೇತನ ಕಡಿತ, ಕಾರ್ಮಿಕ ಒಪ್ಪಂದಗಳ ನಿರ್ದಯ ನಿಯಮಗಳು ಮತ್ತು ಲಾಭಕೋರ ಖಾಸಗಿ ಶಸ್ತ್ರಚಿಕಿತ್ಸಕರು. ಬೀಡ್ ಜಿಲ್ಲೆಯ ಮಹಿಳಾ ಕಬ್ಬು ಕಾರ್ಮಿಕರಲ್ಲಿ ಹೆಚ್ಚಿನವರು ಇದೆಲ್ಲವನ್ನೂ ಎದುರಿಸಿದವರೇ ಆಗಿದ್ದಾರೆ.

*****

PHOTO • Jyoti

ಲತಾ ವಾಘ್ಮರೆ ತನ್ನ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿರುವುದು. ಕೆಲಸಕ್ಕೆ ಹೋಗುವ ಮೊದಲು ಅವರು ಮನೆಗೆಲಸಗಳನ್ನು ಪೂರ್ಣಗೊಳಿಸುತ್ತಾರೆ

ಶೀಲಾ ಅವರ ಮನೆಯಿಂದ 60 ಕಿ.ಮೀ ದೂರದ ಕಥೋಡಾ ಗ್ರಾಮದ ಲತಾ ವಾಘ್ಮರೆಯವರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ.

20ನೇ ವಯಸ್ಸಿನಲ್ಲಿ ಹಿಸ್ಟೆರೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾದ 32ರ ಹರೆಯದ ಲತಾ, ‘‘ನನಗೆ ಬದುಕಬೇಕೆನ್ನಿಸುತ್ತಿಲ್ಲ,” ಎನ್ನುತ್ತಾರೆ.

ಪತಿ ರಮೇಶ್ ಜತೆಗಿನ ಸಂಬಂಧದ ಬಗ್ಗೆ ಹೇಳುತ್ತಾ ‘‘ನಮ್ಮಿಬ್ಬರ ನಡುವೆ ಈಗ ಪ್ರೀತಿ ಎಂಬುದೇ ಇಲ್ಲ. ಶಸ್ತ್ರಚಿಕಿತ್ಸೆಯ ಒಂದು ವರ್ಷದ ನಂತರ ಲತಾ ಹೆಚ್ಚು ಅನ್ಯಮನಸ್ಕತೆ ಮತ್ತು ಚಡಪಡಿಕೆಯನ್ನು ತೋರಿಸಲಾರಂಭಿಸಿದಾಗ ವಿಷಯಗಳು ಬದಲಾಗಲಾರಂಭಿಸಿದವು.

"ಅವನು ಹತ್ತಿರ ಬಂದಾಗಲೆಲ್ಲಾ ನಾನು ದೂರ ತಳ್ಳುತ್ತಿದ್ದೆ" ಎಂದು ಲತಾ ಹೇಳುತ್ತಾರೆ. "ಆಗ ಜಗಳಗಳು, ಕೂಗಾಟಗಳು ನಡೆಯುತ್ತವೆ." ಪತಿಯ ಲೈಂಗಿಕ ಪ್ರಚೋದನೆಗಳನ್ನು ಲತಾ ನಿರಂತರವಾಗಿ ತಿರಸ್ಕರಿಸಿದ ಕಾರಣ ಗಂಡನ ಬಯಕೆಗಳು ಕೊನೆಗೊಂಡಿವೆ ಎಂದು ಅವರು ಹೇಳುತ್ತಾರೆ. "ಅವನು ಈಗ ನನ್ನೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ."

ಲತಾ ಹೊಲದ ಕೆಲಸಕ್ಕೆ ಹೋಗುವ ಮುನ್ನ ಮನೆಗೆಲಸಗಳನ್ನು ಮಾಡಿಕೊಂಡು ದಿನವನ್ನು ಆರಂಭಿಸುತ್ತಾರೆ. ಗ್ರಾಮದ ಬೇರೆಯವರ ಹೊಲಗಳಿಗೆ ಅಥವಾ ಸಮೀಪದ ಹಳ್ಳಿಗಳಿಗೆ ಹೋಗಿ ದಿನಕ್ಕೆ 150 ರೂ. ದುಡಿಯುತ್ತಾರೆ. ಅವರು ಮೊಣಕಾಲು ನೋವು, ಬೆನ್ನು ನೋವು ಮತ್ತು ನಿರಂತರ ತಲೆನೋವಿನಿಂದ ಬಳಲುತ್ತಿದ್ದಾರೆ. ಅವರು ಪರಿಹಾರಕ್ಕಾಗಿ ಕೆಲವು ನೋವು ನಿವಾರಕಗಳು ಅಥವಾ ಮನೆಮದ್ದುಗಳನ್ನು ಮಾಡುತ್ತಾರೆ. "ಪರಿಸ್ಥಿತಿ ಹೀಗಿರುವಾಗ ಅವನ ಬಳಿ ಹೋಗಬೇಕೆನ್ನಿಸಲು ಹೇಗೆ ಸಾಧ್ಯ?" ಲತಾ ಕೇಳುತ್ತಾರೆ.

ಅವರಿಗೆ 13ನೇ ವಯಸ್ಸಿನಲ್ಲಿ ಮದುವೆ ಮಾಡಿಸಲಾಯಿತು ಮತ್ತು ಒಂದು ವರ್ಷದಲ್ಲಿ ಆಕಾಶ್ ಎಂಬ ಮಗನಿಗೆ ಜನ್ಮ ನೀಡಿದರು. ಆಕಾಶ್‌ 12ನೇ ತರಗತಿವರೆಗೆ ಓದಿದ್ದರೂ ತಂದೆ-ತಾಯಿಯೊಂದಿಗೆ ಕಬ್ಬಿನ ಗದ್ದೆಯ ಕೆಲಸಕ್ಕೂ ಹೋಗುತ್ತಾರೆ.

PHOTO • Jyoti

ಕಬ್ಬು ಕಡಿಯುವ ಕೆಲಸವಿಲ್ಲದಿರುವಾಗ ಲತಾ ಸ್ವಂತ ಗ್ರಾಮದಲ್ಲಿ ಕೃಷಿ ಕೂಲಿ ಕೆಲಸ ಮಾಡುತ್ತಾರೆ

ನಂತರ ಅವರಿಗೆ ಹೆಣ್ಣು ಮಗುವಾಯಿತು, ಆದರೆ ಐದನೇ ತಿಂಗಳಲ್ಲಿ ಮಗು ಕಬ್ಬಿನ ಗದ್ದೆಯಲ್ಲಿ ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿತು. ಮಕ್ಕಳನ್ನು ನೋಡಿಕೊಳ್ಳಲು ಯಾವುದೇ ಸೌಲಭ್ಯಗಳಿಲ್ಲದ ಕಾರಣ ಕಬ್ಬು ಕಡಿಯಲು ಹೋಗುವ ದಂಪತಿ ಮಕ್ಕಳನ್ನು ಸಮೀಪದ ಬಯಲು ಜಾಗದಲ್ಲಿ ಆಟವಾಡಲು ಬಿಡುತ್ತಾರೆ.

ಅವರಿಗೆ ಆ ದುರಂತವನ್ನು ವಿವರಿಸಲು ಸಾಧ್ಯವಾಗಲಿಲ್ಲ.

“ನನಗೆ ಕೆಲಸ ಮಾಡಬೇಕೆನ್ನಿಸುವುದಿಲ್ಲ, ಸುಮ್ಮನೆ ಕುಳಿತಿರೋಣ ಎನ್ನಿಸುತ್ತದೆ,” ಎನ್ನುತ್ತಾರವರು. ಅವರ ಕೆಲಸದ ಕುರಿತಾದ ನಿರಾಸಕ್ತಿಯು ಅವರ ಕೆಲಸಗಳಲ್ಲಿ ತಪ್ಪುಗಳಾಗುವಂತೆ ಮಾಡುತ್ತಿದೆ. “ಕೆಲವೊಮ್ಮೆ ನಾನು ಹಾಲು ಅಥವಾ ಸಾರು ಒಲೆಯ ಮೇಲಿಟ್ಟು ಕುಳಿತುಬಿಡುತ್ತೇನೆ. ಅದು ಉಕ್ಕಿ ಹೋಗುತ್ತಿದ್ದರೂ ಅದರ ಕಡೆ ಗಮನ ಕೊಡುವುದಿಲ್ಲ.”

ಮಗಳ ಸಾವಿನ ನಂತರವೂ ಕಬ್ಬು ಕಟಾವಿನ ಹಂಗಾಮಿನಲ್ಲಿ ಲತಾ ಮತ್ತು ರಮೇಶ್ ಕೆಲಸದಿಂದ ದೂರ ಉಳಿಯಲು ಸಾಧ್ಯವಾಗಲಿಲ್ಲ.

ನಂತರ ಲತಾ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಋು. ಅಂಜಲಿ, ನಿಕಿತಾ, ರೋಹಿಣಿ. ಈಗಲೂ ಮಕ್ಕಳನ್ನು ಕಬ್ಬಿನ ಗದ್ದೆಗಳಿಗೆ ಕರೆದುಕೊಂಡು ಹೋಗುತ್ತಾರೆ. “ಕೆಲಸ ಮಾಡದಿದ್ದರೆ ಮಕ್ಕಳು ಹಸಿವಿನಿಂದ ಸಾಯುತ್ತಾರೆ. ಮತ್ತು ಕೆಲಸಕ್ಕೆ ಹೋಗುವಾಗ ಅಪಘಾತಗಳು ಸಂಭವಿಸಿ ಸಾಯಬಹುದು. ಅದರಲ್ಲಿ ವ್ಯತ್ಯಾಸವೇನು?" ಅವರು ಕೇಳುತ್ತಾರೆ.

ಮಹಾಮಾರಿಯ ಕಾರಣಕ್ಕೆ ಶಾಲೆಗಳನ್ನು ಮುಚ್ಚುವುದರೊಂದಿಗೆ ಮತ್ತು ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಅಸಮರ್ಥತೆಯೊಂದಿಗೆ, ಅವರ ಹೆಣ್ಣುಮಕ್ಕಳ ಶಿಕ್ಷಣವು ಹಠಾತ್ತನೆ ಕೊನೆಗೊಂಡಿತು. 2020ರಲ್ಲಿ, ಅಂಜಲಿಗೆ ಮದುವೆಯಾಯಿತು. ನಿಕಿತಾ ಮತ್ತು ರೋಹಿಣಿಗೆ ಸೂಕ್ತ ವರನ ಹುಡುಕಾಟ ನಡೆದಿದೆ.

PHOTO • Jyoti
PHOTO • Jyoti

ಎಡ: ಲತಾ ತನ್ನ ಮಕ್ಕಳಾದ ನಿಕಿತಾ ಮತ್ತು ರೋಹಿಣಿಯೊಂದಿಗೆ ಬಲ: ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವ ನಿಕಿತಾ. ‘ನನಗೆ ಓದಬೇಕೆಂಬ ಆಸೆ ಇದೆ. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲ,' ಅವಳು ಹೇಳುತ್ತಾಳೆ

7ನೇ ತರಗತಿವರೆಗೆ ಓದಿದ್ದೇನೆ’ಎನ್ನುತ್ತಾಳೆ ನಿಕಿತಾ. ಅವಳು ಮಾರ್ಚ್ 2020ರಿಂದ ಕೃಷಿ ಕೂಲಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದಳು ಮತ್ತು ತನ್ನ ಹೆತ್ತವರೊಂದಿಗೆ ಕಬ್ಬು ಕಟಾವು ಮಾಡಲು ಕೂಡಾ ಹೋಗುತ್ತಾಳೆ. ಅವಳು ಹೇಳುತ್ತಾಳೆ, “ನನಗೆ ಓದಬೇಕು, ಆದರೆ ಈಗ ನನಗೆ ಓದಲು ಸಾಧ್ಯವಿಲ್ಲ. ನನ್ನ ಪೋಷಕರು ನನ್ನ ಮದುವೆಯ ಬಗ್ಗೆ ಯೋಚಿಸುತ್ತಿದ್ದಾರೆ.”

ನೀಲಂ ಗೋರ್ಹೆ ನೇತೃತ್ವದ ಸಮಿತಿಯ ಶಿಫಾರಸುಗಳ ಮೂರು ವರ್ಷಗಳ ನಂತರವೂ, ಅವುಗಳ ಅನುಷ್ಠಾನದ ಪ್ರಕ್ರಿಯೆಯು ತುಂಬಾ ನಿಧಾನವಾಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಕಬ್ಬು ಕತ್ತರಿಸುವ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಕಲ್ಪಿಸುವ ಸೂಚನೆಗಳು ಬರೀ ಕಾಗದ ಪತ್ರಗಳಲ್ಲಷ್ಟೇ ಅಸ್ತಿತ್ವದಲ್ಲಿವೆ ಎಂಬುದನ್ನು ಶೀಲಾ ಮತ್ತು ಲತಾ ಪ್ರಕರಣ ದೃಢಪಡಿಸುತ್ತದೆ.

"ಯಾವ ಶೌಚಾಲಯ ಮತ್ತು ಯಾವ ಮನೆ," ಶೀಲಾ ಕೆಲಸದ ಪರಿಸ್ಥಿತಿಗಳು ಎಂದಾದರೂ ಬದಲಾಗಬಹುದು ಎಂಬ ಕಲ್ಪನೆಯನ್ನು ತಳ್ಳಿಹಾಕುತ್ತಾರೆ. "ಎಲ್ಲವೂ ಒಂದೇ."

ಸಮಿತಿಯ ಎರಡನೇ ಶಿಫಾರಸು 'ಆಶಾ' ಮತ್ತು ಅಂಗನವಾಡಿ ಕಾರ್ಯಕರ್ತೆಯರ ಗುಂಪುಗಳ ರಚನೆಗೆ ಸಂಬಂಧಿಸಿದೆ, ಇದರಿಂದಾಗಿ ಮಹಿಳಾ ಕಬ್ಬು ಕಾರ್ಮಿಕರ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತಳಮಟ್ಟದಲ್ಲಿ ಪರಿಹರಿಸಬಹುದು.

PHOTO • Jyoti

ಕಥೋಡಾ ಗ್ರಾಮದಲ್ಲಿರುವ ಲತಾ ಅವರ ಮನೆಯ ಒಳಗೆ

ವೇತನ ಕಡಿತದ ಭಯ, ಕಾರ್ಮಿಕ ಗುತ್ತಿಗೆದಾರರ ಶೋಷಣೆ ನೀತಿಗಳು ಮತ್ತು ಹಣಕ್ಕೆ ಹೊಂಚು ಹಾಕುವ ಖಾಸಗಿ ಶಸ್ತ್ರಚಿಕಿತ್ಸಕರು, ಬೀಡ್ ಜಿಲ್ಲೆಯ ಮಹಿಳಾ ಕಬ್ಬು ಕಾರ್ಮಿಕರ ಈ ಕಥೆ ಅವರ ನಡುವೆ ತೀರಾ ಸಾಮಾನ್ಯವಾಗಿದೆ

'ಆಶಾ' ಕಾರ್ಯಕರ್ತರು ಎಂದಾದರೂ ಅವರ ಬಳಿಗೆ ಬರುತ್ತಾರೆಯೇ ಎಂದು ಕೇಳಿದಾಗ, ಲತಾ ಉತ್ತರಿಸುತ್ತಾರೆ, "ಯಾರೂ ಬರುವುದಿಲ್ಲ. ಎಂದಿಗೂ. ದೀಪಾವಳಿಯ ನಂತರ ಕಬ್ಬಿನ ಗದ್ದೆಗೆ ಬಂದು ಆರು ತಿಂಗಳಾಗಿದೆ. ನಮ್ಮ ಮನೆಗಳಿಗೆ ಬೀಗಗಳು ನೇತಾಡುತ್ತಿವೆ. ನವ-ಬೌದ್ಧ ಕುಟುಂಬವಾಗಿರುವ ಅವರು ಕಥೋಡಾದ ಹೊರವಲಯದಲ್ಲಿರುವ ಇಪ್ಪತ್ತು ಮನೆಗಳ ದಲಿತ ಕುಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಮತ್ತು ಗ್ರಾಮಸ್ಥರು ಅವರನ್ನು ಅಸ್ಪೃಶ್ಯರಂತೆ ನಡೆಸಿಕೊಳ್ಳುತ್ತಾರೆ. ಅವರು ಹೇಳಿದರು. "ನಮ್ಮ ಸುದ್ದಿಯನ್ನು ಹುಡುಕಲು ಯಾರೂ ಬರುವುದಿಲ್ಲ."

ಬೀಡ್‌ ಮೂಲದವರಾದ ಸಾಮಾಜಿಕ ಕಾರ್ಯಕರ್ತ ತಾಂಗಡೆ ಮಾತನಾಡಿ, ಬಾಲ್ಯವಿವಾಹ ಸಮಸ್ಯೆ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ತರಬೇತಿ ಪಡೆದ ಸ್ತ್ರೀರೋಗ ತಜ್ಞರ ಕೊರತೆ ನಿವಾರಣೆಯಾಗಬೇಕಿದೆ. ಅವರು ಮುಂದುವರೆದು ಹೇಳುತ್ತಾರೆ, "ಜೊತೆಗ ಇಲ್ಲಿ ಬರಗಾಲದ ಬಿಕ್ಕಟ್ಟು ಇದೆ, ಮತ್ತು ಉದ್ಯೋಗಾವಕಾಶಗಳ ತೀವ್ರ ಕೊರತೆಯೂ ಇದೆ. ಕಬ್ಬು ಕತ್ತರಿಸುವ ಕಾರ್ಮಿಕರ ಸಮಸ್ಯೆ ಅವರ ವಲಸೆಗೆ ಮಾತ್ರ ಸೀಮಿತವಾಗಿಲ್ಲ.

ಆದರೆ, ಶೀಲಾ, ಲತಾ ಸೇರಿದಂತೆ ಸಾವಿರಾರು ಮಹಿಳೆಯರು ಪ್ರತಿ ವರ್ಷದಂತೆ ಈಗಲೂ ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿದ್ದಾರೆ. ಅವರು ಮೊದಲಿನಂತೆ ಚಿಂದಿ ಟೆಂಟ್‌ಗಳಲ್ಲಿ ವಾಸಿಸುತ್ತಾರೆ - ತಮ್ಮ ಮನೆಗಳಿಂದ ನೂರಾರು ಸಾವಿರ ಕಿಲೋಮೀಟರ್ ದೂರದಲ್ಲಿ, ಮತ್ತು ನೈರ್ಮಲ್ಯ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಇನ್ನೂ ಬಟ್ಟೆಯ ಪ್ಯಾಡ್‌ಗಳನ್ನು ಬಳಸುತ್ತಿದ್ದಾರೆ.

ಶೀಲಾ ಹೇಳುತ್ತಾರೆ, “ನನ್ನ ಜೀವನದಲ್ಲಿ ಇನ್ನೂ ಹಲವು ವರ್ಷಗಳನ್ನು ಕಳೆಯಬೇಕಾಗಿದೆ. ನಾನು ಹೇಗೆ ಬದುಕುತ್ತೇನೆನ್ನುವುದು ನನಗೆ ತಿಳಿದಿಲ್ಲ."

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳುಹಿಸಿ

ಅನುವಾದ: ಶಂಕರ. ಎನ್. ಕೆಂಚನೂರು

Jyoti

ज्योति, पीपल्स आर्काइव ऑफ़ रूरल इंडिया की एक रिपोर्टर हैं; वह पहले ‘मी मराठी’ और ‘महाराष्ट्र1’ जैसे न्यूज़ चैनलों के साथ काम कर चुकी हैं.

की अन्य स्टोरी Jyoti
Illustration : Labani Jangi

लाबनी जंगी साल 2020 की पारी फ़ेलो हैं. वह पश्चिम बंगाल के नदिया ज़िले की एक कुशल पेंटर हैं, और उन्होंने इसकी कोई औपचारिक शिक्षा नहीं हासिल की है. लाबनी, कोलकाता के 'सेंटर फ़ॉर स्टडीज़ इन सोशल साइंसेज़' से मज़दूरों के पलायन के मुद्दे पर पीएचडी लिख रही हैं.

की अन्य स्टोरी Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru