ಜಮೀಲ್ ಅವರದು ಸೂಕ್ಷ್ಮ ಚಿನ್ನದ ಜರಿ ಕಸೂತಿಯಲ್ಲಿ ಎತ್ತಿದ ಕೈ. ಈ 27 ವರ್ಷದ ಕುಶಲಕರ್ಮಿ ದುಬಾರಿ ಉಡುಪುಗಳಿಗೆ ಹೊಳಪು ಮತ್ತು ಅದ್ದೂರಿತನವನ್ನು ನೀಡುತ್ತಾರೆ. ಇದಕ್ಕಾಗಿ ಅವರು ಗಂಟೆಗಳ ಕಾಲ ಚಕ್ಕಂಬಕ್ಕಳ ಹಾಕಿ ನೆಲದ ಮೇಲೆ ಕೂರಬೇಕು. ಆದರೆ 20ರ ಹರೆಯದಲ್ಲಿ ಕ್ಷಯಕರೋಗ (ಟಿಬಿ) ಗೆ ಒಳಗಾದ ಇವರು ಅಂದಿನಿಂದ ತಮ್ಮ ಕೈಯಲ್ಲಿದ್ದ ಸೂಜಿ ಮತ್ತು ದಾರವನ್ನು ಕೆಳಗಿಟ್ಟಿದ್ದಾರೆ. ಕಾಯಿಲೆಯಿಂದಾಗಿ ಅವರ ಮೂಳೆಗಳು ಮೃದುವಾಗಿದ್ದು ಈಗ ಅವರಿಗೆ ಗಂಟೆಗಳ ಕಾಲ ಕಾಲು ಮಡಚಿಕೊಂಡು ಕೂರುವುದು ಸಾಧ್ಯವಿಲ್ಲ.
“ನನ್ನದು ನಾನು ದುಡಿದು ನನ್ನ ತಂದೆ, ತಾಯಿಗೆ ವಿಶ್ರಾಂತಿ ನೀಡಬೇಕಾದ ವಯಸ್ಸು. ಆದರೆ ಇಲ್ಲಿ ಅದು ಉಲ್ಟಾ ಆಗಿದೆ. ನನ್ನ ಔಷಧಿ ಇತ್ಯಾದಿ ಖರ್ಚಿಗಾಗಿ ಅವರು ದುಡಿಯಬೇಕಾಗಿದೆ” ಎನ್ನುತ್ತಾರೆ ಜಮೀಲ್. ಹೌರಾ ಜಿಲ್ಲೆಯ ಚೆಂಗೈಲ್ ಪ್ರದೇಶದ ನಿವಾಸಿಯಾಗಿದ್ದು, ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಪ್ರಯಾಣಿಸುತ್ತಾರೆ.
ಅದೇ ಜಿಲ್ಲೆಯಲ್ಲಿ, ಅವಿಕ್ ಮತ್ತು ಅವನ ಕುಟುಂಬದವರು ಹೌರಾದ ಪಿಲ್ಖಾನಾ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ, ಮತ್ತು ಈ ಹದಿಹರೆಯದ ಬಾಲಕನಿಗೆ ಮೂಳೆ ಟಿಬಿ ಕೂಡ ಇದೆ. ಈ ಕಾಯಿಲೆಯ ಕಾರಣದಿಂದಾಗಿ ಅವನು 2022ರ ಮಧ್ಯದಿಂದ ಶಾಲೆಯನ್ನು ಬಿಟ್ಟಿದ್ದಾನೆ. ಈಗ ಒಂದಷ್ಟು ಚೇತರಿಸಿಕೊಂಡಿದ್ದಾನೆ. ಆದರೆ ಈಗಲೂ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.
ನಾನು 2022ರಲ್ಲಿ ಈ ಕಥೆಯನ್ನು ವರದಿ ಮಾಡಲು ಪ್ರಾರಂಭಿಸಿದ ಸಂದರ್ಭದಲ್ಲಿ ನಾನು ಮೊದಲು ಜಮೀಲ್, ಅವಿಕ್ ಮತ್ತು ಇತರರನ್ನು ಭೇಟಿಯಾದೆ. ಇದರ ನಂತರ ಪಿಲ್ಖಾನಾದ ಕೊಳೆಗೇರಿಗಳಲ್ಲಿನ ಅವರ ಮನೆಗಳಿಗೆ ನಾನು ಆಗಾಗ್ಗೆ ಭೇಟಿ ನೀಡುತ್ತಿದ್ದೆ, ಅವರ ದೈನಂದಿನ ಜೀವನದ ಚಟುವಟಿಕೆಗಳನ್ನು ನನ್ನ ಕೆಮೆರಾದಲ್ಲಿ ಸೆರೆಹಿಡಿಯುತ್ತಿದ್ದೆ.
ಖಾಸಗಿ ಚಿಕಿತ್ಸಾಲಯಗಳು ವಿಧಿಸುವ ದುಬಾರಿ ಮೊತ್ತವನ್ನು ಭರಿಸಲಾಗದೆ ಜಮೀಲ್ ಮತ್ತು ಅವಿಕ್ ಆರಂಭದಲ್ಲಿ ದಕ್ಷಿಣ 24 ಪರಗಣಗಳು ಮತ್ತು ಹೌರಾ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿರುವ ಸರ್ಕಾರೇತರ ಸಂಸ್ಥೆ ನಡೆಸುತ್ತಿರುವ ಮೊಬೈಲ್ ಟಿಬಿ ಕ್ಲಿನಿಕ್ಕಿಗೆ ಚಿಕಿತ್ಸೆಗೆಂದು ಹೋದರು. ಈ ವಿಷಯದಲ್ಲಿ ಅವರು ಒಬ್ಬಂಟಿಗಳಲ್ಲ.






















