"ಇದೆಲ್ಲವೂ ಒಂದೇ ನೂಲಿನಿಂದ ಅರಂಭವಾಗಿ ಒಂದೇ ನೂಲಿನಿಂದ ಕೊನೆಗೊಳ್ಳುತ್ತದೆ," ಎಂದು ರೇಖಾ ಬೆನ್ ವಘೇಲಾರವರು ನೋವು ತುಂಬಿದ ನಗುವಿನೊಂದಿಗೆ ಹೇಳುತ್ತಾರೆ. ಗುಜರಾತಿನ ಮೋಟಾ ಟಿಂಬ್ಲಾ ಗ್ರಾಮದ ತಮ್ಮ ಮನೆಯಲ್ಲಿರುವ ತಮ್ಮದೇ ಕೈಮಗ್ಗದಲ್ಲಿ ಸಿಂಗಲ್ ಇಕ್ಕತ್ನ ಪಟೋಲವನ್ನು ನೇಯುತ್ತಿದ್ದಾರೆ. "ಮೊದಲು ನಾವು ಬಾಬಿನ್ಗೆ ಒಂದು ನೂಲನ್ನು ಸುತ್ತುತ್ತೇವೆ. ಕೊನೆಯಲ್ಲಿ ನಾವು ಈಗಷ್ಟೇ ಡೈ ಮಾಡಲಾಗಿರುವ ನೂಲನ್ನು ಬಾಬಿನ್ಗೆ ಹಾಕುತ್ತೇವೆ," ಎಂದು ವೆಫ್ಟ್ ನೂಲು ಮಾಡಲು ಬಾಬಿನ್ಗಳು ಸಿದ್ಧವಾಗುವ ಮತ್ತು ವಾರ್ಪ್ ನೂಲನ್ನು ಮಗ್ಗದ ಮೇಲೆ ಹೊಂದಿಸುವ ಮೊದಲು ಬರುವ ಪಟೋಲಾ ತಯಾರಿಕೆಯ ಹಲವು ಪ್ರಕ್ರಿಯೆಗಳನ್ನು ರೇಖಾ ಬೆನ್ ವಿವರಿಸುತ್ತಾರೆ.
ಇವರು ವಾಸಿಸುತ್ತಿರುವ ಸುರೇಂದ್ರನಗರ ಜಿಲ್ಲೆಯ ಈ ಹಳ್ಳಿಯರುವ ಅನೇಕ ವಂಕರ್ವಾಗಳು ಪಟೋಲು ಎಂಬ ಪ್ರಸಿದ್ಧ ರೇಷ್ಮೆ ಸೀರೆಗಳನ್ನು ತಯಾರಿಸುವುದಕ್ಕೆ ಸಂಬಂಧಿಸಿದ ಒಂದಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಆದರೆ 40ರ ಹರೆಯದ ರೇಖಾ ಬೆನ್ ಅವರು ಸಿಂಗಲ್ ಮತ್ತು ಡಬಲ್ ಇಕ್ಕತ್ ಪಟೋಲ ನೇಯುವ ಲಿಂಬ್ಡಿ ತಾಲೂಕಿನ ಏಕಮಾತ್ರ ದಲಿತ ಪಟೋಲ ನೇಕಾರರು. (ಓದಿ: ರೇಖಾ ಬೆನ್ ಬದುಕಿನ ಸೀರೆಯ ಅಡ್ಡ ಮತ್ತು ನೇರ ಎಳೆಗಳು ).
ಸುರೇಂದ್ರನಗರದ ಪಟೋಲವನ್ನು 'ಝಲವಾಡಿ' ಪಟೋಲಾ ಎಂದು ಕರೆಯುತ್ತಾರೆ. ಇದು ಪಟಾನ್ನಲ್ಲಿ ತಯಾರಿಸಲ್ಪಡುವ ಪಟೋಲಾಕ್ಕಿಂತ ಅಗ್ಗ. ಮೂಲತಃ ಸಿಂಗಲ್ ಇಕ್ಕತ್ ಪಟೋಲಾಗೆ ಹೆಸರುವಾಸಿಯಾಗಿದ್ದ ಝಲವಾಡ್ನಲ್ಲಿ ವಂಕರ್ಗಳು (ನೇಕಾರರು) ಈಗ ಡಬಲ್ ಇಕ್ಕತ್ಗಳನ್ನು ನೇಯುತ್ತಾರೆ. “ಸಿಂಗಲ್ ಇಕ್ಕತ್ನಲ್ಲಿ ಡಿಸೈನ್ ಅಡ್ಡನೂಲಿನ ನೇಯ್ಗೆ (ವೆಪ್ಟ್) ಮೇಲೆ ಮಾತ್ರ ಇರುತ್ತದೆ. ಡಬಲ್ ಇಕ್ಕತ್ನಲ್ಲಿ ಉದ್ದ (ವಾರ್ಪ್) ಮತ್ತು ಅಡ್ಡ (ವೆಪ್ಟ್) ನೇಯ್ಗೆ ಎರಡರ ಮೇಲೂ ಡಿಸೈನ್ ಇರುತ್ತದೆ,” ಎಂದು ರೇಖಾ ಬೆನ್ರವರು ಎರಡು ಬಗೆಯ ಪಟೋಲಗಳ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾರೆ.
ಈ ವಿನ್ಯಾಸವೇ ತಯಾರಿಕೆಯ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸುವುದು. ರೇಖಾ ಬೆನ್ ಆ ಬಗ್ಗೆ ಮತ್ತೊಮ್ಮೆ ವಿವರಿಸಲು ಪ್ರಯತ್ನಿಸುತ್ತಾರೆ. "ಒಂದು ಸಿಂಗಲ್ ಇಕ್ಕತ್ ಪಟೋಲು 3500 ಉದ್ದ (ವಾರ್ಪ್) ನೂಲುಗಳನ್ನೂ, 13750 ಅಡ್ಡ (ವೆಪ್ಟ್) ನೇಯ್ಗೆ ನೂಲುಗಳನ್ನೂ ಹೊಂದಿರುತ್ತದೆ. ಡಬಲ್ ಇಕ್ಕತ್ ಪಟೋಲುವಿನಲ್ಲಿ 2220 ಉದ್ದ ನೂಲುಗಳೂ, 9870 ಅಡ್ಡ ನೂಲುಗಳು ಇರುತ್ತವೆ,” ಎಂದು ಅವರು ಬಾಬಿನಿನಲ್ಲಿರುವ ವೆಫ್ಟ್ ನೂಲನ್ನು ಶಟಲ್ಗೆ ಹಾಕುತ್ತಾ ಹೇಳುತ್ತಾರೆ.

ʼಇದೆಲ್ಲವೂ ಒಂದೇ ನೂಲಿನಿಂದ ಅರಂಭವಾಗಿ ಒಂದೇ ನೂಲಿನಿಂದ ಕೊನೆಗೊಳ್ಳುತ್ತದೆ,ʼ ಎಂದು ಗುಜರಾತ್ನ ಲಿಂಬ್ಡಿ ತಾಲೂಕಿನ ಏಕೈಕ ದಲಿತ ಪಟೋಲಾ ನೇಕಾರ್ತಿ ರೇಖಾ ಬೆನ್ ವಘೇಲಾ ಅವರು ಹೇಳುತ್ತಾರೆ. ರೇಷ್ಮೆ ನೂಲಿನ ಉಂಡೆಯಿಂದ ಆರಂಭವಾಗಿ, 252-ಇಂಚು ಉದ್ದದ ಪಟೋಲಾ ಸೀರೆಯನ್ನು ರೂಪಿಸಿ ಕೊನೆಯ ನೂಲಿನೊಂದಿಗೆ ಮುಕ್ತಾಯಗೊಳ್ಳುವ ಇಡೀ ಪ್ರಕ್ರಿಯೆಯನ್ನು ಅವರು ವಿವರಿಸುತ್ತಾರೆ. ಇದು ಆರು ತಿಂಗಳು ತೆಗೆದುಕೊಳ್ಳುವ ಶ್ರಮದ ಕೆಲಸ
ಬಾಬಿನ್ನ ಮೇಲಿದ್ದ ನನ್ನ ನೋಟ 55 ವರ್ಷದ ಗಂಗಾ ಬೆನ್ ಪರ್ಮಾರ್ ಅವರ ಮೇಲೆ ಬೀಳುತ್ತದೆ. “ನಾವು ಮೊದಲು ಮರದಿಂದ ಮಾಡಿದ ದೊಡ್ಡ ಸ್ಪೂಲ್ನಲ್ಲಿ ನೂಲಿನ ಉಂಡೆಯನ್ನು ಅನ್ನು ಸುತ್ತುತ್ತೇವೆ. ನಂತರ ಅಲ್ಲಿಂದ ಚರಕವನ್ನು ಬಳಸಿ ಬೋಬಿನ್ಗೆ ಸುತ್ತಿ ತೆಗೆದುಕೊಳ್ಳುತ್ತೇವೆ. ಚರಕವಿಲ್ಲದೆ ಬಾಬಿನ್ಗೆ ನೂಲನ್ನು ಸುತ್ತಲು ನಿಮಗೆ ಸಾಧ್ಯವಿಲ್ಲ,” ಎಂದು ಲಿಂಬ್ಡಿಯ ಘಘ್ರೇಟಿಯಾ ಗ್ರಾಮದ ತಮ್ಮ ಮನೆಯಲ್ಲಿ ಕೆಲಸ ಅವರು ಮಾಡುತ್ತಾ ಹೇಳುತ್ತಾರೆ.
"ನೀವು ಎಲ್ಲಿ ಕಳೆದು ಹೋದಿರಿ?" ಎಂದು ರೇಖಾ ಬೆನ್ ಅವರು ಪಟೋಲಾ ನೂಲುಗಳ ನಮ್ಮ ಚರ್ಚೆಗೆ ಮತ್ತೆ ನನ್ನನ್ನು ಎಳೆದು ತಂದರು. ಈ ಸಂಕೀರ್ಣ ಪ್ರಕ್ರಿಯೆಯ ಬಗ್ಗೆ ಆ ದಿನ ನನಗೆ ಅವರು ಅನೇಕ ಬಾರಿ ವಿವರಿಸಿದ್ದರು. "ಬರೆದುಕೊಳ್ಳಿ," ಎಂದು ಅವರು ನನ್ನ ನೋಟ್ಬುಕ್ ಕಡೆಗೆ ನೋಡುತ್ತಾ ಆದೇಶ ನೀಡಿದರು. ಅವರು ಸ್ವಲ್ಪ ಹೊತ್ತು ನೇಯ್ಗೆ ನಿಲ್ಲಿಸಿ, ನಾನು ಈ ಪ್ರಕ್ರಿಯೆಯ ಬಗ್ಗೆ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ನಾನು ಪ್ರಕ್ರಿಯೆಯ ಪ್ರತೀ ಹಂತಗಳ ಬಗ್ಗೆ ಬರೆದುಕೊಂಡೆ. ಒಂದು ಡಜನ್ಗಿಂತಲೂ ಹೆಚ್ಚು ಹಂತಗಳಿರುವ ಈ ತಯಾರಿಕಾ ಪ್ರಕ್ರಿಯೆ ತುಂಬಾ ಜಟಿಲವಾಗಿದೆ, ಮತ್ತು ಅದು ಅನೇಕ ವಾರಗಳವರೆಗೆ ನಡೆಯುತ್ತದೆ. ನೇಕಾರರು ಮಾತ್ರವಲ್ಲದೇ ಇನ್ನೂ ಹೆಚ್ಚಿನ ಕೆಲಸಗಾರರು ಇದಕ್ಕೆ ಬೇಕಾಗುತ್ತಾರೆ. ರೇಷ್ಮೆ ನೂಲಿನಿಂದ ಆರಂಭವಾಗುವ ಈ ಪ್ರಕ್ರಿಯೆಯು 252-ಇಂಚಿನ ಉದ್ದದ ಪಟೋಲಾ ಸೀರೆಗೆ ರೂಪ ನೀಡಿ ಕೊನೆಯ ನೂಲಿನೊಂದಿಗೆ ಅಂತ್ಯವಾಗುತ್ತದೆ. ಇದು ಆರು ತಿಂಗಳು ತೆಗೆದುಕೊಳ್ಳುವ ಶ್ರಮದ ಕೆಲಸ .
"ಯಾವುದೇ ಹಂತದಲ್ಲಿ ಒಂದೇ ಒಂದು ತಪ್ಪು ನಡೆದರೂ ನೀವು ಮಾಡುತ್ತಿರುವ ಪಟೋಲು ಹಾಳಾಗುವುದು ಖಚಿತ," ಎಂದು ಅವರು ಎಚ್ಚರಿಸುತ್ತಾರೆ.

ಘಘರೋಟಿಯಾ ಗ್ರಾಮದ 55 ವರ್ಷ ಪ್ರಾಯದ ಗಂಗಾಬೆನ್ ಪರ್ಮಾರ್ ಅವರು ರೇಷ್ಮೆ ನೂಲಿನ ಉಂಡೆಯಿಂದ ಮರದ ದೊಡ್ಡ ಸ್ಪೂಲ್ಗೆ ಸುತ್ತುತ್ತಾರೆ. ಇದರಿಂದ ಚರಕವನ್ನು ಬಳಸಿ ನೂಲನ್ನು ಬಾಬಿನ್ಗೆ ಸುತ್ತುತ್ತಾರೆ. 'ಮೂವತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನಗೆ ಸ್ವಲ್ಪ ದೃಷ್ಟಿದೋಷವೂ ಇದೆ. ಆದರೂ ದಿನವಿಡೀ ನಾನು ಇಲ್ಲಿ ಕುಳಿತುಕೊಂಡರೆ ದಿನಕ್ಕೆ 20 ಅಥವಾ 25 ಬಾಬಿನ್ಗಳನ್ನು ತುಂಬಬಹುದುʼ

ಮೋಟಾ ಟಿಂಬ್ಲಾದ ಗೌತಮ್ ಭಾಯಿ ವಘೇಲಾ ಅವರು ಮರದ ದೊಡ್ಡ ಫ್ರೇಮಿನ ಮೇಲೆ ಬಾಬಿನ್ಗಳಿಂದ ನೂಲಿನ ಎಳೆಗಳನ್ನು ಆಡಾ ಎಂದು ಕರೆಯುವ ಪೆಗ್ಗಳೊಂದಿಗೆ ಮುಂದಿನ ಹಂತಕ್ಕೆ ಬೇಕಾದ ಪಾಟಿಯನ್ನು (ನೂಲುಗಳ ಕ್ಲಸ್ಟರ್) ಸಿದ್ಧಪಡಿಸಲು ಕುಳಿತುಕೊಳ್ಳುತ್ತಾರೆ

ಡಿಸೈನ್ ಮಾಡುವ ಮೊದಲು ನೂಲುಗಳ ಸರಿಯಾದ ಕ್ಲಸ್ಟರ್ಗಳನ್ನು ರೂಪಿಸಲು ರೇಷ್ಮೆ ನೂಲುಗಳನ್ನು ಅಡಾದ ತುಂಬಾ ಹರಡುತ್ತಾರೆ

ನಾನಾ ಟಿಂಬ್ಲಾ ಗ್ರಾಮದ 30 ವರ್ಷ ಪ್ರಾಯದ ಅಶೋಕ್ ಪರ್ಮಾರ್ರವರು ಬೇರ್ಪಡಿಸಿದ ನೂಲುಗಳ ಕ್ಲಸ್ಟರ್ಗಳನ್ನು ಮತ್ತೊಂದು ಫ್ರೇಮ್ಗೆ ವರ್ಗಾಯಿಸುತ್ತಾರೆ. ಅದರಲ್ಲಿ ಅವುಗಳನ್ನು ಮೊದಲು ಕಲ್ಲಿದ್ದಲು ಬಳಸಿ ಗುರುತಿಸಲಾಗುತ್ತದೆ. ನಂತರ ಕಾಗದದ ಮೇಲೆ ಹಿಂದೆಯೇ ಸಿದ್ಧಪಡಿಸಲಾಗಿದ್ದ ವಿನ್ಯಾಸಕ್ಕೆ ಅನುಗುಣವಾಗಿ ಕಟ್ಟಲಾಗುತ್ತದೆ

ಕಟಾರಿಯಾ ಗ್ರಾಮದ 36 ವರ್ಷ ಪ್ರಾಯದ ಕಿಶೋರ್ ಮಾಂಜಿ ಭಾಯ್ ಗೋಹಿಲ್ರವರು ಫ್ರೇಮಿನ ಮೇಲೆ ಹರಡಲಾಗಿರುವ ನೂಲಿನ ಮೇಲೆ ಗಾತ್ (ಹೆಣಿಕೆ) ತಯಾರಿಸುತ್ತಾರೆ. ಇದರಲ್ಲಿ ಗುಂಪುಗೂಡಿಸಿರುವ ರೇಷ್ಮೆ ನೂಲುಗಳನ್ನು ಹತ್ತಿಯ ನೂಲಿನಿಂದ ಕಟ್ಟಲಾಗುತ್ತದೆ. ಇದು ಪಟೋಲಾ ತಯಾರಿಕೆಯಲ್ಲಿ ಬಳಸಲಾಗುವ ರೆಸಿಸ್ಟ್-ಡೈಯಿಂಗ್ ತಂತ್ರ. ಡೈಯಿಂಗ್ ಪ್ರಕ್ರಿಯೆಯಲ್ಲಿ ಬಣ್ಣವು ನೂಲನ್ನು ಗಂಟುಕಟ್ಟಿದ ಭಾಗಗಳ ವರೆಗೆ ತಲುಪದಂತೆ ಹೆಣಿಕೆಯು ತಡೆದು ನೂಲಿನ ಮೇಲೆ ಡಿಸೈನನ್ನು ಮಾಡುತ್ತದೆ

25ರ ಪ್ರಾಯದ ಮಹೇಂದ್ರ ವಘೇಲಾ ಅವರು ಎರಡನೇ ಬಾರಿಗೆ ಡೈಯಿಂಗ್ ಮಾಡಲು ಮೊದಲೇ ಒಂದು ಬಾರಿ ಬಣ್ಣ ಹಚ್ಚಲಾಗಿರುವ ನೂಲಿನ ಗೊಂಚಲುಗಳನ್ನು ಹೊತ್ತಿರುವುದು. ನೂಲುಗಳಿಗೆ ಬಣ್ಣ ಕೊಡುವುದು, ಕಟ್ಟುವುದು ಮತ್ತು ಡೈಯಿಂಗ್ ಮಾಡುವ ಪ್ರಕ್ರಿಯೆಗಳನ್ನು ಪಟೋಲ ತಯಾರಿಕೆಯಲ್ಲಿ ಹಲವಾರು ಬಾರಿ ಮಾಡಲಾಗುತ್ತದೆ

ಆಗಾಗಲೇ ಕಟ್ಟಿ ಡೈ ಹಾಕಲಾಗಿರುವ ನೂಲನ್ನು ಹೈಡ್ರೊ ಮಿಶ್ರಿತ ಕುದಿಯುವ ನೀರಿನಲ್ಲಿ ನೆನೆಸುತ್ತಿರುವ ಮಹೇಂದ್ರ ವಘೇಲಾ. 'ಮೊದಲೇ ಬಣ್ಣ ಹಾಕಲಾಗಿರುವ ನೂಲಿನ ಮೇಲೆ ಹೊಸ ಬಣ್ಣವನ್ನು ಹಚ್ಚಲು ಹೈಡ್ರೊ [ಸೋಡಿಯಂ ಹೈಡ್ರೋ ಸಲ್ಫೈಟ್] ಬೆರೆಸಿ ಕುದಿಸಿದ ನೀರಿನಲ್ಲಿ ನೂಲಿನ ಕ್ಲಸ್ಟರ್ಗಳನ್ನು ನೆನೆಸಿ ಹಿಂದಿನ ಬಣ್ಣವನ್ನು ತೆಗೆಯಬೇಕು, ಇಲ್ಲವೇ ಮಾಸುವಂತೆ ಮಾಡಬೇಕು,' ಎಂದು ರೇಖಾ ಬೆನ್ ಹೇಳುತ್ತಾರೆ

'ಡೈಯಿಂಗ್ ಮಾಡುವಾಗ ಬಣ್ಣವು ಹೆಣಿಕೆಗಳ ವರೆಗೆ ಹೋಗದಂತೆ ನೀವು ಎಚ್ಚರ ವಹಿಸಬೇಕು,' ಎಂದು ಮಹೇಂದ್ರ ವಘೇಲಾರವರು ಎರಡನೇ ಬಾರಿಗೆ ಬಣ್ಣದ ಕೋಟಿಂಗ್ ಮಾಡಲು ನೂಲನ್ನು ಬಿಸಿಯಾದ ನೀರಿನ ಬಕೆಟ್ಗೆ ಅದ್ದುತ್ತಾ ವಿವರಿಸುತ್ತಾರೆ. "ಗಂಟುಗಳ ವರೆಗೆ ಬಣ್ಣ ಯಾವಾಗ ಬರುತ್ತದೆ, ದ್ರಾವಣವನ್ನು ಯಾವಾಗ ಬೆರೆಸಬೇಕು, ನೂಲನ್ನು ಎಷ್ಟು ಸಮಯದವರೆಗೆ ನೀರಿನಲ್ಲಿ ಅದ್ದಿಡಬೇಕು ಎಂಬುದು ಒಬ್ಬ ಕೆಲಸಗಾರ ಸ್ವಾನುಭವದ ಮೂಲಕ ತಿಳಿದಿರುತ್ತಾನೆ," ಎಂದು ಅವರು ಹೇಳುತ್ತಾರೆ

ಆಗಷ್ಟೇ ಬಣ್ಣ ಹಾಕಲಾಗಿರುವ ನೂಲನ್ನು ತಣ್ಣೀರಿನಲ್ಲಿ ಮುಳುಗಿಸಿ ತೊಳೆಯುತ್ತಿರುವ ಮಹೇಂದ್ರ. 'ಪಾಟೋಲುವಿನ ಒಂದೇ ರೇಷ್ಮೆ ನೂಲಿನಲ್ಲಿ ಹಲವು ಬಣ್ಣಗಳಿದ್ದು, ಈ ಬಣ್ಣಗಳಿಂದಲೇ ಡಿಸೈನ್ ಸುಂದರವಾಗಿ ಕಾಣುತ್ತದೆ. ಬಣ್ಣಗಳ ಸರಿಯಾದ ಸಂಯೋಜನೆಯು ತುಂಬಾ ಮುಖ್ಯವಾಗಿದೆ. ಕಣ್ ಸೆಳೆಯುವಂತೆ ಇರಬೇಕು,' ಎಂದು ನೇಕಾರ ವಿಕ್ರಮ್ ಭಾಯಿ ಪರ್ಮಾರ್ ಹೇಳುತ್ತಾರೆ

ಡೈ ಹಾಕಿದ ನಂತರ ಬಣ್ಣದ ನೂಲನ್ನು ಹಿಂಡಿ ಒಣಗಿಸಲಾಗುತ್ತದೆ. ಕಟಾರಿಯಾ ಗ್ರಾಮದ ಜಗದೀಶ್ ರಘು ಭಾಯಿ ಗೋಹಿಲ್ ಅವರು ಹತ್ತಿಯ ನೂಲುಗಳು ಅಥವಾ ಹೆಣಿಕೆಗಳನ್ನು ತೆಗೆದುಹಾಕಲು ಮರದ ಸಣ್ಣ ಫ್ರೇಮಿನ ಮೇಲೆ ಬಣ್ಣಬಣ್ಣದ ನೂಲನ್ನು ಮತ್ತೆ ತೆಗೆದುಕೊಳ್ಳುತ್ತಾರೆ

ಮೋಟಾ ಟಿಂಬ್ಲಾದ 75 ವರ್ಷದ ಪ್ರಾಯದ ವಲಿ ಬೆನ್ ವಘೇಲಾ ಅವರು ಸಣ್ಣ ಸೂಜಿಯನ್ನು ಬಳಸಿ ಹೆಣಿಕೆಗಳನ್ನು ಬಿಚ್ಚುತ್ತಾರೆ. ಪ್ಯಾಟರ್ನ್ನ ಜಟಿಲತೆಗೆ ಅನುಗುಣವಾಗಿ ಒಂದು ಸಿಂಗಲ್ ಪಟೋಲುವನ್ನು ಮಾಡಲು ಗಂಟು ಕಟ್ಟುವುದು, ಬಣ್ಣ ಕೊಡುವುದು, ಡೈ ಮಾಡುವುದು ಮತ್ತು ಗಂಟು ಬಿಚ್ಚುವ ಪ್ರಕ್ರಿಯೆಯನ್ನು ಹಲವು ಬಾರಿ ಮಾಡಲಾಗುತ್ತದೆ

ಜಸು ಬೆನ್ ವಘೇಲಾರವರು ತಯಾರಾದ ನೇಯ್ಗೆ ನೂಲನ್ನು ಮರದ ದೊಡ್ಡ ಸ್ಪೂಲ್ಗೆ ಡಿಸೈನ್ನೊಂದಿಗೆ ಸುತ್ತುತ್ತಾರೆ

58 ವರ್ಷದ ಕಟಾರಿಯಾದ ಶಾಂತು ಬೆನ್ ರಘು ಭಾಯಿ ಗೋಹಿಲ್ ಅವರು ಆಗಾಗಲೇ ಸಿದ್ಧವಾಗಿರುವ ನೇಯ್ಗೆ ನೂಲುಗಳನ್ನು ಮರದ ದೊಡ್ಡ ಸ್ಪೂಲ್ಗೆ ಸುತ್ತುತ್ತಾರೆ

56 ಪ್ರಾಯದ ಕಟಾರಿಯಾದ ಹೀರಾ ಬೆನ್ ಗೋಹಿಲ್ರವರು ಬಾಬಿನನ್ನು ಸುತ್ತಲು ಸ್ಪೂಲ್ನಿಂದ ಬಣ್ಣದ ನೂಲನ್ನು ತೆಗೆದುಕೊಳ್ಳುತ್ತಾರೆ. ಪಟೋಲಾವನ್ನು ನೇಯುವಾಗ ಮೊದಲೇ ಸಿದ್ಧಪಡಿಸಿರುವ ಬಾಬಿನ್ಗಳನ್ನು ಶಟಲ್ನಲ್ಲಿ ಇಡಲಾಗುತ್ತದೆ

ಮೋಟಾ ಟಿಂಬ್ಲಾದ ನೇಕಾರರು ಬಣ್ಣ ಹಾಕಿದ ನಂತರ ನೂಲನ್ನು ಹರಡುತ್ತಾರೆ. ಡಬಲ್ ಇಕ್ಕತ್ ಪಟೋಲಾದಲ್ಲಿ ವಾರ್ಪ್ ಮತ್ತು ವೆಪ್ಟ್ ಎರಡೂ ನೂಲುಗಳಿಗೆ ಬಣ್ಣ ಹಾಕಲಾಗುತ್ತದೆ ಮತ್ತು ಇವೆರಡೂ ವಿನ್ಯಾಸವನ್ನು ಹೊಂದಿರುತ್ತವೆ. ಹಾಗಾಗಿ, ನೂಲು ಪ್ಯಾಟರ್ನ್ನೊಂದಿಗೆ ಸಿದ್ಧವಾದ ಮೇಲೆ ಅದನ್ನು ಬೀದಿಯಲ್ಲಿ ಇಡಲಾಗಿರುವ ಎರಡು ಕಂಬಗಳ ನಡುವೆ ಹರಡಲಾಗುತ್ತದೆ

ಹರಡಲಾಗಿರುವ ವಾರ್ಪ್ ನೂಲನ್ನು ಬಲಪಡಿಸಲು ಮೋಟಾ ಟಿಂಬ್ಲಾದ ನೇಕಾರರು ಅದಕ್ಕೆ ಗಂಜಿಯನ್ನು ಸುರಿಯುತ್ತಾರೆ

ಮೋಟಾ ಟಿಂಬ್ಲಾದ ವಾಸರಂ ಭಾಯಿ ಸೋಲಂಕಿಯವರು ಆಗಷ್ಟೇ ಗಂಜಿ ಹಾಕಲಾಗಿದ್ದ ನೂಲುಗಳನ್ನು ಹೆಡಲ್ಸ್ನಿಂದ ಹೊರಬರುವ ಹಳೆಯ ನೂಲುಗಳ ತುದಿಗಳೊಂದಿಗೆ ಸೇರಿಸುತ್ತಾರೆ. 'ರೇಷ್ಮೆ ನೂಲುಗಳನ್ನು ಸೇರಿಸಲು ಬೂದಿಯನ್ನು ಬಳಸುತ್ತೇವೆ,' ಎಂದು ಅವರು ಹೇಳುತ್ತಾರೆ

ಪೂಂಜಾ ಭಾಯ್ ವಘೇಲಾ ಅವರು ಮಗ್ಗದ ಮೇಲಿರುವ ಬಣ್ಣದ ನೂಲಿನೊಂದಿಗೆ ದೊಡ್ಡ ತೊಲೆಯನ್ನು ಹಾಕುತ್ತಾ, ವಾರ್ಪ್ ನೂಲುಗಳಿಂದ ಮಗ್ಗವನ್ನು ಚಾಲು ಮಾಡುತ್ತಾರೆ

50 ವರ್ಷ ಪ್ರಾಯದ ಪ್ರವೀಣ್ ಭಾಯಿ ಗೋಹಿಲ್ ಮತ್ತು 45 ವರ್ಷ ಪ್ರಾಯದ ಪ್ರೇಮಿಲಾ ಬೆನ್ ಗೋಹಿಲ್ ಕಟಾರಿಯಾ ಗ್ರಾಮದಲ್ಲಿ ಸಿಂಗಲ್ ಇಕ್ಕತ್ ಪಟೋಲಾವನ್ನು ನೇಯುತ್ತಾರೆ. ತೇಗದ ಮರದಿಂದ ಮಾಡಲಾಗಿರುವ ಇವರ ಮಗ್ಗದ ಬೆಲೆ ಬರೋಬ್ಬರಿ 35,000 ದಿಂದ 40,000 ರುಪಾಯಿಯಾಗಿದ್ದು, ಎಲ್ಲಾ ನೇಕಾರರಿಗೆ ಇದನ್ನು ಖರೀದಿಸಲು ಸಾಧ್ಯವಿಲ್ಲ

ಕಟಾರಿಯಾದ ದಲಿತ ಸಮುದಾಯಕ್ಕೆ ಪಟೋಲಾ ಕರಕುಶಲತೆಯನ್ನು ಪರಿಚಯಿಸಿದ ಮೊದಲ ಕುಶಲಕರ್ಮಿಗಳಲ್ಲಿ ದಾನಾ ಭಾಯ್ ದುಲೇರಾ ಕೂಡ ಒಬ್ಬರು

ಸಿಂಗಲ್ ಇಕ್ಕತ್ ಪಟೋಲು ನೇಯುತ್ತಿರುವ ಅಶೋಕ್ ವಘೇಲಾ

ಮೋಟಾ ಟಿಂಬ್ಲಾದ ಭವೇಶ್ ಕುಮಾರ್ ಸೋಲಂಕಿ ಡಬಲ್ ಇಕ್ಕತ್ ಪೀಸೊಂದನ್ನು ನೇಯುತ್ತಿದ್ದಾರೆ

ಡಬಲ್ ಇಕ್ಕತ್ನಲ್ಲಿ ವಾರ್ಪ್ ಮತ್ತು ವೆಫ್ಟ್ ಎರಡೂ ನೂಲುಗಳೂ ಡಿಸೈನನ್ನು ಹೊಂದಿರುತ್ತವೆ, ಸಿಂಗಲ್ ಇಕ್ಕತ್ ಪಟೋಲಾದಲ್ಲಿ ವೆಪ್ಟ್ ನೂಲು ಮಾತ್ರ ಡಿಸೈನನ್ನು ಹೊಂದಿರುತ್ತದೆ

ಪಟೋಲಾ, ಕೈಯಿಂದ ನೇಯ್ದ ಈ ರೇಷ್ಮೆ ಬಟ್ಟೆಗಳು, ಸಾಮಾನ್ಯವಾಗಿ
ಸೀರೆಗಳು, ಸಂಕೀರ್ಣವಾದ ಡಬಲ್ ಇಕ್ಕತ್ ನೇಯ್ಗೆಗೆ ಹೆಸರುವಾಸಿಯಾಗಿದ್ದು ಪ್ರಪಂಚದಾದ್ಯಂತ ಜನಪ್ರಿಯತೆ
ಪಡೆದಿವೆ
ಅನುವಾದ: ಚರಣ್ ಐವರ್ನಾಡು