2024ರ ಫೆವ್ರವರಿ 18ರ ಮಧ್ಯಾಹ್ನ 3 ಗಂಟೆಯ ಬಿಸಿಲಿನಲ್ಲಿ ಸುಮಾರು 400 ಮಂದಿ ವರ್ಣರಂಜಿತ ಉಡುಪುಗಳನ್ನು ಧರಿಸಿದ್ದ ಸಹಮನಸ್ಕರು ನಗರದ ಎರಡನೇ ಪ್ರೈಡ್‌ ಮೆರವಣಿಗೆಯ ಆಚರಣೆ ಸಲುವಾಗಿ ಸಬರ್‌ನಿಂದ ಮೈಸೂರು ಪುರಭವನದ ಕಡೆ ಮೆರವಣಿಗೆ ನಡೆಸಿದರು.

“ಈ ಮೆರವಣಿಗೆಯಲ್ಲಿ ಹೆಮ್ಮೆಯಿಂದ ಭಾಗವಹಿಸುತ್ತಿದ್ದೇನೆ. ಮೈಸೂರು ಈಗ ಬದಲಾಗಿದೆ” ಎಂದು ಇದೇ ನಗರದಲ್ಲಿ ಹುಟ್ಟಿ ಬೆಳೆದ ಶೇಕ್‌ಝಾರಾ ಹೇಳಿದರು. “ನಾನು ಕಳೆದ 5-6 ವರ್ಷಗಳಿಂದ ಕ್ರಾಸ್ ಡ್ರೆಸ್ಸಿಂಗ್ ಮಾಡುತ್ತಿದ್ದೇನೆ. ಆದರೆ ಜನರು, ʼಈ ಹುಡುಗ ಏಕೆ ಹುಡುಗನಂತೆ ಡ್ರೆಸ್‌ ಮಾಡುತ್ತಾನೆʼ ಎಂದು ನನ್ನ ಕುರಿತು ಕೊಂಕು ನುಡಿಯುತ್ತಿದ್ದರು. ಆದರೆ ಈಗ ಅವರು ಹೆಚ್ಚು ಹೆಚ್ಚು ನಾನು ಇರುವಂತೆ ನನ್ನನ್ನು ಒಪ್ಪಿಕೊಳ್ಳುತ್ತಿದ್ದಾರೆ. ನನಗೆ ನನ್ನ ಗುರುತಿನ ಕುರಿತು ಹೆಮ್ಮೆಯಿದೆ” ಎಂದು ಪ್ರಸ್ತುತ ಬೆಂಗಳೂರಿನ ಕಾಲ್‌ ಸೆಂಟರ್‌ ಒಂದರಲ್ಲಿ ಕೆಲಸ ಮಾಡುತ್ತಿರುವ 24 ವರ್ಷದ ಅವರು ಹೇಳುತ್ತಾರೆ. ಶೇಕ್‌ಝಾರಾ ಅವರಂತೆಯೇ ಕರ್ನಾಟಕ, ಗೋವಾ, ಮತ್ತು ತಮಿಳುನಾಡಿನಿಂದಲೂ ಅನೇಕರು ಮೆರವಣಿಗೆಗೆ ತಮ್ಮ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಬಂದಿದ್ದರು.

ಯಲ್ಲಮ್ಮ ದೇವಿಯ (ರೇಣುಕಾ ಎಂದೂ ಕರೆಯುತ್ತಾರೆ) ಚಿನ್ನದ ಪ್ರತಿಮೆಯು ಆಚರಣೆಯ ಪ್ರಮುಖ ಆಕರ್ಷಣೆಯಾಗಿತ್ತು. ಸುಮಾರು 10 ಕಿಲೋಗ್ರಾಂಗಳಷ್ಟು ತೂಕದ ಈ ಪ್ರತಿಮೆಯನ್ನು ಮೆರವಣಿಗೆಯಲ್ಲಿದ್ದವರು ತಮ್ಮ ತಲೆಯ ಮೇಲೆ ಹೊತ್ತುಕೊಂಡು ತಮಟೆ ಬಾರಿಸುವವರು ಹಾಗು ಕುಣಿಯುವರೊಡನೆ ಹೆಜ್ಜೆ ಹಾಕಿದರು.

PHOTO • Sweta Daga
PHOTO • Sweta Daga

ಎಡ: ಸಕೀನಾ (ಎಡ) ಮತ್ತು ಕುನಾಲ್ (ಬಲ) ಅವರೊಂದಿಗೆ ಪ್ರೈಡ್ ಮೆರವಣಿಗೆಯನ್ನು ಆಚರಿಸುತ್ತಿರುವ ಶೇಕ್‌ಝಾರಾ (ಮಧ್ಯ). ʼ ಈ ಮೆರವಣಿಗೆಯಲ್ಲಿ ಭಾಗವಹಿಸಲು ಹೆಮ್ಮೆಯೆನ್ನಿಸುತ್ತದೆ. ಮೈಸೂರು ಬದಲಾಗಿದೆ ʼ ಎನ್ನುತ್ತಾರೆ ಶೇಕ್‌ಝಾರಾ . ಬಲ: ಫೆಬ್ರವರಿ 18, 2024 ರಂದು ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗರಗ್ ಎನ್ನುವ ಊರಿನ ವಿದ್ಯಾರ್ಥಿ ತಿಪ್ಪೇಶ್ ಆರ್

PHOTO • Sweta Daga

ಮೆರವಣಿಗೆಯಲ್ಲಿ ಸುಮಾರು 10 ಕಿಲೋಗ್ರಾಂ ತೂಕದ ಯಲ್ಲಮ್ಮ ದೇವಿಯ ಚಿನ್ನದ ವಿಗ್ರಹವನ್ನು ತಲೆಯ ಮೇಲೆ ಹೊತ್ತು ನಡೆಯಲಾಯಿತು

ಟ್ರಾನ್ಸ್ ಸಮುದಾಯದೊಂದಿಗೆ ಕೆಲಸ ಮಾಡುವ ನಮ್ಮ ಪ್ರೈಡ್ ಮತ್ತು ಸೆವೆನ್ ರೇನ್‌ಬೋಸ್ ಸಂಸ್ಥೆಗಳ ಬೆಂಬಲದೊಂದಿಗೆ ಈ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಇದು ನಮ್ಮ ಎರಡನೇ ವರ್ಷದ ಮೆರವಣಿಗೆಯಾಗಿದ್ದು ನಾವು ಒಂದೇ ದಿನದಲ್ಲಿ ಪೊಲೀಸ್ ಅನುಮತಿಯನ್ನು ಪಡೆದೆವು [ಆದರೆ] ಕಳೆದ ವರ್ಷ ಅದು ನಮಗೆ ಅನುಮತಿ ಪಡೆಯಲು ಎರಡು ವಾರ ಹಿಡಿದಿತ್ತು" ಎಂದು ಪ್ರಣತಿ ಅಮ್ಮ ಹೇಳುತ್ತಾರೆ. ಅವರು ಸೆವೆನ್ ರೇನ್‌ಬೋಸ್‌ ಸಂಸ್ಥೆಯ ಸ್ಥಾಪಕರು ಮತ್ತು ಲಿಂಗತ್ವ ಮತ್ತು ಲೈಂಗಿಕತೆಯ ವಿಷಯಗಳ ಬಗ್ಗೆ ಭಾರತದಾದ್ಯಂತ 37 ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ್ದಾರೆ.

“ನಾವು ಪೊಲೀಸರೊಂದಿಗಿನ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ. ಮೈಸೂರಿನಲ್ಲಿ ಈಗಲೂ ನಮ್ಮನ್ನು ಒಪ್ಪದ ಹಾಗೂ ನಮ್ಮನ್ನು ಇಲ್ಲಿಂದ ಓಡಿಸಲು ಬಯಸುವ ಜನರಿದ್ದಾರೆ. ಆದರೆ ನಾವು ಇದನ್ನು [ಪ್ರೈಡ್‌ ಮಾರ್ಚ್]‌ ಪ್ರತಿವರ್ಷ ಇನ್ನಷ್ಟು ದೊಡ್ಡದಾಗಿ ಮತ್ತು ಹೆಚ್ಚು ವೈವಿಧ್ಯಮಯವಾಗಿ ಆಚರಿಸುವ ಉದ್ದೇಶವನ್ನು ಹೊಂದಿದ್ದೇವೆ” ಎಂದು ಅವರು ಹೇಳುತ್ತಾರೆ.

ಕಿಲೋಮೀಟರ್ ಉದ್ದದ ಮೆರವಣಿಗೆಯು ನಗರದ ಅತ್ಯಂತ ಜನನಿಬಿಡ ಮಾರುಕಟ್ಟೆ ಪ್ರದೇಶಗಳ ಮೂಲಕ ಸಾಗಿತು. ಸ್ಥಳೀಯ ಪೊಲೀಸರು ಸಂಚಾರವನ್ನು ತೆರವುಗೊಳಿಸಲು ಸಕ್ರಿಯವಾಗಿ ಸಹಾಯ ಮಾಡುವ ಮೂಲಕ ಆಚರಣೆ ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟರು. "ನಾವು ಈ ಸಮುದಾಯವನ್ನು ಗೌರವಿಸುತ್ತೇವೆ. ಇಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಾವು ಅವರೊಂದಿಗೆ ನಡೆಯುತ್ತೇವೆ. ನಾವು ಈ [ಟ್ರಾನ್ಸ್‌ಜೆಂಡರ್] ಜನರನ್ನು ಬೆಂಬಲಿಸುತ್ತೇವೆ" ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ವಿಜಯೇಂದ್ರ ಸಿಂಗ್ ಹೇಳಿದರು.

"ಟ್ರಾನ್ಸ್‌ಜೆಂಡರ್ ಮಹಿಳೆಯರು ಭಾರತದಲ್ಲಿ ಸಂಕೀರ್ಣ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ. ಮಾಂತ್ರಿಕ ಶಕ್ತಿಗಳ ಸುತ್ತಲಿನ ಮಿಥ್ಯೆಗಳಿಂದಾಗಿ ಅವರಿಗೆ ಒಂದಷ್ಟು ಸಾಂಸ್ಕೃತಿಕ ರಕ್ಷಣೆ ದೊರಕುತ್ತಿದೆಯಾದರೂ, ಅವರು ತಾರತಮ್ಯ ಮತ್ತು ಕಿರುಕುಳಕ್ಕೆ ಒಳಗಾಗುತ್ತಾರೆ" ಎಂದು ಮಾನಸಿಕ ಆರೋಗ್ಯ ವೃತ್ತಿಪರರಾದ ದೀಪಕ್ ಧನಂಜಯ ಹೇಳುತ್ತಾರೆ. "ಸ್ಥಳೀಯ ಸಮುದಾಯವು ಜನರಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಜನರ ಮನಸ್ಥಿತಿಯನ್ನು ಬದಲಾಯಿಸುವುದು ರಾತ್ರೋರಾತ್ರಿ ಆಗುವ ಕೆಲಸವಲ್ಲ, ಆದರೆ ಈ ಮೆರವಣಿಗೆಗಳು, ವಿಶೇಷವಾಗಿ ಸಣ್ಣ ನಗರಗಳಲ್ಲಿ, ಹಿಂಸಾಚಾರವಿಲ್ಲದೆ ನಡೆಯುವದನ್ನು ನೋಡಿದಾಗ, ನನಗೆ ಭರವಸೆ ಮೂಡುತ್ತದೆ" ಎಂದು ಅವರು ಹೇಳುತ್ತಾರೆ.

ಪ್ರೈಡ್ ಮೆರವಣಿಗೆಯಲ್ಲಿ ಭಾಗವಹಿಸಿದ 31 ವರ್ಷದ ಪ್ರಿಯಾಂಕ್ ಆಶಾ ಸುಕಾನಂದ್, "ವಿಶ್ವವಿದ್ಯಾಲಯದಲ್ಲಿದ್ದಾಗ ತಾರತಮ್ಯ ಮತ್ತು ನಿಂದನೆಯನ್ನು ಎದುರಿಸಿದೆ. ಆದರೆ ನಾನು ನನ್ನ ಹಕ್ಕುಗಳನ್ನು ದೃಢೀಕರಿಸಲು ಮತ್ತು ಅವುಗಳನ್ನು ಪ್ರತಿಪಾದಿಸಲು ನಿರ್ಧರಿಸಿದೆ. ನಾನು ನಡೆಯುವ ಪ್ರತಿಯೊಂದು ಪ್ರೈಡ್‌ ಮೆರವಣಿಗೆಯೂ ನನ್ನಂತಹವರು ಎದುರಿಸುತ್ತಿರುವ ಎಲ್ಲಾ ಬಗೆಯ ಹೋರಾಟಗಳನ್ನು ನೆನಪಿಸುತ್ತದೆ, ಆದ್ದರಿಂದ ನಾನು ಅವರುಗಳ ಸಲುವಾಗಿ ಈ ಮೆರವಣಿಗೆಯಲ್ಲಿ ನಡೆಯುತ್ತೇನೆ." ಬೆಂಗಳೂರು ಮೂಲದ ವಿಶೇಷ ಶಿಕ್ಷಕ ಮತ್ತು ಬಾಣಸಿಗರಾದ ಅವರು, "ಮೈಸೂರಿನ ಎಲ್‌ಜಿಬಿಟಿ ಸಮುದಾಯದ ನಿಜವಾದ ಶಕ್ತಿಯನ್ನು ನಾವು ನೋಡಿದ್ದೇವೆ ಮತ್ತು ಅದು ಬಹಳಷ್ಟು ಭರವಸೆ ನೀಡಿತು" ಎಂದು ಹೇಳಿದರು.

PHOTO • Sweta Daga

ಟ್ರಾನ್ಸ್‌ಜೆಂಡರ್ ಧ್ವಜವನ್ನು ಬೀಸುತ್ತಾ, ನಂದಿನಿ "ನಾನು ಬೆಂಗಳೂರಿನಿಂದ ಬಂದಿದ್ದೇನೆ ಏಕೆಂದರೆ ಸಾಧ್ಯವಿರುವಲ್ಲೆಲ್ಲ ನಮ್ಮ ಇರುವಿಕೆಯನ್ನು ತೋರಿಸಬೇಕಾದ್ದು ಬಹಳ ಮುಖ್ಯ ಎನ್ನುವುದು ನನ್ನ ಭಾವನೆ. ಮತ್ತು ಇದರಲ್ಲಿ ಭಾಗವಹಿಸುವುದರಿಂದ ವೈಯಕ್ತಿಕವಾಗಿಯೂ ಖುಷಿ ಸಿಗುತ್ತದೆ'

PHOTO • Sweta Daga

ಸ್ಥಳೀಯ ಪೊಲೀಸರು ಸಂಚಾರವನ್ನು ತೆರವುಗೊಳಿಸಲು ಸಕ್ರಿಯವಾಗಿ ಸಹಾಯ ಮಾಡುವ ಮೂಲಕ ಆಚರಣೆ ಸುಗಮವಾಗಿ ನಡೆಯಲು ಅನುವು ಮಾಡಿಕೊಟ್ಟರು. "ನಾವು ಈ ಸಮುದಾಯವನ್ನು ಗೌರವಿಸುತ್ತೇವೆ. ಇಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಾವು ಅವರೊಂದಿಗೆ ನಡೆಯುತ್ತೇವೆ. ನಾವು ಈ [ಟ್ರಾನ್ಸ್‌ಜೆಂಡರ್] ಜನರನ್ನು ಬೆಂಬಲಿಸುತ್ತೇವೆ" ಎಂದು ಸಹಾಯಕ ಸಬ್ ಇನ್ಸ್ಪೆಕ್ಟರ್ ವಿಜಯೇಂದ್ರ ಸಿಂಗ್ ಹೇಳಿದರು

PHOTO • Sweta Daga

ನಮ್ಮ ಪ್ರೈಡ್‌ ಮತ್ತು ಸೆವೆನ್‌ ರೈನ್‌ಬೋಸ್‌ ಆಯೋಜಿಸಿದ್ದ ಈ ಮೆರವಣಿಗೆ ಸಮುದಾಯದ ಜನರು ಸೇರಿದಂತೆ, ಮಿತ್ರರು ಹಾಗೂ ಸಾರ್ವಜನಿಕರಿಗೂ ತೆರೆದಿತ್ತು

PHOTO • Sweta Daga

ನಗರದ ಆಟೋ ಚಾಲಕ ಅಜರ್ (ಎಡ) ಮತ್ತು ಮಾನಸಿಕ ಆರೋಗ್ಯ ವೃತ್ತಿಪರ ದೀಪಕ್ ಧನಂಜಯ ಅವರು ಕ್ವೀರ್ ವ್ಯಕ್ತಿ ಗಳಾಗಿ ಗುರುತಿಸಿಕೊಳ್ಳುತ್ತಾರೆ. ' ನಾನು ಈ ಮೊದಲು ಇಂತಹದ್ದನ್ನು ನೋಡಿಲ್ಲ ' ಎಂದು ಅಜರ್ ಹೇಳುತ್ತಾರೆ

PHOTO • Sweta Daga

ಎಡದಿಂದ ಬಲಕ್ಕೆ: ಪ್ರಿಯಾಂಕ್, ದೀಪಕ್, ಜಮೀಲ್, ಆದಿಲ್ ಪಾಷಾ ಮತ್ತು ಅಕ್ರಮ್ ಜಾನ್. ಜಮೀಲ್, ಆದಿಲ್ ಪಾಷಾ ಮತ್ತು ಅಕ್ರಂ ಜಾನ್ ಸ್ಥಳೀಯ ವ್ಯಾಪಾರಿಗಳಾಗಿದ್ದು, ಈ ಪ್ರದೇಶದಲ್ಲಿ ಬಟ್ಟೆ ಅಂಗಡಿಗಳನ್ನು ನಡೆಸುತ್ತಿದ್ದಾರೆ. 'ನಾವು ಅವರನ್ನು (ತೃತೀಯ ಲಿಂಗಿಗಳನ್ನು) ನಿಜವಾಗಿಯೂ ಅರ್ಥಮಾಡಿಕೊಳ್ಳುವುದಿಲ್ಲ, ಆದರೆ ನಾವು ಅವರನ್ನು ದ್ವೇಷಿಸುವುದಿಲ್ಲ. ಅವರಿಗೂ ಹಕ್ಕುಗಳು ಇರಬೇಕು ಸಿಗಬೇಕುʼ ಎಂದು ಅವರು ಹೇಳುತ್ತಾರೆ

PHOTO • Sweta Daga

ಯಲ್ಲಮ್ಮ ದೇವಿಯ (ರೇಣುಕಾ ಎಂದೂ ಕರೆಯುತ್ತಾರೆ) ಪ್ರತಿಮೆಯು ಆಚರಣೆಯ ಮುಖ್ಯ ಆಕರ್ಷಣೆಯಾಗಿತ್ತು

PHOTO • Sweta Daga

ಸಬರ್‌ - ಪುರಭವನದ ನಡುವೆ ನಡೆದ ಪ್ರೈಡ್‌ ಮೆರವಣಿಗೆಯಲ್ಲಿ ವರ್ಣರಂಜಿತ ಬಟ್ಟೆಗಳನ್ನು ತೊಟ್ಟು ಜನರು ಕಾಣಿಸಿಕೊಂಡರು

PHOTO • Sweta Daga

ಮೆರವಣಿಗೆಯಲ್ಲಿ ನರ್ತಿಸುತ್ತಿರುವ ಬೆಂಗಳೂರಿನ ಮನೋಜ್‌ ಪೂಜಾರಿ

PHOTO • Sweta Daga

ಕಿಲೋಮೀಟರ್ ಉದ್ದದ ಮೆರವಣಿಗೆಯು ನಗರದ ಅತ್ಯಂತ ಜನನಿಬಿಡ ಮಾರುಕಟ್ಟೆ ಪ್ರದೇಶಗಳ ಮೂಲಕ ಸಾಗಿತು

PHOTO • Sweta Daga

ಮೆರವಣಿಗೆಯಲ್ಲಿ ಭಾಗವಹಿಸಿದ ಜನರು

PHOTO • Sweta Daga

ಪುರಭವನದ ಕಡೆ ಚಲಿಸುತ್ತಿರುವ ಜನಸಮೂಹ

PHOTO • Sweta Daga

ತಾನೇ ಹೊಲಿದಿರುವ ವೇಷಭೂಷಣದೊಂದಿಗೆ ಬೇಗಂ ಸೋನಿ. ಈ ರೆಕ್ಕೆಗಳು ಕ್ವೀರ್‌ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತವೆ ಎಂದು ಅವರು ಹೇಳುತ್ತಾರೆ

PHOTO • Sweta Daga

ಪ್ರೈಡ್‌ ಬಾವುಟ

PHOTO • Sweta Daga

ವಾದ್ಯ ತಂಡವು ಜನಸಮೂಹದೊಂದಿಗೆ ಹೆಜ್ಜೆ ಹಾಕಿತು. ನನ್ನ ಸಮುದಾಯದಲ್ಲಿ, ನನ್ನ ಸ್ವಂತ ಸಹೋದರಿ ಸೇರಿದಂತೆ ಟ್ರಾನ್ಸ್‌ಜೆಂಡರ್ ಆಗಿರುವ ಅನೇಕ ಅಕ್ಕಂದಿರು ಇದ್ದಾರೆ. ಅವರು ನಮ್ಮ ಸಮುದಾಯದ ಭಾಗವಾಗಿರುವುದರಿಂದ ನಾವು ಅವರನ್ನು ಬೆಂಬಲಿಸುತ್ತೇವೆ' ಎಂದು ನಂದೀಶ್ ಆರ್ ಹೇಳುತ್ತಾರೆ

PHOTO • Sweta Daga

ಮೆರವಣಿಗೆಯು ಮೈಸೂರು ಪುರಭವನದ ಬಳಿ ಕೊನೆಗೊಂಡಿತು

ಅನುವಾದ: ಶಂಕರ. ಎನ್. ಕೆಂಚನೂರು

Sweta Daga

Sweta Daga is a Bengaluru-based writer and photographer, and a 2015 PARI fellow. She works across multimedia platforms and writes on climate change, gender and social inequality.

Other stories by Sweta Daga
Editor : Siddhita Sonavane

Siddhita Sonavane is Content Editor at the People's Archive of Rural India. She completed her master's degree from SNDT Women's University, Mumbai, in 2022 and is a visiting faculty at their Department of English.

Other stories by Siddhita Sonavane
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru