ಅವರ ಜನಪ್ರಿಯ ಹೆಸರು 'ವಿರಾಟ್ ಕೊಹ್ಲಿ'. ಈ ಭಾರತದ ಕ್ರಿಕೆಟ್ ಐಕಾನ್ ಡುಂಗ್ರಾ ಛೋಟಾದಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.

ಅದು ಚಳಿಗಾಲದ ಬೆಳಿಗ್ಗೆ 10 ಗಂಟೆಯ ಹೊತ್ತು. ಅಲ್ಲಿ ಸುಮಾರು ಹನ್ನೆರಡು ಅಥವಾ ಅದಕ್ಕಿಂತಲೂ ಹೆಚ್ಚು ಪುಟ್ಟ ಮಕ್ಕಳು ಆಟದಲ್ಲಿ ಮುಳುಗಿದ್ದರು. ಸುತ್ತಲೂ ಹಚ್ಚ ಹಸಿರು ಜೋಳದ ಹೊಲದಿಂದ ಸುತ್ತುವರೆದ ಮೈದಾನವು ನಿಮಗೆ ಕ್ರಿಕೆಟ್‌ ಮೈದಾನದಂತೆ ಕಾಣದಿರಬಹುದು. ಆದರೆ ಬಾಣಸ್ವಾಡ ಜಿಲ್ಲೆಯ ಈ ಹಳ್ಳಿಯ ಕ್ರಿಕೆಟ್‌ ಉತ್ಸಾಹಿಗಳಿಗೆ ಅದರ ಪ್ರತಿ ಇಂಚೂ ಚಿರಪರಿಚಿತ.

ಯಾವುದೇ ಕ್ರಿಕೆಟ್‌ ಅಭಿಮಾನಿಯೊಂದಿಗೆ ಮಾತು ಆರಂಭಿಸಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಅವರ ಬಳಿ ತಮ್ಮ ನೆಚ್ಚಿನ ಆಟಗಾರರ ಬಗ್ಗೆ ಕೇಳುವುದು ಎನ್ನುವುದು ಎಲ್ಲರಿಗೂ ಗೊತ್ತು. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಹೆಸರುಗಳು ಅಲ್ಲಿ ಕೇಳಿಬಂದವು.

ಕೊನೆಯದಾಗಿ 18 ವರ್ಷದ ಶಿವಂ ಲಬಾನಾ, “ನನಗೆ ಸ್ಮೃತಿ ಮಂದಾನ ಎಂದರೆ ಇಷ್ಟ” ಎಂದು ಹೇಳಿದರು. ಎಡಗೈ ಬ್ಯಾಟರ್‌ ಮತ್ತು ಭಾರತ ಮಹಿಳಾ ಟಿ 20 ತಂಡದ ಮಾಜಿ ನಾಯಕರಾದ ಸ್ಮೃತಿ ದೇಶದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು.

ಆದರೆ ನಮಗೆ ನಂತರ ತಿಳಿದುಬಂದ ವಿಷಯವೆಂದರೆ ಈ ಮೈದಾನದಲ್ಲಿ ಫೇವರೀಟ್‌ ಎಡಗೈ ಬ್ಯಾಟರ್‌ ಆಗಿರುವವರು ಅವರು ಮಾತ್ರವಲ್ಲ ಎನ್ನುವುದು.

ಅಲ್ಲಿ ಆಡುತ್ತಿದ್ದ ಮಹತ್ವಾಕಾಂಕ್ಷೆಯ ಬೌಲರುಗಳು ಮತ್ತು ಬ್ಯಾಟರ್‌ಗಳ ನಡುವೆ ಇದ್ದ ಏಕೈಕ ಬಾಲಕಿ ಎದ್ದು ಕಾಣುತ್ತಿದ್ದಳು. ಕೇವಲ ಒಂಬತ್ತು ವರ್ಷದ ಅವಳ ಹೆಸರು ಹಿತಾಕ್ಷಿ ರಾಹುಲ್ ಹರ್ಕಿಶಿ. ಬಿಳಿ ಬೂಟು ಮತ್ತು ಬ್ಯಾಟಿಂಗ್‌ ಪ್ಯಾಡ್‌ ಧರಿಸಿದ್ದ ಅವಳು ತೊಡೆ ಮತ್ತು ಮೊಣಕೈಗಳಿಗೂ ಗಾರ್ಡ್‌ಗಳನ್ನು ಕಟ್ಟಿಕೊಂಡಿದ್ದಳು.

PHOTO • Swadesha Sharma
PHOTO • Priti David

ಹಿತಾಕ್ಷಿ ಹರ್ಕಿಶಿ ಒಂಬತ್ತು ವರ್ಷದ ಕ್ರಿಕೆಟ್‌ ಆಟಗಾರ್ತಿ. ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಕುಶಾಲನಗರ ತಹಸಿಲ್‌ನ ಹಸಿರು ಜೋಳದ ಹೊಲಗಳ ನಡುವೆ ಇದ್ದ ಆಟದ ಮೈದಾನದಲ್ಲಿ ಅವಳು ಇತರ ಮಕ್ಕಳೊಂದಿಗೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದಳು

PHOTO • Swadesha Sharma

ಮಾತನಾಡುವ ವಿಷಯದಲ್ಲಿ ಅಷ್ಟೊಂದು ಆಸಕ್ತಿ ಹೊಂದಿಲ್ಲದ ಹಿತಾಕ್ಷಿ ಕ್ರೀಸ್ ನಲ್ಲಿ ನಿಂತು ತನ್ನ ಆಟವನ್ನು ಪ್ರದರ್ಶಿಸಲು ಸಜ್ಜಾಗಿದ್ದಾಳೆ!

“ನಾನು ಬ್ಯಾಟ್ಸ್‌ಮನ್‌ ಆಗಬೇಕು. ಮೇರೇ ಕೊ ಸಬ್ಸೇ ಅಚ್ಚಿ ಲಗ್ತಿ ಹೈ ಬ್ಯಾಟಿಂಗ್‌ [ನನಗೆ ಬ್ಯಾಟಿಂಗ್‌ ಅಂದ್ರೆ ಇಷ್ಟ]” ಎಂದು ಅವಳು ಪರಿಗೆ ತಿಳಿಸಿದಳು. “ಮೇ ಇಂಡಿಯಾ ಕೇಲಿಯೆ ಖೇಲ್ನಾ ಚಾಹೂಂಗಿ [ನಾನು ಭಾರತದ ಪರವಾಗಿ ಆಡಲು ಬಯಸುತ್ತೇನೆ” ಎಂದು ಘೋಷಿಸಿದಳು. ಮಾತಿನಲ್ಲಿ ಅಷ್ಟೊಂದು ಆಸಕ್ತಿ ಹೊಂದಿರದ ಹಿತಾಕ್ಷಿ ಕ್ರೀಸ್‌ ಬಳಿ ನಿಂತು ತನ್ನ ಆಟವನ್ನು ತೋರಿಸಲು ಉತ್ಸುಕಳಾಗಿದ್ದಳು. ಗಟ್ಟಿಯಾದ ಪಿಚ್‌ ಮೇಲೆ ನಡೆದ ಅವಳು ಕಬ್ಬಿಣದ ಜಾಲರಿ ಬೇಲಿಯಿದ್ದ ಆವರಣದೊಳಗೆ ಒಂದಷ್ಟು ಚೆಂಡುಗಳನ್ನು ಹೊಡೆದಳು.

ಭಾರತಕ್ಕಾಗಿ ಆಡುವ ಹಿತಾಕ್ಷಿಯ ಹಂಬಲಕ್ಕೆ ಅವಳ ತರಬೇತುದಾರರೂ ಆಗಿರುವ ಅವಳ ತಂದೆ ಬೆಂಬಲವಾಗಿ ನಿಂತಿದ್ದಾರೆ. ಅವಳು ತನ್ನ ದಿನಚರಿಯನ್ನು ವಿವರಿಸುತ್ತ “ಶಾಲೆಯ ನಂತರ ಮನೆಗೆ ಬಂದು ಒಂದು ಗಂಟೆ ಮಲಗುತ್ತೇನೆ. ನಂತರ ನಾನು ನಾಲ್ಕರಿಂದ ಎಂಟರವರೆಗೆ [ಸಂಜೆ] ತರಬೇತಿ ಪಡೆಯುತ್ತೇನೆ." ಇಂದಿನ ಹಾಗೆ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಬೆಳಗ್ಗೆ 7:30ರಿಂದ ಮಧ್ಯಾಹ್ನದವರೆಗೆ ತರಬೇತಿ ಪಡೆಯುತ್ತಾಳೆ.

"ನಾವು ಈಗ ಸುಮಾರು 14 ತಿಂಗಳುಗಳಿಂದ ನಿರಂತರವಾಗಿ ತರಬೇತಿ ಪಡೆಯುತ್ತಿದ್ದೇವೆ. ನಾನೂ ಅವಳೊಂದಿಗೆ ತರಬೇತಿ ಪಡೆಯಬೇಕಾಗಿದೆ" ಎಂದು ಆಕೆಯ ತಂದೆ ರಾಹುಲ್ ಹರ್ಕಿಶಿ ಜನವರಿ 2024ರಲ್ಲಿ ಪರಿಯೊಂದಿಗೆ ಮಾತನಾಡುತ್ತಾ ಹೇಳಿದರು. ಅವರು ರಾಜಸ್ಥಾನದ ಬಾಣಸ್ವಾಡ ಜಿಲ್ಲೆಯ ಡುಂಗ್ರಾ ಬಡಾದಲ್ಲಿ ಗ್ಯಾರೇಜ್ ನಡೆಸುತ್ತಿದ್ದಾರೆ. ಅವರು ತಮ್ಮ ಮಗಳ ಸಾಮರ್ಥ್ಯಗಳ ಬಗ್ಗೆ ಹೆಮ್ಮೆ ಮತ್ತು ವಿಶ್ವಾಸವನ್ನು ಹೊಂದಿದ್ದಾರೆ. "ಶಾಂದಾರ್ ಪ್ಲೇಯಿಂಗ್‌ ಹೈ [ಅವಳು ನಿಜವಾಗಿಯೂ ಚೆನ್ನಾಗಿ ಆಡುತ್ತಾಳೆ]. ಒಬ್ಬ ತಂದೆಯಾಗಿ ನಾನು ಅವಳೊಂದಿಗೆ ಕಟ್ಟುನಿಟ್ಟಾಗಿರಬಾರದು ಆದರೆ ಇರಲೇಬೇಕಾಗಿದೆ.

ಹಿತಾಕ್ಷಿ ಬ್ಯಾಟ್ ಮಾಡುವುದನ್ನು ವೀಕ್ಷಿಸಿ

'ಶಾಂದಾರ್ ಪ್ಲೇಯಿಂಗ್‌ ಹೈ [ಅವಳು ನಿಜವಾಗಿಯೂ ಚೆನ್ನಾಗಿ ಆಡುತ್ತಾಳೆ]' ಎಂದು ಆಕೆಯ ತಂದೆ ರಾಹುಲ್ ಹರ್ಕಿಶಿ ಹೇಳುತ್ತಾರೆ, ಒಂದು ಕಾಲದಲ್ಲಿ ಅವರು ಸ್ವತಃ ಕ್ರಿಕೆಟಿಗರಾಗಿದ್ದರು ಮತ್ತು ಈಗ ಹಿತಾಕ್ಷಿಯ ತರಬೇತುದಾರನಾಗಿ ತರಬೇತಿ ನೀಡುತ್ತಿದ್ದಾರೆ

ಹಿತಾಕ್ಷಿಯ ಪೋಷಕರು ಅವಳಿಗೆ ಪೋಷಕ ಆಹಾರವನ್ನು ಸಹ ತಪ್ಪದೆ ನೀಡುತ್ತಿದ್ದಾರೆ. “ವಾರದಲ್ಲಿ ನಾಲ್ಕು ಬಾರಿ ಮೊಟ್ಟೆ ಕೊಡುತ್ತೇವೆ, ಜೊತೆಗೆ ಸ್ವಲ್ಪ ಮಾಂಸವನ್ನು ಸಹ ಕೊಡುತ್ತೇವೆ” ಎಂದು ರಾಹುಲ್‌ ಹೇಳುತ್ತಾರೆ. “ಅವಳು ಪ್ರತಿದಿನ ಎರಡು ಲೋಟ ಹಾಲು ಕುಡಿಯುವುದರ ಜೊತೆಗೆ ಸೌತೆಕಾಯಿ ಹಾಗೂ ಕ್ಯಾರೆಟ್‌ ಕೂಡಾ ತಿನ್ನುತ್ತಾಳೆ.”

ಅವರ ಪ್ರಯತ್ನ ಹಿತಾಕ್ಷಿಯ ಆಟದಲ್ಲಿ ಕಾಣುತ್ತದೆ. ಜಿಲ್ಲಾ ಮಟ್ಟದಲ್ಲಿ ಆಡಿದ ಡುಂಗ್ರಾ ಛೋಟಾದ ಇಬ್ಬರು ಹುಡುಗರಾದ ಶಿವಂ ಲಬಾನಾ (18) ಮತ್ತು ಆಶಿಶ್ ಲಬಾನಾ (15) ಅವರಂತಹ ಹಿರಿಯ ಆಟಗಾರರೊಂದಿಗೆ ಅವಳು ಸಲೀಸಾಗಿ ಪ್ರಾಕ್ಟೀಸ್‌ ಮಾಡುತ್ತಾಳೆ. ಈ ಇಬ್ಬರೂ ಬೌಲರ್‌ಗಳು ಲಬಾನಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ಸೇರಿದಂತೆ 4-5 ವರ್ಷಗಳಿಂದ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಎಲ್‌ಪಿಎಲ್‌ ಪಂದ್ಯಾಟದಲ್ಲಿ ಲಬಾನಾ ಸಮುದಾಯದ 60ಕ್ಕೂ ಹೆಚ್ಚು ತಂಡಗಳು ಸ್ಪರ್ಧಿಸುತ್ತವೆ.

"ನಾವು ಮೊದಲ ಬಾರಿಗೆಎಲ್‌ಪಿಎಲ್‌ ಪಂದ್ಯಾಟದಲ್ಲಿ ಭಾಗವಹಿಸಿದಾಗ, ನಾವು ಹುಡುಗರಷ್ಟೇ ಇದ್ದೆವು. ಆಗ ನಮಗೆ ರಾಹುಲ್ ಭಯ್ಯ (ಹಿತಾಕ್ಷಿಯ ತಂದೆ) ತರಬೇತುದಾರರಾಗಿರಲಿಲ್ಲ" ಎಂದು ಶಿವಮ್ ಹೇಳುತ್ತಾರೆ. "ನಾನು ಒಂದು ಪಂದ್ಯದಲ್ಲಿ ಐದು ವಿಕೆಟ್ ಪಡೆದಿದ್ದೇನೆ."

ಪ್ರಸ್ತುತ ಅವರು ರಾಹುಲ್ ಸ್ಥಾಪಿಸಿದ ಹಿತಾಕ್ಷಿ ಕ್ಲಬ್‌ಗಾಗಿಯೂ ಆಡುತ್ತಾರೆ. "ನಾವು ಅವಳಿಗೆ [ಹಿತಾಕ್ಷಿ] ತರಬೇತಿ ನೀಡುತ್ತಿದ್ದೇವೆ" ಎಂದು ಶಿವಮ್ ಹೇಳುತ್ತಾರೆ. "ಅವಳು ನಮ್ಮ ತಂಡಕ್ಕೆ ಪಾದಾರ್ಪಣೆ ಮಾಡಬೇಕೆಂದು ನಾವು ಬಯಸುತ್ತೇವೆ. ನಮ್ಮ ಸಮುದಾಯದ ಹುಡುಗಿಯರು [ಕ್ರಿಕೆಟ್] ಆಡುವುದಿಲ್ಲ, ಹೀಗಾಗಿ ಅವಳು ಬಂದರೆ ಒಳ್ಳೆಯದು ಎನ್ನುವುದು ನಮ್ಮ ಅಭಿಪ್ರಾಯ.”

PHOTO • Swadesha Sharma
PHOTO • Swadesha Sharma

ಹಿತಾಕ್ಷಿ 18 ವರ್ಷದ ಬೌಲರ್ ಶಿವಂ ಲಬಾನಾ (ಎಡ) ಅವರೊಂದಿಗೂ ಆಡುತ್ತಾಳೆ. ಆಶಿಶ್ ಲಬಾನಾ (ಬಲ) ಜಿಲ್ಲಾ ಮಟ್ಟದಲ್ಲಿ ಆಡಿದ್ದಾರೆ ಮತ್ತು ರಾಹುಲ್ ಮತ್ತು ಹಿತಾಕ್ಷಿ ಅವರೊಂದಿಗೆ ತರಬೇತಿ ಪಡೆದಿದ್ದಾರೆ

PHOTO • Swadesha Sharma

ಹಿತಾಕ್ಷಿ ಪ್ರತಿದಿನ ಶಾಲೆಯ ನಂತರ ಮತ್ತು ವಾರಾಂತ್ಯದಲ್ಲಿ ಬೆಳಿಗ್ಗೆ ತರಬೇತಿ ಪಡೆಯುತ್ತಾಳೆ

ಅದೃಷ್ಟವಶಾತ್, ಹಿತಾಕ್ಷಿಯ ಪೋಷಕರೂ ಅವಳಿಗಾಗಿ ಕನಸು ಕಾಣುತ್ತಿದ್ದಾರೆ. ಅವರ ತಂಡದ ಯುವ ಸದಸ್ಯರೊಬ್ಬರು ಹೇಳುವಂತೆ, “ಉನ್ಕಾ ಡ್ರೀಮ್‌ ಹೈ ಉಸ್ಕೋ ಆಗೇ ಬೇಜೆಂಗೆ [ಅವಳನ್ನು ಮುಂದಕ್ಕೆ ತರಬೇಕು ಎನ್ನುವುದು ಅವರ ಕನಸು].”

ಕ್ರೀಡೆಯ ಜನಪ್ರಿಯತೆಯ ಹೊರತಾಗಿಯೂ, ಕುಟುಂಬಗಳು ತಮ್ಮ ಮಕ್ಕಳನ್ನು ಕ್ರಿಕೆಟಿನಲ್ಲಿ ಮುಂದುವರಿಯಲು ಬಿಡಲು ಹಿಂಜರಿಯುತ್ತವೆ. ಶಿವಮ್ 15 ವರ್ಷದ ಸಹ ಆಟಗಾರನ ಇದೇ ರೀತಿಯ ಪರಿಸ್ಥಿತಿಯನ್ನು ಉಲ್ಲೇಖಿಸುತ್ತಾರೆ, "ಅವನು ರಾಜ್ಯ ಮಟ್ಟದಲ್ಲಿ ಅನೇಕ ಬಾರಿ ಆಡಿದ್ದಾನೆ ಮತ್ತು ಅದರಲ್ಲೇ ಮುಂದುವರಿಯಲು ಬಯಸುತ್ತಾನೆ. ಆದರೆ ಈಗ ಅವನು ಕ್ರಿಕೆಟ್‌ ತೊರೆಯುವ ಕುರಿತು ಯೋಚಿಸುತ್ತಿದ್ದಾನೆ. ಬಹುಶಃ ಅವನ ಕುಟುಂಬ ಅವನನ್ನು ಕೋಟಾಕ್ಕೆ ಕಳುಹಿಸಲಿದೆ.” ಕೋಚಿಂಗ್‌ ತರಗತಿಗಳಿಗೆ ಖ್ಯಾತವಾಗಿರುವ ಕೋಟಾಕ್ಕೆ ಹೋಗುವುದೆಂದರೆ ಕ್ರಿಕೆಟ್‌ ತೊರೆದು ಉನ್ನತ ಶಿಕ್ಷಣದ ಕಡೆಗೆ ಗಮನ ಕೊಡುವುದು ಎಂದರ್ಥ.

ಹಿತಾಕ್ಷಿಯ ತಾಯಿ ಶೀಲಾ ಹರ್ಕಿಶಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕಿ. ಅವರು ಕೂಡ ತಮ್ಮ ಕುಟುಂಬದ ಇತರರಂತೆ ದೊಡ್ಡ ಕ್ರಿಕೆಟ್ ಅಭಿಮಾನಿ. "ಭಾರತೀಯ ತಂಡದ ಪ್ರತಿಯೊಬ್ಬ ಆಟಗಾರನ ಹೆಸರು ನನಗೆ ಗೊತ್ತು ಮತ್ತು ನಾನು ಅವರೆಲ್ಲರನ್ನೂ ಗುರುತಿಸಬಲ್ಲೆ. ನನಗೆ ರೋಹಿತ್ ಶರ್ಮಾ ಹೆಚ್ಚು ಇಷ್ಟ" ಎಂದು ಅವರು ಮುಗುಳ್ನಗೆಯೊಂದಿಗೆ ಹೇಳುತ್ತಾರೆ.

PHOTO • Swadesha Sharma
PHOTO • Priti David

ಹಿತಾಕ್ಷಿಯ ಪೋಷಕರು ಮಗಳಿಗೆ ಬಹಳ ಬೆಂಬಲ ನೀಡುತ್ತಾರೆ. ರಾಹುಲ್ ಹರ್ಕಿಶಿ (ಎಡ) ಹವ್ಯಾಸಿ ಕ್ರಿಕೆಟ್ ಆಟಗಾರನಾಗಿದ್ದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಶೀಲಾ ಹರ್ಕಿಶಿ (ಬಲ) ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಿಂದ ಬಿಡುವು ದೊರೆತಾಗ ಕುಟುಂಬದ ಗ್ಯಾರೇಜ್ ನೋಡಿಕೊಳ್ಳುತ್ತಾರೆ

ಶಿಕ್ಷಕ ವೃತ್ತಿಯಿಂದ ಬಿಡುವು ದೊರೆತಾಗ ಅವರು ತಮ್ಮ ಗ್ಯಾರೇಜನ್ನು ಸಹ ನೋಡಿಕೊಳ್ಳುತ್ತಾರೆ. ಅನವು ಅವರನ್ನು ಅಲಲೇ ಭೇಟಿಯಾದೆವು. “ಪ್ರಸ್ತುತ ರಾಜಸ್ಥಾನದಿಂದ ಹೆಚ್ಚು ಹೆಣ್ಣುಮಕ್ಕಳು ಆಡುತ್ತಿಲ್ಲ. ನಾವು ನಮ್ಮ ಮಗಳನ್ನು ಕಳುಹಿಸಲು ಒಂದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಮುಂದೆಯೂ ಮಾಡುತ್ತೇವೆ.”

ಒಂಬತ್ತು ವರ್ಷದ ಹಿತಾಕ್ಷಿ ನಡೆಯಬೇಕಾದ ದೂರ ಬಹಳಷ್ಟಿದೆ ಆದರೆ ಅವಳ ಪೋಷಕರು "ಅವಳನ್ನು ನುರಿತ ಕ್ರಿಕೆಟಿಗಳನ್ನಾಗಿ ಮಾಡಲು ಅಗತ್ಯವಿರುವ ಎಲ್ಲವನ್ನೂ ಮಾಡಲು" ನಿರ್ಧರಿಸಿದ್ದಾರೆ.

“ಭವಿಷ್ಯದ ಬಗ್ಗೆ ಗೊತ್ತಿಲ್ಲ. ಆದರೆ ಒಬ್ಬ ತಂದೆಯಾಗಿ ಮತ್ತು ಉತ್ತಮ ಕ್ರೀಡಾಪಟುವಾಗಿ ನಾವು ಅವಳನ್ನು ಭಾರತದ ಪರವಾಗಿ ಆಡುವಂತೆ ತಯಾರು ಮಾಡುತ್ತೇವೆ ಎನ್ನುವುದನ್ನು ಖಚಿತವಾಗಿ ಹೇಳಬಲ್ಲೆ.”

ಅನುವಾದ: ಶಂಕರ. ಎನ್. ಕೆಂಚನೂರು

Swadesha Sharma

Swadesha Sharma is a researcher and Content Editor at the People's Archive of Rural India. She also works with volunteers to curate resources for the PARI Library.

Other stories by Swadesha Sharma
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru