ಮೊದಲು ಸರಿಯಾಗಿ ಮಳೆ ಸುರಿಯದೆ, ಆ ನಂತರ ಅಕಾಲಿಕ ಮಳೆ ಸುರಿದು ಚತ್ರಾದೇವಿಯವರು ಬೆಳೆದ ಬೆಳೆಗಳೆಲ್ಲಾ ನಾಶವಾದವು. “ನಾವು ಬಾಜ್ರಾ [ಸಜ್ಜೆ] ಬೆಳೆಯುತ್ತಿದ್ದೆವು. ಚೆನ್ನಾಗಿ ಫಸಲು ಬೆಳೆದಿತ್ತು. ಆದರೆ ನಮ್ಮ ಹೊಲಗಳಿಗೆ ನೀರು ಹಾಕಬೇಕಾದ ಸಮಯದಲ್ಲಿ ಮಳೆಯೇ ಬರಲಿಲ್ಲ. ಆ ನಂತರ ಸುಗ್ಗಿ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಬೆಳೆಯೆಲ್ಲಾ ನಾಶವಾಗಿ ಹೋಯ್ತು,” ಎಂದು ರಾಜಸ್ಥಾನದ ಕರೌಲಿ ಜಿಲ್ಲೆಯ ಖಿರ್ಖಿರಿ ಗ್ರಾಮದ 45 ವರ್ಷ ಪ್ರಾಯದ ಈ ರೈತ ಮಹಿಳೆ ಹೇಳುತ್ತಾರೆ.
ಕರೌಲಿಯ ಇಡೀ ಆರ್ಥಿಕತೆಯು ಮುಖ್ಯವಾಗಿ ಕೃಷಿಯ ಮೇಲೆ ನಿಂತಿದೆ. ಇಲ್ಲಿನ ಹೆಚ್ಚಿನ ನಿವಾಸಿಗಳು ಕೃಷಿಕರು, ಇಲ್ಲವೇ ಕೃಷಿ ಕಾರ್ಮಿಕರು (ಜನಗಣತಿ 2011). ಹೆಚ್ಚಾಗಿ ಮಳೆಯಾಧಾರಿತ ಕೃಷಿ ಮಾಡುವ ಈ ರಾಜ್ಯವು ಹಿಂದಿನಿಂದಲೂ ನೀರಿನ ಸಮಸ್ಯೆಯಿಂದ ಬಳಲುತ್ತಿದೆ.
ಮೀನಾ ಸಮುದಾಯದ ಮಹಿಳೆಯಾಗಿರುವ (ರಾಜ್ಯದಲ್ಲಿ ಒಬಿಸಿ ಎಂದು ಪರಿಗಣಿಸಲಾಗಿದೆ) ಚತ್ರಾ ದೇವಿಯವರು ಕಳೆದ 10 ವರ್ಷಗಳಲ್ಲಿ ಮಳೆಯಲ್ಲಾಗಿರುವ ಬದಲಾವಣೆಯನ್ನು ಗಮನಿಸುತ್ತಾ ಬಂದಿದ್ದಾರೆ. ರಾಜಸ್ಥಾನ ಭಾರತದ ಅತಿದೊಡ್ಡ ರಾಜ್ಯ (ಭೌಗೋಳಿಕವಾಗಿ) ಮತ್ತು ಇಲ್ಲಿನ ಜನಸಂಖ್ಯೆಯ 70 ಶೇಕಡಾದಷ್ಟು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಹಾಗೂ ಪಶುಸಂಗೋಪನೆಯನ್ನು ನಂಬಿದ್ದಾರೆ.
ಮಳೆ ಸುರಿಯುವ ರೀತಿಯಲ್ಲಿ ಆಗಿರುವ ಬದಲಾವಣೆಯ ಪರಿಣಾಮ, ಖಿರ್ಖಿರಿಯ ರೈತರು ಹೊಟ್ಟೆಪಾಡಿಗಾಗಿ ಹಾಲು ಮಾರಾಟದ ಮೊರೆ ಹೋಗಿದ್ದಾರೆ. ಆದರೆ ಹವಾಮಾನ ಬದಲಾವಣೆಯಿಂದಾಗಿ ಜಾನುವಾರುಗಳ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗಿ, ಅವು ಬೇರೆ ಬೇರೆ ಖಾಯಿಲೆಗಳಿಗೆ ಬಲಿಯಾಗುತ್ತಿವೆ. ಕಳೆದ 5-10 ದಿನಗಳಿಂದ ತಮ್ಮ ಹಸು ಸರಿಯಾಗಿ ಮೇವನ್ನೂ ತಿಂದಿಲ್ಲ ಎಂದು ಚತ್ರಾ ದೇವಿ ಹೇಳುತ್ತಾರೆ.
ಖಿರ್ಖಿರಿಯಲ್ಲಿರುವ ಮಹಾತ್ಮ ಗಾಂಧಿ ಹಿರಿಯ ಮಾಧ್ಯಮಿಕ ಶಾಲೆಯ ಶಿಕ್ಷಕ ಅನೂಪ್ ಸಿಂಗ್ ಮೀನಾ (48) ಊರಿನ ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. “ನನ್ನ ಊರಿನ ಭವಿಷ್ಯವನ್ನು ನೆನೆದಾಗ, ಮಾನ್ಸೂನ್ ಅನ್ನು ಅವಲಂಬಿಸಿರುವ ಕೃಷಿಯಲ್ಲಿ ಬಹಳಷ್ಟು ಬದಲಾವಣೆಗಳು ಮುಂದೆ ಘಟಿಸುವಂತೆ ತೋರುತ್ತದೆ. ಭವಿಷ್ಯದ ತುಂಬಾ ಕತ್ತಲೆ ಕವಿದಂತೆ ನನಗೆ ಕಾಣುತ್ತದೆ,” ಎಂದು ಅನೂಪ್ ಸಿಂಗ್ ಹೇಳುತ್ತಾರೆ.
ಖಿರ್ಖಿರಿಯ ಮೇಲಿನ ಈ ಚಲನಚಿತ್ರವು ಭೂಮಿಯನ್ನೇ ನಂಬಿ ಬದುಕುವವರ ಕಥೆಯನ್ನು ಹೇಳುತ್ತದೆ ಮತ್ತು ಅಸ್ಥಿರ ಹವಾಮಾನದಿಂದಾಗಿ ಅವರು ಎದುರಿಸುತ್ತಿರುವ ಸವಾಲುಗಳನ್ನು ವೀಕ್ಷಕರ ಮುಂದಿಡುತ್ತದೆ.
ಕನ್ನಡ ಅನುವಾದ: ಚರಣ್ ಐವರ್ನಾಡು