“ಹಿಂದೆಲ್ಲ ನಮ್ಮ ಜೀವನವು ನಾಟಕೀಯವಾಗಿರುತ್ತಿತ್ತು. ನಗರದಿಂದ ನಗರಕ್ಕೆ, ಹಳ್ಳಿಯಿಂದ ಹಳ್ಳಿಗೆ ಸಾಗುತ್ತಾ, ನಮ್ಮ ನಂದಿಯ(ಶಿವನ ಅವತಾರವೆಂದು ಪರಿಗಣಿಸಲ್ಪಟ್ಟ ಎತ್ತು) ಜೊತೆಗೆ, ಜನರ ಮನರಂಜಿಸಿ, ಹಣವನ್ನು ಸಂಪಾದಿಸಬೇಕಿತ್ತು. ನಮಗೆ ಸ್ವಂತ ಮನೆ ಅಥವಾ ಭೂಮಿಯಿರಲಿಲ್ಲ. ನಾವು ಒಂದು ಸ್ಥಳದಲ್ಲಿ ನೆಲೆನಿಲ್ಲದ ಕಾರಣ, ನಮ್ಮ ಮಕ್ಕಳಿಗೆಂದಿಗೂ ಶಿಕ್ಷಣವು ದೊರೆಯಲ್ಲಿಲ್ಲ.”
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ತಿರ್ಮಲಿ ನಂದಿವಾಲೆ ಅಲೆಮಾರಿ ಬುಡಕಟ್ಟಿನ ಭುರ ಗಾಯಕ್ವಾಡ್ ಅವರ ಮಾತುಗಳನ್ನು ನಾವು ಆಲಿಸುತ್ತಿದ್ದೇವೆ. ಇವರು ಹಾಗೂ ಈ ಆದಿವಾಸಿ ಗುಂಪಿನ ಇತರೆ 300 ಜನರು, ಬೀಡ್ ಊರಿನಿಂದ 110 ಕಿ. ಮೀ. ದೂರದ ಅಶ್ತಿ ತಾಲ್ಲೂಕಿನ ಕನಡಿ ಬದ್ರುಕ್ ಗ್ರಾಮದಲ್ಲಿ ವಾಸಿಸುತ್ತಾರೆ. ಗ್ರಾಮದ ಹೊರವಲಯದ ರಸ್ತೆಯ ಪಕ್ಕದಲ್ಲಿ ಇವರ ಬಸ್ತಿಯಿದೆ.
“೨೫ ವರ್ಷಗಳ ಹಿಂದೆಯೇ ಅಲೆದಾಡುವುದನ್ನು ನಿಲ್ಲಿಸಿದ್ದ ನಾವು, ಈ ಬಂಜರು ಭೂಮಿಯಲ್ಲಿ ನೆಲೆಸಿ, ವ್ಯವಸಾಯವನ್ನು ಆರಂಭಿಸಲು ನಿಶ್ಚಯಿಸಿದೆವು” ಎಂಬುದಾಗಿ ಗಾಯಕ್ವಾಡ್ ತಿಳಿಸಿದರು. ಈ ಹಿಂದೆ ಅಲೆಮಾರಿಗಳಾಗಿದ್ದವರಿಗೆ ಒಂದು ಸ್ಥಳದಲ್ಲಿ ನೆಲೆಯನ್ನು ಕಂಡುಕೊಳ್ಳುವುದು ಸುಲಭವಾಗಿರಲಿಲ್ಲ. ಸುಮಾರು 3,200 ಮೇಲ್ಜಾತಿಯ ಜನರು, ಈ ಆಗಂತುಕರ ಬಗ್ಗೆ ಅಸಮಾಧಾನಗೊಂಡರು. ಆ ಪ್ರದೇಶದ ಆದಿವಾಸಿ ಮತ್ತು ದಲಿತರ ಹಕ್ಕುಗಳನ್ನು ಕುರಿತ ಸಕ್ರಿಯ ಕಾರ್ಯಕರ್ತರ ನೆರವಿನಿಂದ ಅಶ್ತಿ ಪೊಲೀಸ್ ಠಾಣೆಯಲ್ಲಿ ನಂದಿವಾಲೆಗಳ ಪರವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯಗಳ ನಿವಾರಣೆ) ಕಾಯಿದೆಯಡಿಯಲ್ಲಿ, ಮೊಕದ್ದಮೆಯೊಂದನ್ನು ದಾಖಲಿಸಲಾಯಿತು. ವಿರೋಧಿಸುತ್ತಿದ್ದ ಗುಂಪು, ಕೊನೆಗೊಮ್ಮೆ, ಇದನ್ನು ಸೌಹಾರ್ದಯುತ ಹಾಗೂ ಉಭಯ ಸಮ್ಮತವಾಗಿ ಬಗೆಹರಿಸಿದ ಕಾರಣ, ಮೊಕದ್ದಮೆಯನ್ನು ಹಿಂಪಡೆಯಲಾಯಿತು.
ಆದರೆ ನಂತರ ಮತ್ತೊಂದು ಸಮಸ್ಯೆ ಎದುರಾಯಿತು. “ನಮಗೆ ವ್ಯವಸಾಯದಲ್ಲಿ ಯಾವುದೇ ನೈಜ ಹಿನ್ನೆಲೆಯಿರಲಿಲ್ಲ. ಹೀಗಾಗಿ ನಾವು, ಇತರರಿಂದ ಅದನ್ನು ಕಲಿಯಲು ನಿರ್ಧರಿಸಿದೆವು. ಒಂದು ದಿನ ನಮ್ಮ ನೆರೆಯ ದಲಿತ ಗ್ರಾಮಸ್ಥರನ್ನು ವ್ಯವಸಾಯವನ್ನು ಕಲಿಸುವಂತೆ ವಿನಂತಿಸಿದೆವು. ಅವರು ನಿಜಕ್ಕೂ ವಿನಯಶೀಲ ಹಾಗೂ ಉದಾರ ಮನೋಭಾವದವರಾಗಿದ್ದು, ನಮಗೆ ಕಲಿಸುವ ಮನಸ್ಸುಳ್ಳವರಾಗಿದ್ದರು. ಕೃಷಿ ಸಾಧನಗಳು ಮತ್ತು ಕಾರ್ಯವಿಧಾನಗಳೊಂದಿಗೆ, ನಮ್ಮ ಬದುಕಿನಲ್ಲಿ ಹೊಸ ಧ್ಯೇಯವೊಂದು ಆರಂಭವಾಯಿತು.”





